ಪ್ರೊ ಕಬಡ್ಡಿ ಲೀಗ್: ಫೆ.25ರಂದು ಫೈನಲ್
ಬೆಂಗಳೂರು :ಪ್ರೊ ಕಬಡ್ಡಿ ಲೀಗ್(8ನೇ ಆವೃತ್ತಿ) ನಾಕೌಟ್​ ವೇಳಾ ಪಟ್ಟಿ ಬಿಡುಗಡೆಯಾಗಿದೆ. ಫೈನಲ್ ಫೆ.25ರಂದು ನಡೆಯಲಿದೆ.
ಫೆ.21ರಂದು ಎಲಿಮಿನೇಟರ್​ ಮತ್ತು ಫೆ.23ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
ಪ್ರೊ ಕಬಡ್ಡಿ ಲೀಗ್​ನಲ್ಲಿ ಒಟ್ಟು 12 ತಂಡಗಳಲ್ಲಿ ಅಂಕಪಟ್ಟಿಯಲ್ಲಿ ಮೊದಲ ಆರು ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್​ ಪ್ರವೇಶಿಸಲಿವೆ. ಫೆ.21ರಂದು 3 ಮತ್ತು 6ನೇ ಸ್ಥಾನದಲ್ಲಿರುವ ತಂಡಗಳ ನಡುವೆ ಮೊದಲ ಎಲಿಮಿನೇಟರ್​, 4 ಮತ್ತು 5ನೇ ಸ್ಥಾನದಲ್ಲಿರುವ ತಂಡಗಳ ನಡುವೆ 2ನೇ ಎಲಿಮಿನೇಟರ್ ಪಂದ್ಯ ನಡೆಯಲಿವೆ.
ಫೆ.23ರಂದು ಅಂಕಪಟ್ಟಿಯ ಅಗ್ರಸ್ಥಾನಿ ತಂಡದೊಂದಿಗೆ ಮೊದಲ ಎಲಿಮಿನೇಟರ್​ ಪಂದ್ಯ ಗೆದ್ದ ತಂಡ ದೊಂದಿಗೆ ಮೊದಲ ಸೆಮಿಫೈನಲ್​ ಮತ್ತು 2ನೇ ಸೆಮಿಫೈನಲ್​ನಲ್ಲಿ 2ನೇ ಎಲಿಮಿನೇಟರ್​ ಪಂದ್ಯದಲ್ಲಿ ಗೆದ್ದ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ತಂಡದೊಂದಿಗೆ ಸೆಣಸಾಡಲಿವೆ.
ಪ್ರಸ್ತುತ 80 ಅಂಕ ಪಡೆದಿರುವ ಪಾಟ್ನಾ ಪೈರೇಟ್ಸ್​ ಪ್ಲೇ ಆಫ್​ ಪ್ರವೇಶಿಸಿರುವ ಏಕೈಕ ತಂಡವಾಗಿದೆ. ಉಳಿದ 5 ಸ್ಥಾನಕ್ಕಾಗಿ 8 ತಂಡಗಳು ಪೈಪೊಟಿ ನಡೆಸಲಿವೆ.