ಭಾರತೀಯ ಕಾನೂನುಗಳು ನಮ್ಮ ಸಂಸ್ಖೃತಿಯನ್ನಾಧರಿಸಿ ರಚಿತವಾಗಬೇಕು !
ಅಭಿಮತ
ಡಾ.ಜಗದೀಶ ಮಾನೆ
ಯುವ ‘ಚಿಂತನಕೂಟ’ ಎನ್ನುವ ಸಮಾನಮನಸ್ಕರರ ವೇದಿಕೆಯೊಂದು ಧಾರವಾಡದಲ್ಲಿದೆ. ಈ ವೇದಿಕೆಯ ಸದಸ್ಯರೆಲ್ಲರೂ ತಿಂಗಳಿಗೊಮ್ಮೆ ಸೇರಿ ಪ್ರಚಲಿತ ಘಟನೆಗಳ ಬಗ್ಗೆ ಚರ್ಚಿಸಿ ಸಂವಾದ ನಡೆಸುತ್ತಾರೆ. ಅವರು ಎರಡು ದಶಕಗಳಿಂದ ಈ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ತಿಂಗಳು ಚರ್ಚೆಗೆ ಆಯ್ಕೆ ಮಾಡಿಕೊಂಡ ವಿಷಯ ‘ಭಾರತೀಯ ಕಾನೂನು’ ಈ ಕುರಿತು ಅಧ್ಯಾಪಕರು ಹಾಗೂ ಚಿಂತಕರಾದ ಡಾ.ವಿಷ್ಣುದತ್ತ ನರಹರಿ ಅವರು ವಿಷಯವನ್ನು ಮಂಡಿಸಿದರು.
ಬಳಿಕ ಸುದೀರ್ಘ ಚರ್ಚೆಗಳು ನಡೆದವು. ಕೊನೆಯಲ್ಲಿ ಉಳಿದ ಒಂದಿಷ್ಟು ಪ್ರಶ್ನೆ ಮತ್ತು ಗೊಂದಲಗಳನ್ನು ಡಾ. ಅರುಣಕುಮಾರ್ ಅವರು ಸರಿಪಡಿಸುವ ಪ್ರಯತ್ನ ಮಾಡಿದರು. ಅಲ್ಲಿ ನಾವು ಕಾನೂನಿನ ತಜ್ಞರನ್ನು ಕರೆಸಿದ್ದು ಭಾರತೀಯ ಕಾನೂನಿನಲ್ಲಿರುವ ಗೊಂದಲಗಳ ನಿವಾರಣೆಗೆ ಏನಾದರೂ ಮಾರ್ಗ ಸೂಚಿಸಬಹುದೆಂದು. ಆದರೆ ಅಲ್ಲಿ ಮಾತನಾಡುವವರ ಧಾಟಿಯನ್ನು ನೋಡಿದರೆ ಸರಕಾರವನ್ನು ಸಮರ್ಥಿಸುವಂತಿದ್ದವು.
ಇದು ಪ್ರತಿಯೊಬ್ಬ ಭಾರತೀಯನಲ್ಲಿರುವ ಸಮಸ್ಯೆ ಎಂದರೆ ತಪ್ಪಾಗಲಾರದು. ಯಾಕೆ ಹೀಗಾಗುತ್ತದೆ? ವಾಸ್ತವ ದಲ್ಲಿ ಭಾರತೀಯ ಕಾನೂನು ಹಿಂಬಡಿಗನ ಹಾವಿನಂತೆ, ಎರಡೂ ಕಡೆ ತಲೆ ಇದ್ದಂತೆ ಕಾಣುತ್ತದೆ. ನಮ್ಮ ಕಾನೂನಿನಲ್ಲಿ ಸಾಕಷ್ಟು ದೋಷಗಳಿರುವುದು ಎದ್ದುಕಾಣುತ್ತದೆ. ಅದರಲ್ಲೂ ವಿಳಂಬ ನೀತಿ ಹೆಚ್ಚಿದೆ. ನೂರು ಅಪರಾಧಿಗಳು ಬಿಡುಗಡೆಯಾದರೂ ತೊಂದರೆ ಇಲ್ಲ, ಕೋಪ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬುದು ಕಾನೂನಿನ ಆದರ್ಶ ವಾಗಿದೆ. ಆದರೆ ಈ ದೇಶದಲ್ಲಿ ನೂರಾರು ಅಪರಾಧಿಗಳು ತಪ್ಪಿಸಿಕೊಂಡು ಕೊನೆಗೊಬ್ಬ ನಿರಪರಾಧಿ ಸಿಕ್ಕಿಬೀಳುವ ಪ್ರಸಂಗಗಳೇ ಹೆಚ್ಚಾಗಿ ನಡೆಯುತ್ತದೆ.
ಇದು ಕೇಳಲು ಹಾಸ್ಯಾಸ್ಪದ ಎನಿಸಿದರೂ ವಾಸ್ತವ ಸತ್ಯ. ನಮ್ಮ ಜನರಿಗೆ ಕಾನೂನಿನ ಬಗ್ಗೆ ಭಯ ಇದೆ, ಆದರೆ ಗೌರವ ಇಲ್ಲ. ಭಾರತದಲ್ಲಿ ಕಾನೂನಿನ ಸದುಪಯೋಗಕ್ಕಿಂತ ದುರುಪಯೋಗಗಳೇ ಹೆಚ್ಚಾಗಿ ಆಗುತ್ತವೆ. ಈ ರೀತಿ ನೂರಾರು ಪ್ರಶ್ನೆಗಳಿವೆ, ಎಲ್ಲ ಕಾರಣಗಳೇನು? ಅಂತ ನೋಡಿದರೆ ಸಾಕಷ್ಟು ಅಂಶಗಳು ನಮಗೆ ಗೊತ್ತಾಗುತ್ತವೆ. ನಮ್ಮ ದೇಶದ ಸಂವಿಧಾನ ಹಾಗೂ ಕಾನೂನುಗಳೇ ನಮ್ಮ ಸಂಸ್ಕೃತಿಯ ನ್ನಾಧರಿಸಿ ಇಲ್ಲವೇ ಇಲ್ಲ! ಆದ್ದರಿಂದ ಈ ದೇಶದ ಕಾನೂನುಗಳಿಗೂ ಜನರ ಜೀವನಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ನಮ್ಮ ಹೊಸ ಕಾನೂನುಗಳು ವಸಾಹತು ಪ್ರಭಾವದಿಂದ ರಚಿತವಾಗಿವೆ. ಅವುಗಳನ್ನೇ ಸಣ್ಣ ಪುಟ್ಟ ಬದಲಾವಣೆಯೊಂದಿಗೆ ನಾವು ಅಳವಡಿಸಿಕೊಂಡಿದ್ದೇವೆ. ಹಾಗಾಗಿ ಅಡ್ಡದಾರಿ ಮತ್ತು ಪರಿಣಾಮಗಳು ಜಾಸ್ತಿ ಆಗುತ್ತಿವೆ.
ಪ್ರತಿಯೊಂದು ಸಮಾಜವು ಯಾವುದೋ ಒಂದು ಸಂಸ್ಕೃತಿಕ ನೆಲೆಯಲ್ಲಿ ಸಂಘಟಿತವಾಗಿ ಅದರಲ್ಲಿ ಸಾಕಷ್ಟು ತಿದ್ದುಪಡಿಗಳಾಗುತ್ತಾ ಬಂದಿರುತ್ತವೆ. ಸಾಂಸ್ಕೃತಿಕ ಪರಂಪರೆ ಅಥವಾ ಸಂಪ್ರದಾಯವೂ ಪ್ರತಿ ಸಮಾಜವನ್ನು ತಿದ್ದುತ್ತಿರುತ್ತದೆ. ಹಾಗಾಗಿ ಒಂದು ಸಮಾಜಕ್ಕೆ ಅಥವಾ ಸಂಸ್ಕೃತಿಗೆ ಸಂಬಂಧ ಪಟ್ಟ ನೀತಿ-ನಿಯಮಾವಳಿ ಆಯಾ ಸಮಾಜ ಅಥವಾ ಸಂಸ್ಕೃತಿಯನ್ನಾಧರಿಸಿಯೇ ಇರಬೇಕು. ಭಾರತೀಯರಿಗೆ ಹಾಗೂ ಮೂಲ ನಂಬಿಕೆಯ ಭಿನ್ನತೆಇರುವಂತಹ ಸಂದರ್ಭದಲ್ಲಿ ಅವರ ಕಾನೂನುಗಳು ನಮಗೆ ಸಂಪೂರ್ಣ ನ್ಯಾಯವನ್ನು ನೀಡಲು ಹೇಗೆ ಸಾಧ್ಯವಿಲ್ಲ.
ಕಾರಣ, ಪಾಶ್ಚಿಮಾತ್ಯರು ರಿಲಿಜನ್ಯ ಕಥೆ ನಂಬಿದವರು. ರಿಲಿಜನ್ ಎನ್ನುವುದು ಸತ್ಯ-ಸುಳ್ಳುಗಳ ಜಿಜ್ಞಾಸೆಯ ಮೇಲೆ ನಿಂತಿರುವಂತದ್ದು. ಹಾಗಾಗಿ ಅವರಕಾನೂನುಗಳಿಗೂ ಸತ್ಯ ಅಥವಾ ಸುಳ್ಳು ಎನ್ನುವುದೇ ನಿರ್ಣಾಯಕವಾಗುತ್ತದೆ. ಮತ್ತು ಅದನ್ನು ನಂಬಿದವರಿಗೆ ಅದೇ ನ್ಯಾಯ. ಭಾರತೀಯ ಸಂಸ್ಕೃತಿ ಯಲ್ಲಿ ರಿಲಿಜನ್ನೇ ಇಲ್ಲ. ಹಾಗಾಗಿ ಇಲ್ಲಿ ಸತ್ಯ ಸುಳ್ಳು ಎನ್ನುವುದು ಸಂಸ್ಕೃತಿಯ ಜಿಜ್ಞಾಸೆ ಅಲ್ಲ. ಮೇಲಾಗಿ ಅದನ್ನು ಶೋಧಿಸಿಯೇ ತೀರಬೇಕೆಂಬ ಛಲ ಯಾರಿಗೂ ಇಲ್ಲ. ಉದಾ: ನಾವು ಇಂದು ನಮ್ಮೆದುರಿಗೆ ಹಲವು ವೈಚಿತ್ರ್ಯಗಳನ್ನು ಕಾಣುತ್ತೇವೆ ಸುಳ್ಳುಗಾರರು- ಸತ್ಯವಂತರು, ನಂಬಿಕೆಯ-ಅಪನಂಬಿಕೆ,ಕೆಟ್ಟವರು-ಒಳ್ಳೆಯವರು, ನೈತಿಕ-ಅನೈತಿಕತೆ ಹೀಗೆ ಇತ್ಯಾದಿ. ಪ್ರಾಮಾಣಿಕರು ಎಂದುಕೊಂಡವರು ಸಹ ಮೋಸಮಾಡುತ್ತಾರೆ. ಹೀಗಿರುವಾಗ ಸತ್ಯ ಯಾವುದು ಸುಳ್ಳು ಯಾವುದು ಎಂದು ಖಚಿತವಾಗಿ ಹೇಳಲಾಗದ ಪರಿಸ್ಥಿತಿ ಇದೆ. ಈ ಹಂತದಲ್ಲಿ ಪಾಶ್ಚಾತ್ಯರು ತೋರಿಸುವಂತಹ ಪ್ರತಿಕ್ರಿಯೆ ಬೇರೆ ಭಾರತೀಯರು ತೋರಿಸುವುದೇ ಬೇರೆ.
ಈ ಸಂದರ್ಭದಲ್ಲಿ ಪಾಶ್ಚಾತ್ಯರು ಬಹಳಷ್ಟು ಗಂಭೀರರಾಗಿ ಸತ್ಯ ಸುಳ್ಳಿನ ಸಂಶೋಧನೆಗಾಗಿ ‘ಗಾಡ್’ನನ್ನು ತರುತ್ತಾರೆ. ಫಿಲಾಸಫಿ ಮಧ್ಯೆ ಎಳೆಯುತ್ತಾರೆ. ಮನುಷ್ಯನ ಎಥಿಕ್ಸ್ ಹಾಗೂ ಮಾರಲ್ಸ್‌ಗಳನ್ನು ಪ್ರಶ್ನಿಸುತ್ತಾರೆ. ಅವರು ಇಷ್ಟು ಕಷ್ಟಪಟ್ಟು ಕಂಡುಹಿಡಿದ ಸತ್ಯ ಭಾರತೀಯರಿಗೆ ಅರ್ಥವೇ ಆಗುವುದಿಲ್ಲ. ಏಕೆಂದರೆ ಇವರಿಗೆ ಅದು ಅನುಭವದ ಸಂಗತಿಯೇ ಅಲ್ಲ. ಪಾಶ್ಚಾತ್ಯರು ಒಂದು ಸಮಸ್ಯೆಗೆ ಉತ್ತರ ಕಂಡುಕೊಳ್ಳುವುದಕ್ಕೂ ನಾವು ಕಂಡುಕೊಳ್ಳುವು ದಕ್ಕೂ ತುಂಬಾನೇ ವ್ಯತ್ಯಾಸವಿದೆ.
ಸತ್ಯ-ಸುಳ್ಳಿಗೆ ಸಂಬಂಧಪಟ್ಟ ಮೇಲಿನ ಸಂದರ್ಭದಲ್ಲಿ ಭಾರತೀಯರು ಗ್ರಹಿಸುವ ರೀತಿಯೇ ಬೇರೆ ಆಗುತ್ತದೆ. ಭಾರತೀಯರು ದೃಷ್ಟಾಂತದ ಮೂಲಕ ಕಥೆಯ ಮೂಲವನ್ನು ಗ್ರಹಿಸುತ್ತಾರೆ. ಉದಾಹರಣೆಗೆ ‘ಒಂದು ಊರಿನಲ್ಲಿ ಸತ್ಯ ಮತ್ತು ಸುಳ್ಳು ಎಂಬ ಇಬ್ಬರು ಸ್ನೇಹಿತರಿದ್ದರಂತೆ. ಸತ್ಯನನ್ನು ಜನ ಹೊಗಳುತ್ತಿದ್ದರು, ಏಕೆಂದರೆ ಆತ ನೋಡಲು ಚಂದವಾಗಿದ್ದ. ಅದಕ್ಕಾಗಿ ಸುಳ್ಳನಿಗೆ ಸತ್ಯನ ಕುರಿತು ಅಸೂಯೆ ಇತ್ತು. ಆದರೂ ಇಬ್ಬರು ಅನ್ಯೋನ್ಯ ಸ್ನೇಹಿತರಾಗಿದ್ದರು. ಒಂದು ದಿನ ಈರ್ವರೂ ನದಿಗೆ ಈಜಲು ಹೋಗುತ್ತಾರೆ. ಈಜಿ ಈಜಿ ಸುಸ್ತಾಯಿತು. ಸುಳ್ಳ ಮೊದಲು ದಡಕ್ಕೆ ಬಂದ. ಥಟ್ಟನೆಆತನಿಗೆ ಸತ್ಯನ ಬಟ್ಟೆ ಕಾಣಿಸಿತು. ತಡ ಮಾಡದೇ ಅದನ್ನು ಹಾಕಿಕೊಂಡು ಹೋಗಿಬಿಟ್ಟ.
ಸತ್ಯ ಬಂದು ನೋಡುತ್ತಾನೆ,  ಅಲ್ಲಿ ಬಟ್ಟೆ ಇರಲಿಲ್ಲ. ಹಾಗೇ ಹೋಗುವಂತಿಲ್ಲ; ಅನಿವಾರ್ಯವಾಗಿ ಸುಳ್ಳನ ಬಟ್ಟೆ ಹಾಕಿಕೊಂಡು ಹೋಗುತ್ತಾನೆ. ಈ ಬಟ್ಟೆ ಬದಲಿಸಿಕೊಂಡ ಸತ್ಯ ಮತ್ತು ಸುಳ್ಳರೇ ನಮ್ಮ ಸುತ್ತಲೂ ಇzರೆ. ಹಾಗಾಗಿಯೇ ನಮಗೆ ನಿತ್ಯ ಗೊಂದಲ.’ ಹೀಗೆ ಕಥೆ ಹೇಳುವ ಮೂಲಕ ಈ ಗೊಂದಲ ಗಳನ್ನು ಸಹಜವಾಗಿಯೇ ಸ್ವೀಕರಿಸುತ್ತೇವೆ. ಪಶ್ಚಿಮಾತ್ಯರು ಪ್ರತಿಯೊಂದು ಕೂಡ ನಾರ್ಮೆಟಿವ್ ಆಗಿ ವಿಭಜಿಸುತ್ತಾರೆ. ಅವರ ಕಾನೂನು ಕೂಡ ಹಾಗೆಯೇ. ಸತ್ಯವಾಗಿರಬೇಕು ಇಲ್ಲಂದ್ರೆ ಸುಳ್ಳಾಗಿರಬೇಕು. ಎರಡೇ ಸಾಧ್ಯತೆಗಳು. ಆದರೆ ನಮ್ಮ ಸಂಸ್ಕೃತಿಯಲ್ಲಿ ಎರಡನ್ನೂ ಮೀರಿದ ಮೂರನೇ ಸಾಧ್ಯತೆಯನ್ನೂ ಊಹಿಸುತ್ತೇವೆ.
ಅನೇಕ ಸಲ ಈ ಮೂರನೇ ಸಾಧ್ಯತೆಯೇ ನಿಜವಾಗುತ್ತದೆ. ವಿವಾಹವಾಗಿ ಒಂದು ವರ್ಷದಲ್ಲಿ ಗಂಡ-ಹೆಂಡತಿ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಬಂದಿದ್ದಾರೆ. ಗಂಡು ತನಗೆ ಸಾಧ್ಯವಾದಷ್ಟು ಸಮರ್ಥನೆಯ ಕಾರಣಗಳನ್ನು ಸಿದ್ಧಪಡಿಸುತ್ತಾನೆ. ಅಂತೆಯೇ ಹೆಣ್ಣು ಕೂಡಾ ತನ್ನ ಮೇಲೆ ಹೆಚ್ಚು ಅನುಕಂಪ ಬರುವಂತಹ ಕಾರಣಗಳನ್ನು ಸೃಷ್ಟಿಸುತ್ತಾಳೆ. ಏಕೆಂದರೆ ಇವೆಲ್ಲ ಸತ್ಯವನ್ನು ಸಾಬೀತು ಮಾಡುವ ಪ್ರಯತ್ನಗಳು. ಕಾನೂನಿಗೆ ಯಾವುದು ಹೆಚ್ಚು ಸತ್ಯ ಎನಿಸುತ್ತದೆಯೋ ಆ ಕಡೆ ನ್ಯಾಯ ನೀಡುತ್ತದೆ. ಸತ್ಯ ಮತ್ತು ಸುಳ್ಳಿನ ಹೊರತಾಗಿಯೂ ಇನ್ನೊಂದು ಸಾಧ್ಯತೆಯನ್ನು ಅಥವಾ ವಾಸ್ತವವನ್ನು ಗ್ರಹಿಸುವ ನಮ್ಮ ಸಂಸ್ಕೃತಿಗೆ ಇಂಥ ಕಾನೂನುಗಳು ತೊಡಕನ್ನೇ ಉಂಟುಮಾಡುತ್ತವೆ.
ಭಾರತದಲ್ಲಿ ನೂರಾರು ವರ್ಷಗಳ ಹಿಂದೆ ಇದ್ದ ಪಂಚಾಯಿತಿ ವ್ಯವಹಾರ ಪದ್ಧತಿಯನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಯಾವುದೋ ಒಂದು ಪ್ರಕರಣ ಒಂದೊಮ್ಮೆ ಪಂಚಾಯಿತಿ ಕಟ್ಟೆಗೆ ಬಂದರೆ ಏನಾಗುತ್ತಿತ್ತು? ಅವರು ಸತ್ಯ, ಸುಳ್ಳಿಗೆ ಪ್ರಾಮುಖ್ಯ ನೀಡುತ್ತಿರಲಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಮೊದಲು ಊಹಿಸುತ್ತಿದ್ದರು. ‘ಹಳೆಯದನ್ನೆಲ್ಲ ಮರೆಯಿರಿ, ಆಗಿದ್ದು ಆಗಿ ಹೋಯಿತು. ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ,’ ಚೆನ್ನಾಗಿ ಬದುಕು ಸಾಗಿಸಲು ಇಬ್ಬರಿಗೂ ಸಲಹೆ ನೀಡಿ ಕಳುಹಿಸುತ್ತಿದ್ದರು. ಈ ರೀತಿಯ ಗ್ರಹಿಕೆ ಒಂದು ಪರಂಪರೆ ಅಥವಾ ಸಂಸ್ಕೃತಿಯಿಂದ ಬಂದಿರು ವಂತಹದ್ದು. ಹಾಗಾಗಿ ಇಂತಹ ಗ್ರಹಿಕೆ ಆಧಾರದ ಮೇಲೆ ಕಾನೂನುಗಳು ರಚಿತವಾಗಬೇಕು.
ಕ್ರಿಶ್ಚಿಯಾನಿಟಿ ಹುಟ್ಟಿದ್ದೇ ರೋಮಿನಲ್ಲಿ. ರೋಮಿನಂತೆ ಅಥವಾ ಭಾರತ ದಂತೆ ಕ್ರಿಶ್ಚಿಯಾನಿಟಿಗೆ ಪರಂಪರೆ ಅಥವಾ ಸಾಂಸ್ಕೃತಿಕ ಹಿನ್ನೆಲೆ ಇಲ್ಲ. ಅವರು ಕಟ್ಟಿಕೊಂಡ ರಿಲಿಜನ್‌ನ ಕಥೆಯೇ ಅವರಿಗೆ ಬಂಡವಾಳ. ಹಾಗೂ ಈ ಕಥೆಗೆ ಮಿತಿ ಇದೆ. ಆದ್ದರಿಂದ ರೀಜನ್‌ಗೆ ಸಂಬಂಧಪಟ್ಟ ಎಲ್ಲ ಸಾಮಾಜಿಕ ವ್ಯವಸ್ಥೆಯಲ್ಲಿ ಈ ಮಿತಿ ಗುರುತಿಸಬಹುದಾಗಿದೆ. ಹಾಗಾಗಿ ನಮ್ಮ ದೇಶದ ಕಾನೂನುಗಳಲ್ಲಿ ಕಂಡುಬರುವುದು ಈ ರಿಲಿಜನ್ನಿನ ಮಿತಿ. ರಿಲಿಜನ್ನೇ ಇಲ್ಲದ ದೇಶದಲ್ಲಿ ಅದು ಅಶಾಂತಿಗೆ ಕಾರಣವಾಗುತ್ತವೆ. ಕಾನೂನು ಎನ್ನುವುದು ಮನುಷ್ಯರು ಮನುಷ್ಯರಿಗಾಗಿಯೇ ಮಾಡಿರುವಂತಹದ್ದು.
ಏಕೆಂದರೆ ಮನುಷ್ಯ ಸಕಲ ಜೀವಿಗಳಲ್ಲಿ ಅತ್ಯಂತ ಬುದ್ಧಿವಂತ! ಈತನನ್ನು ಬೇರಾವ ರೀತಿಯಲ್ಲೂ ನಿಯಂತ್ರಿಸಲು ಸಾಧ್ಯವಿಲ್ಲ. ಈ ಪ್ರಪಂಚದಲ್ಲಿ ಬೇರೆ ಬೇರೆ ಸಂಸ್ಕೃತಿಗಳ ಮನುಷ್ಯರ ಆಚಾರ, ವಿಚಾರ, ನಂಬಿಕೆ, ಆಚರಣೆ ಬೇರೆ ಬೇರೆ ಇರುತ್ತವೆ. ಕಾನೂನು ಮನಸ್ಸಗೆ ಸ್ವಾತಂತ್ರ್ಯವನ್ನು ನಿಯಂತ್ರಣದಲ್ಲಿ ಇಡಬೇಕೇ ವಿನಹ ಮೊಟಕುಗೊಳಿಸಬಾರದು. ಅಥವಾ ತಾರತಮ್ಯ ಮಾಡಬಾರದು. ಹಾಗಿzಗ ಕಾನೂನುಗಳು ಆಯಾ ಸಂಸ್ಕೃತಿಗೆ ಸಂಬಂಧಪಟ್ಟಂತೆ ರಚಿತವಾಗಬೇಕೇ ವಿನಾ ವಿಶ್ವಕ್ಕೆಲ್ಲ ಒಂದು ಕಾನೂನು ಎಂದರೆ ನ್ಯಾಯವಲ್ಲ.
ಏರೋಪ್ಯರು ಪ್ರಗತಿಯ ರೂವಾರಿಗಳು ಹಾಗೂ ನಮಗೆ ಮಾದರಿ ಎಂದು ಒಪ್ಪಿಕೊಂಡಿದ್ದರಿಂದ ಅವರದ್ದೆಲ್ಲವನ್ನೂ ಸಾರಾಸಗಟಾಗಿ ಸ್ವೀಕರಿಸಿಬಿಟ್ಟಿ ದ್ದೇವೆ. ನಮ್ಮ ದೇಹ ಪ್ರಕೃತಿಗೆ ಒಗ್ಗುವಂತಹದ್ದನ್ನು ಮಾತ್ರ ಅಳವಡಿಸಿಕೊಂಡಿದ್ದರೆ ಈ ಅನಾಹುತ ಖಂಡಿತ ಆಗುತ್ತಿರಲಿಲ್ಲ. ಈಗ ನಮ್ಮ ದೇಶದಲ್ಲಿ ಬುದ್ಧಿವಂತರು ಮಾತ್ರ ಕಾನೂನಿನ ಸದುಪಯೋಗ ಮತ್ತು ದುರುಪಯೋಗ ಪಡೆದುಕೊಳ್ಳುವ ಸಂದರ್ಭ ಎದುರಾದಂತೆ ಕಾಣುತ್ತದೆ. ಭಾರತೀಯ ಕಾನೂನು ಪ್ರಪಂಚದಲ್ಲಿ ‘ಹಿಂದೂ ಲಾ’ ಮಾತ್ರ ಹೆಚ್ಚೂ ಕಡಿಮೆ ಎಲ್ಲ ಭಾರತೀಯರಿಗೆ ಅರ್ಥವಾಗುತ್ತದೆ. ಹಾಗೂ ಅದರ ಕುರಿತು ಸ್ವಲ್ಪಮಟ್ಟಿನ ಮೆಚ್ಚುಗೆ ಇದೆ. ಯಾಕೆಂದರೆ ‘ಹಿಂದೂ ಲಾ’ ಭಾರತೀಯರ ಅನುಭವ. ಅದಕ್ಕಿಂತ ಮುಖ್ಯವಾಗಿ ಭಾರತೀಯ ಪರಂಪರೆಯಲ್ಲಿ ಇದ್ದ ಕಾನೂನಿನ ಪರಿಷ್ಕೃತ ಪಾಠ್ಯವಿದು. ಉಳಿದ ಕಾನೂನುಗಳಲ್ಲೂ ಈ ಪರಿಷ್ಕರಣೆ ಅಗತ್ಯವಿದೆ. ಇದು ಯಾರೋ ಪ್ರಜ್ಞಾಪೂರ್ವಕವಾಗಿ ಮಾಡಿದ ತಪ್ಪಲ್ಲ. ನಮ್ಮ ತಿಳುವಳಿಕೆಯೊಂದಿಗೆ ಬಂದಂತಹದ್ದು. ಆದರೆ ಈ ತಿಳಿವಳಿಕೆಯೇ ತಪ್ಪಾಗಿದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಹೀಗೆ ಸಾಕಷ್ಟು  ಬದಲಾವಣೆ ನಮ್ಮ ಸಂವಿಧಾನ ಮತ್ತು ಕಾನೂನುಗಳಲ್ಲಿ ಆಗಬೇಕಿದೆ.
(ಲೇಖಕರು: ರಾಜ್ಯಶಾಸ್ತ್ರ ಅಧ್ಯಾಪಕರು)