ಮೈಕೆಲೇಂಜಲೋ ಗೊತ್ತು, ಮಲ್ಲಿತಮ್ಮ ಗೊತ್ತಾ ?
ಶಶಾಂಕಣ
ಶಶಿಧರ ಹಾಲಾಡಿ
ಮೈಕೆಲೇಂಜಲೋ ಜಗತ್ತಿನ ಪ್ರಖ್ಯಾತ ಕಲಾವಿದರಲ್ಲೊಬ್ಬ. ಇಟೆಲಿ ದೇಶದಲ್ಲಿ ಹುಟ್ಟಿದ ಈತನ ಕಾಲ೧೪೭೫ – ೧೫೬೪.ಈತನ ಕೌಶಲದ ಕುರಿತು, ಕಲಾ ಚತುರತೆ ಕುರಿತು ಎರಡು ಮಾತಿಲ್ಲ. ನಮ್ಮ ನಾಡಿನ ಮಕ್ಕಳಿಂದ ಹಿಡಿದು, ಮುದುಕರು ಸಹ ಮೈಕೆಲೇಂಜಲೋ ಪರಿಚಯ ಮಾಡಿಕೊಂಡಿದ್ದಾರೆ.
ಮುಖ್ಯವಾಗಿ ಅಮೃತ ಶಿಲೆಯನ್ನು ಉಪಯೋಗಿಸಿ, ಶಿಲ್ಪ ಕಲಾಕೃತಿಗಳನ್ನು ರಚಿಸುವುದರಲ್ಲಿ ಇತ ನಿಷ್ಣಾತ. ಬೈಬಲ್ ಕಥೆಗಳಲ್ಲಿ ಬರುವ ಡೇವಿಡ್ ಎಂಬ ರಾಜನ,೧೭ಅಡಿ ಎತ್ತರದ ನಗ್ನ ಶೈಲಿಯ ಶಿಲ್ಪವು ಈತನ ಅತಿ ಪ್ರಖ್ಯಾತ ಶಿಲ್ಪ. ಆ ಶಿಲ್ಪದ ಮುಖಭಾವ, ನಿಂತಿರುವ ಭಂಗಿ, ಕೂದಲು, ಹೊಟ್ಟೆ, ಬೆನ್ನು, ಕಾಲು, ಕೈಯಲ್ಲಿ ಮೂಡಿರುವ ರಕ್ತನಾಳಗಳು, ಈ ರೀತಿಯ ನಾನಾ ವಿವರಗಳ ಕುರಿತು ಆಳವಾದ ಅಧ್ಯಯನ ನಡೆದಿದೆ. ಇದರ ಜತೆ, ಕ್ರಿಸ್ತನ ಜೀವನದ ವಿವಿಧ ಘಟ್ಟಗಳನ್ನು ಬಿಂಬಿಸುವ ಹಲವು ಕಲಾಕೃತಿ ಗಳನ್ನು ಈತ ರಚಿಸಿದ್ದಾನೆ.
ವೆಟಿಕನ್‌ನ ಸೈಂಟ್ ಪೀಟರ್ ಬೆಸೆಲಿಕಾ ಚರ್ಚ್‌ನ ಪ್ರಖ್ಯಾತ ಗುಮ್ಮಟವನ್ನು ವಿನ್ಯಾಸ ಮಾಡಿದವನು ಮೈಕೆಲೇಂಜೆಲೋ. ಈತ ರಚಿಸಿದ ಹತ್ತೈವತ್ತು ಶಿಲ್ಪಗಳ ಅಧ್ಯಯನ ನಡೆದಿದೆ. ಹದಿನೈದು ಮತ್ತು ಹದಿನಾರನೆಯ ಶತಮಾನದಲ್ಲಿ ಈತ ಯಾವ ವರ್ಷ ಎಲ್ಲೆಲ್ಲಿ ಇದ್ದ, ಯಾವ ಶಿಲ್ಪವನ್ನು ರಚಿಸಿದ, ವ್ಯಾಟಿಕನ್‌ನಲ್ಲಿ ಏನೇನು ಮಾಡಿದ, ಈತನ ಗುರು ಯಾರು, ಈತನ ಶಿಷ್ಯರು ಯಾರು, ಸಮಕಾಲೀನರು ಯಾರು, ಈತನ ಹೆಂಡತಿಯ ಹೆಸರೇನು ಮೊದಲಾದ ನಾನಾ ರೀತಿಯ ವಿವರಗಳು ದಾಖಲಾಗಿವೆ.
ವಿಶೇಷ ವೆಂದರೆ, ಈತ ಜೀವಿಸಿರುವಾಗಲೇ ಈತನ ಜೀವನ ಚರಿತ್ರೆಯು ರಚನೆಗೊಂಡಿತ್ತು. ಈತ ರಚಿಸಿದ ಅಮೃತಶಿಲೆಯ ಕಲಾ ಕೃತಿಗಳು೫೦ಸೆಂಟಿಮೀಟರ್ ನಿಂದ ಹಿಡಿದು,೧೭ಅಡಿ ಎತ್ತರದ ತನಕವೂ ಇವೆ! ಅಮೃತ ಶಿಲೆಯಲ್ಲಿ ನಾನಾ ಶಿಲ್ಪಗಳನ್ನು ರಚಿಸಿದ ಮೈಕೆಲೇಂಜೆಲೋ, ಬೃಹತ್ ಗಾತ್ರದ ವರ್ಣ ಚಿತ್ರಗಳನ್ನೂ ರಚಿಸಿದ್ದಾನೆ. ಅವುಗಳ ಉದ್ದ, ಅಗಲ, ವರ್ಣ ವಿನ್ಯಾಸ,ವಿಷಯ, ಸಂದೇಶ ಎಲ್ಲವೂ ದಾಖಲಾಗಿದ್ದು, ಅಧ್ಯಯನಕ್ಕೆ ಒಳಪಟ್ಟಿವೆ. ಈತನ ಚಿತ್ರಗಳೆಲ್ಲವೂ ಧಾರ್ಮಿಕ ವಿಚಾರಗಳ ನ್ನೊಳಗೊಂಡಿವೆ.
ಪುನರುತ್ಥಾನ (ರಿನಯಸೆನ್ಸ್) ಕಾಲದ ಮಹಾನ್ ಕಲಾವಿದ ಈತ ಎಂದೂ ಹೇಳುವವರಿದ್ದಾರೆ. ನಮ್ಮ ರಾಜ್ಯದ ಓದುಗರಿಗೆ ಮೈಕೆಲೇಂಜೆಲೋ ಇನ್ನಷ್ಟು ಪ್ರಸಿದ್ಧ! ಏಕೆಂದರೆ, ಕೆ.ವಿ.ಅಯ್ಯರ್ ಅವರು ‘ರೂಪದರ್ಶಿ’ ಕಾದಂಬರಿಯ ಮೂಲಕ ಈ ಹದಿನಾ ರನೆಯ ಶತಮಾನದ ಇಟೆಲಿಯ ಕಲಾವಿದನನ್ನು ಕನ್ನಡನಾಡಿನ ಹಳ್ಳಿ ಹಳ್ಳಿಗಳಿಗೆ ಪರಿಚಯಿಸಿದ್ದಾರೆ. ಕ್ರಿಸ್ತನ ಬಾಲ್ಯದ ಚಿತ್ರ ವೊಂದನ್ನು ರಚಿಸಲು ಮೈಕೆಲೇಂಜಲೋ ಸೂಕ್ತ ರೂಪದರ್ಶಿಯನ್ನು ಹುಡುಕುತ್ತಿರುತ್ತಾನೆ.
ಕೊಳೆಗೇರಿಯಲ್ಲಿ ವಾಸಿಸುವ ಬಾಲಕನನ್ನು ಆಯ್ಕೆ ಮಾಡಿ, ರೂಪದರ್ಶಿಯನ್ನಾಗಿಸಿಕೊಂಡು ರಚಿಸಿದ ಕ್ರಿಸ್ತನ ಕಲಾಕೃತಿಯು ಬಹಳ ಪ್ರಖ್ಯಾತವಾಗುತ್ತದೆ. ಮೂರು ತಿಂಗಳ ಕಾಲ ಮೈಕೆಲೇಂಜಲೋಗೆ ರೂಪದರ್ಶಿದ ಆ ಬಾಲಕ, ಕಲಾಕೃತಿ ಮುಗಿದ ನಂತರ, ಸಾಕಷ್ಟು ಧನಸಹಾಯ ಪಡೆದು, ತನ್ನ ಅಜ್ಜಿಯೊಡನೆ ಪೀಸಾಕ್ಕೆ ವಾಪಸಾಗುತ್ತಾನೆ. ಇದಾಗಿ ಕೆಲವು ದಶಕಗಳ ನಂತರ, ಕ್ರಿಸ್ತನಜೀವನದ ಇನ್ನೊಂದು ಘಟನೆಯನ್ನು ಚಿತ್ರಿಸಲು, ಮೈಕೆಲೇಂಜಲೋಗೆ ಜುದಾಸ ಎಂಬ, ಕ್ರಿಸ್ತನಿಗೆ ಆಮಿಷವೊಡ್ಡುವ ಕೆಟ್ಟ ಪಾತ್ರದ ರೂಪದರ್ಶಿ ಬೇಕಾಗುತ್ತದೆ.
ಆಗಸಿಗುವ ವ್ಯಕ್ತಿಯು ಮೋಸಗಾರ, ಕುಡುಕ, ಲಂಪಟ. ಆತನ ಲಂಪಟತನವನ್ನು ಸಹಿಸಿಕೊಂಡು, ಅವನನ್ನೇ ರೂಪದರ್ಶಿ ಯಾಗಿರಿಸಿಕೊಂಡು, ಕ್ರಿಸ್ತನ ಜೀವನದ ಸನ್ನಿವೇಶವನ್ನು ಚಿತ್ರಿಸುತ್ತಾನೆ. ಕೊನೆಗೆ ಗೊತ್ತಾಗುವುದೆಂದರೆ, ಆ ಕುಡುಕನೇ ಬಾಲ ಕ್ರಿಸ್ತ ನಿಗೆ ರೂಪದರ್ಶಿಯಾಗಿದ್ದ ಬಾಲಕ!
ಆ ಬಡಹುಡುಗನು ರೂಪದರ್ಶಿಯಾದ ಕಾರಣದಿಂದ ಗಳಿಸಿದ ಹಣ, ಸವಲತ್ತುಗಳೇ ಆತನನ್ನು ದಾರಿ ತಪ್ಪಿಸಿರುತ್ತವೆ. ಆ ಬಾಲಕನ ಅಧಃಪತನಕ್ಕೆ ಪರೋಕ್ಷವಾಗಿ, ಮೈಕೆಲೇಂಜಲೋ ಕಾರಣ ಎನಿಸುತ್ತಾನೆ. ಈ ಹೃದಯಸ್ಪರ್ಶಿ ಕಥನ ಹೊಂದಿರುವ‘ರೂಪದರ್ಶಿ’ ಕಾದಂಬರಿಯ ಮೂಲಕ, ಮೈಕೆಲೇಂಜಲೋ ಎಂಬ ಇಟೆಲಿಯ ಮಹಾನ್ ಕಲಾವಿದ ನಮ್ಮ ನಾಡಿನಲ್ಲಿ ಸಾಕಷ್ಟು ಪರಿಚಿತ.
ಈಗ ಒಂದು ತುಸು ವ್ಯಂಗ್ಯದ ಪ್ರಶ್ನೆ ಕೇಳಬೇಕೆನಿಸುತ್ತಿದೆ. ನಮಗೆ ಮೈಕೆಲೇಂಜಲೋ ಗೊತ್ತು. ಆತನ ಜೀವನದ ವಿವರಗಳು, ಕಲಾಕೃತಿಗಳ ವಿವರಗಳು ಗೊತ್ತು. ಆದರೆ ನಮಗೆ, ನಮ್ಮ ರಾಜ್ಯದ ಕಲಾವಿದ ಮಲ್ಲಿತಮ್ಮ ಗೊತ್ತಾ? ದಾಸೋಜ ಗೊತ್ತಾ? ಇವರ ಊರು ಯಾವುದು, ಅವರ ಹೆಂಡತಿಯರ ಹೆಸರೇನು, ಅವರಿಗೆಷ್ಟು ಮಕ್ಕಳು ಎಂದು ಗೊತ್ತಾ? ಅವರು ರಚಿಸಿದ ಎಲ್ಲಾ ಕಲಾಕೃತಿ ಗಳ ಮೇಲುಮೇಲಿನ ವಿವರವಾದರೂ ಗೊತ್ತಾ? ಹೋಗಲಿ, ಹಂಪೆಯ ವಿಶ್ವವಿಖ್ಯಾತ ವಿಠ್ಠಲ ದೇಗುಲ ನಿರ್ಮಿಸಿದ ಎಲ್ಲಾ ಶಿಲ್ಪಿಗಳ ಹೆಸರು ಗೊತ್ತಾ? ನಿಜ, ಈ ರೀತಿಯ ಹೋಲಿಕೆ ನೀಡುತ್ತಾ, ಯುರೋಪಿಯನ್ ಕಲಾವಿದರ ಜೀವನ ವಿವರಗಳನ್ನು ಎದುರಿಗಿಟ್ಟು ಕೊಂಡು, ನಮ್ಮ ಕಲಾವಿದರ ಕುರಿತು ವ್ಯಂಗ್ಯವಾದ ಪ್ರಶ್ನೆ ಕೇಳುವುದು ಸರಿಯಾದ ವಿಧಾನ ಅಲ್ಲವೇ ಅಲ್ಲ.
ಇದೊಂದು ರೀತಿಯಲ್ಲಿ, ಜನಪ್ರಿಯತೆ ಗಳಿಸುವ, ಓದಿದವರ ಮನಸ್ಸನ್ನು ರೋಷಕ್ಕೆ ದೂಡಲು ಪ್ರಯತ್ನಿಸುವ ಪ್ರಶ್ನೆ. ಆದರೆ, ನಮ್ಮನ್ನು ಆವರಿಸಿರುವ ವಿಸ್ಮತಿಯ ಆಳವನ್ನು ಕಂಡಾಗ, ಇಂತಹ ಪ್ರಶ್ನೆಗಳು ಅನಿವಾರ್ಯವಾಗಿ ಮೂಡುತ್ತಿವೆ. ಮಲ್ಲಿತಮ್ಮ, ದಾಸೋಜ ಮೊದಲಾದವರು ಹೊಯ್ಸಳರ ಕಾಲದಲ್ಲಿದ್ದ ಮಹಾನ್ ಶಿಲ್ಪಿಗಳು. ಆದರೆ, ಅದೇಕೋ ಅವರ ಜೀವನದ ಹೆಚ್ಚಿನ ವಿವರಗಳು ನಮ್ಮ ಜನಸಾಮಾನ್ಯರ ಅರಿವಿಗೇ ಬಂದಿಲ್ಲ, ಆ ರೀತಿ ಪರಿಚಯಿಸುವ ಕೆಲಸವನ್ನೂ ನಮ್ಮವರು ಮಾಡಿಲ್ಲ.
ಇಟೆಲಿಯ ಮೈಕೆಲೇಂಜೆಲೋ ಜನಿಸಿದ ಊರು, ಅವರ ತಂದೆ ತಾಯಿಯರ ಕೆಲಸ, ಅವರ ಕಾಲ, ಹೆಂಡತಿ, ಮಕ್ಕಳ ವಿವರ, ಆತ ರಚಿಸಿದ ಎಲ್ಲಾ ಕಲಾಕೃತಿಗಳ ಕೂಲಂಕುಶ ವಿವರ ನಮಗೆ ದೊರೆಯುತ್ತದೆ. ಇಟೆಲಿಯ ಇನ್ನೋರ್ವ ಮಹಾನ್ ಕಲಾವಿದ ಲಿಯೋನಾರ್ಡೊ ಡ ವಿನ್ಸಿ(೧೪೫೨-೧೫೧೯)ಯ ಜೀವನದ ವಿವರ, ಆತ ರಚಿಸಿದ ಮೊನಾಲಿಸಾ, ಲಾಸ್ಟ್ ಸಪ್ಪರ್ ಮೊದಲಾದ ಕಲಾಕೃತಿಗಳ ವಿವರ ನಮಗೆ ಗೊತ್ತು. ಆ ಕಲಾವಿದರು ಮತ್ತು ಅವರಂತಹ ಹಲವು ಪ್ರಮುಖ ಯುರೋಪಿಯನ್ ವ್ಯಕ್ತಿಗಳು ನಮ್ಮಮಕ್ಕಳ ಪಠ್ಯ ಪುಸ್ತಕಗಳಲ್ಲಿ ಆಗಾಗ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಹಣಿಕಿ ಹಾಕುತ್ತಿರುತ್ತಾರೆ.
ಇಟೆಲಿಯ ಆ ಮಹಾನ್ ಕಲಾವಿದರ ಜೀವನದ ವಿವರಗಳನ್ನು, ಕಲಾಕೃತಿಯ ವಿವರಗಳನ್ನು ನಮ್ಮ ಮಕ್ಕಳು ಬಾಯಿಪಾಠ ಮಾಡಿ, ಉರು ಹೊಡೆಯುತ್ತಾರೆ. ಆದರೆ ಅದೇ ನಮ್ಮ ಮಕ್ಕಳಿಗೆ ಮಲ್ಲಿತಮ್ಮ, ದಾಸೋಜ ಮೊದಲಾದ ಕಲಾವಿದರ ಹೆಸರೇ ಗೊತ್ತಿಲ್ಲ. ಇನ್ನು ಅವರ ಕಲಾಕೃತಿಗಳ ವಿವರ ಕೇಳುವುದೇ ಬೇಡ. ದೂರದ ಸೈಂಟ್ ಪೀಟರ್ ಬೆಸಿಲಿಕಾದ ಗುಮ್ಮಟ ನಿರ್ಮಿಸಿದವರವಿವರ ಗೊತ್ತು, ಆದರೆ ಹಂಪೆಯ ಸಂಗೀತ ಕಂಬಗಳನ್ನು ನಿರ್ಮಿಸಿದ ಕಲಾವಿದ ಹೆಸರು ಗೊತ್ತಿಲ್ಲ! ನಮ್ಮ ಪಠ್ಯಗಳುಯುರೋಪಿನ ಕಲಾವಿದರ ಪರಿಚಯ ಮಾಡಿಕೊಡುತ್ತವೆ, ಆದರೆ ಅದ್ಭುತ ಏಕಶಿಲಾ ವಾಸ್ತು ಎನಿಸಿದ ಎಲ್ಲೋರಾದ ಕೈಲಾಸ ನಾಥ ದೇಗುಲದ ಅಥವಾ ಹಂಪೆಯ ಕಲ್ಲಿನ ರಥದ ಪೂರ್ಣಸ್ವರೂಪದ ಪರಿಚಯ ಮಾಡಿಕೊಡುವುದಿಲ್ಲ. ಇದು ಈ ಕಾಲದ ಒಂದು ಸಾಂಸ್ಕೃತಿಕ ವಿಸ್ಮೃತಿ ಅಲ್ಲವೆ!
ಹಾಗೆಂದು, ಅಂತಹ ವಿವರಗಳು ಸ್ವಲ್ಪವೂ ಲಭ್ಯವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. “ನಮ್ಮ ದೇಶದಲ್ಲಿದ್ದ ಹಿಂದಿನವರು ತಮ್ಮ ಸಾಧನೆಯ ವಿವರಗಳನ್ನು ಬರೆದಿಟ್ಟಿಲ್ಲ,  ಆದ್ದರಿಂದ ಹೆಚ್ಚಿನ ವಿವರಗಳು ಲಭ್ಯವಿಲ್ಲ” ಎಂದು ಬಿಡುಬೀಸಾದ ಒಂದು ಹೇಳಿಕೆಯ ತೆರೆಯನ್ನೆಳೆದು, ನಮ್ಮ ದೇಶದ ಐತಿಹಾಸಿಕ, ಸಾಂಸ್ಕೃತಿಕ ಸಾಧನೆಗಳ ವಿವರಗಳನ್ನು ಮುಚ್ಚಿಡುವ ಪರಂಪರೆಯೇ ಇದೆ. ಉದಾ ಹರಣೆಗೆ, ಹೊಯ್ಸಳ ವಾಸ್ತುರಚನೆಗಳನ್ನು ನಿರ್ಮಿಸಿದ ಶಿಲ್ಪಿಗಳ ವಿಚಾರವನ್ನೇ ತೆಗೆದುಕೊಂಡರೆ, ಅವು ಅಲ್ಲಲ್ಲಿ ಚದುರಿ ಹೋಗಿವೆ ಮತ್ತು ಅಂತಹ ಅಪರೂಪದ ವಿವರಗಳನ್ನು ಒಟ್ಟಿಗೆ ಕ್ರೋಢೀಕರಿಸಿ, ಅಧ್ಯಯನ ನಡೆಸಿ, ಆ ವಿವರಗಳನ್ನು ಜನ ಸಾಮಾನ್ಯರಿಗೆ ಪರಿಚಯಿಸುವ ಕೆಲಸ ಮಾಡಿಕೊಡಲಾಗಿಲ್ಲ, ಅಷ್ಟೆ.
ಮುಖ್ಯವಾಗಿ, ಅಂತಹ ವಾಸ್ತು ಕಲಾವಿದರ ಸಾಧನೆಯ ಕುರಿತು ತಿಳಿಸುವ ಪಠ್ಯಗಳನ್ನು ನಮ್ಮ ಪಠ್ಯಗಳಲ್ಲಿ ಸೇರಿಸಬೇಕಿತ್ತು. ದೂರದ ಇಟೆಲಿಯ ಕಲಾಕೃತಿಗಳ ಅಂಕಿಅಂಶಗಳನ್ನು ಉರು ಹೊಡೆಯುವ ನಮ್ಮ ಮಕ್ಕಳು, ಅದರ ಜತೆಯಲ್ಲೇ ಮಲ್ಲಿತಮ್ಮ, ದಾಸೋಜ ಮೊದಲಾದ ಮಹಾನ್ ಶಿಲ್ಪಿಗಳ ವಿವರಗಳನ್ನು ಬಾಯಿಪಾಠ ಮಾಡಬೇಕಿತ್ತು. ಆದರೆ, ಅದೇಕೋ, ಸ್ವತಂತ್ರ ಭಾರತದಮೊದಮೊದಲ ರೂವಾರಿಗಳು ಇಂತಹ ಕೆಲಸವನ್ನು ಮಾಡುವಲ್ಲಿ ಹಿಂದುಳಿದರು ಎಂದೇ ಹೇಳಬೇಕು.
ಹೊಯ್ಸಳ ಶಿಲ್ಪಿ ಮಲ್ಲಿತಮ್ಮನ ಕೆಲವು ವಿವರಗಳನ್ನು ನೋಡೋಣ. ಬೇಲೂರಿನ ಚನ್ನಕೇಶವ ದೇವಾಲಯ ನಿರ್ಮಾಣ ಕಾಲ ದಲ್ಲಿ (೧೧೧೭) ಶಿಲ್ಪಿ ಮಲ್ಲಿತಮ್ಮ ಸಾಕಷ್ಟು ಖ್ಯಾತನಾಗಿದ್ದ. ಆತ ನಿರ್ಮಿಸಿದ ನಲವತ್ತಕ್ಕೂ ಹೆಚ್ಚು ಶಿಲ್ಪ ಕಲಾಕೃತಿಗಳು ಆತನ ಅಂದಿನ ಖ್ಯಾತಿಯನ್ನು ಸಾರುತ್ತವೆ. ಇವನ ಜತೆ, ಬೇಲೂರಿನ ದೇಗುಲದಲ್ಲಿ ಚವಣ ಎಂಬಾದ ಐದು ಮದನಿಕೆ ಶಿಲ್ಪ ಗಳನ್ನು ಮತ್ತು ದಾಸೋಜ ಎಂಬ ಶಿಲ್ಪಿ ನಾಲ್ಕು ಮದನಿಕೆ ಶಿಲ್ಪಗಳನ್ನು ಕೆತ್ತಿದ್ದರು. ಕಲ್ಲಿನಿಂದ ನಿಮಾಣಗೊಂಡ ಅತಿ ಸುಂದರ ಮದನಿಕೆ ವಿಗ್ರಹಗಳು ವಿಶ್ವವಿಖ್ಯಾತ. ಅಂತಹ ಅದೆಷ್ಟೋ ಶಿಲ್ಪಗಳನ್ನು ಯುರೋಪಿಯನರು ಅಧಿಕೃತ ಮತ್ತು ಅನಧಿಕೃತ ಮಾರ್ಗಗಳ ಮೂಲಕ ಯುರೋಪ್ ಮತ್ತು ಅಮೆರಿಕೆಗೆ ಸಾಗಿಸಿದ್ದಾರೆ.
ಆದರೆ, ಆ ಶಿಲ್ಪಿಗಳ ವಿಸ್ತತ ವಿವರ ಲಭ್ಯವಿಲ್ಲ! ಬೇಲೂರು ದೇಗುಲ ನಿರ್ಮಾಣ ಕಾಲದಲ್ಲಿ ಖ್ಯಾತನಾಗಿದ್ದ ದಾಸೋಜ ಎಂಬ ಶಿಲ್ಪಿಯ ಕಥೆ ಸಾಕಷ್ಟು ಕುತೂಹಲಕಾರಿ. ಬೇಲೂರಿನ ಚನ್ನಕೇಶವ ದೇಗುಲದ ನಿರ್ಮಾಣಕ್ಕೆ ಧನಸಹಾಯ ಮಾಡಿದ ರಾಜ ವಿಷ್ಣುವರ್ಧನನ ಹೆಂಡತಿ ಶಾಂತಲೆಯು, ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆಯವಳು. ಬಳ್ಳಿಗಾವೆಯು ಅಂದಿನ ಶಿಲ್ಪಕಲಾ ರಾಜ ಧಾನಿ. ಇಂದಿಗೂ ಅಲ್ಲಿ ಹಲವು ಶಿಲಾ ದೇಗುಲಗಳಿವೆ. ಆ ಊರಿನಲ್ಲಿ ಶಿಲ್ಪಿಯಾಗಿದ್ದ ದಾಸೋಜ ನನ್ನು, ಶಾಂತಲಾ ರಾಣಿಯು ಬೇಲೂರಿಗೆ ಕರೆದುಕೊಂಡು ಬಂದು, ಅಲ್ಲಿನ ಮೋಹಿನಿ ಶಿಲ್ಪವನ್ನು ರಚಿಸುವಂತೆ ಪ್ರೋತ್ಸಾಹಿಸುತ್ತಾಳೆ.
ದಾಸೋಜನ ವಿಶೇಷತೆ ಎಂದರೆ, ಆತ ಚಾಲುಕ್ಯ ಶೈಲಿಯಲ್ಲೂ ಪರಿಣಿತ. ಬೇಲೂರಿನಲ್ಲಿ ಹೊಯ್ಸಳ ಶೈಲಿಯಲ್ಲೂ ಕೆಲಸ ಮಾಡಿದ ಕಲಾವಿದನಾಗಿ ರೂಪುಗೊಳ್ಳುತ್ತಾನೆ. ಬೇಲೂರಿನಲ್ಲಿರುವ ಬೇಟೆಗಾತಿಯ ಸುಂದರ ಶಿಲ್ಪವನ್ನು ರಚಿಸಿದಾತ ದಾಸೋಜ. ಇದೊಂದೇ ಕಲಾಕೃತಿಯು ಈತಹ ಹೆಸರನ್ನು ವಿಶ್ವವಿಖ್ಯಾತಗೊಳಿಸಲು ಸಾಕು. ಚನ್ನಕೇಶವ ದೇಗುಲ ನಿರ್ಮಿಸಿದ ಮಲ್ಲಿತಮ್ಮನು, ತರಿಕೆರೆ ಸನಿಹದ ಅಮೃತಾಪುರ ದೇಗುಲದ ನಿರ್ಮಾಣದಲ್ಲೂ ಭಾಗವಹಿಸಿದ್ದ.
ಒಟ್ಟು ಏಳು ಶಿಲಾ ದೇಗುಲಗಳ ನಿರ್ಮಾಣದಲ್ಲಿ ಈತನ ಕೊಡುಗೆ ಇದೆ. ಇಂತಹ ವಿವರಗಳನ್ನು ನಮ್ಮ ಮಕ್ಕಳಿಗೆ ತಿಳಿಹೇಳುವ ಅವಶ್ಯಕತೆ ಇದೆ. ಇನ್ನೊಂದು ಚೋದ್ಯದ ವಿಷಯವೆಂದರೆ, ಹೊಯ್ಸಳ ದೇಗುಲಗಳನ್ನು ನಿರ್ಮಿಸಿದ ಜಕಣಾಚಾರಿಯು ಓರ್ವಕಾಲ್ಪನಿಕ ವ್ಯಕ್ತಿ ಎಂದು ಯುರೋಪಿಯನ್ ಇತಿಹಾಸ ತಜ್ಞರು ಹೇಳಿದ್ದರು. ಅದೇ ಈಗ ಬಹುಮಟ್ಟಿಗೆ ಸ್ವೀಕೃತ ಎನಿಸಿದೆ.
ಕೈದಾಳದಲ್ಲಿ ಜಕಣಾಚಾರಿ ನಿರ್ಮಿಸಿದ ದೇಗುಲವಿದ್ದರೂ, ಅದೇಕೋ ಆತನ ಹೆಸರು ಲಿಖಿತ ರೂಪದಲ್ಲಿ ಎಲ್ಲೂ ಸಿಗಲಿಲ್ಲವಾದ್ದ ರಿಂದ, ಜಕಣಾಚಾರಿಯ ಅಸ್ತಿತ್ವವನ್ನು ಒಪ್ಪಿಕೊಳ್ಳಲು ಇಂದಿನ ಇತಿಹಾಸ ಅಧ್ಯಯನ ಪದ್ದತಿ ಹಿಂದೇಟು ಹಾಕುತ್ತಿದೆ. ದಕ್ಷಿಣದ ಆಚಾರಿಯೇ ಜಕಣಾಚಾರಿ ಆಯಿತು ಎನ್ನಲಾಗಿದ್ದು, ಈ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯ.
ಹೊಯ್ಸಳ ಶಿಲ್ಪ ಮತ್ತು ವಾಸ್ತುಶೈಲಿಯು ಹನ್ನೆರಡನೆಯ ಶತಮಾನದ್ದು, ಅಷ್ಟು ಪುರಾತನ ಕಾಲದ ಹೆಚ್ಚಿನ ವಿವರ ಲಭ್ಯವಿಲ್ಲ ಎಂಬ ವಿಚಾರವನ್ನು ಹೇಳಬಹುದು. ಆದರೆ, ಹದಿನಾರನೆಯ ಶತಮಾನದ ಹಂಪೆಯ ವಾಸ್ತು ವಿಚಾರಕ್ಕೆ ಬಂದಾಗಲೂ ಇದೇ ಸ್ಥಿತಿ. ಹಂಪೆಯ ಕಲಾವಿದರ ವಿವರಗಳು ನಮ್ಮ ಪಠ್ಯಪುಸ್ತಕಗಳಲ್ಲಿ ಇಲ್ಲದೇ ಇರುವುದರಿಂದ, ಜನಸಾಮಾನ್ಯರಿಗೆ ಅವರ ಪರಿಚಯವಿಲ್ಲ.
ಹಂಪೆಯಲ್ಲೂ ಹಲವು ವರ್ಣ ಚಿತ್ರಗಳಿದ್ದವು, ಕೆಲವು ಇನ್ನೂ ಇವೆ. ಅದನ್ನು ರಚಿಸಿದ ಕಲಾವಿದರ ಹೆಸರೇನು? ಹಂಪೆಯಅದ್ಭುತ ಎನಿಸಿರುವ ಕಲ್ಲಿನ ರಥ ಅಥವಾ ಸಪ್ತ ಸ್ವರ ಹೊರಡಿಸುವ ಅದ್ಭುತ ಎನಿಸಿರುವ ಶಿಲಾ ಸ್ತಂಭಗಳಿರುವ ವಿಜಯ ವಿಠ್ಠಲ ದೇಗುಲ ನಿರ್ಮಿಸಿದ ಶಿಲ್ಪಿಯಾರು? ನಮ್ಮ ಮಕ್ಕಳಿಗೂ ಗೊತ್ತಿಲ್ಲ, ಹಿರಿಯರಿಗೂ ಗೊತ್ತಿಲ್ಲ. ಆ ವಿವರಗಳು ಶಾಸನಗಳ ಮೂಲೆ ಯಲ್ಲಿ ದಾಖಲಾಗಿರ ಬಹುದು, ಆದರೆ ಜನಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡಬೇಡವೆ? ಹಂಪೆಯ ಪ್ರಖ್ಯಾತ ರಾಜ ಕೃಷ್ಣದೇವ ರಾಯ ಆಳಿದ ಕಾಲದಲ್ಲಿ (೧೫೦೯-೧೫೨೯) ಹಂಪೆಯು ರೋಮ್ ನಗರಕ್ಕಿಂತ ವಿಸ್ತಾರವಾಗಿತ್ತು ಎಂದು ಬರಹದಲ್ಲಿ ದಾಖಲಾಗಿದೆ. ಆ ಸಮಯದಲ್ಲಿ ಇಟೆಲಿಯಲ್ಲಿದ್ದ ಮೈಕೆಲೇಂಜಲೋ (೧೪೭೫-೧೫೬೪) ಮತ್ತು ಲಿಯೋನಾ ರ್ಡೊಡ ವಿಂಚಿ (೧೪೫೨-೧೫೧೯) ಮೊದಲಾದ ಕಲಾವಿದರ ಜೀವನ, ಸಾಧನೆಗಳು ವಿವರವಾಗಿ ದಾಖಲಾಗಿ,  ಎಲ್ಲೆಡೆ ಲಭ್ಯ ವಾಗಿವೆ. ಆದರೆ, ಅದೇ ಕಾಲದ ಹಂಪೆಯ ಕಲಾವಿದರ, ಶಿಲ್ಪಿಗಳ ವಿವರಗಳು ನಮಗೆ ಪರಿಚಿತವಿಲ್ಲ!
ಹಂಪೆಯ ಉಚ್ಛ್ರಾಯ ಕಾಲದಲ್ಲಿ, ದೂರದ ಇಟೆಲಿಯಲ್ಲಿ ರಚನೆಗೊಂಡ ಕಲಾಕೃತಿಗಳು ಇಂದಿಗೂ ಬಹುಪಾಲು ಸುರಕ್ಷಿತ ವಾಗಿವೆ, ಆದರೆ ಹಂಪೆಯನ್ನು “ಹಾಳು ಹಂಪೆ” ಎಂದು ನಾವೇ ಪ್ರಚುರಪಡಿಸಿ, ಅಲ್ಲಿನ ಕಲಾಕೃತಿಗಳನ್ನು ಪಳೆಯುಳಿಕೆ ಯನ್ನಾಗಿಸಿದ್ದೇವೆ!
ನಮ್ಮ ದೇಶದಲ್ಲಿ ಪ್ರಚಲಿದಲ್ಲಿರುವ ಪಠ್ಯಪುಸ್ತಕ ರಚನೆಯಲ್ಲಿ ಪಾಲಿಸಲಾಗುತ್ತಿರುವ ಕೆಲವು ಸೂಕ್ಷ್ಮ ವಿಚಾರಗಳಿವೆ. ಬ್ರಿಟಿಷರು ಮಾಡಿಟ್ಟು ಹೋದ ಪಠ್ಯಕ್ರಮವನ್ನು ಸ್ಥೂಲವಾಗಿ ಇಂದಿಗೂ ಪಾಲಿಸುವುದು ಒಂದೆಡೆಯಾದರೆ, ನಮ್ಮ ದೇಶದ ವಾಸ್ತುರಚನೆಗಳ ವಿಚಾರದಲ್ಲಿ, ಅವು ದೇವಾಲಯಕ್ಕೆ ಸಂಬಂಧಿಸಿದ್ದಾರೆ, ಅಲ್ಲಿನ ವಾಸ್ತುವೈಭವ, ವಿಸ್ಮಯಗಳನ್ನು ಮರೆಮಾಚುವ ಪದ್ಧತಿ ಇನ್ನೊಂದೆಡೆ. ದೇಶಕ್ಕೆ ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳ ನಂತರವೂ ಇದು ಮುಂದುವರಿದಿರುವುದು ಒಂದು ಮೌಢ್ಯ ಅಥವಾ ವಸಾಹತು ಆಡಳಿತ ತಂದಿಟ್ಟ ವಿಸ್ಮತಿ ಎಂದೇ ಹೇಳಬೇಕು.
ಗಮನಿಸಿ – ಇಟೆಲಿಯ ಮೈಕೆಲೇಂಜೆಲೋ ರಚಿಸಿದ ಬಹುಪಾಲು ಕೃತಿಗಳು ಕ್ರಿಸ್ತ ಮತ್ತು ಬೈಬಲ್‌ಗೆ ಸಂಬಂಧಿಸಿದ ಧಾರ್ಮಿಕ ವಿಚಾರಗಳನ್ನು ಆಧರಿಸಿವೆ. ವ್ಯಾಟಿಕನ್‌ನ ಚರ್ಚ್‌ನ ಗುಮ್ಮಟವನ್ನು ಆತ ವಿನ್ಯಾಸಗೊಳಿಸಿದ ಎಂದು ಹೆಮ್ಮೆಯಿಂದ ಹೇಳಲಾ ಗುತ್ತಿದೆ. ಆದರೆ ಅದೇ ಕಾಲಘಟ್ಟದ ಹಂಪೆಯ ವಾಸ್ತುಶೈಲಿಯನ್ನು ಬಿಂಬಿಸುವಾಗ, ಧಾರ್ಮಿಕ ವಾಸ್ತು ಎಂದು ಒತ್ತಿ ಹೇಳುವಪರಿಪಾಠವಿದೆ. ಮೈಕೆಲೇಂಜೆಲೋ ರಚಿಸಿದ್ದೂ ಧಾರ್ಮಿಕ ರಚನೆಗಳನ್ನು, ಬೇಲೂರಿನಲ್ಲಿ ಶಿಲ್ಪಿ ಮಲ್ಲಿತಮ್ಮ ರಚಿಸಿದ್ದೂಧಾರ್ಮಿಕ ಸಂಬಂಧಿ ರಚನೆಗಳನ್ನು.
ಆದರೆ, ನಮ್ಮ ಮಕ್ಕಳಿಗೆ ಮತ್ತು ಜನಸಾಮಾನ್ಯರಿಗೆ ಮೈಕೆಲೇಂಜೆಲೋ ಗೊತ್ತು, ಮಲ್ಲಿತಮ್ಮನ ವಿವರವಾದ ಪರಿಚಯವಿಲ್ಲ! ಇದೊಂದು ವಿಸ್ಮಯ ಎನಿಸುವುದಿಲ್ಲವೆ! ಈ ವಿಸ್ಮಯವನ್ನು ಸಾಂಸ್ಕೃತಿಕ ವಿಸ್ಮೃತಿ ಎಂದೂ ಕರೆಯಬಹುದು.