ಪ್ಯಾರಾ ಏಷ್ಯನ್ ಗೇಮ್ಸ್​​ನಲ್ಲಿ ಪ್ರಾಚಿ ಯಾದವ್’ಗೆ ​ಚಿನ್ನದ ಪದಕ
ಹ್ಯಾಂಗ್​ಝೌ:ಪ್ಯಾರಾ ಏಷ್ಯನ್ ಗೇಮ್ಸ್​​​ನಲ್ಲಿ ಭಾರತ ತನ್ನ ಪದಕ ಬೇಟೆ ಮುಂದುವರೆಸಿದೆ. ಏಷ್ಯನ್​ ಪ್ಯಾರಾ ಗೇಮ್ಸ್​ನ ಎರಡನೇ ದಿನ ಮಂಗಳವಾರ ಭಾರತದ ಪ್ರಾಚಿ ಯಾದವ್​ ಚಿನ್ನದ ಪದಕ ಪಡೆದಿದ್ದಾರೆ.
ಮಹಿಳೆಯರ ಕೆಎಲ್​2 ಕ್ಯಾನೋಯಿಂಗ್​ ಸ್ಪರ್ಧೆಯಲ್ಲಿ ಪ್ರಾಚಿ ಚಿನ್ನದ ಪದಕ ಗೆದ್ದಿದ್ದು, ಪ್ಯಾರಾ ಏಷ್ಯನ್​ ಗೇಮ್ಸ್​ನ ನಾಲ್ಕನೇ ಆವೃತ್ತಿಯಲ್ಲಿ ಎರಡನೇ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಸೋಮವಾರ ನಡೆದ ಮಹಿಳೆಯರ ಕ್ಯಾನೋಯಿಂಗ್​ ವಿಎಲ್ 2​ ವಿಭಾಗದಲ್ಲಿ ಪ್ರಾಚಿ ಯಾದವ್​ ಬೆಳ್ಳಿ ಪದಕ ಗೆದ್ದಿದ್ದರು. ಮೊದಲ ದಿನ ಉಜ್ಬೇಕಿಸ್ಥಾನದ ಇರೋದಖೋನ್​ ರುಸ್ತಮೋವ ಜೊತೆ ಪ್ರಬಲ ಹೋರಾಟ ನಡೆಸಿದ ಅವರು ಅಂತಿಮ ಕ್ಷಣದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಪ್ರಾಚಿ ಕೇವಲ 1.022 ಸೆಕೆಂಡ್​ಗಳಲ್ಲಿ ಚಿನ್ನದ ಪದಕದಿಂದ ವಂಚಿತರಾಗಿದ್ದರು.
ಪುರುಷರ ವಿಭಾಗದ ಕೆಎಲ್​​3 ಕ್ಯಾನೋಯಿಂಗ್​ ಸ್ಪರ್ಧೆಯಲ್ಲಿ 27 ವರ್ಷದ ಮನೀಷ್​ ಕೌರವ್​ ಕಂಚಿನ ಪದಕ ಪಡೆದಿದ್ದಾರೆ. ಪುರುಷರ ವಿಭಾಗದ ಕ್ಯಾನೋಯಿಂಗ್​ ಕೆಎಲ್​3 ಸ್ಪರ್ಧೆಯಲ್ಲಿ 44.065 ಸೆಕೆಂಡ್​ಗಳಲ್ಲಿ ಗುರಿ ಮುಟ್ಟುವ ಮೂಲಕ ಕಂಚಿನ ಪದಕ ಪಡೆದರು. ಮನೀಷ್​ ಕೌರವ್​ ಎರಡು ಬಾರಿ ಏಷ್ಯನ್​ ಚಾಂಪಿಯನ್​ ಶಿಪ್​ನಲ್ಲಿ ಎರಡು ಚಿನ್ನದ ಪದಕವನ್ನು ಪಡೆದಿದ್ದಾರೆ.
ಪ್ರಾಚಿ ಯಾದವ್​ ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಪ್ಯಾರಾಲಿಂಪಿಕ್​ ವರ್ಲ್ಡ್​ ಕಪ್​ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಪ್ರಾಚಿ ಯಾದವ್​ ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದಾರೆ.