ಧನ್ಯತೆ ಎಂಬುದು ಶಬ್ದಾತೀತ
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
ಕರೋನಾದಿಂದ ಲಾಕ್‌ಡೌನ್ ಆದ ಕಾಲದಲ್ಲಿ ಬ್ರೆಜಿಲ್ ಮೂಲದ ಲೇಖಕ ಪೌಲೋ ಕೊಯಿಲೊ ( ) ಬರೆದ ‘ದಿಅಲ್ಕೆಮಿಸ್ಟ್ ( ) ಪುಸ್ತಕ ಓದಿದೆ. 1988ರಲ್ಲಿ ಬ್ರೆಜಿಲಿಯನ್ ಭಾಷೆಯಲ್ಲಿ ಮೊದಲ ಬಾರಿ ಪ್ರಕಟವಾದ ಈ ಪುಸ್ತಕ ಇಂಗ್ಲಿಷ್‌ನಲ್ಲಿ ಮೊದಲ ಬಾರಿ ಪ್ರಕಟವಾದದ್ದು 1993ರಲ್ಲಿ. ಈ ಪುಸ್ತಕ ಸುಮಾರು ಎಪ್ಪತ್ತು ಭಾಷೆಯಲ್ಲಿ ಅನುವಾದ ಗೊಂಡಿದೆ.ಪೌಲೋನ ಇದೊಂದೇ ಪುಸ್ತಕ ತೊಂಬತ್ತು ಬಾರಿ ಮರುಮುದ್ರಣಗೊಂಡು ಆರೂವರೆ ಕೋಟಿ ಪ್ರತಿ ಮಾರಾಟವಾಗಿದೆ ಎಂದರೆ ಓದಲೇಬೇಕಲ್ಲವೇ? (ಇದುವರೆಗೆ ಪೌಲೋ ರಚಿಸಿದ ಹದಿನೈದು ಕೃತಿಯ ಹದಿನೈದು ಕೋಟಿ ಪ್ರತಿಗಳು ಮಾರಾಟವಾಗಿವೆ)ಸಾಂಟಿಯಾಗೋ ಎಂಬ ಕುರಿ ಮಾರುವ ಹುಡುಗ ಎಂದೂ ಕಾಣದ ಅಮೂಲ್ಯ ನಿಧಿಯ ಬೆನ್ನು ಹತ್ತಿ ಈಜಿಪ್ಟ್‌ನ ಪಿರಾಮಿಡ್ ಕಡೆಗೆ ಹೊರಟು ನಿಲ್ಲುತ್ತಾನೆ.
ಆ ಪ್ರಯಾಣದಲ್ಲಿ ತನ್ನ ಎ ಕುರಿಗಳನ್ನೂ, ಅದನ್ನು ಮಾರಿ ಬಂದ ಹಣವನ್ನೂ ಕಳೆದುಕೊಳ್ಳುತ್ತಾನೆ. ನಂತರ ಸ್ಪಟಿಕದ  ವಸ್ತು ಗಳನ್ನು ಮಾರುವ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು, ಸ್ವಲ್ಪ ಹಣ ಸಂಗ್ರಹವಾದ ನಂತರ ಪುನಃ ತನ್ನ ಕನಸಿನ ಬೆನ್ನು ಹತ್ತಿ ಪ್ರಯಾಣ ಮುಂದುವರಿಸುತ್ತಾನೆ. ಎ ಅಡೆತಡೆಗಳ ನಡುವೆ ಅವನು ತನ್ನ ಕೊನೆಯ ನಿಲ್ದಾಣ ತಲುಪಿದಾಗ ಆತನಿಗೆ ನಿಧಿ ತನ್ನ ಹೊಸ್ತಿಲ ಇರುವ ಅರಿವಾಗುತ್ತದೆ. ಇದು ಈ ಪುಸ್ತಕದ ಸಾರಾಂಶ. ಕಥೆ ಏನೇ ಇದ್ದರೂ ನೀವು ಸದುದ್ದೇಶದಿಂದ ಏನನ್ನಾ ದರೂ ಬಯಸಿದರೆ ಅದನ್ನು ಈಡೇರಿಸಲು ಇಡೀ ಬ್ರಹ್ಮಾಂಡವೇ ಒಂದಾಗುತ್ತದೆ’ ಎಂಬುದು ಈ ಪುಸ್ತಕದಲ್ಲಿರುವ ಮಹತ್ವದ ಸಂದೇಶ.
ನಮ್ಮ ಕಣ್ಣ ಮುಂದಾಗುವ ಕೆಲವು ಘಟನೆಗಳು ಈ ಮಾತನ್ನು ಸತ್ಯವಾಗಿಸುತ್ತವೆ. ಅದಕ್ಕೆ ಒಂದೆರಡು ಉತ್ತಮ ಉದಾಹರಣೆ ಇಲ್ಲಿದೆ. ಮೊನ್ನೆ ಮೊನ್ನೆಯಷ್ಟೇ ಸುದ್ದಿಯಾದ ತನುಜಾಳ ವಿಷಯವನ್ನೇ ತೆಗೆದುಕೊಳ್ಳಿ. ನಾನು ಹೇಳುತ್ತಿರುವುದು, ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರ ಟ್ವೀಟ್‌ನಿಂದ ಆರಂಭವಾಗಿ, ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಮಗ ವಿಜಯೇಂದ್ರ, ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಸುಧಾಕರ್, ಅವರ ಕಾರ್ಯದರ್ಶಿಗಳು, ಪ್ರದೀಪ್ ಈಶ್ವರ್ ಮೊದಲಾದವರ ಸಹಯೋಗದಿಂದ ನೀಟ್ ಪರೀಕ್ಷೆ ಬರೆದ ತನುಜಾಳ ವಿಷಯ.
ಸಾಮಾನ್ಯ ಕುಟುಂಬದಲ್ಲಿ ಜನಿಸಿ, ನವೋದಯ ಶಾಲೆಯಲ್ಲಿ ಓದಿ, ತಾನೊಬ್ಬ ವೈದ್ಯೆಯಾಗಬೇಕೆಂದು ಕನಸು ಕಟ್ಟಿಕೊಂಡು,ಮೊದಲನೆಯ ವರ್ಷ ಅದು ಸಾಧ್ಯವಾಗದೇ ಇದ್ದಾಗ ಪುಣೆಗೆ ಹೋಗಿ ಒಂದು ವರ್ಷ ಕೋಚಿಂಗ್ ಪಡೆದು, ಮನೆಯ ಸುತ್ತಮುತ್ತ ಲಿನ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಿದ್ದರಿಂದಲೂ, ಜ್ವರದಿಂದ ಬಳಲುತ್ತಿದ್ದುದರಿಂದಲೂ ಈ ವರ್ಷದ ಮೊದಲನೆಯ ಪರೀಕ್ಷೆ ಬರೆಯಲಾಗದೇ, ಕಳೆದ ಬುಧವಾರ ಪರೀಕ್ಷೆ ಬರೆದ ತನುಜಾಳ ಕಥೆಯನ್ನು ಸಂಪಾದಕರು ಕಳೆದ ವಾರದ ತಮ್ಮ ‘ನೂರೆಂಟು ವಿಶ್ವ’ ಅಂಕಣದಲ್ಲಿ ಸವಿಸ್ತಾರವಾಗಿ ಬರೆದಿದ್ದಾರೆ. ಜೀವನದ ಹಲವಾರು ಪಾಠಗಳ ಪುಟಗಳನ್ನು ತೆರೆದಿಡುವು ದಕ್ಕೆ ಈ ಒಂದು ಪ್ರಕರಣ ಸಾಕು. ‘ಕೊನೆಗೂ ತನುಜಾ ಪರೀಕ್ಷೆ ಬರೆದಳು, ನಾನು ಧನ್ಯ!’ ಅಂಕಣ ಹಲವಾರು ಕಾರಣಗಳಿಂದ ಸರ್ವಕಾಲಿಕವಾಗಿ ಕಾದಿಡುವ ಅಂಕಣಗಳಂದು.
ಅದನ್ನು ಓದುತ್ತಾ ಹೋದಂತೆ ಕುತೂಹಲಕಾರಿ ಸಿನಿಮಾ ನೋಡಿದ ಅನುಭವವಾಗುತ್ತದೆ, ಓದಿ ಮುಗಿಸುವ ಹೊತ್ತಿಗೆ ಕಣ್ಣುಮಂಜಾಗುತ್ತದೆ. ಶಿಕಾರಿಪುರದ ಮನಹಳ್ಳಿಯಿಂದ ಹೊರಟು ಊಟಕ್ಕೂ, ತಿಂಡಿಗೂ ನಿಲ್ಲದೇ, ಮುನ್ನೂರು ಕಿಲೋ ಮೀಟರ್ ಪ್ರಯಾಣಿಸಿ ಬೆಂಗಳೂರು ತಲುಪಿ, ಅಲ್ಲಿಂದ ಮೆಟ್ರೋ ಮೂಲಕ ಪರೀಕ್ಷಾ ಕೊಠಡಿಗೆ ಸೇರಿದ ಪರಿಯನ್ನು ಸರಣಿಯಲ್ಲಿ ಪೋಣಿಸಿ ದ್ದಾರೆ.
ಮೊನ್ನೆಯಷ್ಟೇ ನೀಟ್ ಪರೀಕ್ಷೆಯ ಫಲಿತಾಂಶವೂ ಪ್ರಕಟವಾಗಿದ್ದು, 720ಕ್ಕೆ 586 ಅಂಕ ಪಡೆದ ತನುಜಾ ವೈದ್ಯಕೀಯ ಶಿಕ್ಷಣದ ಹೊಸ್ತಿಲು ತುಳಿಯುವುದಕ್ಕೆ ಸಿದ್ಧಳಾಗಿದ್ದಾಳೆ. ಒಂದು ವರ್ಷದ ಮಹತ್ವ ತಿಳಿಯಬೇಕೆಂದರೆ ತನ್ನ ಅಂತಿಮ ಪರೀಕ್ಷೆಯಲ್ಲಿ ಅನು ತ್ತೀರ್ಣನಾದ ವಿದ್ಯಾರ್ಥಿಯನ್ನು ಕೇಳಿ. ಒಂದು ತಿಂಗಳಿನ ಮೌಲ್ಯ ತಿಳಿಯಬೇಕಾದರೆ ನಿಗದಿತ ಸಮಯಕ್ಕಿಂತ ಒಂದು ತಿಂಗಳು ಮುಂಚೆಯೇ ಅಪಕ್ವ ಮಗುವಿಗೆ ಜನ್ಮ ನೀಡಿದ ತಾಯಿಯನ್ನು ಕೇಳಿ. ಒಂದು ತಾಸಿನ ಬೆಲೆ ತಿಳಿಯಬೇಕೆಂದರೆ ಪರಸ್ಪರ ಭೇಟಿಗೆ ಕಾಯುತ್ತಿರುವ ಪ್ರೇಮಿಗಳನ್ನು ಕೇಳಿ, ಒಂದು ನಿಮಿಷದ ಮೌಲ್ಯ ತಿಳಿಯಬೇಕೆಂದರೆ ಬಸ್ಸನ್ನೋ ಟ್ರೇನನ್ನೋ ತಪ್ಪಿಸಿಕೊಂಡವ ರನ್ನು ಕೇಳಿ.
ಒಂದು ಸೆಕೆಂಡಿನ ಮಹತ್ವ ತಿಳಿಯಬೇಕೆಂದರೆ ಕ್ಷಣ ಮಾತ್ರದಲ್ಲಿ ಅಪಘಾತದಿಂದ ಪಾರಾದವರನ್ನು ಕೇಳಿ. ಒಂದು ಮಿಲಿ ಸೆಕೆಂಡಿನ ಮೌಲ್ಯ ತಿಳಿಯಬೇಕೆಂದರೆ ಅಂತಾರಾಷ್ಟ್ರೀಯ ಕ್ರೀಡಾಕೂಟದ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದವರನ್ನು ಕೇಳಿ. ಒಂದು ನ್ಯಾನೋ ಸೆಕೆಂಡಿನ ಮಹತ್ವ ತಿಳಿಯಬೇಕೆಂದರೆ ಕೊನೆಯ ಘಳಿಗೆಯಲ್ಲಿ ಪಕ್ಕಕ್ಕೆ ಸರಿದು ಎದೆಗೆ ಬೀಳಬೇಕಾದಗುಂಡು ಕೈಗೆ ತಗುಲಿ ಬದುಕಿ ಉಳಿದ ಸೈನಿಕನನ್ನು ಕೇಳಿ.’ ಇದು ಸಮಯಕ್ಕೆ ಸಂಬಂಧಿಸಿದಂತೆ ಬಹಳ ಹಳೆಯ ಮತ್ತು ಪ್ರಸಿದ್ಧ ವಾದ ಮಾತು. ಬಹುಶಃ ತನುಜಾಳನ್ನು ಕೇಳಿದರೆ ಒಂದು ವರ್ಷದ, ಒಂದು ದಿನದ, ಅಷ್ಟೇ ಅಲ್ಲ, ಒಂದೊಂದು ನಿಮಿಷದಮೌಲ್ಯವನ್ನೂ ಇನ್ನೂ ಚೆನ್ನಾಗಿ ಹೇಳಬಹುದು.
ಸಮಯ ಮತ್ತು ಅದೃಷ್ಟದ ಮಹತ್ವ ಅವಳಿಗಿಂತ ಚೆನ್ನಾಗಿ ಯಾರು ತಿಳಿಸಬಲ್ಲರು? ಹೀಗಿರುವಾಗ ಒಂದೆಡೆ ಪರೀಕ್ಷೆ ಬರೆದ ಸಂತಸದಲ್ಲಿ ತನುಜಾ, ಇನ್ನೊಂದೆಡೆ ಪರೀಕ್ಷೆ ಬರೆಯಲು ನೆರವಾದ ಸಾರ್ಥಕತೆಯಲ್ಲಿ ಸಂಪಾದಕರು. ಇನ್ನೊಂದು ಇತ್ತೀಚೆಗೆ ಬಹ್ರೈನ್‌ನಲ್ಲಿ ನಡೆದ ಒಂದು ಘಟನೆ. ಕುಂದಾಪುರ ಮೂಲದ ಯುವಕ ನೊಬ್ಬ ತನ್ನ ಮನೆಯಲ್ಲಿ ಒಬ್ಬನೇ ಇರುವ ಸಂದರ್ಭ ದಲ್ಲಿ ತೀರಿ ಹೋಗಿದ್ದ. ಆತನಿಗೆ ಊರಿನಲ್ಲಿ ಕಷ್ಟ ಎನ್ನುವುದು ಇಲ್ಲವಾದರೂ ತನ್ನ ಕಾಲ ಮೇಲೆ ತಾನು ನಿಲ್ಲಬೇಕು, ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬೇಕು ಎಂಬ ಉತ್ಸಾಹದಿಂದ ಕೆಲ ವರ್ಷಗಳ ಹಿಂದೆ ಬಹ್ರೈನ್‌ಗೆ ಬಂದಿದ್ದ. ಒಂದಿಬ್ಬರು ಸ್ನೇಹಿತ ರನ್ನು ಹೊರತು ಪಡಿಸಿ, ಹೆಚ್ಚಿನವರಿಗೆ ಪರಿಚಯವಿರದ, ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳದ ಯುವಕ ತೀವ್ರ ಹೃದಯಾಘಾತ ಕ್ಕೊಳಗಾಗಿ ತೀರಿಕೊಂಡು ಮೂರು ದಿನದ ನಂತರ ವಿಷಯ ಬೆಳಕಿಗೆ ಬಂದಿತ್ತು.
ಮೂರು ದಿನಗಳಿಂದ ಮಗನ ಸುಳಿವಿಲ್ಲದೇ ಗಾಬರಿಗೊಂಡ ತಂದೆ, ತಾಯಿ, ಮಡದಿಗೆ ಯುವಕನ ಸಾವಿನ ಸುದ್ದಿ ಸಿಡಿಲು ಬಡಿ ದಂತಾಗಿತ್ತು. ಬಹ್ರೈನ್‌ನಂಥ ದೇಶದಲ್ಲಿ ಸಾವು ಸಂಭವಿಸಿ ಶವವನ್ನು ಭಾರತಕ್ಕೆ ಕಳಿಸುವುದಾದರೆ, ಬೇರೆ ಬೇರೆ ವಿಭಾಗಗಳ ಸಂಬಂಧಪಟ್ಟ ಕಚೇರಿಗಳಿಂದ ಕಾಗದಪತ್ರಗಳನ್ನು ಕಲೆ ಹಾಕಬೇಕು, ಆಸ್ಪತ್ರೆಯ ವಿಧಿ ವಿಧಾನಗಳು, ಶವದ ಪೆಟ್ಟಿಗೆಯ ಏರ್ಪಾಡು ಮಾಡಿ ನಂತರ ವಿಮಾನ ಹಾರುವ ದಿನ ನಿಗದಿಯಾಗುವವರೆಗೆ ಏನಿಲ್ಲವೆಂದರೂ ಮೂರು ನಾಲ್ಕು ದಿನ ಬೇಕು. ಕರೋನಾದ ಸಂದರ್ಭದಲ್ಲಂತೂ ಕೇಳುವುದೇ ಬೇಡ, ಎಂದಿನಂತೆ ವಿಮಾನದ ಹಾರಾಟ ಇಲ್ಲ, ಸರಕಾರಿ ಕಚೇರಿಗಳಿಂದ ಹಿಡಿದು ಎಲ್ಲವೂ ಅರ್ಧಂಬರ್ಧ.
ಆಗ ಆ ಪರಿವಾರದವರ ಸಹಾಯಕ್ಕೆ ನಿಂತವರು ಕನ್ನಡ ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ. ಅವರು ಮೊದಲೆಂದೂ ಆ ಯುವಕನ ಮುಖವನ್ನೇ ನೋಡಿದವರಲ್ಲವಾದ್ದರಿಂದ ಆತನ ಸ್ನೇಹಿತನ ಸಹಾಯ ಕೇಳಿದರು. ಅನಿವಾರ್ಯ ಕಾರಣದಿಂದಆತನೂ ಕೂಡಲೇ ಬರಲಾಗದೆ, ಅವನಿಗಾಗಿ ಕಾದು ಅಂತೂ ಶವದ ಗುರುತು ಹಿಡಿದು, ದೃಢೀಕರಿಸಿದ್ದಾಯಿತು.
ಒಂದೇ ದಿನದಲ್ಲಿ ಕಾಗದ ಪತ್ರಗಳನ್ನು ಜೋಡಿಸುವ ಹೊತ್ತಿಗೆ ಶವ ಕಳಿಸುವ ಸ್ಥಿತಿಯಲ್ಲಿ ಇಲ್ಲ ಎಂಬ ವಿಷಯ ತಿಳಿದು ಮನೆ ಯವರು ಇನ್ನಷ್ಟು ಆಘಾತಕ್ಕೊಳಗಾದರು. ಉಳಿದ ಒಂದೇ ವಿಧಾನವೆಂದರೆ ಬಹ್ರೈನ್‌ನಲ್ಲೇ ಶವ ಸಂಸ್ಕಾರ ಮಾಡುವುದು. ಬಹ್ರೈನ್‌ನಲ್ಲಿ ಅದಕ್ಕೆ ವ್ಯವಸ್ಥೆ ಇರುವುದರಿಂದ ಯುವಕನ ಮನೆಯವರು ಅಂತ್ಯ ಸಂಸ್ಕಾರ ಮಾಡುವಂತೆ ಅಧ್ಯಕ್ಷರನ್ನು ಕೇಳಿಕೊಂಡರು. ಹಾಗೆ ಮಾಡುವುದಾದರೆ ಅದಕ್ಕೆ ಬೇರೆಯದೇ ಕಾಗದ ಪತ್ರಗಳ ಅವಶ್ಯಕತೆ ಇತ್ತು.
ಕರೋನಾದಿಂದ ಆದ ಸಾವಲ್ಲ ಎಂಬುದಕ್ಕೆ ಸರಕಾರಿ ಆಸ್ಪತ್ರೆಯಿಂದ ಪ್ರಮಾಣ ಪತ್ರ, ಉದ್ಯೋಗ ದಾತನಿಂದ ಲೆಕ್ಕಾಚಾರ ಮತ್ತು ಒಪ್ಪಿಗೆ ಪತ್ರ, ಸರಕಾರಿ ಮರಣ ದಾಖಲಾತಿ, ವಿದೇಶಾಂಗ ಸಚಿವಾಲಯ ದಿಂದ ದೃಢೀಕರಣ, ಶವ ಸಂಸ್ಕಾರ ಮಾಡಲು ಪಾಲಕರು ಮತ್ತು ಮಡದಿ ಯಿಂದ ಪರವಾನಗಿ ಪತ್ರ, ರಾಯಭಾರಿ ಕಚೇರಿಯಿಂದ ಶವವನ್ನು ಸ್ವಾಧೀನ ಪಡಿಸಿಕೊಳ್ಳಲು, ಅಂತ್ಯಕ್ರಿಯೆ ನೆರವೇರಿಸಲು ಆಕ್ಷೇಪಣೆ ಇಲ್ಲದ ಪತ್ರಗಳು, ಇತ್ಯಾದಿ ಬೇಕಾದ ಒಟ್ಟೂ ಹನ್ನೊಂದು ಪತ್ರಗಳನ್ನು ಪ್ರದೀಪ್ ಅವರು ಒಂದೇ ದಿನದಲ್ಲಿ ಕಲೆಹಾಕಿದ್ದರು. ಆದರೆ ಅಂತ್ಯ ಸಂಸ್ಕಾರ ಮಾಡುವುದೆಂದರೆ ಹೇಗೆ? ಕೆಲವರು ಹೇಳುವಂತೆ ಅಪ್ಪ ಅಮ್ಮ ಇದ್ದವರು ಮಾಡಬಾರದು ಎಂಬ ಧರ್ಮ ಸೂಕ್ಷ್ಮದ ವಿಚಾರ, ಆ ನಂತರ ಅಸ್ಥಿಯನ್ನು ಏನು ಮಾಡುವುದು? ಕೂಡಲೇ ಭಾರತಕ್ಕೆ ಕಳಿಸುವ ವ್ಯವಸ್ಥೆ ಇಲ್ಲವಾದ್ದರಿಂದ ಬಹ್ರೈನ್‌ನಲ್ಲಿಯೇ ವಿಸರ್ಜಿಸುವುದೋ, ಕೆಲ ಕಾಲ ಇಟ್ಟುಕೊಂಡು ನಂತರ ಕಳಿಸುವುದೋ? ಹಾಗೇ ನಾದರೂ ಆದರೆ ಚಿತಾಭಸ್ಮವನ್ನು ಇಡುವುದು ಎಲ್ಲಿ? ಈ ಎಲ್ಲ ಸವಾಲುಗಳ ನಡುವೆಯೂ, ಅವರು ಶವ ಸಂಸ್ಕಾರಕ್ಕೆ ಸಿದ್ಧ ರಾದರು.
ರುದ್ರಭೂಮಿಯಲ್ಲಿ ದಿನಕ್ಕೆ ಎರಡು ಶವ ಸಂಸ್ಕಾರಕ್ಕೆ ಮಾತ್ರ ಅವಕಾಶವಿದ್ದುದರಿಂದಲೂ, ಆ ಸಂದರ್ಭದಲ್ಲಿ ಕರೋನಾ ದಿಂದಾಗಿ ಇನ್ನೂ ಎರಡು ಸಾವು ಸಂಭವಿಸಿದ್ದರಿಂದಲೂ ರುದ್ರಭೂಮಿಗೂ ಬಿಡುವಿರಲಿಲ್ಲ. ಅಂತೂ ಮನೆಯವರ ಅಪೇಕ್ಷೆ ಯಂತೆ ಇನ್ನೂ ಕೆಲವು ಕನ್ನಡಿಗರ ಸಹಾಯದಿಂದ ವಿಧಿವತ್ತಾಗಿ ಅಂತ್ಯಕ್ರಿಯೆಯನ್ನೂ ನೆರವೇರಿಸಿದರು. ಅಸ್ಥಿಯನ್ನೂವಿಸರ್ಜಿಸಿದರು. ಊರಿನಲ್ಲಿದ್ದ ಪಾಲಕರು ಮತ್ತು ಮಡದಿ ಕಣ್ಣೀರು ಸುರಿಸುತ್ತಲೇ ವಿಡಿಯೋ ಕಾಲ್ ಮುಖಾಂತರ ಅಂತ್ಯ ಕ್ರಿಯೆಯ ವಿಧಿ ವಿಧಾನಗಳನ್ನು ಕಂಡರು. ಗುರುತೇ ಇಲ್ಲದ ವ್ಯಕ್ತಿಯೊಬ್ಬನ ಶವ ಸಂಸ್ಕಾರ ಮಾಡಿದ ಸಾರ್ಥಕ ಭಾವ ಪ್ರದೀಪ್ ಮತ್ತು ಅವರ ಜೊತೆಯಲ್ಲಿದ್ದವರ ಮನದಲ್ಲಿತ್ತು. ಮೂರು ನಾಲ್ಕು ದಿನದ ಮುಂಚಿನವರೆಗೂ ಪರಿಚಯವೇ ಇಲ್ಲದ ಪ್ರದೀಪ್ ಮತ್ತು ತಂಡದವರಿಗೆ ಯುವಕನ ಪರಿವಾರದವರು ಶೋಕದ ನಡುವೆಯೇ ತುಂಬು ಹೃದಯದಿಂದ ಧನ್ಯವಾದ ಹೇಳಿದರು.
ಮತ್ತೊಂದು ಸ್ವಲ್ಪ ಹಳೆಯ ಸಂಗತಿ. ನಾನು ಉದ್ಯೋಗಕ್ಕೆಂದು ಸೌದಿ ಅರೇಬಿಯಾಕ್ಕೆ ಬರಬೇಕಿತ್ತು. ಪಾಸ್ಪೋರ್ಟ್, ವೀಸಾ, ಏರ್ ಟಿಕೆಟ್, ಹೊರಡುವ ದಿನಾಂಕ, ಎಲ್ಲವೂ ಸಿದ್ಧವಾಗಿದ್ದವು. ಊರಿನಿಂದ ಮುಂಬೈಗೆ ಬಂದು ಅಲ್ಲಿಂದ ವಿಮಾನ ಹತ್ತಬೇಕಿತ್ತು.ಮುಂಬೈಗೆ ಹೊರಡುವ ಮುಂಚಿನ ದಿನ ಕಾಲು ಪೆಟ್ಟು ಮಾಡಿಕೊಂಡಿದ್ದೆ. ಕಾಲನ್ನು ಊರಲಾಗದಷ್ಟು ವಿಪರೀತ ನೋವು. ಅಕ್ಕಿ ಮೂಟೆಯನ್ನು ಹೊತ್ತು ಹಾಕಿದಂತೆ ನನ್ನನು ಕಾರಿನಲ್ಲಿ ಹಾಕಿ ಆಸ್ಪತ್ರೆಗೆ ಕೊಂಡೊಯ್ದಿದ್ದರು.
ಎಕ್ಸ್‌ರೇ ತೆಗೆದು, ಇತರ ಪರೀಕ್ಷೆ ಮಾಡಿದ ಎಲುಬು ತಜ್ಞರು ಕಾಲಿಗೆ ಪ್ಲಾಸ್ಟರ್ ಹಾಕಬೇಕೆಂದೂ, ಎರಡು ವಾರ ಕಾಲನ್ನು ಅಡಿಸದೆ,ಹಾಸಿಗೆಯ ಇರಬೇಕೆಂದೂ, ನಂತರ ನಿಧಾನವಾಗಿ ನಡೆದಾಡಬಹುದೆಂದೂ ಹೇಳಿದ್ದರು. ಮೊದಲಿನಂತೆ ಆಗಲು ಕನಿಷ್ಠ ಒಂದೂವರೆಯಿಂದ ಎರಡು ತಿಂಗಳು ಬೇಕೆಂದು ಹೇಳಿದ್ದರು. ಇನ್ನೆರಡು ದಿನದಲ್ಲಿ ಪ್ರಯಾಣ ಬೆಳೆಸದಿದ್ದರೆ ನನ್ನ ಉದ್ಯೋಗಾವ ಕಾಶ ತಪ್ಪಿ ಹೋಗುತ್ತದೆ, ಭವಿಷ್ಯ ಕಮರಿ ಹೋಗುತ್ತದೆ ಎಂಬ ಆತಂಕದಲ್ಲಿದ್ದೆ. ಇಷ್ಟೆಲ್ಲ ಆಗುವಾಗ ರಾತ್ರಿ ಸುಮಾರು ಹತ್ತು ಗಂಟೆ. ವಿಷಯ ತಿಳಿದ ನನ್ನ ಆಪ್ತರಾದ ನಾಗಣ್ಣ ಮತ್ತು ಪರಮಣ್ಣ ಊರಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ, ವಾರಕ್ಕೊಮ್ಮೆ ನಮ್ಮ ಊರಿಗೆ ಬರುತ್ತಿದ್ದ ನಾಟಿ ವೈದ್ಯರಾದ ಕಿರವತ್ತಿ ಗೌಡರನ್ನು ಸಂಪರ್ಕಿಸಿದ್ದರು. ಅಂದೇ ಅವರ ಮಗಳ ನಿಶ್ಚಿತಾರ್ಥವಾದದ್ದರಿಂದ ಅವರ ಮನೆಯಲ್ಲಿ ನೆಂಟರು ಇಷ್ಟರು ಸೇರಿದ್ದರು.
ಅವರನ್ನೆಲ್ಲ ಬೀಳ್ಕೊಟ್ಟು ನಾನಿದ್ದಲ್ಲಿ ಅವರು ಬರುವಾಗ ಮಧ್ಯರಾತ್ರಿ. ಅಲ್ಲಿಯವರೆಗೆ ನಾನು ಕಿರವತ್ತಿ ಗೌಡರ ವಿಷಯಕೇಳಿರಲೂ ಇಲ್ಲ, ಅವರನ್ನು ಕಂಡಿರಲೂ ಇಲ್ಲ. ಒಮ್ಮೆ ಅವರನ್ನು ಕಂಡಾಗ ಇವರು ವೈದ್ಯರಾ ಎಂದು ಮನದಲ್ಲಿ ಎಣಿಸಿದರೂ, ಆಪ್ತರು ಕರೆದುಕೊಂಡು ಬಂದಿದ್ದರೆಂದರೆ ಏನೋ ಒಂದು ಭರವಸೆ. ಬಂದು ನನ್ನ ಕಾಲನ್ನು ಪರೀಕ್ಷಿಸಿದ ಗೌಡರು ಮರುದಿನಮುಂಬೈಗೆ ಹೊರಡಲು ಸಿದ್ಧತೆ ಮಾಡಿಕೊಳ್ಳಿ, ನಾನು ಈಗ ನಿಮ್ಮನ್ನು ಬರೀ ನಡೆಸುವುದಷ್ಟೇ ಅಲ್ಲ, ಮೆಟ್ಟಿಲು ಏರಿಳಿಯು ವಂತೆಯೂ ಮಾಡುತ್ತೇನೆ ಎಂದಿದ್ದರು.
ಅದು ಹೇಗಪ್ಪಾ ಸಾಧ್ಯ, ಕಾಲು ನೆಲಕ್ಕೆ ಊರಿದರೆ ಕರೆಂಟ್ ಶಾಕ್ ಹೊಡೆದಂತೆ ಭಾಸವಾಗುತ್ತಿದೆ ಎಂದುಕೊಳ್ಳುತ್ತಿರುವಾಗಲೇ ನನ್ನ ಕಾಲಿನ ಮೇಲೆ ಕೈ ಆಡಿಸಲಾರಂಭಿಸಿದ್ದರು. ಗೌಡರು ನನ್ನ ಕಾಲನ್ನು ಆಚೀಚೆ ಹೊರಳಿಸಿ, ನಿಧಾನವಾಗಿ ತಿರುಪಿ, ಒಂದೆರಡುಬಾರಿ ಉಜ್ಜಿ, ಒಂದು ಬಾರಿ ಗಟ್ಟಿಯಾಗಿ ಜಗ್ಗಿದಾಗ ಕಣ್ಣ ಮುಂದೆಲ್ಲ ಕತ್ತಲು, ಪ್ರಾಣವೇ ಹಾರಿ ಹೋದ ಅನುಭವ. ಸರಿ ಆಯ್ತು, ಎದ್ದು ನಿಲ್ಲಿ ಎಂದರು. ನನಗೆ ಧೈರ್ಯ ಸಾಲುತ್ತಿರಲಿಲ್ಲ. ಭಯದಿಂದಲೇ ನಿಧಾನವಾಗಿ ಪ್ರಯತಿಸಿದೆ.
ಆಶ್ಚರ್ಯವೆಂಬಂತೆ ತೊಂಬತ್ತು ಪರ್ಸೆಂಟ್ ನೋವು ಕಡಿಮೆಯಾಗಿತ್ತು. ಉಳಿದ ಅಲ್ಪ ಸ್ವಲ್ಪ ನೋವು ಕಡಿಮೆಯಾಗುವುದಕ್ಕೆ ಒಂದು ವಾರ ಬೇಕು, ಕ್ರೇಪ್ ಬ್ಯಾಂಡ್ ಉಪಯೋಗಿಸಿ, ಸರಿಯಾಗುತ್ತೆ ಎಂದ ಗೌಡರು ಅಂದು ನಾನು ಮಾಳಿಗೆ ಹತ್ತಿ ಇಳಿಯುವು ದನ್ನು ನೋಡಿಯೇ ಹೋಗಿದ್ದರು. ಮರುದಿನ ನಾನು ಮುಂಬೈಗೆ ಪ್ರಯಾಣ ಬೆಳೆಸಿ ಅಲ್ಲಿಂದ ಹೊರಟು ಸೌದಿ ಅರೇಬಿಯಾಕ್ಕೆ ಬಂದು ಸೇರಿಕೊಂಡಿದ್ದೆ. ಅಂದು ರಾತ್ರಿ ಆ ಮೂವರು ಇಲ್ಲದಿದ್ದರೆ ಇಂದು ನನ್ನ ಭವಿಷ್ಯವೇ ಬೇರೆಯಾಗಿರುತ್ತಿತ್ತು. ನನ್ನ ಮಿತ್ರರು ಮತ್ತು ಗೌಡರ ಮನದಲ್ಲಿ ಸಾರ್ಥಕತೆಯ ಭಾವ.
ಇವರಿಗೆ ಧನ್ಯವಾದ ಹೇಳಲು ನನ್ನಲ್ಲಿ ಶಬ್ದ ದಾರಿದ್ರ್ಯ. ಆ ಸಂದರ್ಭದಲ್ಲಿ ಎದುರಿಗಿದ್ದವರ ಕೈ ಮುಗಿಯುವುದೋ, ಕಾಲು ಮುಟ್ಟಿ ನಮಸ್ಕರಿಸುವುದೋ, ಅಪ್ಪಿಕೊಳ್ಳುವುದೋ, ಅಥವಾ ಎರಡನ್ನೂ ಮಾಡುವುದೋ ಅರ್ಥವಾಗುವುದಿಲ್ಲ. ಅವರ ಒಂದು ಋಣ ಜೀವನ ಪೂರ್ತಿ ನಮ್ಮೊಂದಿಗಿರುತ್ತದೆ. ಒಂದೇ ಸಲ ಅದನ್ನು ತೀರಿಸಲು ಸಾಧ್ಯವಿಲ್ಲ. ಆಗಾಗ ಅಷ್ಟಷ್ಟಾಗಿ ತೀರಿಸುತ್ತಾ ಬರಬೇಕು. ಮಗನನ್ನು ಕಳೆದುಕೊಂಡವರ ಮನಸ್ಥಿತಿಯಾಗಲೀ, ತನುಜಾಳ ಮನಸ್ಥಿತಿಯಾಗಲೀ, ಇದಕ್ಕೆ ಹೊರತಾಗಿಲ್ಲ ಅಂದುಕೊಳ್ಳು ತ್ತೇನೆ.
ಜೀವನದಲ್ಲಿ ತಪ್ಪಿಹೋದ ಅವಕಾಶಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲವಂತೆ. ಅದು ಮನುಷ್ಯನನ್ನು ಸಾಯುವವರೆಗೆ ಕಾಡುತ್ತಿರುತ್ತದೆ. ಪರೀಕ್ಷೆ ಬರೆದ ನಂತರ ಮತ್ತು -ಲಿತಾಂಶ ಪ್ರಕಟವಾದ ನಂತರ ಮುಗ್ಧ ಮುಖದ ಮಗು ಧನ್ಯವಾದ ಹೇಳಿದ್ದಳು. ಈ ಪ್ರಕರಣಗಳಲ್ಲಿ ಎಷ್ಟೇ ಧನ್ಯವಾದ ಹೇಳಿದರೂ ಸಾಲದು ಎಂಬುದು ತನುಜಾಳಿಗೂ ಗೊತ್ತು, ಪಾಲಕರಿಗೂ ಗೊತ್ತು, ನನಗೂ ಗೊತ್ತು. ಸಾಕ್ಷಾತ್ ಭಗವಂತನೇ ಪ್ರತ್ಯಕ್ಷನಾಗಿ ವರ ಕರುಣಿಸಿದ ಅನುಭವ ವನ್ನು ಶಬ್ದಗಳಲ್ಲಿ, ಅಕ್ಷರಗಳಲ್ಲಿ ಬಂಧಿಸಲು  ಸಾಧ್ಯವಿಲ್ಲ. ಅದನ್ನು ಅನುಭವಿಸಿದವರ ಕಣ್ಣುಗಳ ಕಾಣಬೇಕು.
ತನುಜಾಳ ಕುರಿತು ಬರೆದ ತಮ್ಮ ಲೇಖನದ ಕೊನೆಯಲ್ಲಿ ಸಂಪಾದಕರು ‘ಧನ್ಯೋಸ್ಮಿ!’ ಎಂದು ಒಂದು ಶಬ್ದದಲ್ಲಿ ಮುಗಿಸಿದ್ದರು. ಧನ್ಯತೆಯನ್ನು ಪ್ರಕಟಪಡಿಸಲು ಬಹುಶಃ ಅದಕ್ಕಿಂತ ದೊಡ್ದ ಶಬ್ದ ಇರಲಿಕ್ಕಿಲ್ಲ. ಸಾರ್ಥಕತೆ, ಕೃತಾರ್ಥತೆಗಳೆಲ್ಲ ಪರ್ಯಾಯಶಬ್ದಗಳಾದೀತೆ ವಿನಃ ಧನ್ಯತಾ ಭಾವ ವನ್ನು ವ್ಯಕ್ತಪಡಿಸಲು ಪರಿಪೂರ್ಣವಾಗಲಿಕ್ಕಿಲ್ಲ. ಏಕೆಂದರೆ ಆ ಭಾವವೇ ಹಾಗೆ. ಆ ಕ್ಷಣದಲ್ಲಿ ಹೃದಯ ಭಾರವಾಗಿ, ಕೊರಳ ಸೆರೆ ಉಬ್ಬಿ, ಕಣ್ಣುಗಳು ಮಂಜಾದರೂ, ದೇಹ ಆಗಸದಲ್ಲಿ ತೇಲಾಡುತ್ತಿರುವ ಅನುಭವ. ಅದನ್ನು ಉಪಮೆಯಿಂದಲೋ, ಕಾವ್ಯಾಲಂಕಾರದಿಂದಲೋ ವರ್ಣಿಸಲು ಅಸಾಧ್ಯ ಬಿಡಿ.
ನಮ್ಮ ಉದ್ದೇಶ ಒಳ್ಳೆಯದಿದ್ದರೆ ಯಾವುದೋ ಅವ್ಯಕ್ತ ಶಕ್ತಿಯ ಬಲ ನಮ್ಮೊಂದಿಗಿರುತ್ತದೆ ಎನ್ನುವುದಕ್ಕೆ ಇಂತಹ ಪ್ರಸಂಗಗಳು ಉದಾಹರಣೆ. ನಮ್ಮ ಉದ್ದೇಶ ಪ್ರಬಲವಾಗಿದ್ದರೆ ನಮ್ಮ ಕ್ರಿಯೆ ಶಕ್ತಿಯುತವಾಗಿರುತ್ತದೆ, ನಮ್ಮ ಕ್ರಿಯೆ ಶಕ್ತಿಯುತವಾಗಿದ್ದರೆಅದರ ಪರಿಣಾಮವೂ ಅಷ್ಟೇ ಪ್ರಬಲವಾಗಿರುತ್ತದೆ ಎನ್ನುವುದಕ್ಕೆ ಇಂತಹ ಘಟನೆಗಳೇ ಸಾಕ್ಷಿ. ನಮಗೆ ಗೊತ್ತಿಲ್ಲದವರು ನಮ್ಮ ಕಾಲಿಗೆ ಗೆಜ್ಜೆ ಕಟ್ಟುತ್ತಾರೆ, ಅರಿಯದವರು ಬಂದು ಆಭರಣ ತೊಡಿಸುತ್ತಾರೆ, ಪರಿಚಯವಿಲ್ಲದವರು ವೇದಿಕೆ ಸಿದ್ಧಪಡಿಸುತ್ತಾರೆ.
ಸದುದ್ದೇಶದಿಂದ ನಾವು ಕಾರ್ಯ ಕೈಗೆತ್ತಿಕೊಂಡರೆ ಮಾರ್ಗಗಳು ತನ್ನಿಂದ ತಾನೇ ತೆರೆದುಕೊಳ್ಳುತ್ತವೆ, ಅದೃಷ್ಟವೂ ನಮ್ಮ ಜೊತೆಗಿರುತ್ತದೆ. ದೇವರ ಆಶೀರ್ವಾದ ಎನ್ನುವುದು ನಮ್ಮ ಕನಸಿನ ಮಿತಿಯನ್ನೂ ಮೀರಿ ಕೆಲಸ ಮಾಡುತ್ತದೆ ಎಂದು ನಮಗೆಅನಿಸುವುದು ಇಂತಹ ಸಂದರ್ಭಗಳ. ಈ ಎ ಘಟನೆಗಳಲ್ಲೂ ಎಲ್ಲವೂ ಒಂದಕ್ಕೊಂದು ಸಮಯಕ್ಕೆ ಸರಿಯಾಗಿ ಕೂಡಿ ಬಂದ ದ್ದನ್ನು ಕಾಣಬಹುದು. ಇವುಗಳಲ್ಲಿ ಯಾವುದಾದರೂ ಒಂದು ಕೊಂಡಿ ಕಳಚಿದರೂ ಕಾರ್ಯ ಯಶಸ್ವಿಯಾಗಲು ಸಾಧ್ಯವಾಗು ತ್ತಿರಲಿಲ್ಲ. ಉದ್ದೇಶ ಒಳ್ಳೆಯದಾಗಿದ್ದರೆ ಬ್ರಹ್ಮಾಂಡವೇ ಒಂದಾಗಿ ನಮ್ಮ ಸಹಾಯಕ್ಕೆ ಬರುತ್ತದೆ ಎಂಬುದಕ್ಕೆ ಇಂತಹ ಕೆಲವು ಘಟನೆಗಳು ಉದಾಹರಣೆ ಅಷ್ಟೇ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಭಟ್ಟರಾಗಲೀ, ಗೌಡರಾಗಲೀ, ಪ್ರದೀಪ್ ಆಗಲೀ ಯಾರೊಬ್ಬರೂ ಹಣಕ್ಕಾಗಿ, ಸ್ವಾರ್ಥಕ್ಕಾಗಿ ಸಹಾಯ ಮಾಡಿದವರಿಲ್ಲ. ಯಾರಿಗೂ ಗೊತ್ತಾಗದಂತೆ ಜಾರಿ ಕೊಳ್ಳುವುದು ಇವರಿಗೆ ಕಷ್ಟವೇನೂ ಆಗಿರಲಿಲ್ಲ. ಅವರುನಿಸ್ವಾರ್ಥದಿಂದ ಕೆಲಸ ಮಾಡಿದ್ದರಿಂದಲೇ ಅವರ ಕೆಲಸಕ್ಕೆ ಬೆಲೆ ಕಟ್ಟಲಾಗದಿರುವುದು, ಅವರ ಬಗ್ಗೆ ಗೌರವ ಇಮ್ಮಡಿಸುವುದು.
ಮಹತ್ವದ ಸಂಗತಿಯೆಂದರೆ ಇಂತಹ ಘಟನೆಗಳೆಲ್ಲ ಪ್ರತಿಯೊಬ್ಬನ ಜೀವನದಲ್ಲಿ ಪ್ರತಿನಿತ್ಯ ಆಗುವಂಥದ್ದಲ್ಲ. ಕೆಲವರಿಗಷ್ಟೇ ಇತರರ ಅತ್ಯವಶ್ಯಕ ಸಂದರ್ಭಕ್ಕೆ ನೆರವಾಗುವ ಅವಕಾಶ ಒದಗಿಬರುತ್ತದೆ. ಹೆಚ್ಚಿನ ಜನರಿಗೆ ಜೀವಮಾನ ಪೂರ್ತಿ ಕಾಯ್ದರೂ ಸಹಾಯ ಮಾಡುವ ಒಂದೇ ಒಂದು ಅವಕಾಶವೂ ಒದಗಿ ಬರುವುದಿಲ್ಲ ಎನ್ನುವುದು ಬೇರೆ ವಿಷಯ ಬಿಡಿ.