ಆರ್‌ಸಿಬಿ ಹಾಗೂ ಕಾಂಗ್ರೆಸ್ !
ವಿದ್ಯಮಾನ
ಮಹದೇವ ಪ್ರಸಾದ್ ಎಚ್.ಆರ್‌.ಹಂಗಳಪುರ
ಪ್ರತಿಸಲ ಕಪ್ ನಮ್ದೇ ಎನ್ನುತ್ತಾ ಕಣಕ್ಕಿಳಿಯುವ ಆರ್‌ಸಿಬಿ ಹಾಗೂ ಈ ಸಲ ಸರಕಾರ ನಮ್ದೇ ಎನ್ನುತ್ತಾ ಚುನಾವಣೆ ಎದುರಿಸುವ ಕಾಂಗ್ರೆಸ್ ಒಂದೇ ಅನಿಸಲು ಶುರುವಾಗಿದೆ. ಪ್ರತಿಸಲ ಇವೆರಡೂ ತಮ್ಮ ಕಳಪೆ ಪ್ರದರ್ಶನದಿಂದ ತಮ್ಮ ಗೆಲುವನ್ನು ಮುಂದೂಡು ತ್ತಲೇ ಬಂದಿವೆ.
ಸಮರ್ಥ ನಾಯಕತ್ವದ ಕೊರತೆ ಕಾಂಗ್ರೆಸ್ ಹಾಗೂ ಆರ್‌ಸಿಬಿ ಎರಡನ್ನೂ ಗೆಲುವಿನ ತುದಿಗೆ ತಂದು ನಿಲ್ಲಿಸಲು ಅಸಮರ್ಥವಾಗಿದೆ ಎನ್ನಬಹುದು. ಮಿಂಚಿನ ವೇಗದಲ್ಲಿ ಓಡುವ ಮೋದಿ ಎನ್ನುವ ಕುದುರೆಯನ್ನು ಬೆನ್ನಟ್ಟಿ ಗೆಲ್ಲಲು ಕಾಂಗ್ರೆಸ್ ರಾಹುಲ್ ಎನ್ನುವ ಕುಂಟು ಕುದುರೆಯನ್ನು ಅವಲಂಬಿಸಿರುವುದೇ ಈ ದಾರುಣ ಪರಿಸ್ಥಿತಿಗೆ ಕಾರಣ. ಕಾಂಗ್ರೆಸಿಗರ ಮನಃಸ್ಥಿತಿ ಹೇಗಿದೆ ಎಂದರೆ ಅವರು ಈ ಕುಂಟು ಕುದುರೆಯನ್ನು ಬದಲಿಸಲು ಮಾತ್ರ ಸಿದ್ಧರಿಲ್ಲ. ಕುಂಟು ಕುದುರೆಯೊಂದಿಗೆ ಹೆಜ್ಜೆ ಹಾಕಿ ತಾವು ಹಿಂದೆ ಬೀಳುತ್ತಿದ್ದಾರೆ ಎನ್ನುವ ಸಾಮಾನ್ಯ ಪರಿಜ್ಞಾನವು ಇಲ್ಲ. ಆರ್ .ಸಿ.ಬಿ ನಾಯಕ ತನ್ನ ವೈಯಕ್ತಿಕ ಪ್ರದರ್ಶನವನ್ನಾದರೂ ಯಶಸ್ವಿಯಾಗಿ ನಡೆಸಿ ಕೊಂಡು ಬರುತ್ತಿದ್ದಾರೆ.
ಹಾಗೂ ಅವರಿಗೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ಹೋರಾಡಬಲ್ಲ ಎಬಿಡಿ ಎನ್ನುವ ಅಪ್ಪಟ ಹೋರಾಟಗಾರ ಜತೆಗಿದ್ದಾರೆ. ಆದರೆ ಕಾಂಗ್ರೆಸಿನ ನಾಯಕನ ವೈಯಕ್ತಿಕ ಪ್ರದರ್ಶನ ಹಾಗೂ ಅವರ ಜತೆಗಾರರ ಪ್ರದರ್ಶನ ಮಾತ್ರ ಶೋಚನೀಯ. ಕಾಂಗ್ರೆಸಿ ನವರು ಅಶ್ವಮೇಧಯಾಗ ಗೆಲ್ಲಲು ಒಂದು ಕುಂಟು ಕುದುರೆಯನ್ನು ಅವಲಂಬಿಸುತ್ತಾರೆ ಇಲ್ಲವಾದಲ್ಲಿ ಮತ್ತದೇ ವಯಸ್ಸಾದ, ನಿಶಕ್ತಿಯ ಕುದುರೆಯನ್ನು ಆಶ್ರಯಿಸುತ್ತಾರೆ.
ದೇಶದ ತುಂಬೆ ಹುಮ್ಮಸ್ಸಿನಿಂದ ಓಡುವ ಎಷ್ಟೋ ಕುದುರೆಗಳಿದ್ದರೂ ಕಾಂಗ್ರೆಸಿ ಗರ ಆಯ್ಕೆ ಮಾತ್ರ ಈ ಎರಡು ಕುದುರೆಗಳು. ಇಲ್ಲವಾದಲ್ಲಿ ಚುನಾವಣೆಯ ಸಮಯದಲ್ಲಿ ಶೃಂಗರಿಸಿದ, ಯಾವುದೇ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳದ ಮತ್ತೊಂದು ಕುದುರೆ ಯನ್ನು ತಂದು ನಿಲ್ಲಿಸಿ, ಮತ್ತೆ ಜೋಪಾನವಾಗಿ ಆ ಕುದುರೆಯನ್ನು ಮನೆಗೆ ತಲುಪಿಸುತ್ತಾರೆ. ಸಾಲು ಸಾಲು ಚುನಾವಣೆಗಳನ್ನು ಸೋತ ನಂತರವಾದರೂ ಕಾಂಗ್ರೆಸ್ ತನ್ನ ಆತ್ಮಾವ ಲೋಕನ ಮಾಡಿಕೊಳ್ಳಬೇಕಾಗಿತ್ತು. ಈ ವಿಚಾರಗಳನ್ನು ಗಮನಿಸಿದಾಗ ಸಾಮಾನ್ಯ ಕಾರ್ಯಕರ್ತನಿಗೆ ಇರುವ ಜಾಣ್ಮೆ, ವಿಚಾರ ಮಾಡುವ ಗುಣ ದೊಡ್ಡ ದೊಡ್ಡ ನಾಯಕರಿಗೆ ಇಲ್ಲವಾ? ಎನ್ನುವ ಪ್ರಶ್ನೆ ಮೂಡುತ್ತದೆ.
ಎಲ್ಲರಲ್ಲೂ ಜಾಣ್ಮೆ ಇದ್ದರೂ ಅವರುಗಳು ಹೈಕಮಾಂಡ್ ಎನ್ನುವ ಕಾಗದದ ಹುಲಿಗೆ ಹೆದರಿಕೊಂಡೆ ಜೀವನ ಮಾಡುತ್ತಿದ್ದ ರೇನೋ ಎನ್ನುವ ಅನುಮಾನ ಸಹ ಕಾಡುತ್ತದೆ. ರಾಹುಲ್ ಗಾಂಧಿ ತಮ್ಮ ಕೈಯಲ್ಲಿ ಇನ್ನೂ ಆಗುವುದಿಲ್ಲ ಎಂದೇ ಅಧ್ಯಕ್ಷ ಪದವಿಯ ಶಸತ್ಯಾಗ ಮಾಡಿದ ಮೇಲೂ ಮತ್ತೆ ಅವರನ್ನೇ ಅವಲಂಬಿಸಿರುವುದೇ ಕಾಂಗ್ರೆಸ್ಸಿನ ಅದಃಪತನಕ್ಕೆ ಒಂದು ಕಾರಣ ವಾಗುತ್ತಿದೆ. ಅಧ್ಯಕ್ಷರಾಗಿದ್ದಾಗ ಒಂದೂ ಚುನಾವಣೆಯನ್ನು ಗೆಲ್ಲಲಾಗದ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನದಿಂದ ಇಳಿದ ಮೇಲೆ ಚುನಾವಣೆಯ ಸ್ಟಾರ್ ಪ್ರಚಾರಕನಾಗಿ ಚುನಾವಣೆ ಗೆಲ್ಲಬಹುದು ಎನ್ನುವ ಹಗಲು ಕನಸು ಕಾಣುತ್ತಿದ್ದಾರೆ.
ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ಕಾಂಗ್ರೆಸಿನ ಮುಖವಾಣಿಯಾಗಿ ಮತ್ತೆ ಮತ್ತೆ ಕಾಣಿಸಿಕೊಂಡು ಹೊಸ ಬಾಟಲಿಯಲ್ಲಿಹಳೆ ಮದ್ಯ ಎನ್ನುವಂತೆ ಮತದಾರನ ಮುಂದೆ ಬಿಂಬಿತವಾಗುತ್ತಿದ್ದಾರೆ. ಕಾಂಗ್ರೆಸಿಗರಿಗೆ ಇಷ್ಟು ಸಾಮಾನ್ಯ ಜ್ಞಾನ ಬೇಡವೇ? ಇನ್ನೆಷ್ಟು ದಿನ ಗಾಂಧಿ ಕುಟುಂಬವೆನ್ನುವ ಹಳೆ ವೃಕ್ಷದಲ್ಲಿ ತಲೆಕೆಳಗೆ ಮಾಡಿ ನೇತಾಡುವ ಬಾವಲಿಗಳಂತಾಗುತ್ತೀರಿ? ನಿಮಗೂ ರೆಕ್ಕೆಗಳಿವೆ, ನಿಮಗೂ ಹಾರಾಡುವ ಸಾಮರ್ಥ್ಯವಿದೆ!
ಮತ್ತೇಕೆ ನಿಮ್ಮೊಬ್ಬರಲ್ಲಿ ಯಾರಾದರೂ ಮುಂಚೂಣಿಯಲ್ಲಿ ಆಕಾಶದೆತ್ತರಕ್ಕೆ ಹಾರಾಡುವ ಪ್ರಯತ್ನ ಮಾಡಬಾರದು? ಇನ್ನೆಷ್ಟು ದಿನ ಸೋಲನ್ನು ಒಪ್ಪಿಕೊಳ್ಳುತ್ತಾ ಸಾಗುತ್ತೀರಿ? ಸೋಲನ್ನು ಒಪ್ಪಿಕೊಳ್ಳುತ್ತಾ ಸಾಗಿದಂತೆ, ಗೆಲ್ಲುವ ಛಲವೇ ಹುದುಗಿಹೋಗಿ ಕಾಂಗ್ರೆಸ್ ಎನ್ನುವ ಹಳೆ ಪಕ್ಷ ಚುನಾವಣಾ ಕಣದಿಂದಲೇ ಕಣ್ಮರೆಯಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಆರ್‌ಸಿಬಿಯಾದರೂ ಒಬ್ಬ ಮಾಲೀಕನಿಗೆ ಸೇರಿದ ತಂಡ ಅದರಲ್ಲಿ ನಾಯಕತ್ವ ಬದಲಾವಣೆಗೆ ಮಾಲೀಕನ ಮಾತೇ ಅಂತಿಮ. ಆದರೆ ನಿಮ್ಮದು ಪ್ರಜಾ ಪ್ರಭುತ್ವ, ನಿಮ್ಮ ಕೈಯ ಎಲ್ಲಾ ತೀರ್ಮಾನ ಕೈಗೊಳ್ಳುವ ಹಕ್ಕುಗಳಿವೆ, ಇನ್ನಾದರೂ ಎಚ್ಚರವಹಿಸಿ ನಾಯಕತ್ವ ಬದಲಾವಣೆಯತ್ತ ಯೋಚಿಸಿ, ಗೆಲುವಿನ ಮೊದಲ ಹೆಜ್ಜೆಯನ್ನು ಇಡುವ ಧೈರ್ಯ ಮಾಡಿ. ಅಭಿಮಾನಿಗಳಿಗಾದರೂ ಆರ್.ಸಿ.ಬಿ ಕಪ್ ಗೆಲ್ಲಬೇಕು ಹಾಗೇ ತಳಮಟ್ಟದ ಕಾರ್ಯಕರ್ತರ ಶ್ರಮಕ್ಕಾದರೂ ಕಾಂಗ್ರೆಸ್ ಒಂದು ಗೆಲುವು ದಾಖಲಿಸಬೇಕು!