 : ‘ಕೆಜಿಎಫ್‌’ ಬೆಡಗಿ ಶ್ರೀನಿಧಿ ಶೆಟ್ಟಿಯ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ ಕಾರ್ಡ್‌ ವೈರಲ್‌; ಕನ್ನಡದಲ್ಲಿ ಪಡೆದ ಅಂಕ ಎಷ್ಟು?
ಬೆಂಗಳೂರು:ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್‌ ನೀಲ್‌ ( ) ಆ್ಯಕ್ಷನ್‌ ಕಟ್‌ ಹೇಳಿರುವ ರಾಕಿಂಗ್‌ ಸ್ಟಾರ್‌ ಯಶ್‌ () ಅಭಿನಯದ ‘ಕೆ.ಜಿ.ಎಫ್‌.’ () ಸರಣಿ ಚಿತ್ರವನ್ನು ಯಾರು ತಾನೇ ಮರೆಯಲು ಸಾಧ್ಯ? ಸ್ಯಾಂಡಲ್‌ವುಡ್‌ ಮಾತ್ರವಲ್ಲ ಇಡೀ ದೇಶದ ಗಮನವನ್ನು ಈ ಸಿನಿಮಾ ಸೆಳೆದಿದೆ. ಆ ಮೂಲಕ ಸ್ಯಾಂಡಲ್‌ವುಡ್‌ ಘಮ ಎಲ್ಲೆಡೆ ಹರಡಿದೆ. ಕೆ.ಜಿ.ಎಫ್‌. ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದವರು ಅಪ್ಪಟ ಕನ್ನಡತಿ ಶ್ರೀನಿಧಿ ಶೆಟ್ಟಿ ( ). ಮಂಗಳೂರು ಮೂಲದ ಇವರು ಮೂಲತಃ ಮಾಡೆಲ್‌ ಆಗಿದ್ದವರು. ಕೆ.ಜಿ.ಎಫ್‌.ನ ರೀನಾ ಪಾತ್ರದಲ್ಲಿ ಮೋಡಿ ಮಾಡಿದ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದೂ ಅವರ 10ನೇ ತರಗತಿಯ ಅಂಕಪಟ್ಟಿಯ ಕಾರಣಕ್ಕೆ ಎನ್ನುವುದು ವಿಶೇಷ. ಅದರಲ್ಲಿಯೂ ಅವರು ಕನ್ನಡದಲ್ಲಿ ಪಡೆದುಕೊಂಡ ಅಂಕ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಶ್ರೀನಿಧಿ ಶೆಟ್ಟಿ 10ನೇ ತರಗತಿಯ ಅಂಕ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.‌‌ ಕನ್ನಡ ವಿಷಯದಲ್ಲಿ ಪಡೆದ ಅಂಕ ಹೆಚ್ಚು ಗಮನ ಸೆಳೆದಿದೆ. ವಿಶೇಷ ಎಂದರೆ ಅವರಿಗೆ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಬಂದಿದೆ. ಇವರು ಕನ್ನಡದಲ್ಲಿ 125ಕ್ಕೆ 121 ಮಾರ್ಕ್ಸ್‌ ಪಡೆದಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
      🌸 (@srinidhi_shetty)
ಮಂಗಳೂರು ಸಮೀಪದ ಮೂಲ್ಕಿಯಲ್ಲಿ ಜನಿಸಿದ ಶ್ರೀನಿಧಿ ಶೆಟ್ಟಿ ಮಾಡೆಲ್‌ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. 2016ರಲ್ಲಿ ಮಿಸ್‌ ಸುಪ್ರಾನ್ಯಾಷನಲ್‌ ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡರು. ಬಳಿಕ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ಈ ಮಧ್ಯೆ ನಿರ್ದೇಶಕ ಪ್ರಶಾಂತ್‌ ನೀಲ್‌ ಕಣ್ಣಿಗೆ ಬಿದ್ದು, ʼಕೆ.ಜಿ.ಎಫ್‌.ʼ ಚಿತ್ರದ ನಾಯಕಿ ಪಾತ್ರಕ್ಕೆ ಆಯ್ಕೆಯಾದರು.
ದಾಖಲೆ ಬರೆದ ʼಕೆ.ಜಿ.ಎಫ್‌.ʼ
ಪ್ಯಾನ್‌ ಇಂಡಿಯಾ ಚಿತ್ರವಾಗಿ ʼಕೆ.ಜಿ.ಎಫ್‌.: ಚಾಪ್ಟರ್‌ 1ʼ, 2018ರ ಡಿಸೆಂಬರ್‌ 21ರಲ್ಲಿ ತೆರೆಕಂಡು ಇತಿಹಾಸ ಬರೆಯಿತು. ಕನ್ನಡ ಮಾತ್ರವಲ್ಲ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಬಿಡುಗಡೆಗೊಂಡ ಈ ಚಿತ್ರ ಎಲ್ಲ ಕಡೆ ಸೂಪರ್‌ ಹಿಟ್‌ ಆಯಿತು. ನಾಯಕ ಯಶ್‌ ಜತೆ ಶ್ರೀನಿಧಿ ಶೆಟ್ಟಿ ಪಾತ್ರವೂ ಗಮನ ಸೆಳೆಯಿತು. ಚಿತ್ರದ ಎರಡನೇ ಭಾಗ 2022ರ ಏಪ್ರಿಲ್‌ 14ರಂದು ರಿಲೀಸ್‌ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆಯಿತು. ವಿವಿಧ ಭಾಷೆಗಳಲ್ಲಿ ಸುಮಾರು 1,250 ಕೋಟಿ ರೂ. ಗಳಿಸಿದ ಈ ಸಿನಿಮಾ ದೇಶದಲ್ಲಿ ಅತೀ ಹೆಚ್ಚು ಗಳಿಸಿದ ಚಿತ್ರಗಳ ಪಟ್ಟಿಯಲ್ಲಿಯೂ ಸ್ಥಾನ ಪಡೆದಿದೆ.
ಸದ್ಯದ ಪ್ರಾಜೆಕ್ಟ್‌
ಇಡೀ ದೇಶದ ಗಮನ ಸೆಳೆದ ಶ್ರೀನಿಧಿ ಶೆಟ್ಟಿ ಅವರನ್ನು ಅರಸಿಕೊಂಡು ವಿವಿಧ ಭಾಷೆಗಳ ಹಲವು ಆಫರ್‌ ಬರುತ್ತಿದ್ದು ಅಳೆದೂ ತೂಗಿ ಅವರು ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ʼಕೆ.ಜಿ.ಎಫ್‌. 2ʼ ಆದಮೇಲೆ ಶ್ರೀನಿಧಿ ಶೆಟ್ಟಿ ಅವರು ಕಾಲಿವುಡ್‌ ಸೂಪರ್‌ ಸ್ಟಾರ್‌ ವಿಕ್ರಂಗೆ ನಾಯಕಿಯಾಗಿ ʼಕೋಬ್ರಾʼ ಚಿತ್ರದಲ್ಲಿ ಕಾಣಿಸಿಕೊಂಡರು. ಬೆಟ್ಟದಷ್ಟು ನಿರೀಕ್ಷೆ ಹೊತ್ತ ಈ ಚಿತ್ರ ಅದ್ಯಾಕೋ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಸದ್ಯ ಶ್ರೀನಿದಿ ಶೆಟ್ಟಿ ತೆಲುಗಿನ ʼತೆಲುಸು ಕದʼ ಮತ್ತು ಕಿಚ್ಚ ಸುದೀಪ್‌ ಅವರ ಮುಂದಿನ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: : ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಪ್ರೇಕ್ಷಕರು ಫಿದಾ; ಬಾಕ್ಸ್‌ ಆಫೀಸ್‌ನಲ್ಲಿ ಮುಂದುವರಿದ ಗೆಲುವಿನ ಓಟ