ಅವ್ಯವಸ್ಥೆಗೆ ಮತ್ತೊಂದು ಹೆಸರೇ ರಾಜ್ಯದ ಕಾರಾಗೃಹಗಳು
ಅಭಿಮತ
ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ
ಸಮಾಜದಲ್ಲಿ ದಿನಕಳೆದಂತೆ ಅಪರಾಧ ಪ್ರಕರಣಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಈ ಹಿಂದೆ ತೊಂಬತ್ತರ ದಶಕದಲ್ಲಿ ನಡೆಯುತ್ತಿದ್ದ ಪಾತಕ ಚಟುವಟಿಕೆಗಳು ಮತ್ತು ಈಗಿನ ಗ್ಯಾಂಗ್ ವಾರ್, ರೌಡಿಸಂ ಚಟುವಟಿಕೆಗಳಿಗೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು. ಈ ಹಿಂದೆ ಒಂದಷ್ಟು ದಕ್ಷ ಪೊಲೀಸ್ ಅಧಿಕಾರಿಗಳ ಕರ್ತವ್ಯದಿಂದ ಇಲಾಖೆಯ ಮೇಲೆ ಅಪರಾಧಿಗಳಿಗೆ ಭಯ ವಿದ್ದಿತೇ ಹೊರತು ಆ ಕಾಲದಲ್ಲಿ ಪಾತಕ, ರೌಡಿಸಂ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಕಾನೂನು, ಸೆಕ್ಷನ್‌ಗಳು ಅಷ್ಟಾಗಿ ಬಿಗಿಯಾಗಿರದ ಕಾಲಘಟ್ಟವದು.
ಭೂಗತ ಜಗತ್ತಿನ ಆಟಾಟೋಪ ಎಲ್ಲೆ ಮೀರಿದಾಗ ಇಲಾಖೆಯು ಅಪರಾಧ ಪ್ರಕರಣಗಳನ್ನು ತಹಬದಿಗೆ ತರುವ ನಿಟ್ಟಿನಲ್ಲಿ,ಪಾತಕಿಗಳಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ಎನ್‌ಕೌಂಟರ್, ರೌಡಿಶೀಟರ್, ಗೂಂಡಾ ಕಾಯ್ದೆ, ಗಡಿಪಾರು ಮುಂತಾದ ಕಾನೂನು ಗಳನ್ನು ಜಾರಿಗೆ ತಂದಾಗ ಪಾತಕ ಲೋಕ ತಕ್ಕಮಟ್ಟಿಗೆ ತಣ್ಣಗಾಯಿತು.
ಮತ್ತೆ ಪಾತಕಿಗಳಿಗೆ ರಾಜಕೀಯ ಬಲ, ಕೃಪಾಕಟಾಕ್ಷ ದೊರೆತಾಗ ಪೊಲೀಸ್ ಇಲಾಖೆಯ ಕೈ ಕಟ್ಟಿ ಹಾಕುವಂತೆಯೂ ಒಂದೊಂದು ಬಾರಿ ಮಾಡಿಬಿಡುತ್ತದೆ. ಇಂದು ಒಬ್ಬ ರೌಡಿ ಶೀಟರ್ ಅಥವಾ ಪಾತಕಿಯ ಹಿಂದೆ ಪ್ರಭಾವಿ ರಾಜಕಾರಣಿ ಅಥವಾ ಉದ್ಯಮಿಗಳ ಕರಿನೆರಳು ಇರುವುದು ಕೂಡ ಅಷ್ಟೇ ಸತ್ಯ. ಈ ನೆರಳಿನ ಹಿಂದೆ ಇತ್ತಂಡಗಳಿಗೂ ಲಾಭದ ಲೆಕ್ಕಾಚಾರವಿದೆ. ಪ್ರಸ್ತುತ ಅಪರಾಧ, ಕೊಲೆ, ಸುಲಿಗೆಗಳು ನಡೆದು ಪೊಲೀಸರು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನ ಅಥವಾ ಕಸ್ಟಡಿಗೆ ಒಪ್ಪಿಸಿದ ಬಳಿಕ ಕಾರಾಗೃಹಗಳ ಕಂಬಿಯ ನಡುವೆ ಬಂಧಿಯಾಗಿಸುತ್ತಾರೆ.
ಕಾರಾಗೃಹದೊಳಗಿನ ಬದುಕೆಂದರೆ ಅದು ಕತ್ತಲು. ಇಲ್ಲಿನ ಕಷ್ಟದ ಬದುಕಿನಿಂದ ಮತ್ತು ಏಕಾಂಗಿಯಾಗಿ ಖೈದಿಗಳ ಮನ ಪರಿ ವರ್ತನೆಯಾಗಿ ಮುಂದಿನ ದಿನಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಸನ್ನಡತೆಯಿಂದ ಬಾಳಬೇಕೆಂಬ ದೃಷ್ಟಿಯಲ್ಲಿ ಬಂಧಿಖಾನೆಗೆ ಹಲವಾರು ನೀತಿ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆದರೆ ಇದು ಬೆಂಗಳೂರು ಪರಪ್ಪನ ಅಗ್ರಹಾರ, ಬೆಳ ಗಾವಿ ಹಿಂಡಲಗಾ, ಮೈಸೂರು, ಮಂಗಳೂರು, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಹಲವಾರು ಕಾರಾಗೃಹಗಳಲ್ಲಿ ಪಾಲನೆ ಯಾಗುತ್ತಿದೆಯೇ ಅಂದರೆ ಅದು ಕನಸಿನ ಮಾತು.
ಪ್ರತಿ ಬಾರಿಯೂ ಬಂಧಿಖಾನೆ ಇಲಾಖೆಯ ಉನ್ನತ ಅಧಿಕಾರಿಗಳು ಕಾರಾಗೃಹಗಳಿಗೆ ದಾಳಿ ನಡೆಸಿದಾಗಲೂ ರಾಶಿ, ರಾಶಿ ಮೊಬೈಲ್, ಗಾಂಜಾ, ಮದ್ಯದ ಬಾಟಲ್ ಸೇರಿದಂತೆ ನಿಷೇಧಿತ ಹತ್ತಾರು ವಸ್ತುಗಳು ಪತ್ತೆಯಾಗುತ್ತಲೇ ಇದೆ. ಮಾರಕಾಸ್ತ್ರಗಳ ಸರಬರಾಜು ಮುಂತಾದ ಕಾರಣಗಳಿಂದ ಎದುರಾಳಿಯನ್ನು ಜೈಲಿನಲ್ಲೇ ಸಂಚು ರೂಪಿಸಿ ಹತ್ಯೆಗೈದ ಹತ್ತಾರು ಘಟನೆಗಳು ನಡೆದು ಹೋಗಿವೆ. ಜೈಲಿನಿಂದಲೇ ಕೂತು ಉದ್ಯಮಿಗಳಿಗೆ ಹಫ್ತಾಕ್ಕಾಗಿ ಬೇಡಿಕೆಯಿಡುವ ಘಟನೆಗಳಿವೆ. ಇದಕ್ಕೆ ಜೈಲರ್‌ಗಳ ಸಾಥ್ ಕೂಡ ಬಹು ಜೋರಾಗಿಯೇ ಇದೆ.
ಸಾಮಾನ್ಯ ಖೈದಿಯೊಬ್ಬನ ಬಡ ಕುಟುಂಬ ಸಂದರ್ಶಿಸಲು ಅಥವಾ ಅನ್ನ, ನೀರು, ತಿಂಡಿ ನೀಡಲು ಜೈಲಿಗೆ ಭೇಟಿ ನೀಡಬೇಕಾದರೆ ಸಾವಿರಗಟ್ಟಲೆ ರುಪಾಯಿ ನೀಡಿ ಜೈಲರ್‌ಗಳ ಕೈ ಬಿಸಿ ಮಾಡಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಭೂಗತ ಜಗತ್ತಿನ ಸಹಚರರಿಗೆ, ಮೂರು ನಾಲ್ಕು ಬಾರಿ ಎಂಟ್ರಿ ಹೊಡೆದ ಅಪರಾಧಿಗಳಿಗೆ ರಾಜಮರ್ಯಾದೆಯೂ ಇಲ್ಲಿ ಎಗ್ಗಿಲ್ಲದೆ ದೊರಕುತ್ತಿದೆ. ಸ್ವೇಚ್ಛಾಚಾರ ತಾಂಡವವಾಡುವುದಕ್ಕೆ ತಮಿಳುನಾಡಿನ ಶಶಿಕಲಾ, ಛಾಪ ಕಾಗದ ಹಗರಣ ರೂವಾರಿ ಕರೀಂ ಲಾಲ ತೆಲಗಿಗೆ ಐಷಾರಾಮಿ ವ್ಯವಸ್ಥೆಗಳು ನಿದರ್ಶನವಾಗಿರುವುದರ ಜತೆಗೆ ಜೈಲಿನಲ್ಲಿ ಬಿಂದಾಸ್ ಮೋಜು ಮಸ್ತಿ ಪಾರ್ಟಿಗಳೂ ನಡೆಯುತ್ತವೆ. ಕಳೆದೊಂದು ದಶಕಗಳಿಂದೀಚೆಗೆ ಕಾರಾಗೃಹಗಳಲ್ಲಿ ಮತೀಯ ಸಂಬಂಧಿತ ಘರ್ಷಣೆಗಳು ನಡೆದು ಹತ್ಯೆಗಳು ನಡೆದಿರುವುದರಿಂದಮತೀಯವಾಗಿ ಗುಂಪುಗಳನ್ನು ಬೇರ್ಪಡಿಸಿ ಬೇರೆ ಬೇರೆ ಸೆಲ್‌ಗಳಿಗೆ ವರ್ಗಾಯಿಸಲಾಗಿದೆ.
ಇದಕ್ಕೆ ಮಂಗಳೂರು, ಮೈಸೂರು, ಉಡುಪಿ ಹಿರಿಯಡ್ಕ, ಶಿವಮೊಗ್ಗ ಕಾರಾಗೃಹಗಳೇ ಸಾಕ್ಷಿ. ಇನ್ನು ಕೆಟ್ಟು ಹೋದ ಸಿಸಿ  ಕ್ಯಾಮೆರಾ, ಮೆಟಲ್ ಡಿಟೆಕ್ಟರ್‌ನ ಕೊರತೆಗಳು ಕೂಡ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿದೆ. ಅಪರಾಧಿಗಳು ಮೊಬೈಲ್,ವಾಟ್ಸಾಪ್, ಫೇಸ್ ಬುಕ್ ಮೂಲಕ ಹೊರಜಗತ್ತಿನ ಅಪರಾಧಿಗಳನ್ನು ಯೋಜಿಸುತ್ತಾರೆನ್ನುವುದಾದರೆ ಕಾರಾಗೃಹಗಳನ್ನು ಸ್ಥಾಪನೆ ಮಾಡಿರುವ ಮೂಲ ಉದ್ದೇಶಗಳು ವಿಫಲವಾದಂತೆಯೇ ಸರಿ.