ಪಂಚ್ ಮಾಸ್ಟರ್ ಪ್ರಾಣೇಶ್
ಎಂ.ಎಸ್. ನರಸಿಂಹಮೂರ್ತಿ
ಹಲವು ವರ್ಷಗಳ ಹಿಂದಿನ ಮಾತು. ಮಲ್ಲೇಶ್ವರದಲ್ಲಿ ಬೃಹತ್ ನಗೆಹಬ್ಬ ಕಾರ್ಯಕ್ರಮ ಆಯೋಜನೆ ಆಗಿತ್ತು. ಒಟ್ಟು ಆರು ನಗೆಗಾರರು ಮಾತಾಡುವವರಿದ್ದರು. ಒಬ್ಬೊಬ್ಬರಾಗಿ ಬಂದು ವೇದಿಕೆ ಮೇಲೆ ಕುಳಿತರು. ಕಡೆಯಲ್ಲಿ ಬಂದಿದ್ದು ಪ್ರಾಣೇಶ್. ಪ್ರಾಣೇಶ್ ವೇದಿಕೆಗೆ ಬಂದ ಕೂಡಲೇ ಜನಸ್ತೋಮ ‘ಹೋ ಎಂದು ಉದ್ಗಾರ ಕೂಗಿ ಚಪ್ಪಾಳೆ ಹೊಡೆದಿದ್ದು ಇನ್ನೂ ಕಣ್ಮುಂದೆ ಹಾಗೇ ಇದೆ. ಚಿತ್ರ ನಟ ಬಂದಾಗ ಸಭಿಕರಿಗೆ ಆಗುವ ಸಂಚಲನದಂತೆ ಆ ದೃಶ್ಯವಿತ್ತು. ಹಾಸ್ಯ ಭಾಷಣಕಾರನನ್ನು ಮೊದಮೊದಲುಜೋಕರ್ ಎಂಬಂತೆ ಕಾಣುತ್ತಿದ್ದರು. ಆದರೆ ಹಾಸ್ಯಕ್ಕೆ ತನ್ನದೇ ಆದ ಒಂದು ಗೌರವದ ಸ್ಥಾನ ದೊರಕಿ,  ಹಾಸ್ಯ ಎಂಬುದು ಸಾಹಿತ್ಯದ ಒಂದು ಮುಖ್ಯ ಪ್ರಕಾರ ಎಂದು ಜನ ಗುರುತಿಸುವಂತೆ ಬದಲಾವಣೆ ಆಗಲು ಹತ್ತಾರು ವರ್ಷ ಬೇಕಾಯಿತು.
ಪ್ರಾಣೇಶ್ ಸಕ್ರಿಯವಾಗಿ ಹಾಸ್ಯ ಕಾರ್ಯಕ್ರಮಗಳಿಗೆ ಇಳಿದ ಮೇಲೆ ನಗೆಹಬ್ಬಗಳಿಗೆ ಬಹುದೊಡ್ಡ ವೇದಿಕೆ ಸಿಕ್ಕಿತ್ತು. ಪ್ರತಿ ನಿತ್ಯ ಒಂದಲ್ಲ ಒಂದು ಕಡೆ ಹಾಸ್ಯ ಕಾರ್ಯಕ್ರಮ ನಡೆಯಲು ಪ್ರಾರಂಭವಾಯಿತು. ಉತ್ತರ ಕರ್ನಾಟಕದ ಪ್ರತಿ ತಾಲ್ಲೂಕಿನಲ್ಲೂ ಹಾಸ್ಯ ಭಾಷಣಕಾರರು ಹುಟ್ಟಿಕೊಂಡರು. ಹಾಸ್ಯವು ಬದುಕಿಗೆ ಆಶ್ರಯ ನೀಡುವ ಸಂಜೀವಿನಿ ಆಯಿತು. ಹಾಸ್ಯ ಕಲಾವಿದರು ಉತ್ತಮ ಸಂಭಾವನೆ ಪಡೆಯುವಂತಾಗಲು ಪ್ರಾಣೇಶ್ ಮುಖ್ಯ ಕಾರಣ ಎಂದರೆ ತಪ್ಪಾಗಲಾರದು.
‘ನಗೆಹಬ್ಬದಲ್ಲಿ ಸಾಮಾನ್ಯವಾಗಿ ಮೂರರಿಂದ ನಾಲ್ಕು ಮಂದಿ ತಮ್ಮದೇ ಆದ ತಂಡ ಕಟ್ಟಿಕೊಂಡು ಹಾಸ್ಯವನ್ನು ಪ್ರಸ್ತುತ ಪಡಿಸುತ್ತಾರೆ. 1970-80ರ ದಶಕದಲ್ಲಿ ಹಾಸ್ಯ ಭಾಷಣಗಳಿಗಾಗಿ ಒಂದು ಜನಪ್ರಿಯ ತಂಡ ಇತ್ತು. ಹ್ಯೂಮರ್ ಕ್ಲಬ್‌ನ ವೈ.ಎಂ.ಎನ್. ಮೂರ್ತಿ, ಡಾ. ಎಂ.ಹೆಚ್. ಶ್ರೀಕಂಠಯ್ಯ, ಪ್ರೊ. ವಿ.ಕೆ. ದೊರೆಸ್ವಾಮಿ ಮತ್ತು ನಾನು ತಂಡದಲ್ಲಿದ್ದೆೆವು. ಒಬ್ಬರು ಮಾತಾಡಿದಂತೆ ಮತ್ತೊಬ್ಬರು ಮಾತಾಡುತ್ತಿರಲಿಲ್ಲ. ಇಂಗ್ಲೀಷ್ ಪದಗಳು ಬೆರೆತ ಸೌಮ್ಯವಾದ ಜೋಕುಗಳು ವೈ. ಎಂ.ಎನ್. ಪಂಚ್ ಆದರೆ ವೈದ್ಯಕೀಯ ರಂಗಕ್ಕೆ ಸಂಬಂಧಪಟ್ಟಂತೆ ಡಾ. ಶ್ರೀಕಂಠಯ್ಯ ಮಾತಾಡುತ್ತಿದ್ದರು. ಪ್ರೊ. ವಿ.ಕೆ. ದೊರೆಸ್ವಾಮಿ ಯವರದು ಗಣಿತಕ್ಕೆ ಸಂಬಂಧಪಟ್ಟ ಜೋಕುಗಳು. ನನ್ನದು ಬ್ಯಾಾಂಕಿಗೆ ಸಂಬಂಧಪಟ್ಟ ನಗೆ ಪ್ರಸಂಗಗಳು.
ಸಭಿಕರು ವೈವಿಧ್ಯವನ್ನು ಬಯಸುತ್ತಾರೆ. ತಂಡದ ಹಾಗೇ ಕಲ್ಪನೆ ಮುಂದುವರೆಯಿತು. ಪ್ರಾಣೇಶ್ ಟ್ರೂಪಿನಲ್ಲಿ ಸಾಮಾನ್ಯವಾಗಿಮೂವರು ಕಲಾವಿದರು ಇರುತ್ತಾರೆ. ಅದರಲ್ಲಿ ಮಿಮಿಕ್ರಿ ಮತ್ತು ಹಾಡುಗಳಿಗಾಗಿ ನರಸಿಂಹ ಜೋಷಿ, ಶುದ್ಧವಾದ ಹಾಸ್ಯ ಚಟಾಕಿಗಳಿಗೆ ಬಸವರಾಜ ಮಹಾಮನಿ, ಹಾಸ್ಯದ ಜೊತೆಗೆ ಗಹನವಾದ ವಿಚಾರವನ್ನು ಉತ್ತಮ ಮೆಸೇಜ್‌ಗಳನ್ನು ಪ್ರಸ್ತುತಪಡಿಸಲು ಪ್ರಾಣೇಶ್ ಕಡೆಯ ಭಾಷಣಕಾರರಾಗಿ ರಂಜಿಸುತ್ತಾರೆ. ಪ್ರಾಣೇಶ್ ಅವರ ಈ ತ್ರಿಮೂರ್ತಿಗಳ ತಂಡ ಸುತ್ತಾಡದ ಊರುಗಳಿಲ್ಲ, ಭೇಟಿ ನೀಡದ ದೇಶಗಳಿಲ್ಲ. ಜನ ಸೇರುವ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿ ಹಾಸ್ಯ ಇರಲೇಬೇಕು.ಕೆಲವೊಮ್ಮೆ ಜನರನ್ನು ಸೇರಿಸಲು ರಾಜಕಾರಣಿಗಳು ಹಾಸ್ಯ ಕಲಾವಿದರನ್ನು ಕರೆಸಿದ್ದುಂಟು.
ಪ್ರಾರಂಭದ ದಿನಗಳಲ್ಲಿ ಪ್ರಾಣೇಶ್ ಬೀಚಿಯವರ ಫೋಟೋವನ್ನು ಸಭೆಗೆ ತರುತ್ತಿದ್ದರು. ಸಭಿಕರಿಗೆ ಫೋಟೋ ತೋರಿಸಿ ‘ಗಂಗಾ ವತಿ ಬೀಚಿ ನಾನಲ್ಲ, ಬೀಚಿ ಇವರು, ನಾನು ಇವರ ಶಿಷ್ಯ ಪ್ರಾಣೇಶ್’ ಎಂದು ತಮ್ಮನ್ನು ಪರಿಚಯಿಸಿಕೊಳ್ಳುತ್ತಿದ್ದರು. ಇದು ಸುಮಾರು 10 ವರ್ಷಗಳ ಕಾಲ ನಡೆದಿರಬೇಕು. ಬರಬರುತ್ತಾ ಪ್ರಾಣೇಶ್ ಎಷ್ಟು ಜನಪ್ರಿಯ ಆದರು ಎಂದರೆ ಅವರು ಫೋಟೋ ತೋರಿಸುವುದನ್ನು ಬಿಟ್ಟರು. ಗಂಗಾವತಿ ಪ್ರಾಣೇಶ್ ಎಂಬ ಹೆಸರು ಮನೆ ಮಾತಾಯಿತು.
ಇಂಥ ಅದ್ಭುತ ಬದಲಾವಣೆಗೆ ಪ್ರಾಣೇಶ್ ನಡೆದು ಬಂದ ಹಾದಿ ಕಷ್ಟಕರವಾಗಿತ್ತು. ಊರು ಕೇರಿಗಳನ್ನು ಅಲೆದು ತಾವು ನಿದ್ದೆೆಗೆಟ್ಟು, ನಿದ್ದೆೆ ಮಾಡುವ ಜನರನ್ನು ಎಬ್ಬಿಸಿ ನಗಿಸುವ ಮೂಲಕ ಹಾಸ್ಯಪ್ರಿಯರಿಗೆ ಹತ್ತಿರವಾದರು. ಟಿವಿ,  ವಾರ್ತಾವಾಹಿನಿ ಗಳಲ್ಲಿ ಶನಿವಾರ, ಭಾನುವಾರ ಪ್ರಾಣೇಶ್ ಭಾಷಣಗಳು ಇಲ್ಲದ ದಿನವೇ ಇಲ್ಲ ಎಂಬಂತಾಯಿತು.***
ಪ್ರಾಣೇಶ್ ಅವರ ಜೊತೆ ನೂರಾರು ಕಡೆ ನಾನು ವೇದಿಕೆಗಳನ್ನು ಹಂಚಿಕೊಂಡಿದ್ದೇನೆ. ನನ್ನದು ಮೊದಲ ಮಾತಾದರೆ ಪ್ರಾಣೇಶ್ ಅವರದು ಕ್ಲೈಮ್ಯಾಕ್‌ಸ್‌ ಭಾಷಣ ಆಗಿರುತ್ತದೆ. ಜನ ಕಾಯುವುದು ಅವರ ಭಾಷಣಗಳಿಗಾಗಿ ಎಂದು ಎಲ್ಲರಿಗೂ ಗೊತ್ತು. ಉತ್ತರ ಕರ್ನಾಟಕದ ಕಡೆ ಜೋಕುಗಳು ಪಂಚ್ ಆಗುವಷ್ಟು ಬಯಲು ಸೀಮೆಯಲ್ಲಿ ಆಗುವುದಿಲ್ಲ. ಜೋಕುಗಳಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಗಹಗಹಿಸಿ ನಕ್ಕರೆ ದಕ್ಷಿಣ ಕರ್ನಾಟಕದಲ್ಲಿ ಮುಗುಳ್ನಗೆ ಇರುತ್ತದೆ.
ಇದು ಮೊದಲ ಬಾರಿಗೆ ಪ್ರಾಣೇಶ್‌ಗೆ ಅನುಭವಕ್ಕೆ ಬಂದಿದ್ದು ಮಂಗಳೂರಿನ ಒಂದು ಪ್ರತಿಷ್ಠಿತ ಕಾರ್ಯಕ್ರಮದಲ್ಲಿ. ಅರ್ಧ ಗಂಟೆಮಾತಾಡಲು ನಾನು ಅವರನ್ನು ಒಪ್ಪಿಸಿ ಪ್ರಾರಂಭ ನಾನೇ ಮಾಡಿಕೊಟ್ಟೆೆ.. 20 ನಿಮಿಷದಲ್ಲೇ ಪ್ರಾಣೇಶ್ ತಮ್ಮ ಮಾತನ್ನು ಮುಗಿಸಿದರು. ಅಬ್ಬರದ ನಗು ಸಭೆಯಲ್ಲಿ ಇರಲಿಲ್ಲ. ಇದಕ್ಕೆೆ ಕಾರಣ ಎರಡು ರೀತಿಯದ್ದಾಗಿತ್ತು. ಉತ್ತರ ಕರ್ನಾಟಕದ ಭಾಷೆ ಮಂಗಳೂರಿನ ಜನಕ್ಕೆೆ ಅರ್ಥ ಆಗುವುದಿಲ್ಲ.
ಯಕ್ಷಗಾನ ಶೈಲಿಯಲ್ಲಿ ಹಾಸ್ಯ ಕಂಡಿರುವ ಅವರಿಗೆ ನಗೆಹಬ್ಬದ ರೀತಿಯ ಹಾಸ್ಯ ಕಚಗುಳಿ ನೀಡುವುದಿಲ್ಲ. ಆದರೆ ಅವರು ಮನದಲ್ಲೇ ಆನಂದಿಸುತ್ತಾರೆ. ಹಾಸ್ಯ ಕಾರ್ಯಕ್ರಮಗಳಿಗೆ ಬರುತ್ತಾರೆ. ಆದರೆ ಉತ್ತರ ಕರ್ನಾಟಕ ಹಾಸ್ಯ ರಸ ಸ್ವಾದನೆಗೆ ಹೇಳಿ ಮಾಡಿಸಿದ ಪ್ರದೇಶ. ‘ಮಹನೀಯರೇ, ಮಹಿಳೆಯರೇ’ ಅಂದರೂ ಜನ ನಗುತ್ತಾರೆ. ಮತ್ತೊಮ್ಮೆ ‘ಮಹಿಳೆಯರೇ’ ಅಂದರೆ ಇನ್ನೂ ಜೋರಾಗಿ ನಗುತ್ತಾರೆ. ಮನರಂಜನೆ ಬಯಸಿ ನಗಲು ಬಂದ ಸಭಿಕರನ್ನು ಹಾಸ್ಯ ಲೋಕಕ್ಕೆ ಕರೆದೊಯ್ಯುವುದು ಇಲ್ಲಿ ಸುಲಭ.
ನಗೆಗೆ ತಕರಾರು ಮಾಡುವ ಸಭಿಕರಿರುವ ಹಲವು ಸಭೆಗಳಿಗೂ ನಾವು ಹೋಗಿದ್ದೇವೆ. ಮದುವೆ ಮನೆ ಅಥವಾ ರಿಸೆಪ್ಷನ್‌ಗಳಲ್ಲಿ ನಗೆಹಬ್ಬ ಆಯೋಜಿಸುತ್ತಾರೆ. ಮದುವೆಗಾಗಿ ಬಂದಿರುವವರು ಹಾಸ್ಯವನ್ನು ಅಲ್ಲಿ ಪ್ರೀತಿಸುವುದಿಲ್ಲ. ಆಶ್ಚರ್ಯವೆಂದರೆ ಅಂತಹ ಸಭೆಗಳಲ್ಲಿಯೂ ಪ್ರಾಣೇಶ್ ಅವರು ಹೇಗೋ ಗಿಟ್ಟಿಸಿಕೊಂಡು ಚಪ್ಪಾಳೆ ಕುಟ್ಟಿಸಿಕೊಳ್ಳುತ್ತಾರೆ. ಪ್ರಾಣೇಶ್ ಅವರ ಮಾತಿನಲ್ಲಿ ಉತ್ತಮ ಮೆಸೇಜ್ ‘ಅಂತರಗಂಗೆ’ಯಂತೆ ಹರಿಯುವುದು ಸಾಮಾನ್ಯ.
ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸರ್ಕಾರ ಆಗಾಗ ಹೇಳುತ್ತಲೇ ಬಂದಿದೆ. ಈ ಬಗ್ಗೆೆ ಪ್ರಾಣೇಶ್ ನೀಡಿದ ಪಂಚು ಅದ್ಭುತವಾಗಿತ್ತು : ‘ಸರ್ಕಾರವು ಕನ್ನಡ ಶಾಲೆಗಳನ್ನು ಮುಚ್ಚಲು ಸಾಧ್ಯ ಇಲ್ಲ. ಏಕೆಂದರೆ ಇಂದು ದುಃಸ್ಥಿತಿಯಲ್ಲಿರುವ ಕೆಲವು ಕನ್ನಡ ಶಾಲೆಗಳಿಗೆ ಕಿಟಕಿ, ಬಾಗಿಲುಗಳೇ ಇಲ್ಲ. ಇವುಗಳನ್ನು ಹೇಗೆ ಮುಚ್ಚಲು ಸಾಧ್ಯ?’ ಕಾನ್ವೆೆಂಟ್ ಶಾಲೆಯ ವಿದ್ಯಾರ್ಥಿಗಿಂತಲೂ ಸರ್ಕಾರಿ ಶಾಲೆಯಲ್ಲಿ ಓದಿದವನೇ ಹೆಚ್ಚು ಜಾಣ ಮತ್ತು ಪ್ರಾಪಂಚಿಕ ಜ್ಞಾನ ಅರಿತವನು ಎಂದು ಪ್ರಾಣೇಶ್ ಸದಾ ಹೇಳುತ್ತಾರೆ. ಅವರು ಕೊಡುವ ಉದಾಹರಣೆಗಳೂ ಸಹ ಮನಸ್ಸಿನಲ್ಲಿ ಉಳಿದು ಬಿಡುತ್ತದೆ. ಪಿ.ಯು.ಸಿ.ಗೆ ಬರುವ ವೇಳೆಗೆ ಹುಡುಗರಲ್ಲಿ ಪ್ರೀತಿ, ಪ್ರೇಮಗಳು ಅಂಕುರ ಆಗಿರುತ್ತವೆ. ಮೊದಲು ನೌಕರಿ ಅನಂತರ ಪ್ರೀತಿ ಎಂಬುದನ್ನು ‘ಇಲಿಯ ಪ್ರೇಮ’ ಉದಾಹರಣೆ ಮೂಲಕ ಒಮ್ಮೆ ಅವರು ಹೇಳಿದ್ದುಂಟು.
ವಿದ್ಯಾರ್ಥಿಗಳಿಗೆ ಬದುಕು ಮತ್ತು ನೌಕರಿ ಮುಖ್ಯ, ಲೈಫಲ್ಲಿ ಸೆಟಲ್ ಆದ ಮೇಲೆ ‘ಪ್ರೀತಿ’ ಎಂದು ಬೋಧಿಸಲು ಮಾಸ್ತರು  ಉದಾಹರಣೆ ಕೊಟ್ಟರು. ಒಂದು ಬೋನಿನಲ್ಲಿ ಹೆಣ್ಣು ಇಲಿಯನ್ನಿಟ್ಟರು. ಅದಕ್ಕೆ ಎಟುಕದಂತೆ ಆ ಬೋನಲ್ಲಿ ಒಂದು ಮಿರ್ಚಿ ಬಜ್ಜಿಯನ್ನು ಕಟ್ಟಿದರು. ಗಂಡು ಇಲಿಯನ್ನು ಒಳಗಡೆ ಬಿಟ್ಟಾಗ ಅದು ಹೆಣ್ಣು ಇಲಿಯ ಬಳಿ ಪ್ರೇಮ ಯಾಚನೆ ಮಾಡಲು ಹೋಗದೆ ಮಿರ್ಚಿ ಬಜ್ಜಿ ಖುಷಿಯಿಂದ ತಿಂದು ಹೊರಗೆ ಬಂದಿತ್ತು. ಮತ್ತೊಮ್ಮೆ ಬ್ರೆೆಡ್ ಕಟ್ಟಿ ಪ್ರಯತ್ನಿಸಿದಾಗಲೂ ಅದು ಹೆಣ್ಣು ಇಲಿಯನ್ನು ಮಾತಾಡಿಸದೆ ಬ್ರೆಡ್ ತಿಂದು ಸುಮ್ಮನಾಗಿತ್ತು. ‘ಆಹಾರ ಮತ್ತು ನೌಕರಿ ಮೊದಲು. ಆಮೇಲೆ ಪ್ರೀತಿ ಎಂಬುದುಇಲಿಗೂ ಗೊತ್ತು’ ಎಂದು ಮಾಸ್ತರು ಹೇಳಿದಾಗ ವಿದ್ಯಾರ್ಥಿಗಳು ನಕ್ಕು ಚಪ್ಪಾಳೆ ತಟ್ಟಿದರು. ಈ ಜೋಕನ್ನು ಪ್ರಾಣೇಶ್ ಅಲ್ಲಿಗೇ ಬಿಡುವುದಿಲ್ಲ.
ಶಿಷ್ಯ ಗುರುಲಿಂಗನನ್ನು ಕರೆತರುತ್ತಾರೆ. ಗುರುಲಿಂಗ ಒಂದು ಪ್ರಶ್ನೆೆ ಹಾಕಿದ. ‘ಮೊದಲು ಆ ಹೆಣ್ಣು ಇಲಿಯನ್ನು ಬದಲಾವಣೆ ಮಾಡಿ, ಅದು ಹೆಂಡತಿ ಇರಬೇಕು’ ಎಂದಾಗ ನಗೆಯ ಸ್ಫೋಟ ! ಹಾಸ್ಯವು ಜೀವನದ ಪ್ರತಿಬಿಂಬ. ಪ್ರಪಂಚದ ಎಲ್ಲಾ ಕಡೆ ಸಂಪ್ರದಾಯ, ಸಂಸ್ಕೃತಿಗಳು ಒಂದೇ ಆಗಿರುವುದಿಲ್ಲ. ಆದ್ದರಿಂದಲೇ ಹಾಸ್ಯವು ಸ್ಥಳದಿಂದ ಸ್ಥಳಕ್ಕೆೆ ಬದಲಾವಣೆ ಆಗುತ್ತದೆ. ಹಾಸ್ಯವನ್ನು ಅಂದಿನ ಸಂದರ್ಭಕ್ಕೆೆ ತಾಳೆ ಮಾಡಿ ಸ್ಥಳೀಯ ಉದಾಹರಣೆಗಳನ್ನು ಕೊಟ್ಟಾಗ ಅದು ಹೆಚ್ಚು ಪಂಚ್ ಆಗುತ್ತದೆ. ಜಗತ್ತೇ ಒಂದು ಹುಚ್ಚರ ಸಂತೆ ಎನ್ನುತ್ತಾರೆ. ಇಲ್ಲಿ ವಿರೋಧಾಭಾಸಗಳು ಸದಾ ನಡೆಯುತ್ತ ಇರುತ್ತವೆ. ಇವುಗಳನ್ನು ಗಮನಿಸಿಚಿಕಿತ್ಸಾ ದೃಷ್ಟಿಯಿಂದ ಹಾಸ್ಯದ ಚುಚ್ಚುಮದ್ದು  ಕೊಡುವ ಪ್ರಾಣೇಶ್ ಅವರು ಜನಮಾನಸದಲ್ಲಿ ಭದ್ರವಾದ ಸ್ಥಾನವನ್ನು ಹಿಡಿದಿದ್ದಾರೆ. 60 ವಸಂತಗಳನ್ನು ನಗುತ್ತಾ, ಕನ್ನಡಿಗರನ್ನು ನಗಿಸುತ್ತಾ ಪೂರೈಸಿರುವ ಗಂಗಾವತಿ ಪ್ರಾಣೇಶ್ ಅವರ ಉಸಿರು ಹಾಸ್ಯ, ಅವರ ಕನಸು ಹಾಸ್ಯ.
ಇವರು ನೂರ್ಕಾಲ ಬಾಳಲಿ ಎಂಬುದೇ ಎಲ್ಲರ ಶುಭಹಾರೈಕೆ.