 : ಗಂಡು ಮಗುವಿಗೆ ಜನ್ಮ ನೀಡಿದ ನಟಿ ಕವಿತಾ ಗೌಡ
ಬೆಂಗಳೂರು:ಕನ್ನಡ ಕಿರುತೆರೆಯ ಜನಪ್ರಿಯ ಕಲಾವಿದರಾದ ಚಂದನ್‌ ಕುಮಾರ್‌ ( ) ಮತ್ತು ಕವಿತಾ ಗೌಡ ( ) ದಂಪತಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು ಚಿನ್ನು ಖ್ಯಾತಿಯ ಕವಿತಾ ಗೌಡ ಬುಧವಾರ (ಸೆಪ್ಟೆಂಬರ್‌ 18) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ವಿಚಾರವನ್ನು ಚಂದನ್‌ ಕುಮಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ʼನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆʼ ಎಂದು ಚಂದನ್‌ ಕುಮಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಮುದ್ದು ಮಗುವಿನ ವಿಡಿಯೊವನ್ನೂ ಪೋಸ್ಟ್‌ ಮಾಡಿದ್ದಾರೆ. ಸದ್ಯ ಚಂದನ್‌ ಕುಮಾರ್‌-ಕವಿತಾ ದಂಪತಿಗೆ ನಟ-ನಟಿಯರು, ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.
      🇮🇳 (@chandan_kumar_official)
ಕೆಲವು ದಿನಗಳ ಹಿಂದೆಯಷ್ಟೇ ಕವಿತಾ ಗೌಡ ಅವರ ಸೀಮಂತ ಶಾಸ್ತ್ರ ನೆರವೇರಿತ್ತು. ಈ ಸಮಾರಂಭದಲ್ಲಿ ಕಲಾವಿದರಾದ ನಮ್ರತಾ ಗೌಡ, ತನಿಷಾ ಕುಪ್ಪಂಡ, ಶ್ರುತಿ, ನಿಮಿಕಾ ರತ್ನಾಕರ್, ನೇಹಾ ಗೌಡ, ಅನುಪಮಾ ಗೌಡ ಸೇರಿದಂತೆ ಅನೇಕರು ಭಾಗಿಯಾಗಿ ದಂಪತಿಗೆ ಶುಭ ಹಾರೈಸಿದ್ದರು.
ಕೆಲವು ವರ್ಷಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ʼಲಕ್ಷ್ಮೀ ಬಾರಮ್ಮʼ ಧಾರಾವಾಹಿ ಮೂಲಕ ಚಂದನ್‌ ಕುಮಾರ್‌-ಕವಿತಾ ಗಮನ ಸೆಳೆದಿದ್ದರು. ಈ ಧಾರಾವಾಹಿಯಲ್ಲಿ ಚಿನ್ನು ಪಾತ್ರ ನಿರ್ವಹಿಸಿದ್ದ ಕವಿತಾ ಅವರನ್ನು ಈಗಲೂ ಅಭಿಮಾನಿಗಳು ಅದೇ ಹೆಸರಿನಿಂದ ಕರೆಯುತ್ತಾರೆ. ಕವಿತಾ ಕನ್ನಡದ ಜತೆಗೆ ತಮಿಳು, ತೆಲುಗು ಧಾರಾವಾಹಿಗಳಲ್ಲಿಯೂ ಮಿಂಚಿದ್ದಾರೆ. ಅಲ್ಲದೆ ಬಿಗ್‌ಬಾಸ್‌ ಕನ್ನಡ ಸೀಸನ್‌ 6ರ ಎರಡನೇ ರನ್ನರ್‌ ಅಪ್‌ ಆಗಿದ್ದರು. ಸುಮಾರು 6 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಅವರು ನಟನೆಯಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ.
ಬಿಗ್‌ಬಾಸ್‌ ಕನ್ನಡ ಸೀಸನ್‌ 3ರ ರನ್ನರ್‌ ಅಪ್‌ ಆಗಿದ್ದ ಚಂದನ್‌ ಕುಮಾರ್‌ ಕನ್ನಡ ಜತೆಗೆ ತೆಲುಗು ಧಾರಾವಾಹಿಗಳಲ್ಲಿಯೂ ಅಭಿನಯಿಸುತ್ತಿದ್ದಾರೆ. ಹಲವು ಕನ್ನಡ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ. ಪರಸ್ಪರ ಪ್ರೀತಿಸುತ್ತಿದ್ದ ಚಂದನ್‌ ಮತ್ತು ಕವಿತಾ ಲಾಕ್‌ಡೌನ್ ವೇಳೆ 2021ರ ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಶುಭ ಸೆಪ್ಟೆಂಬರ್‌
ಈ ತಿಂಗಳು ಸೆಲೆಬ್ರಿಟಿಗಳಿಗೆ ಶುಭ ಸೆಪ್ಟೆಂಬರ್‌ ಆಗಿ ಬದಲಾಗಿದೆ. ಈ ತಿಂಗಳ ಆರಂಭದಲ್ಲಿ ಸ್ಯಾಂಡಲ್‌ವುಡ್‌ ನಟಿಯರಾದ ಮಿಲನಾ ನಾಗರಾಜ್‌, ಪ್ರಣೀತಾ ಸುಭಾಷ್‌ ಮಗುವಿಗೆ ಜನ್ಮ ನೀಡಿದ್ದರು. ಅಲ್ಲದೆ ಸೆಪ್ಟೆಂಬರ್‌ 8ರಂದು ಕನ್ನಡತಿ, ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ- ನಟರಣವೀರ್‌ ಸಿಂಗ್‌ ದಂಪತಿಗೂ ಮಗು ಜನಿಸಿತ್ತು.
ಮಿಲನಾ ನಾಗರಾಜ್‌ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಖುಷಿಯ ವಿಚಾರವನ್ನು ಅವರ ಪತಿ, ನಟ ಡಾರ್ಲಿಂಗ್‌ ಕೃಷ್ಣ ( ) ಸೆಪ್ಟೆಂಬರ್‌ 5ರಂದು ಹಂಚಿಕೊಂಡಿದ್ದರು.  ʼʼಮಿಲನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಹೆಣ್ಣು ಮಗಳ ತಂದೆಯಾಗಿದ್ದಕ್ಕೆ ನನಗೆ ಹೆಮ್ಮೆ ಇದೆ. ನಾನೊಬ್ಬ ಅದೃಷ್ಟವಂತ ತಂದೆʼʼ ಎಂದು ಡಾರ್ಲಿಂಗ್‌ ಕೃಷ್ಣ ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದರು.
ಸೆಪ್ಟೆಂಬರ್‌ 5ರಂದೇ ಪ್ರಣಿತಾ ಕೂಡ ಮಗುವಿಗೆ ಜನ್ಮ ನೀಡಿದ ವಿಚಾರವನ್ನು ಹಂಚಿಕೊಂಡಿದ್ದರು. ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮೂಲಕ ಅವರು ಗೌರಿ ಹಬ್ಬದ ಮುನ್ನಾ ದಿನ ಎರಡನೇ ಮಗುವನ್ನು ಬರಮಾಡಿಕೊಂಡಿದ್ದರು. ʼʼತುಂಬಾ ಖುಷಿಯಾಗುತ್ತಿದೆ, ಪುಟ್ಟ ಮಗುವನ್ನು ನೋಡಿ ಮಗಳು ಆರ್ನಾ ಆಕಾಶದಲ್ಲಿ ತೇಲುತ್ತಿದ್ದಾಳೆ. ಆಕೆ ತಮ್ಮನನ್ನು ಬೇಬಿ ಎಂದು ಕರೆಯುತ್ತಿದ್ದಾಳೆʼʼ ಎಂದು ಪ್ರಣಿತಾ ಸಂತಸ ವ್ಯಕ್ತಪಡಿಸಿದ್ದರು.
ಸೆಪ್ಟೆಂಬರ್‌ 8ರಂದು ಮುಂಬೈಯ ಎನ್‌.ಎನ್‌. ರಿಲಯನ್ಸ್‌ ಫೌಂಡೇಷನ್‌ ಆಸ್ಪತ್ರೆಯಲ್ಲಿ ದೀಪಿಕಾ ಪಡುಕೋಣೆಗೆ  ಹೆಣ್ಣು ಮಗು ಜನಿಸಿತ್ತು. ಮೂರು ದಿನಗಳ ಹಿಂದೆ ಡಿಸ್‌ಚಾರ್ಜ್‌ ಆದ ಅವರು ಪತಿ ರಣವೀರ್‌ ಸಿಂಗ್‌ ಜತೆ ಮನೆಗೆ ಮರಳಿದ್ದಾರೆ.
ಈ ಸುದ್ದಿಯನ್ನೂ ಓದಿ:  : ದೀಪಿಕಾ ಪಡುಕೋಣೆ, ಮಗು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ ಶಾರುಖ್‌ ಖಾನ್‌