 : ತಾಯಿಯಾಗುವ ಸಂಭ್ರಮದಲ್ಲಿರುವ ಹರ್ಷಿಕಾಗೆ ಅದ್ಧೂರಿ ಬೇಬಿ ಶವರ್ ಆಯೋಜಿಸಿದ ಗಣೇಶ್ ದಂಪತಿ
ಬೆಂಗಳೂರು:ತಾಯಿಯಾಗುವ ಸಂಭ್ರಮದಲ್ಲಿರುವ ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ( ) ಅವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿ ಅದ್ಧೂರಿ ʼಬೇಬಿ ಶವರ್ʼ ಸಮಾರಂಭ ಆಯೋಜಿಸಿದರು.
ಸಿನಿಮಾ ಇಂಡಸ್ಟ್ರಿಯ ತಮ್ಮ ಎಲ್ಲ ಗೆಳೆಯರನ್ನು ಆಹ್ವಾನಿಸಿ ಅದ್ಧೂರಿಯಾಗಿ ʼಬೇಬಿ ಶವರ್ʼ ನಡೆಸಿಕೊಟ್ಟರು. ಆ್ಯಕ್ಷನ್‌ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ, ಶ್ರುತಿ ಹಾಗೂ ಮಗಳು ಗೌರಿ, ಪ್ರಿಯಾಂಕಾ ಉಪೇಂದ್ರ, ಅನು ಪ್ರಭಾಕರ್, ಶರಣ್ಯ, ನಿಖಿತಾ, ಅಮೂಲ್ಯ ಜಗದೀಶ್, ದಿಶಾ, ಡಾ. ಪ್ರೀತಿ ಸುಧಾಕರ್, ಶೀಲಾ ಯೋಗೀಶ್ವರ್ ಮತ್ತಿತರರು ಈ ಬೇಬಿ ಶವರ್‌ ಸಮಾರಂಭದಲ್ಲಿ ಭಾಗಿಯಾದರು.
      (@)
ಅಮ್ಮನಾಗುವ ನಿರೀಕ್ಷೆಯಲ್ಲಿರುವ ಹರ್ಷಿಕಾ ಅವರಿಗೆ ಉಡುಗೊರೆಗಳ ಸುರಿಮಳೆಯೇ ಹರಿದು ಬಂದಿದೆ. ಬೇಬಿ ಶವರ್‌ನಲ್ಲಿ ಪಾಲ್ಗೊಂಡಿದ್ದ ಹಿರಿಯರು-ಕಿರಿಯ ಕಲಾವಿದರು ಒಟ್ಟಿಗೆ ಕುಣಿದು ಸಂಭ್ರಮ ಹೆಚ್ಚಿಸಿದರು. ಶ್ರುತಿ ಅವರ ಮಗಳು ಗೌರಿ ಹರ್ಷಿಕಾ ಅವರಿಗಾಗಿ ಹಾಡೊಂದನ್ನು ಹಾಡಿ ಸರ್‌ಪ್ರೈಸ್ ನೀಡಿದರು. ಬೇಬಿ ಥೀಮ್ ಕೇಕ್, ಥೀಮ್ ಡೆಕೊರೇಷನ್ ಬೇಬಿ ಶವರ್‌ನ ಪ್ರಮುಖ ಆಕರ್ಷಣೆಯಾಗಿತ್ತು. ಅಕ್ಟೋಬರ್‌ನಲ್ಲಿ ಹರ್ಷಿಕಾ ಅವರು ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾರೆ.
ಗಮನ ಸೆಳೆದ ಹರ್ಷಿಕಾಫೋಟೊ ಶೂಟ್
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹರ್ಷಿಕಾ ಈ ಸಿಹಿ ಸುದ್ದಿಯನ್ನು ಜುಲೈಯಲ್ಲಿ ಗಮನ ಸೆಳೆಯುವ  ಫೋಟೊ ಶೂಟ್ ಮೂಲಕ ಹಂಚಿಕೊಂಡಿದ್ದರು. 2023ರ ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜತೆ ಹರ್ಷಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹರ್ಷಿಕಾ ಮತ್ತು ಭುವನ್ ತಮ್ಮ ಕೊಡವ ಶೈಲಿ ಹಾಗೂ ಸಂಪ್ರದಾಯದ ಕಾನ್ಸೆಪ್ಟ್‌ ಇಟ್ಟುಕೊಂಡು ಫೋಟೊ ಶೂಟ್‌ ಮಾಡಿಸುವ ಮೂಲಕ ಗಮನ ಸೆಳೆದಿದ್ದರು. ತಮ್ಮ ಚೊಚ್ಚಲ ಮಗುವಿನ ಆಗಮನದ ಸಿಹಿ ಸುದ್ದಿ ತಿಳಿಸಲು ಪುರಾತನ ಕೊಡವ ಸಾಂಪ್ರದಾಯ, ಉಡುಪು, ಕೊಡಗಿನ ‘ಐನ್ ಮನೆ’ (ದೊಡ್ಡಮನೆ), ಕೋವಿ, ಉಪಕರಣಗಳು, ಜೀವನಶೈಲಿ ಎಲ್ಲವನ್ನು ಬಳಸಿಕೊಂಡು, ಸಂಪ್ರದಾಯವನ್ನು ಬಿಂಬಿಸುವ ಶೈಲಿಯಲ್ಲಿ ಫೋಟೊ ಶೂಟ್ ಮಾಡಿಸಿದ್ದರು.
ಅದಾದ ಬಳಿಕ 7ನೇ ತಿಂಗಳಲ್ಲಿ ಹರ್ಷಿಕಾ ರವಿವರ್ಮ ಚಿತ್ರಕಲೆಯ ಥೀಮ್‌ನಲ್ಲಿ ಫೋಟೊ ಶೂಟ್ ಮಾಡಿಸಿದ್ದರು. ಈ ವೇಳೆ ಅವರು ತಿಳಿ ಗುಲಾಬಿ ಬಣ್ಣದ ಸೀರೆಗೆ ಹಸಿರು ಬಳೇ ತೊಟ್ಟು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದರು.
2008ರಲ್ಲಿ ʼಪಿಯುಸಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹರ್ಷಿಕಾ ಬಳಿಕ ಕೊಡವ, ಕೊಂಕಣಿ, ತೆಲುಗು, ಮಲಯಾಳಂ, ಬೋಜಪುರಿ, ತಮಿಳು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ತೆರೆಕಂಡದ ಕನ್ನಡದ ʼತಮಸ್ಸುʼ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.  ಭುವನ್‌ ಪೊನ್ನಣ್ಣ 2010ರಲ್ಲಿ ತೆರೆಕಂಡ, ಸುದೀಪ್‌ ಅಭಿನಯದ ʼಜಸ್ಟ್‌ ಮಾತ್‌ ಮಾತಲ್ಲಿʼ ಚಿತ್ರದ ಮೂಲಕ ಬಣ್ಣ ಲೋಕ ಪ್ರವೇಶಿಸಿದ್ದರು. ಗಣೇಶ್‌ ಜತೆಗೆ ʼಕೂಲ್‌ʼ ಚಿತ್ರದಲ್ಲಿಯೂ ನಟಿಸಿದ್ದರು. ಕೊಡಗು ಮೂಲದ ಭುವನ್‌ ಮತ್ತು ಹರ್ಷಿಕಾ ಈ ಹಿಂದೆ ನೆರೆ ಪೀಡಿತರಿಗೆ ನೆರವಾಗಿದ್ದರು.
ಈ ಸುದ್ದಿಯನ್ನೂ ಓದಿ: : ಗಂಡು ಮಗುವಿಗೆ ಜನ್ಮ ನೀಡಿದ ನಟಿ ಕವಿತಾ ಗೌಡ