ಡೋಪಿಂಗ್ ನಿಯಮ ಉಲ್ಲಂಘನೆ: ಪ್ರಮೋದ್ ಭಗತ್ ಅಮಾನತು
ನವದೆಹಲಿ:ಟೋಕಿಯೊ ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್​ ಪುರುಷರ ಸಿಂಗಲ್ಸ್ ಎಸ್‌ಎಲ್ 3 ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪ್ರಮೋದ್ ಭಗತ್ ಅವರನ್ನು 18 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.
ಹೀಗಾಗಿ ಪ್ರಮೋದ್​ಗೆ ಈ ಬಾರಿಯ ಪ್ಯಾರಾಲಿಂಪಿಕ್ಸ್ ಕೈತಪ್ಪಿದೆ. ಡೋಪಿಂಗ್ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ಮಾರ್ಚ್ 1, 2024 ರಂದು, ಕೋರ್ಟ್ ಆಫ್ ಆರ್ಬಿಟ್ರೇಶನ್ ಆಫ್ ಸ್ಪೋರ್ಟ್ () ಡೋಪಿಂಗ್ ವಿರೋಧಿ ವಿಭಾಗವು ಬಿಡಬ್ಲ್ಯುಎಫ್​ ಡೋಪಿಂಗ್ ವಿರೋಧಿ ನಿಯಮಗಳ ಉಲ್ಲಂಘನೆಯಲ್ಲಿ ಭಗತ್, 12 ತಿಂಗಳೊಳಗೆ ಮೂರು ಬಾರಿ ವಿಫಲರಾಗಿದ್ದಾರೆ ಎಂದು ಬಿಡಬ್ಲ್ಯುಎಫ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
‘ಭಗತ್ ತಮ್ಮ ಅಮಾನತಿನ ನಿರ್ಧಾರವನ್ನು ಪ್ರಶ್ನಿಸಿ ಜುಲೈ 29 ರಂದು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಈ ಮನವಿಯನ್ನು ಸಿಎಎಸ್‌ ವಜಾಗೊಳಿಸಿದೆ.
ಐದನೇ ವಯಸ್ಸಿನಲ್ಲಿ ಎಡಗಾಲಿನ ಅಂಗವೈಕಲ್ಯಕ್ಕೆ ತುತ್ತಾಗಿ ಪೋಲಿಯೊಗೆ ಒಳಗಾದ ಭಗತ್ ಅವರು ಎರಡು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಾಗಿದ್ದಾರೆ ಮತ್ತು ಅವರ ವಿಭಾಗದಲ್ಲಿ ಪ್ರಸ್ತುತ ವಿಶ್ವ ನಂ 3 ಆಗಿದ್ದಾರೆ.