ಬಲಿಷ್ಠ ಆರ್ಥಿಕತೆಯತ್ತ ಸಾಗುತ್ತಿದೆ ಭಾರತ
ವಾಣಿಜ್ಯ ವಿಭಾಗ
ಡಾ.ಎ.ಜಯಕುಮಾರ ಶೆಟ್ಟಿ
ಏಷ್ಯಾದ ೩ನೇ ಅತಿದೊಡ್ಡ ಆರ್ಥಿಕತೆಯಾದ ಭಾರತದ ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ) ಮುಂದಿನ ಹಣಕಾಸು ವರ್ಷದಲ್ಲಿ ಶೇ.೬.೮ರಷ್ಟುಬೆಳವಣಿಗೆ ಕಾಣಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮಂಗಳವಾರ ಬಿಡುಗಡೆ ಮಾಡಿದ ವಿಶ್ವ ಆರ್ಥಿಕ ಮುನ್ನೋಟ ವರದಿಯಲ್ಲಿ ತಿಳಿಸಿದೆ. ಜನವರಿಯಲ್ಲಿ ಪ್ರಕಟಿಸಿದ್ದ ಮುನ್ನೋಟದಲ್ಲಿ ಜಿಡಿಪಿಯು ಶೇ ೬.೫ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಅದು ಹೇಳಿತ್ತು.
ದೇಶೀಯ ಬೇಡಿಕೆಯ ದೃಢತೆ ಹಾಗೂ ದುಡಿಯುವ ವಯಸ್ಸಿನ ಜನಸಂಖ್ಯೆ ಹೆಚ್ಚಳವು ಆರ್ಥಿಕ ಪ್ರಗತಿಗೆ ನೆರವಾಗಲಿದೆ ಎಂದು ಈ ವರದಿ ತಿಳಿಸಿದೆ. ೨೦೨೫ರಲ್ಲಿ ಭಾರತದ ಜಿಡಿಪಿಯು ಶೇ. ೬.೫ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಲಾಗಿದೆ. ಇಡೀ ವಿಶ್ವದಲ್ಲಿಯೇ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಈ ಮುನ್ನೋಟವು ಸಾಬೀತು ಮಾಡಿದೆ. ಚೀನಾದ ಜಿಡಿಪಿಯು ಶೇ.೫.೨ರಿಂದ (೨೦೨೩) ಶೇ. ೪.೬ಕ್ಕೆಕುಸಿಯಲಿದೆ (೨೦೨೪) ಹಾಗೂ ೨೦೨೫ರಲ್ಲಿ ಶೇ. ೪.೯ಕ್ಕೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಇದೇ ಅವಧಿಯಲ್ಲಿ ಏಷ್ಯಾದ ಬೆಳವಣಿಗೆ ದರವೂ ಕುಸಿಯಲಿದೆ ಎಂದು ವರದಿಯಾಗಿದೆ. ೨೦೨೩ರಲ್ಲಿ ಶೇ.೫.೬ರಷ್ಟಿದ್ದ ಜಿಡಿಪಿಯ ೨೦೨೪ರಲ್ಲಿ ಶೇ. ೫.೨ಕ್ಕೆ ಕುಸಿಯಲಿದೆ ಹಾಗೂ ಇದೇ ಸ್ಥಿತಿಯು ಮುಂದುವರಿದು ೨೦೨೫ರಲ್ಲಿ ಶೇ.೪.೯ಕ್ಕೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಐಎಂಎಫ್ವಿಶ್ಲೇಷಣೆಯ ಪ್ರಕಾರ ಭಾರತವು ಜಿಡಿಪಿಯ ಬೆಳವಣಿಗೆಯ ವೇಗದಲ್ಲಿ ಜಗತ್ತಿನ ಪ್ರಬಲ ರಾಷ್ಟ್ರಗಳಾದ ಅಮೆರಿಕ ಹಾಗೂ ಬ್ರಿಟನ್‌ಗಳನ್ನು ಹಿಂದಿಕ್ಕಲಿದೆ. ಅಮೆರಿಕದ ನಿರೀಕ್ಷಿತ ಜಿಡಿಪಿ ಪ್ರಗತಿ ದರ ಶೇ.೨.೭ ಆಗಿದ್ದರೆ ಬ್ರಿಟನ್‌ನ ದರ ಶೇ.೦.೫ ಆಗಿರಲಿದೆ. ೨೦೨೩ರಲ್ಲಿ ಶೇ.೩.೨ ಎಂದು ಅಂದಾಜಿಸಲಾದ ಜಾಗತಿಕ ಬೆಳವಣಿಗೆಯು ೨೦೨೪-೨೫ ಮತ್ತು ೨೦೨೫-೨೬ರಲ್ಲಿ ಅದೇ ವೇಗದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಐಎಂಎಫ್ ಹೇಳಿದೆ.
? ಜಾಗತಿಕ ಬೆಳವಣಿಗೆಯ ಚಾಲಕ:ಐಎಂಎಫ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಕೃಷ್ಣಮೂರ್ತಿ ವಿ. ಸುಬ್ರಮಣ್ಯಂ, ಕೋವಿಡ್ ನಂತರದ ಸ್ಥಿರವಾದ ಶೇ.೭ರ ಆಸುಪಾಸಿನ ಬೆಳವಣಿಗೆಯನ್ನು ಉಲ್ಲೇಖಿಸಿ ಭಾರತವು ಸದ್ಯೋ ಭವಿಷ್ಯದಲ್ಲಿ ಜಾಗತಿಕ ಬೆಳವಣಿಗೆಯ ಪ್ರಮುಖ ಚಾಲಕನಾಗಿ ಉಳಿಯುತ್ತದೆ ಎಂದು ಮುನ್ನುಡಿದಿದ್ದಾರೆ. ಹಿಂದಿನ ಹಣ ಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ನಿರೀಕ್ಷೆ ಮೀರಿ ಬೆಳೆದಿರುವುದು ಮತ್ತು ಈ ವರ್ಷದಲ್ಲಿ ಪ್ರಮುಖ ಆರ್ಥಿಕ ಅಂಶ ಗಳು ಸದೃಢವಾಗಿರುವುದರಿಂದ ಐಎಂಎ- ಮಾತ್ರವಲ್ಲ ಬಹುತೇಕ ಏಜೆನ್ಸಿಗಳು ಕೂಡ ಭಾರತದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ.
ದೇಶದ ಮೂಲ ಡಿಜಿಟಲ್ ಸಾರ್ವಜನಿಕ ಮೂಲ ಸೌಕರ್ಯ ಮತ್ತು ಬಲವಾದ ಸರಕಾರಿ ಮೂಲಸೌಲಭ್ಯ ವ್ಯವಸ್ಥೆಗಳು ದೇಶದ ಬೆಳವಣಿಗೆ ದರವನ್ನು ಉಳಿಸಿಕೊಳ್ಳಲಿವೆ. ಕಾರ್ಮಿಕ ಮತ್ತು ಮಾನವ ಬಂಡವಾಳ ವಲಯದಲ್ಲಿ ಸಮಗ್ರ ಸುಧಾರಣೆಗಳನ್ನು ಜಾರಿಗೆ ತಂದಿದ್ದೇ ಆದಲ್ಲಿ ಭಾರತವು ಇನ್ನೂ ಹೆಚ್ಚಿನ ಬೆಳವಣಿಗೆಯ ಸಾಮರ್ಥ್ಯ ಹೊಂದಿದೆ ಎಂದು ಐಎಂಎಫ್ ವರದಿ ಹೇಳಿದೆ.
ವ್ಯಾಪಕ ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ನಿರಂತರ ಹೂಡಿಕೆ, ಇನ್ನೂ ಬೆಳೆಯುತ್ತಿರುವ ಖಾಸಗಿ ಬಳಕೆ ಮತ್ತು ಡಿಜಿಟಲೀಕರಣ-ಚಾಲಿತ ಉತ್ಪಾದಕತೆಯ ಲಾಭಗಳಿಂದ ಮುಂದಿನ ೫ ವರ್ಷಗಳಲ್ಲಿ ಭಾರತದ ಜಿಡಿಪಿ ಶೇ.೬ಕ್ಕಿಂತ ಹೆಚ್ಚಿನ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ. ಈ ಹಣಕಾಸು ವರ್ಷ ದಲ್ಲಿ ಶೇ.೫.೪ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಶೇ.೪.೬ರಷ್ಟು ಹಣದುಬ್ಬರ ಬೆಳವಣಿಗೆಯನ್ನು ಐಎಂಎಫ್ ತನ್ನ ವರದಿಯಲ್ಲಿ ಅಂದಾಜಿಸಿದೆ. ಆಹಾರ ಬೆಲೆಗಳಲ್ಲಿನ ಹೆಚ್ಚಳದಿಂದಾಗಿ ಹಣದುಬ್ಬರ ಅಸ್ಥಿರವಾಗಿದ್ದರೂ ಕ್ರಮೇಣ ನಿಗದಿತ ಗುರಿಗೆ ಇಳಿಯುವ ನಿರೀಕ್ಷೆಯಿದೆ ಎಂದು ಐಎಂಎಫ್ ಹೇಳಿದೆ.
? ಸದೃಢ ಆರ್ಥಿಕತೆಯತ್ತ ಭಾರತ:ಇಡೀ ಜಗತ್ತು ಆರ್ಥಿಕ ಹಿಂಜರಿತದ ಭೀತಿಗೆ ಒಳಗಾಗಿದ್ದರೆ ಭಾರತದ ಆರ್ಥಿಕತೆ ಮಾತ್ರ ಪ್ರಬಲವಾಗಿ ಮುಂದಡಿ  ಯಿಡುತ್ತಿದೆ. ಅಮೆರಿಕ, ಇಂಗ್ಲೆಂಡ್ ಮತ್ತಿತರ ಹಲವು ದೇಶಗಳ ಬ್ಯಾಂಕುಗಳ ಸ್ಥಿತಿ ಕಳವಳಕಾರಿಯಾಗಿದೆ. ಇದರೊಂದಿಗೆ ಇಸ್ರೇಲ್ ಮತ್ತು ಹಮಾಸ್ ಉಗ್ರರ ಸಂಘರ್ಷ, ಏರುಗತಿಯಲ್ಲಿರುವ ಹಣದುಬ್ಬರ, ಬಿಗಿಯಾದ ಸಾಲದ ಪರಿಸ್ಥಿತಿ, ಹೆಚ್ಚುತ್ತಿರುವ ಬಡ್ಡಿದರ ಹಾಗೂ ಅನಾವರಣ ಗೊಳ್ಳುತ್ತಿರುವ ಬ್ಯಾಂಕಿಂಗ್ ವಲಯದ ಬಿಕ್ಕಟ್ಟುಗಳು ಸಹಜವಾಗಿ ಕೆಳಮುಖಿಯಾಗಿರುವ ಆರ್ಥಿಕತೆಯ ಕಾರಣಗಳಾಗಿವೆ.
ಭಾರತವು ಕೋವಿಡ್ ಸಾಂಕ್ರಾಮಿಕದ ನಂತರ ಕೈಗೊಂಡ ಆರ್ಥಿಕ ಸುಧಾರಣೆಗಳು ಹಾಗೂ ಎಚ್ಚರಿಕೆಯ ಹಣಕಾಸಿನ ನಿರ್ಧಾರಗಳು ಕೋವಿಡ್ ನಂತರ ದೇಶದ ಆರ್ಥಿಕತೆ ಎಡವದಂತೆ ನೋಡಿಕೊಂಡಿವೆ. ಆರ್ಥಿಕತೆಗೆ ಚೈತನ್ಯ ತುಂಬುವಲ್ಲಿ ನಮ್ಮ ದೇಶದ ಆರ್ಥಿಕ ನೀತಿಗಳು ಹಾಗೂ ಹೊಣೆಯರಿತ ಬೆಂಬಲ ಕಾರ್ಯಕ್ರಮಗಳು ಸರಿಯಾದ ಫಲವನ್ನೇ ನೀಡಿವೆ. ಇತ್ತೀಚೆಗೆ ಬಿಡುಗಡೆಯಾದ ಜಿಡಿಪಿಯ ದತ್ತಾಂಶಗಳು ದೇಶದ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆ ಯನ್ನು ಸೂಚಿಸುತ್ತವೆ.
? ಉದಯೋನ್ಮುಖ ಆರ್ಥಿಕತೆ:೨೦೨೩-೨೪ರ ಆರ್ಥಿಕ ವರ್ಷದಲ್ಲಿ ಭಾರತದ ಸ್ಥೂಲ ಆರ್ಥಿಕ ದೃಷ್ಟಿಕೋನವು ಆಶಾದಾಯಕವಾಗಿ ಹಾಗೂ ಬಲವಾದ ದೇಶೀಯ ಮೂಲಭೂತ ಅಂಶಗಳಿಂದ ದೃಢವಾಗಿತ್ತು. ಖಾಸಗಿ ಬಳಕೆಯ ಜತೆಗೆ ಹೂಡಿಕೆಯ ಬೇಡಿಕೆಯೂ ಗಟ್ಟಿಯಾಗುತ್ತಿದೆ ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಹಣಕಾಸು ಸಚಿವಾಲಯದ ವರದಿ ಹೇಳಿತ್ತು.
ನಮ್ಮ ದೇಶದ ಆರ್ಥಿಕ ಕಾರ್ಯಕ್ಷಮತೆ ಹಾಗೂ ಭರವಸೆಯ ಪಥವನ್ನು ಒಟ್ಟಾರೆ ಆಶಾವಾದ, ಬಲವಾದ ಸ್ಥೂಲ ಆರ್ಥಿಕ ಸೂಚಕಗಳು ಬಿಂಬಿಸುತ್ತಿವೆ. ಪ್ರಸಕ್ತ ಜಾಗತಿಕ ವಾಗಿ ಐದನೇ ಅತಿ ದೊಡ್ಡ ಆರ್ಥಿಕತೆಯೆಂಬ ಹೆಗ್ಗಳಿಕೆ ಪಡೆದಿರುವ ಭಾರತ ೨೦೨೯ರ ಒಳಗೆ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ೨೦೧೪ನೇ ಸಾಲಿಗೆ ಹೋಲಿಸಿದರೆ ದೇಶಕ್ಕೆ ಏಳನೇ ಸ್ಥಾನದಷ್ಟು ಪದೋನ್ನತಿ ಸಿಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಆರ್ಥಿಕ ಸಂಶೋಧನಾ ವಿಭಾಗದ ಅಧ್ಯಯನ ವರದಿ ತಿಳಿಸಿತ್ತು.
ಜಿಡಿಪಿ ಬೆಳವಣಿಗೆಯ ಮುನ್ನೋಟವು ಜಾಗತಿಕ ಸವಾಲು ಗಳ ನಡುವೆ ಭಾರತೀಯ ಆರ್ಥಿಕತೆಯ ಸ್ಥಿರತೆಯನ್ನು ಅನಾವರಣಗೊಳಿಸುತ್ತದೆ. ಪ್ರತಿಕೂಲ ಸನ್ನಿವೇಶಗಳ ಮಧ್ಯೆ ಪ್ರಸಕ್ತ ಸಾಲಿನ ಅಂಕಿ-ಅಂಶಗಳು ಹಾಗೂ ಸಮೀಕ್ಷೆಗಳು ಆರ್ಥಿಕ ಬೆಳವಣಿಗೆಯ ಭರವಸೆ ನೀಡಿವೆ. ಆರ್ಥಿಕ ಸ್ಥಿರತೆಗೆ ಭಾಷ್ಯ ಬರೆದ ಆರ್‌ಬಿಐ ನೀತಿಗಳು, ಬ್ಯಾಂಕಿಂಗ್ ವಲಯದ ಸ್ಥಿರತೆ, ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮಧ್ಯಮ ವರ್ಗ, ಏರುಗತಿಯಲ್ಲಿರುವ ಗ್ರಾಹಕರ ವೆಚ್ಚದ ಪ್ರಮಾಣ, ಆಂತರಿಕ ಮಾರುಕಟ್ಟೆಯ ಸುಭದ್ರತೆ, ಕೈಗಾರಿಕಾ ವಲಯದಲ್ಲಿ ಹೆಚ್ಚುತ್ತಿರುವ ವಿದೇಶಿ ಬಂಡವಾಳ, ಮೂಲಸೌಕರ್ಯ ವರ್ಧನೆ, ಯಶಸ್ವಿ ಡಿಜಿಟಲ್ ಇಂಡಿಯಾ ಮೊದಲಾದ ಅಂಶ ಗಳು ಭಾರತದ ದೀರ್ಘಕಾಲದ ಬೆಳವಣಿಗೆಗೆ ಭದ್ರ ಬುನಾದಿ ಯನ್ನು ಹಾಕಿವೆ.
ದೇಶದಲ್ಲಿನ ಮೂಲಸೌಕರ್ಯವನ್ನು ಹೆಚ್ಚಿಸುವ ಸರಕಾರಿ ಉಪಕ್ರಮಗಳು, ಇ-ಕಾಮರ್ಸ್‌ಗೆ ಹೆಚ್ಚು ಪೂರಕ ವಾತಾ ವರಣ ಮತ್ತು ಮುಂದುವರಿದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಾಗೂ ಸರಕಾರಿ ಸೇವೆಗಳ ವರ್ಧನೆಯಿಂದಾಗಿ ಭಾರತವು ತಾಂತ್ರಿಕ ಸಿದ್ಧತೆಯಲ್ಲಿ ‘ಟಾಪ್-೧೦’ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ. ಭಾರತವು ಹೂಡಿಕೆಗೆ ಮಾತ್ರವಲ್ಲದೆ ವ್ಯಾಪಾರ ಮಾಡಲು ಸಹ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ವಿಶ್ವ ಬ್ಯಾಂಕ್‌ನ ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ ಶ್ರೇಯಾಂಕದಲ್ಲಿ ೨೦೨೦ರಲ್ಲಿ ಭಾರತವು ೧೪೨ನೇ (೨೦೧೪) ಸ್ಥಾನದಿಂದ ೬೩ನೇ (೨೦೧೯) ಸ್ಥಾನಕ್ಕೆ ಅಂದರೆ ೭೯ ಸ್ಥಾನಗಳಷ್ಟು ಜಿಗಿತವನ್ನು ಸಾಧಿಸಿದೆ. ಭಾರತದಲ್ಲಿ ಉದ್ಯಮ-ಸ್ನೇಹಿ ವಾತಾವರಣವನ್ನು ಸುಧಾರಿಸುವ ಗುರಿಯೊಂದಿಗೆ ಅನೇಕ ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ. ಧನಾತ್ಮಕ ಬದಲಾವಣೆಗಳು ಭಾರತದ ಶ್ರೇಯಾಂಕದಲ್ಲಿ ಪ್ರಭಾವಶಾಲಿ ಸುಧಾರಣೆಗೆ ಕಾರಣವಾಗಿವೆ.
?ಆತ್ಮನಿರ್ಭರ ಭಾರತ:ಪ್ರಧಾನಮಂತ್ರಿಯವರ ‘ಆತ್ಮ ನಿರ್ಭರ’ ಅಂದರೆ ಸಶಕ್ತ, ಸ್ವಾವಲಂಬಿ ಭಾರತದ ಪರಿಕಲ್ಪನೆ ಸಂಚಲನವನ್ನುಂಟುಮಾಡಿದೆ. ಇದರೊಂದಿಗೆ ಸ್ಥಳೀಯ ವಸ್ತುಗಳ ಹುಡುಕಾಟ ಹೆಚ್ಚಿದೆ ಮತ್ತು ಉತ್ಪಾದನೆಗೂ ಉತ್ತೇಜನ ದೊರೆಯುತ್ತಿದೆ. ಹಿಂದೆ ಆಮದು ಕಡಿತದ ಮೂಲಕ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ದೊರೆಯುತ್ತಿದ್ದರೆ, ಇದೀಗ ದೇಶದ ನೂತನ ಚಿಂತನೆ ಘೋಷಣೆ ಹಾಗೂ ಉತ್ತೇಜಕಗಳು ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಿವೆ.
ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಕುಂಟುತ್ತಿರುವ ಜಾಗತಿಕ ಆರ್ಥಿಕತೆಯ ಮಧ್ಯೆ ಭಾರತದ ಬಲಿಷ್ಠವಾದ ಆರ್ಥಿಕ ತಳಹದಿ ಮತ್ತು ಹಣಕಾಸು ವಲಯದ ಉತ್ತಮ ಸ್ಥಿತಿ ಆಶಾವಾದವನ್ನು ಹುಟ್ಟುಹಾಕಿವೆ. ಆತ್ಮನಿರ್ಭರತೆಗೆ ಒತ್ತು ನೀಡಿ ಉತ್ಪಾದಕತೆಯನ್ನು ಹೆಚ್ಚಿಸುವ ದೂರದೃಷ್ಟಿಯ ಉಪಕ್ರಮಗಳಿಂದ ಭಾರತದ ಆರ್ಥಿಕತೆಯಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಂಡುಕೊಳ್ಳಬಹುದು. ಆತ್ಮನಿರ್ಭರತೆ ಎಂದರೆ ಕೇವಲ ಸ್ವಾವಲಂಬನೆಯ ಆಕಾಂಕ್ಷೆಗಿಂತ ಹೆಚ್ಚಾಗಿ, ನಮ್ಮ ಉತ್ಪಾದಕರು ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಬೇಕಾಗಿದೆ. ನಮ್ಮ ಉತ್ಪನ್ನಗಳು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿರಬೇಕು. ಆದುದರಿಂದಭಾರತೀಯ ಉದ್ಯಮಿಗಳು ಹೆಚ್ಚು ಸ್ಪರ್ಧಾತ್ಮಕವಾಗಲು ಅನುವು ಮಾಡಿಕೊಡುವಂಥ ವಾತಾವರಣವನ್ನು ಸೃಷ್ಟಿಸಬೇಕಾಗಿದೆ. ಆಶಾದಾಯಕ ಬೆಳವಣಿಗೆಯ ನಿರೀಕ್ಷೆಗಳು ಸಾಕಾರವಾಗಲಿ ಎಂಬುದೇ ಸಹೃದಯಿಗಳ ಹಾರೈಕೆ.
(ಲೇಖಕರು ನಿವೃತ್ತ ಪ್ರಾಂಶುಪಾಲರುಹಾಗೂ ಅರ್ಥಶಾಸದ ಪ್ರಾಧ್ಯಾಪಕರು)