ಮರೆಯಬೇಡಿ ಹವಾಮಾನವನ್ನು, ಅದರಿಂದಲೇ ಇರುವುದು ಮಾನವನ ಜನಾಂಗ !
ವಾತಾವರಣ
ತುರುವೇಕೆರೆ ಪ್ರಸಾದ್
ಅನಿರೀಕ್ಷಿತ ಹವಾಮಾನ ಬದಲಾಣೆಯಿಂದ ಉಂಟಾಗುತ್ತಿರುವ ತೀವ್ರ ದುಷ್ಟ ಪರಿಣಾಮಗಳನ್ನು ಎದುರಿಸುವುದೇ ಮನುಕುಲಕ್ಕೆ ಒಂದು ದೊಡ್ಡ ಸಮಸ್ಯೆಯಾಗಿ ಅದೊಂದು ಜಾಗತಿಕ ಸವಾಲು ಎಂದು ಪರಿಗಣಿಸಲ್ಪಟ್ಟಿದೆ.
ಭೂಮಿಯ ತಾಪಮಾನ ಏರಿಕೆಯಿಂದ ಹೆಚ್ಚಾಗುತ್ತಿರುವ ಉಷ್ಣಾಂಶ, ಬಿಸಿಗಾಳಿ, ನೆರೆ- ಪ್ರವಾಹಗಳು, ಭೂಕುಸಿತಗಳು ಸರ್ವೇ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಜನರನ್ನು ಒಂದಿಲ್ಲೊಂದು ರೀತಿಯಲ್ಲಿ ಕಾಡುತ್ತಿವೆ. ಇತ್ತೀಚೆಗಷ್ಟೇ ಕರ್ನಾಟಕದ ಬಯಲುಸೀಮೆ ಹಾಗೂ ಹಳೇ ಮೈಸೂರು ಪ್ರಾಂತ್ಯ ಹಿಂದೆಂದೂ ಕಂಡು ಕೇಳರಿಯದ ಭಾರಿ ಉಷ್ಣಾಂಶ ವನ್ನು ದಾಖಲಿಸಿತು. ಕೆಲ ದಿನಗಳು ಉಷ್ಣಾಂಶ ೪೦ ಡಿಗ್ರಿಯನ್ನೂ ಮೀರಿ ಜನ ತೀವ್ರ ತಾಪಕ್ಕೆ ಸಿಕ್ಕಿ ಬೆಂದು ಬಸವಳಿದರು. ಜಾನವಾರುಗಳು ನೀರು ಮೇವಿಲ್ಲದೆ ತತ್ತರಿಸಿದವು. ಆದರೆ ನಮ್ಮ ರಾಜಕಾರಣಿಗಳು ಇದ್ಯಾವುದನ್ನೂ ಗಂಭೀರವಾಗಿ ಪರಿಗಣಿಸದೆ ಚುನಾವಣಾ ಪ್ರಚಾರದಲ್ಲಿ ಮುಳುಗಿಹೋಗಿದ್ದರು.
ಭಾರತದಲ್ಲಿ ಸುಮಾರು ೧೪೧ ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ೯೭ ಕೋಟಿ ಮತದಾರರಿದ್ದಾರೆ. ಮೊನ್ನೆ ಚುನಾವಣಾ ಆಯೋಗ ಪ್ರಕಟಿಸಿರುವಂತೆ೫ನೇ ಹಂತದ ಮತದಾನದ ಕೊನೆಯ ವೇಳೆಗೆ ಶೇ.೬೬.೩೯ ರಷ್ಟು ಮತದಾನವಾಗಿದೆ. ೫೦.೭೨ ಕೋಟಿ ಜನರು ಮತ ಚಲಾಯಿಸಿದ್ದಾರೆ ಎಂದು ಹೇಳಿದೆ. ಇಷ್ಟು ದೊಡ್ಡ ಪ್ರಜಾಪ್ರಭುತ್ವ ಹಾಗೂ ಮತದಾರರನ್ನು ಹೊಂದಿರುವ ನಮ್ಮ ದೇಶದಲ್ಲಿ ಯಾವೊಂದು ಪಕ್ಷಕ್ಕೂ ಹವಾಮಾನ ಬದಲಾವಣೆ ಮತ್ತು ಅದರ ದುಷ್ಪರಿಣಾಮಗಳು ಆದ್ಯತೆಯ ವಿಷಯವಿರಲಿ, ಒಂದು ಕನಿಷ್ಟ ಚುನಾವಣಾ ವಿಷಯವೂ ಆಗುವುದಿಲ್ಲ.
ಮತದಾರರಿಗೂ ಸಹ ತಮ್ಮ ಬದುಕಿನ ಮೇಲೆ ನೇರಪರಿಣಾಮ ಬೀರುವ ಈ ನಿಸರ್ಗದ ಕೋಪ-ತಾಪ ಒಂದು ಮುಖ್ಯ ವಿಷಯ ಎನಿಸುವುದೇ ಇಲ್ಲ. ಸಿಎಸ್‌ಡಿಎಸ್ ಲೋಕ ನೀತಿ- ೨೦೨೪ರ ಮತದಾನಪೂರ್ವ ಸಮೀಕ್ಷೆಯ ಪ್ರಕಾರ ನಮ್ಮ ಜನರಿಗೆ ನಿರುದ್ಯೋಗ ಮತ್ತು ಹಣದುಬ್ಬರ ಇವೇ ಮುಖ್ಯವಾದ ಚುನಾವಣಾ ವಿಷಯಗಳು. ಹಾಗಾಗಿ ರಾಜಕೀಯ ಪಕ್ಷಗಳೂ ಸಹ ಹವಾಮಾನ ಬದಲಾವಣೆ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ತಮಿಳುನಾಡಿನ ಪ್ರಾದೇಶಿಕ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಬಿಟ್ಟರೆ ಬೇರೆ ಯಾವುದೇ ರಾಷ್ಟ್ರೀಯ ಪಕ್ಷ ಹವಾಮಾನ ಬದಲಾವಣೆಯನ್ನು ತನ್ನ ಪ್ರಣಾಳಿಕೆ ಯಲ್ಲಿ ಚುನಾವಣಾ ವಿಷಯವಾಗಿ ಘೋಷಿಸಿಲ್ಲ.
ಬದಲಾಗಿ ನಾಡಿಗೆ ಐದು, ದೇಶಕ್ಕೆ ಇಪ್ಪತ್ತೈದು ಎಂದು ಪ್ರಣಾಳಿಕೆಯ ತುಂಬಾ ಗ್ಯಾರೆಂಟಿಗಳ ನಳಿಕೆಗಳನ್ನು ಜೋಡಿಸಿ ಮತದಾರರನ್ನು ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಮೊದಲಾದ ಗಂಭೀರ ವಿಷಯಗಳ ಬಗ್ಗೆ ಯೋಚಿಸಿದಂತೆ ಮಾಡಿಟ್ಟಿವೆ. ಆದರೆ ಡಿಎಂಕೆ ತನ್ನ ಬೇರೆಲ್ಲಾ ಚುನಾವಣಾ ವಿಷಯಗಳ ಜೊತೆಗೆ ಹವಾಮಾನ ಬದಲಾವಣೆ ಕುರಿತ ತನ್ನ ಬದ್ಧತೆಯನ್ನೂ ಚುನಾವಣಾ ವಿಷಯವಾಗಿ ಮುಂದಿಟ್ಟಿದೆ. ಡಿಎಂಕೆ ತನ್ನ ಪ್ರನಾಳಿಕೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಪ್ರಸ್ತಾಪಿಸಿದೆ.
ಶಾಲಾ ಕಾಲೇಜುಗಳಲ್ಲಿ ಹವಾಮಾನ ಬದಲಾವಣೆಯನ್ನು ಪಠ್ಯ ವಿಷಯವಾಗಿಡುವುದು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಘಟಕಗಳನ್ನು ಸ್ಥಾಪಿಸು ವುದು, ೨೦೫೦ರವೇಳೆಗೆ ಇಂಗಾಲ ತಟಸ್ಥತೆ (ಕಾರ್ಬನ್ ನ್ಯೂಟ್ರಾಲಿಟಿ) ಸಾಧಿಸುವುದು ಮತ್ತು ಅದಕ್ಕೆ ತಕ್ಕ ಕ್ರಿಯಾಯೋಜನೆ ರೂಪಿಸುವುದು,ಪರಿಸರ ಸಂರಕ್ಷಣೆ, ಅರಣ್ಯ ರಕ್ಷಣೆ, ಹವಾಮಾನ ಬದಲಾವಣೆಗೆ ವ್ಯತಿರಿಕ್ತವಾಗಿ ಈ ಹಿಂದೆ ಮಾಡಲಾಗಿರುವ ಎಲ್ಲಾ ಕಾನೂನುಗಳನ್ನು ಪುನರವಲೋಕಿಸುವುದು ಮತ್ತು ತಿದ್ದುಪಡಿಗಳನ್ನು ರದ್ದು ಮಾಡುವುದು, ಪ್ರಕೃತಿ ವಿಕೋಪದಿಂದ ರಕ್ಷಿಸಿಕೊಳ್ಳಲು ಸಮುದ್ರ ತೀರದ ಜನರಿಗೆ ಅಗತ್ಯ ಉಪಕರಣಗಳು ಹಾಗೂ ತರಬೇತಿ ನೀಡುವುದು, ಅವರಿಗೆ ಸುರಕ್ಷಿತ ಸ್ಥಳಗಳಲ್ಲಿ ಉದ್ಯೋಗಕ್ಕೆ ಅನುವಾಗುವಂತೆ ವಸತಿ ನಿರ್ಮಾಣ ಮಾಡಿ ಕೊಡುವುದು, ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಲು ವಿಶೇಷವಾದ ಕಾಯಿದೆಯನ್ನು ರೂಪಿಸುವುದು, ಸೌರವಿದ್ಯುತ್ ಬಳಕೆಗೆ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸುವುದು, ಶೇ.೮೦ ಸರ್ಕಾರಿ ಸಬ್ಸಿಡಿಯೊಂದಿಗೆ ಮನೆಗಳಲ್ಲಿ ಸೋಲಾರ್ ಇಂದನ ವ್ಯವಸ್ಥೆ ರೂಪಿಸಿಕೊಳ್ಳಲು ಯೋಜನೆ ರೂಪಿಸುವುದು, ವಿದ್ಯುತ್ ಚಾಲಿತ ವಾಹನಗಳಿಗೆ ಸಬ್ಸಿಡಿ ಹೆಚ್ಚಿಸುವುದು, ೨೦೩೦ರ ಹೊತ್ತಿಗೆ ತಮಿಳುನಾಡು ಹಾಗೂ ಭಾರತದ ಬಹುತೇಕ ಸರಕಾರಿ ಕಚೇರಿಗಳು ಸೌರಶಕ್ತಿಯ ಆಧಾರದ ಮೇಲೆ ಕಾರ್ಯನಿರ್ವಹಿಸುವಂತೆ ಮಾಡುವುದು, ಮಳೆ ಹಾಗೂ ನೆರೆ ಕುರಿತ ಖಚಿತ ಮಾಹಿತಿಯನ್ನು ರೈತರಿಗೆ ಒದಗಿಸಲು ರಾಡಾರ್ ವ್ಯವಸ್ಥೆಯನ್ನು ಸುಧಾರಿಸುವುದು, ಸಾವಯವ ರೈತ ಗುಂಪು ಗಳನ್ನು ರಚಿಸಿ ಅವರಿಗೆ ಆಧುನಿಕ ನವೀಕೃತ ಇಂಧನ ಗಳ ಬಗ್ಗೆ ತಿಳುವಳಿಕೆ ಮೂಡಿಸುವುದು, ಕಾರ್ಖಾನೆಗಳ ತ್ಯಾಜ್ಯಗಳನ್ನು ಸಂಸ್ಕರಿಸಲು ಸಿಇಟಿಪಿ (ಕಾಮನ್ ಎ-ಲುಯಂಟ್ ಟ್ರೀಟ್‌ಮೆಂಟ್ ಪ್ಲಾಂಟ್ಸ್) ಘಟಕ ಗಳನ್ನು ಸ್ಥಾಪಿಸುವುದು ಹೀಗೆ ೧೮ ಅಂಶಗಳನ್ನು ಪ್ರಸ್ಥಾಪಿಸಿದೆ.
ಇದು ನಿಜಕ್ಕೂ ಶ್ಲಾಘನೀಯ ಸಂಗತಿ ಯಾಗಿದ್ದು ಇತರೆ ಎಲ್ಲ ರಾಷ್ಟ್ರೀಯ ಪಕ್ಷಗಳಿಗೂ ಮಾದರಿ ಎನಿಸಬೇಕು. ಚುನಾವಣಾ ಆಯೋಗವೇನೋ ಹಸಿರುಚುನಾವಣೆ ಮಾಡಬೇಕು ಎಂಬ ಆಶಯವನ್ನು ಪ್ರಕಟಪಡಿಸಿದೆ. ಉದಾಹರಣೆಗೆ ಕೇರಳದಲ್ಲಿ ಆಯೋಗ ಸ್ಥಳೀಯ ಸರಕಾರಿ ಸಂಸ್ಥೆಗಳ ಸಹಕಾರ ದೊಂದಿಗೆ ಚುನಾವಣಾ ಸಿಬ್ಬಂದಿಗೆ ಪ್ಲಾಸ್ಟಿಕ್ ಲೇಪನದ ಕಾಗದದ ಕಪ್‌ಗಳ ಬದಲು ಸ್ಟೀಲ್ ಕಪ್ ಗಳಲ್ಲಿ ಟೀ ಪೂರೈಸುವಲ್ಲಿ ಯಶಸ್ವಿಯಾಗಿ ಪ್ಲಾಸ್ಟಿಕ್ಮುಕ್ತ ಚುನಾವಣೆ ನಡೆಸುವ ಬದ್ಧತೆ ತೋರಿದೆ. ಆದರೆ ಇದೇ ಬದ್ಧತೆ ರಾಜಕೀಯ ಪಕ್ಷಗಳಲ್ಲಿ ಹಾಗೂ ಮತದಾರರಲ್ಲಿ ಇಲ್ಲವಾಗಿದೆ.
ಕಾಡಿನಂಚಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಕಾಡುಪ್ರಾಣಿಗಳು ಗ್ರಾಮಗಳಿಗೆ ನುಗ್ಗಿ ಜನರ ಪ್ರಾಣ ತೆಗೆಯುವುದು, ಅವರನ್ನು ಸದಾ ಭಯದಲ್ಲಿ ಬದುಕುವಂತೆ ಮಾಡುವುದು ದಿನೇ ದಿನೇ ಹೆಚ್ಚಾಗುತ್ತಿದೆ. ವಾತಾವರಣ ಬದಲಾವಣೆಯ ಪರಿಣಾಮ ಪ್ರಾಣಿಗಳಿಗೆ ಆಹಾರ ಮತ್ತು ನೀರಿನ ಸೌಲಭ್ಯಕಡಿಮೆಯಾಗಿ ಅವು ನಾಡಿನ ಕಡೆ ಮುಖ ಮಾಡುತ್ತಿವೆ. ರಾಹುಲ್ ಗಾಂಧಿಯವರು ಪ್ರತಿನಿಧಿಸುವ ಕೇರಳದ ವಯನಾಡ್ ಕ್ಷೇತ್ರದಲ್ಲಿ ಪ್ರಾಣಿ ಹಾಗೂಮನುಷ್ಯನ ಸಂಘರ್ಷ ತಾರಕಕ್ಕೇರಿ ಈಗಾಗಲೇ ಚುನಾವಣೆಯ ವಿಷಯವಾಗಿ ಹೊರಹೊಮ್ಮಿದೆ.
ಕೇರಳ-ತಮಿಳುನಾಡು ಗಡಿಭಾಗದಲ್ಲಿ ಮತ ಹಾಕುವುದು ಮನುಷ್ಯರು, ಪ್ರಾಣಿಗಳಲ್ಲ, ಪ್ರಾಣಿಗಳ ರಾಜ್ಯಭಾರ ನಿಲ್ಲಿಸಿ ಎಂಬ ಭಿತ್ತಿಪತ್ರಗಳನ್ನು ಬರೆದುಹಾಕಲಾಗಿದೆ. ಆದಗ್ಯೂ ಪ್ರಕೃತಿ, ಕಾಡಿನ ನಂಟಿ ನೊಂದಿಗೆ ಸದಾ ಅಭದ್ರತೆಯಲ್ಲೇ ಬದುಕುವ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಂತಿರುವ  ಪ್ರದೇಶಗಳಲ್ಲೂ ಹವಾಮಾನ ಬದಲಾವಣೆಯ ವೈಪರಿತ್ಯಗಳು ಚುನಾವಣಾ ವಿಷಯವಾಗದಿರುವುದು ಅಚ್ಚರಿ ಎನಿಸುತ್ತದೆ. ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ ಭೂಕುಸಿತ, ಪ್ರವಾಹ ಸಾಮಾನ್ಯವೇ ಆಗಿದ್ದರೂ ಅಲ್ಲಿನ ಜನವಾಗಲೀ, ರಾಜಕೀಯ ಪಕ್ಷಗಳಾಗಲೀ ಪುಕ್ಕಟೆ ಯೋಜನೆಗಳು, ಸಾಲಮನ್ನಾ, ವೈಯಕ್ತಿಕ ಆರೋಪಗಳೇ ಮೊದಲಾದ ಸಾಂಪ್ರದಾಯಿಕ ವಿಷಯಗಳನ್ನೇ ಚುನಾವಣಾ ವಿಷಯವಾಗಿಪರಿಗಣಿಸು ತ್ತಿದ್ದಾರೇ ವಿನಃ ಹವಾಮಾನ ಬದಲಾ ವಣೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಇನ್ನೂ ದುರಂತದ ಸಂಗತಿಯೆಂದರೆ ಗುಜರಾತ್‌ನಿಂದ ತಮಿಳುನಾಡುವರೆಗೆ ಪಶ್ಚಿಮಘಟ್ಟಗಳ ಸುಮಾರು ೧೬೦೦ ಕಿಮೀ ವ್ಯಾಪ್ತಿಯಲ್ಲಿ ಜೈವಿಕ ವೈವಿಧ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಮಾಧವ ಗಾಡ್ಗೀಲ್ ವರದಿ ಮಾನವ ನಿರ್ಮಾಣಗಳು, ಕೈಗಾರಿಕೆಗಳು ಹಾಗೂ ಕೆಲವು ಬಗೆಯ ವ್ಯವಸಾಯವನ್ನು ನಿಷೇಧಿಸಿತ್ತು. ಆದರೆ ಅಲ್ಲಿನ ನಿವಾಸಿಗಳು ಎಡಪಕ್ಷಗಳ ಬೆಂಬಲದೊಂದಿಗೆ ೨೦೧೪ರ ಲೋಕಸಭಾ ಚುನಾವಣೆ ಯಲ್ಲಿ ಗೆದ್ದು ಈ ವರದಿ ಅನುಷ್ಠಾನವಾದಂತೆ ನೋಡಿ ಕೊಂಡರು.
ಭಾರತದ ಈ ಪರಿಸ್ಥಿತಿಗೆ ಹೋಲಿಸಿದರೆ ಹಲವು ದೇಶಗಳಲ್ಲಿ ಈಗಾಗಲೇ ಹವಾಮಾನ ಬದಲಾವಣೆ ಚುನಾವಣಾ ವಿಷಯವಾಗಿ ಆದ್ಯತೆಯನ್ನು ಪಡೆದುಕೊಂಡಿದೆ. ೧೯೭೦ರಿಂದಲೂ ಅಲ್ಲಿನ ಹಸಿರು ಸಂರಕ್ಷಣಾ ಸಂಸ್ಥೆಗಳು ಹವಾಮಾನ ಬದಲಾವಣೆ ವಿಷಯಗಳನ್ನು ಮುಖ್ಯ ಕಾರ್ಯಸೂಚಿಯಾಗಿಜನರ ಮುಂದಿಡಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದವು. ಈ ಅಭಿಯಾನ ಈಗ ಯಶಸ್ವಿಯಾಗಿದೆ. ಮುಂದಿನ ತಿಂಗಳು ಯೂರೋಪಿನ ಪಾರ್ಲಿಮೆಂಟಿಗೆ ಚುನಾವಣೆ ನಡೆಯಲಿದ್ದು ಅಲ್ಲಿನ ಶೇ.೫೨ ಜನ ಹವಾಮಾನ ಬದಲಾವಣೆಯನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿದ್ದಾರಂತೆ. ಅದರಲ್ಲೂ ಅಲ್ಲಿನ ಯುವಕರು ಹವಾಮಾನ ಬದಲಾವಣೆಗೆ ತೀವ್ರ ಕಳಕಳಿ ವ್ಯಕ್ತಪಡಿಸಿದ್ದು ೨೦೫೦ರ ಹೊತ್ತಿಗೆ ಹಸಿರು ಒಪ್ಪಂದದ ಮೂಲಕ ಯೂರೋಪ್ ಖಂಡ ವನ್ನು ತಟಸ್ಥ ಹವಾಮಾನ ಖಂಡ (ಕ್ಲೈಮೇಟ್ ನ್ಯೂಟ್ರಲ್) ಮಾಡುವ ಸಂಕಲ್ಪ ವ್ಯಕ್ತಪಡಿಸಿದ್ದಾರೆ.
ಹವಾಮಾನ ಮತದಾರರ (ಕ್ಲೈಮೇಟ್ ಓಟರ‍್ಸ್- ನಮ್ಮಲ್ಲಿ ಗ್ಲಾಸ್‌ಮೇಟ್ ವೋಟರ‍್ಸ್) ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಾಗತಿಕ ವನ್ಯನಿಧಿ ನಡೆಸಿರುವ ಒಂದು ಸಮೀಕ್ಷೆಯ ಪ್ರಕಾರ ಅಲ್ಲಿನ ಬಹುತೇಕ ರಾಜಕೀಯ ಪಕ್ಷಗಳು ಹವಾಮಾನ ಬದಲಾವವಣೆಯನ್ನೇ ಮುಖ್ಯ ಚುನಾವಣಾವಿಷಯವಾಗಿ ಪರಿಗಣಿಸಿವೆ. ಶೇ.೧೦೦ ನವೀಕರಿಸ ಬಹುದಾದ ಇಂಧನಗಳ ಬಳಕೆ, ಪಳಯುಳಿಕೆ ಇಂಧನಗಳ ಬಳಕೆಯನ್ನು ನಿಲ್ಲಿಸುವುದು ಮತ್ತುಪ್ರಾಕೃತಿಕವಾದ ವಿಧಾನಗಳ ಮೂಲಕ ಹವಾಮಾನ ಬದಲಾವಣೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕುವ ಪ್ರಯತ್ನ ನಡೆಸಿದ್ದಾರೆ.
ರಾಜಕೀಯ ಪಕ್ಷಗಳಲ್ಲಿ ಈ ಹವಾಮಾನ ಬದಲಾವಣೆಯ ಕಳಕಳಿ ಇಲ್ಲದಿರಬಹುದು. ಆದರೆ ಭಾರತದ ಕೆಲವು ಪ್ರದೇಶದ ಮತದಾರರಲ್ಲಿ ಈ ಜಾಗೃತಿನಿಧಾನವಾಗಿಯಾದರೂ ಮೂಡುತ್ತಿರುವುದು ಆಶಾ ಭಾವನೆ ತಂದಿದೆ. ಜನ ೪೦-೪೨ ಡಿಗ್ರಿ ತಾಪಮಾನದಲ್ಲಿ ಬೇಯುತ್ತಿರುವಾಗ ತೆರೆದ ಜೀಪಿನಲ್ಲಿ ಬಿಸಿಲಿಗೆಅಡ್ಡವಾಗಿ ಕೈ ಹಿಡಿದೋ, ಕೊಡೆ ಹಿಡಿದೋ ತಾಪ ತಡೆಯಲಾಗದೆ ಬೆವರೊರೆಸಿಕೊಂಡು, ಗಳಿಗೆ ಗಳಿಗೆಗೂ ತಂಪು ಪಾನೀಯ ಕುಡಿಯುತ್ತಾ ದೇಶಾವರಿ ನಗೆಬೀರಿ ಕೈ ಬೀಸುವ ಎಸಿಯಲ್ಲಿ ಬದುಕುವ ಪ್ರಾಣಿಯನ್ನು ಜನ ಅಷ್ಟು ಮೆಚ್ಚುವುದಿಲ್ಲ,. ಅದೇ ತೆರೆದ ಜೀಪಿನಲ್ಲಿ ಸುಡುವ ಬಿಸಿಲಿಗೆ ಮುಖವೊಡ್ಡಿಮನಸ್ಸಿನಾಳದಿಂದ ನಗುತ್ತಾ ಕೈ ಬೀಸುವ ತಮ್ಮ ಮಧ್ಯೆಯೇ ಬೆಳೆದು ಬಂದವನನ್ನು ಜನ ಹೆಚ್ಚು ಇಷ್ಟಪಡುತ್ತಾರೆ. ಹವಾಮಾನ ಬದಲಾವಣೆಯಸಂಕಷ್ಟಗಳಲ್ಲಿ ಜನಪ್ರತಿನಿಽಗಳು ತಮ್ಮೊಂದಿರಬೇಕು ಎಂದು ಬಯಸುತ್ತಾರೆ.
ತಮಿಳುನಾಡಿನ ತರುವೈಕುರಮ್ ಅವಳಿ ಹಳ್ಳಿಗಳಿಗೆ ಕಳೆದ ಡಿಸೆಂಬರ‍್ನಲ್ಲಿ ಪ್ರವಾಹದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ ಗೊಂಡಿತು. ಈ ಸಂದರ್ಭ ದಲ್ಲಿ ಒಟ್ಟಪಿದರಮ್ ಶಾಸಕ ಷಣ್ಮುಗಯ್ಯ ಕಾಟಾಚಾರಕ್ಕಾದರೂ ನೆರೆ ಪ್ರದೇಶಕ್ಕೆ ಬಂದು ಸಂತ್ರಸ್ತರ ಕಷ್ಟ ಸುಖ ವಿಚಾರಿಸಲಿಲ್ಲ. ಅಧಿಕಾರಿಗಳು ಆಶ್ವಾಸನೆ ಇತ್ತಿದ್ದ ತಲಾ ೬೦೦೦ ರು. ಪರಿಹಾರಧನ ಕೊಡಿಸಲೂ ಇಲ್ಲ, ಸಿಟ್ಟಿಗೆದ್ದ ಜನ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಶಾಸಕರ ನಡೆ ಖಂಡಿಸಿ ಪರಿಹಾರಕ್ಕೆ ಧರಣಿ ನಡೆಸಬೇಕಾಯಿತು.
ಜನಪ್ರತಿನಿಧಿಗಳ ಈ ಮನಸ್ಥಿತಿಗೆ ಅಪವಾದ ಎಂಬಂತೆ ಜುಲೈ ೨೦೨೦ರಲ್ಲಿ ಅಸ್ಸಾಂನಲ್ಲಿ ಭೀಕರ ಪ್ರವಾಹ ಬಂದಾಗ ಸುಮಾರು ೧೩ ಲಕ್ಷ ಜನ ತೊಂದರೆ ಗೀಡಾಗಿದ್ದರು. ಆ ಸಂದರ್ಭದಲ್ಲಿ ಕುಮ್ಟೈ ಕ್ಷೇತ್ರದ ಬಿಜೆಪಿ ಶಾಸಕ ಮ್ರಿಣಾಲ್ ಸೈಕಿಯ ಸಂಕಷ್ಟ ಕ್ಕೀಡಾದ ಜನರನ್ನು ರಕ್ಷಿಸಲು ನೀರಿಗಿಳಿದಿದ್ದರು. ಹಲವಾರು ಜನರನ್ನು. ಸಾಕು ಪ್ರಾಣಿಗಳನ್ನು ಸುರಕ್ಷಿತ ತಾಣಕ್ಕೆ ಸಾಗಿಸಲು ಜೀವದ ಹಂಗು ತೊರೆದು ಹೋರಾಡಿದ್ದರು. ಕೋವಿಡ್ ಸಮಯದಲ್ಲೂ ಸಹ ಕ್ವಾರಂಟೈನ್ ಕೇಂದ್ರಗಳಿಂದ ಕೈ ಕಾಲಿಯಾಗಿ ಹೊರ ಬಂದ ಸಾವಿರಾರು ಜನರನ್ನು ಗೋಲಘಾಟ್‌ನ ಅವರ ಮನೆಗಳಿಗೆ ಸುರಕ್ಷಿತವಾಗಿ ತಲುಪಿಸಿದ್ದರು.
ದೇಶಾದ್ಯಂತ ಮ್ರಿಣಾಲ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದಾ ಜನರೊಂದಿಗಿದ್ದು ಅವರ ಕಷ್ಟಸುಖಕ್ಕೆ ಮಿಡಿವ ಮ್ರಿಣಾಲ್ ಅಂತಹವರನ್ನೇ ಜನ ತಮ್ಮ ಜನ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಿಕೊಳ್ಳುವ ಕಾಲವೂ ಹೆಚ್ಚು ದೂರವಿಲ್ಲ, ಆಗ ರಾಜಕೀಯ ಪಕ್ಷಗಳು ಡಿಎಂಕೆಯಂತೆ ತಮ್ಮ ಮಾಮೂಲಿ ಧೋರಣೆ ಬದಲಿಸಿ ನಿಸರ್ಗಕ್ಕೆ ಶರಣಾಗಿ ಹವಾಮಾನ ಬದಲಾ ವಣೆಯನ್ನು ಪ್ರಕೃತಿಯೇ ತಸ್ಮೈ ನಮಃ ಎಂದು ಪಕ್ಷದ ಪ್ರನಾಳಿಕೆಯಲ್ಲಿ ಕಡ್ಡಾಯವಾಗಿ ಸೇರಿಸಲೇ ಬೇಕಾಗುತ್ತದೆ.
(ಲೇಖಕರು: ಹವ್ಯಾಸಿ ಬರಹಗಾರರು)