ಟಿ20 ವಿಶ್ವಕಪ್: ಕೊಹ್ಲಿಗೆ ಚಾನ್ಸ್ ಸಿಗುವುದು ಡೌಟು…!
ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ತಿಂಗಳುಗಳು ಮಾತ್ರ ಉಳಿದಿವೆ. ಜೂನ್ 1 ರಿಂದ ಶುರುವಾಗಲಿರುವ ಚುಟುಕು ಕ್ರಿಕೆಟ್ ಕದನಕ್ಕಾಗಿ ತಂಡಗಳನ್ನು ಪ್ರಕಟಿಸಲು ಮೇ 1 ರವರೆಗೆ ಗಡುವು ನೀಡಲಾಗಿದೆ. ಹೀಗಾಗಿ ಮಾರ್ಚ್ ಅಂತ್ಯದೊಳಗೆ 20 ದೇಶಗಳು ತಮ್ಮ ತಂಡಗಳನ್ನು ಘೋಷಿಸಲಿದೆ.
ಟಿ20 ವಿಶ್ವಕಪ್ ತಂಡದ ಆಯ್ಕೆಗೂ ಮುನ್ನ ಟೀಮ್​ನಿಂದ ಹೊರಗುಳಿಯಲು ವಿರಾಟ್ ಕೊಹ್ಲಿಯನ್ನು ಮನವೊಲಿಸುವಂತೆ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್​ಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಈ ಬಾರಿಯ ಟಿ20 ವಿಶ್ವಕಪ್​ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ನಡೆಯಲಿದೆ. ವೆಸ್ಟ್ ಇಂಡೀಸ್‌ನಲ್ಲಿ ನಿಧಾನಗತಿಯ ಪಿಚ್​ಗಳಿದ್ದು, ಇದು ಕೊಹ್ಲಿಯ ಬ್ಯಾಟಿಂಗ್​ಗೆ ಸರಿಹೊಂದುವುದಿಲ್ಲ.
ವಿರಾಟ್ ಕೊಹ್ಲಿಗೆ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗಬೇಕಿದ್ದರೆ ಅವರು ಈ ಬಾರಿಯ ಐಪಿಎಲ್​ನಲ್ಲಿ ಅಸಾಧಾರಣ ಪ್ರದರ್ಶನ ನೀಡಬೇಕಾಗುತ್ತದೆ.
ಏಕೆಂದರೆ ವಿರಾಟ್ ಕೊಹ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಆಡಿರುವುದು ಕೇವಲ 2 ಟಿ20 ಪಂದ್ಯಗಳನ್ನು ಮಾತ್ರ. ಏಕದಿನ ವಿಶ್ವಕಪ್​ಗೆ ಗಮನ ಕೇಂದ್ರೀಕರಿಸಲು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ತಂಡದಿಂದ ಹೊರಗುಳಿದಿದ್ದರು.
