ಗುರಿ ಮತ್ತು ಸಾಧನಾಪಥದಲ್ಲಿ ಸ್ಪಷ್ಟತೆ ಇರಬೇಕು…
ಆತ್ಮಜ್ಞಾನ
ಡಾ.ಜಗದೀಶ್ ಮಾನೆ
ಈಗಿನ ಶಿಕ್ಷಣ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕು, ಅದರ ವಿಕಾಸವಾಗಬೇಕು ಮತ್ತು ಶಿಕ್ಷಣದಲ್ಲಿ ಕೌಶಲವನ್ನು ಹೆಚ್ಚಿಸಬೇಕು ಎನ್ನುವ ಚರ್ಚೆಗಳು ಸುಮಾರು ವರ್ಷಗಳಿಂದ ನಡೆಯುತ್ತಲೇ ಇವೆ. ವಾಸ್ತವವಾಗಿ ಶಿಕ್ಷಣದ ವಿಕಾಸ ಎಂದರೆ ಮನುಷ್ಯನ ವಿಕಾಸವೇ? ಹೌದು.
ಮನುಷ್ಯನ ವಿಕಾಸವಾದಾಗ ಶಿಕ್ಷಣದ ವಿಕಾಸ ತನ್ನಿಂದ ತಾನೇ ಆಗುತ್ತದೆ. ವಿಕಾಸದ ದಾರಿಯತ್ತ ಸಾಗುವ ಪ್ರತಿಯೊಬ್ಬ ಮನುಷ್ಯನಿಗೂ, ಮಾರ್ಗ ಮಧ್ಯ ದಲ್ಲಿ ಸಾಕಷ್ಟು ಅಡಚಣೆಗಳು, ತೊಂದರೆ-ತಾಪತ್ರಯಗಳು ಬರುತ್ತಲೇ ಇರುತ್ತವೆ. ಹಾಗೆ ಬರುವ ಎಲ್ಲ ತೊಡಕುಗಳನ್ನೂ ಮನುಷ್ಯ ತನ್ನ ಪರಿಶ್ರಮ ಹಾಗೂ ಕೌಶಲದಿಂದ ನಿವಾರಣೆ ಮಾಡಿಕೊಂಡು, ಜ್ಞಾನದ ಬಲದೊಂದಿಗೆ ಆ ದಿಕ್ಕಿನಲ್ಲೇ ಮುಂದೆ ಸಾಗಿದಾಗ ಉನ್ನತ ಸಾಧನೆಯನ್ನು ಮಾಡಲು ಸಾಧ್ಯವಾಗು ತ್ತದೆ.
ಪ್ರತಿಯೊಬ್ಬ ಮನುಷ್ಯನ ಒಳಗೂ ಒಂದು ವಿಶಿಷ್ಟ ಜ್ಞಾನ ಮತ್ತು ಶಕ್ತಿಯಿರುತ್ತದೆ. ಈ ಜ್ಞಾನ-ಶಕ್ತಿಯನ್ನು ಕೃತಿರೂಪದಲ್ಲಿ ಇಳಿಸಿದಾಗ ಅದು ವಿಜ್ಞಾನ ವಾಗಿ, ತಂತ್ರಜ್ಞಾ ನವಾಗಿ ಪರಿವರ್ತನೆಗೊಳ್ಳುತ್ತದೆ. ಆ ತಂತ್ರಜ್ಞಾನವು ಯೋಜನೆಯಾಗಿ ಮಾರ್ಪಾಡುಗೊಂಡ ನಂತರ, ಅಂದರೆ ಅದು ಕೃತಿರೂಪದಲ್ಲಿ ನಮ್ಮ ಕಣ್ಣಿಗೆ ಕಾಣಿಸಿದಾಗ ಮಾತ್ರ, ಜ್ಞಾನ-ಶಕ್ತಿಯನ್ನು ಸಾಕಾರಗೊಳಿಸಿದ ಶ್ರೇಯಸ್ಸು ನಮಗೆ ದಕ್ಕುತ್ತದೆ. ಈ ಮಹಾನ್ ಕಾರ್ಯ ಕೈಗೂಡಲು ಮನುಷ್ಯ ನಲ್ಲಿ ಶಕ್ತಿ ಇರಬೇಕು.
ಅಂದರೆ, ಶಾರೀರಿಕ ಬಲ, ಮನೋಬಲ, ಬುದ್ಧಿಬಲ ಮತ್ತು ಆತ್ಮಬಲ ಎಂಬ ನಾಲ್ಕು ಶಕ್ತಿಗಳು ಮನುಷ್ಯನಲ್ಲಿ ಇಲ್ಲದೇ ಹೋದರೆ, ಜ್ಞಾನ- ಶಕ್ತಿಯನ್ನು ಕೃತಿರೂಪಕ್ಕೆ ಇಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅದರ ಸಾಕಾರಕ್ಕಾಗಿ ಮನುಷ್ಯ ದಣಿವರಿಯದೇ ದುಡಿಯಬೇಕಾಗುತ್ತದೆ. ಹೀಗೆ ನಮ್ಮ ಉದ್ದೇಶಗಳ ಸಾಧನೆಗೆ ಪಣತೊಟ್ಟಾಗ ಅನೇಕ ರೀತಿಯ ಕಷ್ಟಗಳು, ಒತ್ತಡ ಎದುರಾಗುತ್ತವೆ; ಹಾಗೆ ಒದಗುವ ಸವಾಲುಗಳಿಗೆ ತಲೆಬಾಗಬಾರದು.
ಬಹುಮುಖ್ಯವಾಗಿ ಮತ್ತೊಬ್ಬರ ಖರೀದಿಗೆ ನಾವು ಸಿಗಬಾರದು. ಏಕೆಂದರೆ ಖರೀದಿಗೆ ಒಳಗಾಗುವವರಿಂದ ಯಾವ ವಿಕಾಸ ತಾನೇ ಸಾಧ್ಯ? ಯಾವುದೇ ಕ್ಷೇತ್ರ ವಿಕಾಸಗೊಳ್ಳಬೇಕಾದರೆ ಹೀಗೆ ಖರೀದಿಗೆ ಸಿಗದಿರುವಂಥ ಮತ್ತು ಸ್ವಂತಿಕೆಯುಳ್ಳ ವ್ಯಕ್ತಿಗಳ ನಿರ್ಮಾಣವಾಗಬೇಕು. ಬಳಿಕ ಅವರು ತಮ್ಮ ಗುರಿಯನ್ನು ಸ್ಪಷ್ಟಪಡಿಸಬೇಕು. ವ್ಯಕ್ತಿಯೊಬ್ಬ ಯಾವುದೇ ಗುರಿ, ಉದ್ದೇಶ ಅಥವಾ ಸಂಕಲ್ಪಗ ಳಿಲ್ಲದೆ ಮೂಗಿಗೆ ಕವಡೆ ಕಟ್ಟಿಕೊಂಡು ದಿನಕ್ಕೆ ೧೨ ಗಂಟೆ ಕೆಲಸ ಮಾಡಿದರೆ ಆತ ಕೇವಲ ಒಬ್ಬ ಕೂಲಿ ಎನಿಸಿಕೊಳ್ಳುತ್ತಾನೆ. ಆದರೆ ಒಬ್ಬ ನಾಯಕ, ನೇತಾರ ಎನಿಸಿಕೊಳ್ಳಬೇಕು ಎಂದರೆ, ಅಧ್ಯಯನ ಮುಖಿಯಾಗಿ ವಿಷಯದ ಆಳಕ್ಕಿಳಿದು ತನ್ನ ಗುರಿ ಮತ್ತು ಸಾಧನಾಪಥವನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ.
‘ಇಂಟರ್‌ನ್ಯಾಷನಲ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಆರ್ಗನೈಸೇಷನ್’ ಎಂಬ ತಂತ್ರಜ್ಞಾನ ಸಂಸ್ಥೆಯ ವತಿಯಿಂದ ಪ್ರತಿವರ್ಷವೂ ಒಂದು ಸಮ್ಮೇಳನ ನಡೆಯುತ್ತದೆ. ಈ ಸಮ್ಮೇಳನದ ಲ್ಲೊಮ್ಮೆ ‘ವಿಜ್ಞಾನವೇ ವಿಕಾಸದ ಮೂಲ’ ಎಂಬ ನಿರ್ಣಯವನ್ನು ಅನುಮೋದಿಸಿದ್ದರು. ಮರುವರ್ಷ ನಡೆದ  ಮತ್ತೊಂದು ಸಭೆಯಲ್ಲಿ, ಕೇವಲ ವಿಜ್ಞಾನದಿಂದ ವಿಕಾಸ ವನ್ನು ಸಾಧಿಸಲು ಸಾಧ್ಯವಿಲ್ಲ; ಜತೆಗೆ ತಂತ್ರಜ್ಞಾನವೂ ಇದ್ದರೆ ವಿಕಾಸ ಸಾಧ್ಯ ಎಂಬುದನ್ನು ಮನಗಂಡು ಅಂತಿಮ ನಿರ್ಣಯವನ್ನು ಮಂಡಿಸಲಾಯಿತು.
ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಜತೆಗಿಟ್ಟುಕೊಂಡು ಕೆಲ ವರ್ಷಗಳ ಕಾಲ ಕೆಲಸ ಮಾಡಲಾಯಿತು. ತದನಂತರ ಅವರಿಗೆ ಕೆಲವೊಂದಿಷ್ಟು ಕೊರತೆ ಗಳು ಕಂಡುಬಂದವು. ಹೀಗೆ ವಿಜ್ಞಾನ, ತಂತ್ರಜ್ಞಾನ ಎಲ್ಲವನ್ನೂ ಬಳಸಿದ ಮೇಲೆ ಅವರಿಗೆ ಅನಿಸಿದ್ದು ‘ಮೊದಲು ಮನುಷ್ಯ ಸರಿ ಆಗಬೇಕು’ ಅಂತ. ಮಾನವನ ಪರಿಪೂರ್ಣ ವಿಕಾಸವಾಗದೆ ಹೋದರೆ ಯಾವುದೂ ಸಾಧ್ಯವಿಲ್ಲ ಎಂಬ ಅಂತಿಮ ನಿರ್ಣಯವನ್ನು ಆಗ ಅನುಮೋದಿಸಲಾಯಿತು. ನಾವು ಎಷ್ಟೇ ದೊಡ್ಡ ಕಟ್ಟಡಗಳನ್ನು ಕಟ್ಟಿಸುವಷ್ಟು ಸಮರ್ಥರಿರಬಹುದು; ಆದರೆ ಕಟ್ಟುವಾತ ಅದನ್ನು ಸರಿಯಾಗಿ ನಿರ್ಮಿಸದೇ ಹೋದರೆ, ಆ ಕಟ್ಟಡಗಳು ಯಾವಾಗ ಬೇಕಾದರೂ ಬಿದ್ದುಹೋಗಬಹುದು.
ಹಾಗಾಗಿ ಮೊದಲು ಮನುಷ್ಯ ಸರಿಯಾಗಬೇಕು ಎನ್ನುವುದೇ ವಿಕಾಸದ ಮೂಲ. ಇತ್ತೀಚೆಗೆ ಜಗತ್ತು ನೋಡುವ ದೃಷ್ಟಿ ಬದಲಾಗಿದೆ; ಅದು ದೃಷ್ಟಿ ನೆಟ್ಟಿರು ವುದು ಮನುಷ್ಯನ ವಿಕಾಸದ ಬುನಾದಿಯತ್ತ. ಮಾನವನ ವಿಕಾಸದ ವಿಷಯದಲ್ಲಿ ಭಾರತಕ್ಕಿರುವ ದೃಷ್ಟಿಕೋನಕ್ಕೆ ಈಗ ವಿಶ್ವಮಾನ್ಯತೆ ಸಿಗುತ್ತಿದೆ.ಮನುಷ್ಯ ಎಂದರೆ ಆತನಿಗೊಂದು ಶರೀರ ಮತ್ತು ಬುದ್ಧಿ ಇದೆ ಅಂತ ಮಾತ್ರವೇ ಜಗತ್ತು ಈ ಮೊದಲು ಭಾವಿಸಿತ್ತು. ಆದರೆ ಮನುಷ್ಯನಿಗೆ ಮನಸ್ಸು ಎನ್ನುವುದೊಂದಿದೆ, ಅದರ ಜತೆಗೆ ಆತ್ಮವೂ ಇದೆ ಎಂಬುದು ಜಗತ್ತಿಗೆ ಗೊತ್ತಾಗಿದ್ದು ತಡವಾಗಿ. ತಪಸ್ಸಿನಿಂದ ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳುವ, ಆತ್ಮವನ್ನು ದರ್ಶಿಸುವ ಸಂಶೋಧನೆ ಸಾವಿರಾರು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ನಡೆದಿತ್ತು.
ಶರೀರ, ಬುದ್ಧಿ, ಮನಸ್ಸು ಮತ್ತು ಆತ್ಮ ಈ ನಾಲ್ಕು ಆಯಾಮಗಳ ಹದವಾದ ಮಿಶ್ರಣವೇ ಮಾನವ. ಶರೀರಕ್ಕೆ ಚುಚ್ಚಿದರೆ ಮನಸ್ಸಿಗೆ ನೋವಾಗುತ್ತದೆ, ಆಗ ಬುದ್ಧಿ ಯೋಚಿಸುತ್ತದೆ. ಹಾಗಾಗಿ ಮಾನವ ಪ್ರಜ್ಞಾವಂತ. ಮನುಷ್ಯನ ಆಲೋಚನಾಶಕ್ತಿಗೂ ಪ್ರಾಣಿಗಳ ಬುದ್ಧಿಶಕ್ತಿಗೂ ಅಗಾಧ ವ್ಯತ್ಯಾಸವಿದೆ. ಒಂದು ನಾಯಿಗೆ ಕಲ್ಲಿನಿಂದ ಹೊಡೆದರೆ ಒಂದೋ ಅದು ಅಲ್ಲಿಂದ ಓಡಿಹೋಗಬಹುದು ಅಥವಾ ಕಚ್ಚುವುದಕ್ಕೆ ಬರಬಹುದು, ಇಲ್ಲವೇ ಬೊಗಳಬಹುದು; ಈ ಮೂರನ್ನು ಹೊರತುಪಡಿಸಿದ ಪ್ರತಿಕ್ರಿಯೆ ಪ್ರಾಯಶಃ ಅದರಿಂದ ಹೊಮ್ಮಲಾರದು.
ಪ್ರಾಣಿಗಳ ಬುದ್ಧಿಶಕ್ತಿ ಅಥವಾ ಪ್ರತಿಕ್ರಿಯಾಶಕ್ತಿ ಒಂದು ರೀತಿ ‘ಪ್ರೋಗ್ರಾಮ್ಡ್’ ಸ್ವರೂಪದ್ದು. ಯಾಕೆಂದರೆ ಅವುಗಳ ಬೆನ್ನೆಲುಬು ನೆಲಕ್ಕೆ ಅಡ್ಡಲಾಗಿ, ಸಮಾನಾಂತರವಾಗಿ ಇರುತ್ತದೆ. ಭಗವಂತ ಸೃಷ್ಟಿಸಿರುವ ಜೀವಿಗಳ ಪೈಕಿ ಮನುಷ್ಯನ ಬೆನ್ನೆಲುಬು ಲಂಬವಾಗಿರುತ್ತದೆ. ಮನುಷ್ಯ ಗತಿಶೀಲನಾಗ ಬೇಕಿರುವುದು ಏರುಮುಖವಾಗಿ. ಅವನ ಸರ್ವಾಂಗೀಣ ವಿಕಾಸವು ಶರೀರದ ವಿಕಾಸದಿಂದ ಆಗ ಬೇಕು; ಏಕೆಂದರೆ ಶರೀರದ ವಿಕಾಸವಾಗದೆ ಮನಸ್ಸಿನವಿಕಾಸ ಆಗುವುದಿಲ್ಲ; ಮನಸ್ಸಿನ ವಿಕಾಸವಾಗದೆ ಬುದ್ಧಿಯ ವಿಕಾಸ ದುಸ್ತರ. ಬುದ್ಧಿಯ ವಿಕಾಸ ಆಗದಿದ್ದರೆ ಆತ್ಮದ ವಿಕಾಸ ಸಾಧ್ಯವಿಲ್ಲ. ಹೀಗೆ ಪ್ರತಿ ಯೊಂದು ವಿಕಾಸವೂ ಹಂತಹಂತವಾಗಿ ಸಾಗಬೇಕು.
ಶರೀರದ ಮೇಲೆ ಮನಸ್ಸಿನ ಹಿಡಿತ, ಮನಸ್ಸಿನ ಮೇಲೆ ಬುದ್ಧಿಯ ಹಿಡಿತ, ಭಾವನೆಗಳ ಮೇಲೆ ವಿವೇಕದ ಹಿಡಿತ ಇದ್ದರೆ, ಈ ಮೂರರ ಮೇಲೂ ಆತ್ಮದ ಹಿಡಿತ ಇರುತ್ತದೆ. ಅದುವೇ ಸಾರಥಿ. ಈ ನಾಲ್ಕನ್ನು ವಿಕಸನಗೊಳಿಸಬೇಕಾದರೆ, ನಾವು ಯಾವ ಗುರಿಯ ಕಡೆಗೆ ಸಾಗಬೇಕು ಎಂಬುದನ್ನು ಮೊದಲು ನಿಶ್ಚಯಿಸಿಕೊಳ್ಳಬೇಕು. ವಿಕಾಸದ ದಾರಿಯಲ್ಲಿ ಇಂಥದೊಂದು ಸ್ಪಷ್ಟತೆ ಇರಬೇಕು, ಯಾವುದೇ ಗೊಂದಲಗಳಿರಬಾರದು. ಯಾವ ಮನುಷ್ಯ ತನ್ನಲ್ಲಿಗೊಂದಲಗಳನ್ನು ಇಟ್ಟುಕೊಂಡಿರುತ್ತಾನೋ ಆತ ಬೇರೆ ಯವರು ಹೇಳಿದ ಹಾಗೆಯೇ ಕೇಳುತ್ತಾನೆ. ಗೊಂದಲಗಳಿರದಿದ್ದರೆ, ಆತ ಹೇಳಿದವರಿಗೆ ಸರಿಯಾದ  ಉತ್ತರವನ್ನು ಕೊಡುತ್ತಾನೆ. ಆದ್ದರಿಂದ, ಗುರಿಯ ಸ್ಪಷ್ಟತೆಯು ಕೂಡ ವಿಕಾಸದ ಅವಿಭಾಜ್ಯ ಅಂಗವಾಗಿದೆ.
ಗುರಿ ನಿಶ್ಚಯವಾದ ಮೇಲೆ ವಿಕಾಸದ ಪಥವನ್ನೂ ನಾವು ನಿರ್ಣಯಿಸಬೇಕಾಗುತ್ತದೆ. ‘ಅರಿವೇ ಗುರು’ ಎಂದಿದ್ದಾರೆ ನಮ್ಮ ಪೂರ್ವಜರು. ಅರಿವು ಇದ್ದರೆ ಗೊಂದಲಗಳಿರುವುದಿಲ್ಲ. ಅರಿವಿಲ್ಲದೆ ಕೇವಲ ಗೊಂದಲಗಳನ್ನೇ ತುಂಬಿಕೊಂಡಿರುವ ಮನುಷ್ಯನಿಗೆ, ಸ್ವತಃ ದೇವರೇ ಪ್ರತ್ಯಕ್ಷನಾಗಿ ತನ್ನ ಹತ್ತೂ ಕೈಗಳ ನ್ನೆತ್ತಿ ‘ನೀನು ಉದ್ದಾರವಾಗು ಮಗನೇ’ ಎಂದು ಆಶೀರ್ವಾದ ಮಾಡಿಬಿಟ್ಟರೂ ಆ ಮನುಷ್ಯ, ‘ಓ ದೇವರೇ! ನೀನು ಬಂದಿರುವುದು ನಿಜವಾ? ನೀನು ಪ್ರತ್ಯಕ್ಷವಾಗಿರುವುದು ಸತ್ಯವಾ?’ ಎಂದು ಕೇಳುತ್ತಾನೆ. ಹಾಗಾಗಿ ಯಾವುದೇ ಗೊಂದಲಗಳಿರಬಾರದು.
ಹಿಂದೊಮ್ಮೆ ನಮ್ಮ ದೇಶದಲ್ಲಿ ಗೊಂದಲಗಳಿಗೆ ಆಸ್ಪದವೇ ಇರಲಿಲ್ಲ. ದಾರ್ಶನಿಕರಿದ್ದರು, ಅವರ ಅನು ಭವದಿಂದ ಬಂದ ತತ್ವಗಳಿದ್ದವು, ವಿಜ್ಞಾನ-ತಂತ್ರಜ್ಞಾನಗಳಿದ್ದವು. ಅಲ್ಲಿ ಈಗಿರುವಂಥ ಯಾವುದೇ ಗೊಂದಲವಿರಲಿಲ್ಲ. ಅಲ್ಲಿ ಸಾಧನೆಯ ಯಾತ್ರೆಯಿತ್ತು. ಆದರೆ ಇಂಥ ಶ್ರೇಷ್ಠತೆಯನ್ನು ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಸಾಽಸಲಂತೂ ಸಾಧ್ಯವಿಲ್ಲ. ಇಂದಿನ ವಿದ್ಯಾರ್ಥಿಗಳ ವಾಸ್ತವಿಕ ಸ್ಥಿತಿ ಬೇರೆಯೇ ಇದೆ. ಮೂರು ಗಂಟೆಯ ಪರೀಕ್ಷೆ ಬರೆದು ನೂರಕ್ಕೆ ನೂರು ಅಂಕ ತೆಗೆದುಕೊಂಡಿರುವ ವಿದ್ಯಾರ್ಥಿಗೆ ಒಂದಷ್ಟು ಹೆಚ್ಚುವರಿ ಪ್ರಶ್ನೆಗಳನ್ನು ಕೇಳಿದರೆ ಆತ ತಡಬಡಾಯಿಸಿಬಿಡುತ್ತಾನೆ, ಬೆವರ ತೊಡಗುತ್ತಾನೆ!
ಹಾಗಾಗಿ ಇಂದಿನ ಶಿಕ್ಷಣ ವ್ಯವಸ್ಥೆಯ ಪರಿಸ್ಥಿತಿ ಗಂಭೀರ ಸ್ಥಿತಿಯಲ್ಲಿದೆ ಎಂದರೆ ಅತಿಶಯೋಕ್ತಿಯಲ್ಲ. ಮನುಷ್ಯ ನನ್ನು ಕೇವಲ ಅಂಕಗಳಿಂದ ಅಳೆಯುವ ಪರಿಪಾಠದಿಂದಾಗಿ ನಮ್ಮ ವಿಕಾಸದ ಮಾರ್ಗ ಕಡುಭ್ರಷ್ಟವಾಗಿಬಿಟ್ಟಿದೆ. ಅಂಕಗಳಿಂದ ನಮ್ಮ ಮಕ್ಕಳನ್ನು ಮತ್ತೊಬ್ಬರಿಗೆ ಹೋಲಿಕೆ ಮಾಡುವಂಥ ವಿಕ್ಷಿಪ್ತ ಮನಸ್ಥಿತಿಗೆ ಇವತ್ತಿನ ತಂದೆ- ತಾಯಿಯರು ತಲುಪಿದ್ದಾರೆ. ಒಡಹುಟ್ಟಿದ ಅಣ್ಣ-ತಂಗಿಯರನ್ನು ಪರಸ್ಪರ ಹೋಲಿಸಿ, ಅವರಿಬ್ಬರ ಮನಸ್ಸನ್ನೂಹಾಳುಮಾಡಿ, ಅವರು ತಮ್ಮ ಸ್ವಂತಿಕೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದೆ ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ.
ವಿಕಾಸದ ಹಾದಿಯೆಂದರೆ ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವುದು. ಅದಕ್ಕೂ ಮುಂಚೆ, ‘ಕತ್ತಲು’ ಅಂದರೆ ಏನು ಎಂಬುದರ ಬಗ್ಗೆ ಸ್ಪಷ್ಟತೆಯಿರಬೇಕು. ಕೆಲವರು ಕತ್ತಲಲ್ಲಿ ಹುಟ್ಟಿ, ಅದರಲ್ಲೇ ಬೆಳೆದು, ಕೊನೆಗೆ ಕತ್ತಲಲ್ಲೇ ಸಾಯುತ್ತಾರೆ. ಕಾರಣ, ತಾವು ಕತ್ತಲೆಯಲ್ಲಿರುವುದು ಅವರಿಗೆ ಗೊತ್ತೇ ಇರುವುದಿಲ್ಲ. ತಾವಿರುವ ಸ್ಥಿತಿಯನ್ನೇ ‘ಬೆಳಕು’ ಎಂದು ಭ್ರಮಿಸಿರುತ್ತಾರೆ. ಇಂಥವರು ಕತ್ತಲಾದ ಮೇಲೆ ಬಹಳಷ್ಟು ಕ್ರಿಯಾಶೀಲರಾಗುತ್ತಾರೆ, ಬೆಳಕಾದ ಕೂಡಲೇ ಸುಮ್ಮನಾಗಿಬಿಡುತ್ತಾರೆ! ಕತ್ತಲಲ್ಲಿ ಹುಟ್ಟಿದರೂ ಬೆಳಕಿನ ಕಡೆಗೆ ಹೋಗುವುದಿದೆಯಲ್ಲಾ, ಅದು ಮೃತ್ಯುವಿನಿಂದ ಅಮೃತತ್ವದ ಕಡೆಗೆ ಸಾಗಿದಂತೆ. ಅದು‘ಅಸತ್ಯ’ದಿಂದ ‘ಸತ್ಯ’ದೆಡೆಗಿನ ಅನುಪಮ ಪಯಣ.
ಪ್ರಕೃತಿಯ ನಿಯಮ ಕೂಡಾ ಹಾಗೆಯೇ ಇದೆ. ಉದಾಹರಣೆಗೆ, ಒಂದು ಸಣ್ಣ ಪ್ಲಾಸ್ಟಿಕ್ ಡಬ್ಬಿಯಲ್ಲಿ ಮಣ್ಣು, ಗೊಬ್ಬರ, ನೀರು ಹಾಕಿ, ಅದರೊಳಗೆ ಒಂದುಸಣ್ಣ ಸಸಿಯನ್ನು ನೆಟ್ಟು, ಆ ಡಬ್ಬಿಯನ್ನು ಸಂಪೂರ್ಣ ಪ್ಯಾಕ್ ಮಾಡಿ, ಒಂದು ಕಡೆ ಮಾತ್ರ ಸಣ್ಣದೊಂದು ರಂಧ್ರವನ್ನು ಕೊರೆದರೆ, ಆ ರಂಧ್ರದಿಂದ ತೂರಿಬರುತ್ತಿರುವ ಬೆಳಕಿನ ಕಡೆಗೇ ಸಸಿಯು ಬೆಳೆಯುತ್ತದೆ. ಹೀಗೇ ಬೆಳೆಯಬೇಕು ಅಂತ ಆ ಸಸಿಗೆ ನಾವೇನೂ ಹೇಳಿಕೊಟ್ಟಿರುವುದಿಲ್ಲ! ‘ಬೆಳಕಿನ ಕಡೆಗೆ ಬೆಳೆಯಬೇಕು’ ಎಂಬುದಾಗಿ ಆ ಸಣ್ಣ ಸಸಿಗೆ ಇರುವ ಅರಿವು ಮನುಷ್ಯನಿಗೂ ಇರಬೇಕಲ್ಲವೇ? ಹೀಗಾಗಿ, ಗುರಿ ನಿಶ್ಚಯವಾದ ಮೇಲೆ ಅದರೆಡೆಗೆ ಸಾಗುವ ಹಾದಿ ಅತ್ಯಂತ ಕಠಿಣವಾಗಿದ್ದರೂ, ಆ ದಿಕ್ಕಿನಲ್ಲಿ ಸಾಗಿದಾಗಲೇ ಸಾಫಲ್ಯ. ಅದುವೇ ಸಾಧನೆ!
(ಲೇಖಕರು ರಾಜ್ಯಶಾಸದ ಅಧ್ಯಾಪಕರು)