ಜೂನಿಯರ್‌ ವಿಶ್ವಕಪ್‌ ಹಾಕಿ: ವಿದೇಶೀ ಆಟಗಾರರಿಗೆ ಕ್ವಾರಂಟೈನ್‌ನಿಂದ ವಿನಾಯಿತಿ
ನವದೆಹಲಿ:ಮುಂದಿನ ತಿಂಗಳು ಭುವನೇಶ್ವರದಲ್ಲಿ ನಿಗದಿಯಾಗಿರುವ ಎಫ್‌ಐಎಚ್‌ ಪುರುಷರ ಜೂನಿಯರ್‌ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ವಿದೇಶಿ ತಂಡಗಳಿಗೆ ಕ್ವಾರಂಟೈನ್‌ ನಿಂದ ವಿನಾಯಿತಿ ನೀಡಲಾಗಿದೆ.
ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಪಂದ್ಯಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನವೆಂಬರ್‌ 25ರಿಂದ ಡಿಸೆಂಬರ್‌ 5ರವರೆಗೆ ನಡೆಯಲಿವೆ. ಆತಿಥೇಯ ಭಾರತವು ಟೂರ್ನಿಯ ಹಾಲಿ ಚಾಂಪಿಯನ್ ಆಗಿದೆ.
ಈ ತಿಂಗಳ ಆರಂಭದಲ್ಲಿ ಕ್ರೀಡಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಲ್.ಎಸ್.ಸಿಂಗ್ ಅವರು ಸಲ್ಲಿಸಿದ ಮನವಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸ್ಪಂದಿಸಿ ಈ ನಿರ್ಧಾರ ತೆಗೆದುಕೊಂಡಿದೆ. ವಿದೇಶಗಳಿಂದ ಆಗಮಿಸುವ ಎಲ್ಲ ತಂಡಗಳು ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸಚಿವಾಲಯ ಸೂಚಿಸಿದೆ.
ಭಾರತದಲ್ಲಿ ಯಾವುದೇ ಭಾಗೀದಾರರಿಗೆ ಕೊರೊನಾ ಲಕ್ಷಣಗಳು ಕಂಡುಬಂದರೆ, ಅವರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕ್ರೀಡಾ ಇಲಾಖೆಯು ಅವರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲಿದೆ’ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿ ದ್ದಾರೆ.
ಭಾರತ ಅಲ್ಲದೆ ಕೊರಿಯಾ, ಮಲೇಷ್ಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಈಜಿಪ್ಟ್‌, ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ನೆದರ್ಲೆಂಡ್ಸ್, ಸ್ಪೇನ್‌, ಅಮೆರಿಕ, ಕೆನಡಾ, ಚಿಲಿ, ಅರ್ಜೆಂಟೀನಾ ಮತ್ತು ಪೋಲೆಂಡ್‌ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.