ಭದ್ರತಾ ವ್ಯವಸ್ಥೆಗೆ ಐಸಿಸಿ ತೃಪ್ತಿ; ಪಾಕ್‌ ನೆಲದಲ್ಲೇ ಚಾಂಪಿಯನ್ಸ್‌ ಟ್ರೋಫಿ
ದುಬೈ:ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಬೇಕಿರುವ ಚಾಂಪಿಯನ್ಸ್‌ ಟ್ರೋಫಿಯ(  2025) ಹಿನ್ನೆಲೆಯಲ್ಲಿ ಅಲ್ಲಿನ ಭದ್ರತೆ ಸಹಿತ ಇತರ ವ್ಯವಸ್ಥೆಗಳ ಪರಿಶೀಲನೆಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ನ ಐವರು ಸದಸ್ಯರ ನಿಯೋಗವು ಕಳೆದ ವಾರ ಕರಾಚಿಗೆ ಭೇಟಿ ನೀಡಿತ್ತು. ಇದೀಗ  ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಐಸಿಸಿ ಅಧಿಕಾರಿಗಳು ಪಿಸಿಬಿಯ ಸಿದ್ಧತೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಜತೆಗೆ ಟೂರ್ನಿಯನ್ನು ಪಾಕ್‌ನಲ್ಲೇ ನಡೆಸಲು ಐಸಿಸಿ ಅಧಿಕಾರಿಗಳು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಐಸಿಸಿ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಐಸಿಸಿ ಆಯೋಗವು ಪಂದ್ಯಾವಳಿ ನಡೆಯುವ ಲಾಹೋರ್‌ನ ಗಡಾಫಿ ಸ್ಟೇಡಿಯಂ, ರಾವಲ್ಪಿಂಡಿ, ಕರಾಚಿ ರಾಷ್ಟ್ರೀಯ ಕ್ರೀಡಾಂಗಣಗಳಿಗೆ ಭೇಟಿ ನೀಡಿ ಅಲ್ಲಿನ ಭದ್ರತಾ ಕ್ರಮಗಳು, ಮೂಲಸೌಕರ್ಯ ಮತ್ತು ಇತರ ಪ್ರಮುಖ ವ್ಯವಸ್ಥೆಗಳನ್ನು ಪರಿಶೀಲಿಸಿತ್ತು. ಐಸಿಸಿಯ ಕಾರ್ಯಕ್ರಮ ಮತ್ತು ಭದ್ರತಾ ವಿಭಾಗದ ಉನ್ನತ ಅಧಿಕಾರಿಗಳು ಹಾಗೂ ಕ್ರಿಕೆಟ್‌ ಮತ್ತು ಪ್ರೊಡಕ್ಷನ್‌ ವಿಭಾಗದ ಜನರಲ್‌ ಮ್ಯಾನೇಜರ್‌ ಈ ನಿಯೋಗದಲ್ಲಿದ್ದರು.
ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಿಗೆ ಮಾಡಲಾದ ವ್ಯವಸ್ಥೆಗಳ ಬಗ್ಗೆ ಮತ್ತು ಭದ್ರತಾ ಕ್ರಮಗಳ ಬಗ್ಗೆ ಐಸಿಸಿ ನಿಯೋಗವು ತೃಪ್ತಿ ವ್ಯಕ್ತಪಡಿಸಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ವಿಶ್ವ ದರ್ಜೆಯ ವ್ಯವಸ್ಥೆಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ  2025: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಐಸಿಸಿ
ಪಿಸಿಬಿ ಅಧ್ಯಕ್ಷ ಹೇಳಿದ್ದೇನು?
ಐಸಿಸಿ ನಿಯೋಗದ ಭೇಟಿ ನಂತರ ಮಾತನಾಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಚಾಂಪಿಯನ್ಸ್ ಟ್ರೋಫಿಗಿಂತ ಮೊದಲು ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಲ್ಲ ತಂಡಗಳಿಗೂ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗುವುದು. ಬೃಹತ್ ಟೂರ್ನಿಗಳ ಪ್ರಕಾರ ವ್ಯವಸ್ಥೆಗಳನ್ನು ಅಂತಿಮಗೊಳಿಸಲಾಗುತ್ತಿದೆ. ಎಲ್ಲಾ ತಂಡಗಳ ಆಟಗಾರರು ಶಾಂತಿಯುತ ಮತ್ತು ಸುರಕ್ಷಿತ ವಾತಾವರಣದಲ್ಲಿ ಕ್ರಿಕೆಟ್ ಆಡಿ ಆನಂದಿಸುತ್ತಾರೆ ಎಂದು ಹೇಳಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಈ ಕೂಟದಲ್ಲಿ ಭಾರತೀಯ ತಂಡ ಭಾಗವಹಿಸುವ ಸಾಧ್ಯತೆಯಿದೆ ಮತ್ತು ಭಾರತ ಆಡುವ ಎಲ್ಲ ಪಂದ್ಯಗಳು ಲಾಹೋರ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಒಂದು ವೇಳೆ ಭಾರತ ಸರಕಾರ ಭಾರತೀಯ ತಂಡವನ್ನು ಪಾಕಿಸ್ಥಾನಕ್ಕೆ ಕಳುಹಿಸಲು ಅವಕಾಶ ನೀಡದಿದ್ದರೆ ಏನು ಮಾಡಬಹುದು ಎನ್ನುವುದು ತಿಳಿದುಬಂದಿಲ್ಲ.
ನವೆಂಬರ್ 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ 150 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡಿಲ್ಲ. ಜೂನ್-ಜುಲೈ 2008 ರಲ್ಲಿ ಏಷ್ಯಾ ಕಪ್ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿತ್ತು. ಭಾರತದಲ್ಲಿ ಡಿಸೆಂಬರ್ 2012 ರಿಂದ ಜನವರಿ 2013 ರವರೆಗಿನ ದ್ವಿಪಕ್ಷೀಯ ಸರಣಿಯು ಎರಡು ರಾಷ್ಟ್ರಗಳ ನಡುವಿನ ಅಂತಿಮ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ಬಳಿಕ ಉಭಯ ತಂಡಗಳು ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತವೆ.