ವಂಶವಾಹಿ ಕತ್ತರಿ ಸಂಶೋಧನೆಗೆ ರಸಾಯನದ ನೊಬೆಲ್
ವೈದ್ಯ ವೈವಿಧ್ಯ
ಡಾ.ಹೆಚ್.ಎಸ್.ಮೋಹನ್
೨೦೨೦ರ ಈ ಬಾರಿಯ ರಸಾಯನ ಶಾಸ್ತ್ರದ ನೊಬೆಲ್ ಪ್ರಶಸ್ತಿ ಒಂದು ರೀತಿಯಲ್ಲಿ ದಾಖಲೆ ಉಂಟುಮಾಡಿದೆ. ಎರಡು ಮಹಿಳಾವಿಜ್ಞಾನಿಗಳು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೆನ್ನಿಫರ್ ಡೌಡ್ನಾ ಮತ್ತು ಎಮಾನು ಚಾರ್ಪೆಂಟಿಯರ್ ಇವರುಗಳಿಗೆ ವಂಶವಾಹಿ ಎಡಿಟಿಂಗ್ ಬೆಳವಣಿಗೆಗಾಗಿ ಈ ಪಾರಿತೋಷಕ ಲಭ್ಯವಾಗಿದೆ.
ಜೀನ್ ತಾಂತ್ರಿಕತೆಯ ಕ್ರಿಸ್ಪ್ ಆರ್ / ಕ್ಯಾಸ್೯ಜೆನೆಟಿಕ್ ಕತ್ತರಿ ಇವರ ಮುಖ್ಯ ಸಂಶೋಧನೆ. ಇದು ಭವಿಷ್ಯದಲ್ಲಿ ವಂಶವಾಹಿ ಗಳನ್ನು ಎಡಿಟ್ ಮಾಡಿ ಹಲವಾರು ಈ ವರೆಗೆ ಗುಣ ಮಾಡಲು ಸಾಧ್ಯವಾಗದ ಕಾಯಿಲೆಗಳನ್ನು ಅದೂ ವಂಶವಾಹಿಯ ತಪ್ಪಿ ನಿಂದ ಬರುವ ಕಾಯಿಲೆಗಳನ್ನು ಗುಣಪಡಿಸುವ ಸಾಧ್ಯತೆಯನ್ನು ಹತ್ತಿರವಾಗಿಸುತ್ತಿದೆ. ಹೆಪಟೈಟಿಸ್ ಸಿ ವೈರಸ್ ಸಂಶೋಧಕರಿಗೆವೈದ್ಯಕೀಯ ನೊಬೆಲ್ ಲಭ್ಯವಾಗಿದ್ದು ಕಳೆದ ವಾರ ಇದೇ ಅಂಕಣದಲ್ಲಿ ವಿವರವಾದ ಲೇಖನ ಬರೆದಿದ್ದೇನೆ.
ಹಾಗೆಯೇ ರಸಾಯನ ಶಾಸ್ತ್ರಕ್ಕೆ ಇವರು ಗಳಿಗೆ ನೊಬೆಲ್ ದೊರಕಿದರೂ ಇದರ ಮೂಲ ಉಪಯೋಗ ವೈದ್ಯಕೀಯದ ಎನ್ನ ಬಹುದು. ಹಾಗಾಗಿ ಈ ಬಾರಿ ವೈದ್ಯಕೀಯಕ್ಕೆ ಎರಡು ನೊಬೆಲ್ ಪ್ರಶಸ್ತಿ ಲಭ್ಯವಾಗಿದೆ ಎಂದರೂ ತಪ್ಪಿಲ್ಲ.
ಕ್ರಿಸ್ಪ್ ಆರ್ ಮತ್ತು ಕ್ಯಾಸ್ ೯ರ ಬಗ್ಗೆ ತಿಳಿಯೋಣ:ಪ್ರತಿಯೊಬ್ಬ ಜೀವಿಯಲ್ಲಿಯೂ ಒಂದು ಜೆನೆಟಿಕ್ ಕೋವಿಡ್ ಅಥವಾ ವಂಶವಾಹಿ ನಕ್ಷೆ ಇರುತ್ತದೆ. ಕಂಪ್ಯೂಟರ್‌ನಲ್ಲಿ ಎಂಎಸ್ ವರ್ಡ್ ಕಾರ್ಯ ನಿರ್ವಹಿಸುವಂತೆ ಈ ಕ್ರಿಸ್ಪ್ ಆರ್ ನಮ್ಮ ಈ ವಂಶ ವಾಹಿ ನಕ್ಷೆಯನ್ನು ಸೇರಿಸುವ, ಬದಲಾಯಿಸುವ, ತೆಗೆದು ಹಾಕುವ ಕ್ರಿಯೆಯನ್ನು ಮಾಡಬಲ್ಲದು.
ಅಂದರೆ ನಾವು ಜನಿಸುವಾಗ ವಂಶವಾಹಿ ಮಟ್ಟದಲ್ಲಿ ಒಂದು ತಪ್ಪು ಕ್ರಿಯೆ ಜರುಗಿ ನಮಗೆ ಅಪರೂಪದ ಗುಣಪಡಿಸಲಾಗದ ಕಾಯಿಲೆ ಇzಗ ಅಂತಹ ವಂಶವಾಹಿಯನ್ನು ಸರಿಯಾಗಿ ಗುರುತಿಸಿ, ಆ ಮಟ್ಟಕ್ಕೇ ಹೋಗಿ ಅದರ ರಿಪೇರಿ ಮಾಡುವ ಕ್ರಿಯೆಯನ್ನು ಈ ಕ್ರಿಸ್ಪ್ ಆರ್ / ಕ್ಯಾಸ್ ೯ ತಾಂತ್ರಿಕತೆ ಮಾಡಬಲ್ಲದು. ಈ ಕ್ರಿಸ್ಪ್ ಆರ್ ಎಂದರೆ ವೈರಸ್‌ಗಳು ದಾಳಿ ಮಾಡಿದಾಗ ಬ್ಯಾಕ್ಟೀರಿಯಾಗಳು ವೈರಸ್‌ಗಳಿಂದ ಬೇರ್ಪಡಿಸಿದ ಡಿಎನ್‌ಎ ತುಣುಕುಗಳು.
ಈಗಿನ ಪ್ರಸ್ತುತ ಕೋವಿಡ್೧೯ಸಾಂಕ್ರಾಮಿಕವು ನೆನಪಿನ ಜೀವಕೋಶಗಳ ಮಹತ್ವವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಈ ಜೀವಕೋಶಗಳು ಒಂದು ವೈರಸ್‌ನ ಪುನರಪಿ ಸೋಂಕನ್ನು ನಿಶ್ಯಸ್ತ್ರೀಕರಿಸಲು ಬೇಕಾದ ಆಂಟಿಬಾಡಿಗಳನ್ನು ಉತ್ಪಾದಿಸುತ್ತವೆ.ಹಾಗೆಯೇ ಈ ಕ್ರಿಸ್ಪ್ ಆರ್ ದೇಹವನ್ನು ಆಕ್ರಮಿಸಿ ಹಾನಿ ಉಂಟು ಮಾಡಬಲ್ಲ ವೈರಸ್‌ಗಳನ್ನು ಗುರುತಿಸುವ ಬ್ಯಾಕ್ಟೀರಿಯಾಗಳ ಪ್ರತಿರೋಧ ವ್ಯವಸ್ಥೆಯ ಒಂದು ಭಾಗ. ಒಂದು ವೈರಸ್ ಆಕ್ರಮಣ ಮಾಡಲು ಬರುತ್ತಿದೆ ಎಂದು ಗೊತ್ತಾದ ಕೂಡಲೇ ಬ್ಯಾಕ್ಟೀರಿ ಯಾವು ನಿರ್ದಿಷ್ಟ ರೀತಿಯ ಆರ್‌ಎನ್‌ಎ ಅನ್ನು ಉತ್ಪಾದಿಸುತ್ತದೆ. ಈ ಆರ್ ಎನ್‌ಎ ಯುಡಿಎನ್‌ಎ ಅನ್ನು ಕ್ರಿಸ್ಪ್ ಆರ್ ಲೈಬ್ರರಿ ಯಿಂದ ತೆಗೆದ ಪ್ರೋಟೀನ್‌ಗೆ ಬದಲಿಸಲು ಅಗತ್ಯವಾಗಿ ಬೇಕಾಗುತ್ತದೆ. ಹಾಗೂ ಅದರಲ್ಲಿ ಕ್ಯಾಸ್ ೯ ಎಂಜೈಮ್‌ನ್ನು ಉತ್ಪಾದಿಸಲು ಅಗತ್ಯವಿರುವ ವಂಶವಾಹಿಗಳಿರುತ್ತವೆ.
ಈ ಎಂಜೈಮ್‌ಗಳು ವೈರಸ್ ಗಳಲ್ಲಿರುವ ಡಿಎನ್‌ಎಗಳನ್ನು ನಾಶಮಾಡಲು ಉಪಯೋಗಿಸಬಹುದು. ಅಂದರೆ ವೈರಸ್‌ನ್ನು ನಿಷ್ಕ್ರಿಯ ಮಾಡುವ ಒಂದು ಹಂತ ಎಂದು ಹೇಳಬಹುದು. ಈ ಪ್ರಕ್ರಿಯೆ ಸ್ವಲ್ಪ ತಾಂತ್ರಿಕವಾಗಿ ಕ್ಲಿಷ್ಟವಾಗಿದೆ. ಆದರೂ ಸಾಧ್ಯ ವಾದಷ್ಟು ಸರಳವಾಗಿ ವಿವರಿಸಲು ಯತ್ನಿಸಿದ್ದೇನೆ. ಈ ತಾಂತ್ರಿಕತೆ ವಂಶವಾಹಿಗಳನ್ನು ಎಡಿಟ್ ಮಾಡಲು ಹೇಗೆ ಉಪಯೋಗ ವಾಗುತ್ತದೆ? ಇದರ ಬಗ್ಗೆ ಗಮನ ಹರಿಸೋಣ. ಈ ತಾಂತ್ರಿಕತೆಯನ್ನು ಉಪಯೋಗಿಸಿ ಸಂಶೋಧಕರು ಪ್ರಾಣಿಗಳ, ಸಸ್ಯಗಳ ಹಾಗೂ ಸೂಕ್ಷ್ಮಾಣುಜೀವಿಗಳ ಡಿಎನ್ ಗಳನ್ನು ನಿಖರವಾಗಿ ಬದಲಿಸಬಹುದು.
ಈಗ ಜರ್ಮನಿಯ ಬರ್ಲಿನ್‌ನ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಆಫ್‌ ಬಯಾಲಜಿಯ ನಿರ್ದೇಶಕರಾದ ಎಮಾನು ಚಾರ್ಪೆಂಟಿರ್ಯ ಅವರು ಸ್ಟ್ರೆಪ್ಟೊಕಾಕಸ್ ಪಯೋಜೀನಸ್ ಎಂಬ ಬ್ಯಾಕ್ಟೀರಿಯಾದ ಬಗ್ಗೆ ಅಧ್ಯಯನ ಮಾಡಿದರು. ಈ ಬ್ಯಾಕ್ಟೀರಿ ಯಾವು ಮನುಷ್ಯರಲ್ಲಿ ಗಂಟಲು ನೋವು (), ಟಾನ್ಸಿಲೈಟಿಸ್ ಮತ್ತು ಸ್ಕಾರ್ಲೆಟ್ ಜ್ವರವನ್ನು ಉಂಟು ಮಾಡುವ ಸೂಕ್ಷ್ಮಾಣು ಜೀವಿ. ಇದನ್ನು ಅಧ್ಯಯನ ಮಾಡುವಾಗ ಟ್ರಾಕ್ ಆರ್ – ಆರ್‌ಎನ್‌ಎ ಎಂಬ ಇಲ್ಲಿಯವರೆಗೂ ಗೊತ್ತಿಲ್ಲದ ಘಟಕ ವನ್ನು ಹೊಸದಾಗಿ ಕಂಡು ಹಿಡಿದರು. ಈ ಟ್ರಾಕ್ ಆರ್ – ಆರ್‌ಎನ್ ಎಯು ಬ್ಯಾಕ್ಟೀರಿಯಾದ ಹಳೆಯ ಪ್ರತಿರೋಧ ವ್ಯವಸ್ಥೆಕ್ರಿಸ್ಟ್ ಆರ್ / ಕ್ಯಾಸ್ ೯ನ ಭಾಗ ಎಂದು ಈಕೆಯ ಸಂಶೋಧನೆ ಹೊರಗೆಡವಿತು.
ಈ ಟ್ರಾಕ್ ಆರ್ – ಆರ್ ಎನ್‌ಎಯು ವೈರಸ್‌ಗಳ ಡಿಎನ್‌ಎನ್ನು ನಿಶ್ಯಸ್ತ್ರಗೊಳಿಸಿ ವೈರಸ್‌ಗಳನ್ನು ಬಲಹೀನರನ್ನಾಗಿ ಮಾಡುತ್ತದೆ. ಡಾ. ಚಾರ್ಪೆಂಟಿಯರ್ ತಮ್ಮ ಈ ಸಂಶೋಧನೆಯನ್ನು೨೦೧೧ರಲ್ಲಿ ಪ್ರಕಟಿಸಿದರು. ಅದೇ ವರ್ಷ ಇವರು ಬಯೋಕೆಮಿಸ್ಟ್ ಆದ ಜೆನ್ನಿಫರ್ ಡೌಡ್ನಾ ಅವರ ಜೊತೆ ಒಟ್ಟಾಗಿ ಸಂಶೋಧನೆ ಆರಂಭಿಸಿ ದರು. ಡಾ.ಜೆನ್ನಿಫರ್ ಅವರು ಬರ್ಕಲೀಯ ಕ್ಯಾಲಿ ಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅವರಿಬ್ಬರೂ ಒಟ್ಟಾಗಿ ಟೆಸ್ಟ್ ಟ್ಯೂಬ್‌ನಲ್ಲಿ ಬ್ಯಾಕ್ಟೀರಿಯಾದ ಜೆನೆಟಿಕ್ ಸಿಜರ್ಸ್ ಅಥವಾ ವಂಶವಾಹಿ ಕತ್ತರಿಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾದರು. ಹಾಗೆಯೇ ಈ ಕತ್ತರಿಯ ಮಾಲಿಕ್ಯುಲಾರ್ ಅಂಗಾಂಗಗಳನ್ನು ಸರಳೀಕರಿಸಿ ಉಪಯೋಗಿಸಲುಸುಲಭ ಮಾಡಿಕೊಟ್ಟರು. ಒಂದು ಅಸಾಮಾನ್ಯ ಪ್ರಯೋಗದಲ್ಲಿ ಅವರುಗಳು ಈ ವಂಶವಾಹಿ ಕತ್ತರಿಯನ್ನು ಪುನರ್ ನವೀಕರಿಸಿ ದರು. ಸಾಮಾನ್ಯವಾಗಿ ಈ ಕತ್ತರಿಯು ವೈರಸ್‌ಗಳಿಂದ ಡಿಎನ್‌ಎಗಳನ್ನು ಬೇರೆಯಾಗಿ ಗುರುತಿಸುತ್ತದೆ. ಆದರೆ ಚಾರ್ಪೆಂಟಿಯರ್ಮತ್ತು ಡೌಡ್ನಾ ಅವರು ಅವುಗಳನ್ನು ಸರಿಯಾಗಿ ನಿಯಂತ್ರಿಸಿ ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ಯಾವುದೇ ಡಿಎನ್‌ಎಯನ್ನು ಕತ್ತರಿಸಬಲ್ಲುದಾಗಿ ರೂಪಿಸಿದರು. ಹೀಗೆ ಅದು ಡಿಎನ್‌ಎ ಕತ್ತರಿಸುವುದರಿಂದ ಅದನ್ನು ಹೇಗೆ ಬೇಕಾದರೂ ಆನಂತರ ಜೋಡಿಸ ಬಹುದಾದ್ದರಿಂದ ಜೀವದ ಕೋಡ್‌ನ ಬರವಣಿಗೆ ಮಾಡುವುದು ಸುಲಭವಾಗಿದೆ.
ಉಳಿದ ಎಡಿಟಿಂಗ್ ವ್ಯವಸ್ಥೆಗಳಿಗಿಂತ ಹೇಗೆ ಭಿನ್ನ?
ಉಳಿದ ವಂಶವಾಹಿ ಎಡಿಟಿಂಗ್ ವ್ಯವಸ್ಥೆಗಳಾದ ಟಾಲೆನ್ಸ್ ಮತ್ತು ಜಿಂಕ್ ಫಿಂಗರ್ ನ್ಯೂಕ್ಲಿಯೇಸಸ್ ಇದೇ ರೀತಿಯ ಕೆಲಸ ಮಾಡ ಬಲ್ಲವು. ಆದರೆ ಹೆಚ್ಚಿನವರು ಚಾರ್ಪೆಂಟಿಯರ್ ಮತ್ತು ಡೌಡ್ನಾ ಅವರು ರೂಪಿಸಿದ ವಂಶವಾಹಿ ಕತ್ತರಿಯೇ ಉಪಯೋಗಿಸಲು ಸುಲಭ ಎಂದು ಅಭಿಪ್ರಾಯ ಪಡುತ್ತಾರೆ.
ಈ ವ್ಯವಸ್ಥೆ ಕಳೆದ ಒಂದು ದಶಕಗಳಿಂದ ಮಾತ್ರ ಬಹಳಷ್ಟು ಸಂಶೋಧನೆಗೆ ಒಳಪಟ್ಟಿದೆ. ಹಾಗಿಯೇ ವ್ಯಾಪಾರೀ ದೃಷ್ಟಿ ಯಲ್ಲಿಯೂ ಗಮನ ಸೆಳೆದಿದೆ. ಆದರೆ ವಿಜ್ಞಾನಿಗಳು ಕಳೆದ ಕೆಲವು ವರ್ಷಗಳಿಂದ ಮಾತ್ರ ವಂಶವಾಹಿಗಳಲ್ಲಿ ದೊಡ್ಡ ದೊಡ್ಡ ಬದಲಾವಣೆಗಳನ್ನು  ಮಾಡಲು ಸಾಧ್ಯವಾಗಿದೆ. ಹಲವಾರು ಜೀವಿಗಳ ವಂಶವಾಹಿಗಳ ಅನುಕ್ರಮಗಳು ()ಗೊತ್ತಾಗಿದ್ದರಿಂದ ಸಂಶೋಧಕರಿಗೆ ಯಾವ ವಂಶವಾಹಿಗಳು ಮ್ಯುಟೇಷನ್‌ಗೆ ಒಳಗಾಗುತ್ತವೆ, ಯಾವುದನ್ನು ಅಧ್ಯಯನ ಮಾಡ ಬಹುದು, ಚಿಕಿತ್ಸೆಯ ಬಗ್ಗೆ ಯಾವ ಪರೀಕ್ಷೆ ನಡೆಸಬೇಕು, ಬೇರೆಯ ಮ್ಯುಟೇಷನ್‌ಗಳ ಜೊತೆ ಯಾವ ಸಂಯೋಜನೆಯಲ್ಲಿ ಪರೀಕ್ಷೆ ನಡೆಸಬೇಕು – ಈ ಎ ವಿವರಗಳನ್ನು ಒದಗಿಸುತ್ತದೆ.
ಹೀಗೆ ಇದು ಸಂಶೋಧನೆಯಾಗಿದ್ದೇ ತಡ ಇದರ ವ್ಯಾಪಾರೀ ಆಸಕ್ತಿ ಎಂತಹಾ ಮಟ್ಟ ಮುಟ್ಟಿತೆಂದರೆ ಇದು ಬೆಳವಣಿಗೆಯಾಗಿ ಕೆಲವೇ ವರ್ಷಗಳಲ್ಲಿ ಈ ಕ್ರಿಸ್ಪ್ ಆರ್ / ಕ್ಯಾಸ್ ೯ ಹಕ್ಕಿನ ಬಗ್ಗೆ (  ) ಕ್ಯಾಲಿಫೋರ್ನಿಯಾ ವಿಶ್ವವಿದ್ಯಾ ಲಯ ಮತ್ತು ಮೆಸಾಸುಷೆಟ್ಸ್‌ನ ಬ್ರಾಡ್ ಇನ್ ಸ್ಟಿಟ್ಯೂಟ್‌ಗಳ ಮಧ್ಯೆ ವ್ಯಾಜ್ಯ ತೊಡಗಿಕೊಂಡಿದೆ. ಈವರೆಗೂ ವ್ಯಾಜ್ಯ ಇತ್ಯರ್ಥ ವಾಗಿಲ್ಲ ಎಂಬುದು ಇತ್ತೀಚಿನ ಪರಿಸ್ಥಿತಿ.
ಈ ಕ್ರಿಸ್ಪ್ ಆರ್/ ಕ್ಯಾಸ್ ೯ಗೆ ಸಿಕ್ಕಿರುವ ಶೀಘ್ರ ಮಾನ್ಯತೆ ಬಹಳ ಅಪರೂಪ. ಈ ಸಂಶೋಧನೆ ಹೊರಬಂದು ಒಂದು ದಶಕದ ಒಳಗೇ ಇದಕ್ಕೆ ನೊಬೆಲ್ ಪಾರಿತೋಷಕ ದೊರಕಿರುವುದು ಆಶ್ಚರ್ಯ ಮತ್ತು ಬಹಳ ಶೀಘ್ರವಲ್ಲವೇ ಅನಿಸಬಹುದು. ಆದರೆ ಇದು ತುಂಬಾ ಮುಖ್ಯ ಸಂಶೋಧನೆ ಮತ್ತು ಈ ದಿಶೆಯಲ್ಲಿ ಕ್ರಾಂತಿ ಮಾಡಿದ ಒಂದು ಸಂಶೋಧನೆ ಎನ್ನುವುದನ್ನು ಯಾರೂ ಅಲ್ಲ ಗಳೆಯಲು ಸಾಧ್ಯವಿಲ್ಲ. ಕಳೆದ೫ವರ್ಷಗಳಲ್ಲಿ ಡಾ. ಚಾರ್ಪೆಂಟಿಯರ್ ಮತ್ತು ಡಾ.ಡೌಡ್ನಾ ಇಬ್ಬರಿಗೂ ಹಲವಾರು ಪ್ರತಿಷ್ಠಿತ ವಿಜ್ಞಾನ ಪ್ರಶಸ್ತಿಗಳು ಲಭ್ಯವಾಗಿವೆ.
ಈ ತಂತ್ರಜ್ಞಾನದ ಉಪಯೋಗ:ಈ ವರ್ಷದ ಆರಂಭದಲ್ಲಿ ಜನನಾಗತ ಅಂಧತ್ವಕ್ಕೆ ಒಳಗಾದ ಒಬ್ಬ ಮಹಿಳೆ ಈ ಕ್ರಿಸ್ಪ್ ಆರ್/ ಕ್ಯಾಸ್ ೯ ಆಧಾರಿತ ಚಿಕಿತ್ಸೆಗೆ ಮೊಟ್ಟ ಮೊದಲ ಬಾರಿಗೆ ಒಳಗಾದಳು. ಹಾಗೆಯೇ ಮೊನ್ನೆ ಜೂನ್‌ನಲ್ಲಿ ವಂಶವಾಹಿ ಎಡಿಟಿಂಗ್ ಕಂಪನಿ ಕ್ರಿಸ್ಪ್ ಆರ್ ಥೆರಪೆಟಿಕ್ಸ್ ಎಂಬ ಸಂಸ್ಥೆ ರಕ್ತದ ಕಾಯಿಲೆ ಬೀಟಾ ತಲಸ್ಸೀಮಿಯಾಗೆ ಒಳಗಾದ೨ರೋಗಿಗಳು ಹಾಗೂ ಸಿಕಲ್ ಸೆಲ್ ಕಾಯಿಲೆಗೆ ಒಳಗಾದ ಒಂದು ರೋಗಿಗೆ ಇನ್ನು ಪುನಃ ಪುನಃ ರಕ್ತವನ್ನು ವರ್ಗಾಯಿಸುವ ಅವಶ್ಯಕತೆ ಇರುವುದಿಲ್ಲ ಎಂದು ಘೋಷಿಸಿತು. ಇವರುಗಳ ಮೂಳೆಗಳ ಅಸ್ತಿಮಜ್ಜೆಯ ಆಕರ ಕೋಶಗಳನ್ನು ( ) ಕ್ರಿಸ್ಪ್ ಆರ್ ತಂತ್ರಜ್ಞಾನ ಉಪಯೋಗಿಸಿ ಎಡಿಟ್ ಮಾಡಲಾಯಿತು. ಈ ವಾರದ ಆರಂಭದಲ್ಲಿ ಡಾ. ಡೌಡ್ನಾ ಅವರು ಸ್ಕ್ರ ಬ್ ತೆರಪೆಟಿಕ್ಸ್ (  ) ಎಂಬ ಹೊಸದೊಂದು ಕಂಪನಿಯನ್ನು ಆರಂಭಿಸಿದರು.
ಇದು ನರರೋಗಗಳ ಕಾಯಿಲೆ ಏಮಯಾಟ್ರೋಪಿಕ್ ಲ್ಯಾಟರಲ್ ಸ್ಲೀರೋಸಿಸ್ ಕಾಯಿಲೆಗೆ ಚಿಕಿತ್ಸೆ ಕೊಡುತ್ತದೆ ಎನ್ನಲಾಗಿದೆ. ಅಲ್ಲದೆ ಡಾ.ಡೌಡ್ನಾ ಅವರು ಈಗಾಗಲೇ ಕೋವಿಡ್೧೯ಕಾಯಿಲೆಯನ್ನು ಪತ್ತೆ ಮಾಡುವಲ್ಲಿ ಕ್ರಿಸ್ಪ್ ಆರ್ ತಂತ್ರಜ್ಞಾನವನ್ನುಉಪಯೋಗಿಸುತ್ತಿದ್ದಾರೆ ಎನ್ನಲಾಗಿದೆ. ಈ ವರ್ಷ ಹಲಿಯ ಸಿಎಸ್‌ಐಆರ್ – ಐಜಿಐಬಿ ಸಂಸ್ಥೆ -ಲೂಡಾ ಎಂಬ ಕೋವಿಡ್೧೯ಪರೀಕ್ಷಿಸುವ ಕಿಟ್‌ನ್ನು ಇದೇ ತಂತ್ರಜ್ಞಾನ ಆಧರಿಸಿ ಅಭಿವೃದ್ಧಿಪಡಿಸಿದೆ. ಈ ಕ್ರಿಸ್ಪ್ ಆರ್ ತಂತ್ರಜ್ಞಾನವನ್ನು ಆಧರಿಸಿ ಹಲವುವ್ಯಾಪಾರೀ ಕಂಪನಿಗಳ ಹೋಂ ಕಿಟ್ಸ್‌ಗಳು ತಯಾರಾಗಿವೆ. ಹಾಗಲ್ಲದೆ ಕ್ಯಾಸ್೯ಗಿಂತ ಸಣ್ಣದಾದ ಮತ್ತು ಹೆಚ್ಚು ಸಮರ್ಥ ಪ್ರೋಟೀನ್ ಗಳನ್ನು ಉಪಯೋಗಿಸಿ ಸಂಕೀರ್ಣ ಕಾಯಿಲೆಗಳಾದ ಕ್ಯಾನ್ಸರ್, ಹೃದಯದ ಕಾಯಿಲೆಗಳು, ಮಾನಸಿಕ ಕಾಯಿಲೆಗಳುಮತ್ತು ಏಡ್ಸ್ ಕಾಯಿಲೆಗಳ ಚಿಕಿತ್ಸೆಗಳಿಗೆ ಹೊಸ ಚಿಕಿತ್ಸೆ ಹುಡುಕುವ ಕಾರ್ಯ ಆರಂಭವಾಗಿದೆ.
ದುರುಪಯೋಗ ಆಗುವ ಸಂಭವವಿದೆಯೇ?ಇಂತಹ ದುರುಪಯೋಗದ ವಿದ್ಯಮಾನ೨೦೧೮ರಲ್ಲಿ ಆಗಿದೆ. ಚೀನಾದ ಸಂಶೋಧಕ ಹೆ ಜಿಯಾಂಕುಯೈ ಎಂಬಾತ ತಾನು ತಾನು ವಂಶವಾಹಿ ಎಡಿಟ್ ಮಾಡಿದ ಅವಳಿ ಜವಳಿ ಮಕ್ಕಳನ್ನು ಐವಿಎಫ್‌ ತಂತ್ರಜ್ಞಾನ (ಪ್ರನಾಳ ಶಿಶು ತಂತ್ರಜ್ಞಾನ ) ಉಪಯೋಗಿಸಿ ಹುಟ್ಟು ಹಾಕಿದ್ದೇನೆ ಎಂದು ಘೋಷಿಸಿದ. ಈ ಮಕ್ಕಳ ಪಾಲಕರು ಏಡ್ಸ್‌ಗೆ ಒಳಗಾಗಿದ್ದರಿಂದ ಮಕ್ಕಳಿಗೆ ಭವಿಷ್ಯ ದಲ್ಲಿ ಬರಬಹುದಾದ ಏಡ್ಸ್ ಕಾಯಿಲೆ ಬರದಿರಲು ತಾನು ಸಿಸಿಆರ್೫ವಂಶವಾಹಿಯನ್ನು ಎಡಿಟ್ ಮಾಡಿದ್ದೇನೆ ಎಂದು ಆತನ ವಾದ. ಈ ಎಚ್‌ಐವಿ ವೈರಸ್ ( ಏಡ್ಸ್ ಉಂಟುಮಾಡುವ ವೈರಸ್ ) ಸಿಸಿಆರ್೫ವಂಶವಾಹಿ ಉಪಯೋಗಿಸಿ ಜೀವಕೋಶಗಳಿಗೆ ಸೋಂಕು ತರುತ್ತದೆ.
ಈ ವಂಶವಾಹಿ ಬದಲಿಸುವುದರಿಂದ (ಎಡಿಟ್ ಮಾಡುವುದರಿಂದ) ಆ ಸಾಧ್ಯತೆ ಸಂಪೂರ್ಣ ಇಲ್ಲವಾಗಿ ಆನಂತರ ಅವರಿಗೆ ಏಡ್ಸ್ ಬರುವುದಿಲ್ಲ. ಆತನ ಈ ಕೃತ್ಯವನ್ನು ವೈಜ್ಞಾನಿಕ ಜಗತ್ತು ಸಂಪೂರ್ಣವಾಗಿ ಖಂಡಿಸಿತು. ಆತನ ಶೆಂಜೆನ್ ವಿಶ್ವವಿದ್ಯಾನಿಲಯದಪ್ರೊಫೆಸರ್ ಪಟ್ಟ ಕಿತ್ತುಕೊಂಡು ಆತನಿಗೆ೩ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಯಿತು. ಈತ ಹೀಗೆ ಮಾಡುವಲ್ಲಿ ಹಲವಾರು ವೈದ್ಯಕೀಯ ಕಾನೂನುಗಳನ್ನು ಮುರಿದು ಹಾಕಿದ. ಹಾಗೆಂದು ಈತ ಈ ಮಕ್ಕಳಿಗೆ ವೈರಸ್ ಪ್ರವೇಶಿಸಿ ಏಡ್ಸ್ ಬರದಂತೆ ಮಾಡಲೂ ಸಾಧ್ಯವಾಗದೆ ಈತನ ಇಡೀ ಪ್ರಯೋಗ ವಿವಾದಾತ್ಮಕವಾಯಿತು. ಆತನಿಗೆ ಗೊತ್ತಿಲ್ಲದ ಇನ್ನಿತರ ಮ್ಯುಟೇಷನ್‌ಗಳು ಅಲ್ಲಿ ಇದ್ದವು. ಈತನ ಪ್ರಯೋಗದಿಂದ ಅವ್ಯಾವೂ ಏನೂ ಬದಲಾಗದೆ ಈತನ ಉದ್ದೇಶ ಸಫಲವಾಗಲಿಲ್ಲ. ಈ ಕ್ರಿಸ್ಪ್ ಆರ್ / ಕ್ಯಾಸ್ ೯ ಕ್ರಿಯೆ ವಂಶವಾಹಿಗಳ ಬದಲಾವಣೆಗೆ ಉಪಯೋಗ ಆಗುವುದಾದರೂ ಏನೂ ಪಾರ್ಶ ಪರಿಣಾಮ ಇಲ್ಲದೇ ಮೂಲ ಉದ್ದೇಶ ಜೀನ್ಎಡಿಟಿಂಗ್ ಸಂಪೂರ್ಣವಾಗಿ ಸಫಲವಾಗುತ್ತದೆ ಎಂಬ ನಿಖರತೆ ಈ ಪ್ರಯೋಗಕ್ಕೆ ಇನ್ನೂ ಆಗಿಲ್ಲ ಎಂಬುದು ವಸ್ತು ಸ್ಥಿತಿ.
ಈ ಮಹಿಳಾ ವಿಜ್ಞಾನಿಗಳ ಪರಿಚಯ:
ಎಮಾನು ಚಾರ್ಪೆಂಟಿಯರ್: ಈಕೆ ಪ್ಯಾರಿಸ್‌ನ ಪಿಯರ್ ಅಂಡ್ ಮೇರಿ ಕ್ಯೂರಿ ವಿಶ್ವವಿದ್ಯಾನಿಲಯದಲ್ಲಿ ಬಯೋಕೆಮಿಸ್ಟ್ರಿ ಮತ್ತು ಮೈಕ್ರೋಬಯಾಲಜಿ ಯನ್ನು ಅಧ್ಯಯನ ಮಾಡಿದರು. ನಂತರ ಪ್ಯಾರಿಸ್‌ನ ಪಾರ್ಶ್ಚ ಇನ್ ಸ್ಟಿಟ್ಯೂಟ್‌ನಿಂದ ಮೈಕ್ರೋಬಯಾ ಲಜಿಯಲ್ಲಿ ಪಿಎಚ್ ಡಿ ದೊರಕಿಸಿಕೊಂಡರು. ನಂತರ ಈಕೆ೫ವರ್ಷಗಳ ಕಾಲ ಅಮೆರಿಕದ ರಾಕ್ ಫೆಲರ್ ವಿಶ್ವವಿದ್ಯಾನಿಲಯ, ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಲ್ಯಾಂಗೋನ್ ಮೆಡಿಕಲ್ ಸೆಂಟರ್, ಸ್ಕಿರ್ ಬಾಲ್ ಇನ್ ಸ್ಟಿಟ್ಯೂಟ್ ಆಫ್ ಬಯೋಮಾಲಿ ಕ್ಯುಲಾರ್ ಮೆಡಿಸಿನ್ ಮತ್ತು ಸೇಂಟ್ ಜೂಡ್ ಮಕ್ಕಳ ಸಂಶೋಧನಾ ಆಸ್ಪತ್ರೆ – ಇವುಗಳಲ್ಲಿ ಹಲವು ವಿಧದ ಸಂಶೋಧನೆ ಕೈಗೊಂಡರು.
ನಂತರ ಸ್ವಲ್ಪ ಕಾಲ ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾನಿಲಯದ ಮ್ಯಾಕ್ಸ್ ಪೆರುಟ್ಜ್ ಲ್ಯಾಬೋರೇಟರಿಯಲ್ಲಿ ಸ್ವಲ್ಪ ಕಾಲಸಂಶೋಧನಕಾರಳಾಗಿ ಕೆಲಸ ಮಾಡಿದರು.೨೦೧೩ರಲ್ಲಿ ಈಕೆ ಜರ್ಮನಿಯ ಪ್ರತಿಷ್ಠಿತ ಅಲೆಕ್ಸಾಂಡರ್ ವೋನ್ ಹಂಬೋಲ್ಟ ಪ್ರೊಫೆಸರ್ ಶಿಪ್ ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿಕೊಂಡರು.
ಡಾ. ಜೆನ್ನಿಫರ್ ಡೌಡ್ನಾ: ಈಕೆ೧೯೮೫ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪದವಿ ಗಳಿಸಿ ನಂತರ ಹಾರ್ವರ್ಡ್ ವಿಶ್ವ ವಿದ್ಯಾನಿಲಯದಿಂದ೧೯೮೯ರಲ್ಲಿ ಬಯೋಕೆಮಿಸ್ಟ್ರಿ ಯಲ್ಲಿ ಪಿಎಚ್ ಡಿ ಪಡೆದು ಕೊಂಡರು. ನಂತರ ಈಕೆ ಯೇಲ್ ವಿಶ್ವವಿದ್ಯಾ ನಿಲಯದ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಫ್ ಬಯೋಕೆಮಿಸ್ಟ್ರಿ ಮತ್ತು ಮಾಲಿಕ್ಯುಲರ್ ಬಯಾಲಜಿಯಲ್ಲಿ ಕೆಲಸ ಮಾಡಿದರು. ಈಕೆ ತನ್ನ ವಿವಿಧ ಸಂಶೋಧನೆಗೆ ಹಲವಾರು ಪ್ರಶಸ್ತಿ ದೊರಕಿಸಿ ಕೊಂಡಿದ್ದಾರೆ.