ಬಾಲಿವುಡ್ ಮೂಲಕ ಕಂಡ ವಂಶವೃಕ್ಷದ ಒಂದು ರೆಂಬೆ
ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ನಿಮ್ಮ ನೆಚ್ಚಿನ ವ್ಯಕ್ತಿಯಂತೆ ನೀವಾಗಬೇಕೆಂದು ಕೊಳ್ಳುವುದು ಆ ವ್ಯಕ್ತಿಗೆ ನೀವು ನೀಡಬಹುದಾದ ಪರಮಪ್ರಶಂಸೆ. ಅಂತಹ ಅನುಕರಣೀಯ ವ್ಯಕ್ತಿಗಳ ಒಂದು ಸಣ್ಣಪಟ್ಟಿ ನನ್ನ ಮನದಾಳದಲ್ಲಿದೆ. ಆ ಪಟ್ಟಿಯಲ್ಲಿನ ಪ್ರಪ್ರಥಮ ಹೆಸರು ಆರ್.ಡಿ. ಬರ್ಮನ್. ಹೆಣ್ಣಾಗಿದ್ದಿದ್ದರೆ ಅಥವಾ ನನ್ನ ದನಿ ಹೆಣ್ಣಿನ ದಣಿಯಂತಿದ್ದಿದ್ದರೆ ಆ ಜಾಗದಲ್ಲಿ ಆಶಾ ಬೋನ್ಸ್ಲೆ ಇರುತ್ತಿದ್ದರು. ಪಂಚಮ್ ದಾ ಆಗದಿದ್ದರೇನು, ಆತನಿಗಾಗಿ ಒಂದು ಹಾಡಾದರೂ ಹಾಡಬೇಕೆಂದು ಬಾಂಬೆಯಲ್ಲಿ ನೌಕರಿಯಲ್ಲಿದ್ದಾಗ ಅವರ ವಿಳಾಸ ಪತ್ತೆ ಮಾಡಿ ಒಂದು ಪತ್ರವನ್ನೂ ಬರೆದಿದ್ದೆ.
ತದನಂತರದಲ್ಲಿ, ನಾನು ನಿರ್ಮಿಸುತ್ತಿದ್ದ ಆಲ್ಬಂವಗೆ ಆಶಾ ದನಿ ನೀಡಿದರೆ ಆಕೆಯೊಂದಿಗೆ ಹಾಡುವ ಅವಕಾಶ ಸಿಕ್ಕರೂ ಸಿಗಬಹು ದೆಂಬ ಹುಚ್ಚು ಅಂಟಿಸಿಕೊಂಡು ಆಕೆಯ ಮ್ಯಾನೇಜರ್‌ಗೂ ಪತ್ರ ಬರೆದಿ. ಆ ಹುಚ್ಚಿನ್ನೂ ಬಿಟ್ಟಿಲ್ಲ. ವಿಶ್ವ ಪ್ರೇಕ್ಷಕರಿಗಾಗಿ ಒಂದು ಚಲನಚಿತ್ರವನ್ನು ಮಾಡಬೇಕೆನ್ನುವ ಅರೆಹುಚ್ಚೂ ಇದೆ.
ಇಷ್ಟು ಬಿಟ್ಟರೆ, ಬಣ್ಣದಲೋಕಕ್ಕೂ ನನಗೂ ಸಂಪರ್ಕ ತೀರಾ ಕಡಿಮೆ. ಒಮ್ಮೆ, ಮಾಧುರಿ ದೀಕ್ಷಿತ್ ಕಲಾಮಂದಿರದ ಮುಂದೆ ಕಾರಿನಿಂದ ಇಳಿಯುವಾಗ ನೆರೆದಿದ್ದವರಾರೋ ಹೇಳದಿದ್ದಲ್ಲಿ ಆಕೆ ಯಾರು ಎಂದು ನನಗೆ ತಿಳಿಯುತ್ತಿರಲಿಲ್ಲ! ಬಾಲಿವುಡ್ ಎಂದರೆ ಬಾಯ-ಬಾಯಿ ಬಿಡದ ನನಗೆ, ಮದುವೆಯಾದ ಎರಡು – ಮೂರು ವರ್ಷದ ನಂತರ, ನನ್ನ ಶ್ರೀಮತಿ ಹಿಂದಿ ಚಿತ್ರರಂಗದ ಬಗ್ಗೆ ಟೈಮ್ಸ ಆಫ್ ಇಂಡಿಯಾದಲ್ಲಿ ಪ್ರಕಟವಾಗಿದ್ದ ಲೇಖನವೊಂದರಲ್ಲಿ ಪ್ರಾಸ್ತಾವಿಕವಾಗಿ ಉಖಿಸಿದ್ದ ದ್ವಾರಕ ದಾಸ್ ಸಂಪತ್ಹೆಸರನ್ನು ತೋರಿಸಿ ಅವರು ತನ್ನ ಮುತ್ತಾತ ಎಂದು ತಿಳಿಸಿದ್ದಳು. ಆಕೆಗೂ ಚಿತ್ರರಂಗದ ಬಗ್ಗೆ ಅನಾದರ.
ರಾಜೇಶ್ ಖನ್ನಾ, ಅಶೋಕ್ ಕುಮಾರ್, ಕಲ್ಯಾಣ್ ಜೀ ಆನಂದ್ ಜೀ, ವಿಜಯ್ ಅರೋರಾ, ಲತಾ ಮಂಗೇಶ್ಕರ್, ಕಂಚನ್ ಮುಂತಾ ದವರ ಪರಿಚಯ ವಿವಿಧ ಮಟ್ಟದಲ್ಲಿದ್ದಿತ್ತಾದರೂ ಅವೆಲ್ಲದರ ಬಗ್ಗೆ ಆಕೆ ನಿರ್ಲಿಪ್ತೆ. ಅಂತೆಯೇ, ದ್ವಾರಕ ದಾಸ್ ಬಗ್ಗೆ ನಾವೆಂದೂ ತಲೆಕೆಡಿಸಿಕೊಂಡಿರಲಿಲ್ಲ. ಇದಾದ ಸುಮಾರು ಹತ್ತುವರ್ಷಗಳ ನಂತರವಿರ ಹುದು, ಪ್ರತಿಷ್ಠಿತ ಧ್ವನ್ಯಾಲೋಕದಲ್ಲಿ ನಡೆದ ಸಾಹಿತ್ಯಿಕ ಸಂಕಿರಣವೊಂದರ ಪ್ರಯುಕ್ತ ಬೆಂಗಳೂರಿನ ಸೆಲೆಕ್ಟ್ ಬುಕ್ಸ್ ಏರ್ಪಡಿಸಿದ್ದ ಪುಟ್ಟ ಪುಸ್ತಕ ಪ್ರದರ್ಶನದಲ್ಲಿ ನನ್ನ ಕಣ್ಣು ಕಾಫಿ ಟೇಬಲ್ ಪುಸ್ತಕವೊಂದರ ಮೇಲೆ ಬಿತ್ತು.
ಭಾರತೀಯ ಚಿತ್ರರಂಗದ ಪ್ರಮುಖರನ್ನು ಕುರಿತದ್ದು. ಅದರಲ್ಲಿ ದ್ವಾರಕ ದಾಸ್ ರಾರಾಜಿಸುತ್ತಿದ್ದರು. ಅವರ ಬಗ್ಗೆ ಒಂದು ಪುಟ್ಟಅಧ್ಯಾಯ. ಜತೆಗೆ ಅವರೇ ಸಾಕಿದ್ದ ಹುಲಿಯೊಂದಿಗೆ ಅವರ ಒಂದು ಕಪ್ಪು – ಬಿಳುಪಿನ ಚಿತ್ರ. ಅವರ ಕಿರುಪರಿಚಯವಿದ್ದುದರಿಂದ, ಕುತೂಹಲದಿಂದ ಕಣ್ಣೋಡಿಸಿದೆ. ಪುಸ್ತಕವನ್ನು ಕೊಂಡುಕೊಳ್ಳದಿದ್ದಕ್ಕಾಗಿ ನನ್ನನ್ನು ನಾನು ಹಳಿದುಕೊಂಡಿದ್ದೇನೆ. ಸಮಯ ಸಿಕ್ಕಾಗಲೆಲ್ಲ ದ್ವಾರಕ ದಾಸ್ ಕುರಿತು ಓದುತ್ತಿರುತ್ತೇನೆ. ಇಂದು ಬಾಲಿವುಡ್ ಎಂದು ಕರೆಸಿಕೊಳ್ಳುವ ಮುಂಬೈ ಚಿತ್ರರಂಗಕ್ಕೆ ಅಡಿಗಲ್ಲು ಬಿದ್ದದ್ದೇ ಅವರಿಂದ. ಹಿಂದಿ ಚಿತ್ರಗಳು ಮುಂಬೈಯಲ್ಲಿ ನಿರ್ಮಾಣಗೊಳ್ಳಲು ಆರಂಭವಾದದ್ದೇ ದಾಸ್ ಹುಟ್ಟುಹಾಕಿದ ಕೊಹಿನೂರ್ ಫಿಲಂ ಕಂಪನಿಯಲ್ಲಿ.
ಕಾರ್ಲ್ ಲ್ಯಾಮ್ಲೆ ( ) ನಿರ್ಮಿಸಿದ ಯೂನಿವರ್ಸಲ್ ಸ್ಟುಡಿಯೊ ಹೇಗೆ ಹಾಲಿವುಡ್ ಗೊಳ್ಳುವುದರಲ್ಲಿ ಮುಖ್ಯಪಾತ್ರ ವಹಿಸಿತೋ ಅದೇ ರೀತಿ ಕೊಹಿನೂರ್ ಸ್ಟುಡಿಯೋನ ಅಪಾರ ಕೊಡುಗೆ ಹಿಂದಿ ಚಿತ್ರರಂಗಕ್ಕಿದೆ ಎಂದು ದಾಖಲಾಗಿದೆ. ನಾಟಕ ಗಳಲ್ಲಷ್ಟೇ ಅಲ್ಲದೆ ಚಲನಚಿತ್ರಗಳಲ್ಲೂ ಸೀ ಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲದಲ್ಲಿ ಕೋಲ್ಕತಾದಿಂದ ಉಷಾ ಮತ್ತು ಗಾಯ್ ಎಂಬಿಬ್ಬರು ನಟಿಯರನ್ನು ಕರೆಸಿ ಚಿತ್ರಲೋಕಕ್ಕೆ ಪರಿಚಯಿಸಿದವರು ದಾಸ್.
ಕೊಹಿನೂರ್ ಸ್ಟುಡಿಯೊಗೆ ಮುಂಚೆ ಅವರು ಸ್ಥಾಪಿಸಿದ್ದ ಸಂಸ್ಥೆ ಪಾಠನ್ಕರ್ ಫ್ರೆಂಡ್ಸ್ ಅಂಡ್ ಕೊ. ಮಹಿಳೆಯರನ್ನು ಕರೆತಂದು ದಕ್ಕೆ ಪಾಠನ್ಕರ್ ವಿರೋಧ ವ್ಯಕ್ತಪಡಿಸುತ್ತಾರೆ. ಸಹಭಾಗಿತ್ವ ಮುರಿದು ದಾಸ್ ಹೊರಬೀಳುತ್ತಾರೆ. ದಾಸ್ ಇಟ್ಟ ಇದಕ್ಕಿಂತಲೂ ಹೆಚ್ಚು ಕ್ರಾಂತಿಕಾರಕ ಹೆಜ್ಜೆ ಎಂದರೆ ತಾವು ನಿರ್ಮಿಸಿದ ಸತಿ ಅನುಸೂಯ ಚಿತ್ರದಲ್ಲಿ ನಗ್ನತೆ ಪರಿಚಯಿಸಿದ್ದು. (ಅನುಸೂಯಳ ಕತೆ ಬಲ್ಲವರು ಅನಸೂಯ ಪಾತ್ರಧಾರಿ ಸಕೀನಾ ಬಾಯಿಯ ನಗ್ನತೆಯಲ್ಲಿ ಅಶ್ಲೀಲತೆಯನ್ನು ಕಾಣಲಾರರು.) ಅದೇ ಕಾರಣಕ್ಕೆ ಸೆನ್ಸಾರ್‌ನ ಕತ್ತರಿಗೆ ಸಿಲುಕದೇ ಚಿತ್ರ ಬಿಡುಗಡೆಗೊಳ್ಳುತ್ತದೆ.
ಇದಕ್ಕೂ ಮುನ್ನ ಅವರು ನಿರ್ಮಿಸಿದ ಭಕ್ತ ವಿದುರ್ ಚಿತ್ರಕ್ಕೆ ಆ ಭಾಗ್ಯ ಸಿಗದೇ ಹೋಗುತ್ತದೆ. ಬ್ರಿಟಿಷರ ದಮನಕಾರಿ ನೀತಿಯ ಒಂದು ಪ್ರಮುಖ ಅಂಗ ರೌಲೆಟ್ ಕಾಯಿದೆ. ಭಾರತೀಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು ರಚಿಸಿದ ಕಾನೂನು. ಇದನ್ನು ಪರಿಚಯಿಸಿದ ನಂತರದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಸಂಭವಿಸಿದ್ದು. ಇಂತಹ ಭಯಭೀತ ಕಾಲಘಟ್ಟದಲ್ಲಿ ನಿರ್ಮಿತವಾದ ಚಿತ್ರ ವಿದುರ್. ಮುಖ್ಯ ಪಾತ್ರದಲ್ಲಿ ಸ್ವಯಂ ದ್ವಾರಕ ದಾಸ್.
ಕತೆ ಮಹಾಭಾರತವೆಂಬುದು ನೆಪ. ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸುವುದು ಮೂಲ ಆಶಯ. ಗಾಂಧಿ ಪೋಷಾಕು ಹೊತ್ತ ನಾಯಕ ನಟ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಚಿತ್ರ ಮದರಾಸು ಮತ್ತು ಲಾಹೋರ್ ನಲ್ಲಿ ಬಹಿಷ್ಕೃತವಾಗುತ್ತದೆ. ಬಹಿಷ್ಕಾರದ ವಿರುದ್ಧ ಸಮರ ಸಾರುವ ದಾಸ್ ಬಹಿಷ್ಕಾರವನ್ನು ಹಿಂತೆಗೆಸುವಲ್ಲಿ ಗಣನೀಯ ಯಶಸ್ಸು ಸಾಧಿಸುತ್ತಾರೆ. ಅವರು ಬೆಕ್ಕಿನ ಬದಲುಹುಲಿಯನ್ನು ಸಾಕಿದ್ದು ಕಾಕತಾಳೀಯ ಅನ್ನಿಸುವುದಿಲ್ಲ. ಅವರ ವ್ಯಕ್ತಿತ್ವ ಹಿಡಿಸುವುದು ಇಂತಹ ಕೆಚ್ಚೆದೆಯ ಸಾಧನೆಗೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಸಾರ್ಥಕತೆ ಪಡೆಯುವ ನಿಟ್ಟಿನಲ್ಲಿ ಆಗಿನ್ನೂ ಕಣ್ಣು ಬಿಡುತ್ತಿದ್ದ ದೃಶ್ಯ ಮಾಧ್ಯಮವನ್ನು ಸಂಪೂರ್ಣ ವಾಗಿ ದುಡಿಸಿಕೊಂಡ ಭಾರತೀಯರಲ್ಲಿ ದಾಸ್ ಮೊದಲಿಗರೇನೊ! ನಾಟಕಗಳಲ್ಲಿಯಂತೆ ಸಿನಿಮಾದಲ್ಲೂ ಬಟ್ಟೆಯಿಂದಮಾಡಲಾದ ಸೀನರಿಗಳನ್ನು ಬಳಸುತ್ತಿದ್ದ ದಿನಗಳಲ್ಲಿ ಮರದಿಂದ ನಿರ್ಮಿಸಿದ ಸೀನರಿಗಳನ್ನು ಪರಿಚಯಿಸಿದವರು ದಾಸರೇ. ಮಧ್ಯಂತರ ವಿರಾಮದಲ್ಲಿ ಚಿತ್ರದ ನಾಯಕಿಯನ್ನು (ಲೀನಾ ವ್ಯಾಲೆಂಟೈನ್) ವೇದಿಕೆಯ ಮೇಲೆ ಕರೆ ತರುವಂಥ ವಿನೂತನ ಪ್ರಯೋಗ ನಡೆಸಿದ ಮೊದಲಿಗರೂ ದಾಸರೇ. ಮೂಕಿ ಯುಗದಲ್ಲಿ, ತುಟಿಗಳ ಚಲನೆಯ ಪ್ರಯೋಗ ನಡೆಸಿದ್ದು ಅವರ ಮತ್ತೊಂದು ಹೆಗ್ಗಳಿಕೆ.
ತಮ್ಮ ಚಿತ್ರಗಳನ್ನು ಹೆಚ್ಚು ಜನಪ್ರಿಯಗೊಳಿಸಲು ಅವರು ಕೈಗೊಂಡ ಕ್ರಮಗಳಲ್ಲಿ ಬಹುಭಾಷಿ ಸಬ್ ಟೈಟಲ್‌ಗಳನ್ನು (ಹಿಂದಿ,ಮರಾಠಿ, ಗುಜರಾತಿ, ಮತ್ತು ಇಂಗ್ಲಿಷ್) ಪರಿಚಯಿಸಿದ್ದು ಮುಖ್ಯವಾದದ್ದು. ಸುಮಾರು ಒಂದು ದಶಕದ (1920-29) ದಾಸ್ ಸಾಧನೆ ಮಹತ್ತರವಾದದ್ದು. ಕೊಹಿನೂರ್ ಸ್ಟುಡಿಯೊದಲ್ಲಿ ನಿರ್ಮಿತವಾದ ಚಿತ್ರಗಳ ಸಂಖ್ಯೆ98. ಏತನ್ಮಧ್ಯೆ ಬೆಂಕಿ ಅಪಘಾತ ಸಂಭವಿಸಿ ಸ್ಟುಡಿಯೊ ಹಾನಿಗೊಳಗಾಗುತ್ತದೆ. ಮತ್ತೆ ಕಷ್ಟಪಟ್ಟು ಮುಂದೆ ಬರುತ್ತಾರೆ. ಆಗ ಅವರ ನೆರವಿಗೆ ಬರುವುದು ಕೊಡ್ಯಾಕ್(ಈಸ್ಟ್ಮನ್) ಕಂಪನಿ. ಸಾಲದಲ್ಲಿ ಕಚ್ಚಾ ಫಿಲ್ಮನ್ನು ಪೂರೈಸುತ್ತದೆ.
ಅಸಾಧಾರಣ ಸಾಧನೆ ಮಾಡಿದ ದ್ವಾರಕ ದಾಸ್ ನಿಧನರಾದದ್ದು 1958ರಲ್ಲಿ (ನವೆಂಬರ್17). ಅದೇ ವರ್ಷ ಹುಟ್ಟಿದ್ದು ನನ್ನ ಭಾವ ನಿತಿನ್ ಸಂಪತ್. ಇಮೇಜಿಂಗ್ ಸೈನ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಅವರು ನ್ಯೂಯಾರ್ಕ್‌ನ ರೋಚೆಸ್ಟರ್ ಇನ್ಸ್ಟಿಟ್ಯೂಟ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಕ್ಯಾಲಿಫೋರ್ನಿಯಾ ಗೆ ಸ್ಥಳಾಂತರಗೊಂಡರು. ಮುತ್ತಾತ – ಮರಿಮಗನ ಸಾಧನೆಗಳ ಪಟ್ಟಿ ಮಾಡುವುದು ಈ ಲೇಖನದ ಉದ್ದೇಶವಲ್ಲ.
ವಂಶಪಾರಂಪರ್ಯದ ನಿಯಮಗಳನ್ನೂ ಮೀರುವಂಥ ರೀತಿಯಲ್ಲಿ ನಿತಿನ್ ಅದೇ ಕೊಡ್ಯಾಕ್ ಕಂಪನಿಗೆ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸಿದ್ದು ನನ್ನಲ್ಲಿ ಅಚ್ಚರಿ ಮೂಡಿಸಿತು. ದ್ವಾರಕ ದಾಸ್ ಮತ್ತು ನಿತಿನ್‌ರ ಸಾಮಾನ್ಯ ಅಂಶವಾದ ಕೊಡ್ಯಾಕ್‌ನೊಂದಿಗಿನ ಸಂಬಂಧ ನನ್ನಲ್ಲಿ ನನ್ನ ಪೂರ್ವಜರತ್ತ ಅವಲೋಕಿಸಲು ಪ್ರೇರೇಪಿಸಿತು. ಬೆಂಗಳೂರು ಬಿಟ್ಟು ಮೈಸೂರಿಗೆ ಬರಲು ಜನ್ಮಾಂತರದಕಾರಣಗಳಿರಬಹುದೇನೋ ಅನಿಸತೊಡಗಿತು. ಅದಕ್ಕಿಂತ ಮುಖ್ಯವಾಗಿ, ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನನ್ನ ಅಣ್ಣ ಗೋಪಿ ಸುಮಾರು ಹತ್ತನೇ ವಯಸ್ಸಿಗೇ ಮಿಲಿಟರಿ ಸೇರಲು ಧೃಡವಾಗಿ ನಿಶ್ಚಯಿಸಿದ್ದ ಹಿಂದಿನ ಕಾರಣಗಳತ್ತ ಮನಸ್ಸು ಓಡಲಾರಂಭಿಸಿತು.
ದೇಶಸ್ತ ಮಾಧ್ವರ ಮೂಲ ಮಹಾರಾಷ್ಟ್ರ. ಟಿಪ್ಪುವಿನ ಕಾಲದಲ್ಲಿ ನನ್ನ ಪೂರ್ವಿಕರಿಗೆ ಪಾರ್ಸಿ ಬಿರುದು ನೀಡುವ ಮುನ್ನ ನಮ್ಮದುಪಂತ್ ವಂಶಾವಳಿ. ನನ್ನ ಮರಾಠಿ ಮೂಲದ ಕುರಿತು ಸಂಶೋಧನೆ ಮಾಡುವ ಬಯಕೆ ಇದೆ. ವಿಕೃತ ವಿಚಾರ ವಾದದ ಸುಳಿಗೆ ಸಿಕ್ಕಿ ನಮ್ಮ ವಿದ್ವತ್‌ಪೂರ್ಣ ಪರಂಪರೆಯಿಂದ ದೂರನಾದೆ. ಸಂಧ್ಯಾವಂದನೆಯನ್ನೇ ಶ್ರದ್ಧೆಯಿಂದ ಕಲಿತಿದ್ದರೆ, ನನ್ನ ಇಂದಿನ ಸಂಶೋಧನೆ ಸುಗಮವಾಗುತ್ತಿತ್ತು. ಅಂದು ಆ ಕಾಫಿ ಟೇಬಲ್ ಪುಸ್ತಕ ಅಚಾನಕ್ ಕೈಗೆ ಸಿಕ್ಕಂತೆ ಯಾವುದಾದರೂ ಗ್ರಂಥವೋ, ಯಾರಾದರೂ ತಿಳಿದವರೋ ಸಿಕ್ಕರೆ!
ಸಂತಸ ಹುಟ್ಟಿಸುವ ಅಂತಹ ಆಕಸ್ಮಿಕ ಶೋಧನೆಗೆ ಇಂಗ್ಲಿಷ್‌ನಲ್ಲಿ ಸೆರೆಂಡಿಪಿಟಿ ಎಂದು ಕರೆಯುತ್ತಾರೆ. ವೈದ್ಯಕೀಯ ಲೋಕದ ಅದ್ಭುತ ಆಕಸ್ಮಿಕಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ನನ್ನ ಮಿತ್ರ ಡಾ.ಕಿರಣ್ ಸೂರ್ಯ  ಹೆಸರಿನ ಅಪರೂಪದ ಬೃಹತ್ ಕೃತಿ ಯೊಂದನ್ನು ಕನ್ನಡಿಗರಿಗೆ ಕೊಡುಗೆ ನೀಡಿದ್ದಾರೆ. ಅಂತರ್ಜಾಲದಲ್ಲಿ ಈ ಪುಸ್ತಕವನ್ನು ಉಚಿತವಾಗಿ ಹರಿಬಿಟ್ಟಿದ್ದಾರೆ. ಸೆರೆಂಡಿಪಿಟಿ ಕುರಿತು ಮುಂದೆ ಬರೆಯುವೆ.