ಪ್ರತಿಪಕ್ಷಗಳ ಪರಿಸ್ಥಿತಿಯೇನೂ ಕಳಪೆಯಾಗಿಲ್ಲ
ವಿದ್ಯಮಾನ
ಕೆ.ಎಂ.ಚಂದ್ರಶೇಖರ್‌
ಅಬಕಾರಿ ಹಗರಣದ ಸಂಬಂಧವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರನ್ನು ಬಂಽಸಿದ ಕ್ರಮ ‘ಇಂಡಿಯ’ ಮೈತ್ರಿಕೂಟದ ಸಹಭಾಗಿಪಕ್ಷಗಳನ್ನು ಹತ್ತಿರಕ್ಕೆ ತಂದಿದೆ. ಆದರೆ, ಇದೇ ಸ್ಥಿತಿ ಅಥವಾ ಸ್ಥಿರತೆ ಎಷ್ಟು ದಿನಗಳವರೆಗೆ ಮುಂದುವರಿಯಲಿದೆ ಎಂಬುದನ್ನು ಮಾತ್ರ ಹೇಳಲಾಗದು.
ಈಗ ಎಲ್ಲಿ ನೋಡಿದರಲ್ಲಿ ಲೋಕಸಭಾ ಚುನಾವಣೆಯ ಬಿಸಿ. ಕೆಲಕಾಲ ಇದು ಹೀಗೇ ಮುಂದುವರಿದು, ಎಲ್ಲ ಹಂತದ ಮತದಾನ ಸಂಪನ್ನಗೊಂಡು ಜೂನ್ ಮೊದಲ ವಾರದಲ್ಲಿ ಫ ಲಿತಾಂಶ ಹೊರಬೀಳಲಿದೆ. ಆದರೆ, ಮತಗಳ ಎಣಿಕೆಯ ದಿನದಂದು ವಿಜಯಶಾಲಿಯಾಗಿ ಹೊರಹೊಮ್ಮುವವರು ಯಾರು ಅಥವಾ ಅವರ ಗೆಲುವಿನ ಅಂತರ ಎಷ್ಟಿರುತ್ತದೆ ಎಂಬುದನ್ನು ನಾನು ಮುನ್ನುಡಿಯಲಾರೆ. ಹಾಗೆ ನೋಡಿದರೆ, ಇಂಥದೊಂದು ಲೆಕ್ಕಾಚಾರದಲ್ಲಿ ನಾನು ಸಾಕಷ್ಟು ಬಾರಿ ಎಡವಿದ್ದಿದೆ.
೨೦೧೪ರ ಲೋಕಸಭಾ ಚುನಾವಣೆ ಸಂದರ್ಭವನ್ನು ಹೊರತುಪಡಿಸಿ ಮಿಕ್ಕ ಅನೇಕ ಸಂದರ್ಭಗಳಲ್ಲಿ ನನ್ನ ಎಣಿಕೆ ತಪ್ಪಾಗಿದ್ದಿದೆ; ೨೦೧೪ರಲ್ಲಿ ಮಾತ್ರ, ‘ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟವು ಸಂಶಯಕ್ಕೆ ಎಡೆಯಿಲ್ಲದಂತೆ ಸೋಲುತ್ತದೆ’ ಎಂಬುದು ನನಗೆ ಖಾತ್ರಿಯಾಗಿತ್ತು, ಅದು ಹಾಗೇ ಆಯಿತು ಎನ್ನಿ! ೨೦೧೯ರಲ್ಲಿ, ಮಾಧ್ಯಮಗಳು ಮುಂದುಮಾಡಿದ ಸಮೀಕ್ಷೆಗಳು, ವಿಶ್ಲೇಷಣೆಗಳು ಮತ್ತು ಮೌಲ್ಯಮಾಪನಗಳನ್ನು ಆಧರಿಸಿ, ಆ ಸಲದ ಲೋಕ ಸಮರವು ಒಂದು ಸಮಬಲದ ಹೋರಾಟವಾಗಲಿದೆ ಎಂದೇ ನಾನು ಭಾವಿಸಿದ್ದೆ. ಇದಕ್ಕೂ ಸಾಕಷ್ಟು ಮುನ್ನ, ಅಂದರೆ ೧೯೭೭ರಲ್ಲಿ, ಚುನಾವಣಾ ಫಲಿತಾಂಶದ ಕುರಿತಾಗಿ ನನ್ನ ತಂದೆಯವರೊಂದಿಗೆ ೧,೦೦೦ ರುಪಾಯಿಗಳ ಬಾಜಿ ಕಟ್ಟಿದ್ದೂ ಉಂಟು!
ದಕ್ಷಿಣ ಭಾರತದ ತೀರಾ ಕೆಳಭಾಗದ ಪ್ರದೇಶದಲ್ಲಿ ನೆಲೆಸಿದ್ದ ನನಗೆ, ಇಂದಿರಾ ಗಾಂಧಿಯವರು ಆ ಸಲದ ಚುನಾವಣೆಯಲ್ಲಿ ಸೋತುಬಿಡುತ್ತಾರೆ ಎಂಬುದು ಊಹಿಸಿಕೊಳ್ಳಲಿಕ್ಕೂ ಸಾಧ್ಯವಾಗದ ಸಂಗತಿಯಾಗಿತ್ತು. ಅವರು ಗೆಲ್ಲುತ್ತಾರೆ ಎಂದೇ ತಂದೆಯವರೊಂದಿಗೆ ಬಾಜಿ ಕಟ್ಟಿದೆ, ಕೊನೆಗೆ ಸೋತೆ. ಹೀಗಾಗಿ, ಮುಖ್ಯವಾಹಿನಿಯ ಮಾಧ್ಯಮಗಳು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಪರಿಗಣಿಸಿರುವ ರೀತಿಯಲ್ಲಿ ನಾನೊಬ್ಬ ಚುನಾ ವಣಾ ಫಲಿತಾಂಶಗಳನ್ನು ಮುನ್ನುಡಿಯಬಲ್ಲ ಪಂಡಿತನಲ್ಲ.
ಆದರೆ, ಅಗ್ರಗಣ್ಯಸಽಗಳು ಈ ಚುನಾವಣೆಯಲ್ಲಿ ಅಳವಡಿಸಿಕೊಂಡಿರುವಂತೆ ತೋರುವ ತಂತ್ರಗಳ ಬಗ್ಗೆ ಮಾತ್ರವೇ ನಾನು ಮಾತನಾಡಬಲ್ಲೆ. ಈ ಪೈಕಿ ಅಗ್ರಶ್ರೇಯಾಂಕದಲ್ಲಿ ಇರುವವರಿಂದ ಶುರುಮಾಡೋಣ. ಇದು ನಿಸ್ಸಂದೇಹವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಒಕ್ಕೂಟವೇಆಗಿರುತ್ತದೆ ಎಂಬುದು ನಿಮಗೂ ಗೊತ್ತು. ಹಿಂದೆಂದಿಗಿಂತಲೂ ಹೆಚ್ಚಾಗಿ, ‘ಮೋದಿ ಎಂದರೆ ಎನ್‌ಡಿಎ, ಎನ್‌ಡಿಎ ಎಂದರೆ ಮೋದಿ’ ಎಂಬ ಪರಿಸ್ಥಿತಿ ಈಗನಿರ್ಮಾಣವಾಗಿದೆ. ಎನ್‌ಡಿಎ ಒಕ್ಕೂಟದಲ್ಲಿ, ಅದರಲ್ಲೂ ಉನ್ನತ ಅಧಿಕಾರಿಶಾಹಿಯಲ್ಲಿ ಇರುವುದಕ್ಕಾಗಿನ ಒಂದು ‘ಅನಿವಾರ್ಯ’ ಅವಶ್ಯಕತೆ ಎಂದರೆ,ಮೋದಿಯವರಿಗೆ ಸಂಪೂರ್ಣ ಅಧೀನರಾಗಿರುವುದು, ಅವರನ್ನು ಓಲೈಸುತ್ತ ಶರಣಾಗತಿಯನ್ನು ತೋರಿಸುವುದು.
ಅವರ ಸಂಪುಟದಲ್ಲಿನ ಪ್ರತಿಯೊಬ್ಬ ಸಚಿವರೂ, ತಾವು ನೀಡುವ ಪ್ರತಿಯೊಂದು ಹೇಳಿಕೆಯನ್ನೂ ‘ಮೋದಿ ಗುಣ ಗಾನ’ದೊಂದಿಗೇ ಶುರುಮಾಡುವುದು ವಾಡಿಕೆಯಾಗಿಬಿಟ್ಟಿದೆ. ಸಾಮಾನ್ಯ ಕಾರ್ಯಗಳನ್ನು ಒಳಗೊಂಡಂತೆ ಸರಕಾರದ ಪ್ರತಿಯೊಂದು ಚಟುವಟಿಕೆಯೂ ಮೋದಿಯವರ ಬುದ್ಧಿವಂತಿಕೆ, ಪ್ರಭಾವ ಮತ್ತು ಶಕ್ತಿಯ ಕಾರಣದಿಂದಲೇ ನೆರವೇರಿದ್ದು ಎಂಬಂತೆ ಸಾದರಪಡಿಸಲಾಗುತ್ತದೆ. ಮೋದಿಯವರು ತಮ್ಮ ಸರಕಾರದ್ದು ಮಾತ್ರವಲ್ಲದೆ, ಹಿಂದಿನ ಸರಕಾರಗಳ ಸಾಧನೆಗಳ ಶ್ರೇಯಸ್ಸೂ ತಮಗೇ ಸೇರಬೇಕು ಎಂಬಂತೆ ಹಕ್ಕು ಸಾಧಿಸುತ್ತಾರೆ.
ಬಹಳ ಕಾಲದಿಂದಲೂ ಅಸ್ತಿತ್ವದಲ್ಲಿರುವ ಕೇಂದ್ರೀಯ ಶಾಲೆಗಳನ್ನು ಈಗ ‘ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ’ ಎಂದೇ ಕರೆಯಲಾಗುತ್ತದೆ. ಪ್ರತಿ ಯೊಂದು ಪಡಿತರ/ದಿನಸಿ ಮಳಿಗೆ, ಪೆಟ್ರೋಲ್ ಬಂಕುಗಳೂ ಮೋದಿಯವರ ಕುರಿತು ಸಂಭ್ರಮಾಚರಣೆ ಮಾಡುವ ಅಡ್ಡಾಗಳಾಗಿಬಿಟ್ಟಿವೆ. ಈ ಭರಾಟೆ ಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಕೂಡ ಸದ್ದಿಲ್ಲದೆ ಬದಿಗೆ ಸರಿದಿದೆ. ಭಾರಿ ಪ್ರಮಾಣದ ಪ್ರಚಾರ ಅಭಿಯಾನವನ್ನು ನೋಡಿದರೆ ನಿಮಗೆ ಈ ಸಂಗತಿ ಸ್ಪಷ್ಟವಾಗುತ್ತದೆ. ಕಳೆದ ಒಂದಿಡೀ ವರ್ಷದಲ್ಲಿ ಒಂದು ಮಹಾನ್ ಭಾರತೀಯ ಉತ್ಸವದಂತೆ ಬಿಂಬಿಸಲ್ಪಟ್ಟ ಜಿ-೨೦ಯಂಥ ಶೃಂಗಸಭೆಯಲ್ಲಿ ಕೇಂದ್ರ ಮತ್ತು ರಾಜ್ಯಗಳಿಂದ ಹಣದ ಹೊಳೆಯೇ ಹರಿಯಿತು ಎಂಬುದೂ ನಿಮಗೆ ಗೊತ್ತಿರಬಹುದು.
ಇದರೊಂದಿಗೆ, ಮುಖ್ಯವಾಹಿನಿಯ ಮಾಧ್ಯಮಗಳನ್ನು ಕಾರ್ಪೊರೇಟ್ ಸಂಸ್ಥೆಗಳು ತಮ್ಮ ತೆಕ್ಕೆಗೆ ತೆಗೆದುಕೊಂಡ ಬೆಳವಣಿಗೆಯೂ ಘಟಿಸಿತು. ಈಭರಾಟೆಯಲ್ಲಿ ತುಲನಾತ್ಮಕವಾಗಿ ಸ್ವತಂತ್ರವಾಗಿ ಉಳಿದಿರುವವರು, ಅದಾನಿ ಮತ್ತು ಅಂಬಾನಿಯವರಂಥ ಉದ್ಯಮಿಗಳನ್ನು ಮುಖ್ಯ ಅಪರಾಧಿ ಗಳೆಂಬಂತೆ ಪರಿಗಣಿಸಿ ಮಾತನಾಡುತ್ತಾರೆ; ಆದರೆ, ಯಾವುದೇ ಕಾರ್ಪೊರೇಟ್ ಸಂಸ್ಥೆಯೂ ಆಡಳಿತಾರೂಢ ಪಕ್ಷವನ್ನು ನಿರಾಕರಿಸಲಾಗದು ಎಂಬುದು ಕಹಿಸತ್ಯ. ನರೇಂದ್ರ ಮೋದಿಯವರು ಅಽಕಾರಕ್ಕೆ ಬರುವುದಕ್ಕೂ ಮೊದಲು ಹಾಗೂ ಅವರ ದರ್ಬಾರಿನ ಕಾಲಘಟ್ಟದಲ್ಲಿ ಗುಜರಾತ್ ನಲ್ಲಿ ಕಂಡುಬಂದ ಹೂಡಿಕೆಗಳನ್ನು ಪರಸ್ಪರ ಹೋಲಿಸಿದಾಗ, ಈ ‘ಅಸಹಾಯಕ ಸ್ಥಿತಿ’ಯು ಪ್ರಮಾಣೀಕರಿಸಲ್ಪಡುತ್ತದೆ.
ಅಲ್ಲಿ ಮೋದಿಯವರ ಅಧಿಕಾರಾವಧಿಯಲ್ಲಿ, ಕಾರ್ಪೊರೇಟ್ ತೆರಿಗೆ ದರಗಳಲ್ಲಿ ಕಡಿತ ಮಾಡುವುದರೊಂದಿಗೆ ಕಾರ್ಪೊರೇಟ್ ವಲಯಕ್ಕೆ ಯಥೋಚಿತ ಪ್ರಮಾಣದ ಪ್ರತಿಫಲ-ಪ್ರಯೋಜನವನ್ನೇ ನೀಡಲಾಯಿತು. ಇದರ ಜತೆಗೆ, ಚೀನಿ ಉತ್ಪಾದನೆ ಮತ್ತು ಬೆಳವಣಿಗೆ ದರಗಳಲ್ಲಿನ ಕುಸಿತ, ಜಾಗತಿಕ ಆರ್ಥಿಕ ಕುಸಿತವು ಬೆಳೆಯುತ್ತಲೇ ಹೋದುದು ಹಾಗೂ ಬಹುಪಕ್ಷೀಯ ವ್ಯಾಪಾರ ನಿಯಮಗಳ ಕುಸಿತ ಇವೆಲ್ಲವೂ ಸೇರಿಕೊಂಡು ಭಾರತದ ಆರ್ಥಿಕ ಬಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದವು. ಮೂಲಸೌಕರ್ಯ ವಲಯದಲ್ಲಾದ ಅಸಾಧಾರಣ ಬೆಳವಣಿಗೆ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕ್ಷಿಪ್ರ ಅಭಿವೃದ್ಧಿಯಿಂದಾಗಿ ಭಾರತವು ನಿಸ್ಸಂದೇಹವಾಗಿ ಒಂದು ಸಂತಸದ- ಸುಭದ್ರವಾದ ಸ್ಥಾನದಲ್ಲಿದೆ ಎನ್ನಲಡ್ಡಿಯಿಲ್ಲ; ಅಸಮಾನತೆಗಳು, ಹಣದುಬ್ಬರ, ನಿರುದ್ಯೋಗದಂಥ ಸಮಸ್ಯೆಗಳು ಹೆಚ್ಚುತ್ತಿದ್ದರೂ, ಸ್ಟಾರ್ಟ್‌ಅಪ್‌ಗಳ ಕುಸಿತ ಕಂಡುಬಂದಿದ್ದರೂ ಮತ್ತು ಹೆಚ್ಚಿನ ಮಟ್ಟದಲ್ಲಿರುವ ಗ್ರಾಹಕರ ಸಾಲವು ಬೇಡಿಕೆಯ ಭಾಗಕ್ಕೆ ಭವಿಷ್ಯದಲ್ಲಿ ಬೆದರಿಕೆಗಳನ್ನು ಒಡ್ಡುವಂಥ ಸ್ಥಿತಿಯಿದ್ದರೂ, ಭಾರತದ ಈ ಸುಸ್ಥಿತಿಗೆ ಯಾವುದೇ ಧಕ್ಕೆಯಿಲ್ಲ ಎಂಬುದು ಗಮನಾರ್ಹ.
ಕೇಂದ್ರವು ಕೈಗೊಂಡ ಹೆಚ್ಚಿನ ಉಪಕ್ರಮಗಳೇನಿವೆ, ಅವು ರಾಜ್ಯಗಳು ಬೆವರು ಬಸಿದು ನೀಡಿದ ಹಣದಿಂದಲೇ ಆಗಿರುವಂಥವು; ಅದರಲ್ಲೂ ನಿರ್ದಿಷ್ಟ ವಾಗಿ ‘ಡಬಲ್ ಎಂಜಿನ್’ ಸರಕಾರ ಇಲ್ಲದ ರಾಜ್ಯಗಳು ಹೀಗೆ ತಮ್ಮನ್ನು ತೇಯ್ದುಕೊಂಡಿದ್ದು ಹೆಚ್ಚು. ಹೀಗಾಗಿಯೇ ಕೇಂದ್ರ ಮತ್ತು ಇಂಥ ರಾಜ್ಯಗಳನಡುವಿನ ಸಂಘರ್ಷ ಬೆಳೆಯುತ್ತಲೇ ಇದೆ! ಯಾವ್ಯಾವುದೋ ಗುಮ್ಮನನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳನ್ನು ಹೆದರಿಸುವುದು, ಇನ್ನಿಲ್ಲದಂತೆ ಬೆನ್ನತ್ತಿ ಕಾಡುವುದು ಚುನಾವಣಾ ಕಾರ್ಯತಂತ್ರದ ಇನ್ನೊಂದು ಅಂಶವಾಗಿಬಿಟ್ಟಿದೆ.
ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಎನ್‌ಐಎ ಸಂಸ್ಥೆಗಳು ಆಡಳಿತಾರೂಢ ಪಕ್ಷಗಳಿಗಿಂತ ಪ್ರತಿಪಕ್ಷಗಳ ಮೇಲೆಯೇ ಹೆಚ್ಚು ಗಮನ ಹರಿಸು ತ್ತವೆ; ಈ ಸಂಸ್ಥೆಗಳ ಪೈಕಿ ಯಾವುದಾದರೂ ಒಂದರ ಹದ್ದಿನಕಣ್ಣಿಗೆ ಸಿಲುಕಿದ ವ್ಯಕ್ತಿಯೊಬ್ಬ ಒಂದೊಮ್ಮೆ ತನ್ನ ಪಕ್ಷವನ್ನು ಬದಲಿಸಿದರೆ, ತನ್ನ ಮೇಲೆ ಜರುಗಬಹುದಾದ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಬಹುದು. ಇತ್ತೀಚಿನ ಚುನಾವಣಾ ಬಾಂಡ್ ಗಳ ಪ್ರಕರಣ ಮತ್ತು ಅದರ ಸಂಬಂಧವಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಕೆಲವೊಂದಿಷ್ಟು ನ್ಯಾಯಾಧೀಶರು ನೀಡಿದ ಹೇಳಿಕೆಗಳನ್ನು ನೋಡಿದಾಗ, ಕನಿಷ್ಠಪಕ್ಷ ಈಗಲಾದರೂ ಅವರು ಸಂವಿಧಾನವು ತಮಗೆ ನೀಡಿರುವ ಸ್ವಾತಂತ್ರ್ಯವನ್ನು ಮರುದಕ್ಕಿಸಿಕೊಳ್ಳುವ ಲಕ್ಷಣಗಳನ್ನು ತೋರಿಸುತ್ತಿದ್ದಾರೆ ಎನಿಸುತ್ತದೆ.
ಚುನಾವಣೆಯ ತರುವಾಯದಲ್ಲೂ ಇಂಥ ದೊಂದು ಚಿತ್ತಸ್ಥಿತಿ ಎಲ್ಲಿಯವರೆಗೆ ಉಳಿಯುತ್ತದೆ ಎಂಬುದು, ಮುಂಬರುವ ಲೋಕಸಭೆಯ ಸಂಯೋಜನೆಯ ಮೇಲೆ ಅವಲಂಬಿತವಾಗಿರುತ್ತದೆ ಎನ್ನಲಡ್ಡಿಯಿಲ್ಲ! ಹಾಗಿದ್ದಲ್ಲಿ, ಪ್ರತಿಪಕ್ಷಗಳ ಕಥೆ ಅಥವಾ ಸ್ಥಿತಿಗತಿ ಏನಾಗಬಹುದು? ಕೆಲವು ತಿಂಗಳ ಹಿಂದೆ ಬಿಜೆಪಿ ಯೇತರ ವಿಪಕ್ಷಗಳ ‘ಇಂಡಿಯ’ ಮೈತ್ರಿಕೂಟವು ರೂಪುಗೊಂಡಾಗ, ಇದು ಆಡಳಿತಾರೂಢ ರಂಗಕ್ಕೆ ಹಾನಿ ಯುಂಟುಮಾಡಬಹುದು ಎಂಬ ಗ್ರಹಿಕೆರೂಪುಗೊಂಡಿತ್ತು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಮೈತ್ರಿಕೂಟದ ಚುಕ್ಕಾಣಿ ಹಿಡಿದಿದ್ದರಿಂದ, ದೇಶದ ರಾಜಕೀಯ ವಲಯ ದಲ್ಲಿ ತಾನು ಕಳೆದುಕೊಂಡಿರುವ ಜಾಗವನ್ನು ಮತ್ತೊಮ್ಮೆ ಗೆಲ್ಲುವುದಕ್ಕೆ ಈ ಮೈತ್ರಿಕೂಟವು ಗಂಭೀರವಾಗಿ ಯತ್ನಿಸುತ್ತದೆ ಎಂಬ ವಿಶ್ವಾಸವೂ ದಟ್ಟ ವಾಗಿತ್ತು.
ಬಹುತೇಕರಿಗೆ ಗೊತ್ತಿರುವಂತೆ ನಿತೀಶರಿಗೆ ಹಿಂದಿ ಭಾಷೆಯ ಮೇಲೆ ಪ್ರಭುತ್ವವಿದೆ, ಆಕರ್ಷಕ ಮಾತುಗಾರಿಕೆಯೂ ಸಿದ್ಧಿಸಿದೆ; ಮುಖ್ಯಮಂತ್ರಿಯಾಗಿಅವರಿಗೆ ಅಗಾಧ ಅನುಭವವೂ ಇದೆ. ಹೀಗಾಗಿ, ಅವರು ಪ್ರಧಾನಿ ಮೋದಿಯವರಿಗೆ ಓರ್ವ ವಿಶ್ವಾಸಾರ್ಹ ಸವಾಲುಗಾರನಾಗಿ ಪರಿಣಮಿಸಬಹುದು ಎಂಬುದೇ ರಾಜಕೀಯಾಸಕ್ತರ ಗ್ರಹಿಕೆಯಾಗಿತ್ತು. ಆದರೆ, ‘ಐತಿಹಾಸಿಕ ಪಕ್ಷ’ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕಾಂಗ್ರೆಸ್‌ನಲ್ಲಿ ಇಂಥವರು ಯಾರೂಇಲ್ಲವಲ್ಲಾ ಎಂದು ಜನರಿಗೆ ಅನಿಸಿದ್ದು ನಿಜ. ಮುಖ್ಯವಾಗಿ, ಘನವಾದ ಆಡಳಿತ-ವಿರೋಧಿ ಅಲೆ ಹಾಗೂ ಸ್ಥಳೀಯ ನಾಯಕರ ಪ್ರಯತ್ನಗಳಿಂದಾಗಿಕರ್ನಾಟಕದಲ್ಲಿ ಗದ್ದುಗೆಯನ್ನು ಗೆದ್ದುಕೊಂಡ ಕಾಂಗ್ರೆಸ್, ‘ರಾಜಕೀಯದಲ್ಲೀಗ ಬದಲಾವಣೆಯ ಗಾಳಿ ಬೀಸುತ್ತಿದೆ’ ಎಂಬುದಾಗಿ ಈ ಸಂದರ್ಭವನ್ನುತಪ್ಪಾಗಿ ಭಾವಿಸಿಬಿಟ್ಟಿತು.
ಆದರೆ, ಕಾಂಗ್ರೆಸ್ ನೇತೃತ್ವದ ‘ಇಂಡಿಯ’ ಮೈತ್ರಿಕೂಟವು ಸುಮಾರು ಅರ್ಧ ವರ್ಷದವರೆಗೆ ಯಾವುದೇ ಚಟುವಟಿಕೆಯಿಲ್ಲದೆ ಜಡವಾಗಿತ್ತು; ಇಷ್ಟು ಸಾಲದೆಂಬಂತೆ, ಬದಲಾದ ರಾಜಕೀಯ ಸಮೀಕರಣಕ್ಕೆ ಮಣೆಹಾಕಿದ ನಿತೀಶ್ ಕುಮಾರ್ ಅವರು ‘ಇಂಡಿಯ’ ಮೈತ್ರಿಕೂಟದಿಂದ ಜಿಗಿದು ಮತ್ತೆ ‘ಎನ್‌ಡಿಎ’ ತೆಕ್ಕೆಯನ್ನು ಸೇರಿಬಿಟ್ಟರು. ಮತ್ತೊಂದೆಡೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರು ಮೈತ್ರಿಕೂಟದ ಹಂಗು ಬೇಡ ಎಂದು ಹೇಳಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದರು. ಇಂಥ ಬಗೆಬಗೆಯ ಒಡಕುಗಳ ಕಾರಣದಿಂದಾಗಿ ‘ಇಂಡಿಯ’ ಮೈತ್ರಿಕೂಟವು ಒಂದು ‘ಜಂಟಿ ಕನಿಷ್ಠ ಕಾರ್ಯಕ್ರಮ’ದ ಕುರಿತಾಗಿ ಸಮಷ್ಟಿ ಬಲವನ್ನು ವಿನಿಯೋಗಿಸಿ ಕೆಲಸ ಮಾಡಲಾಗಲಿಲ್ಲ.
ಕಾಂಗ್ರೆಸ್ ಪಕ್ಷದಲ್ಲಿನ ‘ಆಂತರಿಕ ಪ್ರಜಾಪ್ರಭುತ್ವ’ಕ್ಕೂ ಸಂಚಕಾರ ಒದಗಿತು. ‘ಇಂಡಿಯ’ ಮೈತ್ರಿಕೂಟಕ್ಕೆ ಒದಗಿದ ದುಸ್ಥಿತಿಯನ್ನು ಕಂಡು  ಸಮಾಧಾನ ಗೊಂಡ ಒಂದಷ್ಟು ವಿಪಕ್ಷ ನಾಯಕರು ಅದಕ್ಕೆ ಗುಡ್‌ಬೈ ಹೇಳಿದರು; ಇವರ ಪೈಕಿ ಕಾಂಗ್ರೆಸ್‌ನಿಂದ ಕಾಲ್ಕಿತ್ತವರೇ ಹೆಚ್ಚು. ಇಷ್ಟಾಗಿಯೂ, ಪ್ರತಿಪಕ್ಷಗಳ ಪಾಲಿಗೆ ಪರಿಸ್ಥಿತಿ ಸಂಪೂರ್ಣ ಹತಾಶದಾಯಕವಾಗಿದೆ, ನಿರಾಶಾದಾಯಕವಾಗಿದೆ ಎಂದೇನಿಲ್ಲ. ಕಾರಣ, ಮೈತ್ರಿಕೂಟದ ಬಿಡಿಬಿಡಿ ಪಕ್ಷಗಳು ಕೇಂದ್ರ ಮಟ್ಟದಲ್ಲಿ ಒಗ್ಗೂಡುವಲ್ಲಿ ಯಶಸ್ವಿಯಾಗದೆ ಇದ್ದಿರಬಹುದು, ಆದರೆ ಅವು ತಂತಮ್ಮ ರಾಜ್ಯಗಳಲ್ಲಿ ಕನಿಷ್ಠಪಕ್ಷ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿರುವ ಕ್ಷೇತ್ರಗಳು ಬಹಳಷ್ಟಿವೆ. ಈ ವಿಷಯದಲ್ಲಿ, ಮಹಾರಾಷ್ಟ್ರ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ನಿರ್ಣಾಯಕ ಅಖಾಡ ಗಳಾಗಿ ತಮ್ಮನ್ನು ಸಾಬೀತುಪಡಿಸಿಕೊಳ್ಳಲೂ ಸಾಧ್ಯವಿದೆ. ‘ಮೋದಿ ಅಲೆ’ ಎಂಬುದು ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ತನ್ನದೇ ಆದ ಪ್ರಭಾವ ಬೀರುವ ಸಾಧ್ಯತೆಯಿದ್ದರೂ, ದಕ್ಷಿಣದ ರಾಜ್ಯಗಳು ಆಡಳಿತಾರೂಢ ಪಕ್ಷಗಳ ಪಾಲಿಗೆ ಈ ನಿಟ್ಟಿನಲ್ಲಿ ಒಂದು ಸೇತುವೆಯಾಗಿ ಪರಿಣಮಿಸಬಹುದು.
ಇಲ್ಲಿ ಇನ್ನೊಂದು ವಿಷಯವನ್ನು ಉಲ್ಲೇಖಿಸಬೇಕು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರನ್ನು ಬಂಧಿಸಿದ ಬೆಳವಣಿಗೆ ಮತ್ತು ಅವರ ಆಮ್ಆದ್ಮಿ ಪಕ್ಷವನ್ನು ಹತ್ತಿಕ್ಕುವ ಪ್ರಯತ್ನ ಇವು, ಕಾರಣಾಂತರಗಳಿಂದ ಚೆದುರಿಹೋಗಿದ್ದ ‘ಇಂಡಿಯ’ ಮೈತ್ರಿಕೂಟದ ಸಹಭಾಗಿ ಪಕ್ಷಗಳನ್ನು ಮತ್ತೊಮ್ಮೆ ಒಗ್ಗೂಡಿಸಿವೆ; ಆದರೆ, ಇದೇ ಸ್ಥಿತಿ ಅಥವಾ ಸ್ಥಿರತೆ ಎಷ್ಟು ದಿನಗಳವರೆಗೆ ಮುಂದುವರಿಯಲಿದೆ ಎಂಬುದನ್ನು ಮಾತ್ರ ಹೇಳಲಾಗದು.
ಒಟ್ಟಾರೆ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಅಥವಾ ಪ್ರಭಾವಳಿ ಎಂಬುದೇನಿದೆ, ಅದು ವಿಪಕ್ಷಗಳ ಚುನಾವಣಾ ಪ್ರಚಾರ ಚಟುವಟಿಕೆಗಳ ಮೇಲೆ ಮಬ್ಬು ಗವಿಸಿಬಿಟ್ಟಿದೆ. ಹಾಗಂತ ವಿಪಕ್ಷಗಳು ಹತಾಶೆಯ ಕೂಪದಲ್ಲಿ ಸಿಲುಕಿಕೊಳ್ಳುವ ಅಗತ್ಯವಿಲ್ಲ; ಏಕೆಂದರೆ, ನಮಗೀಗಒಂದು ಪ್ರಬಲವಾದ ಪ್ರತಿಪಕ್ಷದ ಅಗತ್ಯವಿದೆ. ಅದು ಇದ್ದರೇನೇ ನಮ್ಮ ಪ್ರಜಾಪ್ರಭುತ್ವಕ್ಕೆ ಮತ್ತು ಸಂವಿಧಾನಕ್ಕೆ ಒಂದು ಸೊಬಗು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರ ಪೂರ್ವಜರ ಗ್ರಾಮವಾದ ‘ಪರೌಂಖ್’ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸ್ವತಃ ಪ್ರಧಾನಿ ಮೋದಿಯವರೇ ಆಡಿದ ಮಾತೊಂದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾದೀತು.
ಅಂದು ಮೋದಿಯವರು, ‘ದೇಶದಲ್ಲಿ ಒಂದು ಪ್ರಬಲವಾದ ವಿರೋಧ ಪಕ್ಷ ಇರಬೇಕೆಂಬುದು ನನ್ನ ಬಯಕೆ; ನಾನು ಯಾರ ವಿರುದ್ಧವೂ ಇಲ್ಲ’ಎಂದಿದ್ದರು. ಈ ಮಾತನ್ನು ಪ್ರತಿಪಕ್ಷಗಳು ಗಂಭೀರವಾಗಿ ಪರಿಗಣಿಸಿದರೆ ಅವಕ್ಕೇ ಒಳ್ಳೆಯದು.
(ಲೇಖಕರು ಭಾರತ ಸರಕಾರದ ಮಾಜಿ ಸಂಪುಟಕಾರ್ಯದರ್ಶಿ)