ಭೂದಿನ, ನಮ್ಮ ದಿನ
ಕಳಕಳಿ
ಸಿಹಿಜೀವಿ ವೆಂಕಟೇಶ್ವರ
ಜಗತ್ತಿನ ಎಲ್ಲ ದೇಶಗಳು ಈ ವರ್ಷ ದಾಖಲಾಗಿರುವ ಮಿತಿಮೀರಿದ ತಾಪಮಾನದಿಂದಾಗಿ ತೊಂದರೆಗೊಳಗಾಗಿ ಬಳಲಿವೆ ಎಂದರೆ ತಪ್ಪಾಗಲಾರದು.ಅಕಾಲಿಕ ಮಳೆ, ಋತುಗಳ ಏರುಪೇರು, ಉಷ್ಣತೆಯಲ್ಲಿ ಗಣನೀಯ ಹೆಚ್ಚಳ ಇವು ನಾವು ಪ್ರಪಂಚದಾದ್ಯಂತ ಕಾಣುತ್ತಿರುವ ಸಾಮಾನ್ಯ ಸಂಗತಿಗಳು. ಹೀಗೇಕೆ? ಎಂದು ಪ್ರಶ್ನೆ ಮಾಡಿದರೆ ಬೆರಳು ತಿರುಗುವುದು ನಮ್ಮ ಕಡೆಗೇ! ಪ್ರತಿ ವರ್ಷ ಏಪ್ರಿಲ್ ೨೨ರಂದು ‘ಭೂದಿನ’ವನ್ನು ಆಚರಿಸಲಾಗುತ್ತದೆ.
ಆದ್ದರಿಂದ ಇಂದು ನಾವು, ಮೇಲೆ ಉಲ್ಲೇಖಿಸಿರುವ ವೈಪರೀತ್ಯಗಳ ಕುರಿತಾಗಿ ಚಿಂತನ- ಮಂಥನ ಮಾಡಬೇಕಿದೆ. ಭೂದಿನವನ್ನು ಮೊದಲ ಬಾರಿಗೆ೧೯೭೦ರ ಏಪ್ರಿಲ್ ೨೨ರಂದು ಆಚರಿಸಲಾಯಿತು. ಪ್ರತಿವರ್ಷವೂ ಒಂದೊಂದು ಥೀಮ್ ಅಥವಾ ಧ್ಯೇಯವಾಕ್ಯವನ್ನಿಟ್ಟುಕೊಂಡು ಈ ದಿನವನ್ನು ಆಚರಿಸುವುದು ವಾಡಿಕೆ. ಅಂತೆಯೇ, ‘ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ಸ್’ ಇದು ೨೦೨೪ರ ಥೀಮ್ ಆಗಿದ್ದು, ೨೦೪೦ರ ಹೊತ್ತಿಗೆ ಶೇ.೬೦ರಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ.
೧೯೬೯ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಯುನೆಸ್ಕೋ ಸಮ್ಮೇಳನದಲ್ಲಿ, ಜಾನ್ ಮೆಕ್ ಕಾನ್ನೆಲ್ ಎಂಬ ಶಾಂತಿ ಕಾರ್ಯಕರ್ತರು, ಭೂಮಿ ಮತ್ತು ಶಾಂತಿಯ ಪರಿಕಲ್ಪನೆಯನ್ನು ಗೌರವಿಸಲು ಒಂದು ದಿನವನ್ನು ಪ್ರಸ್ತಾಪಿಸಿದರು. ಇದನ್ನು ೧೯೭೦ರ ಮಾರ್ಚ್ ೨೧ರಂದು ಉತ್ತರ ಗೋಳಾರ್ಧದಲ್ಲಿ ಮೊದಲು ಆಚರಿಸಲಾಯಿತು. ಪ್ರಕೃತಿಯ ಈ ದಿನವನ್ನು ನಂತರ ಮ್ಯಾಕ್ ಕಾನ್ನೆಲ್ ಬರೆದ ಘೋಷಣೆಯಲ್ಲಿ ಅನುಮೋದಿಸಲಾಯಿತು ಮತ್ತು ವಿಶ್ವಸಂಸ್ಥೆಯ ಅಂದಿನ ಪ್ರಧಾನ ಕಾರ್ಯದರ್ಶಿ ಯು ಥಾಂಟ್ ಇದಕ್ಕೆ ಸಹಿಹಾಕಿದರು.
ಒಂದು ತಿಂಗಳ ನಂತರ, ಅಂದರೆ ೧೯೭೦ರ ಏಪ್ರಿಲ್ ೨೨ರಂದು ರಾಷ್ಟ್ರವ್ಯಾಪಿ ಪರಿಸರ ಆಂದೋಲನ ಕೈಗೊಳ್ಳುವ ಪರಿಕಲ್ಪನೆಯನ್ನು ಅಮೆರಿಕದ ಸೆನೆಟರ್ ಗೇಲಾರ್ಡ್ ನೆಲ್ಸನ್ ಅವರು ಪ್ರಸ್ತಾಪಿಸಿದರು. ಅವರು ಯುವ ಕಾರ್ಯಕರ್ತ ಡೆನಿಸ್ ಹೇಯ್ಸ್ ಅವರನ್ನು ರಾಷ್ಟ್ರೀಯ ಸಂಯೋಜಕರಾಗಿ ನೇಮಿಸಿಕೊಂಡರು. ನೆಲ್ಸನ್ ಮತ್ತು ಹೇಯ್ಸ್ ಅವರು ಈ ಕಾರ್ಯಕ್ರಮವನ್ನು ‘ಅರ್ಥ್ ಡೇ’ ಎಂದು ಮರುನಾಮಕರಣ ಮಾಡಿದರು. ಡೆನಿಸ್ ಮತ್ತು ಅವರ ಸಿಬ್ಬಂದಿ ಸಂಘಟಿಸಿದ ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಜಮೆಯಾದರು ಮತ್ತು ಮೊದಲ ಭೂದಿನವು ಇತಿಹಾಸದಲ್ಲಿ ಅತಿದೊಡ್ಡ ಏಕದಿನ ಆಂದೋಲನವಾಗಿ ಉಳಿಯುವಂತೆ ಮಾಡಿದರು.
ಮಿಕ್ಕಂತೆ, ೨೦೧೬ರಲ್ಲಿ ಆಚರಿಸಲಾದ ಭೂದಿನಕ್ಕೆ ಅದರದ್ದೇ ಆದ ಪ್ರಾಮುಖ್ಯವಿದೆ. ಕಾರಣ ಅಂದು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅಮೆರಿಕ, ಬ್ರಿಟನ್, ಚೀನಾ ಮತ್ತು ಇತರ ೧೨೦ ದೇಶಗಳು ಈ ಒಪ್ಪಂದಕ್ಕೆ ಸಹಿಹಾಕಿದವು. ‘ಇದುವರೆಗಿನ ಭೂದಿನದ ಆಚರಣೆಯ ಫಲಶ್ರುತಿ ಏನು?’ ಎಂದು ಕೆಲವರು ಪ್ರಶ್ನಿಸುತ್ತಾರೆ. ‘ಕ್ಲೀನ್ ಏರ್ ಆಕ್ಟ್’ ನಂಥ ಹಲವಾರು ಮಹತ್ವದ ಪರಿಸರ ಕಾನೂನುಗಳು ಅಸ್ತಿತ್ವಕ್ಕೆ ಬಂದಿದ್ದು ಹಾಗೂ ಗಮನಾರ್ಹ ವಾಗಿ ಬಲಗೊಂಡಿದ್ದು ಈ ದಿನಾಚರಣೆ/ಆಂದೋಲನದ ಫಲವಾಗಿಯೇ ಎಂಬುದನ್ನು ಮರೆಯದಿರೋಣ.
ನೂರಾರು ಮಿಲಿಯನ್ ಮರಗಳನ್ನು ನೆಡುವುದು, ಸುಸ್ಥಿರ ಕೃಷಿ ಪದ್ಧತಿಗಳೊಂದಿಗೆ ರೈತರನ್ನು ಬೆಂಬಲಿಸುವುದು ಮತ್ತು ಪ್ರಪಂಚದಾದ್ಯಂತ ಹವಾಮಾನ ಸಾಕ್ಷರತಾ ಯೋಜನೆಗಳನ್ನು ಪ್ರಾರಂಭಿಸುವುದು ಇತ್ತೀಚಿನ ಕೆಲವು ಪರಿಸರ-ಸ್ನೇಹಿ ಯೋಜನೆಗಳಲ್ಲಿ ಸೇರಿವೆ. ನಾವು ಕೂಡ ಪರಿಸರಕ್ಕೆ ಪೂರಕವಾಗುವ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಭೂದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ.
(ಲೇಖಕರು ಹವ್ಯಾಸಿ ಬರಹಗಾರರು)