ತಾಳಿಕೋಟೆ ಯುದ್ಧದ ನಂತರವೂ ಹೋರಾಡಿದ ವಿಜಯನಗರದ ಅರಸ
ಶಶಾಂಕಣ
ಶಶಿಧರ ಹಾಲಾಡಿ
ಹಂಪೆಯನ್ನು ಹಾಳು ಹಂಪೆ ಎಂದು ಬ್ರಿಟಿಷರು ಕರೆದರು. ಅವರ ಹೆಚ್ಚಿನ ವಿಚಾರಗಳನ್ನು ಅನುಕರಣೆ ಮಾಡುವ ನಮ್ಮವರು, ಹಾಳು ಹಂಪೆ ಎಂಬ ‘ವಿಶೇಷಣ’ವನ್ನು ನಿರಂತರವಾಗಿ ಉಪಯೋಗಿಸುತ್ತಲೇ ಬಂದರು.
ಹಾಳು ಹಂಪೆ, ಅಳಿದುಳಿದ ಹಂಪೆ, ರೂಯಿನ್ಸ್‌ ಆಫ್ ಹಂಪಿ ಇವೇ ಮೊದಲಾದ ಶಬ್ದಗಳಿಗೆ ನಮ್ಮವರು ಎಷ್ಟು ಒಗ್ಗಿ  ಹೋಗಿದ್ದೇ ವೆಂದರೆ, 15-16ನೆಯ ಶತಮಾನದಲ್ಲಿ ಇಡೀ ವಿಶ್ವದಲ್ಲೇ ಎರಡನೆಯ ಅತಿ ದೊಡ್ಡ ನಗರ ಎನಿಸಿದ್ದ ಹಂಪೆಯನ್ನು ಆ ರೀತಿ ಕರೆದಾಗ, ಹೆಚ್ಚಿನವರಿಗೆ ಬೇಸರ ಎನಿಸುವುದೇ ಇಲ್ಲ!
ಹಂಪೆಯ ವಿವರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪುಸ್ತಕಗಳು ಸಹ ‘ಹಾಳು ಹಂಪೆ’ ಎಂಬ ಶಬ್ದವನ್ನು ಉಪಯೋಗಿಸು ತ್ತಿವೆ. ಇವುಗಳ ಪೈಕಿ ‘ಉಳಿದ ಹಂಪಿ ಮತ್ತು ಗುರು ಬಿಷ್ಟಪ್ಪಯ್ಯನವರು’ ಎಂಬ ಪುಸ್ತಕವನ್ನು ರಚಿಸಿದ ಲೇಖಕಿ, ಸಂಶೋಧಕಿ ವಸುಂಧರಾ ದೇಸಾಯಿಯವರು ಹಂಪಿಯ ಕುರಿತು ಅಭಿಮಾನವನ್ನು ತೋರಿ, ತುಸು ಭಿನ್ನವಾಗಿ ಕಾಣುತ್ತಾರೆ. ಹಾಳು ಹಂಪೆ ಎಂದು ಕರೆಯುವ ಬದಲು, ಉಳಿದಿರುವ ಹಂಪಿ ಎಂದು ಕರೆಯೋಣ ಎಂಬ ಅವರ ಅಭಿಮತ ನಿಜಕ್ಕೂ ಸಕಾರಾತ್ಮಕ.
1565ರ ಯುದ್ಧದಲ್ಲಿ ವಿಜಯನಗರ ಸೇನೆಯು ಸೋತು ಹೋದ ನಂತರ, ಹಂಪೆಯಲ್ಲಿ ಏನು ಉಳಿಯಿತು ಎಂಬುದನ್ನುಗುರು ತಿಸಿ, ಅಭಿಮಾನ ಪಟ್ಟು ಬೆಲೆಕೊಡೋಣ ಎಂಬ ವಿಚಾರವು ಒಳ್ಳೆಯದೇ. ನಮ್ಮ ನಾಡಿನ ಜನಸಾಮಾನ್ಯರಲ್ಲಿ ಒಂದುತಿಳಿವಳಿಕೆ ಇದೆ. 1565ರ ತಾಳಿಕೋಟೆ ಯುದ್ಧದ ನಂತರ, ವಿಜಯ ನಗರ ಅರಸರು ಹಂಪೆಯನ್ನು ತೊರೆದರು ಮತ್ತು ಆ ನಂತರ ಇಡೀ ಸಾಮ್ರಾಜ್ಯವು ಅನಾಥವಾಯಿತು ಎಂಬ ಅಭಿಪ್ರಾಯ ಅದು. ಈ ತಿಳಿವಳಿಕೆಯ ಮೊದಲ ಭಾಗ ನಿಜ – ಹಂಪೆಯತ್ತಧಾವಿಸುತ್ತಿದ್ದ ಶತ್ರು ಸೈನ್ಯಕ್ಕೆ ಬೆದರಿ, ರಾಜಪರಿವಾರವು ಪೆನುಕೊಂಡೆಗೆ ಸಾಗಿ, ಅಲ್ಲಿಗೆ ರಾಜಧಾನಿಯನ್ನು ಬದಲಿಸಲಾಯಿತು.
ಆದರೆ, ಆ ನಂತರ ಇಡೀ ಸಾಮ್ರಾಜ್ಯವು ಅನಾಥವಾಯಿತು ಎಂಬ ತಿಳಿವಳಿಕೆ ಪೂರ್ತಿ ನಿಜವಲ್ಲ. ತಾಳಿಕೋಟೆ ಯುದ್ಧದ ನಂತರ,ಹಂಪೆಯನ್ನುಪುನರ್ ನಿರ್ಮಿಸಿ, ವಿಜಯನಗರ ಸಾಮ್ರಾಜ್ಯವನ್ನು ಮತ್ತೆ ಕಟ್ಟಲು ಪ್ರಯತ್ನಗಳೇ ನಡೆದಿಲ್ಲ ಎಂಬ ತಿಳಿವಳಿಕೆ ಜನಸಾಮಾನ್ಯರಲ್ಲಿದೆ. ಈ ಹಿನ್ನೆಲೆಯಲ್ಲೇ, ಹಂಪೆಯ ಸ್ಥಿತಿಯನ್ನು ವಿಶ್ಲೇಷಿಸುವ ಕೆಲವು ಟೀಕಾಕಾರರು, ಹಂಪೆಯಲ್ಲಿ ವೈಷ್ಣವ ದೇಗುಲಗಳು ಮಾತ್ರ ನಾಶಗೊಂಡಿವೆ, ಶೈವ ದೇವಾಲಯಗಳು ಮತ್ತು ವಿರೂಪಾಕ್ಷನ ಮಂದಿರವು ಏಕೆ ಸುಸ್ಥಿತಿಯಲ್ಲಿವೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ.
ವಿರೂಪಾಕ್ಷ ದೇಗುಲ ಮಾತ್ರ ಸುಸ್ಥಿತಿಯಲ್ಲಿರುವುದು ಹೇಗೆ ಎಂಬ ಪ್ರಶ್ನೆಯನ್ನೂ ಕೆಲವರು ಎತ್ತಿದ್ದುಂಟು. ಆ ನಂತರದ ದಶಕ ಗಳಲ್ಲಿ, ಹಂಪೆಯನ್ನು ಮತ್ತೆ ಕಟ್ಟುವ ಪ್ರಯತ್ನಗಳು ನಡೆದಿದ್ದವು ಮತ್ತು ಬಿಷ್ಟಪ್ಪಯ್ಯನ ಗೋಪುರ ಎಂಬ ಬೃಹತ್  ನಿರ್ಮಾಣ ವನ್ನು ಮಾಡಿಸಿದ ಬಿಷ್ಟಪ್ಪಯ್ಯನಂತಹ ಕೆಲವು ಹೋರಾಟಗಾರರು ಅಲ್ಲಿ ಪುನರ್ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದರು ಎಂಬ ವಿಚಾರವನ್ನು ಹೆಚ್ಚು ಪ್ರಚಾರಕ್ಕೆ ತರುವ ಅವಶ್ಯಕತೆ ಇದೆ. 1567ರ ಸಮಯದಲ್ಲಿ ಪೆನುಕೊಂಡೆಯಲ್ಲಿ ನೆಲೆಸಿದ್ದ ರಾಜ ತಿರುಮಲರಾಯನೂ ಹಂಪೆಯನ್ನು ಮತ್ತೊಮ್ಮೆ ಕಟ್ಟಲು ಪ್ರಯತ್ನ ನಡೆಸಿದ್ದುಂಟು.
1565ರ ಸೋಲಿನ ನಂತರ, ವಿಜಯ ನಗರ ಸಾಮ್ರಾಜ್ಯವು ಸಾಕಷ್ಟು ಹೊಡೆತ ತಿಂದರೂ, ನಂತರದ ವರ್ಷಗಳಲ್ಲಿ ವಿಜಯನಗರ ಅರಸರು ಹೋರಾಟ ನಡೆಸಿದ್ದರು. ತಾಳಿಕೋಟೆಯ ಯುದ್ಧದಲ್ಲಿ ರಾಜಧಾನಿಯನ್ನೇ ಕಳೆದುಕೊಳ್ಳುವಂತಹ ದೊಡ್ಡಸೋಲನ್ನು ಅನುಭವಿಸಿದ್ದು ನಿಜ. ಆದರೆ, ಆ ನಂತರದ ಅರಸರು ಶಕ್ತಿ ಕುದುರಿಸಿಕೊಂಡು, ತಮ್ಮ ವೈರಿಗಳ ವಿರುದ್ಧ ಸಾಕಷ್ಟು ಹೋರಾಟವನ್ನು ನಡೆಸಿದರು.
ವಿಜಯನಗರ ಸಾಮ್ರಾಜ್ಯದ ರಾಜಧಾನಿಯು ಪೆನುಗೊಂಡೆಗೆ ಬದಲಾದ ನಂತರ, ಗೋಲ್ಕೊಂಡಾ ಮತ್ತು ಬಹಮನಿ ಸುಲ್ತಾನರ ಸೇನೆಯ ವಿರುದ್ಧ ಹೋರಾಟ ನಡೆಸಿದವರಲ್ಲಿ ವೆಂಕಟಪತಿ ರಾಜು ಅಥವಾ ಎರಡನೆಯ ವೆಂಕಟ ಪ್ರಮುಖ. 1565ರಲ್ಲಿಅಳಿಯ ರಾಮರಾಯನು ತಾಳಿಕೋಟೆ ಯುದ್ಧದಲ್ಲಿ ಹತನಾದ ನಂತರ, ತಿರುಮಲ ದೇವರಾಯ (1565-1572) ಮತ್ತು ಒಂದನೇ ಶ್ರೀರಂಗ (1572-1586) ರಾಜ್ಯದ ಚುಕ್ಕಾಣಿ ಹಿಡಿದರು.
ಪೆನುಗೊಂಡೆಯಲ್ಲಿದ್ದುಕೊಂಡು, ಉತ್ತರದಿಂದ ನಿರಂತರವಾಗಿ ಆಕ್ರಮಣ ಮಾಡುತ್ತಿದ್ದ ವೈರಿಪಡೆಯನ್ನು ಎದುರಿಸುವ ದೊಡ್ಡ ಸವಾಲು ಅವರ ಮುಂದಿತ್ತು. ಜತೆಯಲ್ಲೇ, ಕೆಲವು ಪಾಳೇಗಾರರು ಸ್ವತಂತ್ರರಾಗಲು ಬಯಸುತ್ತಿದ್ದರು. ಈ ನಡುವೆ, ಒಂದೊಂದಾಗಿ ಪ್ರಾಂತ್ಯಗಳು ಕೈತಪ್ಪುತ್ತಾ ಹೋದವು. ರಕ್ಷಣಾತ್ಮಕ ಆಡಳಿತ ನಡೆಸುತ್ತಾ, ಶಕ್ತಿಯನ್ನು ಕುದುರಿಸಿಕೊಳ್ಳುವಲ್ಲೇ ಅವರ ಗಮನ ಕೇಂದ್ರೀಕರಿಸಬೇಕಾಯಿತು. ಕೈಲಾದಷ್ಟು ಸಾಮ್ರಾಜ್ಯವನ್ನು ತಮ್ಮ ವಶದಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವ ಅನಿವಾರ್ಯತೆ.
ತಾಳಿಕೋಟೆ ಯುದ್ಧದಲ್ಲಿ ತಮ್ಮ ಪಡೆಯ ಬಹುದೊಡ್ಡ ಸಂಖ್ಯೆಯ ಸೈನಿಕರನ್ನು ಕಳೆದುಕೊಂಡದ್ದರಿಂದ, ಹೊಸ ಸೈನ್ಯವನ್ನು ಕಟ್ಟಿ, ಬೆಳೆಸುವ ಕಾರ್ಯವೂ ಆಗಬೇಕಿತ್ತು. ಕಳೆದುಕೊಂಡ ಸಾಮ್ರಾಜ್ಯದ ಭಾಗಗಳನ್ನು ಮರಳಿ ಪಡೆಯುವಲ್ಲಿ ಸಕಾರಾತ್ಮಕ ಹೆಜ್ಜೆಯಿಟ್ಟ ರಾಜನೆಂದರೆ,  ಎರಡನೆಯ ವೆಂಕಟ ಅಥವಾ ವೆಂಕಟಪತಿರಾಜು.
ತಾಳಿಕೋಟೆ ಯುದ್ಧವಾಗಿ 20 ವರ್ಷಗಳ ನಂತರ ಅಧಿಕಾರಕ್ಕೆ ಬಂದ ವೆಂಕಟಪತಿರಾಜು, 1586ರಿಂದ 1614ರ ತನಕ ರಾಜನಾಗಿದ್ದ. ಮೂರು ದಶಕಗಳ ಆತನ ಆಳ್ವಿಕೆಯು, ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಮರಳಿ ಪಡೆಯುವ ಪ್ರಾಮಾಣಿಕಪ್ರಯತ್ನ ನಡೆಸಿತು. ತಾಳಿಕೋಟೆ ಯುದ್ಧದ ನಂತರ ಎರಡು ದಶಕಗಳ ತನಕ ಶಕ್ತಿ ಕುದುರಿಸಿಕೊಳ್ಳುವ ಪ್ರಯತ್ನ ಮಾಡಿದ ವಿಜಯನಗರ ಸಾಮ್ರಾಜ್ಯವು, ವೆಂಕಟಪತಿ ರಾಜನ ಕಾಲದಲ್ಲಿ, ಕಳೆದುಕೊಂಡಿದ್ದ ಭೂಭಾಗಗಳ್ನು ಮರಳಿ ಪಡೆಯಲು ಪ್ರಯತ್ನನಡೆಸಿತು. ವೆಂಕಟಪತಿ ರಾಜನ ಆಡಳಿತ ಮುಗಿಯುವ ಸಮಯದಲ್ಲಿ, ವಿಜಯನಗರದ ಗಡಿಯು ಉತ್ತರದತ್ತ ಚಲಿಸಿ, ಕೃಷ್ಣಾ ನದಿಯನ್ನು ತಲುಪಿತ್ತು ಎಂಬ ವಿಚಾರವು, ಆತನ ಹೋರಾಟದ ಯಶಸ್ಸನ್ನು ತೋರಿಸುತ್ತದೆ.
ಆ ಒಂದು ಕಾಲಘಟ್ಟದ ಯಶಸ್ಸು, ಐತಿಹಾಸಿ ಕಾಲಮಾನದಲ್ಲಿ ಸೀಮಿತ ಎಂದೇ ಹೇಳಬಹುದಾದರೂ, ವಿಜಯನಗರದ ಅರಸುಮನೆತನವು ಮರಳಿ ತನ್ನ ವೈಭವವನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿತ್ತು ಎಂದು ಇದು ಸೂಚಿಸುತ್ತದೆ.ವೆಂಕಟಪತಿ ರಾಜನು ಅಧಿಕಾರ ವಹಿಸಿಕೊಂಡ ಎರಡೇ ವರ್ಷದಲ್ಲಿ, 1588ರಲ್ಲಿ ನಡೆದ ಪೆನ್ನಾರ್ ಯುದ್ಧವು ಇಲ್ಲಿ ಗಮನಾರ್ಹ. ವಿಜಯನಗರ ಸೈನ್ಯವು ಗೋಲ್ಕೊಂಡಾ ಸೈನ್ಯವನ್ನು ಪೆನ್ನಾರ್ ನದಿಯ ದಡದಲ್ಲಿ ಸೋಲಿಸಿದ ನಂತರ, ಇನ್ನೂ ಉತ್ತರಕ್ಕೆಹೋಗಿ ಕೃಷ್ಣಾ ನದಿಯ ತನಕ ಸಾಮ್ರಾಜ್ಯವನ್ನು ವಿಸ್ತರಿಸಿತು. ಪೆನ್ನಾರ್ ಯುದ್ಧದಲ್ಲಿ ವೈರಿ ಪಡೆಯ ಸುಮಾರು 50,000 ಸೈನಿಕರನ್ನು ವಿಜಯನಗರ ಸೈನಿಕರು ಸಾಯಿಸಿದರು ಎಂದು ದಾಖಲಾಗಿದೆ.
ಮದ್ದುಗುಂಡುಗಳನ್ನು ಬಳಸುತ್ತಿದ್ದ, ಫಿರಂಗಿಗಳನ್ನೂ ಬಳಸುತ್ತಿದ್ದ ಗೋಲ್ಕೊಂಡಾ ಮಿತ್ರಪಡೆಯನ್ನು ಸೋಲಿಸಿದ್ದು ಆಗಿನ ಕಾಲದ ಒಂದು ಅಭೂತಪೂರ್ವ ಸಾಧನೆ. ಗೋಲ್ಕೊಂಡದ ಕುತುಬ್ ಶಾ ಸೈನ್ಯವು 1588ರಲ್ಲಿ ಪೆನುಕೊಂಡೆಯ ಮೇಲೆ ಆಕ್ರಮಣ ನಡೆಸಿದಾಗ, ಅವನನ್ನು ನಿಯಂತ್ರಿಸಲು ವೆಂಕಟಪತಿ ರಾಜು ಅನುಸರಿಸಿದ್ದು ವಿಶಿಷ್ಟ ತಂತ್ರವನ್ನು. ಅದಕ್ಕೂ ಮೊದಲು ಅದೋನಿ, ಗಂಗಡಿಕೋಟ ಮೊದಲಾದ ಕೋಟೆಗಳನ್ನು ಸುಲಭವಾಗಿ ಸೋಲಿಸಿ, ಪೆನುಕೊಂಡೆ ಯನ್ನು ಆ ವೈರಿ ಸೇನೆ ಮುತ್ತಿಗೆ ಹಾಕಿತ್ತು. ಆ ಶಕ್ತಿಯುತ ಸೈನ್ಯವನ್ನು ಒಮ್ಮೆಗೇ ಎದುರಿಸುವುದಕ್ಕಿಂತ, ಕುಟಿಲತೆಗೆ ಕುಟಿಲತೆಯೇ ಮದ್ದು ಎಂಬ ತಂತ್ರವನ್ನುಅನುಸರಿಸಲು ವೆಂಕಟಪತಿರಾಜು ನಿರ್ಧರಿಸಿದ.
ತಾನು ಈಗ ಯುದ್ಧ ಮಾಡುವುದಿಲ್ಲ, ಬದಲಾಗಿ ಸಂಧಾನಕ್ಕೆ ಬರುತ್ತೇನೆ ಎಂಬ ಸಂದೇಶವನ್ನು ಕಳಿಸಲಾಯಿತು. ಗೋವಿಂದ ರಾಜು ತಿಮ್ಮ ಮತ್ತು ಪಾಪಯ್ಯ ಚೆಟ್ಟಿ ಎಂಬ ಇಬ್ಬರು ದಳಪತಿಗಳು ಗೋಲ್ಕೊಂಡ ಸುಲ್ತಾನರ ಬಳಿಗೆ ಸಂಧಾನಕ್ಕೆ ಹೋದರು. ಇವರ ಮಾತುಗಳನ್ನು ನಂಬಿದ ಗೋಲ್ಕೊಂಡದ ಸುಲ್ತಾನ ತುಸು ನಿರಾಳವಾದ. ಆ ಸಮಯದಲ್ಲಿ ಜಗದೇವ ಮೊದಲಾದದಳಪತಿಗಳು ಸುಮಾರು 30,000 ಸೈನಿಕರನ್ನು ರಹಸ್ಯವಾಗಿ ಪೆನುಕೊಂಡೆಯ ಕೋಟೆಯೊಳಗೆ ಸೇರಿಸಿದರು. ತಂಜಾವೂರಿನ ಅಚ್ಯುತಪ್ಪ ನಾಯಕನಿಗೆ ಸಂದೇಶ ಕಳಿಸಿ, ಸೈನ್ಯ ಕಳುಹಿಸುವಂತೆ ಕೇಳಿಕೊಳ್ಳಲಾಯಿತು. ರಘುನಾಥ ನಾಯಕನ ನೇತೃತ್ವದಲ್ಲಿ ಬಂದ ಸೇನಾ ತುಕಡಿಯು, ಗೋಲ್ಕೊಂಡಾ ಸೈನ್ಯದ ಮೇಲೆ ಆಕ್ರಮಣ ಮಾಡಿತು.
ಇತ್ತ ಜಗದೇವನ ಸೈನಿಕರು, ವೈರಿಪಡೆಯ ಮೇಲೆ ಆಕ್ರಮಣ ಮಾಡಿದರು. ಒಮ್ಮೆಗೇ ತಮ್ಮ ಮೇಲೆ ಆಕ್ರಮಣ ನಡೆದದ್ದು ಕಂಡು ಬೆದರಿದ ಗೋಲ್ಕೊಂಡಾ ಸೈನ್ಯವು, ಕಾಲಿಗೆ ಬುದ್ಧಿ ಹೇಳಬೇಕಾಯಿತು. ವೆಂಕಟಪತಿ ರಾಜು ಅಲ್ಲಿಗೆ ಸುಮ್ಮನಾಗಲಿಲ್ಲ.ಇದುವರೆಗೆ ರಕ್ಷಣಾತ್ಮಕ ಹೆಜ್ಜೆಗಳನ್ನು ಅನುಸರಿಸುತ್ತಿದ್ದ ವಿಜಯನಗರ ಸೈನ್ಯವು, ಈಗ ಆಕ್ರಮಣದ ತಂತ್ರವನ್ನು ಅನುಸರಿಸಿತು. ಗೋಲ್ಕೊಂಡಾ ಸೈನ್ಯವನ್ನು ಅಟ್ಟಿಸಿಕೊಂಡು ಹೊರಟಿತು. ಅಲ್ಲಲ್ಲಿ ದಾರಿ ಉದ್ದಕ್ಕೂ ಸಣ್ಣಪುಟ್ಟ ಯುದ್ಧಗಳಾದವು. ಈ ಯುದ್ಧಗಳ ವಿವರಗಳನ್ನು ಬಿಂಬಿಸುವ ತಾಮ್ರಶಾಸನಗಳೂ ದೊರೆತಿವೆ. ಪ್ರತಿ ಘರ್ಷಣೆಯಲ್ಲೂ, ಗೋಲ್ಕೊಂಡಾ ಸೈನ್ಯವು ಸ್ವಲ್ಪ ಸ್ವಲ್ಪವೇ ದುರ್ಬಲ ಗೊಳ್ಳುತ್ತಾ ಹೋಯಿತು. ಗೋಲ್ಕೊಂಡಾದ ರಾಜು ಕುತುಬ್ ಶಾ ಬಹು ಬೇಗನೆ ವಾಪಸಾಗಲು ಉಪಕ್ರಮಿಸಿದ. ಈ ನಡುವೆ ಮಳೆಗಾಲ ಆರಂಭ ವಾಯಿತು.
ಗೋಲ್ಕೊಂಡ ಸೈನ್ಯವು ಮುಂದುವರಿದು ಪೆನ್ನಾ ನದಿ ತೀರಕ್ಕೆ ಬಂದು ತಲುಪಿತು. ಆಗ ಪೆನ್ನಾ ನದಿಯಲ್ಲಿ ಪ್ರವಾಹ. ತಕ್ಷಣನದಿಯನ್ನು ದಾಟಿ, ತನ್ನ ಸಾಮ್ರಾಜ್ಯವನ್ನು ಸೇರಿಕೊಳ್ಳಲು ಗೋಲ್ಕೊಂಡಾ ದೊರೆಗೆ ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಪೆನ್ನಾ ನದಿಯ ದಡದಲ್ಲಿ ಸಿಕ್ಕಿಹಾಕಿಕೊಂಡ ಗೋಲ್ಕೊಂಡಾ ಸೈನ್ಯವು, ತನ್ನನ್ನು ಹಿಂಬಾಲಿಸಿ ಬರುತಿದ್ದ ವೆಂಕಟಪತಿ ರಾಜುವಿನ ಸೈನ್ಯವನ್ನು ಎದುರಿಸುವ ಪ್ರಯತ್ನ ಮಾಡಿತು.
ಸಾಕಷ್ಟು ಫಿರಂಗಿಗಳನ್ನು ಹೊಂದಿದ್ದ ಸೇನೆಯು, ತನ್ನ ರಕ್ಷಣೆಗಾಗಿ ಫಿರಂಗಿ ಗುಂಡುಗಳನ್ನು ಉಡಾಯಿಸ ತೊಡಗಿತು. ಪೆನು ಕೊಂಡೆಯ ಸೈನ್ಯವು ಇದರಿಂದ ತುಸು ಹಾನಿಯನ್ನು ಅನುಭವಿಸಿದರೂ, ಫಿರಂಗಿಗಳ ಹೊಡೆತವು ಕ್ರಮೇಣ ಕಡಿಮೆ ಯಾಗಲೇ ಬೇಕಾಯಿತು. ಆ ಕ್ಷಣವನ್ನು ಕಾಯುತ್ತಿದ್ದ ಪೆನುಗೊಂಡೆಯ ಸೈನ್ಯವು ವೈರಿ ಪಡೆಯ ಮೇಲೆ ಆಕ್ರಮಣ ಮಾಡಿತು. ಆಗ ಗೋಲ್ಕೊಂಡಾ ಸೈನ್ಯವು ಅನುಭವಿಸಿದ ಸೋಲು ಮತ್ತು ನೋವು ಅಪಾರ ಎನ್ನಲಾಗಿದೆ.
ಪೆನ್ನಾರ್ ನದಿಯ ಪ್ರವಾಹವು ವೈರಿಪಡೆಯ ರಕ್ತದಿಂದ ತುಂಬಿ ಹೋಯಿತು ಎಂದು ನಂತರ ರಚಿಸಲಾಗ ತೆಲುಗಿನ ಕಾವ್ಯದಲ್ಲಿವರ್ಣಿಸಲಾಗಿದೆ. ಆ ಯುದ್ಧದಲ್ಲಿ, ಗೋಲ್ಕೊಂಡಾ ಪಡೆಯ ಸುಮಾರು 50,000 ಸೈನಿಕರು ಹತರಾದರು ಎಂದು ಹೇಳಲಾಗಿದೆ. ತನ್ನ ಪಡೆಯು ಸೋಲುವುದನ್ನು ಕಂಡ, ಕುತುಬ್ ಶಾ, ಕಷ್ಟಪಟ್ಟು ನದಿ ದಾಟಿ, ತನ್ನ ರಾಜ್ಯದತ್ತ ಪಲಾಯನ ಮಾಡಬೇಕಾ ಯಿತು.
ಪೆನ್ನಾರ್ ನದಿ ದಂಡೆಯಲ್ಲಿ ಕುತುಬ್ ಶಾ ಸೈನ್ಯವನ್ನು ನಾಶ ಮಾಡಿದ ವೆಂಕಟಪತಿ ರಾಜುವಿನ ಸೇನೆಯು, ಇನ್ನೂ ಮುಂದಕ್ಕೆ ಸಾಗಿ, ಕೃಷ್ಣಾ ನದಿಯ ತನಕ ವೈರಿಯನ್ನು ಅಟ್ಟಿಸಿಕೊಂಡು ಹೋಯಿತು. ಈ ಯುದ್ಧದ ಪ್ರಮುಖ ಸಾಧನೆ ಎಂದರೆ, ವಿಜಯನಗರ ಸಾಮ್ರಾಜ್ಯವು 1565ರ ನಂತರ ಕಳೆದುಕೊಂಡಿದ್ದ ಭಾಗದ ಸಾಕಷ್ಟು ಪಾಲನ್ನು ಮರಳಿ ಪಡೆದದ್ದು. ಜತೆಗೆ, ಸಾಮ್ರಾಜ್ಯದ ಗಡಿಯು ಉತ್ತರಕ್ಕೆ ಚಾಚಿ, ಕೃಷ್ಣಾಾ ನದಿಯ ದಡದ ತನಕ ವಿಸ್ತರಣೆಗೊಂಡಿತು. ಇದಾದ ನಂತರದ ಒಂದೆರಡು ದಶಕಗಳ ಕಾಲ, ವಿಜಯ ನಗರ ಸಾಮ್ರಾಜ್ಯವು ಹೊರಗಿನ ವೈರಿಪಡೆಗಳ ಆಕ್ರಮಣದಿಂದ ಸಾಕಷ್ಟು ರಕ್ಷಣೆ ಪಡೆಯಿತು. ಆದರೆ, ವಿಜಯನಗರ ಅರಸುಮನೆತನದ ಒಳಜಗಳಗಳು, ಅಳಿಯ ರಾಮರಾಯ ಮಾಡಿದ್ದ ಅಧಿಕಾರಿಗಳ ಕುತಂತ್ರ, ವಿವಿಧ ಪ್ರಾಂತ್ಯಗಳ ಸಾಮಂತರು ಸಾಮ್ರಾಜ್ಯದ ವಿರುದ್ಧ ತಿರುಗಿ ಬೀಳಲು ನಡೆಸಿದ ಪ್ರಯತ್ನ ಮೊದಲಾದ ವಿದ್ಯಮಾನಗಳು ಸಾಮ್ರಾಜ್ಯದ ಸುಗಮ ಆಡಳಿತಕ್ಕೆ ತೊಡಕುಗಳನ್ನು ಉಂಟುಮಾಡುತ್ತಿದ್ದವು. ಈ ನಡುವೆ 1592ರಲ್ಲಿ ರಾಜಧಾನಿಯನ್ನು ಪೆನುಕೊಂಡೆಯಿಂದ ಚಂದ್ರಗಿರಿಗೆಬದಲಾಯಿಸಲಾಯಿತು.
ತಿರುಪತಿ ಬೆಟ್ಟಗಳ ತಪ್ಪಲಲ್ಲಿದ್ದ ಈ ಕೋಟೆಯಲ್ಲಿ ಹಿಂದೆ ಕೃಷ್ಣ ದೇವರಾಯನು ತನ್ನ ಬಾಲ್ಯ ಕಳೆದಿದ್ದ. 1604ರಲ್ಲಿ ರಾಜಧಾನಿ ಯನ್ನು ವೆಲ್ಲೂರಿಗೆ ಬದಲಿಸಲಾಯಿತು. ವೆಂಕಟಪತಿರಾಜುವಿಗೆ ಮಕ್ಕಳಾಗದ ಕಾರಣ, ಎರಡನೆಯ ಶ್ರೀರಂಗನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಆರಿಸಬೇಕಾಯಿತು. 1614ರಲ್ಲಿ ವೆಂಕಟಪತಿರಾಜು ಮೃತಪಟ್ಟಾಗ, ಎರಡನೆಯ ಶ್ರೀರಂಗಅಧಿಕಾರಕ್ಕೆ ಬಂದ. ಆದರೆ, ಆ ಸಮಯಕ್ಕಾಗಲೇ, ಅರಸೊತ್ತಿಗೆಯಲ್ಲಿ ಕುಟಿಲ ಕಾರಸ್ಥಾನಗಳು ನಡೆಯಲು ಆರಂಭವಾಗಿದ್ದು, ನಾಲ್ಕೇ ತಿಂಗಳಲ್ಲಿ ಆತ ಸಾಯುವಂತಾಯಿತು. ಜತೆಯಲ್ಲೇ ರಾಜಪರಿವಾರದ ಭೀಕರ ಕೊಲೆ ಆಯಿತು.
ವಿಜಯನಗರ ಸಾಮ್ರಾಜ್ಯದ ನಿಜವಾದ ಪತನ ಈಗ ಆರಂಭವಾಯಿತು. ವೆಂಕಟಪತಿ ರಾಜನ ಉತ್ತರಾಧಿಕಾರಿ ಎರಡನೆಯಶ್ರೀರಂಗನು ಕೇವಲ ನಾಲ್ಕು ತಿಂಗಳುಗಳ ಕಾಲ ಅಧಿಕಾರ ನಡೆಸಿ, ತನ್ನ ಪರಿವಾರದೊಡನೆ ಸಾಯಬೇಕಾಗಿ ಬಂದದ್ದರಿಂದ, ಆ ಹಿಂದಿನ ಮೂರು ದಶಕಗಳ ಹೋರಾಟದ ಫಲವನ್ನು ಅನುಭವಿಸಲು ಆ ಅರಸೊತ್ತಿಗೆಯಿಂದ ಸಾಧ್ಯವಾಗಲಿಲ್ಲ. ವೆಂಕಟಪತಿರಾಜುವಿನ ಸೈನ್ಯವು ಕೃಷ್ಣಾ ನದಿಯ ತನಕ ಸಾಮ್ರಾಜ್ಯ ವಿಸ್ತರಿಸಿದ್ದು ನಿಜವಾದರೂ, ಅದರ ಯಶಸ್ಸನ್ನು ಅರಸೊತ್ತಿಗೆ ಅನುಭವಿ ಸಲು ಆಗಲೇ ಇಲ್ಲ. ಒಳಜಗಳ ಗಳಿಂದಾಗಿ, ಆ ಅರಸೊತ್ತಿಗೆ ವಿಷಣ್ಣವಾಯಿತು.
ಅದೇನೇ ಇದ್ದರೂ, ವೆಂಕಟಪತಿ ರಾಜು ಅಥವಾ ಎರಡನೆಯ ವೆಂಕಟನ ಸಾಹಸವು ಆಗಿನ ಕಾಲಮಾನದಲ್ಲಿ ಅಪೂರ್ವ ವಾದದ್ದು. ತಾಳಿಕೋಟೆ ಯುದ್ಧದಲ್ಲಿ ಕಳೆದುಕೊಂಡಿದ್ದ ಸಾಮ್ರಾಜ್ಯವನ್ನು ಮರಳಿ ಪಡೆಯಲು ಧೀಮಂತ ಹೋರಾಟ ನಡೆಸಿದ ಈತನು, ಸಾಕಷ್ಟು ಭಾಗಗಳನ್ನು ಮರಳಿ ಪಡೆದು, ಗೋಲ್ಕೊಂಡಾ ಸುಲ್ತಾನನ್ನು ಮಣಿಸಿದ್ದ. ಈ ವಿವರಗಳು ಜನಸಾಮಾನ್ಯರಿಗೆ ತಲುಪಬೇಕು. ರಾಜ್ಯಗಳ ಮರು ವಿಂಗಡಣೆಯಿಂದಾಗಿ, ಪ್ರಸಿದ್ಧ ಹಂಪೆಯು ಕರ್ನಾಟಕದಲ್ಲಿ ಉಳಿದು, ಚಂದ್ರಗಿರಿ, ಪೆನುಕೊಂಡೆ, ವೆಲ್ಲೂರುಗಳು ನಮ್ಮ ನೆರೆ ರಾಜ್ಯಗಳಲ್ಲಿ ಹಂಚಿ ಹೋಗಿರುವುದರಿಂದಾಗಿ, ಈ ರಾಜಧಾನಿಗಳ ಇತಿಹಾಸದ ಪಕ್ಷಿನೋಟವನ್ನು ಸಮಗ್ರವಾಗಿ ಗ್ರಹಿಸಲು ತುಸು ತೊಡಕುಗಳಿವೆ.
ಅದನ್ನು ಪರಿಹರಿಸಿಕೊಂಡು, ವಿಜಯನಗರ ಸಾಮ್ರಾಜ್ಯವು, 1565ರ ಸೋಲಿನ ನಂತರವೂ ಕೆಲವು ದಶಕಗಳ ಕಾಲ ಪ್ರತಿ ಹೋರಾಟ ನಡೆಸಿ, ಆ ಅಭಿಯಾನದಲ್ಲಿ ಸಾಕಷ್ಟು ಯಶಸ್ಸನ್ನು ಸಹ ಗಳಿಸಿತ್ತು ಎಂಬ ಸತ್ಯವನ್ನು ಜನಸಾಮಾನ್ಯರು ಅರಿಯ ಬೇಕಾದ ಅವಶ್ಯಕತೆ ಇದೆ.