ಇನ್ನಿಂಗ್ಸ್ ಗೆಲುವಿನತ್ತ ಕಿವೀಸ್‌ ದಾಪುಗಾಲು
ಹ್ಯಾಮಿಲ್ಟನ್:ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಇನ್ನಿಂಗ್ಸ್ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ.
ನ್ಯೂಜಿಲೆಂಡ್‌ನ 519 ರನ್‌ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 138 ರನ್‌ಗಳಿಗೆ ಸರ್ವಪತನಗೊಂಡು ಫಾಲೋ ಆನ್‌ಗೆ ಗುರಿಯಾಗಿರುವ ವೆಸ್ಟ್‌ಇಂಡೀಸ್, ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿ ಮೂರನೇ ದಿನದಂತ್ಯಕ್ಕೆ 42 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿದೆ.
ಕ್ರೀಸಿನಲ್ಲಿರುವ ಜೆರ್ಮೈನ್ ಬ್ಲ್ಯಾಕ್‌ವುಡ್ (80*) ಹಾಗೂ ಅಲ್ಜಾರಿ ಜೋಸೆಫ್ (59*) ದಿಟ್ಟ ಹೋರಾಟ ಮುಂದುವರಿಸಿದ್ದಾರೆ. ನಾಲ್ಕು ವಿಕೆಟ್ ಮಾತ್ರ ಬಾಕಿ ಉಳಿದಿರುವಂತೆಯೇ ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ಇನ್ನು 185 ರನ್ ಗಳಿಸಬೇಕಾದ ಅಗತ್ಯ ವಿದೆ.
ಮೂರನೇ ದಿನದಾಟ ಆರಂಭಿಸಿದ ವಿಂಡೀಸ್‌ಗೆ ಕಿವೀಸ್ ಅನುಭವಿ ವೇಗಿ ಟಿಮ್ ಸೌಥಿ ಮಾರಕವಾಗಿ ಕಾಡಿದರು. ಕಿವೀಸ್ ವೇಗಿಗಳ ದಾಳಿಗೆ ಪರದಾಡಿದ ವಿಂಡೀಸ್, ಮೊದಲ ಇನ್ನಿಂಗ್ಸ್‌ನಲ್ಲಿ 138 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಸೌಥಿ 35 ರನ್ ತೆತ್ತು ನಾಲ್ಕು ವಿಕೆಟ್ ಕಬಳಿಸಿ ಮಿಂಚಿದರು. ಇವರಿಗೆ ತಕ್ಕ ಸಾಥ್ ನೀಡಿದ ಕೈಲ್ ಜೆಮಿಸನ್ ಹಾಗೂ ನೀಲ್ ವ್ಯಾಗ್ನರ್ ತಲಾ ಎರಡು ಮತ್ತು ಟ್ರೆಂಟ್ ಬೌಲ್ಟ್ ಒಂದು ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್‌ನಲ್ಲಿ 381 ರನ್‌ಗಳ ಬೃಹತ್ ಮುನ್ನಡೆ ಪಡೆದ ನ್ಯೂಜಿಲೆಂಡ್, ಎದುರಾಳಿ ತಂಡವನ್ನು ಫಾಲೋ ಒನ್‌ಗೆ ಗುರಿ ಪಡಿಸಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲೂ ವಿಂಡೀಸ್, ಒಂದು ಹಂತದಲ್ಲಿ 89 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಒಳಗಾಗಿತ್ತು. ಈ ಸಂದರ್ಭದಲ್ಲಿ ಕೆಳ ಕ್ರಮಾಂಕದಲ್ಲಿ ಜೊತೆಗೂಡಿದ ಜೆರ್ಮೈನ್ ಬ್ಲ್ಯಾಕ್‌ವುಡ್ ಹಾಗೂ ಅಲ್ಜಾರಿ ಜೋಸೆಫ್ ಮುರಿಯದ ಏಳನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟ ನೀಡಿ ಕಿವೀಸ್ ಗೆಲುವನ್ನು ವಿಳಂಬಗೊಳಿಸಿದರು.
ಜೆರ್ಮೈನ್ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 80 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಇವರಿಗೆ ಸಾಥ್ ನೀಡು ತ್ತಿರುವ ಅಲ್ಜಾರಿ ಜೋಸೆಫ್ ಚೊಚ್ಚಲ ಅರ್ಧಶತಕ (59*) ಸಾಧನೆ ಮಾಡಿದ್ದಾರೆ.