ಸದುದ್ದೇಶವೋ, ಸುಲಿಗೆಯೋ?
ಅಭಿಮತ
ಸಾಮಗ ದತ್ತಾತ್ರಿ
ಚುನಾವಣಾ ಬಾಂಡ್‌ಗಳ ಯೋಜನೆ ಸದುದ್ದೇಶದಿಂದ ಕೂಡಿದ್ದಾಗಿತ್ತೆಂದು ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಹೇಳಿದರೆ, ಬಾಂಡ್ ಗಳು ಬಿಜೆಪಿಗೆ ಸುಲಿಗೆಯ ಮಾರ್ಗಗಳಾಗಿದ್ದವು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾಗಿ ಮಾಧ್ಯಮ ಗಳಲ್ಲಿ ವರದಿಯಾಗಿದೆ. ಬಿಜೆಪಿಯು ಖಾಸಗಿ ಕಂಪನಿಗಳಿಂದ ನಾಲ್ಕು ಮಾರ್ಗಗಳಲ್ಲಿ ದೇಣಿಗೆಯನ್ನು ಸಂಗ್ರಹಿಸಿದೆ ಎಂದಿರುವ ಜೈರಾಮ್ ರಮೇಶ್, ಸುಪ್ರೀಂ ಕೋರ್ಟ್ ಈ ಕುರಿತು ವಿಶೇಷ ತಂಡವನ್ನು ರಚಿಸಿ ತನಿಖೆಗೆ ಅನುವುಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ತೀರ್ಪಿತ್ತ ಸುಪ್ರೀಂ ಕೋರ್ಟ್ ಈ ಯೋಜನೆಯನ್ನು ರದ್ದು ಪಡಿಸಿತು. ತೀರ್ಪಿನ ಪರಿಣಾಮವಾಗಿ, ಯಾವ್ಯಾವ ಪಕ್ಷಗಳು ಬಾಂಡ್‌ಗಳ ಮೂಲಕ ಯಾವ್ಯಾವ ಉದ್ದಿಮೆಗಳಿಂದ ಎಷ್ಟೆಷ್ಟು ದೇಣಿಗೆ ಪಡೆದಿವೆ ಎಂಬ ಬಗೆಗಿನ ಸಂಪೂರ್ಣ ವಿವರಗಳು ಈಗ ಬಹಿರಂಗವಾಗಿವೆ.
‘ಕಂಪನಿಗಳ ಮೇಲೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸುವುದು, ದಾಳಿ ತಪ್ಪಿಸಿಕೊಳ್ಳಲು ಈ ಕಂಪನಿಗಳು ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ ದೇಣಿಗೆ ನೀಡುವುದು’- ಇದು ಜೈರಾಮ್ ರಮೇಶರ ಆರೋಪದಲ್ಲಿ ಕಂಡುಬರುವ ಮಾರ್ಗಾನುಸರಣೆ. ಬಾಂಡ್‌ಗಳ ಕುರಿತಾಗಿ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಒಂದು ಲೇಖನವು, ಕೆಲವು ನಿದರ್ಶನ ಗಳನ್ನು ಪ್ರಸ್ತಾಪಿಸಿದೆ. ಪವನ್ ಮುಂಜಲ್ ಅವರ ‘ಹೀರೋ ಮೋಟಾರ್ ಕಾರ್ಪೊರೇಷನ್’ ಒಂದು ಕೋಟಿ ರು. ಮೌಲ್ಯದ ಬಾಂಡ್‌ ಗಳನ್ನು ೭.೧೦.೨೦೨೧ರಂದು ಖರೀದಿಸಿದ್ದು, ಅಷ್ಟೂ ಬಾಂಡ್‌ಗಳು ಬಿಜೆಪಿಗೆ ಬಂದಿವೆ.
ದ್ವಿಚಕ್ರ ವಾಹನಗಳನ್ನು ತಯಾರಿಸುವ ಈ ಕಂಪನಿ ಬೇರಾವ ಪಕ್ಷಕ್ಕೂ ದೇಣಿಗೆ ನೀಡಿಲ್ಲ. ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ’ (ಪಿಎಂಎಲ್‌ಎ) ಅಡಿಯಲ್ಲಿ ‘ಇ.ಡಿ’ ಇದೇ ಸಂಸ್ಥೆಯ ಮೇಲೆ ೧೨ ಕಡೆಗಳಲ್ಲಿ ೧.೮.೨೦೨೩ರಂದು ದಾಳಿ ನಡೆಸಿತು. ೫೪ ಕೋಟಿ ರು. ಮೌಲ್ಯದ ವಿದೇಶಿ ಕರೆನ್ಸಿಯ ಕಳ್ಳಸಾಗಣೆ ಆರೋಪದ ಮೇಲೆ ಈ ದಾಳಿ ನಡೆದಿದ್ದು, ಕ್ರಮವನ್ನು ಮುಂದುವರಿಸಲು ಕೋರ್ಟಿ ನಿಂದ ತಡೆಯಾಜ್ಞೆಯಿದೆ.
‘ಲಾಟರಿ ಕಿಂಗ್’ ಎಂದು ಹೆಸರಾದ ‘ಸ್ಯಾಂಟಿಯಾಗೊ ಮಾರ್ಟಿನ್’ನ ಫ್ಯೂಚರ್ ಗೇಮಿಂಗ್‌ನ ಒಟ್ಟು ೧೦೦ ಕೋಟಿ ರು. ಮೌಲ್ಯದ ಎರಡು ಬಾಂಡ್‌ಗಳು (ತಲಾ ೫೦ ಕೋಟಿ ರು. ಮೊತ್ತದ್ದು, ೧೩.೧೦.೨೦೨೧ ಮತ್ತು ೧೦.೧.೨೦೨೨ರಂದು ಖರೀದಿಸಿದ್ದು) ಬಿಜೆಪಿಗೆ ಲಭ್ಯವಾಗಿವೆ. ಡಿಸೆಂಬರ್ ೨೦೨೧ರಲ್ಲಿ ಮೊದಲ ಬಾರಿಗೆ ಮಾರ್ಟಿನ್‌ನ ಸ್ವತ್ತುಗಳನ್ನು ಜಫ್ತಿ ಮಾಡಲಾಗಿದೆ- ೯೦೦ ಕೋಟಿ ರು. ಅಕ್ರಮ ಗಳಿಕೆ ಎಂಬ ಕಾರಣಕ್ಕಾಗಿ. ಇದರ ತನಿಖೆ ಮುಂದುವರಿಯುತ್ತಿದೆ ಎಂಬ ಮಾಹಿತಿಯಿದೆ. ಅರಬಿಂದೋ ಫಾರ್ಮಾ ೧೨.೧.೨೦೨೩ರಂದು ಖರೀದಿಸಿದ ೩ ಕೋಟಿ ರು. ಮೌಲ್ಯದ ಬಾಂಡ್‌ಗಳು ಮತ್ತು ೧೨.೭.೨೦೨೨ರಂದು ಖರೀದಿಸಿದ ೨.೫ಕೋಟಿ ರು. ಮೌಲ್ಯದ ಬಾಂಡ್‌ಗಳು ಬಿಜೆಪಿಗೆ ಲಭ್ಯವಾಗಿವೆ.
ದೆಹಲಿಯ ಮದ್ಯ ಹಗರಣಕ್ಕೆ ಸಂಬಂಧವಿದ್ದ ಆರೋಪದ ಮೇರೆಗೆ, ಸಿಬಿಐ ೧೦.೧೧.೨೦೨೨ರಂದು -ರ್ಮಾದ ನಿರ್ದೇಶಕರನ್ನು ಬಂಧಿಸಿದೆ. ಆದಾಗ್ಯೂ ೫.೧೧.೨೦೨೨ರ ೫ ಕೋಟಿ ರು. ಮೌಲ್ಯದ ಬಾಂಡ್ ಮತ್ತು ೧೭.೧೧.೨೦೨೩ರ ೨೫ ಕೋಟಿ ರು. ಮೌಲ್ಯದ ಬಾಂಡ್ ಬಿಜೆಪಿಗೆ ಲಭ್ಯವಾಗಿವೆ. ಡಿಎಲ್‌ಎಫ್ ರಿಯಲ್ ಎಸ್ಟೇಟ್ ವಲಯದ ಸಂಸ್ಥೆ. ಇದು ೨೦೧೪ರಿಂದಲೂ ರಾಬರ್ಟ್ ವಾದ್ರಾ ಅವರ ಜತೆಗೆ ನಂಬಲಾಗದ ವ್ಯವಹಾರವನ್ನು ಹೊಂದಿದೆ ಎಂಬ ಗುಮಾನಿಯ ಮೇಲೆ ಕೇಂದ್ರೀಯ ತನಿಖಾ ತಂಡಗಳ ವಿಮರ್ಶಾತ್ಮಕ ಪರಿಶೀಲನೆಗೆ ಒಳಗಾಗಿದೆ. ಈ ಸಂಸ್ಥೆಯ ೧೭೦ ಕೋಟಿ ರು. ಮೌಲ್ಯದ ಬಾಂಡ್‌ಗಳು ಅಕ್ಟೋಬರ್ ೨೦೧೯ ಮತ್ತುನವೆಂಬರ್ ೨೦೨೨ರ ನಡುವೆ ಬಿಜೆಪಿಗೆ ಲಭ್ಯವಾಗಿವೆ. ಈ ಸಂಸ್ಥೆ ಇನ್ಯಾವ ಪಕ್ಷಕ್ಕೂ ದೇಣಿಗೆ ನೀಡಿಲ್ಲ!
ಈ ಪ್ರಕರಣಗಳಲ್ಲಿನ ತಾರೀಖನ್ನು ಮುಖ್ಯವಾಗಿ ಗಮನಿಸಿದರೆ, ಬಾಂಡ್‌ಗಳಿಗೂ ಸರಕಾರದ ಕ್ರಮಗಳಿಗೂ ಸಂಬಂಧವಿಲ್ಲ ಎಂಬುದು ಗೊತ್ತಾಗುತ್ತದೆ. ಯಾವುದೇ ಪಕ್ಷಕ್ಕೆ ಯಾರಿಂದ ಬಾಂಡ್ ಮೂಲಕ ದೇಣಿಗೆ ಬಂದಿದೆ ಎಂದು ತಿಳಿಯುವ ಸಂಭವ ಆಗ ಇರಲಿಲ್ಲ; ಇದೀಗಷ್ಟೇ ವಿವರಗಳು ಬಹಿರಂಗವಾಗಿರುವುದು. ಉದ್ಯಮಗಳು/ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡು ವುದು ಹೊಸತೇನಲ್ಲ. ಅವು ಪ್ರತಿ-ಲಾಪೇಕ್ಷೆಯಿಂದ ಚುನಾವಣಾ ಬಾಂಡ್‌ಗಳ ಖರೀದಿಯ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿವೆ ಎಂದೇ ಹೇಳುವುದಾದರೆ ಎಲ್ಲಾ ಪಕ್ಷಗಳೂ ಕಳಂಕಿತ ಪಕ್ಷಗಳೇ! ಅಂಥಲ್ಲಿ ದೇಣಿಗೆಯ ಮೌಲ್ಯ ಗೌಣ. ದೇಣಿಗೆ ಯನ್ನು ಸದುದ್ದೇಶದಿಂದ ಕೊಡಲಾಯಿತೋ ಅಥವಾ ಅದು ಅನಿವಾರ್ಯವಾಯಿತೋ? ಯಾರು ಹೇಳಬೇಕು?
(ಲೇಖಕರು ಹವ್ಯಾಸಿ ಬರಹಗಾರರು)