ರಸ್ತೆ ಗುಂಡಿ ಮುಚ್ಚುವ ಗಂಡು ಕೆಲಸ ಮಾಡುವ ದಾದಾ
ನಾಡಿಮಿಡಿತ
ವಸಂತ ನಾಡಿಗೇರ
ಇದು ಐದು ವರ್ಷಗಳ ಹಿಂದೆ, ಅಂದರೆ 2015 ರಲ್ಲಿ ಮುಂಬೈನಲ್ಲಿ ನಡೆದ ಘಟನೆ. 16 ವರ್ಷದ ಪ್ರಕಾಶ್ ಬಿಲ್ಹೋರೆ ಎಂಬ ಯುವಕ ಸೋದರ ರಾಮ್ ಜೊತೆ ಬೈಕ್‌ನಲ್ಲಿ ಹೊರಟಿದ್ದ. ಆಗಷ್ಟೇ 10 ನೇ ತರಗತಿ ಪರೀಕ್ಷೆ ಪಾಸು ಮಾಡಿದ್ದ ಆತ ಕಾಲೇಜೊಂದರಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿ ವಾಪಸಾಗುತ್ತಿದ್ದ. ಅಷ್ಟೊತ್ತಿಗೆ ಧೋ ಎಂದು ಮಳೆ ಸುರಿಯಲಾ ರಂಭಿಸಿತು. ಆಸರೆಗಾಗಿ ಒಂದೆಡೆ ಇಬ್ಬರೂ ನಿಂತರು. ಮಳೆ ಕಡಿಮೆಯಾಗುತ್ತಿದ್ದಂತೆ ಮತ್ತೆ ಬೈಕ್ ಏರಿ ಪ್ರಯಾಣ ಮುಂದುವರಿಸಿದರು.
ಆದರೆ ಮುಂದೆ ಒಂದು ಕೂಡುರಸ್ತೆಯ ಬಳಿ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಅಲ್ಲಿ ಅವರ ಬೈಕ್ ಗುಂಡಿಗೆ ಇಳಿದಿತ್ತು. ಏನಾಯಿತು ಎಂದು ಗೊತ್ತಾಗುವಷ್ಟರಲ್ಲೇ ಇಬ್ಬರೂ ಬೈಕ್‌ನಿಂದ ಎಸೆಯಲ್ಪಟ್ಟು ದೂರ ಬಿದ್ದರು. ರಾಮ್‌ನ ಹಣೆ ಮತ್ತಿರ ಕಡೆ ತೀವ್ರ ಪೆಟ್ಟು ಬಿದ್ದು ವಿಪರೀತ ರಕ್ತಸ್ರಾವವಾಗುತ್ತಿತ್ತು. ಆದರೆ ಹೆಲ್ಮೆಟ್ ನಿಂದಾಗಿ ಬಚಾವಾಗಿದ್ದ. ಪ್ರಕಾಶ್‌ಗೆ ಗಂಭೀರ ಸ್ವರೂಪದಗಾಯವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ದಾರಿಹೋಕರಾರೂ ಇವರ ನೆರವಿಗೆ ಧಾವಿಸಲಿಲ್ಲ. ಘಟನೆಯ ವಿಡಿಯೊ ಮಾಡುತ್ತಿದ್ದರು. ಫೋಟೊ ತೆಗೆದುಕೊಳ್ಳುತ್ತಿದ್ದರು.
ಹೇಗೋ ಸಾವರಿಸಿಕೊಂಡ ರಾಮ್ ತನ್ನ ಸ್ನೇಹಿತರಿಗೆ ಫೋನ್ ಮಾಡಿ ಪ್ರಕಾಶ್‌ನನ್ನು ಆಸ್ಪತ್ರೆಗೆ ದಾಖಲಿಸಿದ. ಅದೇ ವೇಳೆಗೆ ತಂದೆಗೂ ಕರೆಮಾಡಿದ. ’ಅಪ್ಪಾ, ನಾವು ಬೈಕ್‌ನಿಂದ ಬಿದ್ದುಬಿಟ್ಟೆವು. ಆಸ್ಪತ್ರೆಗೆ ಹೋಗುತ್ತಿದ್ದೇವೆ’ ಎಂದಷ್ಟೇ ತಿಳಿಸಿದ. ಪ್ರಕಾಶ್‌ರ ತಂದೆ ದಾದಾರಾವ್ ಬಿಲ್ಹೋರೆ ಒಂದು ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ಇದರಿಂದ ಶಾಕ್ ಆದರೂ ಸಾವರಿಸಿ ಕೊಂಡು ಆಸ್ಪತ್ರೆಯತ್ತ ಧಾವಿಸಿದರು. ಆದರೆ ಅರ್ಧದಾರಿ ಕ್ರಮಿಸುವಷ್ಟರಲ್ಲಿ ಮತ್ತೆ ಮೊಬೈಲ್ ರಿಂಗಣಿಸಿತು.
ಪ್ರಕಾಶ್ ಮೃತಪಟ್ಟಿದ್ದಾನೆ; ರಾಮ್‌ಗೆ ಗಂಭೀರ ಗಾಯವಾಗಿದೆ. ಜತೆಗೆ ಆಘಾತವಾಗಿದೆ. ಚಿಕಿತ್ಸೆ ಸಾಗಿದೆ ಎಂಬ ಸಮಾಚಾರ ಅದಾಗಿತ್ತು. ಇದರಿಂದ ದಾದಾರಾವ್‌ಗೂ ಆಘಾತವಾದರೂ ತಕ್ಷಣವೇ ಮನಸ್ಸು ಜಾಗೃತವಾಯಿತು. ಪ್ರಕಾಶ್ ಬದುಕಲಿಲ್ಲ. ರಾಮ್ ನನ್ನಾದರೂ ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿದರು.’ಪ್ರಕಾಶ್ ಇನ್ನಿಲ್ಲ ’ಎಂಬ ಸುದ್ದಿಯನ್ನು ಕುಟುಂಬ ಸದಸ್ಯರಿಗೆ ತಿಳಿಸಲಿಲ್ಲ. ರಾಮ್‌ಗೂ ಈ ವಿಷಯ ಗೊತ್ತು ಮಾಡಲಿಲ್ಲ. 24 ಗಂಟೆ ಕಾದರು. ರಾಮ್ ಆರೋಗ್ಯ ಸ್ಥಿರವಾದ ಬಳಿಕವಷ್ಟೇ ಮನೆ ಯವರಿಗೆ ವಿಷಯವನ್ನು ತಿಳಿಸಿದರು. ಆದರೆ ಇದರಿಂದ ತೀರ ಕಂಗೆಟ್ಟವರು ದಾದಾರಾವ್ ಪತ್ನಿ. ’ಈ ವಿಷಯವನ್ನು ನನಗೆ ಮೊದಲೇ ಏಕೆ ತಿಳಿಸಲಿಲ್ಲ ’ಎಂದು ಕೂಗಾಡಿದರು.
’ಬಟ್ಟೆಯಲ್ಲಿ ಸುತ್ತಿದ್ದ ದೇಹ ಪ್ರಕಾಶನದಲ್ಲ. ನನಗೆ ನನ್ನ ಮಗನನ್ನು ತಂದುಕೊಡಿ’ ಎಂದು ಗೋಳಾಡಿದರು. ಅವರನ್ನು ಸಂತೈಸುವುದು ದಾದಾರಾವ್‌ಗೆ ಅಸಾಧ್ಯವಾಗಿತ್ತು. ಪ್ರಕಾಶ್ ಆಗಷ್ಟೇ ಕಾಲೇಜು ಹೊಸ್ತಿಲು ತುಳಿಯುವವನಿದ್ದ. ಆನ್‌ಲೈನ್ ನಲ್ಲಿ ಹೊಸ ಬಟ್ಟೆ ಖರೀದಿ ಮಾಡುವುದಾಗಿ ಹೇಳಿದ್ದ. ಅದೇ ರೀತಿ ಇನ್ನೂ ಏನೇನೋ ಕನಸುಗಳನ್ನು ಕಟ್ಟಿಕೊಂಡಿದ್ದ. ಆತನ ಬಗ್ಗೆತಂದೆತಾಯಿಯರಿಗೂ ಕನಸುಗಳಿದ್ದವು. ಆದರೆ ಒಂದು ಅಪಘಾತ ಆ ಎಲ್ಲರ ಕನಸನ್ನು ಕಸಿದುಬಿಟ್ಟಿತ್ತು. ಪ್ರಕಾಶನ ಬದುಕೂ ಅರಳುವ ಮುನ್ನವೇ ಅಕಾಲಿಕವಾಗಿ ಕಮರಿಹೋಗಿತ್ತು.
’ಪುತ್ರಶೋಕಂ ನಿರಂತರಂ’ ಎಂಬ ಮಾತು ಸರಿ. ಹೋದವರು ಮತ್ತೆ ಬರುವುದಿಲ್ಲ. ಆ ದುಃಖ ಶಾಶ್ವತ. ಆದರೆ ಎಷ್ಟು ದಿನ ಅಂತ ಹೀಗೇ ದುಃಖಿಸುತ್ತ ಕೂಡುವುದು ? ಕಾಲ ಎಲ್ಲವನ್ನೂ ಮರೆಸುತ್ತದೆ ಎಂಬ ಉಕ್ತಿಯಂತೆ ಸಾಮಾನ್ಯವಾಗಿ ಎಲ್ಲರೂ ಅದನ್ನು ಮರೆತು ಬದುಕು ಸಾಗಿಸತೊಡಗುತ್ತಾರೆ. ಹೀಗೆ ರಸ್ತೆ ಅಪಘಾತಗಳಾಗುವುದು ಇದು ಮೊದಲೂ ಅಲ್ಲ. ಇದೇ ಕೊನೆಯೂ ಅಲ್ಲ. ಬಹುತೇಕ ಸಂದರ್ಭದಲ್ಲಿ ಇದೊಂದು ಅಪಘಾತ ಸುದ್ದಿಯಾಗಿ, ಕ್ರೈಮ್ ಸುದ್ದಿಯಾಗಿಯೋ ಪ್ರಕಟವಾಗುತ್ತದೆ.
ಹಾಗೆಯೇ ಮರೆತುಹೋಗುತ್ತದೆ. ಅದೇ ರೀತಿ ದಾದಾರಾವ್ ಮಗನ ಸಾವು ಕೂಡ. ಆದ್ದರಿಂದ ಇಲ್ಲಿ ಸುದ್ದಿ ಅದಲ್ಲ. ನಿಜ ಸುದ್ದಿ ಇನ್ನು ಮುಂದಿದೆ. ದಾದಾರಾವ್ ಬಿಲ್ಹೋರೆಗೆ ಈ ಘಟನೆಯನ್ನು ಅಷ್ಟು ಸುಲಭಕ್ಕೆ ಮರೆಯುವುದು ಸಹಜವಾಗಿ ಆಗಲಿಲ್ಲ.ಹಾಗೆಂದು ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಅಳುತ್ತ ಕೂಡಲಿಲ್ಲ. ಆದರೆ ದಿನಗಳೆದಂತೆ ಅವರ ಮನದಲ್ಲಿ ಒಂದು ನಿರ್ಧಾರ ಮೊಳಕೆಯೊಡೆದಿತ್ತು. ’ಇಲ್ಲ. ಇದಕ್ಕೆ ಏನಾದರೂ ಮಾಡಲೇಬೇಕು. ಇವತ್ತು ನನ್ನ ಮಗ ಸತ್ತಿದ್ದಾನೆ. ನಾಳೆ ಇನ್ನೊಬ್ಬರ ಮಗನೋ, ಮಗಳೋ, ಗಂಡನೋ, ಹೆಂಡತಿಯೋ, ಅಮ್ಮ, ಅಪ್ಪನೋ ಯಾರೋ ಒಬ್ಬರು ರಸ್ತೆಗುಂಡಿಯಿಂದ ಆಗುವ ಈ ಅಪಘಾತಕ್ಕೆ ಬಲಿಯಾಗಬಹುದು. ಇದಕ್ಕೆ ಬೇರೆ ಏನಾದರೂ ಮಾಡಬೇಕು’ ಎಂದು ನಿರ್ಧರಿಸಿದರು.
ಸಮಸ್ಯೆಯನ್ನೇ ಹೇಳುತ್ತ, ಅಳುತ್ತ ಕೂಡುವುದರಲ್ಲಿ ಅರ್ಥವಿಲ್ಲ. ಅದರಿಂದ ಪ್ರಯೋಜನವೂ ಇಲ್ಲ ಎಂದು ಭಾವಿಸಿದ ಅವರು ಬೇರೆ ಏನಾದರೂ ಪರಿಹಾರ ಕಂಡುಹಿಡಿಯಬೇಕು ಎಂದು ಯೋಚಿಸಿದರು. ಅಲ್ಲದೆ ತಡಮಾಡದೆ ತಕ್ಷಣ ಕಾರ್ಯಪ್ರವೃತ್ತ ರಾದರೂ. ಇಟ್ಟಿಗೆ ಪುಡಿ, ಮರಳು, ಜಲ್ಲಿಕಲ್ಲು ಹಾಗೂ ಒಂದು ಸಲಿಕೆ ಸಂಗ್ರಹಿಸಿದರು. ಇವನ್ನೆಲ್ಲ ತೆಗೆದುಕೊಂಡು ರಸ್ತೆಗೆ ಹೋಗಿ ಎಲ್ಲೆಲ್ಲಿ ರಸ್ತೆ ಗುಂಡಿಗಳಿವೆಯೋ ಅಲ್ಲೆಲ್ಲ ಗುಂಡಿಯನ್ನು ಇದರ ಸಹಾಯದಿಂದ ತುಂಬಿದರು.
2015 ರಿಂದ ಇಲ್ಲಿಯವರೆಗೆ 554 ರಸ್ತೆ ಗುಂಡಿಗಳನ್ನು ಅವರು ಮುಚ್ಚಿದ್ದಾರೆ. ಅವರನ್ನು ಅಲ್ಲಿನ ಜನರು ’ಪಾಟ್ ಹೋಲ್ ದಾದಾ ಆಫ್ ಮುಂಬೈ’ ಅಂತ ಕರೆಯುತ್ತಾರೆ. ನಮ್ಮ ಊರಲ್ಲೂ, ನಮ್ಮ ನೆರೆಹೊರೆಯಲ್ಲೂ, ನಾವು ಪ್ರತಿದಿನ ಸಂಚರಿಸುವ ರಸ್ತೆಗಳಲ್ಲೂ ಸಾಕಷ್ಟು ಗುಂಡಿಗಳಿರುತ್ತವೆ. ಆದರೆ ನಾವು ಅದರ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಹೆಚ್ಚೆಂದರೆ ಗೊಣಗುತ್ತೇವೆ, ಹಿಡಿಶಾಪ ಹಾಕುತ್ತೇವೆ. ಹಾಗೆಯೇ ಮುಂದೆ ಸಾಗುತ್ತೇವೆ. ಮತ್ತೂ ಕೆಲವರು ಪಾಲಿಕೆಗೋ, ಪೊಲೀಸರಿಗೋ ಅಥವಾ ಸಂಬಂಧಿಸಿದ ಇತರ ಅಧಿಕಾರಿಗಳಿಗೋ ದೂರು ಕೊಡುತ್ತಾರೆ. ಅವರು ಸ್ಪಂದಿಸುವ ಖಾತರಿ ಇರುವುದಿಲ್ಲ. ಅಷ್ಟು ಮಾಡಿ ಸುಮ್ಮನಾಗುತ್ತಾರೆ.
ಆದರೆ ದಾದಾರಾವ್ ಅವರು ಇದನ್ನು ನೋಡುತ್ತ ಸುಮ್ಮನೆ ಕುಳಿತುಕೊಳ್ಳಲಿಲ್ಲ. ’ನನ್ನ ಮಗ ಸತ್ತ ಎಂದಲ್ಲ. ಆಗಾಗ, ಅಲ್ಲಲ್ಲಿ ಇಂಥ ಪ್ರಕರಣಗಳು ಮರುಕಳಿಸಿದಾಗೆಲ್ಲ ನನ್ನ ಮನ ಮರುಗುತ್ತಿತ್ತು. ಪಾಲಿಕೆ ಅಧಿಕಾರಿಗಳು ತಾವೇ ತಾವಾಗಿ ರಸ್ತೆಗುಂಡಿಗಳನ್ನುಮುಚ್ಚುವುದಿಲ್ಲ. ಗುಂಡಿಯ ಕಾರಣ ಬಿದ್ದು ಮೃತಪಟ್ಟರೆ ಅಥವಾ ಗಾಯಗೊಂಡರೆ ಅಥವಾ ಎಫ್‌ಐಆರ್ ಆದರೆ ಮಾತ್ರ ಗುಂಡಿ ಮುಚ್ಚಲು ಮುಂದಾಗುತ್ತಾರೆ. ಇದನ್ನು ನನಗೆ ನೋಡಲಾಗುವುದಿಲ್ಲ. ಪ್ರತಿಬಾರಿ ಗುಂಡಿಗೆ ಬಿದ್ದು ಯಾರಾದರೂ ಮೃತಪಟ್ಟರೆ ಅಥವಾ ಗಾಯಗೊಂಡರೆ ನನ್ನ ಮಗ ನೆನಪಾಗುತ್ತಾನೆ. ಬೇರೆಯವರಿಗೂ ಈ ಪರಿಸ್ಥಿತಿ ಬಾರದಿರಲಿ ಎಂದು ನಾನೇ ಗುಂಡಿಗಳನ್ನುಮುಚ್ಚಲು ಮುಂದಾಗಿದ್ದೇನೆ’ ಎನ್ನುತ್ತಾರೆ.
’ರಸ್ತೆ ಗುಂಡಿಯನ್ನು ನೀವೇಕೆ ಮುಚ್ಚುವಿರಿ‘ ಎಂದು ಅನೇಕರು ಅನೇಕ ಬಾರಿ ನನ್ನನ್ನು ಕೇಳಿದ್ದಾರೆ. ಅವರಿಗೆ ನಾನು ನೀಡುವ ಉತ್ತರವಿದು’ ನಾನು ನನ್ನ ಮಗನನ್ನು ಕಳೆದುಕೊಂಡೆ. ಇತರರ ಮಕ್ಕಳಿಗೂ ಇದೇ ಗತಿ ಬರಬಾರದು. ಅದಕ್ಕಾಗಿ ಯಾರಿಗೂ ಕಾಯದೆ ನಾನೇ ಸಲಿಕೆ ಸಾಮಗ್ರಿ ಹಿಡಿದು ರಸ್ತೆಗಿಳಿಯುತ್ತೇನೆ.
ಗುಂಡಿಗಳನ್ನು ಮುಚ್ಚುತ್ತೇನೆ. ಇದು ನನ್ನ ಮಗನಿಗೆ ನಾನು ಸಲ್ಲಿಸುವ ಶ್ರದ್ಧಾಂಜಲಿ’ ’ನನ್ನ ಮಗನಂತೂ ಬರಲಿಲ್ಲ. ನನ್ನ ಕೈ ಕಾಲು, ಬಟ್ಟೆ ಧೂಳಾದರೂ ಪರವಾಗಿಲ್ಲ. ಇತರರರ ಮಕ್ಕಳಾದರೂ ಸುರಕ್ಷಿತವಾಗಿ ಮನೆಗೆ ಹೋಗಲಿ ಎಂಬುದು ನನ್ನ ಉದ್ದೇಶ. ಅದಕ್ಕಾಗಿಯೇ ಈ ಕೆಲಸವನ್ನು ಮುಂದುವರಿಸಿದ್ದೇನೆ ’ ಎನ್ನುತ್ತಾರೆ. ಅಪಘಾತದಲ್ಲಿ ಮಗನನ್ನು ಕಳೆದುಕೊಂಡು ಈಗ ಐದು ವರ್ಷ ಕಳೆದರೂ ದಾದಾರಾವ್‌ಗೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ.
’ಪಾಲಿಕೆ ಕಚೇರಿ, ಪೊಲೀಸ್ ಠಾಣೆ, ಕೋರ್ಟ್‌ಗೆ ಅಲೆದಾಡಿದ್ದೇ ಬಂತು. ಮಹಾನಗರ ಪಾಲಿಕೆ ಮತ್ತು ರಸ್ತೆ ನಿರ್ಮಿಸಿದ ಗುತ್ತಿಗೆ ದಾರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾಯಿತು. ಅವರೆಲ್ಲ ಜಾಮೀನು ಪಡೆದು ಹಾಯಾಗಿದ್ದಾರೆ. ಗುಂಡಿಗಳು ಹಾಗೆಯೇ ಇವೆ’ ಎನ್ನುತ್ತಾರೆ ದಾದಾರಾವ್.
ಈ ಘಟನೆ ಮತ್ತು ಪ್ರಕರಣವನ್ನು ಈಗ ಪ್ರಸ್ತಾಪಿಸಿದ ಉದ್ದೇಶ ಏನೆಂದರೆ ಬೆಂಗಳೂರು ಮಹಾನಗರ ಪಾಲಿಕೆ ಈಚೆಗೆ ಒಂದು ಜಾಹೀರಾತು ಕೊಟ್ಟಿದೆ. ರಸ್ತೆ ಗುಂಡಿ ಅಥವಾ ಪಾದಚಾರಿ ಮಾರ್ಗ ಒತ್ತುವರಿಯಿಂದ ಅಪಘಾತ ಸಂಭವಿಸಿ ಸತ್ತರೆ ಅಥವಾಗಾಯಗೊಂಡರೆ ಪರಿಹಾರ ನೀಡುವ ವಿಷಯವನ್ನು ಅದು ಒಳಗೊಂಡಿತ್ತು. ಅದರಲ್ಲಿ ಇದರ ಬಗ್ಗೆ ಎಲ್ಲ ವಿವರಗಳಿವೆ. ರಸ್ತೆ ಗುಂಡಿಗಳಿಂದ ತೊಂದರೆಗೆ ಒಳಗಾಗುವವವರಿಗೆ ಪರಿಹಾರ ನೀಡುವ ಮಾತನಾಡುವ ಪಾಲಿಕೆ, ರಸ್ತೆಗಳನ್ನು ಗುಂಡಿಮುಕ್ತ ಮಾಡಲು ಏಕೆ ಆಸಕ್ತಿ ವಹಿಸುವುದಿಲ್ಲ. ಅಥವಾ ಈ ನಿಟ್ಟಿನಲ್ಲಿ ಏಕೆ ಕ್ರಮ ಕೈಗೊಳ್ಳುವುದಿಲ್ಲ ಎಂಬುದೇ ಚಿದಂಬರ ರಹಸ್ಯ.ಹಾಗೆಂದು ಇದು ಹೊಸ ಸಮಸ್ಯೆಯೂ ಅಲ್ಲ. ಪರಿಹರಿಸಲಾಗದ ಸಮಸ್ಯೆಯೂ ಇಲ್ಲ.
ಇಲ್ಲವೆ ಇದನ್ನು ನಿರ್ವಹಿಸಲು ಸಿಬ್ಬಂದಿ ಅಥವಾ ಹಣಕಾಸಿನ ಕೊರತೆ ಇದೆ ಎಂದೇನೂ ಅಲ್ಲ. ಇರುವುದು ಇಚ್ಛಾಶಕ್ತಿಯ ಕೊರತೆ.ನಿರ್ಲಕ್ಷ್ಯ ಇಲ್ಲವೆ ಅಸಡ್ಡೆ. ’ಅಂಗೈ ಹುಣ್ಣಿಗೆ ಕನ್ನಡಿ ಏಕೆ’ ಎಂಬ ಮಾತಿನಂತೆ ರಸ್ತೆಗುಂಡಿಗಳ ಬಗ್ಗೆ ಯಾರೂ ದೂರು ಕೊಡುವ ಅವಶ್ಯಕತೆಯೇ ಇಲ್ಲ. ಅದು ಕಣ್ಣಿಗೇ ಕಾಣುತ್ತದೆ. ಆದರೆ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಾರೆ. ಹದಿನೈದುದಿನಗಳೊಳಗಾಗಿ ರಸ್ತೆಗುಂಡಿಗಳನ್ನು ಮುಚ್ಚುವುದಾಗಿ ಪ್ರಕಟಿಸುತ್ತಾರೆ. ಆದರೆ ಎಷ್ಟು ಗುಂಡಿಗಳಿಗೆ ಮುಕ್ತಿ ದೊರೆಯವುದೋ ಯಾರಿಗೂ ಗೊತ್ತಾಗುವುದಿಲ್ಲ.
ರಸ್ತೆಗಳನ್ನು ನಿರ್ವಹಿಸುವ ಗುತ್ತಿಗೆದಾರರನ್ನು ಗಟ್ಟಿಯಾಗಿ ಕೇಳುವ ತಾಕತ್ತು ಕೂಡ ಇವರಿಗೆ ಇರುವುದಿಲ್ಲ. ಇಲ್ಲದಿದ್ದರೆ ರಸ್ತೆಗಳು ಇಷ್ಟೊಂದು ಕೆಟ್ಟದಾಗಿ ಯಾಕಿರಬೇಕು ಹೇಳಿ ? ರಸ್ತೆಗಳು ಕೆಟ್ಟದಾಗಿರುವುದಕ್ಕೆ ಕಾರಣ ಅವುಗಳ ನಿರ್ಮಾಣ ಕಳಪೆಯಾಗಿರುವುದೇ ಆಗಿದೆ. ರಸ್ತೆ ಕಾಮಗಾರಿಗೆ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸದಿರುವುದು, ಪ್ರಮಾಣಕ್ಕೆ ಅನುಗುಣವಾಗಿ ರಸ್ತೆ ನಿರ್ಮಿಸ ದಿರುವುದು – ಇವೇ ಮೊದಲಾದ ಕಾರಣಗಳಿಂದಾಗಿ ರಸ್ತೆ ನಿರ್ಮಾಣ ಕಾಮಗಾರಿ ಸರಿಯಾಗಿರುವುದಿಲ್ಲ. ಹೀಗಾದಾದ ರಸ್ತೆಗಳು ಬೇಗ ಹಾಳಾಗುತ್ತವೆ.ಇಷ್ಟಕ್ಕೂ ಇಂಥ ಕಳಪೆ ಕಾಮಗಾರಿಯಲ್ಲಿ ಭ್ರಷ್ಟಾಚಾರದ ಕೈವಾಡವೂ ದೊಡ್ಡದಾಗಿರುತ್ತದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ರಸ್ತೆಗುಂಡಿಗಳ ಕಾರಣದಿಂದ ಉಂಟಾದ ಅಪಘಾತಗಳಲ್ಲಿ 11,386 ಜನರು ಮೃತಪಟ್ಟಿದ್ದಾರೆ ಎನ್ನುತ್ತವೆ ಸರಕಾರಿ ಅಂಕಿಅಂಶಗಳು.
ಇದರಲ್ಲಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 189 ಸಾವು ಸಂಭವಿಸಿದ್ದು 13 ನೇ ಸ್ಥಾನದಲ್ಲಿದೆ. ಇದು ಸಾವಿನ ಸಂಖ್ಯೆಯಾಯಿತು. ಆದರೆ ಗಾಯಗೊಂಡವರ ಸಂಖ್ಯೆೆ ದೊಡ್ಡದಾಗಿರುತ್ತದೆ. ಇದರಿಂದ ಉಂಟಾಗುವ ದೈಹಿಕ, ಮಾನಸಿಕ ನೋವು, ಆಸ್ಪತ್ರೆ ಖರ್ಚು, ಕೋರ್ಟು ಕಚೇರಿ ಅಲೆದಾಟ ಇವನ್ನೆಲ್ಲ ಯಾರೂ ಗಮನಿಸುವುದಿಲ್ಲ. ಹಾಗೆ ಪರಿಗಣಿಸಿದರೆ ಇದೊಂದು ಗಂಭೀರ ಸಮಸ್ಯೆೆಯೇ. ಹಾಗೆಂದು ಈ ಸಮಸ್ಯೆೆಯನ್ನು ಕೇಳುವವವರೇ ಇಲ್ಲ ಎಂದೇನೂ ಇಲ್ಲ.
ಅನೇಕಾನೇಕ ಅಪಘಾತ ಪ್ರಕರಣಗಳು ಕೋರ್ಟ್ ಮೆಟ್ಟಿಲೇರುತ್ತವೆ. ಅವುಗಳನ್ನೆಲ್ಲ ಪರಿಶೀಲಿಸಿ ನ್ಯಾಯಾಲಯಗಳು ಸೂಕ್ತ ತೀರ್ಪುಗಳನ್ನು ನೀಡಿವೆ. ಆ ಪೈಕಿ’ ಕೆಟ್ಟ ರಸ್ತೆಗಳು ಹಾಗೂ ಫುಟ್‌ಪಾತ್ ನಿಯಮ ಉಲ್ಲಂಘನೆ’ ಕುರಿತಾದ ತೀರ್ಪು ಮಹತ್ವದ್ದು. ಒಳ್ಳೆಯ ರಸ್ತೆ ಹಾಗೂ ಫುಟ್‌ಪಾತ್ ಇವು ಜನರ ಮೂಲಭೂತ ಹಕ್ಕು ಎಂದು ಕೋರ್ಟ್ ಹೇಳಿದೆ.
ರಸ್ತೆ ಸುರಕ್ಷತೆಗಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವೂ ಹಲವಾರು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಅದರ ಒಂದು ಭಾಗವಾಗಿ 1988ರ ಮೋಟಾರು ವಾಹನ ಕಾಯಿದೆಗೆ ತಿದ್ದುಪಡಿ ತರಲು ಮುಂದಾಗಿದೆ. ಇದನ್ನು ’ಮೋಟಾರ್ ಟ್ರಾನ್ಸ್‌‌ಪೋರ್ಟ್ಮತ್ತು ಸೇಫ್ಟಿ ಬಿಲ್’ ಎಂದು ಕರೆಯಲಾಗಿದೆ. ಅಂದರೆ ಹೊಸ ಕಾಯಿದೆಯಲ್ಲಿ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದೆ. ರಸ್ತೆಗುಂಡಿ ಗಳಿಂದ ಮೃತಪಟ್ಟರೆ ಇಲ್ಲವೆ ಗಾಯಗೊಂಡರೆ ಪರಿಹಾರ ನೀಡಬೇಕು ಎನ್ನುವುದು ಇದರಲ್ಲಿರುವ ಪ್ರಮುಖ ಅಂಶ. ಈ ಕಾಯಿದೆಯ ಆಧಾರದಲ್ಲಿಯೇ ಇದೀಗ ಬೆಂಗಳೂರು ಮಹಾನಗರ ಪಾಲಿಕೆಯು ಪರಿಹಾರ ಕುರಿತಾದ ಜಾಹೀರಾತನ್ನು ಪ್ರಕಟಿ ಸಿದ್ದು. ಆದರೆ ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದು ಇನ್ನೂ ಗೊತ್ತಿಲ್ಲ.
ಆದರೆ ಅಧಿಕಾರಿಗಳು ನಮ್ಮಂತೆಯೇ ಎಂಬುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ. ನಾವು ಸಾರ್ವಜನಿಕರು ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದರೆ ಸಮಸ್ಯೆಗೆ ಪರಿಹಾರ ಸುಲಭವಾಗಬಹುದು. ಆದರೆ ನಾವು ಎಂದಿನಂತೆ ಉದಾಸೀನ ಮನೋಭಾವ ಪ್ರದರ್ಶಿಸಿದರೆ ಅಧಿಕಾರಿಗಳಿಗೆ ಸದರ ಕೊಟ್ಟಂತಾಗುತ್ತದೆ.
ರಸ್ತೆಗಳ ವಿಚಾರವನ್ನೇ ತೆಗೆದುಕೊಡರೆ ನಾವು ಮಾಡ ಬಹುದಾದ ಕೆಲಸಗಳು ಇವು,
*ರಸ್ತೆ ಗುಂಡಿಗಳನ್ನು ಕಂಡಾಗ ಸಂಬಂಧಪಟ್ಟವರ ಗಮನಕ್ಕೆ ತರಬೇಕು.*ಅವರು ಸ್ಪಂದಿಸದಿದ್ದಾಗ ದೂರು ಕೊಡಲು ಹಿಂಜರಿಯಬಾರದು.*ದಾದಾರಾವ್ ಥರ ಅಲ್ಲದಿದ್ದರೂ ರಸ್ತೆಗಳ ನಿರ್ವಹಣೆಯಲ್ಲಿ ನಮ್ಮ ಪಾತ್ರವೂ ಇದೆ ಎಂಬುದನ್ನು ಮನಗಾಣುವುದು*ಕಾಯಿದೆ, ಕಾನೂನುಗಳನ್ನು ಅರಿತುಕೊಳ್ಳುವುದು.*ಈಗ ಬಿಬಿಎಂಪಿ ಹೊರಡಿಸಿರುವ ಪರಿಹಾರ ಕುರಿತಾದ ಪ್ರಕಟಣೆಯ ಉಪಯೋಗ ಪಡೆಯುವುದು.
ಒಟ್ಟಿನಲ್ಲಿ ಸುಗಮ ಸಂಚಾರಕ್ಕೆ ರಸ್ತೆಗಳು ಉತ್ತಮವಾಗಿರಬೇಕು. ರಸ್ತೆ ಹಾಳಾದರೆ ಅದರಿಂದ ಸಮಯ ಹಾಳು, ವಾಹನಗಳಿಗೆ ಸಮಸ್ಯೆ, ಆರ್ಥಿಕ ನಷ್ಟವಾಗುತ್ತದೆ. ಕೊನೆಗೆ ಅಪಘಾತದಿಂದ ಸಾವು ನೋವು ಕೂಡ ಸಂಭವಿಸುತ್ತದೆ. ರಸ್ತೆಗಳು ಸಂಚಾರಸಾಧನಗಳಾಗಲಿ, ಆದರೆ ಸಂಚಕಾರ ತರದಿರಲಿ.
ನಾಡಿಶಾಸ್ತ್ರಅವರಿಗಾದರೆ ನನಗೇನು ಎನ್ನದಿರಿನಮಗೂ ಆದೀತೆಂಬುದ ಅರಿಯಿರಿಇಲ್ಲವಾದರೆ ಹಾಗೇ ಉಳಿವುದು ವರಿಇದಕೆ ಆಸ್ಪದವನ್ನು ಕೊಡದಿರಿ