ಆರ್ಥಿಕ ಬೆಳವಣಿಗೆ ಉದ್ಯೋಗಸ್ಥ ಮಹಿಳೆಯರಿಗೆ ಸಿಹಿಸುದ್ದಿಯೇ?
ಸಂಡೆ ಸಮಯ
ಸೌರಭ ರಾವ್, ಕವಯತ್ರಿ, ಬರಹಗಾರ್ತಿ
ಭಾರತದಲ್ಲಿ ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಈ ವರ್ಷ ಎರಡು ಮಹತ್ವಪೂರ್ಣ ಘಟನೆಗಳ ವಾರ್ಷಿಕೋತ್ಸವ ವಿದೆ. ಒಂದು, ಮಹಿಳೆಯರ ಪರವಾಗಿ ಸಂವೇದನಾಶೀಲ ಕಾರ್ಯನೀತಿಗಳ ಮೇಲೆ ಕೇಂದ್ರೀಕೃತವಾದ ಭಾರತದ ಮಹಿಳೆಯರಸ್ಥಿತಿಗತಿಯನ್ನು ಅಧ್ಯಯನ ಮಾಡಲು ರಚಿಸಲಾದ ಸಮಿತಿ (ಸಿಎಸ್‌ಡಬ್ಲ್ಯೂಐ) ‘ಟುವರ್ಡ್ಸ್ ಈಕ್ವಾಲಿಟಿ’ (ಸಮಾನತೆಯ ದಿಕ್ಕಿನಲ್ಲಿ) ಎಂಬ ವರದಿಯನ್ನು ಸಂಯುಕ್ತ ರಾಷ್ಟ್ರಗಳ ಸಂಘಟನೆಗೆ ಸಲ್ಲಿಸಿ 15 ವರ್ಷಗಳು ಕಳೆದಿವೆ.
ಈ ವರದಿ ಲಿಂಗ ಸಮಾನತೆಯ ಮೇಲೆ ಹೊಸ ದೃಷ್ಟಿಕೋನವನ್ನು ಪರಿಚಯಿಸಿತ್ತು. ಎರಡನೆಯದಾಗಿ, ಮಹಿಳೆಯರ ಪರಿಸ್ಥಿತಿ ಯನ್ನು ಪರಿಶೀಲಿಸಲು ಮತ್ತು ರಾಜ್ಯಗಳ ನೇತೃತ್ವದಲ್ಲಿ ಸಶಕ್ತೀಕರಣಕ್ಕೆ ಒಂದು ಮಾನದಂಡವಾದ ಬೇಜ್ಹಿಂಗ್  ಕಾನೂನು ರೀತ್ಯಾ ಕ್ರಮದ ವೇದಿಕೆಗೆ (ಬೇಜ್ಹಿಂಗ್ ಪ್ಲಾಟ್ ಫಾರ್ಮ್ ಫಾರ್ ಆಕ್ಷನ್) 25 ವರ್ಷ ಸಂದಿದೆ.
ಈ ನಿಟ್ಟಿನಲ್ಲಿ, ಭಾರತದಲ್ಲಿ ಮಹಿಳೆಯರ ಉದ್ಯೋಗದ ಸ್ಥಾನಮಾನ, ಪ್ರಸ್ತುತ ಕೋವಿಡ್ ಪರಿಸ್ಥಿತಿಯ ಪರಿಣಾಮ, ಮತ್ತು ಮಹಿಳೆಯರ ದುಡಿಮೆಗೆ ಸಂಬಂಧಿಸಿದ ಹೊಸ ಕೇಂದ್ರದ ಕಾರ್ಮಿಕ ಮಸೂದೆಗಳನ್ನು ಈ ಲೇಖನ ಅವಲೋಕಿಸುತ್ತದೆ. ಭಾರತದ ಆರ್ಥಿಕ ಬೆಳವಣಿಗೆ, ಜನನ ಪ್ರಮಾಣದಲ್ಲಿ ಇಳಿತ, ಮತ್ತು ಹೆಣ್ಣುಮಕ್ಕಳ ಶಿಕ್ಷಣದ ಏಳಿಗೆಗೂ, ಮಹಿಳೆಯರ ಉದ್ಯೋಗ ಪ್ರವೃತ್ತಿಗೂ ತಾಳೆಯಿಲ್ಲ. 2004 ಮತ್ತು 2018ರ ನಡುವೆ ಶೈಕ್ಷಣಿಕ ಕ್ಷೇತ್ರದಲ್ಲಿ ಲಿಂಗಭೇದ ಕಡಿಮೆಯಾಗಿದ್ದರೂ, ಆ ಬೆಳವಣಿಗೆ ಉದ್ಯೋಗ ರಂಗದಲ್ಲಿ ಪ್ರತಿಫಲಿಸಿಲ್ಲ. ಮಹಿಳೆಯರು ಉದ್ಯೋಗಸ್ಥರಾಗಿರುವ ಪ್ರಮಾಣ 1950ರಿಂದಲೂ ಇಳಿಕೆಯಾಗುತ್ತಲೇ ಬಂದಿದ್ದು, ಈ ಹದಿನಾಲ್ಕು ವರ್ಷಗಳು ಆ ಸಂಖ್ಯೆ ಅತ್ಯಂತ ಕಡಿಮೆಯಾಗಿರುವ ಕಾಲಾವಧಿಗಳಲ್ಲಿ ಒಂದು ಎಂದು ತೋರಿಸು ತ್ತದೆ.
ಇತ್ತೀಚಿಗೆ ಬಿಡುಗಡೆಯಾದ ಆವರ್ತಕ ಕಾರ್ಮಿಕ ಬಲದ ಸಮೀಕ್ಷೆ (ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ – ಪಿಎಲ್ಎಫ್‌ಎಸ್), 2018-19ರ ಪ್ರಕಾರ ಪುರುಷರ ಕಾಯಂ ಉದ್ಯೋಗದ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ. ಆದರೆ ಮಹಿಳೆಯರ ಉದ್ಯೋಗದ ಪ್ರಮಾಣ ಅದಕ್ಕಿಂತಲೂ ಇಳಿಮುಖವಾಗಿದ್ದು, 2011 ಮತ್ತು 2019ರ ನಡುವೆ ಗ್ರಾಮೀಣ ಪ್ರದೇಶ ಗಳಲ್ಲಿ ಶೇ. 35.8ರಿಂದ ಶೇ. 26.4ಕ್ಕೆ ಇಳಿದಿದ್ದು, ಮತ್ತು ನಗರ ಪ್ರದೇಶಗಳಲ್ಲಿ ಸುಮಾರು ಶೇ. 20.4ರಷ್ಟರಲ್ಲೇ ಸ್ಥಗಿತಗೊಂಡಿದೆ. ಇದಲ್ಲದೇ, ವಿಶ್ವ ಆರ್ಥಿಕ ವೇದಿಕೆ (ವಲ್ಡರ್ ಇಕನಾಮಿಕ್ ಫೋರಮ್) ಜಾಗತಿಕ ಲಿಂಗ ಭೇದ ವರದಿಯ ಪ್ರಕಾರ, ಜಗತ್ತಿನ 153
ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಅವಕಾಶಗಳ ಹಿನ್ನೆಲೆಯಲ್ಲಿ ಭಾರತ 149ನೇ ಸ್ಥಾನ ದಲ್ಲಿದೆ. 2019ರ ಆಕ್ಸ್ ಫ್ಯಾಮ್ ವರದಿಯೊಂದರ ಪ್ರಕಾರ ಉದ್ಯೋಗ ವೇತನದಲ್ಲಿ ಲಿಂಗ ತಾರತಮ್ಯ ಏಷ್ಯಾ ಖಂಡದಲ್ಲಿ ಅತೀ ಹೆಚ್ಚು ಕಂಡುಬಂದಿದ್ದು, ಸಮಾನ ಅರ್ಹತೆ ಇದ್ದರೂ ಮತ್ತು ಸಮಾನ ಕೆಲಸ ಮಾಡಿದರೂ ಮಹಿಳೆಯರ ವೇತನ ಪುರುಷರಿಗಿಂತ ಶೇ.34ರಷ್ಟು ಕಡಿಮೆಯಿದೆ.
1976ರ ಭಾರತದ ಸಮಾನ ವೇತನ ಅಧಿನಿಯಮ (ಈಕ್ವಲ್ ರೆನ್ಯೂಮರೇಷನ್ ಆಕ್ಟ್‌) ಭರವಸೆಗಳ ಹೊರತಾಗಿಯೂ, ಈ ಪರಿಸ್ಥಿತಿ ಉದ್ಯೋಗ ಕಾರ್ಯಪಡೆಗಳಲ್ಲಿ ಹೆಂಗಸರ ಭಾಗವಹಿಸುವಿಕೆಯನ್ನು ಕುಂಠಿತಗೊಳಿಸುತ್ತದೆ. ಭಾರತದ ಅನೌಪಚಾರಿಕ ಅರ್ಥ ವ್ಯವಸ್ಥೆಯಲ್ಲೂ ಮಹಿಳೆಯರ ಸಂಖ್ಯೆ ಅಸಮಪ್ರಮಾಣದಲ್ಲೇ ಇದೆ, ಮತ್ತು ಈ ಹೆಂಗಸರ ಸಂಖ್ಯೆಯಲ್ಲೂ ಅನೇಕರು ಬಹಳ ಅನಿಶ್ಚಿತತೆ ಇರುವ, ಕಡಿಮೆ ವೇತನದ ಕೆಲಸಗಳಲ್ಲಿದ್ದಾರೆ.
ಸಂಶೋಧನಾ ವಿಶ್ಲೇಷಣಕಾರ್ತಿ ಶೈನೀ ಚಕ್ರಬೊರ್ತಿಯವರ ಪ್ರಕಾರ ವ್ಯವಸಾಯ ಕ್ಷೇತ್ರದಲ್ಲಿ ಶೇ. 60ರಷ್ಟು ಕೆಲಸಗಾರರು ಮಹಿಳೆಯರು. ಈ ಸಂಪೂರ್ಣ ಅನೌಪಚಾರಿಕ ಕ್ಷೇತ್ರದಲ್ಲಿ ಭೂಮಾಲೀಕತ್ವವೇ ಇರದ ಕೆಲಸಗಾರರೇ ಹೆಚ್ಚಾಗಿದ್ದು, ಅವರಿಗೆ ಅಧಿಕೃತ ಸಾಲದ ಸಹಾಯವಾಗಲೀ, ಸಬ್ಸಿಡಿ ಸೌಲಭ್ಯಗಳಗಲೀ ಇಲ್ಲ. ಕೃಷಿಗೆ ಬಳಸಬೇಕಾದ ಸಲಕರಣೆಗಳ ಸೌಲಭ್ಯವೂ ಕಡಿಮೆಯಿದ್ದು ಅವರು ಹೊಂದಿರುವ ಆಸ್ತಿಪಾಸ್ತಿಯ ಪರಿಸ್ಥಿತಿಯೂ ಹೀನಾಯವಾಗಿದೆ. ಇಂಡಿಯಾ ಸ್ಪೆಂಡ್ ಸಂಶೋಧನೆ ಯೊಂದರ ಪ್ರಕಾರ 2019ರಲ್ಲಿ ಭೂಮಿ ಉಳುವ ಮಹಿಳೆಯರಲ್ಲಿ ಕೇವಲ ಶೇ.13ರಷ್ಟು ಭೂಮಾಲೀಕರಾಗಿದ್ದರು.
ನಿರ್ಮಾಣ ಕ್ಷೇತ್ರದಲ್ಲೂ (ಬಹುತೇಕ ಸಂಪೂರ್ಣ ಅನೌಪಚಾರಿಕವಾಗಿ) ಕೇವಲ ಶೇ.14ರಷ್ಟು ಮಹಿಳಾ ಕೆಲಸಗಾರರ ಪಡೆಯನ್ನು ನಿಯೋಜಿಸಲಾಗಿದೆ. ಸೇವಾ ಕ್ಷೇತ್ರದ ಆರೈಕೆ ಕೆಲಸಗಳಲ್ಲಿ ಕೂಡಾ ಮಹಿಳೆಯರ ಸಂಖ್ಯೆಯಲ್ಲಿ ಅಸಮಾನತೆಯಿದೆ. 2005ರ ರಾಷ್ಟ್ರೀಯ ಮಾದರಿ ಸಮೀಕ್ಷೆ (ನ್ಯಾಷನಲ್ ಸ್ಯಾಂಪಲ್ ಸರ್ವೇ – ಎನ್‌ಎಸ್‌ಎಸ್) ಪ್ರಕಾರ, 47.5 ಲಕ್ಷ ಮನೆಗೆಲಸದ ವಲಯ ದಲ್ಲೂ ಶೇ.60ಗಿಂತಲೂ ಹೆಚ್ಚಿರುವುದು ಮಹಿಳೆಯರೇ.
ಕೋವಿಡ್-19 ಪರಿಣಾಮ ಭಾರತದಲ್ಲಿ ಪ್ರಸ್ತುತ ಕೋವಿಡ್ -19 ಹಿನ್ನೆಲೆಯಲ್ಲಿ, ಭಾರತೀಯ ಆರ್ಥಿಕತೆಯನ್ನು ಮೇಲ್ವಿಚಾರಣೆ ಮಾಡುವ ಕೇಂದ್ರ (ಸಿಎಂಐಈ) ಪ್ರಕಾರ ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಶೇ.29ರಷ್ಟು ಪುರುಷರು ಕೆಲಸ ಕಳೆದು ಕೊಂಡಿದ್ದರೆ, ನಿರುದ್ಯೋಗ ಪರಿಸ್ಥಿತಿಗೆ ಬಂದ ಮಹಿಳೆಯರು ಶೇ.39ರಷ್ಟು. ಈಗಾಗಲೇ ಕಡಿಮೆ ಸಂಬಳ ಮತ್ತು ಅನಿಶ್ಚಿತ ಉದ್ಯೋಗಗಳಲ್ಲಿರುವ ಮಹಿಳೆಯರ ಮೇಲೆ ಕೋವಿಡ್ ಪರಿಣಾಮ ಮತ್ತಷ್ಟು ತೀವ್ರವಾಗುತ್ತದೆ ಎಂಬ ವಿಶ್ವ ಸಂಸ್ಥೆಯ ಆತಂಕ ವನ್ನು ಇದು ಪುಷ್ಟೀಕರಿಸಿದೆ.
ಲಿಂಗ ತಾರತಮ್ಯವಿರುವ ಭಾರತದ ಮನೆಗೆಲಸದ ವಲಯದಲ್ಲೂ ಪರಿಸ್ಥಿತಿ ಕೋವಿಡ್ ಹಿನ್ನೆಲೆಯಲ್ಲಿ ಮತ್ತಷ್ಟು  ಹೀನಾಯ ವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಪುರುಷರಿಗೆ ಹೋಲಿಸಿದರೆ ಮನೆಕೆಲಸಗಳಲ್ಲಿರುವ ಮಹಿಳೆಯರು (ಸಂಬಳವಿಲ್ಲದೇ) ಎನ್‌ಎಸ್‌ಎಸ್‌ನ ವರದಿಯ ಪ್ರಕಾರ ಮೂರು ಪಟ್ಟು ಅಥವಾ ಒಈಸಿಡಿಯ ವರದಿಯ ಪ್ರಕಾರ ಆರು ಪಟ್ಟು ಹೆಚ್ಚು ಕೆಲಸ ಮಾಡುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರಪಂಚದಲ್ಲಿ ಆರೋಗ್ಯ ರಕ್ಷಣಾ ಕೆಲಸ ಮತ್ತು ಸಾಮಾಜಿಕ ಕೆಲಸಗಳಲ್ಲಿ ಶೇ.70ರಷ್ಟು ಮಹಿಳೆಯರೇ ಇದ್ದಾರೆ. ಭಾರತದಲ್ಲಿ ಆಶಾ ಕಾರ್ಯಕರ್ತರಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದು, ಅವರ ಪಾತ್ರ ಅನಿವಾರ್ಯವಾಗಿದ್ದರೂ ಅವರು ಕಡಿಮೆ ವೇತನಕ್ಕೆೆ ಅತಿಯಾಗಿ ಶ್ರಮಿಸುತ್ತಿದ್ದಾರೆ.
ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳು; ಔದ್ಯೋಗಿಕ ಸಂಬಂಧಗಳು; ಮತ್ತು ಸಾಮಾಜಿಕ ಭದ್ರತೆಯ ಮೇಲೆ ಭಾರತ ಇತ್ತೀಚಿಗೆ ಮೂರು ಕಾರ್ಮಿಕ ಮಸೂದೆಗಳನ್ನು (ಲೇಬರ್ ಕೋಡ್) ಜಾರಿಗೊಳಿಸಿದೆ. ಈ ನಿಯಮಗಳು ಔದ್ಯೋಗಿಕ ಸಂಬಂಧಗಳನ್ನು ಪರಿವರ್ತಿಸಬೇಕು, ಆದರೆ ಇವು ಕೇವಲ ವ್ಯವಹಾರವನ್ನು ಮಾತ್ರ ಸುಲಭ ಮಾಡುತ್ತಿರುವಂತಿವೆ.
ವೇತನದಲ್ಲಿರುವ ಲಿಂಗ ತಾರತಮ್ಯ ಅಥವಾ ಸಂಬಳ ಮತ್ತು ಬೋನಸ್ ಸಂದಾಯ ಮಾಡದಿರುವುದು; ಮತ್ತು ಸಾಮಾಜಿಕ ಭದ್ರತೆ, ವಿಮೆ, ಭವಿಷ್ಯ ನಿಧಿ, ಗರ್ಭಿಣಿ – ತಾಯ್ತನ ಸಂಬಂಧಿತ ಅನುಕೂಲ, ಅಥವಾ ಗ್ರಾಚ್ಯುಟಿ ವಿಷಯಗಳಲ್ಲಿ ಅನೌಪಚಾರಿಕಕೆಲಸಗಾರರನ್ನು (ಹೆಚ್ಚಾಗಿ ಮಹಿಳೆಯರು) ಈ ಸಂಹಿತೆಗಳು ಗುರುತಿಸುವುದಿಲ್ಲ. ಮಹಿಳೆಯರಿಗೆ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡಲು ‘ಅನುಮತಿ’ ಇದ್ದರೂ, ಅದಕ್ಕೆ ತಕ್ಕಂತೆ ಜವಾಬ್ದಾರಿ ಅಥವಾ ಸುರಕ್ಷತೆಯ ಹೊಣೆಗಾರಿಕೆಯ ಮೇಲೆ ಗಮನವಿಲ್ಲ; ಕಾರ್ಯಸ್ಥಳಗಳಲ್ಲಿ ಲೈಂಗಿಕ ಶೋಷಣೆ ವಿರುದ್ಧ ರಕ್ಷಣೆಯ ಬಗ್ಗೆೆಯೂ ಅಧಿಕೃತವಾದ ಆದೇಶಗಳಿಲ್ಲ.
2017ರ ತಿದ್ದುಪಡಿಗೆ ಹೋಲಿಸಿದರೆ ಗರ್ಭಿಣಿ – ಹೆರಿಗೆ – ತಾಯ್ತನ ಸಂಬಂಧಿತ ಅನುಕೂಲಗಳು ಬದಲಾಗೇ ಇಲ್ಲ. ಇದರ ಜೊತೆಗೆ, ದತ್ತು ತೆಗೆದುಕೊಳ್ಳುವ ವೇಳೆ ಮಕ್ಕಳು ಮೂರು ತಿಂಗಳಿಗಿಂತಲೂ ಹೆಚ್ಚಿನ ವಯಸ್ಸಿನವರಾಗಿರುತ್ತಾರೆ ಎನ್ನುವ ವಿಷಯವನ್ನು ನಿರ್ಲಕ್ಷಿಸಿ, ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮಹಿಳೆಯರಿಗೆ ರಜೆ ಕೊಡುವ ಸೂಕ್ಷ್ಮಸಂವೇದನೆಯೇ ಇಲ್ಲದ ಕಾರ್ಯನೀತಿಯನ್ನು ಜಾರಿಗೊಳಿಸಲಾಗಿದೆ. ಮತ್ತು ಬಹಳ ಸಮಯ ಕಾದ, ವಯಸ್ಸಿನಲ್ಲಿ ಸ್ವಲ್ಪ ಹಿರಿಯರಾದ ಮಕ್ಕಳನ್ನು ದತ್ತು ತೆಗೆದುಕೊಳ್ಳುವವರಿಗೆ ಯಾವ ಪ್ರೋತ್ಸಾಹವೂ ಇಲ್ಲ.
ಇತ್ತೀಚಿನ ಲೇಬರ್ ಕೋಡ್‌ಗಳು ಮಹಿಳೆಯರ ಕೆಲಸದ ಪರಿಸ್ಥಿತಿಗಳನ್ನು ಅಲಕ್ಷಿಸಿವೆ. ನೇರವಾಗಿ ಹೇಳುವುದಾದರೆ ಇವು, ಅದರಲ್ಲೂ ಈಗಾಗಲೇ ಒತ್ತಡ ಹೇರಿರುವ ಕೋವಿಡ್ ಪರಿಸ್ಥಿತಿಯಲ್ಲಿ, ಮಹಿಳೆಯರ ಪರವಾಗಿ ಸೂಕ್ಷ್ಮಸಂವೇದನೆ ಇಲ್ಲದ ಕಾರ್ಯ ನೀತಿಗಳು. ಔದ್ಯೋಗಿಕ ರಂಗದಲ್ಲಿ ಕಡೆಗಣಿಸಲು ಸಾಧ್ಯವಿಲ್ಲ, ಪ್ರತಿಯೊಂದು ಕಾರ್ಯನೀತಿಯೂ ಮತ್ತು ಸಂಹಿತೆಯೂ ಭಾರತದ ಉದ್ಯೋಗ ಕಾರ್ಯಪಡೆಯ ಬಹುದೊಡ್ಡ ಸಂಖ್ಯೆಯ – ಸಂಬಳ ಸಂದಾಯವಾಗುವ ಅಥವಾ ಆಗದಿರುವ, ಅಧಿಕೃತ ವಾಗಿ ಗುರುತಿಸಿರುವ ಅಥವಾ ಗುರುತಿಸಿರದ ಮಹಿಳೆಯರ – ಮೇಲೆ ಪರಿಣಾಮ ಬೀರುವುದರಿಂದ ಔದ್ಯೋಗಿಕ ರಂಗದಲ್ಲಿನ ಲಿಂಗಭೇದವನ್ನು ಕಡೆಗಣಿಸುವುದು ಪ್ರಮಾದವಾಗುತ್ತದೆ.
(ಮೂಲ: ಬೆಂಗಳೂರಿನ ಭಾರತೀಯ ಮಾನವ ವಸಾಹತುಗಳ ಸಂಸ್ಥೆಯ ನೀತಿ ಪಿ. ಬರೆದಿರುವ ಆಂಗ್ಲ ಲೇಖನ)