ದೇವದತ್‌ ಅಜೇಯ 99: ಗೆಲುವಿನ ಹಾದಿ ಹಿಡಿದ ಕರ್ನಾಟಕ
ಬೆಂಗಳೂರು:ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ (99*ರನ್) ಶತಕ ವಂಚಿತ ಅಜೇಯ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಹೋರಾಟದ ಫಲವಾಗಿ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ ಗೆಲುವಿನ ಹಾದಿ ಹಿಡಿಯಿತು.
ಗುರುವಾರದ ಪಂದ್ಯದಲ್ಲಿ ಕರ್ನಾಟಕ ತಂಡ 10 ರನ್‌ಗಳಿಂದ ತ್ರಿಪುರ ತಂಡವನ್ನು ಸೋಲಿಸಿತು. ಇದರೊಂದಿಗೆ ಲೀಗ್‌ನಲ್ಲಿ ಇದುವರೆಗೂ ಆಡಿರುವ 3 ಪಂದ್ಯಗಳಲ್ಲಿ 2 ಜಯ ಹಾಗೂ ಒಂದು ಸೋಲು ಕಂಡಿರುವ ಹಾಲಿ ಚಾಂಪಿಯನ್ ಕರ್ನಾಟಕ ಎಲೈಟ್ ’ಎ’ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ರೋಹನ್ ಕದಂ (31ರನ್, 23 ಎಸೆತ, 4 ಬೌಂಡರಿ) ಹಾಗೂ ದೇವದತ್ ಪಡಿಕಲ್ ಜೋಡಿ ಬಿರುಸಿನ ಆರಂಭದ ನೆರವಿನಿಂದ 5 ವಿಕೆಟ್‌ಗೆ 167 ರನ್ ಕಲೆ ಹಾಕಿತು.
ಪ್ರತಿಯಾಗಿ ನಾಯಕ ಮಣಿಶಂಕರ್ ಮುರಾಸಿಂಗ್ (61*ರನ್, 33 ಎಸೆತ, 3 ಬೌಂಡರಿ, 5 ಸಿಕ್ಸರ್) ಹಾಗೂ ರಜತ್ ಡೇ (44*ರನ್, 29 ಎಸೆತ, 4 ಸಿಕ್ಸರ್) ಜೋಡಿ ಪ್ರತಿಹೋರಾಟದ ನಡುವೆಯೂ 4 ವಿಕಟ್‌ಗೆ 157 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
