ರಸ್ತೆಗಳು ದೇಶದ ಭರವಸೆಯ ಪ್ರತೀಕ
ನೂರೆಂಟು ವಿಶ್ವ
     ,               .–  
ಬೆಹರೈನ್ ಕನ್ನಡಿಗ ಮಿತ್ರ ಕಿರಣ್ ಉಪಾಧ್ಯಾಯ ಕೆಲ ವರ್ಷಗಳ ಹಿಂದೆ ರಸ್ತೆಗಳ ಹೆಸರುಗಳ ಬಗ್ಗೆ ಒಂದು ಅಂಕಣ ಬರೆದಿದ್ದರು. ‘ಇದು ಎಂಥ ಮಾರ್ಗವಯ್ಯಾ..’ ಎನ್ನುವ ಅವರ ಅಂಕಣ ನನ್ನಲ್ಲಿ ರಸ್ತೆಗಳ ಬಗ್ಗೆ ಒಂದು ಸುಂದರ ಮಾರ್ಗವನ್ನೇ ಬಿಚ್ಚಿಟ್ಟಿತ್ತು. ಮಾನವನ ನಾಗರಿಕತೆ ಬಚ್ಚಲು ಮನೆಯಲ್ಲಿ ಆರಂಭವಾಯಿತು ಅಂತಾರೆ. ಆದರೆ ಅದು ಚಲಿಸಲಾರಂಭಿಸಿದ್ದು ಮಾತ್ರ ರಸ್ತೆಯ ಮೇಲೆಯೇ. ಹೀಗಾಗಿ ರಸ್ತೆ ನಮ್ಮ ನಾಗರಿಕತೆಯ ಚಲನಶೀಲತೆಯ ಪ್ರತೀಕ. ಅಂದರೆ ನಮ್ಮ ನಾಗರಿಕತೆ ಕ್ಷಣಕ್ಷಣಕ್ಕೂ ರಸ್ತೆ ಮೇಲೆ ಬೆಳೆಯುತ್ತಾ, ಚಲಿಸುತ್ತಾ, ಸಾಗುತ್ತಲೇ ಇರುತ್ತದೆ.
ಪಯಣದಂತೆ, ರಸ್ತೆಗೆ ಕೊನೆ ಎಂಬುದು ಇಲ್ಲ. ಒಂದು ವೇಳೆ ಪಯಣ ಮುಗಿದರೂ ರಸ್ತೆ ಸಾಗುತ್ತಲೇ ಇರುತ್ತದೆ. ಬದುಕಿನಲ್ಲಿ ರಸ್ತೆ ಗಳೆಂದರೆ ಭರವಸೆಯಂತೆ. ರಸ್ತೆ ಇರುವವರೆಗೆ ಪಯಣವನ್ನು ಮುಂದುವರಿಸಬಹುದು. ಹಾಗೆ ನೋಡಿದರೆ, ಮೊದಲು ರಸ್ತೆಗಳೇ ಇರಲಿಲ್ಲ. ಜನ ನಡೆಯಲಾರಂಭಿಸಿದಂತೆ, ರಸ್ತೆಗಳೂ ನಿಧಾನ ವಾಗಿ ಮೂಡಲಾರಂಭಿಸಿದವು. ಹೀಗಾಗಿ ರಸ್ತೆಗಳು ಮನುಷ್ಯನ ಹೆಜ್ಜೆಗಳ, ನಡಿಗೆಯ ಪಡಿಯಚ್ಚು ಸಹ ಹೌದು. ‘ಮೆಟ್ಟಿ ಮೆಟ್ಟಿ ಮಣ್ಣ ಹಾದಿ ಸುಗಮ..’ (ಇದನ್ನೇ ತುಂಟ ಕವಿ ಯೊಬ್ಬ ಮುಟ್ಟಿ ಮುಟ್ಟಿ ಮೈಯ ಹಾದಿ ಸುಗಮ ಎಂದು ಹೇಳಿದ್ದು ಬೇರೆ ಮಾತು) ಎಂಬುದು ನಾಗರಿಕತೆಯೊಂದಿಗೆ ಮನುಷ್ಯ ಹೆಜ್ಜೆ ಹಾಕಿದ್ದರ ದ್ಯೋತಕ.
ಎಲ್ಲಾ ಸೇತುವೆಗಳನ್ನು ದಾಟುವಂತೆ, ಎಲ್ಲಾ ರಸ್ತೆಗಳನ್ನು ಕ್ರಮಿಸಬಹುದು ಎಂಬುದು ಪ್ರಸಿದ್ಧ ಮಾತು. ಅಂದರೆ ಹೋಗಲಾಗದ ರಸ್ತೆ ಎಂಬುದು ಇಲ್ಲವೇ ಇಲ್ಲ. ನಿಮ್ಮ ಮುಂದೆ ರಸ್ತೆಯಿದೆ ಅಂದರೆ ನಿಮಗಿಂತ ಮುಂಚೆ ಹಲವರು ಅಲ್ಲಿ ನಡೆದು ಹೋಗಿದ್ದಾರೆ ಮತ್ತು ವಾಪಸ್ ಬಂದಿದ್ದಾರೆ, ಹೀಗಾಗಿ ನೀವು ಅದರ ಮೇಲೆಹೋಗಲು ಭಯಪಡಬೇಕಿಲ್ಲ ಎಂದರ್ಥ. ಅದಕ್ಕೇ ಹೇಳಿದ್ದು ರಸ್ತೆಗಳು ಭರವಸೆಯ ಪ್ರತೀಕ. ಈ ಮಾತು ಹೇಳುವಾಗ ನನಗೆ ರವಾಂಡಾದ ಕಾಡಿನಲ್ಲಿಹೆಜ್ಜೆ ಹಾಕುವಾಗ, ಗೊರಿ ಭಾಷೆಗಳನ್ನು ಅನುಕರಿಸುವ, ಗೊರಿ ಚಾರಣ ತಂಡದ ಮಾರ್ಗದರ್ಶಿ ಹೇಳಿದ ಮಾತುಗಳು ನೆನಪಾಗುತ್ತವೆ. ಅದೋ ನಾನೂರು, ಐನೂರು ವರ್ಷಗಳ ಮರಗಳುಳ್ಳ ದಟ್ಟ ಕತ್ತಲೆಯ ಕಾಡು. ನರ ಮಾನವನ ಕುರುಹೂ ಸಹ ಸಿಗದ ದಟ್ಟಾರಣ್ಯ.
ಜತೆಗೆ ಭೀತಿ ಹುಟ್ಟಿಸುವ ಮೌನ. ನಮ್ಮ ಚಾರಣ ತಂಡದಲ್ಲಿದ್ದವ ಮಾರ್ಗದರ್ಶಿಯನ್ನು ಕೇಳಿದ – ‘ಒಂದು ವೇಳೆ ನಮ್ಮ ಮೇಲೆ ಗೊರಿಗಳು ದಾಳಿ ಮಾಡಿದವು ಅನ್ನಿ. ಆಗ ನಾವೆ ದಿಕ್ಕಾ ಪಾಲಾಗಿ ಓಡಲಾರಂಭಿಸುತ್ತೇವೆ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡಿ ದಾರಿ ತಪ್ಪಿಸಿಕೊಂಡು ಚದುರಿ ಹೋದರೆ ಏನುಮಾಡುವುದು?’ ಆಗ ಗೊರಿ ಚಾರಣ ತಂಡದ ನಾಯಕ ಹೇಳಿದ್ದ – ‘ಸಿಂಪಲ್, ಕಾಡಿನಲ್ಲಿ ಎಲ್ಲಿ ಕಾಲುದಾರಿ ಇದೆಯೋ, ಅದನ್ನು ಅನುಸರಿಸಿ. ಆ ಕಾಲು ರಸ್ತೆ ನಿಮ್ಮನ್ನು ಎಲ್ಲಿಗೋ ಕರೆದು ಕೊಂಡು ಹೋಗುತ್ತದೆ. ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂಬುದು ನಿಮಗೆ ಗೊತ್ತಿಲ್ಲದಿರಬಹುದು, ಆದರೆ ಅದು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ನಿಮಗಿಂತ ಮೊದಲು ಯಾರೋ ಅಲ್ಲಿ ನಡೆದು ಹೋಗಿದ್ದಾರೆ.
ಹೀಗಾಗಿ ನೀವು ಭಯಪಡಬೇಕಿಲ್ಲ. ಆ ಕಾಲು ರಸ್ತೆಯಗುಂಟ ನಿಮಗೆ ಯಾರೋ ಸಿಗುತ್ತಾರೆ. ಅಂತೂ ಕಾಲುರಸ್ತೆಯ ಮೇಲಿರುವ ತನಕ ನೀವು ಕಳೆದುಹೋಗಿಲ್ಲ ಎಂದರ್ಥ.’ ಅದು ಅಪ್ಪಟ ನಿಜ ಕೂಡ. ಆ ಕಾಲುರಸ್ತೆಯನ್ನು ಅನುಸರಿಸಿ ಹೋದದ್ದೇ ಆದರೆ ಕಾಡಿನ ಹೊರಗೆ ಬಂದಿರುತ್ತೇವೆ ಅಥವಾ ಇನ್ನೊಂದು ತುದಿ ತಲುಪಿರುತ್ತೇವೆ. ಇದು ಒಂಥರಾ ವಿಮಾನ, ಸಂಪರ್ಕ ಕ್ಷೇತ್ರದ ಪರಿಽಯಲ್ಲಿ ಇದ್ದ ಹಾಗೆ. ‘ವಿಮಾನ ಹಠಾತ್ ಸಂಪರ್ಕ ಕಡಿದುಕೊಂಡರೆ ಅದು ಅಪಘಾತಕ್ಕೀಡಾ ಗಿದೆ’ ಎಂದು ಹೇಳುತ್ತಾರಲ್ಲ, ಹಾಗೆ. ‘ಕಾಲು ದಾರಿಯ ಮೇಲಿರುವ ತನಕ ನೀವು ಕಳೆದು ಹೋಗಿಲ್ಲ ಎಂದರ್ಥ ಮತ್ತು ಈ ಕಾಡಿನಲ್ಲಿ ಅಂಥ ಅನೇಕಕಾಲುದಾರಿ ಗಳಿವೆ’ ಎಂಬ ಆತನ ಮಾತುಗಳು ನನ್ನಲ್ಲಿ ಹೊಸ ಭರವಸೆ ಮತ್ತು ಧೈರ್ಯವನ್ನು ಮೂಡಿಸಿದ್ದವು.
ರಸ್ತೆ ನಮ್ಮಲ್ಲಿ ಚಿಗುರಿಸುವ ಭರವಸೆ, ವಿಶ್ವಾಸ ಅಂಥದ್ದು. ಇಂಗ್ಲೀಷಿನಲ್ಲಿ ಒಂದು ಪ್ರಸಿದ್ಧ ಮಾತಿದೆ –       .
ರಸ್ತೆಯ ಮೇಲಿರುವ ತನಕ ನೀವು ಹಾದಿ ತಪ್ಪಿಲ್ಲ ಎಂದೇ ಅರ್ಥ. ಈ ಮಾತು ಹಡಗಿಗೂ ಅನ್ವಯ. ಅದಕ್ಕೆ ನೀರೇ ರಸ್ತೆ. ಅದು ಎಲ್ಲಿಯ ತನಕ ನೀರ ಮೇಲಿರುವುದೋ, ಅದು ದಾರಿ ತಪ್ಪಿಲ್ಲ ಎಂದರ್ಥ. ದಾರಿ ತಪ್ಪಿ ಹೋದೆವು ಅಂತ ಹೇಳುತ್ತೇವೆ. ನಿಜ, ದಾರಿ ತಪ್ಪಿ ಬೇರೆ ಊರಿಗೆ ಹೋಗಬಹುದು. ಆದರೆ ಹೋದ ದಾರಿಯಲ್ಲಿ ವಾಪಸ್ ಬರುವ ಆಯ್ಕೆಯಂತೂ ಇದ್ದೇ ಇರುತ್ತದೆ. ಅದಕ್ಕೇ ಹೇಳಿದ್ದು ನಾವು ರಸ್ತೆಯ ಮೇಲಿರುವ ತನಕ ಕಳೆದು ಹೋಗಲು ಸಾಧ್ಯವಿಲ್ಲ ಎಂದು. ರಸ್ತೆಯ ಮೇಲಿದ್ದಷ್ಟು ಹೊತ್ತು ಯಾರಾದರೂ ಬರುವ ಭರವಸೆ ಯಂತೂ ಇದ್ದೇ ಇರುತ್ತದೆ. ಹೀಗಾಗಿ ರಸ್ತೆಯ ಮೇಲಿದ್ದಾಗ ನೀವು ಒಬ್ಬರೇ ಇದ್ದರೂ, ಒಂಟಿ ಅಲ್ಲ.
ಕೆಲ ವರ್ಷದ ಹಿಂದೆ ಕಿರಣ್ ಉಪಾಧ್ಯಾಯ ಮತ್ತು ಇನ್ನು ಕೆಲ ಸ್ನೇಹಿತರೊಂದಿಗೆ ದುಬೈನಿಂದ ಒಮಾನ್ ರಾಜಧಾನಿ ಮಸ್ಕತ್‌ಗೆ ರಸ್ತೆ ಮೂಲಕ ಆಮರುಭೂಮಿಯಲ್ಲಿ ಪಯಣ ಮಾಡಿದನ್ನು ಮರೆಯುವಂತಿಲ್ಲ. ಆನಂತರ ಮಸ್ಕತ್‌ನಿಂದ ಸುಮಾರು ಸಾವಿರದ ಎರಡು ನೂರು ಕಿಮಿ ದೂರದಲ್ಲಿರುವ ಸಲಲಾಹ್‌ಕ್ಕೆ ಹೋಗಿದ್ದನ್ನೂ. ಜತೆಗೆ ಯಾರಿದ್ದರೂ ಮರುಭೂಮಿಯ ಪಯಣ ಏಕಾಂಗಿತನವನ್ನು ಭರಿಸುತ್ತದೆ. ಕಣ್ಣಿಗೆ ಹಾಯುವ ತನಕ ಅಂಗಾತ ಬಿದ್ದುಕೊಂಡ ರಸ್ತೆಗಳು. ಎಷ್ಟೇ ವೇಗವಾಗಿ ಚಲಿಸಿದರೂ ಕ್ರಮಿಸದ ಹಾದಿ. ನೂರಾರು ಕಿಮಿ ಕ್ರಮಿಸಿದರೂ ಎಲ್ಲೂ ಜನ ಕಾಣುವುದಿಲ್ಲ.
ಆಗೊಮ್ಮೆ, ಈಗೊಮ್ಮೆ ಹಾದು ಹೋಗುವ ವಾಹನಗಳು. ಎಲ್ಲೂ ಕಾಣದ ರಸ್ತೆ ಬದಿ ಅಂಗಡಿಗಳು. ಎಲ್ಲಿ ನೋಡಿದರೂ ಒಂದು ಕುರುಚಲು ಸಸ್ಯ ಸಹ ಇಲ್ಲ. ಮನೆ ಇಲ್ಲ, ಮಠ ಇಲ್ಲ. ಮರೀಚಿಕೆಗಳೇ ಜಲಾಶಯಗಳು. ಇಡೀ ರಸ್ತೆಯುದ್ದಕ್ಕೂ ನಾವೊಂದೇ ಹೋಗುತ್ತಿದ್ದೇವೆ ಎಂಬ ಭಾವ. ಮರಳಿನ ಹಳದಿ ಮತ್ತು ಆಗಸದ ನೀಲಿಯ ಹೊರತಾಗಿ ಬೇರೆ ಬಣ್ಣಗಳೂ ಕಾಣುವುದಿಲ್ಲ. ಮುನ್ನೂರು ಕಿಮಿ ಅಂತರದಲ್ಲಿ ಪೆಟ್ರೋಲ್ ಬಂಕ್, ಅಲ್ಲಿಯೇ ಸಣ್ಣ ಕೆಫೆಟೇರಿಯ. ಮಾರ್ಗ ಮಧ್ಯದಲ್ಲಿ ವಾಹನ ಕೆಟ್ಟು ನಿಂತರೆ ಹರೋ ಹರ. ಆ ರಸ್ತೆಯಲ್ಲಿ ಸಾವಿರಾರು ಕಿಮಿ ಸಂಚರಿಸುವಾಗ ನನಗೆ ಇಂಗ್ಲಿಷ್ ಪಯಣಿಗನೊಬ್ಬ ಹೇಳಿದ   .            ಎಂಬ ಮಾತು ಎಷ್ಟು ನಿಜ ಎಂದು ಅನಿಸುತ್ತಿತ್ತು.
ಹಾಗೆ, ‘ಸಾವಿರ ಸಲ ಅದರ ಬಗ್ಗೆ ಕೇಳುವುದಕ್ಕಿಂತ, ಓದುವುದಕ್ಕಿಂತ, ಒಂದು ಸಲ ಕಣ್ಣಾರೆ ನೋಡುವುದು ಮಿಗಿಲು’ ಎಂಬ ಮಾತು. ಸುತ್ತಲೂ ಕಣ್ಣುಹಾಯಿಸಿ ದಾಗ ಯಾರೂ ಕಾಣಿಸದಿದ್ದಾಗ ತುಸು ಒಳ ಮನಸಿನ ಹಿತ್ತಲಲ್ಲಿ ಅಳುಕು ಆವರಿಸಿಕೊಂಡರೂ, ರಸ್ತೆಯ ಮೇಲಿದ್ದಷ್ಟು ಹೊತ್ತು ಸುರಕ್ಷಿತ ಎಂಬ ನಂಬಿಕೆಯೇ ಧೈರ್ಯ. ಅದರಲ್ಲೂ ಮರುಭೂಮಿಯಲ್ಲಿ ರಾತ್ರಿ ಪಯಣ ಮಾಡುವಾಗ ಆಕಾಶದೆಡೆಗೆ ಮುಖ ಮಾಡಿ ಹೊರಟ ಅನುಭವ. ಆ ಕತ್ತಲೆಯಲ್ಲಿ ದಾರಿದೀಪಗಳೂ, ತೂಗುದೀಪ ಗಳೂ ಇಲ್ಲ. ವಾಹನದ ಹೆಡ್ ಲೈಟೇ ತೋರುದೀಪ. ಅದೂ ಕೈಕೊಟ್ಟರೆ ಶ್ರೀನಿವಾಸನೇ ಗತಿ.
ಕರೋನಾ ಲಾಕ್‌ಡೌನ್ ಆಗುವ ತನಕ ಕಿರಣ್ ಉಪಾಧ್ಯಾಯ ಪ್ರತಿದಿನ ಕೆಲಸದ ನಿಮಿತ್ತ ದಮ್ಮಾಮ್ ನಿಂದ ಹರಾದ್ ತನಕ ಐನೂರು ಕಿಮಿ ಏಕಾಂಗಿ ಯಾಗಿ ಪ್ರಯಾಣ ಮಾಡುತ್ತಿದ್ದರು. ಕಳೆದ ಹದಿನೈದು ವರ್ಷಗಳಿಂದ ಪ್ರತಿ ದಿನ ಅವರು ಐನೂರು ಕಿಮಿ ಪಯಣ ಮಾಡುತ್ತಿದ್ದರೆ, ಅದಕ್ಕೆ ಕಾರಣ ಸೌದಿಯಲ್ಲಿನ ರಸ್ತೆಗಳು. ಅಲ್ಲಿನ ರಸ್ತೆಗಳನ್ನು ಕೆನ್ನೆಗಳಿಗೆ ಹೋಲಿಸಿದರೆ ಹೇಮಾಮಾಲಿನಿ ಸಹ ನಾಚಬಹುದು, ಅಷ್ಟೊಂದು ನುಣುಪು, ಮೋಹಕ. ಆ ಮರುಭೂಮಿಯಲ್ಲಿ ಅರಬಿಗಳು ಕಟ್ಟಿದ ರಸ್ತೆ ಈ ಕಾಲಘಟ್ಟದ ಅದ್ಭುತ ಸೃಷ್ಟಿ.
ರಸ್ತೆಗಳನ್ನು ನಿರ್ಮಿಸಲು ಯಾವ ತಂತ್ರಜ್ಞಾನವೂ ಬೇಕಾಗಿಲ್ಲ. ಅದೇನು ರಾಕೆಟ್ ಸೈನ್ಸ್ ಅಲ್ಲ. ಉಪಗ್ರಹ ಹಾರಿಸುವುದಕ್ಕಿಂತ ಸುಲಭ ಎಂಬುದನ್ನು ಅವರು ತೋರಿಸಿಕೊಟ್ಟಿzರೆ. ಸುಂದರವಾದ ರಸ್ತೆಗಳನ್ನು ಕಟ್ಟದೇ ದೇಶವನ್ನು ಕಟ್ಟಲಾಗುವುದಿಲ್ಲ ಎಂಬುದನ್ನು ಅವರನ್ನು ನೋಡಿ ಕಲಿಯಬೇಕು. ನಾವು ಯಾವುದೇ ದೇಶವನ್ನಾದರೂ ಅಲ್ಲಿನ ರಸ್ತೆಗಳ ಮೂಲಕವೇ ನೋಡುತ್ತೇವೆ. ವಿದೇಶದಿಂದ ಬಂದವರು ಆ ದೇಶವನ್ನು ಬಣ್ಣಿಸುವುದು ರಸ್ತೆಗಳ ಮೂಲಕವೇ. ಅವರಮೊದಲ ಉದ್ಗಾರ ‘ಅಲ್ಲಿನ ರಸ್ತೆಗಳನ್ನು ನೋಡಬೇಕು, ಅಬ್ಬಾ ಎಷ್ಟು ಸುಂದರವಾಗಿವೆ ಗೊತ್ತಾ?’ ಎಂದೇ ಆರಂಭವಾಗುತ್ತವೆ. ರಸ್ತೆಗಳಷ್ಟು ಬೇರೆ ಯಾವವೂ ಅಷ್ಟು ಬೇಗನೆ ಆಕರ್ಷಿಸುವುದಿಲ್ಲ. ರಸ್ತೆ ಚೆನ್ನಾಗಿದ್ದರೆ ಆ ದೇಶ ಚೆನ್ನಾಗಿದೆ ಎಂಬ ಅಭಿಪ್ರಾಯಕ್ಕೆ ಬರುತ್ತೇವೆ.
ಅಮೆರಿಕ, ಸಿಂಗಾಪುರ, ಲಂಡನ್, ಪ್ಯಾರಿಸ್ ಸೇರಿದಂತೆ ಹೊರದೇಶಗಳು ನಮ್ಮನ್ನು ಆಕರ್ಷಿಸಲು ಅಲ್ಲಿನ ವಿಶಾಲ, ನುಣುಪು ರಸ್ತೆಗಳು ಕಾರಣ. ರಸ್ತೆಗಳುಹೊಂಡಮುಕ್ತವಾಗಿದ್ದರೆ, ಅಲ್ಲಿನ ಸರಕಾರ ಚೆನ್ನಾಗಿದೆ, ಆಡಳಿತ ದಕ್ಷವಾಗಿದೆ, ಕಂಟ್ರಾಕ್ಟರುಗಳು ಧನದಾಹಿಗಳಲ್ಲ ಎಂಬ ಶರಾ ಬರೆಯುತ್ತೇವೆ. ಅಂದರೆ ಒಂದು ದೇಶ, ಸರಕಾರ, ಸಮಾಜ ಹೇಗಿದೆ ಎಂಬುದನ್ನು ತಿಳಿಯಲು ಅಲ್ಲಿನ ರಸ್ತೆಗಳು ಸಾಕು. ಅಂದರೆ ರಸ್ತೆಗಳೇ ಒಂದು ದೇಶದ ಹಣೆಬರಹ. ಒಳ್ಳೆಯ ರಸ್ತೆಗಳನ್ನು ನಿರ್ಮಿಸದೇ ಸಮೃದ್ಧ ದೇಶ ನಿರ್ಮಿಸಲು ಸಾಧ್ಯವೇ ಇಲ್ಲ. ಈ ಮಾತನ್ನು ಸಾಕ್ಷಾತ್ ನೋಡ ಬೇಕೆಂದರೆ ದಕ್ಷಿಣ ಆಫ್ರಿಕಾವನ್ನು ನೋಡಬೇಕು. ಅದುಮೂವತ್ತು ವರ್ಷಗಳ ಹಿಂದೆ, ಭಾರತಕ್ಕಿಂತ ಹಿಂದುಳಿದ ದೇಶವಾಗಿತ್ತು.
ಅಲ್ಲಿನ ಅದ್ಭುತ ರಸ್ತೆಗಳು ನಮ್ಮ ದೇಶವನ್ನು ಹಿಂದಕ್ಕೆ ಹಾಕಿವೆ. ಇಂದು ಅಭಿವೃದ್ಧಿಯ ರಸ್ತೆ ಯಲ್ಲಿ ದಕ್ಷಿಣ ಆಫ್ರಿಕಾ ಭಾರತಕ್ಕಿಂತ ಕನಿಷ್ಠ ಹತ್ತು ವರ್ಷ ಮುಂದಿದೆ. ಕೇಪ್‌ಟೌನ್ ನಿಂದ ಗುಡ್ ಹೋಪ್ ಭೂಶಿರಕ್ಕೆ ಹೋಗುವ ಹಾದಿಯಲ್ಲಿ ಸಿಗುವ ಚಾಪ್ ಮನ್ ಪೀಕ್ ಡ್ರೈವ್ ರಸ್ತೆಯನ್ನು ಆ ದೇಶ ಅಭಿವೃದ್ಧಿಪಡಿಸಿದ ರೀತಿ ಎಲ್ಲಾ ದೇಶಗಳಿಗೂ ಮಾದರಿ. ಅದು ರಸ್ತೆ ಪ್ರವಾಸೋದ್ಯಮಕ್ಕೆ ಅತ್ಯುತ್ತಮ ನಿದರ್ಶನ. ಚಾಪ್ ಮನ್ ಡ್ರೈವ್ ರಸ್ತೆಯಲ್ಲಿ ಪಯಣಿಸುವುದಕ್ಕಾಗಿಯೇ ಜನ ವಿದೇಶಗಳಿಂದ ಆಗಮಿಸುತ್ತಾರೆ. ನೂರಾರು ಹಾಲಿವುಡ್ ಚಿತ್ರಗಳಿಗೆ ಆ ಐವತ್ತು ಕಿಮಿ ದೂರದ ರಸ್ತೆಯೇ ಶೂಟಿಂಗ್ ಸ್ಪಾಟ. ಆ ರಸ್ತೆಯೇ ಒಂದು ಪ್ರೇಕ್ಷಣೀಯ ತಾಣ.
ಅದೇ ಒಂದು ಆಕರ್ಷಣೆ. ರಸ್ತೆ ತೋರಿಸಿ ಹಣ ಮಾಡುವುದನ್ನು ನೋಡಲು ಅಲ್ಲಿಗೆ ಹೋಗಬೇಕು. ನಾನು ಐದಾರು ವರ್ಷದ ಹಿಂದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೈವೇ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ದಿಲ್ಲಿಯಲ್ಲಿರುವ ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದೆ. ಅವರ ಕಚೇರಿಗೆ ಯಾರೇ ಹೋದರೂ, ಕಣ್ಣಿಗೆಕಾಣುವಂತೆ ಒಂದು ವಾಕ್ಯವನ್ನು ಫ್ರೇಮ್ ಕಟ್ಟಿಸಿ ತೂಗು ಹಾಕಿದ್ದಾರೆ. ಅದರಲ್ಲಿ         .        (ಅಮೆರಿಕ ಶ್ರೀಮಂತವಾಗಿರುವುದರಿಂದ ರಸ್ತೆಗಳು ಉತ್ತಮವಾಗಿಲ್ಲ. ಆದರೆ ಅಮೆರಿಕದ ರಸ್ತೆಗಳು ಉತ್ತಮ ವಾಗಿರುವುದರಿಂದ ಅಮೆರಿಕ ಶ್ರೀಮಂತವಾಗಿದೆ) ಎಂದು ಬರೆದಿದೆ. ಈ ಮಾತನ್ನು ಹೇಳಿದವರು ಅಮೆರಿಕದ ಅಧ್ಯಕ್ಷ ರಾಗಿದ್ದ ಜಾನ್ ಎಫ್.ಕೆನಡಿ. ಎಂಥಾ ಅದ್ಭುತವಾದ ಮಾತು!
ಅಮೆರಿಕ ಶ್ರೀಮಂತವಾಗಿರುವುದಕ್ಕೆ ಆ ದೇಶದ ಅಧ್ಯಕ್ಷನೇ ಬಿಚ್ಚಿಟ್ಟ ರಹಸ್ಯವೆಂದರೆ ಅಲ್ಲಿನ ಉತ್ತಮ ರಸ್ತೆಗಳು! ನಾನು ಕೆಲಹೊತ್ತು ಆ ವಾಕ್ಯವನ್ನೇ ನೋಡುತ್ತಾ ಕುಳಿತಿದ್ದೆ. ಆಗ ಗಡ್ಕರಿ ಅವರು, ‘ಆ ವಾಕ್ಯ ಬಹಳ ಚೆನ್ನಾಗಿ ಇದೆಯಲ್ಲವಾ? ನಿಮಗೂ ಇಷ್ಟವಾಯಿತಾ? ನನ್ನ ಕಾರ್ಯದ ಹಿಂದಿನ ಘೋಷವಾಕ್ಯ, ಸ್ಪೂರ್ತಿ ಆ ಸಾಲುಗಳೇ. ಪ್ರತಿದಿನ ನಾನು ಹತ್ತಾರು ಸಲ ನಾನು ಆ ವಾಕ್ಯವನ್ನು ಓದುತ್ತೇನೆ. ಪ್ರೇರಣೆ ಪಡೆಯುತ್ತೇನೆ. ಉತ್ತಮ ರಸ್ತೆಗಳನ್ನು ನಿರ್ಮಿಸದೇ ನಮ್ಮ ದೇಶ ವನ್ನು ಕೂಡ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ನಾನೂ ಆ ವಾಕ್ಯವನ್ನು ಎಲ್ಲಾ ಓದಿ, ಪ್ರಭಾವಿತನಾಗಿ, ನನ್ನ ಕರ್ಮ ಸಿದ್ಧಾಂತವಾಕ್ಯವನ್ನಾಗಿ ಮಾಡಿಕೊಂಡೆ.’ ಎಂದರು. ಆನಂತರ ಗಡ್ಕರಿ ಅವರ ಅನುಮತಿ ಪಡೆದು ಅದರ ಫೋಟೋ ಕ್ಲಿಕ್ಕಿಸಿದೆ.
‘ಉತ್ತಮ ರಸ್ತೆಗಳನ್ನು ನಿರ್ಮಿಸದೇ ಅಭಿವೃದ್ಧಿ ಹೊಂದಿದ ದೇಶಗಳಿವೆಯಾ ಎಂದು ಬಹಳ ಹುಡುಕಿದೆ. ಒಂದು ದೇಶವೂ ಇಲ್ಲ ಎಂಬುದು ಗೊತ್ತಾಯಿತು. ಇಂಥ ಸರಳ ಸತ್ಯ ಅರಿವಾಗಲು ನಮಗೆ ಇಷ್ಟು ವರ್ಷಗಳು ಬೇಕಾದವು’ ಎಂದು ತಮಾಷೆಯಿಂದ ನಕ್ಕರು. ಅವರ ಮಾತು ಅಪ್ಪಟ ಸತ್ಯ. ಈ ಮಾತಿನ ಮರ್ಮ ಐವತ್ತು ವರ್ಷಗಳ ಹಿಂದೆಯೇ ಮನನವಾಗಿದ್ದಿದ್ದರೆ ನಮ್ಮ ದೇಶ ಹೀಗಿರುತ್ತಿರಲಿಲ್ಲ. ‘ಒಳ್ಳೆಯ ರಸ್ತೆಗಳನ್ನು ನಿರ್ಮಿಸುವ ತನಕ ಅಭಿವೃದ್ಧಿಯ ಪೈಪೋಟಿಯಲ್ಲಿ ಓಡಲು ಆಗುವುದಿಲ್ಲ’ ಎಂಬುದು ಚೀನಾದಲ್ಲಿ ಪ್ರಚಲಿತವಾಗಿರುವ ಮಾತು. ಆ ದೇಶದ ಪ್ರಗತಿಗೂ ಅಲ್ಲಿನ ರಸ್ತೆಗಳೇ ಕಾರಣ. ಇಂದು ಜಗತ್ತಿನಲ್ಲಿಯೇ ಬೆರಗು ಹುಟ್ಟಿಸುವ ಅದ್ಭುತ ಸೇತುವೆಗಳನ್ನು ಚೀನಾ ನಿರ್ಮಿಸಿದೆ.
ಚೀನಾದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿದ್ದೂ ಅಲ್ಲಿನ ರಸ್ತೆಗಳೇ. ‘ನಮಗೆ ಉತ್ತಮ ರಸ್ತೆಗಳ ನಿರ್ಮಾಣ ಒಂದು ರೀತಿಯ ಹುಚ್ಚು. ಅದು ಒಂಥರಾ  ಎಂದು ಚೀನಾದ ಹಿಂದಿನ ಅಧ್ಯಕ್ಷ ಹೂ ಜಿಂಟಾವೋ ಹೇಳಿದ್ದ. ಇಂದು ಆ ದೇಶ ಭೂಮಿಯ ಮೇಲಲ್ಲ, ಗಾಳಿಯಲ್ಲಿ, ನೀರಿನಲ್ಲಿ ರಸ್ತೆ ನಿರ್ಮಿಸುತ್ತಾ ಹೊರಟಿದೆ. ರಸ್ತೆಯ ಬಗ್ಗೆ ನಮ್ಮ ಧೋರಣೆ ಇನ್ನೂ ಬದಲಾಗಿಲ್ಲ. ನಮಗಿನ್ನೂ ಒಳ್ಳೆಯ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ. ಪ್ರತಿ ವರ್ಷ ಮತ್ತು ವರ್ಷದಲ್ಲಿ ಎರಡು ಸಲ ಕಟ್ಟಿದ ರಸ್ತೆಯನ್ನೇ ಕಟ್ಟುತ್ತಿರುತ್ತೇವೆ.
ರಾಜಕಾರಣಿಗಳಿಗೆ, ಗುತ್ತಿಗೆ ದಾರರಿಗೆ ರಸ್ತೆಯೆಂದರೆ ಬಹಳ ಪ್ರೀತಿ. ಅವರು ಹಣದ ಜತೆಗೆ ರಸ್ತೆಯನ್ನೂ ತಿಂದುಬಿಡುತ್ತಾರೆ. ಅಶೋಕನ ಕಾಲದಲ್ಲಿಯೇ ಬೃಹದ್ಭವ್ಯ ರಸ್ತೆಯ ಕನಸನ್ನು ಕಂಡ ದೇಶವಿದು. ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವನ್ನು ಸೇರಿಸುವ ಗ್ರಾಂಡ್ ಟ್ರಂಕ್ ರಸ್ತೆ ನಿರ್ಮಾಣ ಅಂದೇ ಸಾಕಾರವಾಗಿತ್ತು. ಮೂರು ಸಾವಿರ ಏಳುನೂರು ಕಿಮಿ ಉದ್ದದ ಈ ರಸ್ತೆಯ ಕನಸನ್ನು ಆನಂತರ ಬಂದ (ಇಲ್ಲಿ ಶೇರ್ ಶಾಹ್ ಸೂರಿಯನ್ನು ನೆನಪಿಸಿ ಕೊಳ್ಳಬೇಕು) ಹಲವು ರಾಜರು ಸಾಕಾರಗೊಳಿಸಿದರು.
ಅದೇ ರಸ್ತೆಯಲ್ಲಿ ನಾವು ಚಲಿಸಿದ್ದೇ ಆಗಿದ್ದರೆ ಭಾರತದ ಚಿತ್ರಣವೇ ಬದಲಾಗುತ್ತಿತ್ತು. (ನಮಗಿನ್ನೂ ಸಿಲ್ಕ ಬೋರ್ಡ್ ಜಂಕ್ಷನ್ ಬಳಿ ರಸ್ತೆ ಸಮಸ್ಯೆಗೆ ಉತ್ತರ ಕಂಡುಹಿಡಿಯುವುದು ಸಾಧ್ಯವಾಗಿಲ್ಲ.) ವಾಜಪೇಯಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ನಿರ್ಮಿಸಿದ ಸುವರ್ಣ ಚತುಷ್ಪಥ ರಸ್ತೆ ಭಾರತದ ಭವಿಷ್ಯ ಬದಲಿಸಿದ ಪಥ. ‘ಕೆಲವರು ರಸ್ತೆಗಳಿದ್ದ ಹಾಗೆ. ಅವರು ನಿಮ್ಮ ಜತೆ ಇರದಿದ್ದರೂ ನೀವು ಊರು ತಲುಪಲು ಸಂಗಾತಿಗಳಾಗಿರುತ್ತಾರೆ’ ಎಂಬ ಮಾತು ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ.
ಇಂಗ್ಲಿಷ್ ಕವಿಯೊಬ್ಬ ರಸ್ತೆಯಲ್ಲಿ ಜೀವಿಸುವ ಆನಂದದ ಬಗ್ಗೆ      ,               unwindಎಂದು ಹೇಳಿದ್ದಾನೆ. ಅಂಥ ಸಾಂತ್ವನವನ್ನು ರಸ್ತೆಗಳೂ ಕೊಡಬಹುದು. ನಿಮ್ಮ ಮುಂದೆ ರಸ್ತೆ ಇದ್ದರೆ ಭವಿಷ್ಯವಿದೆ ಅನ್ನೋದಂತೂ ಸತ್ಯ.