ಅಂಗವೈಕಲ್ಯ ಮೆಟ್ಟಿ ನಿಂತು ಗೆದ್ದವರೆಷ್ಟು ?
ತನ್ನಿಮಿತ್ತ
ಡಾ.ಜಗದೀಶ್ ಮಾನೆ
ಅದ್ಯಾಕೋ ಗೊತ್ತಿಲ್ಲ. ನಮ್ಮ ದೇಶದ ಮಟ್ಟಿಗೆ ಯೋಚಿಸಿ ನೋಡಿದರೆ ಇಲ್ಲಿನ ಬಡತನಕ್ಕೂ, ಅಂಗವೈಕಲ್ಯಕ್ಕೂ ಬಿಡಿಸಲಾಗ ನಂಟಿದೆ ಅನಿಸುತ್ತಿದೆ. ಅನಿಸೋದೇನು ವಾಸ್ತವ ಚಿತ್ರಣ ಹಾಗೇ ಇದೆ. ಅದರಲ್ಲೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲೇ ಅಂಗವಿಕಲರ ಸಂಖ್ಯೆ ಹೆಚ್ಚಿದೆ.
ಇಂಥ ಅಂಗವಿಕಲರ ಕುಟುಂಬಗಳ ಆರ್ಥಿಕ ಸ್ಥಿತಿಯೂ ಶೋಚನೀಯ. ಹುಟ್ಟು ಕುರುಡರು, ಪೋಲಿಯೋ ಪೀಡಿತರು, ತುತ್ತು ಅನ್ನಕ್ಕೆ ಪರಿತಪಿಸುವವರು, ಭಿಕ್ಷಾಟನೆಗೆ ಇಳಿದವರು..! ಈ ಜಗತ್ತಿನಲ್ಲಿ ಕೋಟ್ಯಂತರ ಅಂಗವಿಕಲರಿದ್ದಾರೆ. ಇವರಲ್ಲಿ ಅಂಗ ವೈಕಲ್ಯ ಮೆಟ್ಟಿ ನಿಂತು ಗೆದ್ದವರೆಷ್ಟು? ಬೆರಳೆಣಿಕೆಯಷ್ಟೇ. ಉಳಿದವರು? ಬಡತನದ ಕಾರಣಕ್ಕೋ , ಶಿಕ್ಷಣದಿಂದ ವಂಚಿತರಾಗಿದ್ದಕ್ಕೋ ಪಡಬಾರದ ಕಷ್ಟ ಪಡುತ್ತಾ ಸಮಾಜದಲ್ಲಿ ಬಹಿಷ್ಕೃತರಾಗಿ, ಸರಕಾರದ ನಿರ್ಲಕ್ಷ್ಯಕ್ಕೊಳಗಾಗಿ ದೇವಸ್ಥಾನ, ಬಸ್ನಿಲ್ದಾಣ, ಪಾರ್ಕ್, ರಸ್ತೆ ಬದಿಗಳಲ್ಲಿ ಜೀವಚ್ಛವವಾಗಿ ಕುಳಿತವರನ್ನು, ಮಲಗಿದವರನ್ನು ನಾವೀಗಲೂ ನೋಡಬಹುದು.
ಅಂಗವಿಕಲರು ಕೂಡಾ ನಮ್ಮಂತೆ ಮನುಷ್ಯರೇ. ಅವರಿಗೂ ನಮ್ಮಂತೆ ಭಾವನೆಗಳಿವೆ, ಆಸೆಗಳಿವೆ, ಆಕಾಂಕ್ಷೆಗಳಿವೆ. ಸಾಮರ್ಥ್ಯ ವಿದೆ. ಅವರಲ್ಲಿ ವಿಲ್ ಪವರ್ ಇದೆ. ಅಂಥ ಶಕ್ತಿ ಇದ್ದವರು ಎಂಥಾ ಸಂದಿಗ್ಧ ಪರಿಸ್ಥಿತಿಗಳಲ್ಲಿಯೂ ಸಹ ಮಹೋನ್ನತ ಸಾಧನೆ ಮಾಡಿದವರಿದ್ದಾರೆ, ಸಾಧಿಸಬಲ್ಲವರು ನಮ್ಮ ನಡುವೆ ಆದರ್ಶವಾಗಿದ್ದಾರೆ. ಆದರೆ ಅಂಥ ವಿಶೇಷಚೇತನರನ್ನು ಗುರುತಿಸಿ, ಎಲ್ಲರಂತ ಬದುಕಿ ಬಾಳುವ ವಾತಾವರಣ ಕಲ್ಪಿಸಿಕೊಡಲಾಗದ, ಪ್ರೋತ್ಸಾಹಿಸಲಾಗದ ಸಮಾಜಕ್ಕೆ, ಸರಕಾರಕ್ಕೆ ಕಣ್ಣಿದ್ದೇನುಪ್ರಯೋಜನ? ಮನುಷ್ಯತ್ವ ಇಲ್ಲದ ಮನುಷ್ಯರಿದ್ದೇನು ಪ್ರಯೋಜನ? ಇಂದು ವಿಶ್ವ ಅಂಗವಿಕಲರ ದಿನ. ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಬೇಕು.
ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮಾಹಿತಿ ತಂತ್ರಜ್ಞಾನ, ಮನರಂಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಅವರಿಗೆ ಒಂದು ವೇದಿಕೆ ನಿರ್ಮಾಣವಾಗಬೇಕು. ಈ ವೇದಿಕೆ ಅವರ ಸಾಧನೆಯನ್ನು ಗುರುತಿಸಲು, ಪ್ರೋತ್ಸಾಹಿಸಲು ಸಮಾಜದಲ್ಲಿ ಅವರ ಮಹತ್ವ ಜನರಿಗೆ ತಿಳಿಯುವಂತಾಗಬೇಕೆಂಬ ಉದ್ದೇಶ ದಿಂದಲೇ ಡಿಸೆಂಬರ್ 3ರಂದು ಜಗತ್ತಿನೆಲ್ಲೆಡೆ ವಿಶ್ವ ಅಂಗವಿಕಲ ದಿನವನ್ನಾಗಿ ಆಚರಿಸಲಾಗುತ್ತದೆ.
ಮೂಲತಃ ಈ ದಿನವನ್ನು ಆರಂಭಿಸಿದ್ದು ವಿಶ್ವಸಂಸ್ಥೆ. ಮೊದಲ ಬಾರಿ 1992ರಲ್ಲಿ. ಆರಂಭಿಸಲಾದ ಈ ದಿನಾಚರಣೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಈ ದಿನದಂದು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳ ವಿಶ್ವದಾದ್ಯಂತ ಜರುಗುತ್ತವೆ. ಈ ದಿನದಂದು ವಿಶೇಷ ಚೇತನರ ಸಾಧನೆಗಳನ್ನು ಗುರುತಿಸಲಾಗುತ್ತದೆ. ಸಾಧಿಸಿದವರ ಯಶೋಗಾಥೆಗಳನ್ನು ಜಗತ್ತಿಗೆ ಪರಿಚಯಿಸ ಲಾಗುತ್ತದೆ. ಅಲ್ಲದೆ ಈ ದಿನದಂದು ಅಂಗವಿಕಲರಿಗಾಗಿ, ಅವರನ್ನು ಸ್ವಾವಲಂಬನೆ ಮತ್ತು ಜೀವನಮಟ್ಟ ಸುಧಾರಿಸುವು ದಕ್ಕಾಗಿನ ಕಾರ್ಯಕ್ರಮಗಳು ಎಲ್ಲೆಡೆಯೂ ನಡೆಯುತ್ತವೆ. ಅವರನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮುಖ್ಯವಾಹಿನಿಗೆ ತರಬೇಕೆಂಬುದೆ ಈ ದಿನಾಚರಣೆಯ ಹಿಂದಿನ ಉದ್ದೇಶ.