ಸ್ಫೋಟಕ ಬ್ಯಾಟಿಂಗ್ ನಡೆಸಿದ ಲೇಡಿ ಎಬಿಡಿ ’ಶಫಾಲಿ’
ಭಾರತ ಮಹಿಳಾ ಕ್ರಿಕೆಟ್ ತಂಡ ಸದ್ಯ ಸಿಂಹಳೀಯರ ನಾಡಲ್ಲಿದ್ದು ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೊದಲ ಪಂದ್ಯದಲ್ಲಿ 4 ವಿಕೆಟ್​ಗಳಿಂದ ಜಯಿಸಿದ್ದ ಹರ್ಮನ್​ಪ್ರೀತ್ ಪಡೆ ಎರಡನೇ ಏಕದಿನದಲ್ಲೂ 10 ವಿಕೆಟ್​ಗಳಿಂದ ಗೆದ್ದು ಬೀಗಿದ್ದು ಸರಣಿ ವಶಪಡಿಸಿಕೊಂಡಿದೆ.
ಲಂಕಾ ನೀಡಿದ್ದ 173 ರನ್​ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತೀಯ ವನಿತೆಯರು ಒಂದೂ ವಿಕೆಟ್ ಕಳೆದುಕೊಳ್ಳದೆ ಕೇವಲ 25.4 ಓವರ್​ನಲ್ಲಿ ಗೆಲುವಿನ ಗುರಿ ಮುಟ್ಟಿದರು.
ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಶಫಾಲಿ 71 ಎಸೆತಗಳಲ್ಲಿ ಅಜೇಯ 71 ರನ್ ಚಚ್ಚಿದರು. ಅದರಲ್ಲೂ ಇವರು ಹೊಡೆದ ಒಂದು ಶಾಟ್ ಅದ್ಭುತವಾಗಿತ್ತು. ಶ್ರೀಲಂಕಾ ಪರ ಏಳನೇ ಓವರ್ ಬೌಲಿಂಗ್ ಮಾಡಲು ಬಂದ ವೇಗಿ ಅಚಿನಿ ಕುಲಸೂರ್ಯ ತಮ್ಮ ಕೊನೆಯ ಎಸೆತವನ್ನು ಆಫ್ ಸ್ಟಂಪ್​ನ ಔಟ್ ಸೈಡ್ ಕಡೆ ಎಸೆತದರು.
ಇದನ್ನು ತಕ್ಷಣವೇ ಅರಿತ ಶಫಾಲಿ ವಿಕೆಟ್​ನಿಂದ ಎದುರು ಬಂದು ಲೆಗ್​ಸೈಡ್​ ಕಡೆ ಸ್ಕೂಪ್ ಶಾಟ್ ಹೊಡೆದರು. ಚೆಂಡು ಫೈನ್ ಲೆಗ್​ನಲ್ಲಿ ಬೌಂಡರಿ ಗೆರೆ ತಲುಪಿತು. ಶಫಾಲಿ ವರ್ಮಾ ಕೂಡ ಅದೇರೀತಿ ಶಾಟ್ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದು ಅನೇಕರು ಲೇಡಿ ಎಬಿಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ಎಬಿ ಡಿವಿಲಿಯರ್ಸ್​ ಕೂಡ ಅನೇಕ ಬಾರಿ ಈ ರೀತಿಯ ಶಾಟ್ ಹೊಡೆದಿದ್ದರು.
