ಕನ್ನಡ ಸಮಸ್ಯೆಯೇ ಸತ್ಯ
ಸಾಂದರ್ಭಿಕ
ಗೊ.ರು.ಚನ್ನಬಸಪ್ಪ
ಸದ್ಯದ ನಮ್ಮ ಚರಿತ್ರೆಯೇ ಯಾವುದೋ ಅಂಕೆಯ ಮೇಲೆ ನಿಂತುಬಿಟ್ಟ ತುಕ್ಕು ಹಿಡಿದ ಗಡಿಯಾರದಂತಾಗಿದೆ. ಎಂದೋ ಒಂದುಘಟನೆ ನಮ್ಮನಲುಗಾಡಿಸಿದಾಗ, ಕೂಡಲೇ ಸರಿದಾಡುತ್ತೇವೆ. ಕೆಲಹೊತ್ತು ‘ಟಿಕ್ ಟಿಕ್’ ಸದ್ದು ಮಾಡಿ, ಮತ್ತೆ ಇನ್ನಾವುದೋ ಅಂಕಿಯ ಮೇಲೆ ಹಾಗೆಯೇ ನಿಂತು ಬಿಡುತ್ತೇವೆ.
ಇದು ನಮ್ಮ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ಅವರ ಒಂದು ಕವನದ ನಾಲ್ಕು ಸಾಲುಗಳು. ಇಂದಿನ ನಮ್ಮ ಕನ್ನಡಿ ಗರನ್ನು ಕಂಡೇ ಹೇಳಿರುವ ನುಡಿಗಳು. ಆಗೊಮ್ಮೆ ಈಗೊಮ್ಮೆ ಸದ್ದು ಮಾಡಿ ಸುಮ್ಮನಾಗುವ ನಮ್ಮ ಸ್ವಭಾವಕ್ಕೆ ಕ ಕೊಟ್ಟಿರುವ ದೃಢಪತ್ರ. ಕೀಲಿ ಕೊಟ್ಟಾಗ ಅಷ್ಟು ಮುಂದೆ ಚಲಿಸುವ ಗಡಿಯಾರದ ಮುಳ್ಳಿನಂತೆ ನಾವು ಒಮ್ಮೊಮ್ಮೆ ‘ಕನ್ನಡವೇ ಸತ್ಯ, ಕನ್ನಡವೇನಿತ್ಯ’ ಎಂದು ದನಿಮಾಡುತ್ತೇವೆ.
ಏನೇ ಇರಲಿ. ಈಗ ನಾವು೬೫ನೆಯ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ನಮ್ಮ ಅಸ್ತಿತ್ವದ ಗುರುತಿಗೆ ಈಗ ಉಳಿದಿರು ವುದೆಂದರೆ ನವೆಂಬರ್ ಒಂದೇ. ಕವಿವಾಣಿಯಲ್ಲಿ ‘ಕನ್ನಡವೇ ಸತ್ಯ’ ನಿಜ. ಆದರೆ ಇಂದು ಕನ್ನಡದ ಸಮಸ್ಯೆಯೇ ಸತ್ಯವಾಗಿದೆ. ಕವಿ ಹೇಳಿದ ‘ಕನ್ನಡವೇ ನಿತ್ಯ’ ನಿಜ. ಆದರೆ ಕನ್ನಡಿಗರ ಕೊರಗೇ ನಿತ್ಯವಾಗಿದೆ. ಕರ್ನಾಟಕ ರಾಜ್ಯ ನಿರ್ಮಾಣವಾದಾಗ ಹಿರಿಯ ಕವಿ ಡಿ.ಎಸ್.ಕರ್ಕಿ ಅವರು ಹೊಮ್ಮಿರಲು ಪ್ರೀತಿ, ಎಲ್ಲಿಯದು ಭೀತಿ ಎಂದಿದ್ದರು. ಆದರೆ ಇಂದು ಹೊಮ್ಮಿರಲು ಭೀತಿ, ಎಲ್ಲಿಯದು ಪ್ರೀತಿ ಎನ್ನುವಂತಾಗಿದೆ. ಇಂದಿನ ಕನ್ನಡ ನಾಡು-ನುಡಿಗಳ ಸ್ಥಿತಿ.
ಇಲ್ಲಿಗೆ ಮುನ್ನೂರು ವರ್ಷಗಳ ಹಿಂದೆ ಕವಿ ಗೋವಿಂದ ವೈದ್ಯ ಅವರು ಜಾತಿ ಸಂಕರಗಳಿಲ್ಲ, ಜಡದೇಹಿಗಳಿಲ್ಲ, ನೀತಿ ಹೀನರಿಲ್ಲ, ಚೋರರಿಲ್ಲ, ಘಾತುಕರಿಲ್ಲ, ದುರ್ಜನರಿಲ್ಲ, ಕರ್ನಾಟಕದ ರೀತಿಯ ನೆಂತು ಬಣ್ಣಿಪೆನು ಎಂದು ಹಾಡಿದ್ದರು. ಅದು ಅವರ ನಾಡ ಅಭಿಮಾನ! ಅಂದಿನ ವರ್ತಮಾನ.
ಆದರೆ ಇಂದು . . !ಕನ್ನಡಿಗರು ಆತ್ಮ ನಿರೀಕ್ಷೆ ಮಾಡಿಕೊಳ್ಳಬೇಕು. ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನದ ಸಡಗರ – ಸಂಭ್ರಮಗಳ ಪ್ರದರ್ಶನ ವಾಗಬಾರದು. ನಮಗೆ ನಮ್ಮ ನಾಡು – ನುಡಿಗಳ ಪರಂಪರೆಯ ಪ್ರಜ್ಞಾ ಜಾಗೃತಿಯ ಸಂದರ್ಭವಾಗಬೇಕು. ನಮ್ಮ ಅಭಿಮಾನ ಪ್ರಾಮಾಣಿಕವಾಗಿರಬೇಕು. ತತ್ತ್ವಜ್ಞಾನಿ ಉಮರ್ ಖಯ್ಯಾಂ ತನ್ನೊಂದು ಗೀತೆಯಲ್ಲಿ ನಾ ಮಸೀದಿಗೆ ಬಂದುದೇಕೆಂದು ಕೇಳು ವೊಡೆ, ದೇವರಂ ಧ್ಯಾನಿಸುವ ಮನದಿನೇನಲ್ಲ. ಹಿಂದಿಲ್ಲಿ ಮಡಿ ಗದ್ದಿಗೆಯನೊಂದ ಕದ್ದಿದ್ದೆನ್. ಅದು ಹಳೆಯದಾಯಿ ತೆಂದೀಗಿಲ್ಲಿ ಬಂದೆನ್ ಎಂದಿದ್ದಾನೆ.
ನಾವು ರಾಜ್ಯೋತ್ಸವ ಆಚರಿಸುವುದು ಹೀಗಾಗಬಾರದು. ವಾಸ್ತವವಾಗಿ ನವೆಂಬರ್೧, ನಾವೆಲ್ಲ ಕನ್ನಡ – ಕನ್ನಡಿಗ – ಕರ್ನಾಟಕ ಗಳ ಹಿತರಕ್ಷಣೆಗಾಗಿ ಸಮರ್ಪಣ ಭಾವದಿಂದ ದುಡಿಯುವ ಸಂಕಲ್ಪದ ದಿನವಾಗಬೇಕು. ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ ನಿಂದ ಹೆಜ್ಜೆಯನರಿಯ ಲಾಗದು ಎಂದಿರುವ ಅಲ್ಲಮನ ಮಾತಿನಂತೆ ನಾವು ನಮ್ಮ ಪರಂಪರೆಯನ್ನು ಸ್ಮರಿಸಿಕೊಳ್ಳಬೇಕು.
ನಮಗಿರುವ ಹಿನ್ನೆಲೆಯೇ ನಮ್ಮ ಮುನ್ನಡೆಗೆ ಪ್ರೇರಕವಾಗಬೇಕು. ಪ್ರಸ್ತುತ ಸಮಸ್ಯೆಗಳನ್ನು ನೀಗಿ ಹೊಸ ಹೆಜ್ಜೆ ಇಡುವ ಆತ್ಮವಿ ಶ್ವಾಸ ತುಂಬಬೇಕು. ನಮ್ಮ ನಾಡಿನ ಪರಂಪರೆ ಸುದೀರ್ಘವಾದುದು; ಸ್ಮರಣೀಯವಾದುದು. ಪ್ರಾಚೀನವೆನಿಸುವ ‘ಮಹಾ ಭಾರತ’ದಲ್ಲಿ ಕರ್ಣಾಟಕ ಶಬ್ದದ ಪ್ರಸ್ತಾಪವಿದೆ. ಒಂದು ಕಾಲದಲ್ಲಿ ಅಶೋಕ ಚಕ್ರವರ್ತಿ ಈ ನೆಲವನ್ನು ಆಳಿದ್ದಾನೆ.
ಶಾತವಾಹನರು, ಪಲ್ಲವರು, ಕದಂಬರು, ಗಂಗರು, ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ಜಯನಗರದ ಅರಸರು, ಕೆಳದಿ – ಕಿತ್ತೂರು ವಂಶದವರು, ಮೈಸೂರು ಅರಸರು ಈ ನಾಡಿನ ರಾಜ್ಯಭಾರ ನಡೆಸಿದ್ದಾರೆ. ರಾಷ್ಟ್ರಕೂಟರ ಪರ ಹೋರಾಡಿದ ವೀರ ಮಾರಸಿಂಹ, ಕಂಚಿಯ ಪಲ್ಲವ ಪರಮೇಶ್ವರನನ್ನು ಸೋಲಿಸಿ, ಅವನ ಕಂಠಹಾರವನ್ನೇ ಕಿತ್ತ ಭೂಕ್ರಮ. ಲೋಕಪ್ರಸಿದ್ಧಗೊಮ್ಮಟೇಶ್ವರನ ಮೂರ್ತಿಯನ್ನು ಕೆತ್ತಿಸಿದ ಚಾವುಂಡರಾಯ, ಉತ್ತರದ ಭೂಪ ಹರ್ಷ ಚಕ್ರವರ್ತಿಯನ್ನು ಸೋಲಿಸಿ, ‘ದಕ್ಷಿಣಾ ಪಥೇಶ್ವರ’ ಎಂಬ ಬಿರುದು ಪಡೆದಿದ್ದಇಮ್ಮಡಿ ಪುಲಿಕೇಶಿ, ಸಿಂಹಳದಿಂದ ಮಾಲಯದವರೆಗೆ, ಗುಜರಾತಿನಿಂದ ಬಂಗಾಳದವರೆಗೆ ಅಖಂಡ ಭಾರತವನ್ನು ಗೆದ್ದ ರಾಷ್ಟ್ರಕೂಟರ ಗೋವಿಂದ, ರಾಜ್ಯಕ್ಕೆ ಕ್ಷಾಮ ಬಂದಾಗ, ಮಹಾಲಕ್ಷ್ಮಿ ತನ್ನ ಹೆಬ್ಬೆರಳನ್ನು ಒಪ್ಪಿಸಲು ಸಿದ್ಧನಾದ ಅಮೋಘವರ್ಷ ನೃಪತುಂಗ, ತಮಿಳು ಪಲ್ಲವರು ಬಾದಾಮಿಯನ್ನು ಆಕ್ರಮಿಸಿ, ಅದನ್ನು ಸುಟ್ಟರೂ, ತಮಿಳರ ಕಂಚಿಯನ್ನು ಗೆದ್ದಾಗ ಅದನ್ನು ಸುಡದೆ ಬಿಟ್ಟು ಔದಾರ್ಯ ತೋರಿದ ಚಾಲುಕ್ಯ ವಿಕ್ರಮಾದಿತ್ಯ, ಪ್ರಜೆಗಳ ಕ್ಷೇಮವೇ ಅಽಕಾರದಿಂದ ಪಡೆಯುವ ಪ್ರಯೋಜನ ಎಂದು ಸಾರಿದ ಗಂಗರು, ಯುದ್ಧಭೂಮಿಯಲ್ಲಿ ಪುರುಷರಿಗಿಂತ ಮಿಗಿಲಾಗಿ ಹೋರಾಡಿ, ‘ರಣಭೈರ’ ಎಂದೆನಿಸಿದ ಅಕ್ಕಾದೇವಿ, ವಿಶ್ವದ ಇತಿಹಾಸದಲ್ಲೇ ಮೊಟ್ಟ ಮೊದಲ ಮಹಿಳಾ ಸೈನ್ಯ ಕಟ್ಟಿ ನಡೆಸಿದ ಬೆಳವಡಿ ಮಲ್ಲಮ್ಮ, ಇಪ್ಪತ್ತಾರು ವರ್ಷಗಳ ಅದ್ವಿತೀಯ ಅವಧಿಯ ಆಡಳಿತ ನಡೆಸಿದ ಕೆಳದಿ ಚೆನ್ನಮ್ಮ, ಬ್ರಿಟಿಷರ ವಿರುದ್ಧ ಖಡ್ಗ ಹಿಡಿದು ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಆರು ನೂರು ವರ್ಷಗಳ ಹಿಂದೆಯೇ ಚೀನಾ ದೇಶಕ್ಕೆ ಕನ್ನಡರಾಯಭಾರಿಯನ್ನು ಕಳುಹಿಸಿದ ಬುಕ್ಕರಾಯ, ಕನ್ನಡದ ರಾಜಧಾನಿ ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ, ರಾಜರ್ಷಿ ಎನಿಸಿದ್ದ ಕೃಷ್ಣ ರಾಜೇಂದ್ರ ಒಡೆಯರು ಇವರೆಲ್ಲ ಕನ್ನಡಿಗರು.
ಕನ್ನಡದ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಪಂಪ, ರನ್ನ, ಜನ್ನ, ಪೊನ್ನ, ಹರಿಹರ, ರಾಘವಾಂಕ, ಚಾಮರಸ,ಲಕ್ಷ್ಮೀಶ, ಲಕ್ಷ್ಮಣದಂಡೇಶ, ಸರ್ವಜ್ಞ, ಕನಕ – ಪುರಂದರದಾಸರು, ಷಡಕ್ಷರ, ನಾಗಚಂದ್ರ, ನಮಸೇನ, ವಿಶ್ವ ಸೋಜಿಗದ ಹನ್ನೆರಡ ನೆಯ ಶತಮಾನದ ವಚನಕಾರರು – ಇವರೆಲ್ಲ ನಮ್ಮವರು. ಕನ್ನಡದ ಸಾಂಸ್ಕೃತಿಕ ಚೇತನರು. ಅಷ್ಟೇ ಅಲ್ಲ. ಮುಸಲ್ಮಾನರಿಗೆ ಮಸೀದಿ ಕಟ್ಟಿಸಿಕೊಟ್ಟ ವಿಜಯನಗರದ ಇಮ್ಮಡಿ ದೇವರಾಯ, ವಿಶ್ವ ವಿಸ್ಮಯದ ಎಲ್ಲೋರ ಕೈಲಾಸನಾಥ ದೇವಾಲಯ ನ್ನು ರೂಪಿಸಿದ ರಾಷ್ಟ್ರಕೂಟರ ಒಂದನೆಯ ಕೃಷ್ಣ, ಐಹೊಳೆ, ಪಟ್ಟದಕಲ್ಲು, ಬಾದಾಮಿ, ಬೇಲೂರು, ಹಳೇಬೀಡು, ಇಟ್ಟಗಿ, ಬನವಾಸಿ, ಸೋಮನಾಥಪುರ, ಅಮೃತಾಪುರ ಮೊದಲಾದ ಕಡೆಗಳಲ್ಲಿರುವ ಶಿಲ್ಪಸೌಂದರ್ಯ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಸುಂದರ ನಗರವೆನಿಸಿದ ಹಂಪಿ, ಅಲ್ಲಮ – ಅಕ್ಕ ಮಹಾದೇವಿಯವರಂಥ ಅನುಭಾವಿಗಳಿಗೆ ಜನ್ಮಕೊಟ್ಟ ಬಳ್ಳಿಗಾವೆ – ಉಡುತಡಿ, ಮಾನವ ಘನತೆ ಮತ್ತು ಸಮಾನತೆಯ ಇತಿಹಾಸ ಪ್ರಸಿದ್ಧ ಆಂದೋಲನ ನಡೆದ ಬಸವಕಲ್ಯಾಣ – ಇವೆಲ್ಲವೂ ನಮ್ಮವು; ಕನ್ನಡಿಗರವು.
ಇನ್ನೂ ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಹಗಲಿರುಳೆನ್ನದೆ ಶ್ರಮಿಸಿದ ಸಾಹಿತಿಗಳು, ಧರ್ಮ ಗುರುಗಳು, ಕಲಾವಿದರು, ರಾಜ ಕಾರಣಿಗಳು ಮತ್ತಿತರ ಪ್ರಮುಖರು ಒಂದು ದೊಡ್ಡ ಸಾಲೇ ಇದೆ. ಅವರನ್ನು ನಾವು ಮರೆಯುವಂತಿಲ್ಲ. ಈ ಎಲ್ಲ ಭೂತ ಕಾಲದ ಕಥೆಯನ್ನು ನೆನೆದು, ವರ್ತಮಾನದ ವ್ಯಥೆಯನ್ನು ದಾಟಿ, ಭವಿಷ್ಯದ ಗತಿಯನ್ನು ರೂಪಿಸಿಕೊಳ್ಳಬೇಕಾದ ಹೊಣೆಗಾರಿಕೆ ಇಂದಿನ ತಲೆಮಾರಿನ ಮೇಲಿದೆ.
ನಾವು ಸಾಮಾನ್ಯವಾಗಿ ರಾಜ್ಯೋತ್ಸವದಂಥ ಸಂದರ್ಭಗಳಲ್ಲಿ ‘ನೆಲ ನಮ್ಮದು, ಜಲ ನಮ್ಮದು’, ನಾವು ಕನ್ನಡಿಗರು. ನಮ್ಮ ಸಂಸ್ಕೃತಿ ಕನ್ನಡ’. ಎಲ್ಲಾದರೂ ಇರು, ಎಂತಾದರೂ ಇರು, ನೀ ಕನ್ನಡಿಗನಾಗಿರು’ ಇತ್ಯಾದಿ ಕನ್ನಡಪರ ಘೋಷಣೆಗಳನ್ನು ಬಳಸುತ್ತೇವೆ. ಅವು ಕೇವಲ ಘೋಷಣೆ ಗಳಾಗದೆ ನಾಡಿನ ಪೋಷಣೆಯಾಗಬೇಕು. ಬಹುಶಃ ನಾವೆಲ್ಲ ನಮ್ಮ ಜನಪದರ ನಾಲಗೆ ಯಲ್ಲಿ ಒಂದು ಸಂಗತಿ ಇದೆ.
ಜಯನಗರದ ಅರಸರು ಮತ್ತು ಬಹಮನಿ ಅರಸರ ಮತ್ತು ತಾಳಿಕೋಟೆ ಬಳಿ ಯುದ್ಧ ನಡೆಯಿತು. ಆ ಯುದ್ಧಕ್ಕೆ ಜಯನಗರದ ಪರವಾಗಿ ಮನೆಗೊಬ್ಬ ಯುವಕನನ್ನು ಸೈನಿಕ ಸೇವೆಗೆ ಕಳುಹಿಸಬೇಕೆಂದಾಗ ಒಂದು ಹಳ್ಳಿಯ ತಾಯಿಯೊಬ್ಬಳು ತನಗಿದ್ದ ಒಬ್ಬನೇ ಮಗನನ್ನು ಧೈರ್ಯಮಾಡಿ ಕಳುಹಿಸಿಕೊಟ್ಟಳು. ತಾಳಿಕೋಟೆ ಯುದ್ಧದಲ್ಲಿ ಆ ಮಗ ಮಡಿದು ಹೋದ. ಸುದ್ದಿ ತಿಳಿದ ತಾಯಿ ಯುದ್ಧ ನಡೆದ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಅನೇಕ ಸೈನಿಕರ ಶವಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಒಬ್ಬ ಗುರುತಿನ ಸೈನಿಕ ಆ ತಾಯಿಗೆ ಮುಖವಡಿಯಾಗಿ ಬಿದ್ದಿದ್ದ.
ಆಕೆಯ ಮಗನ ಶವವನ್ನು ತೋರಿಸಿದ. ಅದನ್ನು ನೋಡಿದ ತಾಯಿ, ಅವನು ನನ್ನ ಮಗನಲ್ಲ. ನನ್ನ ಮಗನಾಗಿ ದ್ದಿದ್ದರೆ ಅವನಎದೆಯಲ್ಲಿ ಬಾಣ ನೆಟ್ಟಿರಬೇಕಿತ್ತು. ಅವನು ಶತ್ರುಗೆ ಹೆದರಿ ಬೆನ್ನು ಮಾಡಿದ ಕಾರಣ, ಅವನ ಬೆನ್ನಿಗೆ ಬಾಣ ನೆಟ್ಟಿದೆ. ಇಂತಹ ಹೇಡಿ ನನ್ನ ಮಗನಾಗಲು ಅರ್ಹನಲ್ಲ ಎಂದು ಹೇಳಿ ಹಿಂತಿರುಗಿ ದಳು. ಇದು ನಮ್ಮ ಕನ್ನಡ ಹೆಣ್ಣಿನ ಕೆಚ್ಚು. ನಮ್ಮ ನಾಡಿನ ಜನರಲ್ಲಿ, ಅದರಲ್ಲೂ ಯುವ ಜನಾಂಗದಲ್ಲಿ ಇಂತಹ ಕೆಚ್ಚು ಮೂಡಬೇಕು.
ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯೋತ್ಸವ ಆಚರಣೆಗಳು ಕನ್ನಡಿಗರ ಸ್ಥಿತಿ ಗತಿಗಳತ್ತ ಸಾರ್ವತ್ರಿಕ ಗಮನ ಸೆಳೆದು, ಜನರಲ್ಲಿ ಕನ್ನಡ ಜಾಗೃತಿ ಮೂಡಿಸಿ, ಕನ್ನಡಿಗರಲ್ಲಿ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸ ಗಳನ್ನು ತುಂಬುವ ಮತ್ತು ಕನ್ನಡ ಭಾಷೆ, ಸಾಹಿತ್ಯ – ಸಂಸ್ಕೃತಿಗಳ ಅಭಿಮಾನವನ್ನು ಅಚ್ಚೊತ್ತುವ ಸಂದರ್ಭ ಗಳಾಗಬೇಕು. ಕನ್ನಡಿಗರು ಒಂದು ಸಂಘಟಿತ ಶಕ್ತಿಯಾಗಿ, ಒಂದೇದನಿಯಾಗಿ ಆಡಳಿತದ ಹೊಗೆ ಹೊತ್ತಿರುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಎಚ್ಚರ ನೀಡುವಂತಾಗಬೇಕು.
ಈ ಸಂದರ್ಭದಲ್ಲಿ ಆಡಳಿತ ಪಕ್ಷವಿರಲಿ, ವಿರೋಧ ಪಕ್ಷಗಳಿರಲಿ, ಎಲ್ಲ ಜನಪ್ರತಿನಿಧಿಗಳಲ್ಲೂ ಒಂದು ಮನವಿ. ಸ್ವಾತಂತ್ರ್ಯ ಬಂದ ನಂತರ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಎಲ್ಲ ದೃಷ್ಟಿಯಿಂದಲೂ ಮೇಲೆನಿಸಿದ ಘನತೆ-ಗೌರವಗಳನ್ನು ಪಡೆದಿದ್ದ ನಮ್ಮ ಕರ್ನಾಟಕದ ಇತ್ತೀಚಿನ ರಾಜಕೀಯ ವಿದ್ಯಮಾನಗಳು, ಸಾಮಾಜಿಕ ಅನಿಷ್ಟಗಳು, ಪ್ರಾದೇಶಿಕ ಅಸಮಾಧಾನಗಳು, ಕೃಷಿಕರಸಾವು-ನೋವುಗಳು, ಕನ್ನಡಿಗರ ಉದ್ಯೋಗ ಸಮಸ್ಯೆ ಗಳು ಅತ್ಯಂತ ವಿಷಾದನೀಯವಾಗಿವೆ.
ಈ ಪರಿಸ್ಥಿತಿಯನ್ನು ನಿವಾರಿಸಿ, ಕರ್ನಾಟಕದ ಪರಂಪರೆಗೆ ಹಿಂದಿನ ಗೌರವದ ಸ್ಥಾನ ದೊರಕುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಪ್ರತಿಯೊಬ್ಬ ಜನಪ್ರತಿನಿಧಿಯೂ ತನ್ನ ವೈಯಕ್ತಿಕ ಅಥವಾ ಪಕ್ಷ ಪ್ರತಿಷ್ಠೆಗಳನ್ನು ಬಿಟ್ಟು ಬಿಡಬೇಕು. ವೈಯಕ್ತಿಕ ಶೀಲ –ಚಾರಿತ್ರ್ಯಗಳ ಬಗೆಗೆ ಮೈಯೆಲ್ಲ ಕಣ್ಣಾಗಿ ಇರಬೇಕು. ನಮ್ಮೆಲ್ಲ ಧ್ಯೇಯ – ಧೋರಣೆಗಳು, ಕಾರ್ಯವಿಧಾನಗಳು ಒಟ್ಟು ಕನ್ನಡ – ಕನ್ನಡಿಗ – ಕರ್ನಾಟಕದ ಕ್ಷೇಮಾಭ್ಯುದಯವನ್ನೇ ಗುರಿಯಾಗಿಟ್ಟುಕೊಳ್ಳಬೇಕು. ಅಂತಾದರೆ ಮಾತ್ರ ರಾಜ್ಯೋತ್ಸವದ ಆಚರಣೆಅರ್ಥಪೂರ್ಣವಾಗುತ್ತದೆ.