ಅಂಗ್ರಪಂಕ್ತಿಯ ವೀರಮಹಿಳೆ ’ಚೆನ್ನಮ್ಮ’
ತನ್ನಿಮಿತ್ತ
ಮುರುಗೇಶ ಆರ್‌.ನಿರಾಣಿ, ಶಾಸಕರು
ಲೋಕಮಾನ್ಯ ಬಾಲಗಂಗಾಧರ ತಿಲಕರು ಬೆಳಗಾವಿ ಬಗ್ಗೆ ಬಹಳ ಅಭಿಯಾನ ಹೊಂದಿದ್ದರು. ರಾಣಿ ಚೆನ್ನಮ್ಮಳ ಕೆಚ್ಚೆದೆಯ ಹೋರಾಟ ನನ್ನಲ್ಲಿ ಸ್ವಾಭಿಮಾನ ಬೆಳೆಸಿದೆ ಎಂದು ತಿಲಕರು ಹೇಳುತ್ತಿದ್ದರು. ಚೆನ್ನಮ್ಮಾಜಿ ಹೋರಾಟದ ವಿವರವಾದ ಕಥೆಯನ್ನು ತಮ್ಮ ‘ಕೇಸರಿ‘ ಪತ್ರಿಕೆಯಲ್ಲಿ ಧೈರ್ಯವಾಗಿ ಪ್ರಕಟಿಸುತ್ತಿದ್ದರು.
ಇಂಥ ಹೋರಾಟದ ಬರಹಗಳನ್ನು ಪ್ರಕಟಿಸಿ ದ್ದಾಗಿ ಅವರಿಗೆ೬ವರ್ಷ ಶಿಕ್ಷಯಾಯಿತು. ಜೈಲು ಶಿಕ್ಷೆಯ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ತಿಲಕರು ಆಗಾಗ ಬಹಿರಂಗ ಸಭೆಗಳಲ್ಲಿ ಹೇಳುತ್ತಿದ್ದರು. ಇಡೀ ದೇಶಕ್ಕೆ ಚೆನ್ನಮ್ಮಳ ಭವ್ಯ ಹಿರಿಮೆಯನ್ನು ಮೊದಲು ಪರಿಚಯಿಸಿದವರು ತಿಲಕರು. ರಾಣಿ ಚೆನ್ನಮ್ಮಾ ಬರೀ ಕರ್ನಾಟಕಕ್ಕೆ ಮಾತ್ರವಲ್ಲ. ಅಖಂಡ ಭಾರತದ ಆತ್ಮ ಗೌರವ. ಅವರು ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ. ರಾಣಿ ಚೆನ್ನಮ್ಮ ಜಗತ್ತಿನ ವೀರಮಳೆಯರಲ್ಲಿ ಅಗ್ರಪಂಕ್ತಿಗೆ ಸೇರಿದವರು.
ಸ್ವಾತಂತ್ರ್ಯ ಸ್ವಾಭಿಮಾನಗಳ ಸಾಕಾರ ಮೂರ್ತಿ. ಕಿತ್ತೂರಿನ ಅರಸರಲ್ಲಿ ಪ್ರಸಿದ್ಧನಾದ ಮಲ್ಲಸರ್ಜ ದೊರೆಯ ಕಿರಿಯ ಪತ್ನಿ. ಕಿತ್ತೂರ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ್ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ತೋರಿದ ಧೈರ್ಯ, ಸಾಹಸ, ಕೆಚ್ಚುಗಳು ಚೆನ್ನಮ್ಮ ರಾಣಿಯನ್ನು ಅಜರಾಮರವಾದ ಕೀರ್ತಿ ಶಿಖರಕ್ಕೇರಿಸಿವೆ. ಪುಟ್ಟ ಸಂಸ್ಥಾನವಾಗಿರುವ ಕಿತ್ತೂರು ಚೆನ್ನಮ್ಮಳ ಹೋರಾಟದಿಂದಾಗಿ ಇಂದು ಜಗತ್ಪ್ರಸಿದ್ಧ ವಾಗಿದೆ. ಸ್ವಾಭಿಮಾನದ ಸಂಕೇತವಾಗಿದೆ.
ಚೆನ್ನಮ್ಮ ಹುಟ್ಟಿದ್ದು ಅಕ್ಟೋಬರ್೨೩, ೧೭೭೮ರಂದು. ಬೆಳಗಾವಿ ಜಿಲ್ಲೆಯ ಕಾಕತಿ ಚೆನ್ನಮ್ಮಳ ಹುಟ್ಟೂರು. ಕಾಕತಿ ಬೆಳಗಾವಿ ಯಿಂದ ಕೇವಲ೬ಕಿ.ಮೀ ದೂರದಲ್ಲಿದೆ. ಚೆನ್ನಮ್ಮಳ ತಂದೆ ಧೂಳಪ್ಪಗೌಡರು ಕಾಕತಿಯ ದೇಸಾಯಿ ಎಂದು ಆಡಳಿತವನ್ನುನಡೆಸುತ್ತಿದ್ದರು. ತಂದೆಯ ಮಾರ್ಗದರ್ಶದಲ್ಲಿ ಚೆನ್ನಮ್ಮ ಎಳೆಯ ವಯಸ್ಸಿನಲ್ಲಿ ಕುದುರೆ ಸವಾರಿ, ಬಿಲ್ಲು – ಖಡ್ಗ ವಿದ್ಯೆಗಳನ್ನು ಕರಗತ ಮಾಡಿಕೊಂಡರು. ಪುರಾಣ, ಪ್ರವಚನಗಳ ಮೂಲಕ ಭಾರತೀಯ ಸಂಸ್ಕೃತಿ ಅರಿತುಕೊಂಡರು. ಬಾಲ್ಯದಲ್ಲಿ ಅವರು ರಾಜ ಮನೆತನಕ್ಕೆ ಬೇಕಾಗುವ ವಿದ್ಯೆಗಳನ್ನು ಕಲಿತುಕೊಂಡರು.
ಕಿತ್ತೂರ ಸಂಸ್ಥಾನ ನಡೆಸಲು ಅವರ ಬಾಲ್ಯದ ಶಿಕ್ಷಣ ಬಹಳ ನೆರವಾಯಿತು. ಕಿತ್ತೂರಿನ ಇತಿಹಾಸ೧೫೮೬ರಿಂದಲೇ ಆರಂಭವಾಗುತ್ತದೆ. ಕಿತ್ತೂರ ರಕ್ಷಣೆಗಾಗಿ ಅನೇಕ ಕಾಳಗಗಳು ನಡೆದಿವೆ. ಬ್ರಿಟಿಷರು ಭಾರತದಲ್ಲಿ ಕಾಲೂರುವ ಸಮಯದಲ್ಲಿ ಇಲ್ಲಿಯ ರಾಜಕೀಯ ಪರಿಸ್ಥಿತಿ ಬಹಳ ಲಕ್ಷಣವಾಗಿತ್ತು. ಉತ್ತರ ಹಿಂದೂಸ್ಥಾನದಲ್ಲಿ ಮೊಗಲರ ಆಡಳಿತವಿತ್ತು. ದಕ್ಷಿಣದಲ್ಲಿ ಪೇಶ್ವೆಯರು ರಾಜ್ಯ ವಿಸ್ತರಣೆಗೆ ಆಕ್ರಮಣಕಾರಿ ಧೋರಣೆ ಅನುಸರಿಸುತ್ತಿದ್ದರು. ಮೈಸೂರಿನಲ್ಲಿ ಹೈದರ್ ಅಲಿ, ಹೈದ್ರಾಬಾದಿನಲ್ಲಿ ನಿಜಾಮ ಶಾ ಆಡಳಿತ ನಡೆಯುತ್ತಿತ್ತು. ಇವರೆಲ್ಲರ ನಡುವೆ ತಮ್ಮ ಪುಟ್ಟ ರಾಜ್ಯಗಳ ಉಳಿವಿಗಾಗಿ ಪಾಳೇಗಾರರು ಹೋರಾಡುತ್ತಿದ್ದರು, ತುಂಬ ಸಮಸ್ಯೆಗಳನ್ನು ಎದುರಿಸುತ್ತಿದ್ದರು.
ದತ್ತಕ ಪ್ರಕರಣದ ವಾದ:ಕಿತ್ತೂರ ರಾಜ್ಯ ವೈಭವದಲ್ಲಿ ಸಾಗುತ್ತಿತ್ತು. ದೊರೆ ಮಲ್ಲಸರ್ಜ ಮತ್ತು ರಾಣಿ ಚೆನ್ನಮ್ಮ ಪ್ರಜೆಗಳ ಬಗ್ಗೆತುಂಬ ಗೌರವ ಹೊಂದಿದ್ದರು. ದಂಪತಿಗಳು ಶರಣರ ಮಾದರಿಯಲ್ಲಿ ಜೀವನ ನಡೆಸುತ್ತಿದ್ದರು. ಪ್ರಜೆಗಳನ್ನು ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಿದ್ದರು. ಧಾರ್ಮಿಕ ಕಾರ್ಯಗಳು ಸತತವಾಗಿ ನಡೆಯುತ್ತಿದ್ದವು. ಕಿತ್ತೂರ ಮಾದರಿ ಸಂಸ್ಥಾನವಾಗಿತ್ತು. ಅನೇಕ ಸಂಸ್ಥಾನಿಕರು ಕಿತ್ತೂರಿಗೆ ಬಂದು ಮಲ್ಲಸರ್ಜ ದೊರೆಯೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆಯುತ್ತಿದ್ದರು.
ಮಲ್ಲಸರ್ಜನ ದೊರೆ ಕೆರೆಗಳನ್ನು ಕಟ್ಟಿಸುವ ಬಗ್ಗೆ ಮತ್ತು ದೇವಾಲಯಗಳನ್ನು ನಿರ್ಮಿಸುವ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. ರಾಣಿ ಚೆನ್ನಮ್ಮ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದರು. ಕಲಾವಿದರಿಗೆ ವಿಶೇಷ ಸೌಲತ್ತು ನೀಡಲಾಗಿತ್ತು. ಅತ್ಯಂತ ವಿಶೇಷ ಸಂಗತಿ ಎಂದರೆ ಮಲ್ಲಸರ್ಜನ ದೊರೆ ಯುವಕರಿಗೆ ಸೈನಿಕ ಶಿಕ್ಷಣ ನೀಡುತ್ತಿದ್ದರು. ಸೈನಿಕ ಶಿಕ್ಷಣ ಕಡ್ಡಾಯವಾಗಿದ್ದು, ಅರಸರ ಮುಂದಾಲೋಚನೆಗೆ ಸಾಕ್ಷಿಯಾಗಿದೆ.
ವಿಧಿಯ ಆಟ ಚಿತ್ರವಾದದ್ದು. ಮಲ್ಲಸರ್ಜ ದೊರೆ ಹಠಾತ್ತನೆ ನಿಧನ ಹೊಂದಿದ್ದರು. ರಾಜ ಮನೆತನದ ಏಕೈಕ ಪುತ್ರ ಕೂಡ ಕೆಲವೇ ದಿನಗಳಲ್ಲಿ ತೀವ್ರ ಅನಾರೋಗ್ಯದ ಕಾರಣ ನಿಧನ ಹೊಂದಿದ್ದನು. ಒಂದು ವರ್ಷದ ಅವಧಿಯಲ್ಲಿ ನಡೆದ ಎರಡು ಸಾವುಗಳಿಂದರಾಣಿ ಚೆನ್ನಮ್ಮ ದುಃಖದ ಮಡುಗೆ ಜಾರಿದರು. ಮುಂದೇನು? ಎಂಬ ಚಿಂತೆ ಕಾಡತೊಡಗಿತು. ಕಾಕತಿಯ ಮತ್ತು ಕಿತ್ತೂರಿನ ಕೆಲವು ಹಿರಿಯರು ಕೂಡಿ, ಚರ್ಚಿಸಿ ರಾಜಮನೆತನಕ್ಕೆ ದತ್ತು ಪುತ್ರನನ್ನು ನೀಡಲು ನಿರ್ಣಯಿಸಿದರು.
ಹಿರಿಯರ ನಿರ್ಧಾರದ ಪ್ರಕಾರ, ಶಿವಲಿಂಗಪ್ಪ ಎಂಬ೧೦ವರ್ಷದ ಬಾಲಕನನ್ನು ಚೆನ್ನಮ್ಮಾಜಿ ದತ್ತು ಸ್ವೀಕರಿಸಿದರು. ಆದರೆ ಆಗದೇಶದಲ್ಲಿ ತಳ ಊರಿದ್ದ ಬ್ರಿಟಿಷ ಅಧಿಕಾರಿಗಳು ಈ ದತ್ತಕ ಕ್ರಿಯೆಯನ್ನು ಒಪ್ಪಲಿಲ್ಲ. ಕಿತ್ತೂರ ಸಂಸ್ಥಾನವನ್ನು ಸುಲಭವಾಗಿ ಕಬಳಿಸುವುದು ಬ್ರಿಟಿಷ ಅಧಿಕಾರಿಗಳ ಹುನ್ನಾರವಾಗಿತ್ತು. ಆಗ ಥ್ಯಾಕರೆ ಎಂಬ ಅಧಿಕಾರಿ ಬ್ರಿಟಿ‌ಷ್‌ ಕಂಪನಿ ಸರಕಾರದ ಧಾರವಾಡಜಿಲ್ಲಾಧಿಕಾರಿಯಾಗಿದ್ದನು. ಥ್ಯಾಕರೆ ಸೆಪ್ಟೆಂಬರ್೧೩,೧೮೨೪ರಂದು ಕಿತ್ತೂರಿಗೆ ಬಂದು ದತ್ತಕವನ್ನು ಅಮಾನತ್ತು ಮಾಡಿದನು.
ತಾನು ಹೇಳಿದಂತೆ ಕುಣಿಯುತ್ತಿದ್ದ ಮಲ್ಲಪ್ಪ ಶೆಟ್ಟಿ ಮತ್ತು ಹಾವೇರಿ ವೆಂಕಟರಾವ್ ಇವರನ್ನು ಸಂಸ್ಥಾನದ ವ್ಯವಹಾರ ನೋಡಿ ಕೊಳ್ಳಲು ಅಧಿಕಾರಿಗಳನ್ನಾಗಿ ನೇಮಕ ಮಾಡಿದನು. ಇದನ್ನೆಲ್ಲಾ ಕಣ್ಣಾರೆ ಕಂಡು ಚೆನ್ನಮ್ಮ ಕೆರಳಿದ ಸಿಂಹಿಣಿಯಾದಳು. ಅವರ ರಕ್ತ ಕುದಿಯತೊಡಗಿತು. ಯಾವುದೇ ಸಂಧಾನ ನಡೆಯದ ಕಾರಣ ಯುದ್ಧ ಆರಂಭವಾಯಿತು. ಕಿತ್ತೂರ ಯೋಧರ ಗುಂಡಿಗೆ ಥ್ಯಾಕರೆ ಬಲಿಯಾದನು. ಸ್ಟೀವನ್ ಮತ್ತು ಇಲಿಯೆಟ್ ಎಂಬ ಅಧಿಕಾರಿಗಳನ್ನು ಸೆರೆಡಿಯಲಾಯಿತು. ಈ ಎಲ್ಲ ಘಟನೆ ಗಳು ನಡದಿದ್ದು,೧೮೨೪ರ ಅಕ್ಟೋಬರ್೨೧-೨೩ರ ನಡುವೆ. ಬ್ರಿಟಿಷ್ ಸೈನಿಕರು ಓಡಿಹೋಗಿ ಧಾರವಾಡ ಸೇರಿಕೊಂಡರು.
ಕಿತ್ತೂರಿನಲ್ಲಿ ಸಂಭ್ರಮದ ವಿಜಯೋತ್ಸವ ನಡೆಯಿತು. ಆ ಸ್ಮರಣೆಯಲ್ಲಿ ಪ್ರತಿ ವರ್ಷ ಅಕ್ಟೋಬರ್೨೩ರಂದು ಕಿತ್ತೂರ ಉತ್ಸವ ಆಚರಿಸು ವುದನ್ನು ಸರಕಾರ ಜಾರಿಗೆ ತಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಚೆನ್ನಮ್ಮನ ಎಲ್ಲ ಹೋರಾಟಗಳಿಗೆ ರಾಜನಿಷ್ಠ ರಾಗಿದ್ದವರು ಸಂಗೋಳ್ಳಿ ರಾಯಣ್ಣ, ಗುರುಪುತ್ರಪ್ಪ ಮತ್ತು ಹಿಮ್ಮದ್‌ಸಿಂಗ್. ಇವರ ಹೆಸರುಗಳು ಇಂದಿಗೂ ಕಿತ್ತೂರ ಚರಿತ್ರೆಯಲ್ಲಿಅಮರವಾಗಿ ಉಳಿದಿವೆ.
ನಂಬಿಕೆಯ ದ್ರೋಹ :ಕಿತ್ತೂರ ಸಂಸ್ಥಾನದ ದತ್ತಕ ಪ್ರಕರಣಕ್ಕೆ ಯಾವುದೇ ತಕರಾರು ಮಾಡುವುದಿಲ್ಲ ಎಂದು ಹೇಳಿಕೆ ನೀಡಿದಮೇಲೆ ಚೆನ್ನಮ್ಮ ಸೆರೆಯಾಳುಗಳಾಗಿದ್ದ ಬ್ರಿಟಿಷ್ ಅಧಿಕಾರಿಗಳನ್ನು ಬಿಡುಗಡೆ ಮಾಡುತ್ತಾರೆ. ಇವರು ಕಿತ್ತೂರಿನ ಕೆಲವು ದ್ರೋಹಿ ಗಳೊಂದಿಗೆ ಕೂಡಿಕೊಂಡು ಸಂಚು ರೂಪಿಸುತ್ತಾರೆ. ಡಿಸೆಂಬರ್೪ರಂದು ಬ್ರಿಟಿಷ್ ಅಧಿಕಾರಿಗಳು ದೊಡ್ಡ ಸೈನ್ಯದೊಂದಿಗೆ ಕಿತ್ತೂರಿಗೆ ಮುತ್ತಿಗೆ ಹಾಕುತ್ತಾರೆ.
ದ್ರೋಹಿಗಳ ಒಳ ಸಂಚಿನಿಂದಾಗಿ ಕಿತ್ತೂರ ಸಂಸ್ಥಾನ ಸೋಲು ಅನುಭವಿಸುತ್ತದೆ. ಡಿಸೆಂಬರ್೫ರಂದು ಚೆನ್ನಮ್ಮಾ ಹಾಗೂ ಅವರಸಮೀಪದ ಸಂಬಂಽಕರಾದ ವೀರಮ್ಮ ಮತ್ತು ಜಾನಕಿಬಾಯಿ ಬ್ರಿಟಿಷ್ ಸರಕಾರದ ಕೈದಿಗಳಾಗುತ್ತಾರೆ. ಬೈಲಹೊಂಗಲ ಜೈಲಿನಲ್ಲಿ ಇಡಲಾಗುತ್ತದೆ.
ನಾಲ್ಕು ವರ್ಷ ಜೈಲು:ಚೆನ್ನಮ್ಮಾಜಿ ಅವರ ಎದೆಗಾರಿಕೆ, ಧೈರ್ಯ ಮತ್ತು ಹೋರಾಟದ ಮನೋಭಾವ ತುಂಬ ದೊಡ್ಡದ್ದು. ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿಟ್ಟರೂ ಚೆನ್ನಮ್ಮ ಶರಣಾಗುವುದಿಲ್ಲ. ‘ಕಿತ್ತೂರ ನಮ್ಮ ಸಂಸ್ಥಾನ ಭಾರತದ ಪುಣ್ಯಭೂಮಿಯ ಭಾಗ ಇದನ್ನು ನಾವು ಬ್ರಿಟಿಷರಿಗೆ ಬಿಟ್ಟುಕೊಡುವುದಿಲ್ಲ’ ಎಂಬ ನಿರ್ಧಾರ ದಿಂದ ಅವರು ಹಿಂದೆ ಸರಿಯುವುದಿಲ್ಲ. ಶರಣರ ವಚನಗಳನ್ನು ಭಾರತದ ಪುರಾಣ ಪುಣ್ಯ ಕಥೆ ಗಳನ್ನು ತಮ್ಮಷ್ಟಕ್ಕೆ ತಾವೇ ಹೇಳಿಕೊಳ್ಳುತ್ತಾ ಅವರು ಜೈಲು ಶಿಕ್ಷೆಯನ್ನು ತುಂಬ ಧೈರ್ಯದಿಂದ ಅನುಭವಿಸುತ್ತಾರೆ.
ಜೈಲಿನಲ್ಲಿಯೇ೧೮೨೯ಫೆಬ್ರವರಿ೨ರಂದು ಚೆನ್ನಮ್ಮ ನಿಧನ ಹೊಂದುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದ ಈ ದಿವ್ಯ ಚೇತನ ಅಗಲಿದ್ದರಿಂದ ಇಡೀ ಭರತಖಂಡ ಕಣ್ಣೀರು ಸುರಿಸುತ್ತದೆ. ಚೆನ್ನಮ್ಮ ಅವರ ಬಲಗೈ ಬಂಟ ಸಂಗೋಳ್ಳಿ ರಾಯಣ್ಣ ಧೈರ್ಯದಿಂದ ಹೋರಾಟವನ್ನು ಮುಂದುವರಿಸುತ್ತಾನೆ. ದ್ರೋಹಿಗಳ ಕುತಂತ್ರದಿಂದಾಗಿ ಸಂಗಣ್ಣ ಬ್ರಿಟಿಷರ್ ಕೈದಿಯಾಗುತ್ತಾನೆ.೧೮೩೧ಜನೆವರಿ೨೬ರಂದು ಸಂಗೋಳ್ಳಿ ರಾಯಣ್ಣನನ್ನು ನಂದಗಢದಲ್ಲಿ ಗಲ್ಲಿಗೇರಿಸಲಾಯಿತು.
ಸರಕಾರ ಮಾಡಬೇಕಾದ ಕಾರ್ಯ:ಲೋಕಸಭೆಯ ಮುಂದೆ ಚೆನ್ನಮ್ಮಾಜಿ ಪ್ರತಿಮೆ ನಿಲ್ಲಿಸಲಾಗಿದೆ. ಚೆನ್ನಮ್ಮಾ ಹೆಸರಿನಲ್ಲಿ ಬೆಳಗಾವಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಬೆಳಗಾವಿ – ಬೆಂಗಳೂರು ನಡುವೆ ಓಡಾಡುವ ರೈಲಿಗೆ ಕಿತ್ತೂರ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಎಂದು ಹೆಸರಿಡಲಾಗಿದೆ.
ಈ ವೀರ ರಾಣಿಗೆ ಇನ್ನೂ ಹೆಚ್ಚಿನ ಗೌರವ ದೊರೆಯಬೇಕು. ಆ ಕಾಲಘಟ್ಟದ ಇತಿಹಾಸ ಸಂಶೋಧನೆಗೆ ವ್ಯವಸ್ಥೆ ಮಾಡಬೇಕು.ಬೈಲಹೊಂಗಲದಲ್ಲಿ ಚೆನ್ನಮ್ಮಳ ಸಮಾಧಿ ಇದೆ. ಇದು ಅನಾಥ ಸ್ಥಿತಿಯಲ್ಲಿರುವುದು ದುರ್ದೈವದ ಸಂಗತಿ. ಚೆನ್ನಮ್ಮಳ ಭವ್ಯ ವ್ಯಕ್ತಿತ್ವಕ್ಕೆ ಪೂರಕವಾಗುವ ಸಾಂಸ್ಕೃತಿಕ ಭವ್ಯಭವನ ಮತ್ತು ಸಾಂಸ್ಕೃತಿಕ ಅಕಾಡೆಮಿ ಸ್ಥಾಪನೆ ಅವಶ್ಯವಿದೆ. ರಾಣಿ ಚೆನ್ನಮ್ಮ ಹಾಗೂ ಸಂಗೋಳ್ಳಿ ರಾಯಣ್ಣನ ಕುರಿತು ಬಹಳಷ್ಟು ಜಾನಪದ ಹಾಡುಗಳು ರಚನೆಯಾಗಿವೆ. ಇವುಗಳನ್ನೆಲ್ಲ ಸಮಗ್ರವಾಗಿ ಸಂಗ್ರಹಿಸಿ ಪ್ರಕಟಿಸುವ ಕಾರ್ಯ ನಡೆಯಬೇಕು. ಚೆನ್ನಮ್ಮ ರಾಣಿಯ ವೀರ ಹೋರಾಟ ಕಥೆ ದೇಶ ವಿದೇಶಗಳ ಭಾಷೆಗಳಿಗೆಅನುವಾದ ಮಾಡಿ ಪ್ರಕಟಿಸುವ ಕಾರ್ಯ ನಡೆಯಬೇಕು.
ಚೆನ್ನಮ್ಮ ರಾಣಿ ಬದುಕಿದ್ದಾಗ ಚಿತ್ರಿಸಿದ ಒಂದು ನೈಜ ಫೋಟೋ ಈಚೆಗೆ ದೊರೆತಿದೆ. ಇದು ಚೆನ್ನಮ್ಮಳ ಅಧಿಕೃತ ಭಾವಚಿತ್ರ ಎಂದು ತಜ್ಞರು ಒಪ್ಪಿಕೊಂಡಿದ್ದಾರೆ. ಈ ಭಾವಚಿತ್ರದ ಪ್ರತಿಗಳನ್ನು ಪ್ರಕಟಿಸಿ ಎಲ್ಲ ಸರಕಾರಿ ಕಾರ್ಯಾಲಯಗಳಲ್ಲಿ ಕಡ್ಡಾಯ ವಾಗಿ ಹಾಕುವ ವ್ಯವಸ್ಥೆಯನ್ನು ಸರಕಾರ ಮಾಡಬೇಕು.