ಆಧುನಿಕ ಭಾರತದ ಮಹಾನ್ ಬೌದ್ಧಿಕ ನವಕ್ಷತ್ರಿಯ; ಸೀತಾರಾಮ ಗೋಯಲ್
ಅವಲೋಕನ
ಮಂಜುನಾಥ್ ಅಜ್ಜಂಪುರ
ಸಹಸ್ರ ಸಹಸ್ರ ವರ್ಷಗಳ ಅದ್ಭುತ ಇತಿಹಾಸ – ಪರಂಪರೆಗಳ ಭಾರತವರ್ಷವಿಂದು ಸಂಕ್ರಮಣ ಸ್ಥಿತಿಯಲ್ಲಿದೆ. ಸುಷುಪ್ತಾವಸ್ಥೆ ಯಲ್ಲಿದ್ದ ನಮ್ಮ ದೇಶವನ್ನು ಎಚ್ಚರಿಸಿದ, ಸ್ವಾಮಿ ವಿವೇಕಾನಂದರು ಹೊಸ ಪರ್ವದ ಅಧ್ವರ್ಯುವಾದರು.
ಆರ್ಯ ಸಮಾಜವನ್ನಾರಂಭಿಸಿದ ಸ್ವಾಮಿ ದಯಾನಂದ ಸರಸ್ವತಿಗಳು, ಮಹರ್ಷಿ ಅರವಿಂದರು ಬೆಳಕು ತೋರಿದರು.೧೯ಮತ್ತು೨೦ನೆಯ ಶತಮಾನಗಳಲ್ಲಿ, ಬ್ರಿಟಿಷರು – ಕಮ್ಯೂನಿಸ್ಟರು – ಕಾಂಗ್ರೆಸ್ಸಿಗರು ವಿಕೃತಗೊಳಿಸಿದ್ದ ಭಾರತೀಯ ಇತಿಹಾಸವನ್ನು ಅಪಾರವಾದ ಪರಿಶ್ರಮದಿಂದ ಸರಿದಾರಿಗೆ ತರಲು ಬಹಳ ದೊಡ್ಡ ಕೊಡುಗೆ ನೀಡಿದವರು ಇತಿಹಾಸ ರಚನಾ ಶಾಸಜ್ಞರಾದ ಸೀತಾರಾಮ ಗೋಯಲ್ ಮತ್ತು ಪತ್ರಕರ್ತ ಅರುಣ್ ಶೌರಿ ಅವರು.
ಕೋಟ್ಯಂತರ ಭಾರತೀಯರಲ್ಲಿ ಇಂದು ಜಾಗೃತಿ ಮೂಡಿದ್ದರೆ, ಹೊಸ ಪ್ರೇರಣೆ ದೊರೆತಿದ್ದರೆ, ಅದಕ್ಕೆ ಪ್ರಮುಖವಾಗಿ – ಪ್ರತ್ಯಕ್ಷ ವಾಗಿ – ಪರೋಕ್ಷವಾಗಿ ಕಾರಣರಾದವರು ಸೀತಾರಾಮ ಗೋಯಲ್ ಮತ್ತು ಪತ್ರಕರ್ತ ಅರುಣ್ ಶೌರಿ ಅವರು. ಸೀತಾರಾಮ ಗೋಯಲ್ ಅವರು ಜನಿಸಿದ್ದು೧೯೨೧ರ ಅಕ್ಟೋಬರ್೧೬ರಂದು. ಸೀತಾರಾಮ ಗೋಯಲ್ ಅವರ ವಾಯ್ಸ ಆಫ್‌ ಇಂಡಿಯಾ ಸರಣಿಯ ಗ್ರಂಥಗಳು ಮತ್ತೆ ಭಾರತವನ್ನು ಪರಮ ವೈಭವದ ದಿನಗಳಿಗೆ ಕೊಂಡೊಯ್ಯುವಂತಹ ಪ್ರೇರಣೆಯನ್ನು ಭಾರತೀಯ ರಲ್ಲಿ ತುಂಬುವಷ್ಟು ಮಹತ್ವಪೂರ್ಣವಾದಂತಹವು.
ಸೀತಾರಾಮ ಗೋಯಲ್ ಅವರ ಶತಮಾನೋತ್ಸವದ ಈ ಸಂದರ್ಭದಲ್ಲಿ ಅವರನ್ನು – ಅವರ ಕೊಡುಗೆಯನ್ನು ಸ್ಮರಿಸೋಣ.ಭಾರತೀಯ ಇತಿಹಾಸವು ಪ್ರಾರಂಭವಾಗುವುದೇ ವಿದೇಶೀ ಆಕ್ರಮಣಗಳಿಂದ! ಅಲೆಕ್ಸಾಂಡರ್‌ನಿಂದ ಆರಂಭವಾಗಿ ಬ್ರಿಟಿಷರವರೆಗೆ ನಮ್ಮ ಇತಿಹಾಸವು ಬರಿಯ ಸೋಲಿನ ಕಥೆಯಾಗಿಹೋಗಿದೆ, ಅಳುಬುರುಕರ ರೋದನವಾಗಿ ಹೋಗಿದೆ!
ಭಾರತದ ಕಲೆ – ಸಾಹಿತ್ಯ – ಸಂಸ್ಕೃತಿ – ವಿಜ್ಞಾನ – ಆಡಳಿತ ಎಲ್ಲವೂ ಮೊಘಲರ ಇಲ್ಲವೇ ಬ್ರಿಟಿಷರ ಕೊಡುಗೆಗಳು ಮಾತ್ರ, ಎನ್ನು ವಂತಾಗಿದೆ. ದೇಶವೆಲ್ಲ ಹೆಮ್ಮೆಪಡುವ ಇತಿಹಾಸ – ಸಂಗತಿಗಳನ್ನೂ, ಪರಂಪರೆಯನ್ನೂ ಅಲ್ಲಗಳೆಯು ವುದು ಮತ್ತು ಸಂಕು ಚಿತವೂ – ಹಿಂಸಾಪ್ರಧಾನವೂ ಆದ ಆಳ್ವಿಕೆಗಳನ್ನು ವೈಭವೀಕರಿಸುವುದು ಈ ದೇಶದ ಮಾರ್ಕ್ಸ್ ವಾದಿ ಇತಿಹಾಸಕಾರರ ದುರು ದ್ದೇಶವಾಗಿತ್ತು, ಷಡ್ಯಂತ್ರವಾಗಿತ್ತು. ಭಾರತೀಯರ ಅಸ್ಮಿತೆ – ಆತ್ಮಾಭಿಮಾನಗಳನ್ನು ನಾಶಮಾಡಿಬಿಡುವ ಬ್ರಿಟಿಷರ ವಾರಸಿಕೆ ಯನ್ನು ಈ ಕಾಂಗ್ರೆಸ್ – ಕಮ್ಯೂನಿಸ್ಟ್ ಜೋಡಿಯು ಸ್ವಾತಂತ್ರ್ಯೋತ್ತರ ಪರ್ವದಲ್ಲಿ ಮುಂದುವರಿಸಿಕೊಂಡುಹೋಯಿತು.
ಕಮ್ಯೂನಿಸ್ಟ್ ವಿಚಾರಧಾರೆಗೆ ನಾನು ಸಹ ಆಕರ್ಷಿತನಾಗಿ ಹೋಗಿ. ಬಿಡಿಸಿಕೊಳ್ಳಲು, ತುಂಬ ತುಂಬ ಅಧ್ಯಯನ ಮಾಡಬೇಕಾ ಯಿತು ಮತ್ತು ಕಾಲು ಶತಮಾನವೇ ಬೇಕಾಯಿತು. ತುಂಬ ಜನ ಸಮಾಜವಾದಿ ಹಾಗೂ ಕಮ್ಯೂನಿಸ್ಟ್ ಬರಹಗಾರರನ್ನು, ಕಲಾವಿದರನ್ನು ಬಹಳ ವರ್ಷಗಳಿಂದ ನೋಡುತ್ತ ಬಂದಿದ್ದೇನೆ. ಇಡೀ ವ್ಯವಸ್ಥೆಯನ್ನು ನಾಶ ಮಾಡುತ್ತೇವೆ, ಧ್ವಂಸ ಮಾಡುತ್ತೇವೆ ಎನ್ನುತ್ತಾ ಕ್ರಾಂತಿಯ ಮಾತನ್ನೇ ಆಡುತ್ತಿದ್ದವರು, ಅಕಾಡೆಮಿಗಳನ್ನು – ಪ್ರಾಧಿಕಾರಗಳನ್ನು – ಸರಕಾರಿ – ಸವಲತ್ತುಗಳನ್ನುಆಪೋಶನ ತೆಗೆದುಕೊಂಡು ಸೈಟು, ಬಂಗಲೆ, ಕಾರು, ವಿದೇಶ ಪ್ರವಾಸ ಹೀಗೆ ಸಾರ್ವಜನಿಕರ ಹಣವನ್ನು ಮಾತ್ರ ಧ್ವಂಸ ಮಾಡು ತ್ತಿರುವುದು ನೋಡಿ ನೋಡಿ ಚಕಿತನಾಗಿದ್ದೇನೆ.
ಧರ್ಮ, ಜಾತಿವ್ಯವಸ್ಥೆ, ಪುರೋಹಿತಶಾಹಿ ನಾಶವಾಗಬೇಕು ಎಂದು ದಿನವೂ ಗುಟುರು ಹಾಕುತ್ತಿದ್ದ ನಮ್ಮ ಬುದ್ಧಿಜೀವಿಗಳು, ಪತ್ರಕರ್ತರು, ಸಿನಿಮಾ – ಕಿರುತೆರೆ – ನಾಟಕಗಳ ನಿರ್ದೇಶಕರು, ಅಪ್ಪಿತಪ್ಪಿಯೂ ಇಸ್ಲಾಂ ಬಗೆಗೆ – ಕ್ರೈಸ್ತ ಮತದ ಬಗೆಗೆ ಮಾತನಾ ಡುವುದಿಲ್ಲ. ಬಾಂಗ್ಲಾದೇಶಿ ಮುಸ್ಲಿಂ ಅಕ್ರಮ-ನುಸುಳುಕೋರರ ಬಗೆಗೆ, ಪಾಕಿಸ್ತಾನ – ಬಾಂಗ್ಲಾದೇಶಗಳಗುತ್ತಿರುವ ಹಿಂದೂ – ಸಿಖ್ – ಬೌದ್ಧರ ಮಾರಣಹೋಮ, ಮತಾಂತರ, ಅತ್ಯಾಚಾರ, ಆಸ್ತಿಪಾಸ್ತಿ ಕೈವಶಗಳ ಬಗೆಗೆ ಇವರದ್ದು ಸ್ಮಶಾನಮೌನ. ಕ್ರೈಸ್ತರ ಚಚ್ಗಳಿಗೆ – ಇಸ್ಲಾಮೀ ಭಯೋತ್ಪಾದಕ ಸಂಘಟನೆಗಳಿಗೆ ಬರುತ್ತಿರುವ ಅಪಾರಮೊತ್ತದ ವಿದೇಶಿ ಹಣದ ಬಗೆಗೆ ಮತ್ತು  ಅದರಿಂದಾ ಗುತ್ತಿರುವ ಅವ್ಯವಹಾರಗಳ ಬಗೆಗೆ ಇವರು ಯಾರೂ ಮಾತನಾಡುವುದೇ ಇಲ್ಲ.
ವಕ್ಫ್ ಆಸ್ತಿಗಳ ದುರುಪಯೋಗದ ಬಗೆಗೆ – ಕಾಶ್ಮೀರಿ ಪಂಡಿತರು ತಮ್ಮ ದೇಶದಲ್ಲಿಯೇ ಅನಾಥರಾಗಿ, ನಿರ್ಗತಿಕರಾಗಿ ನಾಶವಾಗುತ್ತಿರುವ ಬಗೆಗೆ, ಪಾಪ, ನಮ್ಮ ಈ ಕ್ರಾಂತಿಕಾರಿಗಳಿಗೆ ಏನೂ ಅನ್ನಿಸುವುದಿಲ್ಲ! ಸೀತಾರಾಮ ಗೋಯಲ್ ಮತ್ತು ಅರುಣ್ ಶೌರಿ ಅವರು ಅಕ್ಷರಶಃ ಸಾವಿರಾರು ಸಾಕ್ಷ್ಯಾಧಾರಗಳನ್ನು, ದಾಖಲೆಗಳನ್ನು ನೀಡಿ, ಈ ಕಮ್ಯೂನಿಸ್ಟ್ – ಇಸ್ಲಾಂ – ಕ್ರೈಸ್ತಮತಗಳಕುತಂತ್ರ, ದ್ರೋಹಗಳನ್ನು ಬಯಲಿಗೆಳೆದಿದ್ದಾರೆ.
ಅಪಾರವಾದ ಅಧ್ಯಯನದಿಂದ ಭಾರತೀಯ ಇತಿಹಾಸದ ನಿಜಸ್ವರೂಪವನ್ನು ಜನರ ಮುಂದೆ ಪ್ರಸ್ತುತಪಡಿಸಿದ್ದಾರೆ. ಮೂರು ದಶಕಗಳ ಹಿಂದೆಯೇ, ಗೋಯಲ್ ಅವರು ಅಕ್ರಮ ನುಸುಳುಕೋರರ ಬಗೆಗೆ, ಫಿಫ್ತ್ ( ) ಕಾಲಂ – ಸ್ಲೀಪರ್ ಸೆಲ್‌ಗಳ ಬಗೆಗೆ ಎಚ್ಚರಿಕೆ ನೀಡಿರುವುದು ಅಚ್ಚರಿ ಹುಟ್ಟಿಸುತ್ತದೆ. ಹಾಗೆ ಬೆಳೆದುನಿಂತ ಅಪಾಯಗಳ ವಿಷಫಲಗಳನ್ನು ನಾವಿಂದು ನಿತ್ಯ ಉಣ್ಣುತ್ತಿದ್ದೇವೆ, ಹಬ್ಬುತ್ತಲೇ ಇರುವ ವಿಷವೃಕ್ಷಗಳ ಬಿಳಲು – ಬೇರುಗಳನ್ನು ಪ್ರತಿದಿನ ನಾವು ಎಡವುತ್ತಿದ್ದೇವೆ, ಎಡತಾಕು ತ್ತಿದ್ದೇವೆ.
ಶಿವಾಜಿ ಮಹಾರಾಜರು ಸೇನೆ ಕಟ್ಟಿ, ರಾಜ್ಯ ಕಟ್ಟಿ ಮೊಘಲಾಶಾಹಿಗೆ ಸವಾಲು ಹಾಕಿದರು. ಆದರೆ ಮುಸ್ಲಿಮರ ಬಗೆಗೆ ದ್ವೇಷ ಸಾಽಸಲಿಲ್ಲ, ಸೇಡು ತೀರಿಸಿಕೊಳ್ಳಲಿಲ್ಲ. ಮಹಾರಾಷ್ಟ್ರದಲ್ಲಿ ಇಂದು ಕಾಣುವ ಮುಸ್ಲಿಮರು ಉಳಿದಿದ್ದೇ ಶಿವಾಜಿ ಮಹಾರಾಜರ ಪರಮತ ಸಹಿಷ್ಣುತೆಯಿಂದ. ಹಾಗೆ ನೋಡಿದರೆ ಅವರು ಶಿವಾಜಿ ಮಹಾರಾಜರ ಬಗ್ಗೆ ಕೃತಜ್ಞತೆಯಿಟ್ಟುಕೊಳ್ಳಬೇಕಿತ್ತು. ನಮ್ಮ ಮಾಧ್ಯಮಗಳು ತೋರಿಸದಿದ್ದರೂ, ಅಂತರ್ಜಾಲದಲ್ಲಿ, ಮುಸ್ಲಿಮರು ಮೀರಜ್‌ನಲ್ಲಿ ಮಾಡಿದ ಗಲಭೆಗಳ ವೀಡಿಯೋ ನೋಡಿದೆ.ಶಿವಾಜಿ ಮಹಾರಾಜರು ಅಫಜಲ ಖಾನ್‌ನನ್ನು ವಧಿಸಿದ ಚಿತ್ರಗಳನ್ನು, ಅಲ್ಲಿ ಗಣೇಶೋತ್ಸವದಲ್ಲಿ ಪ್ರದರ್ಶಿಸಲಾಗಿತ್ತು.
ಆ ಚಿತ್ರಗಳನ್ನು ಕಿತ್ತು ಧ್ವಂಸಮಾಡಿ, ಪೊಲೀಸ್ ಜೀಪು ಹತ್ತಿ ಹಸಿರು ಬಾವುಟ ಹಾರಿಸಿದ ಮುಸ್ಲಿಮರನ್ನು ನೋಡಿ ವಿಚಿತ್ರ ವೆನಿಸಿತು. ಮೂಲತಃ ಅವರು ಈ ದೇಶದ ಹಿಂದೂಗಳೇ, ಮೂಲನಿವಾಸಿಗಳೇ. ಸೌದಿ ಅರೇಬಿಯಾದಿಂದ ಮೊನ್ನೆ – ನಿನ್ನೆ ಬಂದವ ರೇನಲ್ಲ. ಆಕ್ರಮಣಕಾರಿಗಳ ಪದಾಘಾತಕ್ಕೆ, ಅತ್ಯಾಚಾರಕ್ಕೆ, ದಾಸ್ಯಕ್ಕೆ ಗುರಿಯಾದವರು ಮತ್ತು ಬಲವಂತದ ಮತಾಂತರಕ್ಕೆತುತ್ತಾದವರು, ಇಂದು ತಮ್ಮ ತಾಯಿಯನ್ನೇ ಮರೆತು, ಒಡಹುಟ್ಟಿದವರನ್ನೇ ಮರೆತು ತಮ್ಮ ಇಡೀ ಸಮುದಾಯದ ಉಳಿವಿಗೆ ಕಾರಣರಾದ ಶಿವಾಜಿ ಮಹಾರಾಜರ ಚಿತ್ರಗಳನ್ನು ನಾಶಪಡಿಸಿದುದು ಎಷ್ಟು ಭಯಾನಕ!
ನಮ್ಮಲ್ಲಿ ಮಹಾಪುರುಷರು ಅನೇಕರು. ಕಲಾವಿದರು, ವೇದ – ಶಾಸ್ತ್ರ ಪಾರಂಗತರು, ಋಷಿಗಳು, ಆಡಳಿತಗಾರರು, ನರ್ತಕರು, ವೀರರು, ನೀವು ಯಾವ ಕ್ಷೇತ್ರವನ್ನೇ ನೋಡಿ, ಮಹಾನ್ ಸಾಧಕರು ಸಿಕ್ಕುತ್ತಾರೆ. ಅಷ್ಟೇ ಅಲ್ಲ; ಜ್ಞಾನಿಗಳು, ವಿರಾಗಿಗಳು, ಯೋಗಿಗಳು, ಅವಧೂತರು, ನಮ್ಮಲ್ಲಿರುವಷ್ಟು ಬೇರೆಲ್ಲೂ ಇರಲಾರರೋ ಏನೋ! ವೇದಗಳು, ಉಪನಿಷತ್ತುಗಳು, ಮಹಾಕಾವ್ಯ ಗಳು, ನಮ್ಮ ಪರಂಪರೆ, ಅಧ್ಯಾತ್ಮ – ಯೋಗ ಮುಂತಾದವುಗಳ ಬಗೆಗೆ ಗೌರವದಿಂದ – ಪ್ರೀತಿಯಿಂದ ಮೆಚ್ಚಿ ಮಾತನಾಡುವವರು ತುಂಬ ಜನ.
ನಮ್ಮ ಹಿಂದೂ ಸಂಸ್ಕೃತಿಯ ಬಗೆಗೆ ಅನೇಕ ವಿದೇಶೀಯರೂ ನಮ್ಮಂತೆಯೇ ಅಭಿಮಾನವಿಟ್ಟುಕೊಂಡಿದ್ದಾರೆ. ಆದರೆ ನಾವು ಅನೇಕ ಬಾರಿ ಗಮನಿಸದ, ಗಂಭೀರವಾಗಿ ಪರಿಗಣಿಸದ ವಿಷಯವೊಂದಿದೆ. ಹಿಂದೂ ಸಮಾಜ ಉಳಿಯದೇ ಹೋದರೆ, ಈ ನಮ್ಮ ಕಲೆ, ಶಿಲ್ಪಗಳು, ನೃತ್ಯ, ಚಿತ್ರಕಲೆ, ಭಾಷೆಗಳು, ಸಾಹಿತ್ಯ ಉಳಿಯುತ್ತವೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಲು ನಾವು ಮರೆತು ಬಿಡುತ್ತೇವೆ. ಸಾರಾಂಶ ಇಷ್ಟೇ. ಹಿಂದೂ ಸಮಾಜವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ಹಿಂದೆಂದಿಗಿಂತಲೂ ಇಂದು ಈ ಅನಿವಾರ್ಯತೆ ತುಂಬ ಹೆಚ್ಚಾಗಿದೆ. ಮಹತ್ವದ ಈ ಅಂಶವನ್ನು ಒತ್ತಿ ಹೇಳಿದ ಅಪರೂಪದ ಚಿಂತಕ – ಲೇಖಕರಬ್ಬರು, ಸೀತಾರಾಮ ಗೋಯಲ್ ಅವರು. ಗೋಯಲ್ ಹುಟ್ಟಿದ್ದು೧೯೨೧ರಲ್ಲಿ.
ಅವರ ಹಿರಿಯರು ಹರ್ಯಾಣ ಮೂಲದವರು. ಹದಿನೆಂಟನೇ ಶತಮಾನದ ಪೂರ್ವಾರ್ಧದಲ್ಲಿ ಗೋಯಲ್ ಅವರ ಪೂರ್ವಿಕರು ಸಂತ ಗರೀಬದಾಸ್ ಅವರ ಭಕ್ತರಾದರು. ಗರೀಬದಾಸ್ ಅವರು ಅನಕ್ಷರಸ್ಥ(?) ರಾದರೂ, ಹದಿನೆಂಟು ಸಾವಿರ ಪದ್ಯಗಳ ಕಾವ್ಯ ರಚಿಸಿದ್ದರು ಮತ್ತು ಹಾಡುತ್ತಿದ್ದರು. ಆ ಪದ್ಯಗಳಿಂದಲೇ ಗೋಯಲ್ ಅವರ ಪೂರ್ವಿಕರ ಸುಪ್ರಭಾತವಾಗುತ್ತಿತ್ತು.೨೦ನೆಯಶತಮಾನದ ಆರಂಭದಲ್ಲಿ ಗೋಯಲ್ ಅವರ ತಂದೆ ಆಗಾಗ ಗ್ರಂಥ್ ಸಾಹೇಬ್ ಓದುತ್ತಿದ್ದರು. ಕಬೀರ, ಗುರು ನಾನಕ್,ರವಿದಾಸ್, ದಾದು, ನಾಮದೇವ, ಚಿಪ್ಪ, ಪಿಪ, ಧನ್ನ ಮುಂತಾದ ಸಂತರ ಕತೆಗಳು ಬಾಲಕ ಸೀತಾರಾಮ ಗೋಯಲ್ ಮೇಲೆ ಪ್ರಭಾವ ಬೀರಿದವು.
ಅಂತೆಯೇ ಮುಸ್ಲಿಂ ಸೂಫಿ ಸಂತರಾದ ರಬಿಯಾ, ಮನಸೂರ್, ಆದಂ ಸುಲ್ತಾನ್, ಜುನಾಯಿದ್, ಬಯಾಜಿದ್, ಷಮ್ಸ ತಬ್ರೀಜ್ಅವರ ಕತೆಗಳೂ ಪ್ರಭಾವಿಸಿದವು. ಕೋಲ್ಕತ್ತಾದಲ್ಲಿನ ಅವರ ಬಾಲ್ಯದ ಅನುಭವಗಳಲ್ಲಿ, ಭಾರತ ಸ್ವಾತಂತ್ರ್ಯ ಹೋರಾಟದ ಚಿತ್ರ ಗಳೂ ಇವೆ. ಉಪ್ಪಿನ ಸತ್ಯಾಗ್ರಹ, ಕ್ರಾಂತಿಕಾರಿ ಜತೀಂದ್ರನಾಥ ದಾಸರ ಪಾರ್ಥಿವ ಶರೀರದ ಮೆರವಣಿಗೆ, ಕ್ರಾಂತಿಕಾರಿ ಸರ್ದಾರ್ ಭಗತ್ ಸಿಂಗ್ ಅವರ ಬಲಿದಾನ, ಇತ್ಯಾದಿಗಳು ಬಾಲಕ ಗೋಯಲ್‌ಗೆ ನಮ್ಮ ದೇಶದ ಪಾರತಂತ್ರ್ಯದ ದುಃಸ್ಥಿತಿಯನ್ನು ಪರಿಚಯಿಸಿದವು.
ಗೋಯಲ್ ಅವರ ತಂದೆ – ತಾಯಿ ಇದ್ದ ಹಳ್ಳಿಯಲ್ಲಿ ಆರ್ಯಸಮಾಜವು ಕಾಂಗ್ರೆಸ್ಸಿಗಿಂತಲೂ ಹೆಚ್ಚಿನ ಪ್ರಭಾವ ಉಂಟು ಮಾಡಿತ್ತು. ಗೋಯಲ್ ನೆರೆಹೊರೆಯಲ್ಲಿದ್ದವರೆ ಮುಸ್ಲಿಮರು. ಅವರೆ ಎಣ್ಣೆ ಮಾರುವವರು. ಕಠಿಣ ಪರಿಶ್ರಮಿಗಳೂ, ಶಾಂತ ಸ್ವಭಾವದವರೂ ಆದ ಈ ಮುಸ್ಲಿಮರು ಹಿಂದುಗಳೊಂದಿಗೆ ಒಳ್ಳೆಯ ಬಾಂಧವ್ಯ ವನ್ನಿಟ್ಟುಕೊಂಡಿದ್ದರು. ಸಂತ ಕಬೀರ್ ಮತ್ತು ಗುರು ನಾನಕರ ನಿರ್ಗುಣ ಪರಂಪರೆಯ ಪ್ರಭಾವವಿದ್ದ ಗರೀಬದಾಸರ ಶಿಷ್ಯರಾದ ಈ ಗೋಯಲ್ ಮನೆತನದ ಗಂಡಸರು ಮೂರ್ತಿಪೂಜೆ ಮುಂತಾದವುಗಳಲ್ಲಿ ಭಾಗವಹಿಸುತ್ತಿದ್ದುದು ಕಡಿಮೆ. ಆದರೆ ಹೆಂಗಸರು ಮಾತ್ರ ಉಪವಾಸ, ವ್ರತ,ದೇವಸ್ಥಾನ ಗಳಿಗೆ ಹೋಗುವುದು, ಮುಂತಾದವುಗಳನ್ನು ಪಾಲಿಸುತ್ತಿದ್ದರು.
ಹಳ್ಳಿಯಲ್ಲಿದ್ದ ಗೋಯಲ್ ಅವರ ಸಮುದಾಯದ ಓರ್ವ ಸ್ವಾತಂತ್ರ್ಯ ಹೋರಾಟಗಾರರ ವ್ಯಕ್ತಿತ್ವ, ಅವರು ಜೈಲಿನಲ್ಲಿ ತುಂಬ ವರ್ಷ ಇದ್ದದ್ದು, ಹರಿಜನರ ಪ್ರಗತಿಗೆ ಅವರ ಅಪಾರ ಪರಿಶ್ರಮ ಮುಂತಾದವು ಬಾಲಕನ ಮೇಲೆ ಗಾಢ ಪರಿಣಾಮ ಬೀರಿದವು.ಗೋಯಲ್‌ರಿಗೆ ಸ್ವಾಮಿ ದಯಾನಂದ ಸರಸ್ವತಿ ಅವರ ಸತ್ಯಾರ್ಥ ಪ್ರಕಾಶ ಮಹಾಗ್ರಂಥದ ಪರಿಚಯವಾದುದು ಈ ಕಾಲಘಟ್ಟದಲ್ಲಿಯೇ. ಸತ್ಯಾರ್ಥ ಪ್ರಕಾಶದ ತೀಕ್ಷ್ಣ ಸತ್ಯದ ಪ್ರಖರತೆಯಿಂದ ಗೋಯಲ್‌ರ ಎಳೆಯ ಮನಸ್ಸು ವಿಚಲಿತವಾಯಿತು.
ಶಾಲಾ ವಿದ್ಯಾರ್ಥಿಯಾಗಿದ್ದಾಗ ಗೋಯಲ್‌ರಿಗೆ ಜೈನಧರ್ಮದ ಪರಿಚಯವೂ ಆಯಿತು. ಗೆಳೆಯನೊಬ್ಬ ತಂದುಕೊಟ್ಟ ರೋಮಾ ರೋಲಾ ಬರೆದ ಶ್ರೀರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಗಳು ಅಧ್ಯಾತ್ಮದತ್ತ ಬಾಲಕನನ್ನು ಸೆಳೆದವು. ಒಮ್ಮೆ ಬಾಲಕ ತನ್ನಲ್ಲಿದ್ದ ಐದು ಕಾಸು ನಾಣ್ಯ ಕೊಟ್ಟು ನ್ಯೂಟೆಸ್ಟಮೆಂಟ್ ಪ್ರತಿಯನ್ನು ಹಳೆಯ ಪುಸ್ತಕ ಮಾರುವವ ನಿಂದ ಕೊಂಡುಕೊಂಡ. ಆ ಕಾಲಕ್ಕೆ  ಅದು ಸಣ್ಣ ಮೊತ್ತವೇನಾಗಿರಲಿಲ್ಲ.
ಬಾಲಕನ ಪುಸ್ತಕ ಪ್ರೀತಿ ಅಂತಹುದು. ಆ ಪುಸ್ತಕದಲ್ಲಿನ ಕ್ರಿಸ್ತನ ಉಪದೇಶದ ಭಾಗ, ಅದೆಷ್ಟು ಇಷ್ಟವಾಯಿತೆಂದರೆ, ಕ್ರಿಸ್ತನ ಚಿತ್ರವೊಂದನ್ನು ಕೊಂಡುತಂದು, ಮನೆಯಲ್ಲಿ ತನ್ನ ಕೊಠಡಿಯಲ್ಲಿದ್ದ ಮಹಾತ್ಮಾ ಗಾಂಧಿ, ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಸ್ವಾಮಿ ರಾಮತೀರ್ಥರ ಚಿತ್ರಗಳೊಂದಿಗೆ ತೂಗುಹಾಕಿದ. ನ್ಯೂಟೆಸ್ಟಮೆಂಟ್, ಕ್ರಿಸ್ತನ ಚಿತ್ರ, ಬೈಬಲ್ ಮುಂತಾದವು ಬಿಟ್ಟಿಯಾಗಿಯೇ ಚರ್ಚ್‌ಗಳಲ್ಲಿ ಸಿಕ್ಕುತ್ತಿದ್ದವು, ಎಂಬುದು ಹುಡುಗನಿಗೆ ಆಗ ಗೊತ್ತಿರಲಿಲ್ಲ. ಪುಸ್ತಕಗಳ ಹುಚ್ಚಿನ ಬಾಲಕ ಸೀತಾರಾಮನಿಗೆ ಗಾಂಧಿವಾದ ಪ್ರಿಯವಾಗುತ್ತ ಹೋಯಿತು. ಸಹಪಾಠಿಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಚಯವೂ ಆಯಿತು.
ಎಚ್.ಜಿ.ವೇಲ್ಸ್ ರಚಿಸಿದ ಔಟ್ಲೆ ನ್ ಆಫ್‌ ಹಿಸ್ಟರಿ, ಗಾಂಧಿಯಿಸಂ ವರ್ಸಸ್ ಸೋಷಿಯಲಿಸಂ, ಹೆರಾಲ್ಡ್ ಲಸ್ಕಿ ಬರೆದ ಕಮ್ಯೂನಿಸಂ, ಜಾನ್ ಸ್ಟ್ರಾಚೆ ಬರೆದ ಥಿಯರಿ ಅಂಡ್ ಪ್ರಾಕ್ಟೀಸ್ ಆಫ್‌ ಸೋಷಿಯಲಿಸಂ, ಎಡ್ಗರ್ ಸ್ನೋ ರಚಿಸಿದ ರೆಡ್ ಸ್ಟಾರ್ ಓವರ್ ಚೈನಾ ಮುಂತಾದ ಪುಸ್ತಕಗಳಿಂದ, ಮುಂದೆ ಕಮ್ಯೂನಿಸಂ ಪ್ರಿಯವಾಗುತ್ತ ಹೋಯಿತು. ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ ಓದಿದ ಮೇಲಂತೂ ಉಸಿರು ಬಿಗಿಹಿಡಿಯುವಂತಾಯಿತು. ಬೌದ್ಧಿಕ ಬೆಳವಣಿಗೆಯ ಈ ಹಂತದಲ್ಲಿ ಇಪ್ಪತ್ತೆರಡರ ವಯಸ್ಸಿನ ಹೊತ್ತಿಗೆ ಸೀತಾರಾಮ ಗೋಯಲ್ ಕಮ್ಯೂನಿಸ್ಟ್ ಆಗಿದ್ದರು ಮತ್ತು ಕಟ್ಟಾ ನಾಸ್ತಿಕರಾಗಿದ್ದರು. ಜೀವನದ ಈ ಘಟ್ಟದಲ್ಲಿ ಸೀತಾ ರಾಮ ಗೋಯಲ್ ಅವರ ಹಳೆಯ ಸ್ನೇಹಿತ ರಾಮಸ್ವರೂಪರು, ಅವರ ವೈಚಾರಿಕ ವಿಕಾಸಕ್ಕೆ ಕಾರಣರಾದರು. ಗೋಯಲ್ ಯಾವುದನ್ನೂ ಸುಮ್ಮನೇ ಒಪ್ಪುವವರಲ್ಲ. ಆಳವಾದ ಅಧ್ಯಯನ, ಪರಾಮರ್ಶೆಗಳಿಂದಲೇ ತಮ್ಮ ಬೌದ್ಧಿಕತೆಯ ಸೌಧವನ್ನು ನಿರ್ಮಿಸಿಕೊಂಡವರು.
ಫೆಬ್ರುವರಿ೧೯೪೮ರ ವೇಳೆಗೆ ಕಮ್ಯೂನಿಸ್ಟ್ ಪಕ್ಷವನ್ನೇ ಸೇರಲು ಹೊರಟಿದ್ದ ಗೋಯಲ್‌ರಿಗೆ, ಅವರ ಸಂಸ್ಕೃತದ ಓರ್ವ ಪ್ರೊಫೆಸರ್ ಹೊಸಹೊಸ ವಿಚಾರಗಳ ಬೆಳಕು ಚೆಲ್ಲಿದರು. ಆರ್ಯರು ಭಾರತವನ್ನು ಆಕ್ರಮಿಸಿದರು, ದ್ರಾವಿಡರನ್ನು ದಕ್ಷಿಣ ದಿಕ್ಕಿಗೆ ಓಡಿಸಿದರು ಎಂಬ ಯೂರೋಪಿಯನ್ ಪ್ರಣೀತ ವಾದಸರಣಿಯು ಮೋಸದ್ದು, ಎಂದು ತಿಳಿದಾಗ ಗೋಯಲ್ ಆಘಾತಕ್ಕೆ ಒಳಗಾಗಿ ಬಿಟ್ಟರು. ಏಕೆಂದರೆ ಬ್ರಿಟಿಷರು ಬರೆಸಿ ಶಾಲೆಗಳಲ್ಲಿ ಕಲಿಸುತ್ತಿದ್ದ ಸುಳ್ಳು ಇತಿಹಾಸ ಉಂಟುಮಾಡಿದ್ದ ಭ್ರಮೆಗಳನ್ನು ಕಳಚಿ ಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ.
ಮೊಹಮ್ಮದ್ ಅಲಿ ಜಿನ್ನಾ ಬೀದಿ ಕಾಳಗಕ್ಕಾಗಿ ನೀಡಿದ ಕರೆ ಕೋಲ್ಕತದಲ್ಲಿ ಭೀಷಣ ಪರಿಣಾಮವನ್ನುಂಟು ಮಾಡಿತು.೧೯೪೬ರ ಆಗಸ್ಟ್೧೬ – ೧೭ರ ಹಿಂಸೆ, ಅತ್ಯಾಚಾರ, ಕೊಲೆ, ದೊಂಬಿ, ಆಸ್ತಿ ಪಾಸ್ತಿ ನಾಶ, ಲೂಟಿ, ಬೆಂಕಿ ಹಚ್ಚುವ ಮತೀಯ ಗಲಭೆಗಳನ್ನು ಗೋಯಲ್ ಕಣ್ಣಾರೆ ಕಂಡರು. ರಸ್ತೆರಸ್ತೆಗಳಲ್ಲಿ ಹೆಣಗಳ ರಾಶಿ ಬಿದ್ದಿತು. ಹೂಗ್ಲಿ ನದಿಯಲ್ಲಿ ಹೆಣಗಳು ತೇಲಿಹೋದವು, ನದಿಯು ರಕ್ತದಿಂದ ಕೆಂಪಾಯಿತು. ಗುಂಪು ಗಲಭೆ, ದೊಂಬಿಗಳ ರಕ್ಕಸನೃತ್ಯಕ್ಕೆ ಗೋಯಲ್ ಸಾಕ್ಷಿಯಾದರು. ಸ್ವತಃ ಅವರು ಜೀವಸಹಿತಉಳಿದದ್ದೂ ವಿಸ್ಮಯವೇ.
ಅನಂತರದ ಕಾಲಘಟ್ಟದಲ್ಲಿ ಫ್ರೆಂಚ್ ಸಮಾಜವಾದಿ ಲೇಖಕಿ ಸುಸೇನ್ ಲ್ಯಾಬಿನ್ ಬರೆದ ಸ್ಟ್ಯಾಲಿನ್‌ನ ರಷ್ಯಾ ಓದಿದಾಗ, ಸೋವಿಯತ್ ಒಕ್ಕೂಟದ ವಿಭಿನ್ನ ಮುಖಗಳು ಪರಿಚಯವಾದವು. ಇಂದು ಅಮೆರಿಕಾ () ಏನಾಗಿದೆಯೋ, ಅದು ಸೋವಿಯತ್ ಒಕ್ಕೂಟದ ನಾಳೆಯ ಗುರಿಯಾಗಿತ್ತು. ಪ್ರಭುತ್ವ – ನಿರ್ದೇಶಿತ ( ) ಬಂಡವಾಳಶಾಹಿ ಮತ್ತು ವ್ಯವಸ್ಥಿತ ಭಯೋತ್ಪಾದನೆಗಳು ರಷ್ಯಾ ಅನುಸರಿಸಿದ ಮಾರ್ಗಗಳಾಗಿದ್ದರೆ, ಅಮೆರಿಕಾ ದೇಶವು ಮಾರುಕಟ್ಟೆ ಶಕ್ತಿಗಳಿಗೆ,ಲಾಭಪ್ರದತೆಗೆ ಆದ್ಯತೆ ನೀಡಿತ್ತು. ಮನುಷ್ಯ ಜೀವನದ ಔನ್ನತ್ಯಗಳನ್ನು ಎಲ್ಲರೂ ಮರೆತಿದ್ದರು.
ಬೌದ್ಧಿಕ ಗೊಂದಲದ ಈ ಸಂಕ್ರಮಣ ಸ್ಥಿತಿಯಲ್ಲಿ, ಮತ್ತೆ ಗೆಳೆಯ ರಾಮಸ್ವರೂಪರ ವಿಚಾರಗಳು, ಸಲಹೆ, ಮಾರ್ಗದರ್ಶನ ಗೋಯಲ್ರಿಗೆ ದಿಕ್ಕು ತೋರಿದವು. ಗೋಯಲ್‌ರ ಹೌ ಐ ಬಿಕೇಮ್ ಎ ಹಿಂದು ಕೃತಿಯು ಅವರ ಬೌದ್ಧಿಕ ಆತ್ಮವೃತ್ತಾಂತ. ಆರ್ಯ ಸಮಾಜದಿಂದ ಗಾಂಧಿವಾದದೆಡೆಗೆ, ಗಾಂಧಿವಾದದಿಂದ ಕಮ್ಯೂನಿಸಂ ಕಡೆಗೆ, ಕಮ್ಯೂನಿಸಂನಿಂದ ಭಾರತೀಯ ತತ್ತ್ವಜ್ಞಾನ –ಅಧ್ಯಾತ್ಮಗಳಿಗೆ ಗೋಯಲರು ಹಿಂತಿರುಗಿದ ಹಾದಿಯ ಅಪೂರ್ವ ಚಿತ್ರಣವನ್ನು ಈ ಕೃತಿಯಲ್ಲಿ ಕಾಣಬಹುದು. ಹಿಂದಿ, ಉರ್ದು, ಬಂಗಾಳಿ, ಸಂಸ್ಕೃತ, ಪರ್ಷಿಯನ್ ಹಾಗೂ ಇಂಗ್ಲಿಷ್ ಭಾಷೆಗಳನ್ನು ಕಲಿತ ಸೀತಾರಾಮ ಗೋಯಲರು ಸಾಹಿತ್ಯ, ಅಧ್ಯಾತ್ಮ, ತತ್ತ್ವಜ್ಞಾನ, ಧರ್ಮ, ಮತ, ಇತಿಹಾಸ, ಸಮಾಜಶಾಸ ಮತ್ತು ಪ್ರಾಚೀನ – ಮಧ್ಯಕಾಲೀನ – ಆಧುನಿಕ ಸಂಸ್ಕೃತಿ – ನಾಗರಿಕತೆ ಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು.
ಮಹಾಭಾರತ, ಸುತ್ತಪಿಟಕ, ಪ್ಲೇಟೋ ಮತ್ತು ಮಹರ್ಷಿ ಅರವಿಂದರಿಂದ ಗೋಯಲರು ಸೂರ್ತಿ ಪ್ರೇರಣೆಗಳನ್ನು ಪಡೆದು ಕೊಂಡರು. ಇಸ್ಲಾಂ, ಕ್ರೈಸ್ತಮತ ಮತ್ತು ಕಮ್ಯೂನಿಸ್ಟ್ ವಿಚಾರಧಾರೆಗಳ ಬಗೆಗೆ ವಿಸ್ತೃತ ಅಧ್ಯಯನ ಮಾಡಿದ ಗೋಯಲರು ದಾಖಲೆ – ಸಾಕ್ಷ್ಯಾಧಾರಗಳಿಗೆ ತುಂಬ ಮಹತ್ತ್ವ ನೀಡಿದಂತಹವರು. ನಿಸ್ಸಂದಿಗ್ಧವಾದ, ಸಂದೇಹಕ್ಕೆ ಅವಕಾಶವಿಲ್ಲದಂತಹಅಧ್ಯಯನ – ಪರಿಶ್ರಮಗಳಿಂದ ಅವರು ೩೦ಕ್ಕೂ ಹೆಚ್ಚು ಸಂಖ್ಯೆಯ ಗ್ರಂಥಗಳನ್ನು ಇಂಗ್ಲಿಷ್ – ಹಿಂದಿ ಭಾಷೆಗಳಲ್ಲಿ ಪ್ರಕಟಿಸಿ ದ್ದಾರೆ.
ಹಿಂದೀ ಭಾಷೆಗೆ ಕೆಲವು ಮಹತ್ತ್ವದ ಕೃತಿಗಳನ್ನು ಅನುವಾದಿಸಿಯೂ ಇದ್ದಾರೆ. ಹಿಂದೂಯಿಸಂ ಟುಡೆ, ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಆರ್ಗನೈಸರ್ ಪತ್ರಿಕೆಗಳಲ್ಲಿ, ಗೋಯಲ್ ಅವರ ವಿಚಾರ ಸರಣಿ ಪ್ರಕಟವಾಗಿದೆ. ಈ ಲೇಖನಗಳು – ಅಂಕಣಗಳು ಮುಂದೆ ಗ್ರಂಥರೂಪದಲ್ಲಿಯೂ ಹೊರಬಂದಿವೆ. ಮೂಲತಃ ಕ್ರೈಸ್ತಮತದ ವಿರುದ್ಧವಾಗಿ ಯೂರೋಪಿನಲ್ಲಿ ಆಧುನಿಕ ಕಾಲದಲ್ಲಿ ಹುಟ್ಟಿದ ಸೆಕ್ಯುಲರಿಸಂ, ಭಾರತದಲ್ಲಿ ವಿಕೃತ ರೂಪವನ್ನು ತಳೆದಿರುವುದನ್ನು ಗೋಯಲ್ ಟೀಕಿಸಿದ್ದಾರೆ.
ಭಾರತದಲ್ಲಿ ಸೆಕ್ಯುಲರಿಸಂ ಎನ್ನುವುದು ಬರಿಯ ಹಿಂದೂದ್ವೇಷದ ವಾದವಾಗಿದೆ, ಅದು ಇಸ್ಲಾಮಿನ ಬಗೆಗೆ ಮಾತೇ ಆಡುವುದಿಲ್ಲ, ಎನ್ನುತ್ತಾರೆ ಗೋಯಲ. ಅಲಿಗಢ ವಿಶ್ವವಿದ್ಯಾನಿಲಯ ಮತ್ತು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯಗಳಿಗೆ ಲಗ್ಗೆ ಯಿಟ್ಟ ಮಾರ್ಕ್ಸ್‌ವಾದಿ ಇತಿಹಾಸಕಾರರು, ಮಧ್ಯಕಾಲೀನ ಭಾರತದ ಇತಿಹಾಸವನ್ನು ಮತ್ತು ಮುಸ್ಲಿಂ ಆಕ್ರಮಣ – ಆಡಳಿತ ಗಳನ್ನು ವಿಕೃತವಾಗಿ ತಿರುಚಿದುದನ್ನು, ಪಠ್ಯಪುಸ್ತಕ ಗಳಲ್ಲಿ ಅಸತ್ಯಗಳನ್ನು ತುಂಬಿದುದನ್ನು, ,  ಸಂಸ್ಥೆಗಳ ಮೂಲ ಉದ್ದೇಶ – ಕೆಲಸಕಾರ್ಯಗಳನ್ನು ವಿರೂಪಗೊಳಿಸಿದುದನ್ನು ಗೋಯಲ್ ಬಯಲಿಗೆಳೆದಿದ್ದಾರೆ.
ಜವಾಹರಲಾಲ್ ನೆಹರೂ ಅವರ ಕಾರ್ಯನೀತಿ ಕುರಿತ ಟೀಕೆ ಮತ್ತು ಇಸ್ಲಾಮಿನ ವಿಮರ್ಶೆಗಳನ್ನು ಕುರಿತಂತೆ, ಭಾರತೀಯ ಮಾಧ್ಯಮದ ಪಕ್ಷಪಾತವನ್ನು ಗೋಯಲ್ ಐವತ್ತರ ದಶಕದಲ್ಲಿಯೇ ಖಂಡಿಸಿದ್ದರು.೧೯೮೨ರಲ್ಲಿ ರಾಮಸ್ವರೂಪರೊಂದಿಗೆ, ದೆಹಲಿಯಲ್ಲಿ ವಾಯ್ಸ ಆಫ್ ಇಂಡಿಯಾ ಸಂಸ್ಥೆಯನ್ನು ಗೋಯಲ್ ಸ್ಥಾಪಿಸಿದರು. ನಿಜ ಇತಿಹಾಸವನ್ನು ದಾಖಲಿಸುವ, ದಾಖಲಿಸಿರುವ ಈ ಸಂಸ್ಥೆಯು ಲಾಭ ಮಾಡುವ ಉದ್ದೇಶವಿಟ್ಟುಕೊಂಡಿಲ್ಲ. ಕೆ.ಎಸ್. ಲಾಲ್‌, ಕೊನ್ರಾಡ್ ಎಲ್ಸ್ಟ್, ಹರ್ಷ ನಾರಾಯಣ್, ಸುಹಾಸ್ ಮಜುಮದಾರ್, ರಾಜೇಂದ್ರ ಸಿಂಗ್, ಡೇವಿಡ್ -ಲಿ (ವಾಮದೇವ ಶಾಸೀ), ಸಂತ ಆರ್.ಎಸ್. ನಿರಾಲಾ,ಶ್ರೀಕಾಂತ ತಲಗೇರಿ, ನವರತ್ನ ಎಸ್. ರಾಜಾರಾಮ, ಎ.ಕೆ. ಚಟರ್ಜಿ, ಮುಂತಾದ ವಿದ್ವಾಂಸರ ಮಹತ್ತ್ವದ ಗ್ರಂಥಗಳನ್ನುಈ ಸಂಸ್ಥೆಯು ಪ್ರಕಟಿಸಿದೆ.
ಸೀತಾರಾಮ ಗೋಯಲ್ ಅವರು ಸತ್ಯಸಂಗತಿಗಳ ಬಗೆಗೆ ರಾಜಿ ಮಾಡಿಕೊಳ್ಳುವವರಲ್ಲ. ಕೃತಕತೆಯ ನಯನಾಜೂಕುಗಳೂ ಅವರಿಗೆ ಹಿಡಿಸುವುದಿಲ್ಲ. ಹಿಂದೂ ಬೌದ್ಧಿಕ ವಲಯ ಗಳಲ್ಲಿ, ತುಂಬ ಅಪರೂಪ ಎನ್ನುವಂತಹ ಬೌದ್ಧಿಕ ನಿಷ್ಠುರತೆ ಸೀತಾರಾಮ ಗೋಯಲರದ್ದು, ಎಂದಿದ್ದಾರೆ ಡೇವಿಡ್ ಫ್ರಾಲಿ. ಸ್ವಾತಂತ್ರ್ಯೋತ್ತರ ಭಾರತದ ಬಹುಮುಖ್ಯ ತಕರಬ್ಬರು ಗೋಯಲ, ಆಧುನಿಕ ಭಾರತದ ಮಹಾನ್ ಬೌದ್ಧಿಕ ನವಕ್ಷತ್ರಿಯ ಈ ಸೀತಾರಾಮ ಗೋಯಲ, ಎನ್ನುತ್ತಾರೆ ಫ್ರಾಲಿ.
ಸೀತಾರಾಮ ಗೋಯಲ್೨೦೦೩ರಲ್ಲಿ ನಿಧನರಾದರು. ಅವರು ಬರೆದಿಟ್ಟುಹೋಗಿರುವ ವಿದ್ವತ್ಪೂರ್ಣವಾದ ಸಾಹಿತ್ಯವನ್ನು – ವೈಚಾರಿಕ ಬರಹಗಳನ್ನು ಮೂಲದಲ್ಲಿಯೇ ಓದುವುದು ಅತ್ಯುತ್ತಮವೆನಿಸಿದರೂ, ಕನ್ನಡದ ಓದುಗರಿಗೆ ಅಂತಹ ಬೆಳಕಿಂಡಿ ಯನ್ನು ಪರಿಚಯಿಸುವ ಪ್ರಾಮಾಣಿಕ ಪ್ರಯತ್ನವೂ ನಡೆಯುತ್ತಿದೆ.