ಪಂಜಾಬ್‌ ಗೆಲುವಿಗೆ ಅಡ್ಡಿಯಾಗದ ಸನ್‌ರೈಸ್
ದುಬೈ:ವೇಗಿಗಳಾದ ಕ್ರಿಸ್​ ಜೋರ್ಡನ್​ (17ಕ್ಕೆ 3) ಹಾಗೂ ಅರ್ಷದೀಪ್​ ಸಿಂಗ್​ (23ಕ್ಕೆ 3) ಜೋಡಿ ಡೆತ್​ ಓವರ್​ಗಳಲ್ಲಿ ತೋರಿದ ಅದ್ಭುತ ನಿರ್ವಹಣೆ ಫಲವಾಗಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡ ಸನ್​ರೈಸರ್ಸ್​ ಹೈದರಾಬಾದ್​ ತಂಡವನ್ನು 12 ರನ್​ಗಳಿಂದ ಮಣಿಸಿತು. ಪಂಜಾಬ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಕ್ರಿಸ್ ಜೋರ್ಡಾನ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
ಇದರೊಂದಿಗೆ ಲೀಗ್​ನಲ್ಲಿ ಸತತ 4ನೇ ಜಯ ದಾಖಲಿಸಿದ ಕನ್ನಡಿಗ ಕೆಎಲ್​ ರಾಹುಲ್​ ಪಡೆ ಪ್ಲೇಆಫ್ ಹಂತದ ಆಸೆಯನ್ನು ಜೀವಂತವಾಗಿರಿಸಿಕೊಂಡರೆ, ಸನ್​ರೈಸರ್ಸ್​ ತಂಡದ ಮುಂದಿನ ಹಾದಿ ಬಹುತೇಕ ಕಮರಿತು. ಸನ್​ರೈಸರ್ಸ್​ ಕೇವಲ 14 ರನ್​ಗಳ ಅಂತರದಲ್ಲಿ ಕೊನೆಯ 7 ವಿಕೆಟ್​ ಕೈಚೆಲ್ಲಿ ಸೋಲಿಗೆ ಶರಣಾಯಿತು.
ಟಾಸ್‌ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಪಂಜಾಬ್‌ ಕೆಎಲ್ ರಾಹುಲ್ (27) ಮತ್ತು ಕ್ರಿಸ್‌ ಗೇಲ್ (20) ಮಂದೀಪ್ ಸಿಂಗ್ (17) ಮೂವರೂ ಸಾಧಾರಣ ಮೊತ್ತ ಪೇರಿಸಲಷ್ಟೇ ಸಾಧ್ಯವಾದ ಪರಿಣಾಮ ಹೈದರಾಬಾದ್ ವಿರುದ್ಧ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ಎಡವಿ, 20 ಓವರ್ ಗಳಲ್ಲಿ 7 ವಿಕೆಟ್ ಗೆ 126 ರನ್ ಕಲೆ ಹಾಕಿತು.
ಸುಲಭ ಗೆಲುವಿನ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ 19.5 ಓವರ್ ಗಳಲ್ಲಿ 114 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದು ಕೊಂಡು ಸೋಲು ಅನುಭವಿಸಿತು. ಹೈದರಾಬಾದ್ ಪರವಾಗಿ ಡೇವಿಡ್ ವಾರ್ನರ್ 35, ವಿಜಯ ಶಂಕರ್ 26 ರನ್ ಗಳಿಸಿದ್ದರೆ ಪಂಜಾಬ್ ಪರವಾಗಿ ಅರ್ಷದೀಪ್ ಸಿಂಗ್ ಹಾಗೂ ಕ್ರಿಸ್ ಜೋರ್ಡಾನ್ ತಲಾ 3 ವಿಕೆಟ್ ಪಡೆದು ಮಿಂಚಿದರು.