ನ್ಯೂಜಿಲೆಂಡ್‌’ಗೆ ಇನ್ನಿಂಗ್ಸ್, 134 ರನ್‌ ಗೆಲುವು
ಹ್ಯಾಮಿಲ್ಟನ್:ಪ್ರವಾಸಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಇನ್ನಿಂಗ್ಸ್ ಹಾಗೂ 134 ರನ್ನುಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ನ್ಯೂಜಿಲೆಂಡ್ ತಂಡ ಟೆಸ್ಟ್ ಚಾಂಪಿಯನ್‌ಶಿಪ್‌ ಅಂಕ ಪಟ್ಟಿಯಲ್ಲಿ 60 ಅಂಕಗಳನ್ನು ಗಳಿಸಿದೆ.
ನ್ಯೂಜಿಲೆಂಡ್‌ನ 519 ರನ್‌ಗಳಿಗೆ ಉತ್ತರವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 138 ರನ್‌ಗಳಿಗೆ ಸರ್ವಪತನಗೊಂಡು ಫಾಲೋ ಆನ್‌ಗೆ ಗುರಿಯಾಗಿರುವ ವೆಸ್ಟ್‌ಇಂಡೀಸ್, ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿ ಮೂರನೇ ದಿನದಂತ್ಯಕ್ಕೆ 42 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ನಾಲ್ಕನೇ ದಿನದಾಟ ಆರಂಭಿಸಿದ ವಿಂಡೀಸಿ‌ಗೆ ಜೆರ್ಮೈನ್ ಬ್ಲ್ಯಾಕ್‌ ವುಡ್ (104) ಹಾಗೂ ಅಲ್ಜಾರಿ ಜೋಸೆಫ್ (86) ಹೋರಾಟ ಹೆಚ್ಚು ಲಾಭ ತರಲಿಲ್ಲ. ಇವರಿಬ್ಬರ ವಿಕೆಟ್ ಪತನವಾಗುತ್ತಲೇ ಮೂರು ರನ್‌ ಅಂತರದಲ್ಲಿ ಉಳಿದ ವಿಕೆಟ್‌ಗಳು ಉರುಳಿದವು.
ಎರಡನೇ ಇನ್ನಿಂಗ್ಸ್‌’ನಲ್ಲಿ ಕಿವೀಸ್‌ನ ನೀಲ್‌ ವ್ಯಾಗ್ನರ್ ‌ನಾಲ್ಕು, ಕೈಲ್ ಜೆಮೀಸನ್‌ ಎರಡು ಮತ್ತು ಟಿಮ್‌ ಸೌಥಿ, ಟ್ರೆಂಟ್ ಬೌಲ್ಟ್‌ ಹಾಗೂ ಮಿಶೆಲ್‌ ತಲಾ ಒಂದು ವಿಕೆಟ್ ಕಿತ್ತು, ಮೇಲೆಳಲಾರದಂತಹ ಹೊಡೆತ ನೀಡಿದರು.
ಮೊದಲ ಇನ್ನಿಂಗ್ಸ್‌ನಲ್ಲಿ 381 ರನ್‌ಗಳ ಬೃಹತ್ ಮುನ್ನಡೆ ಪಡೆದ ನ್ಯೂಜಿಲೆಂಡ್, ಎದುರಾಳಿ ತಂಡವನ್ನು ಫಾಲೋ ಒನ್‌ಗೆ ಗುರಿ ಪಡಿಸಿತ್ತು.