50 ಮೀ ರೈಫಲ್ ತ್ರಿ ಪೊಶಿಷನ್‌: ಕಂಚು ಗೆದ್ದ ಸ್ವಪ್ನಿಲ್‌ ಕುಸಾಲ್‌
ಪ್ಯಾರಿಸ್‌:ಭಾರತದ ಭರವಸೆಯ ಶೂಟರ್‌ ಸ್ವಪ್ನಿಲ್‌ ಕುಸಾಲ್‌ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತ ಪ್ರಸಕ್ತ ಒಲಿಂಪಿಕ್ಸ್‌ನಲ್ಲಿ ಮೂರನೇ ಪದಕವನ್ನು ತಮ್ಮದಾಗಿಸಿಕೊಂಡಿದೆ.
ಪುರುಷರ 50 ಮೀ ರೈಫಲ್ ತ್ರಿ ಪೊಶಿಷನ್‌ ವಿಭಾಗದಲ್ಲಿ ಸ್ವಪ್ನಿಲ್‌ ಕಂಚಿನ ಸಾಧನೆ ಮಾಡಿದ್ದಾರೆ.
ಇದಕ್ಕೂ ಮೊದಲು ಮನು ಬಾಕರ್‌ ವೈಯಕ್ತಿಕ ವಿಭಾಗದಲ್ಲಿ ಕಂಚು ಪಡೆದಿದ್ದರು. ಮಿಶ್ರ ತಂಡ ವಿಭಾಗದಲ್ಲಿ ಮನು ಭಾಕರ್‌ ಹಾಗೂ ಸರಬ್‌ಜೋತ್‌ ಸಿಂಗ್‌ ಕಂಚಿಗೆ ಕೊರಳೊಡ್ಡಿದ್ದರು. ಗುರುವಾರ ಭಾರತಕ್ಕೆ ಮೂರನೇ ಪದಕ ಬಂದಿದ್ದು, ಇದು ಸಹ ಶೂಟಿಂಗ್‌ನಿಂದಲೇ ಬಂದಿದ್ದು ಭಾರತೀಯ ಅಭಿಮಾನಿಗಳಿಗೆ ಖುಷಿ ನೀಡಿದೆ.
ಅರ್ಹತಾ ಸುತ್ತಿನಲ್ಲಿ ಸೊಗಸಾದ ಪ್ರದರ್ಶನ ನೀಡಿದ ಸ್ವಪ್ನಿಲ್‌ ಕುಸಾಲ್‌ ಪದಕದತ್ತ ಚಿತ್ತವನ್ನು ನೆಟ್ಟಿದ್ದು ಬಿಡಲೇ ಇಲ್ಲ. ಹಂತ ಹಂತವಾಗಿ ಅಂಕ ಗಳನ್ನು ಬಾಚಿಕೊಳ್ಳುತ್ತಲೇ ಸಾಗಿದರು. ಈ ಮೂಲಕ ಪದಕದ ಹತ್ತಿರ ಬಂದು ನಿಂತರು. ಫೈನಲ್‌ ಶೂಟಿಂಗ್ ಆರಂಭವಾದ ಮೊದಲ ಹಂತದಲ್ಲಿ ಸ್ವಪ್ನಿಲ್‌ ಆರನೇ ಸ್ಥಾನದಲ್ಲಿದ್ದರು. ಆದರೆ ಧೃತಿ ಗೆಡದೆ ಸ್ವಪ್ನಿಲ್‌ ಸತತ ನಿಖರ ಶೂಟ್‌ಗಳನ್ನು ಮಾಡುವ ಮೂಲಕ ತಮ್ಮ ಸ್ಥಾನವನ್ನು ಏರಿಸಿಕೊಳ್ಳುತ್ತಾ ಸಾಗಿದರು.
50 ಮೀ ರೈಫಲ್ ತ್ರಿ ಪೊಶಿಷನ್‌ ವಿಭಾಗದಲ್ಲಿ ಸ್ವಪ್ನಿಲ್‌ ಒತ್ತಡವನ್ನು ಮೆಟ್ಟಿನಿಂತು ಶೂಟ್ ಮಾಡಿದರು. ಇದು ಸ್ವಪ್ನಿಲ್‌ ಅವರ ಮೊದಲ ಒಲಿಂಪಿಕ್ಸ್‌ ಆಗಿದ್ದು, ಮೊದಲ ಒಲಿಂಪಿಕ್ಸ್‌ನಲ್ಲೇ ಪದಕದ ಬೇಟೆ ನಡೆಸಿದ್ದಾರೆ. ಈ ವಿಭಾಗದ ಚಿನ್ನವನ್ನು ಚೀನಾದ ಶೂಟರ್ ಪಡೆದರು. ಇವರು ಒಟ್ಟು 463.6 ಅಂಕಗಳನ್ನು ಕಲೆ ಹಾಕಿದರು. ಉಕ್ರೇನ್‌ ಶೂಟರ್‌ 461.3 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಭಾರತದ ಸ್ವಪ್ನಿಲ್‌ 451.4 ಅಂಕವನ್ನು ಕಲೆ ಹಾಕಿದರು.