ಒಂದು ಮೋಲ್ ಎಂದರೆ ಎಷ್ಟು ಗೊತ್ತೆ ?
ತನ್ನಿಮಿತ್ತ
ರಾಜು ಭೂಶೆಟ್ಟಿ
ನಮ್ಮ ನಿತ್ಯ ಜೀವನದಲ್ಲಿ ರಸಾಯನ ಜ್ಞಾನದ ಮಹತ್ವವೇನು? ಎಂದು ಪ್ರಶ್ನಿಸಿದರೆ, ಅದರ ಮಹತ್ವವಿಲ್ಲದ ಯಾವುದೇ ಕ್ಷೇತ್ರವೇ ಇಲ್ಲವೆನ್ನಬಹುದು. ನಾವು ಬೆಳಿಗ್ಗೆಯಿಂದ ರಾತ್ರಿಯವರೆಗೂ ಉಪಯೋಗಿಸುವ ಪ್ರತಿಯೊಂದು ವಸ್ತುವಿನಲ್ಲಿಯೂ ರಸಾಯನ ವಿಜ್ಞಾನ ಹಾಸು ಹೊಕ್ಕಾಗಿದೆ ಎಂದು ಹೇಳಬಹುದು.
ಕೆಲವು ಉದಾಹರಣೆಗಳನ್ನು ನೋಡಲಾಗಿ ಬೆಳೆಗಳನ್ನು ರಕ್ಷಿಸಲು ತಯಾ ರಿಸುವ ಕೀಟನಾಶಕಗಳು, ಮನುಷ್ಯ ಹಾಗೂ ಪ್ರಾಣಿ ಗಳಿಗೆ ಬರುವ ಹಲವಾರು ಕಾಯಿಲೆಗಳಿಗೆ ಔಷಧಗಳ ತಯಾರಿಕೆ, ಇತ್ತೀಚಿನ ಕೃತಕ ಮಳೆಗಾಗಿ, ವಿವಿಧ ಬಟ್ಟೆಗಳ ತಯಾರಿಕೆ, ನೀರನ್ನು ಶುದ್ಧೀಕರಿಸಲು, ಮುದ್ರಣಗಳಲ್ಲಿ ಬಳಸುವ ಇಂಕ್‌ಗಳಲ್ಲಿ ಸೌಂದರ್ಯ ವರ್ಧಕಗಳಾದ ಪೌಡರ್, ಕ್ರೀಮ್ ಮುಂತಾದವು ಗಳು, ಸಿಂಥೆಟಿಕ್ ವಸ್ತುಗಳು, ಗಾಜು, ಸಿಮೆಂಟು, ಸಾಬೂನುಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆ ಎಂಬುದೇ ಇಲ್ಲ.
ಮನುಷ್ಯನ ಜೀವನದಲ್ಲಿ ಇಷ್ಟೊಂದು ಪರಿಣಾಮ ಬೀರಿರುವ ರಸಾಯನ ವಿಜ್ಞಾನದ ಬೆಳವಣಿಗೆಗೆ ಹಲವಾರು ವಿಜ್ಞಾನಿಗಳು ಶ್ರಮಿಸಿದ್ದು, ಅವರಲ್ಲಿ ಒಬ್ಬರು ಅಂದರೆ ಲೋರೆನ್ ಜೋ ಅಮೇಡಿಯೋ ಕಾರಲೋ ಅವೋಗಾಡ್ರೋ. ಇವರು ಇಟಲಿಯ ವಿಜ್ಞಾನಿ, ಗಣಿತಜ್ಞ ಭೌತವಿಜ್ಞಾನಿ, ಹವಾಮಾನ ತಜ್ಞರೂ ಕೂಡ ಆಗಿದ್ದರು.೯ಆಗಸ್ಟ್೧೭೭೬ರಲ್ಲಿ ಇಟಲಿಯಲ್ಲಿ ಜನಿಸಿದರು.೧೮೧೫ರಲ್ಲಿ ಟುರಿನ್ ಯುನಿವರ್ಸಿಟಿಯಲ್ಲಿ ಭೌತವಿಜ್ಞಾನದ ಪ್ರೊಫೆಸರ್ ಆಗಿ ಕಾರ್ಯವನ್ನು ಆರಂಭಿಸಿದರು.
೧೮೨೦ರಲ್ಲಿ ಅನಿಲಗಳ ಬಗ್ಗೆ ಅನೇಕ ಸಂಶೋಧನೆಗಳನ್ನು ನಡೆಸಿ ಅನೇಕ ಪ್ರಬಂಧಗಳನ್ನು ಪ್ರಕಟಿಸಿದರು. ಇವರ ಸಂಶೋಧನೆ ಯಿಂದ ಪರಮಾಣು ಸಿದ್ಧಾಂತಕ್ಕೆ ಇವರು ನೀಡಿದ ಕೊಡುಗೆ ಅಪಾರ. ಅದುವೇ ಮೋಲ್ ಪರಿಕಲ್ಪನೆ ಉಗಮ. ಅವೋಗಾಡ್ರೋ ಅವರ ಪರಿಕಲ್ಪನೆ ಪ್ರಕಾರ ಒಂದು ನಿರ್ದಿಷ್ಟ ತಾಪ ಮತ್ತು ಒತ್ತಡದಲ್ಲಿ ಸಮಾನ ಪ್ರಮಾಣದ ಅನಿಲಗಳು ಸಮಾನ ಪ್ರಮಾಣದಕಣಗಳನ್ನು ಹೊಂದಿರುತ್ತವೆ.
ಇವರ ಈ ಪರಿಕಲ್ಪನೆಯು ಪರಮಾಣುಗಳ ಸಂಖ್ಯೆಯನ್ನು ಲೆಕ್ಕ ಹಾಕಲು ಮಾರ್ಗದರ್ಶನ ನೀಡಿತು.
ಮೋಲ್ ಎಂದರೇನು?:ಉದಾಹರಣೆಗೆ ನಾವು ಅಂಗಡಿಗೆ ಹೋದಾಗ ವಸ್ತುಗಳನ್ನು ಹೇಗೆ ಕೊಳ್ಳುತ್ತೇವೆ? ಎಂಬುದನ್ನು ಯೋಚಿಸಿದಾಗ – ಸಕ್ಕರೆ, ಅಕ್ಕಿ, ಗೋಧಿ, ರವೆ ಇಂಥ ವಸ್ತುಗಳನ್ನು ಕೆ.ಜಿ.ಗಳಲ್ಲಿ ಕೊಡಿ ಎಂದು ಕೇಳುತ್ತೇವೆ. ಆದರೆ ಬಳೆಗಳನ್ನು ಡಜನ್‌ಗಳಲ್ಲಿ ಕೇಳುತ್ತೇವೆ. ಅದೇ ಹಾಲು ಆದರೆ ಅದನ್ನು ಲೀಟರ್‌ನಲ್ಲಿ ಕೊಡಿ ಎನ್ನುತ್ತೇವೆ. ಸಕ್ಕರೆಯನ್ನು ಡಜನ್‌ಗಳಲ್ಲಿ ಕೇಳುವುದಿಲ್ಲ. ಏಕೆಂದರೆ ಸಕ್ಕರೆ ಕಣಗಳು ತುಂಬಾ ಚಿಕ್ಕವುಗಳಾಗಿದ್ದು, ಅವುಗಳನ್ನು ಡಜನ್‌ನಲ್ಲಿ ಎಣಿಸುವುದು ಅಸಾಧ್ಯದ ಮಾತು. ಅಂದರೆ ವಸ್ತುಗಳನ್ನು ಕೊಳ್ಳುವಾಗ ಕೆ.ಜಿ, ಡಜನ್, ಲೀಟರ್ ಎಂಬ ಏಕಮಾನವನ್ನು ಬಳಸುತ್ತೇವೆ. ಅಂದರೆ೧ಕೆ.ಜಿ ಎಂದರೆ೧೦೦೦ಗ್ರಾಂ. ಒಂದು ಲೀಟರ್ ಎಂದರೆ೧೦೦೦ಮಿ.ಲೀ. ಹಾಗೂ ಒಂದು ಡಜನ್ ಎಂದರೆ೧೨ಎಂದು ಸುಲಭವಾಗಿ ಅಳೆದು/ಲೆಕ್ಕ ಹಾಕಿ ಕೊಡಬಹುದಾಗಿದೆ.
ಯಾವುದೇ ವಸ್ತುರಲಿ ಡಜನ್ ಎಂಬ ಪದವು ಸ್ಥಿರ ಸಂಖ್ಯೆಯನ್ನು ಸೂಚಿಸುತ್ತದೆ. ಅಂದರೆ ನೀವು೧ಡಜನ್ ಬಳೆಗಳನ್ನು ತೆಗೆದು ಕೊಂಡರೂ೧೨ಅದರ ಬದಲು೧ಡಜನ್ ಮಾವಿನ ಹಣ್ಣು ಖರೀದಿಸಿದರೂ ಕೂಡ ಅದು೧೨ಆಗಿರುತ್ತದೆ. ಅದೇ ರೀತಿಯಲ್ಲಿ ಪರಮಾಣು ಅಥವಾ ಅಣುಗಳ ಸಂಖ್ಯೆಯನ್ನು ಸೂಚಿಸಲು ನಾವು ಮೋಲ್ ಎಂಬ ಪದವನ್ನು ಉಪಯೋಗಿಸುತ್ತೇವೆ. ಒಂದು ಮೋಲ್ ಎಂದರೆ೬೦೨,೦೦೦, ೦೦೦, ೦೦೦, ೦೦೦, ೦೦೦, ೦೦೦, ೦೦೦.ಇಷ್ಟು ದೊಡ್ಡ ಸಂಖ್ಯೆಯನ್ನು ಹೇಳುವುದು ಅಥವಾ ಉಪಯೋಗಿಸುವುದು ಸಾಧ್ಯವೇ? ಖಂಡಿತ ಅಸಾಧ್ಯ.
ಅದಕ್ಕಾಗಿ ಆ ಸಂಖ್ಯೆಯನ್ನೇ ಸಂಕ್ಷಿಪ್ತಗೊಳಿಸಿ೬.೦೨೩೧೦೨೩. ಕಣಗಳು ಎಂದು ಬರೆಯಬಹುದಾಗಿದೆ. ಈ ಸಂಖ್ಯೆಯನ್ನೇಅವೋಗಾಡ್ರೋ ಸಂಖ್ಯೆ ಎಂದು ಸಹ ಕರೆಯುವರು. ಇದನ್ನು ಓ ಅಕ್ಷರದಿಂದ ಗುರುತಿಸುವರು. ಪ್ರತೀ ವರ್ಷ ಅಕ್ಟೋಬರ್-೨೩ರಂದು ಅಂತಾರಾಷ್ಟ್ರೀಯ ಮೋಲ್ ದಿನವನ್ನಾಗಿ ಆಚರಿಸಲಾಗುತ್ತದೆ. ಒಂದು ವಸ್ತುವಿನ ಗ್ರಾಂ ಪರಮಾಣು ರಾಶಿಯು೬.೦೨೩೧೦೨೩ಪರಮಾಣುಗಳಿಂದಾಗಿದೆ. ಉದಾಹರಣೆಗೆ- ಆಕ್ಸಿಜನ್‌ನ ಗ್ರಾಂ ಪರಮಾಣು ರಾಶಿಯು೧೬ಗ್ರಾಂ ಆಗಿದೆ.
ಇದರ ಅರ್ಥ೧೬ಗ್ರಾಂ ಆಕ್ಸಿಜನ್‌ನಲ್ಲಿ೬.೦೨೩೧೦೨೩ಪರಮಾಣುಗಳಿವೆ ಎಂದರ್ಥ. ನಾವು ಉಸಿರಾಡಲು೧೬ಗ್ರಾಂ ಆಕ್ಸಿಜನ್‌ನ್ನು ತೆಗೆದುಕೊಂಡರೆ ನಾವು ಉಸಿರಾಡಲು೬.೦೨೩೧೦೨೩ಪರಮಾಣುಗಳನ್ನು ತೆಗೆದುಕೊಂಡಿದ್ದೇವೆ ಎಂದರ್ಥ. ಹಾಗೆಯೇ ಯಾವುದೇ ವಸ್ತುನ ಗ್ರಾಂ ಅಣುರಾಶಿಯು೬.೦೨೩೧೦೨೩ಅಣುಗಳನ್ನು ಹೊಂದಿರುತ್ತವೆ. ಉದಾಹರಣೆಗೆ- ನೀರಿನ ಗ್ರಾಂ ಅಣುರಾಶಿಯು೧೮ಗ್ರಾಂ. ಅಂದರೆ ೧೮ ಗ್ರಾಂ ನೀರನ್ನು ಕುಡಿದರೆ, ನಾವು ೬.೦೨೩೧೦೨೩ ನೀರಿನ ಅಣುಗಳನ್ನು ಕುಡಿದಿ ದ್ದೇವೆ ಎಂದರ್ಥ.
ಹೀಗೆ ಕೊಟ್ಟ ವಸ್ತುವಿನ ರಾಶಿಯಲ್ಲಿರುವ ಪರಮಾಣುಗಳ ಅಥವಾ ಅಣುಗಳ ಸಂಖ್ಯೆಯನ್ನು ಅಂದಾಜು ಮಾಡಲು ಮೋಲ್ ಕಲ್ಪನೆ ತುಂಬಾ ಸಹಕಾರಿ. ಔಷಽಯ ಕ್ಷೇತ್ರದಲ್ಲಿ ಬೇರೆ ಬೇರೆ ಪದಾರ್ಥಗಳನ್ನು ಸೇರಿಸಿ ಒಂದು ಔಷಧ ತಯಾರಿಸುವ ಸಂದರ್ಭದಲ್ಲಿ ಯಾವ ಪ್ರಮಾಣದಲ್ಲಿ ಪದಾರ್ಥಗಳನ್ನು ಬೆರೆಸಿ ಆ ಔಷಧವನ್ನು ಅಂತಿಮಗೊಳಿಸಬೇಕೆಂದು ನಿರ್ಣಯಿಸುವಲ್ಲಿ ಮೋಲ್ ತುಂಬಾ ಸಹಾಯಕ.