ಸುದೀಪ್‌ ಮನೆಯಲ್ಲಿ ಬಿಗ್‌ಬಾಸ್‌ ಬಗ್ಗೆ ಮಾತಾಡಲ್ಲ ಯಾಕೆ? ಸಂಭಾವನೆ ಎಷ್ಟು? ಅಪರೂಪದ ಸೀಕ್ರೆಟ್‌ ರಿವೀಲ್‌
ಬೆಂಗಳೂರು:ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಆರಂಭಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ. ಸೆಪ್ಟೆಂಬರ್‌ 29ರಂದು ಸಂಜೆ 6 ಗಂಟೆಗೆ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಅದ್ಧೂರಿಯಾಗಿ ಲಾಂಚ್‌ ಆಗಲಿದ್ದು ಬಳಿಕ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಇಂದು (ಸೆಪ್ಟೆಂಬರ್‌ 23) ಬಿಗ್‌ಬಾಸ್‌ ತಂಡ ಸುದ್ದಿಗೋಷ್ಠಿ ಆಯೋಜಿಸಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದೆ. ಬಿಗ್‌ಬಾಸ್‌ ಕನ್ನಡ ಹೋಸ್ಟ್‌ ಕಿಚ್ಚ ಸುದೀಪ್‌ ( ) ಕೂಡ ಉಪಸ್ಥಿತರಿದ್ದರು. ಈ ವೇಳೆ ಕೆಲವು ಅಪರೂಪದ ಸೀಕ್ರೆಟ್‌ ರಿವೀಲ್‌ ಆಗಿದೆ (   11).
ಯಶಸ್ವಿಯಾಗಿ 10 ಸೀಸನ್‌ಗಳನ್ನು ಪೂರೈಸಿರುವ ಬಿಗ್‌ಬಾಸ್‌ ಈ ಬಾರಿ ಹೊಸತನದೊಂದಿಗೆ ನಿಮ್ಮ ಮುಂದೆ ಬರಲಿದೆ. ಅದರ ಝಲಕ್‌ ಈಗಾಗಲೇ ಹೊರ ಬಿದ್ದಿರುವ ಪ್ರೋಮೊದಲ್ಲಿ ಕಂಡು ಬಂದಿದೆ. ಇದುವರೆಗೆ ಒಂದು ಲೆಕ್ಕವಾದರೆ ಇದು ಇನ್ನೊಂದು ಲೆಕ್ಕ. ಹೀಗಾಗಿಯೇ ಈ ಸೀಸನ್‌ಗೆ ಹೊಸ ಅಧ್ಯಾಯ ಎಂದು ಹೆಸರಿಡಲಾಗಿದೆ.
       (@)
ಸ್ವರ್ಗ-ನರಕ ಕಾನ್ಸೆಪ್ಟ್‌
ಹಿಂದೆಲ್ಲ ಬಿಗ್‌ಬಾಸ್‌ ಮನೆಗೆ ಪ್ರವೇಶಿಸಿದ ಸ್ಪರ್ಧಿಗಳು ಕ್ರಮೇಣ ಎರಡು ಗುಂಪುಗಳಾಗಿ ಬದಲಾಗುತ್ತಿದ್ದರು. ಆದರೆ ಈ ಬಾರಿ ಸ್ವರ್ಗ-ನರಕ ಎನ್ನುವ ಎರಡು ಥೀಮ್‌ ಮಾಡಲಾಗಿದ್ದು, ಆರಂಭದಲ್ಲಿಯೇ ಗುಂಪುಗಳನ್ನಾಗಿ ಮಾಡಿ ಮನೆಯೊಳಗೆ ಕಳುಹಿಸಲಾಗುತ್ತದೆ ಎಂದು ಬಿಗ್‌ಬಾಸ್‌ ತಂಡ ತಿಳಿಸಿದೆ.
ಸಂಭಾವನೆ ಎಷ್ಟು?
ಇದೇವೇಳೆ ಸುದೀಪ್‌ ಸಂಭಾವನೆ ಬಗ್ಗೆಯೂ ಪ್ರಶ್ನೆ ಕೇಳಿ ಬಂತು. ಹಿಂದಿ ಬಿಗ್‌ಬಾಸ್‌ ಹೋಸ್ಟ್‌ ಮಾಡಲು ಸಲ್ಮಾನ್‌ ಖಾನ್‌ಗೆ 355 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಇದನ್ನು ಉಲ್ಲೇಖಿಸಿ ಸುದೀಪ್‌ ಸಂಭಾವನೆ ಬಗ್ಗೆ ಕೇಳಲಾಯಿತು. “ನಾನು ನನ್ನ ತಟ್ಟೆ ಎಷ್ಟು ದೊಡ್ಡದಾಗಿದೆಯೇ ಅಷ್ಟೇ ತಿನ್ನೋದು, ನನ್ನ ಯೋಗ್ಯತೆ ಎಷ್ಟಿದೆಯೋ ಅಷ್ಟೇ ದುಡಿಯೋದು” ಎಂದು ಸುದೀಪ್‌ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಉತ್ತರಿಸಿದರು.
ಇದು 11ನೇ ಸೀಸನ್‌, ಅಷ್ಟೇ ಡಿಮ್ಯಾಂಡ್‌ ಇರಬೇಕಲ್ವ ಎಂದು ಪ್ರಶ್ನಿಸಿದಾಗ ನಗುತ್ತಲೇ ಪ್ರತಿಕ್ರಿಯಿಸಿದ ಕಿಚ್ಚ, “ಈ ಸೀಸನ್‌ ಹೊಸ ಅಧ್ಯಾಯ. ಈ ಸಂದರ್ಭದಲ್ಲಿ ಒಂದು ವಿಚಾರ ಹೇಳ್ತಿನಿ. ನಾನು ಈ ಸೀಸನ್‌ ಹೋಸ್ಟ್‌ ಮಾಡೋದಿಲ್ಲ ಎಂದು ಹೇಳಿದ್ದು ಸಂಭಾವನೆ ವಿಚಾರಕ್ಕೆ ಅಲ್ವೇ ಅಲ್ಲ. ಸಿನಿಮಾಗಳಿಗೆ ಸಮಯ ಹೊಂದಿಸಲು ಕಷ್ಟವಾಗುತ್ತಿದೆ ಎನ್ನುವ ಕಾರಣಕ್ಕೆ ಆರಂಭದಲ್ಲಿ ಹಿಂದೆ ಸರಿದಿದ್ದೆ. ಬಳಿಕ ಬಿಗ್‌ಬಾಸ್‌ ತಂಡದವರು ಮನೆಗೆ ಬಂದು ಒಪ್ಪಿಸಿದರು. ನೀವೆಲ್ಲರೂ ತಿಳಿದಿರಬೇಕು, ಎಲ್ಲದಕ್ಕೂ ಮಾರುಕಟ್ಟೆ ಇದೆ. ನನಗೆ ಏನು ದುಡಿಯಬೇಕೋ ಅದನ್ನು ದುಡಿಯುತ್ತೇನೆʼʼ ಎಂದರು.
ಮನೆಯಲ್ಲಿ ಚರ್ಚೆ ನಡೆಸಲ್ಲ
ಈ ವೇಳೆ ಸುದೀಪ್‌ ಧರಿಸುವ ಕಾಸ್ಟ್ಯೂಮ್ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಉಡುಪು ಬಗ್ಗೆ ಮನೆಯಲ್ಲಿ ಪತ್ನಿ ಪ್ರಿಯಾ ಏನು ಹೇಳುತ್ತಾರೆ? ಎಂಬ ಪ್ರಶ್ನೆ ತೂರಿ ಬಂತು. ಇದಕ್ಕೆ ಸುದೀಪ್‌ ಉತ್ತರಿಸಿ, ʼʼಮನೆಯಲ್ಲಿ ನಾವು ಬಿಗ್‌ಬಾಸ್‌ ಬಗ್ಗೆ ಮಾತನಾಡೋದೆ ಇಲ್ಲ. ಅಮ್ಮ, ಪತ್ನಿ ಪ್ರತಿ ದಿನ ಬಿಗ್‌ಬಾಸ್‌ ನೋಡ್ತಾರೆ. ಆದರೆ ಈ ಬಗ್ಗೆ ಎಂದಿಗೂ ಚರ್ಚೆ ನಡೆಸೋದಿಲ್ಲ. ಈ ಬಗ್ಗೆ ನಾನು ಆರಂಭದಲ್ಲೇ ಮನೆಯವರಲ್ಲಿ ಹೇಳಿದ್ದೆ. ಹಿಂದಿನಿಂದಲೂ ಇದನ್ನೇ ಮುಂದುವರಿಸಿಕೊಂಡು ಬಂದಿದ್ದೇವೆ. ನನ್ನ ಚಿತ್ರ ನೋಡಿ ಪತ್ನಿ, ಮಗಳು ಅಭಿಪ್ರಾಯ ಹೇಳುತ್ತಾರೆ. ಇದು ಚೆನ್ನಾಗಿತ್ತು, ಇದ್ಯಾಕೆ ಹೀಗೆ ಮಾಡಿದ್ರಿ ಎಂದು ಚರ್ಚಿಸುತ್ತಾರೆ. ಆದರೆ ಬಿಗ್‌ಬಾಸ್‌ ಬಗ್ಗೆ ಮೌನವಾಗಿರ್ತೇವೆ. ಒಂದುವೇಳೆ ಅವರು ತಮ್ಮ ಅಭಿಪ್ರಾಯ ತಿಳಿಸಿದರೆ ಸ್ಪರ್ಧಿಗಳ ಬಗ್ಗೆ ನಾನು ಹೊಂದಿರುವ ಮನೋಭಾವ ಬದಲಾಗಬಹುದು. ಅವರ ಮೇಲಿನ ದೃಷ್ಟಿಕೋನ ಬದಲಾಗಬಹುದು. ಇದರಿಂದ ನನಗೆ ಸೂಕ್ತ ನ್ಯಾಯ ಒದಗಿಸಲು ಕಷ್ಟವಾಗಬಹುದುʼʼ ಎಂದು ತಿಳಿಸಿದರು.
ಲೈವ್‌ ಇರಲ್ಲ
ಇದೇ ವೇಳೆ ಕಾರ್ಯಕ್ರಮದ ಲೈವ್‌ ಇರಲ್ಲ ಎಂದು ಆಯೋಜಕರು ತಿಳಿಸಿದರು. ‘ಬಿಗ್‌ಬಾಸ್‌ ಕನ್ನಡ’ ಆರಂಭದ ಸೀಸನ್‌ಗಳಲ್ಲಿ ಲೈವ್‌ ಇರಲಿಲ್ಲ. ಆದರೆ ಇತ್ತೀಚೆಗೆ  ಇದು ಆರಂಭವಾಗಿತ್ತು. ದಿನದ 24 ಗಂಟೆಯೂ ನೇರ ಪ್ರಸಾರ ವೀಕ್ಷಿಸಬಹುದಿತ್ತು. ಇದಕ್ಕೆ ಅಪಾರ ವೀಕ್ಷಕರೂ ಇದ್ದರು. ಆದರೆ ಈ ಬಾರಿ ಲೈವ್‌ ಇರಲ್ಲ ಎನ್ನುವ ಮಾಹಿತಿ ಹೊರ ಬಿದ್ದಿದೆ. ಅನ್‌ಸೀನ್‌ ಕ್ಲಿಪ್ಸ್ ಇರುತ್ತದೆ. ಲೈವ್ ಮಾತ್ರ ಇರಲ್ಲ ಎಂದು ಆಯೋಜಕರು ಸ್ಪಷ್ಟನೆ ನೀಡಿದರು. ಜತೆಗೆ ಒಟಿಟಿ ಸೀಸನ್‌ ಕೂಡ ಸದ್ಯಕ್ಕೆ ಇಲ್ಲ ಎಂದೂ ತಿಳಿಸಲಾಯಿತು.
ಈ ಸುದ್ದಿಯನ್ನೂ ಓದಿ:   11 : ಬಾಳೆ ಎಲೆ ಕಟ್ಟಿಕೊಂಡು ಬಿಗ್‌ ಬಾಸ್‌ ಶೋ ನಡೆಸ್ತಾರಾ ಕಿಚ್ಚ ಸುದೀಪ್‌?