ಹಿರೇನ್ ಮುಖರ್ಜಿ ಎಂಬ ಒಬ್ಬ ಕಮ್ಯೂನಿಸ್ಟ್ ಆಚಾರ್ಯರ ಕುರಿತು
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್
ಸುಮಾರು ಆರು ವರ್ಷಗಳ ಹಿಂದೆ, ನಾನು ದಿಲ್ಲಿಯ ಸಂಸತ್ ಭವನದ ಲೈಬ್ರರಿಗೆ ಹೋಗಿದ್ದೆ. ಯಾವುದಾದರೂ ಒಂದು ಪುಸ್ತಕ ಅಥವಾ ಹಳೆಯ ಪ್ರಮುಖ ಪತ್ರಿಕೆ ಎಲ್ಲೂ ಸಿಗದಿದ್ದರೆ, ಅಲ್ಲಿ ಸಿಗುತ್ತದೆ ಎಂಬ ವಿಶ್ವಾಸ ಇರಿಸಿಕೊಳ್ಳಬಹುದು. ಅಂಥ ಉತ್ತಮ ಸಂಗ್ರಹವಿರುವ ಅಪರೂಪದ ಗ್ರಂಥಾಲಯವದು. ಅಲ್ಲಿ ಹೋದಾಗ, ನನಗೆ ಅಲ್ಲಿನ ಗ್ರಂಥಪಾಲಕರು ತಮ್ಮ ಸಂಗ್ರಹವನ್ನು ಒಂದು ಸುತ್ತು ಹೊಡೆಸಿ ತೋರಿಸಿದ್ದರು.
ಸಂಸತ್ ಭವನದ ಲೈಬ್ರರಿಯಲ್ಲಿರುವ ಸಂಸ್ಕೃತ ವಿಭಾಗದಲ್ಲಿರುವ ಪುಸ್ತಕಗಳನ್ನು ತೋರಿಸುತ್ತಾ, ’ಆ ಪುಣ್ಯಾತ್ಮ ಇಲ್ಲದಿದ್ದರೆ, ಸಂಸತ್ ಲೈಬ್ರರಿಯಲ್ಲಿ ಸಂಸ್ಕೃತ ಪುಸ್ತಕಗಳನ್ನು ಕಾಣುವುದು ಸಾಧ್ಯವಿತ್ತೇ?’ ಎಂದು ಹೇಳಿದರು. ನಾನು ಕುತೂಹಲದಿಂದ, ’ಯಾರು ಆ ಪುಣ್ಯಾತ್ಮ?’ ಎಂದು ಕೇಳಿದೆ. ಅದಕ್ಕೆ ಅವರು,’ ಕಮ್ಯುನಿ ನಾಯಕ ಹಿರೇನ್ ಮುಖರ್ಜಿ’ ಎಂದರು.
’ಅಷ್ಟಕ್ಕೂ ಸಂಸತ್ ಭವನದಲ್ಲಿ ಸಂಸ್ಕೃತ ಪುಸ್ತಕ ವಿಭಾಗ ಆರಂಭವಾಗಿದ್ದೇ ಹಿರೇನ್ ಮುಖರ್ಜಿ ಒತ್ತಾಸೆಯಿಂದ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ತಾವು ಸಂಸತ್ ಸದಸ್ಯರಾಗಿದ್ದಾಗ, ತಮ್ಮನ್ನು ಲೈಬ್ರರಿ ಕಮಿಟಿಗೆ ಹಾಕಿಸಿಕೊಂಡು, ಸಂಸ್ಕೃತ ವಿಭಾಗ ಆರಂಭವಾಗಲು ಕಾರಣಕರ್ತರಾದರು. ಭಾರತದ ಆತ್ಮದಂತಿರುವ ಪಾರ್ಲಿಮೆಂಟ್ ಭವನದ ಗ್ರಂಥಾಲಯದಲ್ಲಿ ಸಂಸ್ಕೃತ ಪುಸ್ತಕಗಳಿಲ್ಲದಿದ್ದರೆ ಹೇಗೆ ಎಂದು ಹೆಚ್ಚುವರಿ ಹಣ ಬಿಡುಗಡೆ ಮಾಡಿಸಿ, ಈ ವಿಭಾಗ ಶುರು ಮಾಡಿದರು. ಲಭ್ಯವಿರುವ ಎಲ್ಲಾ ಸಂಸ್ಕೃತ ಗ್ರಂಥಗಳು ಸಂಸತ್ ಭವನದ ಲೈಬ್ರರಿಯಲ್ಲಿ ಇರಲೇಬೇಕು ಎಂದು ಹಠಕ್ಕೆ ಬಿದ್ದು ಇಲ್ಲಿನ ಸಂಗ್ರಹವನ್ನು ಶ್ರೀಮಂತ ಗೊಳಿಸಿದರು.
ಅವರು ಸಂಸತ್ ಸದಸ್ಯರಾಗಿದ್ದಾಗ ತಪ್ಪದೇ ಲೈಬ್ರರಿಗೆ ಬರುತ್ತಿದ್ದರು. ಹೊಸ ಸಂಸ್ಕೃತ ಪುಸ್ತಕಗಳು ಬಂದರೆ ಓದಲು ತೆಗೆದು ಕೊಂಡು ಹೋಗುತ್ತಿದ್ದರು. ದಿಲ್ಲಿಗೆ ಬಂದಾಗಲೆಲ್ಲ ಅವರು ಸಂಸತ್ ಲೈಬ್ರರಿಗೆ ಭೇಟಿ ನೀಡದೇ ಹೋಗುತ್ತಿರಲಿಲ್ಲ. ಅವರ ನಂತರ ಸಂಸ್ಕೃತ ವಿಭಾಗಕ್ಕೆ ಭೇಟಿ ನೀಡಿದ ಸಂಸತ್ ಸದಸ್ಯರು ಬೆರಳೆಣಿಕೆಯಷ್ಟಿದ್ದಿರಬಹುದು’ ಎಂದರು. ನಾನು ಬರುವಾಗ ನನಗೆ ಗ್ರಂಥಪಾಲಕರು ಒಂದು ಪುಸ್ತಕ ಕೊಟ್ಟರು. ಅದರ ಹೆಸರು           . ಹಿರೇನ್ ಮುಖರ್ಜಿ ಅವರು ಸಂಸ್ಕೃತದ ಬಗ್ಗೆ ಮಾಡಿದ ಭಾಷಣದ ಲಿಖಿತ ರೂಪ ಸಂಗ್ರಹವದು. ಅದನ್ನು ಓದಿದ ಬಳಿಕ ’ಕಮ್ಯುನಿಸ್ಟ್ ಋಷಿ’, ’ಕಮ್ಯುನಿಸ್ಟ್ ಮಹರ್ಷಿ’ ಎಂದು ಕರೆಯಿಸಿಕೊಂಡಿದ್ದ ಹಿರೇನ್ ಮುಖರ್ಜಿಯವರ ಹೊಸ ವ್ಯಕ್ತಿತ್ವವೇ ನನ್ನ ಮುಂದೆ ಅನಾವರಣಗೊಂಡಿತು.
ಭಾರತದ ಐವರು ಮಹಾನ್ ಕಮ್ಯುನಿಸ್ಟ್ ನಾಯಕರಲ್ಲಿ ಹಿರೇನ್ ಮುಖರ್ಜಿ ಕೂಡ ಒಬ್ಬರು. ಕಟ್ಟರ್ ಕಮ್ಯುನಿಸ್ಟ್ ಆಗಿದ್ದ ಅವರು, ಭಾರತೀಯ ಸಂಸ್ಕೃತಿ, ಮೌಲ್ಯ, ಆಚರಣೆ, ಸಂಪ್ರದಾಯಗಳ ಬಗ್ಗೆ ಅಪಾರ ಕಾಳಜಿ, ಪ್ರೀತಿ ಹೊಂದಿದವರಾಗಿದ್ದರು. ಕಮ್ಯುನಿಸ್ಟ್ ನಾಯಕರು ಅವರನ್ನು ’ಕಮ್ಯುನಿಸ್ಟ್ ಆಚಾರ್ಯ’ರು ಎಂದು ಗೇಲಿ ಮಾಡುತ್ತಿದ್ದರು. ಅದು ಅವರಿಗೂ ಗೊತ್ತಿತ್ತು. ’ಸಂಸ್ಕೃತ ಜ್ಞಾನ ವಿಲ್ಲದೇ ಭಾರತವನ್ನು ಕಟ್ಟಲು ಸಾಧ್ಯವಿಲ್ಲ, ಸಂಸ್ಕೃತ ಅರಿಯದೇ ಭಾರತೀಯತೆಯನ್ನು ಅರ್ಥ ಮಾಡಿ ಕೊಳ್ಳಲು ಸಾಧ್ಯವಿಲ್ಲ. ಸಂಸ್ಕೃತ ಉಳಿದ ಭಾಷೆಗಳಂತೆ ಕೇವಲ ಭಾಷೆಯಲ್ಲ, ಅದು ಜ್ಞಾನದ ಆಗರ’ ಎಂಬ ಅವರ ನಿಲುವನ್ನು ಅರಗಿಸಿಕೊಳ್ಳಲು, ಒಪ್ಪಲು ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆಯಿರುವವರಿಗೆ ಆಗುತ್ತಿರಲಿಲ್ಲ.
ಆದರೆ ಅವರಾರಿಗೂ ಹಿರೇನ್ ಮುಖರ್ಜಿ ಜತೆಗೆ ವಾದಕ್ಕೆ ನಿಲ್ಲುವಷ್ಟು ವಿಷಯ ಪರಿಣತಿ ಇರಲಿಲ್ಲ. ಹಿರೇನ್ ಮುಖರ್ಜಿಯನ್ನು ಒಪ್ಪಿಕೊಳ್ಳುತ್ತೇವೆ, ಆದರೆ ಅವರ ಸಂಸ್ಕೃತಪರ ನಿಲುವನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ಕೆಲವು ಪುಡಿ ಕಮ್ಯುನಿಸ್ಟ್  ನಾಯಕರು ಹೇಳಿದಾಗ, ’ಹಾಗಾದರೆ ನಿಮಗೆ ನಾನ್ಯಾರು ಎಂಬುದೇ ಅರ್ಥವಾಗಿಲ್ಲ. ನಿಮಗೆ ಕಮ್ಯುನಿಸ್ಟ್  ಸಿದ್ಧಾಂತವೂ ಅರ್ಥ ವಾಗಿಲ್ಲ. ಸಂಸ್ಕೃತವನ್ನು ಒಪ್ಪಿಕೊಳ್ಳದಿದ್ದರೆ, ನೀವು ನನ್ನನ್ನು ಒಪ್ಪಿಕೊಳ್ಳಲಾರಿರಿ ಮತ್ತು ಒಪ್ಪಿಕೊಳ್ಳುವ ಜರೂರತ್ತೂ ಇಲ್ಲ’ ಎಂದು ಖಡಾಖಡಿ ಹೇಳಿದ್ದರು.
ಗಾಂಧಿಜಿ ಅವರ ಮೊಮ್ಮಗ ಮತ್ತು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಹಿರೇನ್ ಮುಖರ್ಜಿ ಕುರಿತ ಲೇಖನವೊಂದರಲ್ಲಿ ಬರೆದಿದ್ದರು – ’ಮುಖರ್ಜಿಯವರು ತಮಗಿಂತ ಹಿರಿಯರಾದ ಯಾರಿಗೇ ಆಗಲಿ, ಪತ್ರ ಬರೆಯುವಾಗ ’ಪೂಜ್ಯ’ ಎಂದೇ ಬರೆಯುತ್ತಿದ್ದರು. ನನಗೆ ಈ ಸಂಗತಿ ಗೊತ್ತಿತ್ತು. ನಾನೊಮ್ಮೆ ಅವರಿಗೆ ’ಪೂಜ್ಯ ಹಿರೇನ್ ಬಾಬು’ ಎಂದು ಬರೆದಾಗ, ’ನನ್ನನ್ನು ಪೂಜ್ಯರೇ ಎಂದು ಸಂಬೋಽಸಿದರೆ ನನಗೆ ಮುಜುಗರವಾಗುತ್ತದೆ ಎಂಬುದು ನಿಮಗೆ ಗೊತ್ತಿದೆ. ಆದರೆ ಹೀಗೆ ಸಂಬೋಧಿಸುವಾಗ ನಿಮ್ಮ ಹೃದಯ ವೈಶಾಲ್ಯವೇನು ಎಂಬುದನ್ನು ಅರ್ಥ ಮಾಡಿಕೊಳ್ಳಬ. ನಿಮ್ಮ ಸಂಪನ್ನತೆ, ವಿನಯ ದೊಡ್ಡದು.’ನಾನು ಹಿರೇನ್ ಮುಖರ್ಜಿ ಬಗ್ಗೆ ಕುತೂಹಲ ತಾಳಲು ಕಾರಣರಾದವರು ಇಬ್ಬರು.
ಒಬ್ಬರು ವಾಜಪೇಯಿ ಮತ್ತು ಇನ್ನೊಬ್ಬರು ಆಡ್ವಾಣಿ. ವಾಜಪೇಯಿ ಅವರಿಗೆ ಹಿರೇನ್ ಮುಖರ್ಜಿಯವರನ್ನು ಕಂಡರೆ ಅತೀವ ಗೌರವ. ಹಾಗಂತ ಇಬ್ಬರೂ ಪರಸ್ಪರ ವಿರೋಧಿ ಸಿದ್ಧಾಂತ ಪ್ರತಿಪಾದಕರು. ಒಬ್ಬರು ಉತ್ತರ, ಮತ್ತೊಬ್ಬರು ದಕ್ಷಿಣ. ಆದರೆ ಈ ಸಿದ್ಧಾಂತ, ಪಕ್ಷ, ವಿಚಾರಧಾರೆ ಅವರ ವ್ಯಕ್ತಿಗತ ಸ್ನೇಹ, ಪ್ರೀತಿ, ಗೌರವಕ್ಕೆ ಧಕ್ಕೆ ತರಲಿಲ್ಲ. ಲೋಕಸಭೆಯಲ್ಲಿ ಹಿರೇನ್ ಮುಖರ್ಜಿಮಾತಿಗೆ ನಿಂತರೆ, ಯಾರೂ ಅಡ್ಡಿಪಡಿಸುತ್ತಿರಲಿಲ್ಲ. ಹಾಗಂತ ಅವರು ಹೇಳಿzಲ್ಲವನ್ನೂ ಒಪ್ಪಲು ಆಗುತ್ತಿರಲಿಲ್ಲ.
ಆದರೆ ತಮ್ಮ ಪಕ್ಷದ ಸದಸ್ಯರಲ್ಲದೇ, ಬೇರೆಯವರು ಅವರ ಮಾತುಗಳಿಗೆ ಅಡ್ಡಿಪಡಿಸಿದರೆ, ಸ್ವತಃ ವಾಜಪೇಯಿ ಅವರು, ’ಸಂಸತ್ತಿ ನಲ್ಲಿ ಹೇಗೆ ಮಾತಾಡಬೇಕು, ವಿಷಯ ಮಂಡಿಸಬೇಕು, ಯಾವ ರೀತಿಯಲ್ಲಿ ಮಾತಿಗೆ ಸಿದ್ಧರಾಗಿ ಬರಬೇಕು ಎಂಬ ಕಾರಣ ಕ್ಕಾದರೂ ಹಿರೇನ್ ಬಾಬು ಮಾತುಗಳನ್ನು ಕೇಳಿ’ ಎಂದು ಸಹಸದಸ್ಯರಿಗೆ ಹೇಳುತ್ತಿದ್ದರು. ಒಮ್ಮೆ ಲೋಕಸಭೆಯಲ್ಲಿ ಮುಖರ್ಜಿ ಸತತ ಏಳು ಗಂಟೆಗಳ ಕಾಲ ನಿರರ್ಗಳವಾಗಿ ಮಾತಾಡಿದಾಗ ವಾಜಪೇಯಿ ಅವರು, ’ಇಂದು ಹಿರೇನ್ ಬಾಬು ಮಾತಾಡಿದ್ದು  ಲೋಕಸಭೆ ಯಲ್ಲಿ ಸಾರ್ವಕಾಲಿಕ ದಾಖಲೆ. ಅವರು ಆಡಿದ ಮಾತುಗಳನ್ನು ಪ್ರಶಂಸಿಸಲು, ಕನಿಷ್ಠ ಎಂಟು ಗಂಟೆಯಾದರೂ ಬೇಕು’ ಎಂದು ಚಟಾಕಿ ಹಾರಿಸಿದ್ದರು.
ಲೋಕಸಭೆಯಲ್ಲಿ ಪ್ರಮುಖ ವಿಷಯಗಳು ಚರ್ಚೆಯಾಗುವಾಗ ಹಿರೇನ್ ಬಾಬು ಮಾತಾಡಿದರೆ ಎಷ್ಟು ಚೆನ್ನಾಗಿರುತ್ತದೆ ಎಂದು ವಾಜಪೇಯಿ ಅಂದುಕೊಳ್ಳುತ್ತಿದ್ದರಂತೆ. ಹಲವು ಸಂದರ್ಭಗಳಲ್ಲಿ, ನೆಹರು ಅವರನ್ನುದ್ದೇಶಿಸಿ, ’ಪಂಡಿತ್ ಜೀ, ಸದನದಲ್ಲಿ ಹಿರೇನ್ ಬಾಬು ಸುಮ್ಮನೆ ಕುಳಿತಿದ್ಧಾರೆ. ಅವರು ಏನು ಹೇಳುತ್ತಾರೆ ಎಂಬುದನ್ನೂ ಕೇಳೋಣ. ನೀವಾದರೂ ಅವರಿಗೆ ಮಾತಾಡಿ ಎಂದು ಹೇಳಬಾರದೇ ? ಚರ್ಚೆಯಿಲ್ಲದೇ ಯಾವುದನ್ನೂ ಒಪ್ಪಿಕೊಳ್ಳಬಾರದು’ ಎಂದು ವಾಜಪೇಯಿ ಹೇಳುತ್ತಿದ್ದರು.
ಅಂಥ ಸಂದರ್ಭದಲ್ಲಿ ಒಮ್ಮೆ ನೆಹರು ಎದ್ದು ನಿಂತು ಮಾತಾಡುವಂತೆ ಹಿರೇನ್ ಮುಖರ್ಜಿಯವರನ್ನು ಕೋರಿದ್ದರು. ’ನೋಡಿ, ಕಮ್ಯುನಿಸ್ಟರನ್ನು ಮಾತಾಡಿಸಲು ಸಹ, ನಾವು ಜನಸಂಘದವರೇ ಬೇಕು’ ಎಂದಾಗ ಇಡೀ ಸದನ ನಕ್ಕಿತ್ತು. ಮುಖರ್ಜಿಯವರು ಚೆನ್ನಾಗಿ ಮಾತಾಡಿದಾಗಲೆಲ್ಲ ವಾಜಪೇಯಿ ಖುದ್ದಾಗಿ ಹೋಗಿ ಅಭಿನಂದಿಸಿ ಬರುತ್ತಿದ್ದರು. ವಾಜಪೇಯಿಯವರೇ ಇಷ್ಟಪಟ್ಟಿ ದ್ದರು ಎಂದ ಮೇಲೆ ಹಿರೇನ್ ವಾಗ್ಝರಿ ಹೇಗಿದ್ದಿರಬಹುದು ಎಂಬುದನ್ನು ಊಹಿಸಬಹುದು.
2004 ರಲ್ಲಿ, ತಮ್ಮ ತೊಂಬತ್ತೇಳನೇ ವಯಸ್ಸಿನಲ್ಲಿ ಹಿರೇನ್ ಮುಖರ್ಜಿ ನಿಧನರಾದಾಗ, ಅಂದು ವಾಜಪೇಯಿ, ತಮ್ಮ ಮತ್ತು ಅವರ ಒಡನಾಟವನ್ನು ಸುಮಾರು ಎರಡು ಗಂಟೆಗಳ ಕಾಲ ಮೆಲುಕು ಹಾಕಿದ್ದರು ಮತ್ತು ಹಿರೇನ್ ಬಾಬು ಹೇಗೆ ಉದಾತ್ತ ಸಂಸದೀಯ ಪರಂಪರೆಗೆ ಉನ್ನತ ತಳಪಾಯ ಹಾಕಿದ್ದರೆಂಬುದನ್ನು ಬಣ್ಣಿಸಿದ್ದರು ಎಂದು ಜಸ್ವಂತ್ ಸಿಂಗ್ ಬರೆದಿದ್ದಾರೆ. ತಮ್ಮ ಪಕ್ಷದ ಸಿದ್ಧಾಂತಗಳ ಕಡು ವಿರೋಧಿಯಾದ ಕಮ್ಯುನಿಸ್ಟ್ ನಾಯಕ ಮುಖರ್ಜಿ ಬಗ್ಗೆ ವಾಜಪೇಯಿ ಒಮ್ಮೆಯೂ ಲಘುವಾಗಿ, ಉಢಾಫೆಯಿಂದ ಮಾತಾಡಿದ್ದೇ ಇಲ್ಲ ಎಂದು ಅವರು (ಸಿಂಗ್) ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.
ಇಂಥದೇ ಅಭಿಪ್ರಾಯವನ್ನು ಆಡ್ವಾಣಿಯವರೂ ಹೊಂದಿದ್ದರು. ’1952 ರಲ್ಲಿ ಲೋಕಸಭೆಯಲ್ಲಿ ಮಾತಿಗೆ ನಿಂತರೆ ಇಡೀ ಸದನವನ್ನು ಬೆರಗುಗೊಳಿಸುತ್ತಿದ್ದವರು ಇಬ್ಬರು ಮುಖರ್ಜಿಗಳು. ಒಬ್ಬರು ಜನಸಂಘದ ಡಾ.ಶಾಮಪ್ರಸಾದ ಮುಖರ್ಜಿ ಮತ್ತು ಇನ್ನೊಬ್ಬರು ಕಮ್ಯುನಿ ಪಕ್ಷದ ಹಿರೇನ್ ಮುಖರ್ಜಿ. ಇಬ್ಬರೂ ಪ್ರಧಾನಿ ನೆಹರು ಅವರನ್ನು ತಮ್ಮ ಮಾತಿನಿಂದ ಕಟ್ಟಿ ಹಾಕು ತ್ತಿದ್ದರು.’ ಎಂದು ಆಡ್ವಾಣಿ ತಮ್ಮ ಆತ್ಮಕಥನ ’ನನ್ನ ದೇಶ, ನನ್ನ ಜೀವನ’ದಲ್ಲಿ ಬರೆದಿದ್ದಾರೆ. 1968 ರ ಫೆಬ್ರವರಿ 11ರಂದು ಜನಸಂಘದ ಅಧ್ಯಕ್ಷ ಪಂಡಿತ್ ದೀನದಯಾಳ ಉಪಾಧ್ಯಾಯ ಹತ್ಯೆಯಾದಾಗ, ದಿಲ್ಲಿಯ
ರಾಮಲೀಲಾ ಮೈದಾನದಲ್ಲಿ ಸರ್ವಪಕ್ಷಗಳ ನಾಯಕರ ಸಂತಾಪ ಸಭೆಯಲ್ಲಿ, ಅಂದು ಎಲ್ಲರ ಮನಸ್ಸನ್ನು ತಟ್ಟಿದ್ದು ಹಿರೇನ್ ಮುಖರ್ಜಿ ಮಾತುಗಳು. ದೀನದಯಾಳರ ವಿಚಾರಗಳನ್ನು ಕಮ್ಯುನಿಸ್ಟರೂ ಎಷ್ಟು ಗೌರವಿಸುತ್ತಿದ್ದರು ಎಂಬುದನ್ನು ಅವರು ಅನೇಕ ನಿದರ್ಶನಗಳೊಂದಿಗೆ ವಿವರಿಸಿದ್ದರು.
ಅಷ್ಟೇ ಅಲ್ಲ, ಅಂದು ಅವರ ಮಾತುಗಳನ್ನು ಕೇಳಿ, ಸ್ವತಃ ಬಲಪಂಥೀಯರೆಲ್ಲ ತಲೆದೂಗಿದ್ದರು. 1982ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಗ್ಯಾನಿ ಜೈಲ್ ಸಿಂಗ್ ತನ್ನ ಅಧಿಕೃತ ಅಭ್ಯರ್ಥಿಯೆಂದು ಕಾಂಗ್ರೆಸ್ ಘೋಷಿಸಿತು. ಪ್ರತಿಪಕ್ಷಗಳೆ ಸೇರಿ ಒಬ್ಬ ಸರ್ವ ಸಮ್ಮತ ಅಭ್ಯರ್ಥಿಯನ್ನು ನಿಲ್ಲಿಸಲು ತೀರ್ಮಾನಿಸಿದವು. ಪ್ರತಿಪಕ್ಷಗಳಿಂದ ಯಾರನ್ನು ನಿಲ್ಲಿಸಬೇಕು ಎಂದು ಚರ್ಚೆಯಾಗಿ,ಎಡಪಕ್ಷಗಳು ಮತ್ತು ಸೆಕ್ಯುಲರ್ ಪಕ್ಷಗಳು ಹಿರೇನ್ ಮುಖರ್ಜಿ ಅವರ ಹೆಸರನ್ನು ಅಖೈರುಗೊಳಿಸಿದವು. ಈ ಪ್ರಸ್ತಾವನೆಗೆ ಬಿಜೆಪಿ ಯಾವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಕುತೂಹಲವಿತ್ತು.
’ಪ್ರೊ.ಹಿರೇನ್ ಮುಖರ್ಜಿ ರಾಷ್ಟ್ರಪತಿ ಅಭ್ಯರ್ಥಿಯಾಗುವುದಾದರೆ, ನಮ್ಮದೇನೂ ಅಭ್ಯಂತರವಿಲ್ಲ. ನಾವು ಅದನ್ನು ಸ್ವಾಗತಿಸು ತ್ತೇವೆ’ ಎಂದು ಆಡ್ವಾಣಿ ಹೇಳಿದರು. ಇದು ಕಮ್ಯುನಿ ನಾಯಕರಲ್ಲಿ ಅಚ್ಚರಿ ಮೂಡಿಸಿತು. ಆದರೆ ಮುಖರ್ಜಿ ಪ್ರತಿಪಕ್ಷಗಳ ಅಭ್ಯರ್ಥಿ ಆಗಲು ತಾಂತ್ರಿಕ ಕಾರಣ ಎದುರಾಯಿತು. ಮತದಾರರ ಪಟ್ಟಿಯಲ್ಲಿ ಮುಖರ್ಜಿ ಹೆಸರೇ ಇರಲಿಲ್ಲ ಕೊನೆಗೆ’ಎಮರ್ಜೆನ್ಸಿ ಹೀರೋ’ ಜಸ್ಟಿಸ್ ಎಚ್.ಆರ್.ಖನ್ನಾ ಅವರನ್ನು ನಿಲ್ಲಿಸಿದ್ದು ಬೇರೆ ಕತೆ.
ಹಿರೇನ್ ಮುಖರ್ಜಿ ಆಕ್ಸ್‌ಫಡ್ ಕ್ಷನಲ್ಲಿ ಬಿ.ಲಿಟ್ ಮುಗಿಸಿ, ನಂತರ ಬಾರ್-ಅಟ್-ಲಾ ಓದಿದವರು. ಭಾರತಕ್ಕೆ ಮರಳಿದ ಬಳಿಕ ಡಾ.ರಾಧಾಕೃಷ್ಣನ್ ಸಲಹೆ ಮೇರೆಗೆ, ಆಂಧ್ರ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಅನಂತರ ಕೊಲ್ಕೊತಾದ ಸುರೇಂದ್ರ ನಾಥ ಕಾಲೇಜ್ ಮತ್ತು ಕೊಲ್ಕೊತ್ತಾ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ರಾಜಕೀಯ ಶಾಸ್ತ್ರಗಳ ಪ್ರಾಧ್ಯಾಪಕರಾದರು. ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ, ಮಾತು ಮತ್ತು ಬರವಣಿಗೆಯಲ್ಲಿ ಅವರು ಅದ್ಭುತ ಹಿಡಿತ ಸಾಧಿಸಿದ್ದರು. ಇಪ್ಪತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದ ಅವರ ಜತೆ ಜಗಳವಾಡುವುದು ಸಾಧ್ಯವೇ ಇರಲಿಲ್ಲ. ಎಲ್ಲರನ್ನೂ ತಮ್ಮ ಪಾಂಡಿತ್ಯಪೂರ್ಣ ವಿಚಾರಗಳಿಂದ ಸುಮ್ಮನಾಗಿಸುತ್ತಿದ್ದರು.
ನೆಹರು ಅವರ ನೀತಿಗಳನ್ನು ಮುಲಾಜಿಲ್ಲದೇ ಟೀಕಿಸುತ್ತಿದ್ದ ಮುಖರ್ಜಿ, ಸ್ವತಃ ಕಾಂಗ್ರೆಸಿಗರೇ ಕರಗಿಹೋಗುವಂತೆ, ತಲೆದೂಗು ವಂತೆ, ನೆಹರು ಕುರಿತು    ಎಂಬ ಪುಸ್ತಕ ಬರೆದಿದ್ದರು. ಭಾರತೀಯ ಪುರಾತತ್ವ ಇಲಾಖೆ ಯಾವ ರೀತಿ ಕೆಲಸ ಮಾಡಬೇಕು ಎಂಬ ಬಗ್ಗೆ ಅವರು ಸಂಸತ್ತಿನಲ್ಲಿ ಮಾತಾಡಿದ್ದನ್ನು ಕೇಳಿ ಮೆಚ್ಚಿಕೊಂಡ ನೆಹರು, ಮುಖರ್ಜಿ ನೇತೃತ್ವದಲ್ಲಿ ಸಂಸದೀಯ ಸಮಿತಿ ರಚಿಸಿ, ನೂತನ ನೀತಿಯನ್ನು ರೂಪಿಸುವ ಹೊಣೆಗಾರಿಕೆಯನ್ನು ಅವರಿಗೆ ವಹಿಸಿದ್ದರು.
1952 ರಿಂದ 1971ರವರೆಗೆ ಸತತ ಐದು ಬಾರಿಗೆ ಕೊಲ್ಕೊತಾ ಈಶಾನ್ಯ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದ ಮುಖರ್ಜಿ, ಕಮ್ಯುನಿ ಪಕ್ಷ ಎಮರ್ಜೆನ್ಸಿಯನ್ನು ಬೆಂಬಲಿಸಿದ ಪರಿಣಾಮ, 1977 ರಲ್ಲಿ ಸೋತು ಹೋದರು. ಅದಾದ ಬಳಿಕ ಅವರು ಚುನಾ ವಣೆಗೆ ಸ್ಪರ್ಧಿಸಲು ಮನಸ್ಸು ಮಾಡಲಿಲ್ಲ. 2008 ರಲ್ಲಿ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ’ಪ್ರೊಫೆಸರ್ ಹಿರೇನ್ ಮುಖರ್ಜಿ ಸಂಸ್ಮರಣಾ ಸಂಸದೀಯ ಉಪನ್ಯಾಸ ಮಾಲಿಕೆ’ಯನ್ನು ಆರಂಭಿಸಿ, ಸಂಸತ್ತು ಅವರಿಗೆ ಕೃತಜ್ಞತೆ ಸಲ್ಲಿಸಿತು. ತಮ್ಮ ಪಕ್ಷದಲ್ಲಿ ಇಂಥ ನಾಯಕರಿದ್ದರು ಎಂಬುದು ಕಮ್ಯುನಿಸ್ಟರಿಗೂ ಮರೆತು ಹೋಗಿದೆ.
ಕಮ್ಯುನಿಸ್ಟರಾಗಿಯೂ ತಮ್ಮ ಎಷ್ಟೋ ವಿಚಾರಗಳ ಬಗ್ಗೆ ಸಹಮತ ಹೊಂದಿದ್ದರು ಎಂಬುದು ಬಲಪಂಥೀಯರೂ ಮರೆತಿzರೆ. ಹಿರೇನ್ ಮುಖರ್ಜಿ ಬದುಕಿದ್ದಿದ್ದರೆ, ನಾಡಿದ್ದು ನವೆಂಬರ್ 23 ಬಂದರೆ, ಅವರಿಗೆ 113 ವರ್ಷಗಳಾಗುತ್ತವೆ. ಮುಖರ್ಜಿ ವಿಚಾರ ಗಳಿಂದ ಅವರು ನಂಬಿದ್ದ ಪಕ್ಷ ಬಹುದೂರ ಸಾಗಿದೆ. ಇಂಥ ಒಬ್ಬ ಸಂಸದೀಯ ಪಟು ಇದ್ದಿದ್ದರಾ ಎಂಬುದನ್ನು ನಂಬದಕಾಲಘಟ್ಟದಲಿ ನಾವಿದ್ದೇವೆ. ನಮ್ಮ ನಂಬಿಕೆಗಳನ್ನು ಪುನರ್ ಸ್ಥಾಪಿಸಿಕೊಳ್ಳಲಾದರೂ ಇಂಥವರನ್ನು ನೆನೆಯಬೇಕು.