ಮಳೆನೀರು ಮಣ್ಣು ಮತ್ತು ಮನುಕುಲಕ್ಕೆ ಅಮೃತ ಸಮಾನ
ಅಭಿಪ್ರಾಯ
ಬಸವರಾಜ ಶಿವಪ್ಪ ಶಿರಗಾಂವಿ
ರಾಜ್ಯಾದ್ಯಂತ ಮಳೆರಾಯನ ಆಗಮನವಾಗುತ್ತಿದ್ದು, ಬರದ ಕರಿನೆರಳಿನಿಂದ ಕಂಗೆಟ್ಟಿದ್ದ ಜನತೆಯು ನಿಟ್ಟುಸಿರು ಬಿಡುವಂತಾಗಿದೆ. ತೊಂಬತ್ತರ ದಶಕಗಳಾಚೆ ಬರಗಾಲವು ಶತಮಾನದಲ್ಲಿ ಮೂರ‍್ನಾಲ್ಕು ಸಲ ತಲೆದೋರುತ್ತಿತ್ತು. ಆದರೆ ಇಂದು ಬರಗಾಲವು ಮೂರ‍್ನಾಲ್ಕು ವರ್ಷಗಳಿಗೊಮ್ಮೆ ಬರುತ್ತಿರುವ ನೈಸರ್ಗಿಕ ವಿಕೋಪವಾಗಿದೆ. ಕಾರಣ, ಅತಿಯಾಸೆಗಾಗಿ ಹೆಚ್ಚುತ್ತಿರುವ ನಿಸರ್ಗ ವಿರೋಧಿ ಚಟುವಟಿಕೆಗಳು ಮತ್ತು ಮಳೆನೀರನ್ನು ಸಂಪೂರ್ಣವಾಗಿ ಬಳಸಿಕೊಳ್ಳದಿರುವುದು.ನಿರೀಕ್ಷೆಯಂತೆ ಮಳೆಯಾಗಬೇಕಾದರೆ, ನೈಸರ್ಗಿಕವಾಗಿ ಬೆಳೆಯುತ್ತಿರುವ ಕಾಡು, ಪರ್ವತ, ಗುಡ್ಡ, ಗಿಡ-ಮರಗಳು ಕಾರಣಗಳಾಗಿವೆ.
ಆದರೆ ಭಾರತ ಸೇರಿದಂತೆ ವಿಶ್ವದ ಬಹುತೇಕ ಭಾಗಗಳಲ್ಲಿ ಸ್ವಾರ್ಥಕ್ಕಾಗಿ ನಿಸರ್ಗದ ಚಿತ್ರಣವನ್ನೇ ಬದಲಾಯಿಸಲಾಗುತ್ತಿದೆ. ಇದರಿಂದಲೆ ಬರಗಾಲಗಳು ಮೇಲಿಂದ ಮೇಲೆ ಬರುತ್ತಿರುವುದು ಸುಳ್ಳೇನಲ್ಲ. ಚೀನಾ, ಕ್ಯಾಲಿಫೋರ್ನಿಯಾ ಮತ್ತು ನೆರೆಯ ಶ್ರೀಲಂಕಾಗಳಲ್ಲಿ ಮಳೆ ಬೀಳುವ ದಿನಗಳು ತಿಂಗಳುಗಟ್ಟಲೆ ಮುಂಚಿತವಾಗಿಯೇ ತಿಳಿಯುತ್ತವೆ, ಇದಕ್ಕೆ ಅಲ್ಲಿ ಬೆಳೆದಿರುವ ಸಮೃದ್ಧವಾದ ಕಾಡು ಕಾರಣವಾಗಿದೆಯಲ್ಲದೆ ಅಲ್ಲಿರುವ ಗಿಡ-ಮರಗಳನ್ನು ಕಡಿದರೆ ಕಠಿಣ ಶಿಕ್ಷೆಯನ್ನು ವಿಧಿ ಸಲಾಗುತ್ತದೆ. ಇದರಿಂದಾಗಿ ಅಲ್ಲಿ ಗಿಡ-ಮರಗಳನ್ನು ಕಡಿಯುವುದು ಒತ್ತಟ್ಟಿಗಿರಲಿ ಅವುಗಳನ್ನು ಯಾರೂ ಮುಟ್ಟುವುದಿಲ್ಲ. ಇದರಿಂದ ಮಣ್ಣು ಫಲವತ್ತತೆಯಾಗಿ ಕೃಷಿಯ ನಿರೀಕ್ಷಿತ ಇಳುವರಿಗೆ ಸಹಕಾರಿಯಾಗುತ್ತದೆ. ಈ ದೇಶಗಳಲ್ಲಿ ಋತುಮಾನಗಳು ಬದಲಾದಂತೆ ಪ್ರತಿದಿನ ವಾತಾವರಣದಲ್ಲಿ ಹೆಚ್ಚುತ್ತಿರುವ ಆರ್ಧ್ರತೆ, ತೇವಾಂಶ, ಗಾಳಿ ಮತ್ತು ತಾಪಮಾನಗಳು ಮಳೆ ಬೀಳುವ ದಿನಾಂಕವನ್ನು ಗುರುತಿಸುವಲ್ಲಿ ಸಹಕಾರಿಯಾಗುತ್ತವೆ.
ಸಮಶೀತೋಷ್ಣ ವಲಯದಲ್ಲಿರುವ ಭಾರತವು ಕಳೆದ ಶತಮಾನಗಳಾಚೆ ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿತ್ತು. ಕಳೆದ ಶತಮಾನದಿಂದ ಇಂದಿನವರೆಗೆ ಅರಣ್ಯ ಮತ್ತು ಪರಿಸರ ನಾಶದಂತಹ ಪ್ರಮುಖ ನೈಸರ್ಗಿಕ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿವೆ. ಇದರಿಂದಾಗಿ ಭಾರತದಲ್ಲಿ ಅತೀವೃಷ್ಠಿ ಮತ್ತು ಅನಾವೃಷ್ಠಿಗಳಂತಹ ನೈಸರ್ಗಿಕ ವಿಕೋಪಗಳು ಪ್ರತಿವರ್ಷ ಸಂಭವಿಸುತ್ತಿವೆ. ಬರಗಾಲಕ್ಕೆ ಅರಣ್ಯ ಮತ್ತು ಪರಿಸರ ನಾಶವು ಒಂದಡೆಯಾದರೆ, ಬಿದ್ದ ಮಳೆ ನೀರನ್ನು ಸಂರಕ್ಷಿಸದಿರುವುದು ಮತ್ತೊಂದು ಕಾರಣವಾಗಿದೆ. ಇದರಿಂದ ಅಂತರ್ಜಲಮಟ್ಟ ಕುಸಿಯುತ್ತಿದೆ. ಮುಂದುವರೆದ ದೇಶಗಳು ಒಂದು ತೊಟ್ಟು ಮಳೆ ನೀರನ್ನು ಹಾನಿಗೊಳಿಸದೆ ಮಳೆನೀರು ಕೊಯ್ಲು ಮತ್ತು ಪರಿಸರ ಸಂರಕ್ಷಣೆಗೆ ಒತ್ತುಕೊಟ್ಟಿರುವ ಪರಿಣಾಮ ಅಲ್ಲಿರುವ ಜೀವಸಂಕುಲದ ಬದುಕು ಆರೋಗ್ಯಕರ ವಾಗಿವೆ.
ಮಳೆ ನೀರು ಭಗವಂತನ ಆಶೀರ್ವಾದದಿಂದ ಲಭಿಸಿರುವ ಭಟ್ಟಿ ಇಳಿಸಿದ ನೀರಿನಂತೆ ಪರಿಶುದ್ಧ ನೀರಾಗಿದೆ. ಇದರಲ್ಲಿರುವ ಖನಿಜಾಂಶಗಳು, ಲವಣಾಂಶಗಳು ಮಣ್ಣು ಮತ್ತು ಮನುಕುಲದ ಆರೋಗ್ಯಕ್ಕೆ ಸೂಕ್ತವಾಗಿವೆ. ಪ್ರೋರೈಡ್ ಮತ್ತು ಕ್ಲೋರಿನ್‌ರಹಿತ ನೀರು ಮತ್ತು ಪಿಎಚ್ ಕ್ಷಾರೀಯವಾಗಿರುವುದರಿಂದ ಜೀರ್ಣಾಂಗ ವ್ಯೂಹದ ಆರೋಗ್ಯಕ್ಕೆ ಮತ್ತು ದೇಹದ ಶುದ್ಧೀಕರಣಕ್ಕೆ ಸೂಕ್ತವಾಗಿದೆ. ಮೊದಲ ಮುಂಗಾರಿನ ಮಳೆಯು ಕ್ಯಾನ್ಸ್‌ರ್ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಮಳೆನೀರಿನ ಶುದ್ಧತೆ ಎಷ್ಟಿದೆಯೆಂದರೆ, ಮುಗಿಲ ಮೇಲಿರುವ ಮೋಡಗಳಲ್ಲಿಯೇ ಕಪ್ಪೆ ಮತ್ತು ಹಾವುಗಳಂತಹ ಜೀವಿಗಳು ಹುಟ್ಟಿ ಬೆಳೆದು ಮಳೆಯೊಂದಿಗೆಭೂಮಿಗೆ ಬಂದು ಬದುಕುತ್ತವೆ. ಹಿಂದೆ ಮಳೆನೀರಿನಲ್ಲಿ ಮಕ್ಕಳು ಆಟವಾಡುತ್ತಲೆ ಬೆಳೆದು ಆರೋಗ್ಯವಂತರಾಗಿದ್ದರು. ಮಳೆನೀರಿನಲ್ಲಿ ನೆನೆದರೆ ಆರೋಗ್ಯಪ್ರಾಪ್ತಿ ಯೊಂದಿಗೆ ಪುಣ್ಯಪ್ರಾಪ್ತಿಯು ಲಭಿಸುತ್ತದೆ ಎಂಬ ಪ್ರತೀತಿಯಿದೆ.
ಭಾರತದಲ್ಲಿ ಮಳೆಯು ಅನಿಶ್ಚಿತವಾಗಿದೆ. ಆದ್ದರಿಂದ ಬಿದ್ದ ಮಳೆನೀರನ್ನು ಹಿಡಿದಿಟ್ಟುಕೊಂಡು ವರ್ಷಾನುಗಟ್ಟಲೆ ಬಳಸುವಂತಾಗಬೇಕು. ಅದಕ್ಕಾಗಿ ಓಡುವ ಮಳೆ ನೀರನ್ನು ನಡೆಯುವಂತೆ ಮಾಡುವುದು, ನಡೆಯುವ ಮಳೆನೀರನ್ನು ನಿಲ್ಲುವಂತೆ ಮಾಡುವುದು ಮತ್ತು ನಿಂತ ಮಳೆನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡುವುದು. ಇದರಿಂದ ಭೂಮಿಯೊಳಗೆ ಶುದ್ಧವಾದ ನೀರಿನ ಅಣೆಕಟ್ಟನ್ನು ನಿರ್ಮಿಸಿದಂತಾಗುತ್ತದೆ. ಇದಕ್ಕಾಗಿ ಅಲ್ಲಲ್ಲಿ ವೈಜ್ಞಾನಿಕವಾದ ಇಂಗುಗುಂಡಿ ಮತ್ತು ಚೆಕ್‌ಡ್ಯಾಮ್‌ಗಳನ್ನು ನಿರ್ಮಿಸಬೇಕು. ಇದರೊಂದಿಗೆ ಪರಿಸರಪ್ರಜ್ಞೆ ಮತ್ತು ಗಿಡ-ಮರಗಳನ್ನು ಬೆಳೆಸುವ ಪರಿಜ್ಞಾನವು ಪ್ರತಿಯೊಬ್ಬರಲ್ಲಿ ಬೆಳೆಯಬೇಕು.
ಹಿಂದಿನ ಕಾಲದಲ್ಲಿ ಕಾಲ್ನಡಿಗೆಯ ಸಂಚಾರವಿತ್ತು, ಆಗ ಮಾರ್ಗಮಧ್ಯದಲ್ಲಿ ವಿಶ್ರಾಂತಿಗಾಗಿ ಗಿಡ-ಮರಗಳನ್ನು ಬೆಳೆಸಲಾಗುತ್ತಿತ್ತು. ಆದರೆ ಇಂದು ವಾಹನಸಂಚಾರವಿರುವುದರಿಂದ ಮಾರ್ಗಮಧ್ಯದಲ್ಲಿ ವಿಶ್ರಾಂತಿಯ ಅವಶ್ಯಕತೆಯಿಲ್ಲ. ಹೀಗಾಗಿ ಮಾರ್ಗಮಧ್ಯದಲ್ಲಿ ಗಿಡ-ಮರಗಳ ಬೆಳೆಸುವಿಕೆಗೆ ಪ್ರಯತ್ನಿಸದಿರುವುದುದುರಂತ. ಮಳೆನೀರಿನ ಸಂರಕ್ಷಣೆಯಾಗದಿದ್ದಲ್ಲಿ ನೀರಿಗಾಗಿ ಸಾವು, ನೋವು ಮತ್ತು ಯುದ್ಧಗಳು ಸಂಭವಿಸಿದರೂ ಅಚ್ಚರಿಪಡಬೇಕಿಲ್ಲ. ಹಿಂದೆ ನಮ್ಮ ಪೂರ್ವಜರ ಕಾಲಘಟ್ಟದಲ್ಲಿ ಕೆರೆ, ಭಾಂವಿ, ನದಿ, ಹಳ್ಳ-ಕೊಳ್ಳಗಳಲ್ಲಿರುವ ಪರಿಶುದ್ಧ ನೀರನ್ನು ಉಚಿತವಾಗಿ ಬಳಸುತ್ತಿದ್ದರು.
ಇಂದು ಪರಿಸರವು ಕಲುಷಿತಗೊಂಡ ಪರಿಣಾಮ ಶುದ್ಧೀಕರಣಗೊಳಿಸಿದ ನೀರನ್ನು ಹಣ ಕೊಟ್ಟು ಖರೀದಿಸಿ ಬಳಸಲಾಗುತ್ತಿದೆ. ಭವಿಷ್ಯದಲ್ಲಿ ನೀರಿಗಾಗಿಇನ್ನಾವ ಪರಿಸ್ಥಿತಿ ತಲೆದೋರುತ್ತದೆಯೋ ದೇವನೆ ಬಲ್ಲ. ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಮಳೆನೀರನ್ನು ಇಂಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
(ಲೇಖಕರು: ಕೃಷಿ ತಜ್ಞರು ಹಾಗೂ ಸಹಾಯಕ ಮಹಾಪ್ರಬಂಧಕರು-ಕೃಷಿ ವಿಭಾಗ)