ಬಳಕೆಯಿಂದ ಮಾತ್ರ ಕನ್ನಡ ಭಾಷೆ ಉಳಿವು ಸಾಧ್ಯ !
ಅಭಿಮತ
ಶ್ರೀವರಸದ್ಯೋಜಾತ ಸ್ವಾಮೀಜಿ
ದ್ರಾವಿಡ ಭಾಷೆಗಳಲ್ಲೊಂದಾದ ಕನ್ನಡ ಭಾಷೆಯು ಸರಿ ಸುಮಾರು2500ವರ್ಷಗಳ ಇತಿಹಾಸದೊಂದಿಗೆ ಜನಮಾನಸದಲ್ಲಿ ಸಿರಿಗನ್ನಡವಾಗಿ ನೆಲೆಯೂರಿದೆ. ಕನ್ನಡವೇ ನಮ್ಮ ಜೀವ, ಕನ್ನಡವೇ ನಮ್ಮ ಜೀವಾಳ!
ಎನ್ನುವಂತಾಗಿದೆ. ಕ್ರಿ.ಪೂ.3ನೇ ಶತಮಾನದ ಹೊತ್ತಿಗಾಗಲೇ ಕನ್ನಡ ಲಿಖಿತ ರೂಪದಲ್ಲಿ ಬೆಳೆದು ನಿಂತಿತ್ತು. ಕನ್ನಡದ ಮೊಟ್ಟ ಮೊದಲ ಶಾಸನ ಎಂದೇ ಕರೆಯಲ್ಪಡುವ ಹಲ್ಮಿಡಿ ಶಾಸನ4ನೇ ಶತಮಾನದಲ್ಲಿ ದೊರೆತಿದ್ದರಿಂದ ಕನ್ನಡ ಭಾಷೆ ಅತೀ ಪುರಾತನವಾದದ್ದು ಎಂಬುದಕ್ಕೆ ಪುಷ್ಟಿ ನೀಡಿದೆ. ಕರುನಾಡನ್ನು ಆಳಿದ ಮೊದಲ ರಾಜಮನೆತನ ಕದಂಬರಿಂದ ಹಿಡಿದು ಗಂಗರು, ಮೌರ್ಯರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಹೊಯ್ಸಳರು ಮತ್ತು ಜಯನಗರ ಅರಸರ ಕಾಲದಲ್ಲಿ ಕನ್ನಡವು ಆಡಳಿತ ಭಾಷೆಯಾಗಿ ರೂಪುಗೊಂಡಿತ್ತು. ಅನೇಕ ಈ ಅರಸ ಮನೆತನದ ಕವಿ ಪುಂಗವರು
ಸಾಹಿತ್ಯ ರಚನೆ, ಕಾವ್ಯ, ಹಾಡು, ಕೃತಿಗಳನ್ನು ಕನ್ನಡದಲ್ಲಿ ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಕನ್ನಡ ಭಾಷೆಯು ಆಡಳಿತ ಭಾಷೆಯಾಗಿತ್ತು ಎಂಬುವುದಕ್ಕೆ ನಾವು ಹಲವು ನಿದರ್ಶನಗಳನ್ನು ಕಂಡಿದ್ದೇವೆ. ಕನ್ನಡ ಭಾಷೆಯ ಉಗಮವನ್ನು ಗಮನಿಸಿದಾಗ ತಮಿಳು ಭಾಷೆಗಿಂತ ಕನ್ನಡ ಭಾಷೆಯು ಮೊಟ್ಟ ಮೊದಲಿಗೆ ಪ್ರವರ್ಧಮಾನಕ್ಕೆ ಬಂದಿದೆ.
ಕ್ರಿ.ಶ 8ನೇ ಶತಮಾನದಲ್ಲಿ ಅಮೋಘವರ್ಷ ನೃಪತುಂಗನು ‘ಕವಿರಾಜ ಮಾರ್ಗ’ ಗ್ರಂಥವನ್ನು ರಚಿಸಿದ್ದನು. ಕ್ರಿ.ಶ 9ನೇ ಶತಮಾನದ ಆದಿಕವಿ ಎಂದೇ ಕರೆಯಲ್ಪಡುವ ಪಂಪನು ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’ ಎಂಬ ಮೇರುಕೃತಿ ಗಳನ್ನು ಚಂಪೂ ಶೈಲಿಯಲ್ಲಿ ರಚಿಸಿದರೆ, ಕೋಗಳಿಯ ಶಿವಕೋಟ್ಯಾಚಾರ್ಯರು ‘ವಡ್ಡಾರಾಧನೆ’ ರಚಿಸಿ ಕನ್ನಡದ ಕಂಪನ್ನುಹರಡಿದರು.
12ನೇ ಶತಮಾನದ ಆರಂಭದಲ್ಲಿ ವಚನ ಸಾಹಿತ್ಯ ಜನನವಾಗಿ ಹಲವು ವೈಶಿಷ್ಟ್ಯಗಳಿಂದ ಸಾಮಾಜಿಕ ಕಳಕಳಿ, ಧಾರ್ಮಿಕ ನಂಬಿಕೆಯಿಂದ ತನ್ನದೇ ಆದ ಹೆಗ್ಗುರುತು ಮೂಡಿಸಿತು. ಅಲ್ಲಮ ಪ್ರಭು, ಜಗಜ್ಯೋತಿ ಬಸವೇಶ್ವರ, ಜೇಡರ ದಾಸಿಮಯ್ಯ,ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ ಮುಂತಾದ ವರು ವಚನಗಳ ಕ್ರಾಂತಿ ಮಾಡಿದರು. ಬಸವಣ್ಣನವರು ಸಮಾಜಕ್ಕೆ ಅಂಟಿಕೊಂಡಿದ್ದ ಪಿಡುಗುಗಳ ನಿರ್ಮೂಲನೆಗೆ ಪಣತೊಟ್ಟು, ಸಮಾಜದಲ್ಲಿ ಅಮೂಲಾಗ್ರ ಬದಲಾವಣೆಗೆ ಮುನ್ನುಡಿ ಬರೆದರು.ಕಾಯಕವೇ ಕೈಲಾಸ ಎಂದು ಕಾಯಕದಲ್ಲಿಯೇ ಕೈಲಾಸದ ದರ್ಶನ ಮಾಡಿಸಿದರು.
ನಂತರದಲ್ಲಿ ಕನ್ನಡವು ಸಬಲವಾಗಿ ಬೆಳೆದು ನಿಂತಿತು. ಕುಮಾರವ್ಯಾಸ ಕರ್ನಾಟಕ ರತ್ನ ಕಥಾ ಮಂಜರಿಯನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿ ಅಂತ್ಯಂತ ಜನಪ್ರಿಯವಾದನು. ಕುಮಾರವ್ಯಾಸ ಹಾಡಿದನೆಂದರೆ, ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು, ಮೈಯಲಿ ಮಿಂಚಿನ ಹೊಳೆ ತುಳುಕಾಡುತ್ತಿತ್ತು.15ನೇ ಶತಮಾನದಿಂದ ಆರಂಭಗೊಂಡು ಭಕ್ತಿಯನ್ನೇ ಪ್ರಧಾನ ಮಾಡಿಕೊಂಡು ತತ್ವ ಪದಗಳ ಮೂಲಕ ಪುರಂದರ ದಾಸರು, ಕನಕ ದಾಸರು ಭಕ್ತಿಯ ಸುಧೆಯನ್ನು ಹರಿಸಿದರು. ದಾಸ ಸಾಹಿತ್ಯ ಕರ್ನಾಟಕ ಶಾಸೀಯ ಸಂಗೀತಕ್ಕೆ ಬುನಾದಿಯಾಗಿದೆ ಎಂಬುದು ಗಮನಾರ್ಹ.
ಬ್ರಿಟಿಷರ ಆಡಳಿತದ ತುಳಿತಕ್ಕೆ ಒಳಗಾಗಿ ಬೆಳಕು ಕಾಣದೇ ಇದ್ದ ಕನ್ನಡ ಭಾಷೆ19ನೇ ಶತಮಾನದ ಅಂಚಿನಲ್ಲಿ ಮತ್ತು20ನೇಶತಮಾನದಲ್ಲಿ ಹೊಸ ಹುಟ್ಟು ಪಡೆದುಕೊಂಡಿತು. ಬಿ.ಎಂ.ಶ್ರೀ ಆಧುನಿಕ ಕನ್ನಡ ಸಾಹಿತ್ಯಕ್ಕೆ ಹೊಸ ಮೆರುಗನ್ನು ನೀಡಿದ ಮೇರು ಕವಿ. ಕನ್ನಡ ಮಾತನಾಡಲು ಹಿಂಜರಿಯುತ್ತಿದ್ದ ಕಾಲಘಟ್ಟದಲ್ಲಿ ಕನ್ನಡಕ್ಕಾಗಿ ಧ್ವನಿ ಮೊಳಗಿಸಿ ಕನ್ನಡಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟವರು ಬಿ.ಎಂ.ಶ್ರೀ. ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು’ ಎಂದು ಕನ್ನಡನುಡಿದೇವಿಯನ್ನು ಕರೆದರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ತಿ.ನಂ.ಶ್ರೀ, ರಾಜರತ್ನಂ, ನರಸಿಂಹಾಚಾರ್ ಮುಂತಾದ ಕವಿರತ್ನರನ್ನು ಬಿ.ಎಂ.ಶ್ರೀಯವರು ತಮ್ಮ ಗರಡಿಯಲ್ಲಿ ಬೆಳೆಸಿ ಕನ್ನಡ ಸಾಹಿತ್ಯ ಲೋಕಕ್ಕೆ ಬರಮಾಡಿಕೊಂಡರು. ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತರು, ಮಾಸ್ತಿ, ಅನಕೃ, ಯು.ಆರ್. ಅನಂತಮೂರ್ತಿ, ವಿ.ಕೃ.ಗೋಕಾಕ್, ಡಿ.ವಿ.ಜಿ, ಗಿರೀಶ್ ಕಾರ್ನಾಡ್, ಕಂಬಾರರು, ನಿಸಾರ್ ಅಹಮದ್ ಇನ್ನೂ ಅನೇಕ ಕವಿಗಳ ಸಾಲು – ಸಾಲು ಕೃತಿ, ವಿಮರ್ಶೆ, ಕವನ, ಪ್ರಬಂಧ, ನಾಟಕಗಳನ್ನು ರಚಿಸಿ ಭುವನೇಶ್ವರಿಗೆ ನುಡಿತೋರಣ ವನ್ನು ಕಟ್ಟಿದರು.
ಜಾನಪದ ಸಾಹಿತ್ಯ ಲಿಖಿತ ರೂಪದಲ್ಲಿ ಇರದೇ ಜನರ ಬಾಯಿಯಿಂದ ಬಾಯಿಗೆ ವರ್ಗಾವಣೆಯಾಗುತ್ತಿದ್ದವು. ತಮ್ಮ ದೈನಂದಿನ ಜೀವನದ ಕಷ್ಟ – ಸುಖ, ಜೀವನ ಕ್ರಮ, ವೃತ್ತಿಗನುಣವಾಗಿ ಹುಟ್ಟಿಕೊಂಡ ಝರಿಯೇ ಜಾನಪದ ಸಾಹಿತ್ಯ. ವಿಶಿಷ್ಟ ಭಾಷೆ, ವಿಶಿಷ್ಟ ಶೈಲಿ, ಮನ ಮುಟ್ಟುವ ಸಾಲುಗಳಿಂದ ಉತ್ತರ ಕರ್ನಾಟಕ ಭಾಗಗಳಲ್ಲಿ ಹಾಡು, ಗಾದೆ, ಒಗಟು, ಗೀಗೀ ಪದ, ಸುಗ್ಗಿ ಪದ, ಲಾವಣಿಪದಗಳಲ್ಲಿ ಜಾನಪದವು ಮೈದೋರಿದರೆ, ದಕ್ಷಿಣ ಕರ್ನಾಟಕ ಭಾಗಗಳಲ್ಲಿ ಯಕ್ಷಗಾನದಲ್ಲಿ ನೆಲೆಯೂರಿತು.
ನವ್ಯ ಸಾಹಿತ್ಯದಲ್ಲಿ ಕವಿಗಳು ತಮ್ಮ ಜೀವನದ ಆಗು – ಹೋಗುಗಳನ್ನು, ನೋವು – ನಲಿವುಗಳನ್ನು ಕವನ – ಕತೆಗಳ ರೂಪದಲ್ಲಿಹೊರಹಾಕಿದರು. ಮಾನವನು ಎಲ್ಲಾ ಮಗ್ಗುಲುಗಳನ್ನು – ಮಜಲುಗಳನ್ನು ಕಾಣಬೇಕು. ಭಾವ ಅಭಿವ್ಯಕ್ತವಾಗಬೇಕೆಂದು ಗೋಪಾಲ ಕೃಷ್ಣ ಅಡಿಗರು ಭೂಮಿಗೀತ, ಚಂಡ ಮದ್ದಳೆ ಬರೆಯುವುದರ ಮೂಲಕ ನವ್ಯ ಸಾಹಿತ್ಯಕ್ಕೆ ನಾಂದಿ ಹಾಡಿ, ನವ್ಯಸಾಹಿತ್ಯದ ಪಿತಾಮಹರೆನಿಸಿಕೊಂಡರು. ಸಮಾಜದ ಅಂಚಿನಿಂದ ದೂರ ಉಳಿದು ಜಾತಿ ಪದ್ಧತಿ, ಸಾಮಾಜಿಕ ಅಸಮಾನತೆ, ಶೋಷಣೆ, ಅನ್ಯಾಯ, ದಬ್ಬಾಳಿಕೆ ವಿರುದ್ಧ ಸಿಡಿದೆದ್ದ ಧ್ವನಿಯೇ ದಲಿತ ಮತ್ತು ಬಂಡಾಯ ಸಾಹಿತ್ಯವಾಯಿತು.
ದಶಕಗಳಿಂದ ಶಿಕ್ಷಣ, ಉನ್ನತ ಹುದ್ದೆಗಳಿಂದ, ಸಾಮಾಜಿಕ ಸ್ಥಾನಮಾನದಲ್ಲಿ ವಂಚಿತರಾಗಿದ್ದ ಸಮಾಜ ತಮ್ಮ ನೋವು, ಆಕ್ರಂದ ವನ್ನು ಸಾಹಿತ್ಯದ ಮೂಲಕ ಹೊರಹಾಕಿದರು. ಅಂಬೇಡ್ಕರ್ ಗೀತೆಗಳು, ಸಾಮಾಜಿಕ ನಾಟಕಗಳು, ಪ್ರತಿಭಟನೆ ಮೂಲಕಆಧುನಿಕ ಕನ್ನಡ ಸಾಹಿತ್ಯಕ್ಕೆ ದಲಿತ ಮತ್ತು ಬಂಡಾಯ ಸಾಹಿತ್ಯ ಕೊಡುಗೆ ನೀಡಿದೆ. ಹಳೆಗನ್ನಡ, ವಚನ ಸಾಹಿತ್ಯ, ನಡುಗನ್ನಡ, ದಾಸ ಸಾಹಿತ್ಯ, ನವೋದಯ, ಜಾನಪದ, ನವ್ಯ, ದಲಿತ ಮತ್ತು ಬಂಡಾಯ ಹೀಗೆ ಎಲ್ಲಾ ಕನ್ನಡ ಸೇರಿ ಸಿರಿಗನ್ನಡವಾಗಿದೆ.
ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ಕರ್ನಾಟಕ ಏಕೀಕರಣದ ಬೀಜಬಿತ್ತಿದ್ದನ್ನು ಯಾರೂ ಮರೆಯುವಂತಿಲ್ಲ.1912ರಲ್ಲಿ ‘ಕರ್ನಾಟಕ ಗತವೈಭವ’ದ ಮೂಲಕ ಕನ್ನಡದ ಕಿಚ್ಚನ್ನು ಮೂಲೆ ಮೂಲೆಗೆ ತಿರುಗಿ ಹೊತ್ತಿಸಿದರು.1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ಸ್ಥಾಪನೆಯಾಗಿ ಕನ್ನಡ ಕ್ರಾಂತಿಗೆ ನಾಂದಿಹಾಡಿತು. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂದು ಹುಯಿಲಗೋಳ ನಾರಾಯಣರಾಯರು ಕನ್ನಡದ ಕಹಳೆ ಯೂದಿದರು. ಸ್ವಾತಂತ್ರ್ಯೋತ್ತರ ಭಾರತ ಭಾಷಾವಾರು ಪ್ರಾಂತ್ಯ ವಿಂಗಡಣೆ ಸಮಯದಲ್ಲಿ1954ರ ನವೆಂಬರ್ 1ರಂದು ವಿಶಾಲ ‘ಮೈಸೂರು ರಾಜ್ಯ’ ಉಗಮವಾಯಿತು. ಆಲೂರು ವೆಂಕಟರಾಯರು ಹಂಪೆಯಲ್ಲಿ ರಾಜ್ಯೋತ್ಸವ ಆಚರಿಸಿ ಸಂಭ್ರಮಿಸಿದರು.
1973ನವೆಂಬರ್ 1ರಂದು ‘ಕರ್ನಾಟಕ’ ರಾಜ್ಯವೆಂದು ಮರು ನಾಮಕರಣ ಮಾಡಲಾಯಿತು. ಕನ್ನಡ ಭಾಷೆ ಸುದೀರ್ಘ ಇತಿಹಾಸದಿಂದ ಹೊಂದಿದ ದೇವ ಭಾಷೆ. ಭಾರತದ22ಅಧಿಕೃತ ಭಾಷೆಗಳಲ್ಲಿ ಕನ್ನಡವೂ ಒಂದು.2008ಅಕ್ಟೋಬರ್31ಕನ್ನಡಕ್ಕೆ ‘ಅಭಿಜಾತ ಭಾಷೆ’ ಮತ್ತು ಭಾರತದ ಭಾಷೆಗಳಲ್ಲಿ ನಾಲ್ಕನೇಯ ಗೌರವ ಸ್ಥಾನ ಸಿಕ್ಕಿದೆ. 8 ಜ್ಞಾನಪೀಠ ಪ್ರಶಸ್ತಿಗಳನ್ನುಸಾಹಿತಿಗಳು ತಾಯಿ ಭುವನೇಶ್ವರಿಯ ಮುಡಿಗೇರಿಸಿದ್ದಾರೆ. ಅಭಿಜಾತ ಭಾಷೆಗಳಲ್ಲಿ ಕನ್ನಡ ಚೆನ್ನುಡಿ ಎಂದೇ ಪ್ರಸಿದ್ಧಿ ಪಡೆದಿದೆ. ಕನ್ನಡಿಗರು ಕರುಣೆಯುಳ್ಳವರು, ಅನ್ಯ ರಾಜ್ಯ, ದೇಶಗಳಿಂದ ಬಂದವರಿಗೆ ಊಟ ಮತ್ತು ವಸತಿಯನ್ನು ಕೊಟ್ಟು ನಾಡಾಭಿಮಾನ ಮೆರೆದವವರು. ನಮ್ಮ ಸಹಿಷ್ಣತೆ ಯನ್ನು ಉಪಯೋಗಿಸಿಕೊಂಡು ನಮ್ಮ ಒಳ್ಳೆತನವನ್ನು ದುರುಪಯೋಗ ಪಡಿಸಿಕೊಂಡರು.
ಕೆಲವರು ಇತ್ತ ಕಾಸರಗೋಡು, ಅನಂತಪುರ, ಸೊಲ್ಲಾಪುರ, ಅಕ್ಕಲಕೋಟೆ ಸೇರಿದಂತೆ ಹತ್ತು ಹಲವು ಪ್ರದೇಶಗಳನ್ನು ನಾವು ಬಿಟ್ಟು ಕೊಟ್ಟಿರುವುದು ಬೇಸರದ ಸಂಗತಿ. ಕರ್ನಾಟಕದ ಗಡಿ ವಾದದ ಸ್ವಾತಂತ್ರ್ಯ ಲಭಿಸಿ ಏಳು ದಶಕಗಳು ಕಳೆದಿದ್ದರೂ ಬಗೆ ಹರಿದಿಲ್ಲ. ಜೊತೆಗೆ ನದಿ ನೀರು ಹಂಚಿಕೆಯಂಥ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಾಗ ಕನ್ನಡ ನಾಡು ಇನ್ನೂ ಸುಭಿಕ್ಷೆಯ ಬೀಡಾಗುತ್ತದೆ. ಕನ್ನಡ ಭಾಷೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಗೊಳಿಸುವ, ಕನ್ನಡದ ದೀಪ ಬೆಳಗಿಸುವ ಕಾರ್ಯವನ್ನು ಪ್ರತಿಯೊಬ್ಬ ಕನ್ನಡಿಗ ಮಾಡಬೇಕು.
ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಪ್ರಾತಿನಿಧ್ಯವಿರಬೇಕು. ಕರ್ನಾಟಕದಲ್ಲಿ ಶೇ.90ರಷ್ಟು ಉದ್ಯೋಗ ಮೀಸಲಾತಿ ನೀಡುವ ಕೆಲಸವನ್ನು ಸರಕಾರಗಳು, ಸಂಘ-ಸಂಸ್ಥೆಗಳು ಮಾಡಬೇಕಾಗಿದೆ. ಕನ್ನಡಿಗರ ತಾಳ್ಮೆಯನ್ನು ಕೆಣುಕುವ ಪ್ರಯತ್ನವನ್ನು ನೆರೆ ರಾಜ್ಯದವರು ಮಾಡಬಾರದು. ಹಾಲಿ ಇರುವ ವಾದಗಳನ್ನು ಬಗೆಹರಿಸುವ ಕೆಲಸವನ್ನು ರಾಜಕೀಯ ನಾಯಕರು ಮಾಡಬೇಕು. ಕನ್ನಡ ಭಾಷೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಬಳಕೆಗೆ ಬರುವಂತೆ ಹಾಡು, ಕಾವ್ಯ, ಕೃತಿ, ನಾಟಕ, ಕಾದಂಬರಿಗಳನ್ನು ಮನೆ – ಮನೆಗೆ ತಲುಪುವಂತೆ ಮಾಡಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಎಲ್ಲಾ ತಂತ್ರಾಶಗಳನ್ನು ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಮಟ್ಟದ ಭಾಷೆಯನ್ನಾಗಿ ಪರಿವರ್ತಿಸಲುಪಣತೊಡಬೇಕು. ದೈನಂದಿನ ಜೀವನದಲ್ಲಿ ಕನ್ನಡ ಬಳಸೋಣ; ಏಕೆಂದರೆ ಭಾಷೆ ಬೆಳೆಯುವುದು ಮತ್ತು ಉಳಿಯುವುದು ಪ್ರಶಸ್ತಿ ಮತ್ತು ಭಾಷಣ ಮಾಡುವುದರಿಂದಲ್ಲ; ಅದನ್ನು ಬಳಸುವುದರಿಂದ ಮಾತ್ರ ಸಾಧ್ಯ ಎನ್ನುವ ಸತ್ಯ ಅರಿಯಬೇಕು. ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಜೈ ಭುವನೇಶ್ವರಿ. ಕನ್ನಡ ಭಾಷೆಯಲ್ಲಿ ತಂತ್ರಾಶಗಳನ್ನು ಅಭಿವೃದ್ಧಿಪಡಿಸಿ ಅಂತಾರಾಷ್ಟ್ರೀಯ ಭಾಷೆಯನ್ನಾಗಿಪರಿವರ್ತಿಸಬೇಕಿದೆ. ಕನ್ನಡ ಭಾಷೆಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಗೊಳಿಸುವ, ಕನ್ನಡದ ದೀಪ ಬೆಳಗಿಸುವ ಕಾರ್ಯವನ್ನು ಪ್ರತಿಯೊಬ್ಬ ಕನ್ನಡಿಗ ಮಾಡಬೇಕು.