ಫೆ.24, 25ರಂದು ಮೂರನೇ ಆವೃತ್ತಿಯ ಕನ್ನಡ ಚಲನಚಿತ್ರ ಕಪ್
ಬೆಂಗಳೂರು:ಕನ್ನಡ ಸಿನಿ ರಸಿಕರು ಹಾಗೂ ಕ್ರೀಡಾ ಪ್ರೇಮಿಗಳ ನೆಚ್ಚಿನ ಕ್ರಿಕೆಟ್ ಟೂರ್ನಿ ಕನ್ನಡ ಚಲನಚಿತ್ರ ಕಪ್ ( ಕೆಸಿಸಿ ) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. 2018 ಹಾಗೂ 2019ರಲ್ಲಿ ನಡೆದಿದ್ದ ಕನ್ನಡ ಚಲನಚಿತ್ರ ಕಪ್‌ನ ಮೂರನೇ ಆವೃತ್ತಿ ಈ ಬಾರಿ ನಡೆಯುತ್ತಿದೆ.
ಈ ಬಾರಿಯ ಕೆಸಿಸಿ ಟೂರ್ನಮೆಂಟ್ ಆಯೋಜನೆಯ ಜವಾಬ್ದಾರಿಯನ್ನು ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂತ್ ವಹಿಸಿಕೊಂಡಿದ್ದು, ಇತ್ತೀಚೆಗೆ ನಡೆದ ಪ್ರೆಸ್‌ಮೀಟ್‌ನಲ್ಲಿ ಸಿನಿ ರಸಿಕರನ್ನು ಹಾಗೂ ಕ್ರಿಕೆಟ್ ಪ್ರೇಮಿ ಗಳನ್ನು ಪಂದ್ಯಾವಳಿ ವೀಕ್ಷಿಸಲು ಆಹ್ವಾನಿಸಿದ್ದಾರೆ.
ಫೆಬ್ರವರಿ 24 ಹಾಗೂ 25ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಒಟ್ಟು ಆರು ತಂಡಗಳು ಭಾಗವಹಿಸಲಿವೆ.
ಕನ್ನಡ ಚಲನಚಿತ್ರ ಕಪ್‌ನ ಟಿಕೆಟ್‌ಗಳು ಟಿಕೆಟ್ ಜೀನಿ ಡಾಟ್ ಇನ್ ( . ) ವೆಬ್ ತಾಣದಲ್ಲಿ ಲಭ್ಯ ವಿದೆ. ಟಿಕೆಟ್‌ಗಳು 150, 250, 750, 1000, 1500, 3000 ಹಾಗೂ 5000 ರೂಪಾಯಿಗಳಿಗೆ ಲಭ್ಯವಿದೆ.
ಆರು ತಂಡಗಳು ಕಣಕ್ಕಿಳಿಯಲಿದ್ದು, ಗಂಗಾ ವಾರಿಯರ್ಸ್ ತಂಡವನ್ನು ಧನಂಜಯ್ ಮುನ್ನಡೆಸಲಿದ್ದರೆ, ಕದಂಬ ಲಯನ್ಸ್ ತಂಡವನ್ನು ಗಣೇಶ್, ಒಡೆಯರ್ ಚಾರ್ಜರ್ಸ್ ತಂಡವನ್ನು ಶಿವರಾಜ್‌ಕುಮಾರ್, ಹೊಯ್ಸಳ ಈಗಲ್ಸ್ ತಂಡವನ್ನು ಕಿಚ್ಚ ಸುದೀಪ್, ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಉಪೇಂದ್ರ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಧ್ರುವ ಸರ್ಜಾ ಮುನ್ನಡೆಸಲಿದ್ದಾರೆ.