  : ಸ್ವರ್ಗದಲ್ಲಿ ಪತ್ರಕರ್ತರಿರುವುದು ಸಾಧ್ಯವೇ ಇಲ್ಲ !
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
@.
ಬೇರೆಯವರ ಬಗ್ಗೆ ಬರೆದು ಬರೆದು ಬೇಸರವಾಗಿದೆ. ಎಷ್ಟು ದಿನ ಅಂತ ಬೇರೆಯವರನ್ನ ಟೀಕಿಸುವುದು, ಕಾಲೆಳೆಯುವುದು? ಈ ವಾರ, ಫಾರ್ ಎ ಚೇಂಚ್, ನಮ್ಮ ಬಗ್ಗೆ ಅಂದರೆ ಪತ್ರಕರ್ತರ ಕುರಿತು ಒಂದು ಕಾಲ್ಪನಿಕ ಪ್ರಸಂಗವನ್ನು ಹೇಳುತ್ತೇನೆ. ಒಮ್ಮೆ ಪತ್ರಕರ್ತ ನಿಧನನಾದ. ಆತ ನೇರವಾಗಿ ಸ್ವರ್ಗಕ್ಕೆ ಹೋದ. ಅಲ್ಲಿನ ಬಾಗಿಲು ಮುಚ್ಚಿತ್ತು. ಬಾಗಿಲು ಬಡಿದು ಅದನ್ನು ತೆರೆಯುವಂತೆ ಕೂಗಿದ.
ಒಂದು ಸಣ್ಣ ಕಿಟಕಿಯ ಬಾಗಿಲು ಬಡಿದು ಅದನ್ನು ತೆರೆಯುವಂತೆ ಕೂಗಿದ. ಬಾಗಿಲು ತೆರೆಯಿತು. ಒಳಗಿನಿಂದ ಚಿತ್ರಗುಪ್ತ ಹೇಳಿದ ‘ಕ್ಷಮಿಸು, ಸ್ವರ್ಗದಲ್ಲಿ ಪತ್ರಕರ್ತರಿಗೆ ಇಂತಿಷ್ಟು ಅಂತಾ ಕೋಟಾ ಇದೆ. ಅದು ಈಗ ಭರ್ತಿಯಾಗಿದೆ. ನಾವು ಇಲ್ಲಿ ಹನ್ನೆರಡು ಮಂದಿ ಪತ್ರಕರ್ತರನ್ನಷ್ಟೇ ಇಟ್ಟುಕೊಳ್ಳುತ್ತೇವೆ. ಅವರಿಗೂ ಇಲ್ಲಿ ಕೆಲಸ ಇಲ್ಲ. ಯಾಕೆಂದರೆ ಇದು ಸ್ವರ್ಗ. ಇಲ್ಲಿ ಯಾವ ಪಾಪಕಾರ‍್ಯ, ಅಹಿತಕರ ಘಟನೆ ನಡೆಯುವುದಿಲ್ಲವಲ್ಲ. ಹೀಗಾಗಿ ಅವರಿಗೆ ಇಲ್ಲಿ ಯಾವ ಸುದ್ದಿಯೂ ಸಿಗುವುದಿಲ್ಲ. ಪತ್ರಕರ್ತರು ಸ್ವರ್ಗದಲ್ಲಿ ಹೆಚ್ಚು ದಿನ ಇರಬಯಸುವುದಿಲ್ಲ. ಅವರಿಗೆ ಬೋರಾಗುತ್ತದೆ. ಹಾಗಾಗಿ ನಿನಗೇನು ಕೆಲಸ ಇಲ್ಲಿ?’. ಆದರೆ ಆ ಪತ್ರಕರ್ತ ಕೇಳಬೇಕಲ್ಲ? ‘ನನಗೊಂದು ಅವಕಾಶ ಕೊಡಿ.
ಬೇಕಾದರೆ ಇಪ್ಪತ್ನಾಲ್ಕು ಗಂಟೆ ಕಾಯುತ್ತೇನೆ ಇಲ್ಲೇ’ ಎಂದ. ‘ಇಪ್ಪತ್ನಾಲ್ಕು ಗಂಟೆ ಸ್ವರ್ಗದ ಬಾಗಿಲಲ್ಲಿ ಏನು ಮಾಡ್ತೀಯಾ?’ ಎಂದು ಚಿತ್ರಗುಪ್ತ ಕೇಳಿದ್ದಕ್ಕೆ, ‘ನಾನು ಇಲ್ಲಿ ಸುಮ್ಮನೆ ಕುಳಿತಿರುವುದಿಲ್ಲ. ನಾನು ಒಳಗಿರುವ ಪತ್ರಕರ್ತನನ್ನು ನರಕಕ್ಕೆ ಹೋಗುವಂತೆ ಮನವೊಲಿಸುತ್ತೇನೆ. ಆ ಜಾಗಕ್ಕೆ ನಾನು ಬರುತ್ತೇನೆ. ಆಗ ನಿಮ್ಮ ಕೋಟಾ ಪ್ರಕಾರ ನನಗೆ ಇಲ್ಲಿರಲು ಅವಕಾಶ ಸಿಗುತ್ತದೆ’ ಎಂದ ಪತ್ರಕರ್ತ.
ಅದಕ್ಕೆ ಚಿತ್ರಗುಪ್ತ ಸಮ್ಮತಿಸಿದ. ಸ್ವರ್ಗದ ಬಾಗಿಲನ್ನು ತೆರೆದು ಪತ್ರಕರ್ತನನ್ನು ಒಳಬಿಟ್ಟುಕೊಂಡ. ಇಪ್ಪತ್ನಾಲ್ಕು ಗಂಟೆ ಕಳೆಯುವುದರೊಳಗೆ ಪತ್ರಕರ್ತ ಎಲ್ಲರ ವಿಶ್ವಾಸ ಗಳಿಸಿ ತುರ್ತಾಗಿ ಸಭೆ ಕರೆದು ಅಲ್ಲಿ ಘೋಷಿಸಿದ ‘ಸದ್ಯದಲ್ಲಿಯೇ ನರಕದಲ್ಲಿ ಹೊಸ ಪತ್ರಿಕೆಯೊಂದು ಆರಂಭವಾಗ ಲಿದೆ. ದೊಡ್ಡ ಬಂಡವಾಳ ಹೂಡಿ ಭಾರಿ ಪ್ರಮಾಣದಲ್ಲಿ ಪತ್ರಿಕೆ ಆರಂಭಿಸಲು ತಯಾರಿ ನಡೆದಿದೆ. ಆ ಪತ್ರಿಕೆಗೆ ಸಂಪಾದಕರು, ಉಪಸಂಪಾದಕರು, ವರದಿಗಾರರು ಬೇಕಾಗಿದ್ದಾರೆ. ಆಕರ್ಷಕ ಸಂಬಳ, ಸವಲತ್ತುಗಳನ್ನು ನೀಡಲಾಗುವುದು’. ಮರುದಿನ ಬೆಳಗಾಗುವುದರೊಳಗೆ ಸ್ವರ್ಗದ ಬಾಗಿಲ ಬಳಿ ಈ ಪತ್ರಕರ್ತ ಹೋದರೆ ಚಿತ್ರಗುಪ್ತ ತಡೆದ. ‘ನೀನು ಇಲ್ಲಿಯೇ ಇರಬೇಕು. ನೀನು ನರಕಕ್ಕೆ ಹೋಗುವಂತಿಲ್ಲ’ ಎಂದ.
‘ಏಕೆ?’ ಎಂದು ಪ್ರಶ್ನಿಸಿದ್ದಕ್ಕೆ ‘ ಇಲ್ಲಿರುವ ಎಲ್ಲ ಹನ್ನೆರಡು ಪತ್ರಕರ್ತರು ಈಗಾಗಲೇ ಕಾಲ್ಕಿತ್ತಿದ್ದಾರೆ. ಅವರೆಲ್ಲ ನರಕದಲ್ಲಿನ ಪತ್ರಿಕೆ ಸೇರಲುಹೋಗುತ್ತಿರುವುದಾಗಿ ಹೇಳಿದ್ದಾರೆ. ನಾನು ಬೇರೆ ದಾರಿಯಿಲ್ಲದೇ ಸಮ್ಮತಿಸಿದ್ದೇನೆ. ಈಗ ಇಲ್ಲಿ ನೀನೊಬ್ಬನೇ ಪತ್ರಕರ್ತನಿರುವುದು. ಇಲ್ಲಿ ನಮಗೆ ಒಬ್ಬನಾದರೂ ಬೇಕೇ ಬೇಕು’ ಎಂದ ಚಿತ್ರಗುಪ್ತ. ಆದರೆ ಪತ್ರಕರ್ತ ‘ಬಿಲ್‌ಕುಲ್ ಸಾಧ್ಯವೇ ಇಲ್ಲ’ ಎಂದ. ಅದಕ್ಕೆ ಚಿತ್ರಗುಪ್ತ ‘ನೋಡು, ನೀನು ಸುಳ್ಳು ಹೇಳಿದೆ. ನರಕದಲ್ಲಿ ಯಾವ ಪತ್ರಿಕೆಯೂ ಆರಂಭವಾಗುತ್ತಿಲ್ಲ’ ಎಂದ. ಈ ಮಾತನ್ನು ಕೇಳಿದ ಪತ್ರಕರ್ತ ನುಡಿದ ‘ಹೌದು, ನಾನೊಂದು ಸುಳ್ಳನ್ನು ಸೃಷ್ಟಿಸಿದೆ. ಅದನ್ನು ಹನ್ನೆರಡು ಪತ್ರಕರ್ತರು ನಂಬಿದ್ದಾರೆ ಅಂದ್ರೆ ಅದರಲ್ಲಿ ಏನೋ ಇರಲೇಬೇಕು? ನನಗೂ ಇಲ್ಲಿರಲು ಇಷ್ಟವಿಲ್ಲ. ದಯವಿಟ್ಟು ಸ್ವರ್ಗದ ಬಾಗಿಲನ್ನು ತೆರೆಯಿರಿ. ನಾನು ನರಕಕ್ಕೆ ಹೋಗಬಯಸುವೆ. ನಾನು ಇಲ್ಲಿಗೆ ಸೇರಿದವನಲ್ಲ.
ನಾನಿರಬೇಕಾದ್ದು ನರಕದಲ್ಲೇ’. ಅಂದರೆ ಸ್ವರ್ಗದಲ್ಲಿ ಪತ್ರಕರ್ತರಿರುವುದು ಸಾಧ್ಯವೇ ಇಲ್ಲ! ಅಷ್ಟಕ್ಕೂ ಅಲ್ಲಿ ಅವರಿಗೆ ಕೆಲಸವೇನಿದೆ? ಅವರಿಗೆ ಅದೇ ಜಗತ್ತು ಅಮೆರಿಕದ ಪತ್ರಿಕೆಗಳಿಗೆ ಜಗತ್ತು ಅಂದ್ರೆ ಅಮೆರಿಕ! ಅಮೆರಿಕವೇ ಸರ್ವಸ್ವ! ಹೇಗೆ ಅಂತ ಕೇಳ್ತೀರಾ? ಹಾಗಿದ್ರೆ ಓದಿ. ಒಮ್ಮೆ ಅಮೆರಿಕ ಅಧ್ಯಕ್ಷ ರೋನಾಲ್ಡ್ ರೇಗನ್ ಹಾಗೂ ರಷ್ಯಾ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ಭೇಟಿಯಾದರು. ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಯಾರ ದೇಶ ನಂಬರ್ 1 ಎಂಬ ಪ್ರಶ್ನೆ ಎದುರಾಯಿತು.
ಮ್ಯಾರಥಾನ್ ಓಟದಲ್ಲಿ ಯಾರು ಗೆಲ್ಲುತ್ತಾರೋ ಅವರ ದೇಶ ನಂಬರ್ 1 ಎಂದು ಅವರಲ್ಲಿ ತೀರ್ಮಾನವಾಯಿತು. ಆ ಮೂಲಕ ಮೂರನೆಯ ವಿಶ್ವಯುದ್ಧವನ್ನು ತಡೆಯುವುದು ಅವರ ಉದ್ದೇಶವಾಗಿತ್ತು. ಮರುದಿನ ಬೆಳಗ್ಗೆ ಎಂಟು ಗಂಟೆಗೆ ಎರಡೂ ದೇಶಗಳ ನಾಯಕರು ಓಟಕ್ಕೆ ಸಿದ್ಧರಾಗಿ ನಿಂತರು. ಎರಡೂವರೆ ತಾಸಿನ ನಂತರ ಗೋರ್ಬಚೇವ್ ಗುರಿ ತಲುಪಿದರು. ಇದಾದ ಆರು ಗಂಟೆಗಳ ನಂತರ ರೇಗನ್ ಸಹ ಗುರಿ ತಲುಪಿದರು.
ಮರುದಿನ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ಹೀಗೆ ಬರೆಯಲಾಗಿತ್ತು- ‘ವಿಶ್ವದೆಲ್ಲೆಡೆ ಕುತೂಹಲ ಮೂಡಿಸಿದ್ದ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಅಮೆರಿಕದ ಅಧ್ಯಕ್ಷರು ಅಭೂತಪೂರ್ವವೆಂಬಂತೆ ಎರಡನೇ ಸ್ಥಾನ ಗಿಟ್ಟಿಸಿದರು. ಈ ಓಟದಲ್ಲಿ ರಷ್ಯಾ ಅಧ್ಯಕ್ಷ ಗೋರ್ಬಚೇವ್ ಸಹ ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಅವರು ಎರಡನೇ ಸ್ಥಾನ ಗಳಿಸಿದ ವರಿಗಿಂತ ಒಂದು ಸ್ಥಾನ ಹೆಚ್ಚು ಗಳಿಸಿದರೆಂದು ಗೊತ್ತಾಗಿದೆ’.
ಬಾಬುರಾವ್ ಪ್ರಶ್ನೋತ್ತರಗಳುಪತ್ರಕರ್ತ ಬಾಬುರಾವ್ ಪಟೇಲ್ ಬಗ್ಗೆ ಹಲವು ಬಾರಿ ಈ ಅಂಕಣದಲ್ಲಿ ಪ್ರಸ್ತಾಪಿಸಿದ್ದುಂಟು. ‘ಮದರ್ ಇಂಡಿಯಾ’ ಹಾಗೂ ‘ಫಿಲ್ಮ್ ಇಂಡಿಯಾ’ ಪತ್ರಿಕೆ ಗಳ ಸಂಪಾದಕರಾಗಿದ್ದ ಇವರ ಬಗ್ಗೆ ನಾನು ‘ಬಾಬುರಾವ್ ಪಟೇಲ್: ಮತ್ತೊಬ್ಬ ಉಕ್ಕಿನ ಮನುಷ್ಯ’ ಎಂಬ ಪುಸ್ತಕವನ್ನೇ ಬರೆದಿದ್ದೇನೆ, ಅದು ಬೇರೆ ಮಾತು. ಅವರ ಪತ್ರಿಕೆಗಳಲ್ಲಿ ಓದುಗರ ಪ್ರಶ್ನೆಗಳಿಗೆ ಪಟೇಲ್ ಉತ್ತರಿಸುತ್ತಿದ್ದ ಅಂಕಣ ಬಹಳ ಜನಪ್ರಿಯವಾಗಿತ್ತು. ಈ ಅಂಕಣದಲ್ಲಿ ಅವರು ಯಾರನ್ನೂ ಬಿಡುತ್ತಿರಲಿಲ್ಲ, ಎಲ್ಲರನ್ನೂ ಚುಚ್ಚುತ್ತಿದ್ದರು. ಅವರ ಪತ್ರಿಕೆಗಳ ಹಳೆಯ ಸಂಚಿಕೆಗಳನ್ನು ಇತ್ತೀಚೆಗೆ ಓದುತ್ತಿದ್ದೆ. ಕೆಲವುಪ್ರಶ್ನೋತ್ತರಗಳನ್ನು ಚಪ್ಪರಿಸುವುದಾದರೆ…
ರಷ್ಯಾದಲ್ಲಿ ದೇವರುಗಳು ಇಲ್ಲವೇ?
ಇದನ್ನೂ ಓದಿ:  : ಇಂದಿರಾ ನಿವೃತ್ತಿ ಚಿಂತನೆ