ಸದಾ ಹೊಸತನ್ನು ಹೊಸೆವ ಗುಣ
ರಿಚರ್ಡ್ ಲೂಯಿಸ್
ನಾನು ಗಂಗಾವತಿ ಪ್ರಾಣೇಶ್ ಅವರನ್ನು ಮೊದಲು ಭೇಟಿಯಾಗಿದ್ದು ಸಂಡೂರಿನಲ್ಲಿ ನಡೆದ ‘ನಗೆ ಹಬ್ಬ’ ಕಾರ್ಯಕ್ರಮದಲ್ಲಿ. ಸುಮಾರು ಹದಿನೇಳು ವರ್ಷಗಳ ಹಿಂದಿನ ಮಾತು. ಹುಬ್ಬಳ್ಳಿಯ ಸ್ಟೇಟ್ ಬ್ಯಾಾಂಕ್ ಆಫ್ ಮೈಸೂರು ಕನ್ನಡ ಬಳಗದ ವತಿ ಯಿಂದ ಮೊದಲ ‘ನಗೆ ಹಬ್ಬ’ ಅಂದು ಆಯೋಜನೆಗೊಂಡಿತ್ತು.
ನಾನು, ಎಂ. ಎಸ್.ನರಸಿಂಹಮೂರ್ತಿ, ಚಂಪಾ, ಬೇಗ್ ಮೊದ ಲಾವರು ಸೇರಿದ್ದೆೆವು. ಅಲ್ಲಿ ಎಲ್ಲರ ಪರಸ್ಪರ ಪರಿಚಯವಾಯಿತು. ಅದಾಗಲೇ ಪ್ರಾಣೇಶ್ ಅವರು ಏಕಾಂಗಿಯಾಗಿ ಹಲವು ಹಾಸ್ಯ ಕಾರ್ಯಕ್ರಮಗಳನ್ನು ನೀಡಿ, ಆ ಭಾಗದಲ್ಲಿ ಪರಿಚಿತರಾಗಿದ್ದರು. ಆಗ ಅವರು ಬೀಚಿಯವರ ಶಿಷ್ಯ ಎಂದು ಕರೆದುಕೊಂಡು, ಗಂಗಾವತಿ ಬೀಚಿ ಎಂದು ಕರೆದುಕೊಳ್ಳುತ್ತಿದ್ದರು. ಬೀಚಿಯವರ ಜೋಕ್‌ಗಳನ್ನು ಹೇಳುತ್ತಾ, ಅದರಲ್ಲಿದ್ದ ಹಾಸ್ಯವನ್ನು ವಿಶ್ಲೇಷಣೆ ಮಾಡುತ್ತಾ, ಅಲ್ಲಿದ್ದ ಸಂದೇಶವನ್ನು ವಿವರಿಸುತ್ತಿದ್ದರು.
2003ರಲ್ಲಿ ಸಂಡೂರಿನ ಮೊದಲ ನಗೆಹಬ್ಬ ಕಾರ್ಯಕ್ರಮ ನಡೆದ ಕೆಲವೇ ವಾರಗಳಲ್ಲಿ ಹುಬ್ಬಳ್ಳಿಯಲ್ಲಿ ಇನ್ನೊೊಂದು ಕಾರ್ಯಕ್ರಮ ನಡೆಯಿತು. ಎಸ್‌ಬಿಎಂ ಮತ್ತು ಕನ್ನಡ ಬಳಗ ಆಯೋಜಿಸಿದ ಈ ಕಾರ್ಯಕ್ರಮವು, ನನ್ನ ಪ್ರಕಾರ, ಈಗಿನ ಸ್ವರೂಪವನ್ನು ಪಡೆದುಕೊಂಡ ಮೊತ್ತ ಮೊದಲ ಯಶಸ್ವಿ ‘ನಗೆ ಹಬ್ಬ’. ಪ್ರಾಣೇಶ್ ಅವರ ಉತ್ತರ ಕರ್ನಾಟಕದ ಭಾಷೆಯನ್ನುಅಲ್ಲಿನ ಜನ ಬಹಳಷ್ಟು ಮೆಚ್ಚಿದರು. ಆ ಭಾಷೆಯ ಸೊಗಡನ್ನು ಉಪಯೋಗಿಸಿದ ಕೌಶಲ, ಜಾಣ್ಮೆೆ, ಚತುರತೆ ಮತ್ತು ಪಾಂಡಿತ್ಯ ವನ್ನು ಸಾಧಿಸಿದವರು ಪ್ರಾಣೇಶ್.
ಅದಾಗಿ ಕೆಲವೇ ವಾರಗಳಲ್ಲಿ ಚಿತ್ರದುರ್ಗ, ದಾವಣಗೆರೆ ಮೊದಲಾದ ಸ್ಥಳಗಳಲ್ಲಿ ಇಂತಹದೇ ಕಾರ್ಯಕ್ರಮಗಳು ನಡೆದವು. ಪ್ರಾಣೇಶ್, ನಾನು, ಎಂಎಸ್‌ನರಸಿಂಹಮೂರ್ತಿ ಮೊದಲಾದವರು ನಡೆಸಿಕೊಟ್ಟ ಆ ಕಾರ್ಯಕ್ರಮಗಳು ಬಹಳ  ಯಶಸ್ವಿಯಾ ದವು. ಆ ನಂತರ, ಕರ್ನಾಟಕದಾದ್ಯಂತ ನಗೆಹಬ್ಬಗಳು ನಡೆಯಲು ಆರಂಭವಾದವು. ಪ್ರಾಣೇಶ್, ನಾನು, ಎಂ.ಎಸ್.ನರಸಿಂಹ ಮೂರ್ತಿ ಮೊದಲಾದವರು ಸೇರಿ ಒಂದು ತಂಡ ಕಟ್ಟಿದೆವು. ಪ್ರತಿ ವಾರ ಒಂದು ಕಾರ್ಯಕ್ರಮ. ನಾವೆಲ್ಲಾ ಬೆಂಗಳೂರಿನಿಂದ ರಾತ್ರಿಬಸ್‌ನಲ್ಲಿ ಹೋಗುತ್ತಿದ್ದೆವು. ಗಂಗಾವತಿ ಪ್ರಾಣೇಶ್ ರಾತ್ರಿ ಬಸ್ ಹತ್ತುವುದು ಕಡಿಮೆ. ಹಗಲು ಬಸ್ಸಿನಲ್ಲೇ ಪಯಣಿಸುತ್ತಿದ್ದರು. ಟಿಂಗರ ಬುಡ್ಡಣ್ಣ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ಸಂಯುಕ್ತ ಕರ್ನಾಟಕದ ರಾಘವೇಂದ್ರ ಮತ್ತು ಪ್ರಾಣೇಶ್ ಸೇರಿ ಉತ್ತರ ಕರ್ನಾಟಕದಲ್ಲಿ ಹಲವು ಕಾರ್ಯಕ್ರಮಗಳನ್ನು ಯೋಜಿಸಿದರು.
ಪ್ರಾಣೇಶ್ ಅದಾಗಲೇ ಉತ್ತರ ಕರ್ನಾಟಕದ ಪುಟ್ಟ ಪುಟ್ಟ ಹಳ್ಳಿಗಳೂ ಸೇರಿದಂತೆ ಎಲ್ಲಾ ಊರುಗಳಲ್ಲೂ ತಮ್ಮ ನಗೆಹೊನಲನ್ನುಹರಿಸಿದ್ದರು. ಅದೇ ಸಮಯದಲ್ಲಿ ಬೆಳಗಾಂನಲ್ಲಿ ಪ್ರಾಣೇಶ್ ಮತ್ತು ನಾನು ಪೊಲೀಸ್ ಸಿಬ್ಬಂದಿಗಾಗಿ ನಡೆದ ಒಂದು ನಗೆ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಯಿತು. ಇನ್ನೊೊಂದು ಕಾರ್ಯಕ್ರಮ ನೀಡಲು ಬೆಂಗಳೂರಿಗೆ ಬಂದಿದ್ದ ಪ್ರಾಣೇಶ್ ಮತ್ತು ನಾನು ವಿಮಾನದಲ್ಲಿ ಬೆಂಗಳೂರಿನಿಂದ ಬೆಳಗಾಂಗೆ ಪಯಣಿಸಿದೆವು.
ಪ್ರಾಣೇಶ್ ಅದೇ ಮೊದಲ ಬಾರಿಗೆ ವಿಮಾನ ಹತ್ತಿದ್ದರು. ಮಧ್ಯಮ ಗಾತ್ರದ ಡಕೋಟಾ ಎಂಬ ವಿಮಾನದಲ್ಲಿ ನಾವಿಬ್ಬರೂ ಕುಳಿತೆವು. ಆ ಹಳೆಯ ವಿಮಾನ ಬಹಳಷ್ಟು ಸದ್ದು ಮಾಡುತ್ತಿತ್ತು. ಪ್ರಾಣೇಶ್ ಆ ಸದ್ದಿಗೆ ಬೆದರಿ ನನ್ನ ಕೈಗಳನ್ನು ಗಾಬರಿಯಿಂದ ಹಿಡಿದುಕೊಂಡರು. ವಿಮಾನ ಸ್ಟಾರ್ಟ್ ಆಗಿ ನಾಲ್ಕಾರು ನಿಮಿಷ ರನ್‌ವೇಯಲ್ಲೇ ಸದ್ದು ಮಾಡುತ್ತಾ, ಅಲ್ಲಾಡುತ್ತಾ ನಿಂತಿತ್ತು. ನಾನು ಅವರಿಗೆ ಹೆದರಬೇಡಿ ಎಂದೆ. ವಿಮಾನ ಇನ್ನೂ ಟೇಕ್ ಆಫ್ ಆಗಿರಲಿಲ್ಲ. ಪ್ರಾಣೇಶ್ ಕಿಟಕಿಯಿಂದ ಹೊರನೋಡಿ, ‘ಲೂಯಿಸ್, ನೋಡಿ, ಜನರು ಇರುವೆಗಳ ರೀತಿ ಕಾಣುತ್ತಿದ್ದಾರೆ’’ಎಂದರು. ‘ಪ್ರಾಣೇಶ್, ಅದು ಜನ ಅಲ್ಲ, ಅದು ಇರುವೆಗಳು. ಗಾಬರಿ ಮಾಡಿಕೊಳ್ಳಬೇಡಿ’ ಎಂದೆ. ‘ಹೌದಾ!’ ಎಂದ ಪ್ರಾಣೇಶ್‌ಗೆ ಅಚ್ಚರಿ.***
ಗಂಗಾವತಿ ಪ್ರಾಣೇಶ್ ಮತ್ತು ನಾನು ದಕ್ಷಿಣ ಕನ್ನಡದಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿದ್ದೇವೆ. ಉತ್ತರ ಕರ್ನಾಟಕದ ಸೊಗಡಿನ ಮಾತುಗಳನ್ನು ಪ್ರಾಣೇಶ್ ಬಹುವೇಗವಾಗಿ ಹೇಳುತ್ತಿದ್ದರು. ಅದು ದಕ್ಷಿಣ ಕನ್ನಡದ ಜನರಿಗೆ  ಅರ್ಥವಾಗುತ್ತಿರಲಿಲ್ಲವೇನೊ!
ಸುಮ್ಮನೆ ಕುಳಿತಿರುತ್ತಿದ್ದರು. ಇದನ್ನು ಕಂಡು ನಮಗೆ ಅಚ್ಚರಿ. ‘ನಿಮ್ಮ ಹಾಗೆ, ನಾವು ಬೊಬ್ಬೆೆ ಹಾಕಿ ನಗುವುದಿಲ್ಲ, ಕಾರ್ಯಕ್ರಮ ಚೆನ್ನಾಗಿತ್ತು’ ಎಂದು ಆಯೋಜಕರು ಹೇಳಿದಾಗ ನೆಮ್ಮದಿಯಾಯಿತು. ಪ್ರಾಣೇಶ್ ಕುಂದಾಪುರದ ಒಂದು ಕಾರ್ಯಕ್ರಮದಲ್ಲಿ, ಅರ್ಧ ಗಂಟೆ ಮಾತನಾಡಿದ ನಂತರ, ಎದುರಿನ ಸಾಲಿನ ಓರ್ವ ಮಹನೀಯರು ಕೇಳಿದರು ‘ಅಲ್ಲ ಮಾರಾಯರೇ, ಆಗಿನಿಂದಮಾತನಾಡುತ್ತಿದ್ದೀರಾ. ಆಟ ಯಾವಾಗ ಆರಂಭಿಸುತ್ತೀರಿ?’. ಪ್ರಾಣೇಶ್‌ಗೆ ಕಕ್ಕಾಬಿಕ್ಕಿ. ‘ಆಟ’ ಎಂದರೆ ಯಕ್ಷಗಾನ ಎಂದು ಪ್ರಾಣೇಶ್‌ಗೆ ಆಗ ಗೊತ್ತಿರಲಿಲ್ಲ!
ಕೊನೆಗೆ, ಇಂತಹ ಪ್ರದೇಶಗಳಲ್ಲೇ ತುಸು ನಿಧಾನವಾಗಿ ಮಾತನಾಡಿ, ಜನರ ಮನ ತಟ್ಟಲು ಸಾಧ್ಯ ಎಂದು ಪ್ರಾಣೇಶ್ ತೋರಿಸಿ ಕೊಟ್ಟರು. ಪ್ರಾಣೇಶ್ ಅವರ ಒಂದು ವಿಶಿಷ್ಟ ಗುಣ ಎಂದರೆ, ಹೊಸತನ್ನು ನೋಡಿದರೆ, ಅದನ್ನು ಸ್ವೀಕರಿಸುತ್ತಾರೆ, ಅಳವಡಿಸಿಕೊಳ್ಳುತ್ತಾರೆ. ಈ ನಡುವೆ ನಾನು ಮತ್ತು ಪ್ರಾಣೇಶ್ ಅಮೆರಿಕಕ್ಕೆ ಹೋಗಿದ್ದೆೆವು. ದಯಾನಂದ್ ಸಹ ಬಂದಿದ್ದರು. ನಾವುಮೂವರೂ ಸೇರಿ ಅಮೆರಿಕದ ಸುಮಾರು 29 ಸ್ಥಳಗಳಲ್ಲಿ ನಗೆಹಬ್ಬ ಕಾರ್ಯಕ್ರಮ ನೀಡಿದೆವು. ಹೊಸ ಪರಿಕಲ್ಪನೆಗಳನ್ನು ನಮ್ಮ ಮಾತುಗಳಲ್ಲಿ ಸೇರಿಸಿಕೊಂಡೆವು.
ಪ್ರಾಣೇಶ್ ತುಂಬಾ ತೆಳ್ಳಗಿದ್ದರು, ನಾನು ತುಸು ದಪ್ಪ. ಈ ದಪ್ಪ ಮತ್ತು ತೆಳ್ಳಗಿನ ಪರಿಕಲ್ಪನೆಯನ್ನೇ ನಮ್ಮ ಹಾಸ್ಯದಲ್ಲಿಬಳಸಿಕೊಂಡೆವು. ಈ ರೀತಿಯ ಒಂದು ಕ್ರಿಯೇಟಿವ್ ಅರ್ಜ್ ಅವರಲ್ಲಿತ್ತು. ಕಾರ್ಯಕ್ರಮ ಮುಗಿದ ನಂತರ, ಅದನ್ನು ಇನ್ನಷ್ಟು ಉತ್ತಮಪಡಿಸಲು ಪ್ರಾಣೇಶ್ ಸಲಹೆ ನೀಡುತ್ತಿದ್ದರು. ಪ್ರಾಣೇಶ್ ಬಹಳಷ್ಟು ಓದುತ್ತಿದ್ದರು. ಜತೆಗೆ ಬರೆಯಲೂ ಆರಂಭಿಸಿದರು. ಅಂಕಣಗಳನ್ನೂ ಬರೆದರು. ದಿನನಿತ್ಯದ ದಿನಚರಿಯಲ್ಲಿ, ವಾಟ್ಸಾಪ್ನಲ್ಲಿ ಕಂಡ ಪ್ರಸಂಗಗಳನ್ನು ಸಂಗ್ರಹಿಸಿ ಅದಕ್ಕೆ ಹಾಸ್ಯದ ಟಚ್ ನೀಡುವುದರಲ್ಲಿ ಅವರು ನಿಸ್ಸೀಮರು.
ಪ್ರಾಣೇಶ್ ಅವರ ಹಾಸ್ಯದಲ್ಲಿ ಒಂದು ಸಂದೇಶ ಇರುತ್ತದೆ. ಹಾಸ್ಯವನ್ನು ಲೇವಡಿ ಮಾಡಲು, ಅಪಹಾಸ್ಯ ಮಾಡಲು ಬಳಸುತ್ತಿರಲಿಲ್ಲ. ಅದೇ ತತ್ತ್ವವನ್ನು ನಮ್ಮ ಗುಂಪಿನ ಎಲ್ಲಾ ಸದಸ್ಯರೂ ಅಳವಡಿಸಿಕೊಂಡಿದ್ದೆೆವು. ಪ್ರಾಣೇಶ್ ಅವರನ್ನು ಕೆಲವು ಹರಟೆ ಕಾರ್ಯಕ್ರಮಗಳಲ್ಲೂ ಪರಿಚಯಿಸಿದ್ದುಂಟು. ಆಗಲೂ ತಮ್ಮ ಮಾತಿನಲ್ಲಿ ಅವರು ಸಂದೇಶವನ್ನು ಅಳವಡಿಸುವುದರಲ್ಲಿತಮ್ಮ ಕೌಶಲ್ಯವನ್ನು ತೊರುತ್ತಿರುತ್ತಾರೆ. ಪ್ರಾಣೇಶ್ ಜತೆಯಲ್ಲಿ ನಾನು, ಗುಂಡೂರಾವ್, ಎಂ.ಎಸ್.ನರಸಿಂಹಮೂರ್ತಿ, ಕೃಷ್ಣೇಗೌಡ, ಅಸದುಲ್ಲಾ ಬೇಗ್, ಸುಧಾ ಬರಗೂರು ಮೊದಲಾದವರು ಸೇರಿ ತಂಡಕಟ್ಟಿದೆವು.
ಕರ್ನಾಟಕದಲ್ಲಿ ಮತ್ತು ಹೊರನಾಡಿನಲ್ಲಿ ಈ ಹಾಸ್ಯ ಕಾರ್ಯಕ್ರಮಗಳು ಯಶಸ್ವಿಯಾಗಲು ನಾವೆಲ್ಲರೂ ಸೇರಿ ನಡೆಸಿದ ಈ ರೀತಿಯ ಸಾಂಕ ಪ್ರಯತ್ನ ದೊಡ್ಡ ಕೊಡುಗೆ ನೀಡಿದೆ. ಎಲ್ಲರೊಂದಿಗೂ ಹೊಂದಿಕೊಂಡು, ಹೊಸತನ್ನು ಕಲಿಯುವ ಪ್ರಾಣೇಶ್ ಅವರ ಗುಣವೇ, ಅವರ ಹಾಸ್ಯದಲ್ಲಿ ಹೊಸತನವನ್ನು ತುಂಬುತ್ತಿದೆ. ಗಂಗಾವತಿ ಪ್ರಾಣೇಶ್ ಅವರು ಅತಿ ಹೆಚ್ಚು ಹಾಸ್ಯಕಾರ್ಯಕ್ರಮ ನೀಡಿದ ಹಾಸ್ಯ ಕಲಾವಿದರು. ಜತೆಗೆ ಟಿವಿಗಳಲ್ಲಿ ಸಹ ಹಲವು ಕಾರ್ಯಕ್ರಮಗಳನ್ನು ನೀಡಿ ದಾಖಲೆಗಳನ್ನೇ ನಿರ್ಮಿಸಿದ್ದಾರೆ. ಈ ಅರವತ್ತನೆಯ ಜನ್ಮದಿನ ಅವರಲ್ಲಿ ಇನ್ನಷ್ಟು ಸ್ಫೂರ್ತಿ ತುಂಬಲಿ, ಅವರು ಇನ್ನಷ್ಟು ಕಾರ್ಯಕ್ರಮಗಳನ್ನು ನೀಡಲಿ ಎಂದು ನಾನು ಮನಸಾರೆ ಹಾರೈಸುತ್ತೇನೆ.