ಕನ್ನಡದ ರಾಜರತ್ನ ಜಿ.ಪಿ.ರಾಜರತ್ನಂ
ತನ್ನಿಮಿತ್ತ
ಕೆ.ಶ್ರೀನಿವಾಸರಾವ್
ಬಣ್ಣದ ತಗಡಿನ ತುತ್ತೂರಿ, ಕಾಸಿಗೆ ಕೊಂಡನು ಕಸ್ತೂರಿ ಒಂದು ಎರಡು, ಬಾಳೆಲೆ ಹರಡು ನಾಯಿಮರಿ, ನಾಯಿಮರಿ ತಿಂಡಿಬೇಕೆ?ರೊಟ್ಟಿ ಅಂಗಡಿ ಕಿಟ್ಟಪ್ಪ ಎಂಥಾ ಕಾನ್ವೆಂಟ್ ಕಂದಮ್ಮನಿಗೂ ಬಾಲ್ಯದಲ್ಲಿ ಅವರ ತಾಯಂದಿರು ಕಲಿಸುವ ನಿತ್ಯನೂತನ ಶಿಶು ಗೀತೆಗಳಿವು.
ಇದರ ಕರ್ತೃ ಪ್ರಾತಃಸ್ಮರಣೀಯ ಜಿ.ಪಿ.ರಾಜರತ್ನಂರವರು ಹುಟ್ಟಿದ್ದು 5 ಡಿಸೆಂಬರ್ 1904ರಂದು ಚಾಮರಾಜ ನಗರದ ಗುಂಡ್ಲು ಪೇಟೆಯಲ್ಲಿ. ಗುಂಡ್ಲುಪಂಡಿತ ವಂಶದವರೆಂದೇ ಖ್ಯಾತರಾದ ತಂದೆ ಜಿ.ಪಿ. ಗೋಪಾಲಕೃಷ್ಣ ಅಯ್ಯಂಗಾರ್ ಬಡ ಮಾಸ್ತರರು. ತಾಯಿಯ ಮಮತೆ ಕಾಣದೇ ಬೆಳೆದ ‘ರಾಜ ಅಯ್ಯಂಗಾರ್’ ಶಾಲೆಯಲ್ಲಿದ್ದಾಗಲೇ ಮಾಸ್ತರರಿಗೆ ಬೆಣ್ಣೆ ಹಚ್ಚಿ ರಾಜರತ್ನಂ ಆಗಿದ್ದರು.
1930ರಲ್ಲಿ ಕನ್ನಡ ಎಂ.ಎ.ಮುಗಿಸಿ ಶಿಶುವಿಹಾರ, ಕನ್ನಡ ಶಾಲೆಗಳಲ್ಲಿ ಕೆಲಸ. ಆಗಲೇ ಎಲ್ಲರೂ ಹುಬ್ಬೇರಿಸು ವಂತೆ ಜನಪ್ರಿಯ ಶಿಶುಗೀತೆ ಸಂಕಲನ ತುತ್ತೂರಿ ರಚನೆ. ಸರಕಾರಿ ಕೆಲಸಕ್ಕಾಗಿ ಹೈದರಾಬಾದ್, ಚೆನ್ನೈ, ಬೆಂಗಳೂರಿ ನಲ್ಲಿ ಚಪ್ಪಲಿ ಸವೆಸಿದಾಗ ಜನಗಣತಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರು ನಿಮಗೆ ಉಜ್ವಲ ಭವಿಷ್ಯವಿದೆ, ಸಾಹಿತ್ಯಉಪಾಸನೆ ಮಾಡಿ ಎಂದು ಬೆನ್ನು ತಟ್ಟಿದರು.
ಆಗ ಬಂದಿದ್ದು ಸತತ ಬೌದ್ಧ ಸಾಹಿತ್ಯ. ಕನ್ನಡ ಪಂಡಿತರಾಗಿ ಮೈಸೂರು, ಶಿವಮೊಗ್ಗ, ತುಮಕೂರು, ಬೆಂಗಳೂರು ಇತರೆಡೆ ಕೆಲಸ ಮಾಡಿ ವಿದ್ಯಾರ್ಥಿಗಳ ನೆಚ್ಚಿನ ಗುರುಗಳೆನಿಸಿದರು. ಅವರ ದಾಂಪತ್ಯ ಜೀವನ ಸವಿಜೇನಾಗಿರಲಿಲ್ಲ. ಮೊದಲ ಪತ್ನಿ ಲಲಿತಮ್ಮ ಅನಾರೋಗ್ಯದಿಂದ ತೀರಿಹೋದ ನಂತರ ಎರಡನೇ ಪತ್ನಿ ಸೀತಮ್ಮ ಬಂದರೂ ಹೆಚ್ಚು ಕಾಲ ಬಾಳಲಿಲ್ಲ.
ರಾಜರತ್ನಂರ ಪ್ರಗಲ್ಭ ಪ್ರೌಢಿಮೆಯಲ್ಲಿ ದೊರೆತ ಮುಕುಟಗಳು ಅನೇಕ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1969), ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ (1976), ಮೈಸೂರು ವಿ.ವಿ. ಗೌರವ ಡಾಕ್ಟರೇಟ್ (1977), ದೆಹಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ (1978) ಹೀಗೆ ಇನ್ನೂ ಹಲವು. ಅವರ ಸಾಹಿತ್ಯ ಕೃತಿಗಳಲ್ಲಿ ಪ್ರಮುಖವಾದವು ತುತ್ತೂರಿ, ರತ್ನನ್ ಪದಗಳು, ಕಂದನ ಕಾವ್ಯಮಾಲೆ, ಎಂಡ ಕುಡುಕ ರತ್ನ ಇತ್ಯಾದಿ.
ಇವರ ಬ್ರಹ್ಮನಿಂಗೇ ಜೋಡಿಸ್ತೀನಿ ಎಂಡ ಮುಟ್ಟಿದ ಕೈನಾ….. ಕುಡುಕರ ಅಭಿಮಾನದ ಗೀತೆಯಾಗಿಬಿಟ್ಟಿತ್ತು! ಅವರ ಕನ್ನಡಾ ಭಿಮಾನಕ್ಕೆ ಅವರದೇ ಪದ್ಯದ ಈ ಸಾಲುಗಳೇ ಉದಾಹರಣೆ. ನರಕಕ್ ಇಳ್ಸಿ, ನಾಲಗೆಸೀಳ್ಸಿ, ಬಾಯ್ ಒಲಿಸಾಕಿದ್ರೋನು, ಮೂಗ್ನಲ್ ಕನ್ನಡ ಮಾತಾಡ್ತೀನಿ…… ಗಂಟೆ ಬಾರಿಸಿದಂತಹ ಕಂಠ, ಹುರಿಗಟ್ಟಿದ ದೇಹಧಾರ್ಡ್ಯ, ಸಮಚಿತ್ತ ಮನದ ರಾಜರತ್ನಂ ರವರ ಕೃತಿಗಳಲ್ಲಿ ಹಾಸ್ಯಪ್ರಜ್ಞೆ, ಸಮಕಾಲೀನ ಸಮಸ್ಯೆಗಳ ಅಧ್ಯಯನ, ಶೋಷಣೆಯ ವಿರುದ್ಧ, ಜೀವನ ಸಾಂಗತ್ಯಗಳು ಹಾಸು ಹೊಕ್ಕಾಗಿರುತ್ತಿದ್ದವು. ಇಂದಿನ ಅನೇಕ ಎಡ, ಬಲಪಂಥೀಯ, ರಾಜಕಾರಣದಲ್ಲಿ ಮುಳುಗಿರುವ, ಪ್ರಶಸ್ತಿಗಾಗಿ ಹಪಾಹಪಿ ಮಾಡುವ ಸ್ವಾರ್ಥಿ ಲೇಖಕರಿಗೆ ತಮ್ಮನ್ನು ತಾವೇ ಸಾಹಿತ್ಯ ಪರಿಚಾರಕರೆಂದು ಕರೆದುಕೊಂಡ ರಾಜರತ್ನಂರವರು ಮಾದರಿಯಾಗ ಬಲ್ಲರು.
ಡಿಸೆಂಬರ್ 5ರಂದು ಅವರ ಹುಟ್ಟುಹಬ್ಬ ಅವರ ಸಾಧನೆಗೊಂದು ನಮ್ಮ ಚಪ್ಪಾಳೆಯಿರಲಿ.