ಹಕ್ಕುಗಳಿಗಾಗಿ ಹೋರಾಡಿ ಕರ್ತವ್ಯ ಪಾಲಿಸದಿದ್ದರೆ ಹೇಗೆ ?
ಸಾಂದರ್ಭಿಕ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಜಾಗತಿಕ ಮಾನವ ಹಕ್ಕುಗಳ ದಿನಾಚರಣೆಯ ಈ ಸಂದರ್ಭದಲ್ಲಿ ಸಮಾಜವನ್ನು ಕಾಡುವ ಮಿಲಿಯನ್ ಡಾಲರ್ ಪ್ರಶ್ನೆಯೆಂದರೆ ಪ್ರತಿಯೊಬ್ಬ ನಾಗರಿಕನು ಸ್ವಾತಂತ್ರ್ಯ ತನ್ನ ಹಕ್ಕೆಂದು ತಿಳಿದು ಕರ್ತವ್ಯವನ್ನು ಪರಿಪಾಲಿಸದಿದ್ದರೆ ಹೇಗೆ? ಎನ್ನುವ ಜಟಿಲವಾದಅನಿಶ್ಚಿತ ಸಮಸ್ಯೆ ಮತ್ತು ಪ್ರಶ್ನೆ ಯಲ್ಲವೇ? ಹಕ್ಕುಗಳು, ಕರ್ತವ್ಯಗಳು ಮತ್ತು ಸ್ವಾತಂತ್ರ್ಯ ಪರಸ್ಪರ ಪೂರಕವಾಗಿ ಚಲಿಸಿದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವೆಂಬ ತಾರ್ಕಿಕ ಸಂಧಾನಕ್ಕೆ ಬರಬಹುದಲ್ಲವೇ? ಹಕ್ಕುಗಳಿಗಾಗಿ ಹೋರಾಡಿ ಕರ್ತವ್ಯ ಪ್ರಜ್ಞೆ ಮರೆಯಬಾರದು.
ಜವಾಬ್ದಾರಿಯುತ ಜನಾಂಗ ಇದನ್ನು ಮನಗಾಣಬೇಕಾಗಿರುವುದು ಇಂದಿನ ಆದ್ಯತೆ. ನಾವೇನೇ ಆದರೂ ಮೊ ದಲು ಮಾನವ ರಾಗಬೇಕು ಎಂಬುದು ನಮ್ಮ ಧರ್ಮವಾದಾಗ ನಮ್ಮ ಹಕ್ಕು ಮತ್ತು ಹೋರಾಟ ಅರ್ಥಪೂರ್ಣವಾಗುತ್ತದೆ. ವಿಶ್ವಸಂಸ್ಥೆ1948ರ ನವೆಂಬರ್10ರಂದು ಘೋಷಿಸಿದ ವಿಶ್ವಮಾನವ ಅಧಿಕಾರದ ಒಂದನೆಯ ನಿಯಮ ಈ ರೀತಿ ಇದೆ ‘ಎಲ್ಲ ಮಾನವರೂ ಜನ್ಮ ದಿಂದಲೇ ಘನತೆ, ಗೌರವ ಹಾಗೂ ಸಮಾನತೆಯ ಹಕ್ಕನ್ನು ಹೊಂದಿದವರಾಗಿರುತ್ತಾರೆ. ಅವರೆಲ್ಲರೂ ವಿವೇಕ ಮತ್ತು ಆತ್ಮಪ್ರಜ್ಞೆ ಹೊಂದಿದ್ದಾರೆ.
ಅವರೆಲ್ಲರೂ ಭಾತೃತ್ವದಿಂದ ನಡೆದುಕೊಳ್ಳಬೇಕು. ವಿಶ್ವಸಂಸ್ಥೆ ಘೋಷಿಸಿದ ಮಾನವಾಧಿಕಾರದ ಈ ಮೊದಲನೆಯ ನಿಯಮ ವನ್ನು ಅತೀ ಪ್ರಾಚೀನವಾದ ಋಗ್ವೇದ ಮತ್ತು ಅಥರ್ವಣ ವೇದಗಳು ಸಹಸ್ರಾರು ವರ್ಷಗಳ ಹಿಂದೆ ಘೋಷಿಸಿರುವುದು ನಮ್ಮ ಭಾರತೀಯ ಸಂಸ್ಕೃತಿಯ ಹಿರಿಮೆ ಮತ್ತು ಹೆಮ್ಮೆಯ ವಿಷಯ. ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಲ್ಲರೂ ಸಹೋದರರು; ಎಲ್ಲರೂ ಎಲ್ಲರ ಹಿತಕ್ಕಾಗಿ ದುಡಿಯಬೇಕು ಮತ್ತು ಸಾಮೂಹಿಕವಾಗಿ ಅಭಿವೃದ್ಧಿ ಹೊಂದಬೇಕು.
1945ರಲ್ಲಿ ಎರಡನೇ ವಿಶ್ವಮಹಾಯುದ್ಧದ ಬಳಿಕ ವಿಶ್ವಸಂಸ್ಥೆ ಸ್ಥಾಪನೆಯಾಯಿತು. ಯುದ್ಧದಲ್ಲಿ ನಡೆದ ಜನಾಂಗೀಯ ದೌರ್ಜನ್ಯ, ಸಾಮೂಹಿಕ ಹಿಂಸಾ ಚಟುವಟಿಕೆಗಳು ಮನುಕುಲವನ್ನೇ ದಿಗ್ಭ್ರಮೆಗೊಳಿಸಿದವು. ಈ ಸಂದರ್ಭದಲ್ಲಿ ಮೂಲಭೂತ ಮಾನವ ಹಕ್ಕುಗಳನ್ನು ಸ್ಪಷ್ಟಪಡಿಸುವ ಅನಿವಾರ್ಯತೆ ಬಂದೊದಗಿತು. 1947ರಲ್ಲಿ ಪ್ರಣಾಳಿಕೆ ಸಿದ್ಧವಾಯಿತು. ಇದು ‘ಯೂನಿ ವರ್ಸಲ್ ಡಿಕ್ಲರೇಷನ್ ಆಫ್ ಹ್ಯೂಮನ್ ರೈಟ್ಸ್‌ಗೆ’ ಆಧಾರವಾಯಿತು.
ಮತ್ತು ಇದರಲ್ಲಿ ಎಲ್ಲಾ ರಾಷ್ಟ್ರಗಳು ಒಪ್ಪಿರುವ ಸಾಮೂಹಿಕ ಹಕ್ಕುಗಳು ಅಡಕವಾಗಿವೆ. ಆದರೆ ಅಂತಾರಾಷ್ಟ್ರೀಯ ಕಾನೂನಿನ ಬೆಂಬಲವಿರದಿರುವುದು ಒಂದು ದೋಷ. ಹಕ್ಕು ಮತ್ತು ತತ್ತ್ವಗಳು ಎಲ್ಲಾ ರಾಷ್ಟ್ರದ ಸಂವಿಧಾನದಲ್ಲಿ ಅಡಕವಾಗಿವೆ. ವಿಶ್ವಸಂಸ್ಥೆಮಾನವ ಆಯೋಗವನ್ನು ಸ್ಥಾಪಿಸಿ ಮಾನವ ಹಕ್ಕುಗಳ ಸಂರಕ್ಷಣೆಗಾಗಿ ಇರುವ ಆಯೋಗ ಇದು.1948ರಲ್ಲಿ ವಿಶ್ವಸಂಸ್ಥೆಯು ಜಾಗತಿಕ ಮಾನವ ಹಕ್ಕುಗಳನ್ನು ಡಿಸೆಂಬರ್10ರಂದು ಘೋಷಿಸಿ, 30 ನಿಬಂಧನೆಗಳನ್ನು ಸೂಚಿಸಿತು. ಇದರಲ್ಲಿ ವೈಯಕ್ತಿಕ ಸ್ವಾತಂತ್ರ್ಯ, ರಾಷ್ಟ್ರೀಯ ಐಕ್ಯತೆಗೆ ಹೊಂದಿಕೊಳ್ಳಬೇಕಾದ ಹಕ್ಕು ಮತ್ತು ಸ್ವಾತಂತ್ರ್ಯಗಳು ಸಂಕ್ಷಿಪ್ತವಾಗಿ ಹೇಳುವುದಿದ್ದರೆಸಾಮಾಜಿಕ, ಧಾರ್ಮಿಕ, ಸಾಂಸಾರಿಕ, ಕಾನೂನಾತ್ಮಕ ನಿಬಂಧನೆಗಳು ಮತ್ತು ಸ್ವಾತಂತ್ರ್ಯಗಳು. ಮತ್ತು ರಾಷ್ಟ್ರದ ಹಿತದೃಷ್ಟಿ ಯಲ್ಲಿ ಅನುಭವಿಸಬಹುದಾದ ಸ್ವಾತಂತ್ರ್ಯಗಳು, ಕರ್ತವ್ಯಗಳು, ಹಕ್ಕುಗಳು ಹಾಗೂ ಎಲ್ಲಾ ರಚನಾತ್ಮಕ ಕಾರ್ಯಗಳಿಗೆ ಬೆಂಬಲವನ್ನು ಸೂಚಿಸಿ ಹಕ್ಕಿನೊಂದಿಗೆ ಜವಾಬ್ದಾರಿ ನಿಭಾಯಿಸುವ ಪ್ರಕಟಣೆಗಳಾಗಿವೆ.
ಇಲ್ಲಿ ಕೆಲವು ಭಾರತೀಯ ಮಾನವೀಯ ಮೌಲ್ಯಗಳ ವೈಶಿಷ್ಟ್ಯ ವಾದ ‘ವಿಶ್ವವೇ ಒಂದು ಕುಟುಂಬ’ ಎನ್ನುವ ಮೌಲ್ಯಗಳು ವಿಶ್ವಮಾನವ ಹಕ್ಕುಗಳಲ್ಲಿ ಸೇರಿಸಲು ಅರ್ಹವಾಗಿವೆ. ಮತ್ತು ಭಾರತೀಯ ಸಂಸತ್ ಭವನದಲ್ಲಿ ಅಂಕಿತವಾಗಿವೆ. ನಮ್ಮ ರಾಷ್ಟ್ರದ ನ್ಯಾಯ ನೀತಿಯ ಪರಿಧಿಯಲ್ಲಿ ನಮ್ಮ ಹಕ್ಕು, ಕರ್ತವ್ಯ ಮತ್ತು ಜವಾಬ್ದಾರಿಯ ವಿಚಾರಗಳನ್ನು ವಿಶ್ಲೇಷಿಸುವಾಗ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಿರುಪರಿಚಯ ಸೂಕ್ತವೆಂದೆನಿಸುತ್ತದೆ.
‘ನಮ್ಮ ಸಂವಿಧಾನ ತುಂಬಾ ಚೆನ್ನಾಗಿರಬಹುದು; ಅದಕ್ಕೆ ಕಾರ್ಯರೂಪಕೊಡುವ ಜನ ಕೆಟ್ಟವರಾದರೆ ಸಂವಿಧಾನವೂ ಕೆಟ್ಟದ್ದೇ ಆಗುವುದು’. ‘ಪ್ರಜಾಪ್ರಭುತ್ವ ನಮಗೆ ಅಪರಿಮಿತ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಕೊಟ್ಟಿದೆ. ಸ್ವಾತಂತ್ರ್ಯವನ್ನೇ ನಮ್ಮ ಹಕ್ಕೆಂದು ತಿಳಿದು ಕರ್ತವ್ಯವನ್ನು ಪರಿಪಾಲಿಸದಿದ್ದರೆ ಹೇಗೆ?’ ಹೌದು, ಬಾಳಿನ ಎಲ್ಲಾ ರಂಗಗಳಲ್ಲಿಯೂ ಪ್ರಜಾಪ್ರಭುತ್ವದ ಆಚರಣೆ ಗುರಿಯಾಗಬೇಕು, ಆದರೆ ಎಲ್ಲರೂ ಸಮಾನರಾದ ಪ್ರಜಾಪ್ರಭುತ್ವ ನಮಗೆ ಬೇಕು.
ಪ್ರಜೆ ಗಳಿಗಾಗಿ ಇರುವ ದೇಶವಾಗಬೇಕು ಭಾರತ. ಇಂದು ಕರ್ತವ್ಯಗಳನ್ನು ಜವಾಬ್ದಾರಿಯಿಂದ ಪರಿಪಾಲಿಸಿ ಹಕ್ಕುಗಳಿಗ ಹೋರಾಡು ವವರಿಗಿಂತ ಬರೇ ಹಕ್ಕುಗಳಿಗಾಗಿ ಹೋರಾಡುವವರ ಪ್ರಮಾಣ ಜಾಸ್ತಿಯಾಗುತ್ತಿದೆ. ನಾಗರಿಕ ಹಕ್ಕು ಬಾಧ್ಯತೆಗಳನ್ನು ಜನನಾಯಕರು ಪೂರೈಸಬೇಕು. ಮಾತುಕತೆಗಳಿಂದ ಇತಿಹಾಸದಲ್ಲಿ ಯಾವ ಮಹತ್ತರವಾದ ಬದಲಾವಣೆಗಳೂ ಆಗಿಲ್ಲ, ಎಂದೂ ಪರಿಪೂರ್ಣ ಬದಲಾವಣೆಯಾಗಿಲ್ಲ.
ಕರ್ತವ್ಯ ಹಾಗೂ ರಚನಾತ್ಮಕ ಕಾರ್ಯಕ್ರಮಗಳ ಅನುಷ್ಠಾನದಿಂದ ಬದಲಾವಣೆ ಸಾಧ್ಯ. ಕರ್ತವ್ಯ ಮತ್ತು ಮಾತೇ ದಸ್ತಾವೇಜು ಎಂದು ತಿಳಿದು ಯಾವ ಗೊಣಗಾಟಗಳನ್ನು ಯಾವ ಸ್ತರದಲ್ಲಿಯೂ ಮಾಡದಿದ್ದರೆ ಕರ್ತವ್ಯವನ್ನು ಪೂರೈಸಿ ಹ ಕ್ಕುಗಳನ್ನುಪಡೆದುಕೊಳ್ಳಬಹುದು. ಇಲ್ಲಿ ‘ಇತರರಿಗೆ ಸ್ವಾತಂತ್ರ್ಯ ವನ್ನು ನೀಡದವನಿಗೆ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿಲ್ಲ’. ಸ್ವಾತಂತ್ರ್ಯವಿಲ್ಲದೆ ಆತ್ಮಗೌರವವೂ ಸಾಧ್ಯವಿಲ್ಲ ಎಂಬುದು ನೆನಪಿಡಬೇಕಾದ ಅಂಶ.
‘ಅಧಿಕಾರ ಜನರನ್ನು ಭ್ರಷ್ಟಗೊಳಿಸುವುದಿಲ್ಲ’. ಆದರೆ ‘ಅಸಮರ್ಥರು ಅಪ್ರಮಾಣಿಕರು ಅಧಿಕಾರಕ್ಕೆ ಬಂದರೆ ಅಧಿಕಾರವನ್ನೇ ಭ್ರಷ್ಟಗೊಳಿಸುವರು’. ಕಾನೂನು ಮಾಡಬೇಕಾದವರು ಪ್ರಜಾಪ್ರಭುತ್ವದ ದೇವಾಲಯವೆಂಬ ಲೋಕಸಭೆಯಲ್ಲಿ ನಡೆಯುವವಿಚಾರಗಳ ವಿರೋಧಕ್ಕಾಗಿ ವಿರೋಧ ಮಾಡುವುದೇ ಹೊರತು ಜನಹಿತಕ್ಕಾಗಿ, ರಾಷ್ಟ್ರೀಯ ಭಾವೈಕ್ಯತೆಗಾಗಿ ಅಲ್ಲ. ಕೆಲವು ರಾಜಕಾರಣಿಗಳಲ್ಲಿ ಕಣ್ಣಾರೆ ಕಾಣುತ್ತಿರುವ ವಿಷಯಗಳೆಂದರೆ ಅವರಿಗೆ ಅಸಹ್ಯ, ಹೇಯ, ನೀಚವೆಂಬುದರ ಪರಿಜ್ಞಾನವೇ ಇಲ್ಲ ವೇನೋ ಎಂಬಂತಿದೆ. ಒಮ್ಮೆ ಕೆಲವರು ಅಧಿಕಾರದ ಕುರ್ಚಿಗೆ ಅಂಟಿದರೆ – ‘ಪರರ ಚಿಂತೆ ನಮಗೇಕಯ್ಯಾ?’ ನಮಗೆ ಹಾಸಲುಂಟು ಹೊದೆಯ ಲುಂಟು.
ಐಷರಾಮಿ ಜೀವನ ಭ್ರಷ್ಟಾಚಾರದ ಬಗ್ಗೆಯೇ ನಮ್ಮ ಚಿಂತೆ ಎಂಬಂತಿದೆ. ಪ್ರಾಮಾಣಿಕ ಮತದಾರನಿಗೆ ಯೋಗ್ಯ ಪಾರ್ಟಿ, ಪ್ರತಿನಿಧಿ ಸಿಗದ ಪರಿಸ್ಥಿತಿಯಲ್ಲಿ ಹೇಗೋ ಒಬ್ಬ ಪ್ರತಿನಿಧಿಯನ್ನು ಚುನಾಯಿಸುತ್ತೇವೆ. ಚುನಾಯಿತನಾದ ಮೇಲೆ ಇವನೇ ಪ್ರಭು. ಸನ್ಮಾನ,ಸಮಾರಂಭಗಳಲ್ಲಿ ಭಾಗವಹಿಸಿ, ಟೀಕೆ, ಟಿಪ್ಪಣಿಗಳನ್ನು ಮಾಡಿ ಭ್ರಷ್ಟಾಚಾರದಲ್ಲಿ ಮುಳುಗಿ ರೋಮಾಂಚನಗೊಂಡು ಲೋಕ ವನ್ನೇ ವಂಚಿಸಿ ಮತದಾರನನ್ನು ನಿರಾಶ ದಾಯಕವನ್ನಾಗಿ ಮಾಡಿ ಕತ್ತಲಲ್ಲಿ ನೂಕಿ ತನ್ನ ಸ್ವಾರ್ಥವನ್ನು ಮುಚ್ಚುಮರೆಯಿಲ್ಲದೆ ನಿಭಾಯಿಸಿ ಐಷರಾಮಿ ಜೀವನ, ಇದು ನಾವು ಕಂಡದ್ದು, ಕೇಳಿದ್ದು ಮತ್ತು ಅನುಭವಿಸಿದ್ದು, ಇದು ನಮ್ಮ ಪವಿತ್ರವಾದಪ್ರಜಾ ಪ್ರಭುತ್ವಕ್ಕೆ ಅಡ್ಡ ಬರುತ್ತಿರುವ ದುರಾವಸ್ಥೆ ವಂಶಪಾರಂಪರ್ಯ ರಾಜಕಾರಣ, ಕುಟುಂಬ ರಾಜಕಾರಣ ಒಬ್ಬ ಅಭ್ಯರ್ಥಿಗೆ ಒಂದೇ ಮತ ಆದರೆ ಅಭ್ಯರ್ಥಿ ಎಷ್ಟು ಕ್ಷೇತ್ರದಲ್ಲಿಯೂ ಸ್ವರ್ಧಿಸಬಹುದು.
ಜೈಲಿನಿಂದಲೂ ಸ್ವರ್ಧಿಸಬಹುದು. ವಿಪರ್ಯಾಸವಲ್ಲವೇ? ಇಡೀ ವಿಶ್ವಕ್ಕೆ ಸತ್ಯ, ಅಹಿಂಸೆ ಮತ್ತು ಧರ್ಮವನ್ನು ಬೋಧಿಸಿದ ನಾಡಿನಲ್ಲಿ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆನ್ನುವ ರಾಷ್ಟ್ರದಲ್ಲಿ ನಾವು ಜನಿಸಿದ್ದೇವೆ ಎಂದು ಪ್ರತಿಯೊಬ್ಬ ಪ್ರಜ್ಞಾ ವಂತ ನಾಗರಿಕ ಹೆಮ್ಮೆ ಪಡಲೇ ಬೇಕು. ಆದರೆ ಕೆಲವೊಮ್ಮೆ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಳ ಹೊಂದಾಣಿಕೆಯ ಬಗ್ಗೆ ವಿವೇಕಯುತ ಪ್ರಜ್ಞಾವಂತರು ಬೆಳಕು ಚೆಲ್ಲಬೇಕು ಎಂದೆನಿಸುತ್ತವೆ. ಪ್ರಜಾಪ್ರಭುತ್ವದ ಒಳಿತನ್ನು ಸ್ವೀಕರಿಸದೆ ಅದರ ನಿಯಮಗಳನ್ನು ತಪ್ಪಿಸಿಕೊಳ್ಳುವ ಅಲ್ಪಾವಧಿಯ ಲಾಭಕ್ಕಾಗಿ ಸ್ವಾರ್ಥಿಗಳು ಪ್ರಾಮಾಣಿಕರನ್ನು ಮೋಸಗೊಳಿಸುತ್ತಿದ್ದಾರೆ.
ಹಕ್ಕುಗಳಿಗೆ ಧಕ್ಕೆಯಾಗುತ್ತಿವೆ ಕರ್ತವ್ಯ ಪರಿಪಾಲನೆಯಾಗುತ್ತಿಲ್ಲ. ಪ್ರಜೆಗಳಿಗೆ ಮತದಾನ ಮಾಡುವ ಹಕ್ಕು; ಇದೊಂದು ಮೂಲಭೂತ ಹಕ್ಕು. ಪ್ರಜಾಪ್ರಭುತ್ವ ಒಂದು ಜನಪ್ರಿಯ ರಾಜಕೀಯ ವ್ಯವಸ್ಥೆಯಾಗಿದೆ. ರಾಷ್ಟ್ರಪತಿಯೇ ಇರಲಿ, ಕೋಟ್ಯಾಧಿಪತಿಯೇ ಆಗಲಿ, ಬಿಕ್ಷಾಧಿಪತಿಯೇ ಆದರೂ ಮತದಾನ, ಮತ ಮತ್ತು ಅದರ ಮೌಲ್ಯ ಮತ್ತು ಮಹತ್ವದ ಪ್ರಶ್ನೆ ಬಂದಾಗ ಎಲ್ಲರೂ ಸರಿ ಸಮಾನರು. ಇದು ಪ್ರಜಾಪ್ರಭುತ್ವದ ಆಕರ್ಷಕ ಸೌಂದರ್ಯಗಳಲ್ಲಿ ಒಂದಾಗಿದೆ.
ಇಂದಿನ ದಿನಗಳಲ್ಲಿ ನಾವು ಹಕ್ಕುಗಳಿಗಾಗಿ ಹೋರಾಟ ಮಾಡುವುದರಲ್ಲಿಯೇ ಬಿದ್ದಿರುತ್ತೇವೆ. ನಮ್ಮ ಮೌಲ್ಯ ಮತ್ತು ಕರ್ತವ್ಯಗಳು ದಿಕ್ಕಿಲ್ಲದ ದಿಗಂತಕ್ಕೆ ತಲುಪಿವೆ. ಕೆಲವರು ತಮ್ಮ ಪೌರಹಕ್ಕಾದ ಮತದಾನ ದಲ್ಲಿಯೇ ಭಾಗವಹಿಸದೆ, ಚುನಾಯಿತ ಪ್ರತಿನಿಧಿಗಳಬಗ್ಗೆ ಟೀಕೆ ಮಾಡುತ್ತಾ ಇರುತ್ತಾರೆ. ‘ಎಗ್ಗಿಲ್ಲದೆ ಮಾಡಬಾರದ್ದನ್ನು ಮಾಡುತ್ತಲೇ ಇದ್ದೇವೆ. ಆಗಬಾರದ್ದು ಆಗುತ್ತಲೇ ಇದೆ’.
ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕ ಹಕ್ಕು ಮತ್ತು ಕರ್ತವ್ಯಗಳ ಜೊತೆಗೆ ಮಾನವೀಯ ಮೌಲ್ಯ ಮತ್ತು ಪರರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಗೌರವಿಸಬೇಕು. ‘ಬೇರೆಯವರು ಎಷ್ಟು ಸಣ್ಣವರು ಎಂಬುದನ್ನು ತೋರಿಸಿ ಜಗತ್ತಿನಲ್ಲಿ ಯಾರೂ ದೊಡ್ಡವ ರಾಗಿಲ್ಲ’. ಸಮಾಜದಲ್ಲಿನ ಮಿತಿ ಮೀರಿದ ಸ್ವಾರ್ಥ ಮತ್ತು ಅಸಮಾನತೆ ದುರಾಸೆ ಮತ್ತು ಅಧಿಕಾರ ದಾಹ ಹಕ್ಕುಗಳನ್ನು ಪ್ರತಿಪಾದಿಸಲು ಕಾರಣವಾಗಿದೆ.
ಪ್ರಕೃತಿಯ ಚರಾಚರಗಳಿಗೆ ಮಾನವ ಒಡೆಯ ನಾದರೂ ಮಾನವನಿಗೆ ಬದುಕುವ ಹಕ್ಕು ಸಮಾನತೆ ಹಕ್ಕು, ಕಾನೂನಿನ ದೃಷ್ಟಿ ಯಲ್ಲಿ ಸಮಾನತೆ, ತಾರತಮ್ಯ ಮಾಡದಿರುವುದು, ವಿವಿಧ ಧರ್ಮ, ಜಾತಿ, ಮತ, ಪುರುಷರಲ್ಲಿ ತಾರತಮ್ಯ ತೋರದಿರುವುದು,ಮಾತನಾಡುವ ಸ್ವಾತಂತ್ರ್ಯ, ಹೋರಾಟದ ಹಕ್ಕು, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಕೂಲಿ ಕಾರ್ಮಿಕರ ಸಂರಕ್ಷಣೆ, ವಾಕ್ ಸ್ವಾತಂತ್ರ್ಯ, ಮಾನವ ಹಕ್ಕುಗಳ ಪರಿಗಣನೆ ಇವೆಲ್ಲವೂ ನಮ್ಮ ಪ್ರಜಾಪ್ರಭುತ್ವದಲ್ಲಿ ಅಡಕವಾಗಿರುವ ಧ್ಯೇಯಗಳು ಮತ್ತುವಿಶ್ವಮಾನವ ಹಕ್ಕುಗಳಲ್ಲಿ ಅಡಕವಾಗಿವೆ.
ಒಂದತ್ತೂ ನಿಜ ಮನುಷ್ಯರಾಗಲು ಧರ್ಮದ ಅವಶ್ಯಕತೆಯಿಲ್ಲ. ಮಾನವೀಯತೆಯಿಲ್ಲದಿದ್ದರೆ ನಾವೆಷ್ಟೇ ಧಾರ್ಮಿಕರಾದರೂ ಪ್ರಯೋಜನವಿಲ್ಲ. ‘ಇದೇ ಸಂದರ್ಭದಲ್ಲಿ ರಾಜಕೀಯಕ್ಕೆ ಧರ್ಮ ಬರಬೇಕೇ ಹೊರತು ಧರ್ಮಕ್ಕೆ ರಾಜಕೀಯ ಬರಬಾರದು.’‘ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು’ – ಇಲ್ಲಿ ಸ್ವಾತಂತ್ರ್ಯದ ಮಹತ್ವ ತಿಳಿಯುತ್ತದೆ. ಈ ತಾರ್ಕಿಕ ಆಧಾರದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ತಿಳಿದಾಗ ಮಾತ್ರ ಧರ್ಮದ ಹೆಸರಿನಲ್ಲಿ, ಹೆಂಗಸರು, ಮಕ್ಕಳ ಹೆಸರಿನಲ್ಲಿ, ದುರ್ಬಲವರ್ಗದವರ ಹೆಸರಿನಲ್ಲಿ ಮಾನವೀಯ ಹಕ್ಕುಗಳ ಉಲ್ಲಂಘನೆಯನ್ನು ತಡೆಯಬಹುದು.
ಪ್ರತೀ ಪ್ರಜೆಯೂ ಅನ್ಯಾಯಕ್ಕೊಳಗಾದಾಗ ನ್ಯಾಯ ದೊರಕಿಸಿ ಕೇಳುವ ಸಮಾನ ಅವಕಾಶ ಎಲ್ಲರಿಗೂ ಇದೆ. ಇಂದಿನ ಜೀವನ ಹೆಚ್ಚೆಚ್ಚು ಸಂಕೀರ್ಣಗೊಂಡಿದೆ. ಅರಿವಿಲ್ಲದ ಜನರಿಗೆ ಹಕ್ಕು ಬಾಧ್ಯತೆ ಮತ್ತು ಕಾನೂನಿನ ಅರಿವನ್ನು ಮೂಡಿಸಬೇಕಾಗಿದೆ. ಸಂವಿಧಾನ ಕೊಡ ಮಾಡಿದ ಮೂಲ ಹಕ್ಕುಗಳನ್ನು ಅನುಭವಿಸುವ ಎಲ್ಲರೂ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ಆದ್ಯ ಕರ್ತವ್ಯ. ಪ್ರಜೆಗಳು ಸಂವಿಧಾನಕ್ಕೆ ಬದ್ಧರಾಗಿರಬೇಕು.
ರಾಷ್ಟ್ರೀಯ ಭಾವೈಕ್ಯತೆ, ಏಕತೆ, ಅಖಂಡತೆ, ಸಾಮರಸ್ಯಗಳನ್ನು ಎತ್ತಿ ಹಿಡಿಯಬೇಕು ಮತ್ತು ಪ್ರೋತ್ಸಾಹಿಸಬೇಕು. ದೇಶದ ಸ್ವತ್ತನ್ನು ಸಂರಕ್ಷಿಸಿ ಮಾನವೀಯತೆಯನ್ನು ಮರೆಯಬೇಕು. ತದ್ವಿರುದ್ಧ ವಾಗಿ ಹಕ್ಕು ಭಾದ್ಯತೆಗಳನ್ನು ತಿರಸ್ಕರಿಸಿದಲ್ಲಿ ಸಾಮಾಜಿಕ ಜೀವನವೂ ಕೂಡಾ ತೀರಾ ಕಳಪೆಯಾಗುವುದು. ಸೀಯರ ಶೋಷಣೆ, ಸೀಯರ ಮೇಲಿನ ಆತ್ಯಾಚಾರ, ಜೀತ ದುಡಿತ, ಗುಲಾಮಗಿರಿ, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಬೇಕು.
ಇಲ್ಲಿ ಉಳಿದೆಲ್ಲಾ ಹಕ್ಕು ಬಾಧ್ಯತೆಗಳಿಗೆ ಮನ್ನಣೆ ಕೊಟ್ಟು ಅತ್ಯಂತ ದೊಡ್ಡ ಜ್ವಲಂತ ಸಮಸ್ಯೆಯಾದ ಸೀಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ ಮತ್ತು ಅಸ್ಪೃಶ್ಯತೆಯ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಬೇಕಾಗಿದೆ. ಮಹಿಳೆಯರ ಹಕ್ಕು ಮತ್ತು ಸ್ವಾತಂತ್ರ್ಯದ ವಿಚಾರ ಬಂದಾಗ ದೊಡ್ಡ ದೊಡ್ಡ ವೇದಿಕೆಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಆಡುವ ಮಾತುಗಳಿಗಿಂತ ಮನ್ನಣೆ ಮುಖ್ಯ.