ಡಯಾಬಿಟಿಸ್‌; ತಪ್ಪು ಕಲ್ಪನೆಗಳು
ವೈದ್ಯ ವೈವಿಧ್ಯ
ಡಾ.ಎಚ್‌.ಎಸ್‌.ಮೋಹನ್‌
ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಕಾಯಿಲೆ ಗಮನಾರ್ಹವಾಗಿ ಹೆಚ್ಚುತ್ತಿದೆ. 25 – 30 ವರ್ಷಗಳ ಮೊದಲು ಡಯಾಬಿಟಿಸ್ ಎಂದರೆ 60 – 65 ವರ್ಷಗಳ ನಂತರ ಬರುವ ಕಾಯಿಲೆ ಎಂದು ಭಾವಿಸಲಾಗಿತ್ತು. ಆದರೆ ಈಗೀಗ 25 – 30 ವರ್ಷದವರಲ್ಲಿಯೂ ಈ ಕಾಯಿಲೆ ಕಂಡು ಬರುತ್ತಿದೆ.
ಜಗತ್ತಿನಾದ್ಯಂತ 42.5 ಕೋಟಿ (425 ಮಿಲಿಯನ್) ಜನರಲ್ಲಿ ಈ ಕಾಯಿಲೆ ಇದೆ ಎಂದು ಒಂದು ಅಂದಾಜು. ಸಾಮಾನ್ಯ 10 ಜನರಲ್ಲಿ ಒಬ್ಬರಲ್ಲಿ ಈ ಕಾಯಿಲೆ ಇದೆ ಎನ್ನಲಾಗಿದೆ. ಡಯಾಬಿಟಿಸ್ ಕಾಯಿಲೆ ಕೆಲವು ಬಾರಿ ಬೇರೆ ಬೇರೆಯವರಲ್ಲಿ ಬೇರೆ ಬೇರೆ ಲಕ್ಷಣ ತೋರಿಸುತ್ತದೆ. ಅಲ್ಲದೆ ಈ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಹಾಗಾಗಿ ಈ ಕಾಯಿಲೆಯ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು ಮತ್ತು ಭಿನ್ನ ರೀತಿಯ ತಿಳಿವಳಿಕೆಗಳು ಜನಸಾಮಾನ್ಯರಲ್ಲಿವೆ.
ಅವುಗಳನ್ನು ಆದಷ್ಟು ಹೋಗಲಾಡಿಸಲು ಆಧುನಿಕ ವೈದ್ಯ ಪದ್ಧತಿಯ ವೈದ್ಯರುಗಳಾದ ನಾವು ಪ್ರಯತ್ನಿಸಬೇಕು. ಡಯಾಬಿಟಿಸ್ ‌ನಲ್ಲಿ ಮುಖ್ಯವಾಗಿ 3 ವಿಧಗಳಿವೆ. ಒಂದನೇ ಮಾದರಿ: ಇದು ಆಟೋಇಮ್ಯೂನ್ ಕಾಯಿಲೆ. ಇದರಲ್ಲಿ ದೇಹದ ಪ್ರತಿರೋಧ ವ್ಯವಸ್ಥೆಯು ಇನ್ಸುಲಿನ್ ಉತ್ಪಾದಿಸುವ ಪ್ಯಾಂಕ್ರಿಯಾಸ್‌ನ ಜೀವಕೋಶಗಳನ್ನು ಕೇಂದ್ರೀಕರಿಸಿ ಇನ್ಸುಲಿನ್ ಉತ್ಪಾದನೆ ಕುಂಠಿತ ಗೊಳಿಸುತ್ತದೆ. ಸಾಮಾನ್ಯವಾಗಿ ಇದು ಚಿಕ್ಕ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆ.
ಎರಡನೆಯ ಮಾದರಿ:ದೇಹವು ನಮಗೆ ಅಗತ್ಯವಿರುವಷ್ಟು ಇನ್ಸುಲಿನ್ ಉತ್ಪಾದನೆ ಮಾಡುವುದಿಲ್ಲ ಅಥವಾ ಇನ್ಸುಲಿನ್‌ನ ಕೆಲಸಕ್ಕೆ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಅಥವಾ ಇವೆರಡೂ ಆಗಿರಬಹುದು. ಸಾಮಾನ್ಯವಾಗಿ ಡಯಾಬಿಟಿಸ್ ರೋಗಿಗಳಲ್ಲಿಶೇ.90ರಷ್ಟು ರೋಗಿಗಳು ಈ ಟೈಪ್ 2 ಡಯಾಬಿಟಿಸ್ ಗುಂಪಿಗೆ ಸೇರಿದವರು. 3ನೇ ವಿಧ ಎಂದರೆ ಗರ್ಭಧಾರಣೆಗೆ ಒಳಗಾದವರಲ್ಲಿ ಕಂಡು ಬರುವ ಡಯಾಬಿಟಿಸ್. ಮಹಿಳೆ ಗರ್ಭಿಣಿಯಾದಾಗ ದೇಹಕ್ಕೆ ಸಾಮಾನ್ಯಕ್ಕಿಂತ ಹೆಚ್ಚಿನ ಇನ್ಸುಲಿನ್ ಅಗತ್ಯವಿರುತ್ತದೆ.
ಆಗ ದೇಹವು ಈ ಹೆಚ್ಚಿನ ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದಾಗ ಈ ವಿಧದ ಕಾಯಿಲೆ ಬರುತ್ತದೆ. ಸಾಮಾನ್ಯವಾಗಿ ಮಗುವಿನ ಜನನವಾದ ನಂತರ ಈ ರೀತಿಯ ಡಯಾಬಿಟಿಸ್ ಕಾಣೆಯಾಗುತ್ತದೆ. ಆದರೆ ಕೆಲವೊಮ್ಮೆ ಆ ಮಹಿಳೆ ಇನ್ನೊಮ್ಮೆ ಗರ್ಭಿಣಿ ಯಾದಾಗ ಪುನಃ ಬರಬಹುದು. ಹಾಗೆಯೇ ಆಕೆಗೆ ಭವಿಷ್ಯದಲ್ಲಿ ಟೈಪ್ 2 ಡಯಾಬಿಟಿಸ್ ಸಹಿತ ಬರಬಹುದು.
ಡಯಾಬಿಟಿಸ್ ಬಗೆಗಿನ ತಪ್ಪು ಕಲ್ಪನೆಗಳೆಂದರೆ, ಸಕ್ಕರೆ ತಿನ್ನುವುದರಿಂದ ಡಯಾಬಿಟಿಸ್:ಕೇವಲ ಸಕ್ಕರೆ ಜಾಸ್ತಿ ತಿನ್ನುವುದರಿಂದಲೇ ಈ ಕಾಯಿಲೆ ಬರುವುದಿಲ್ಲ. ಹೆಚ್ಚೆಚ್ಚು ಸಕ್ಕರೆ ಸೇವಿಸುತ್ತಾ ಹೋದ ಹಾಗೆ ವ್ಯಕ್ತಿಯ ತೂಕ ಜಾಸ್ತಿ ಆಗಿ ಆತ ಸ್ಥೂಲಕಾಯದ ವ್ಯಕ್ತಿಯಾಗಿ ಮಾರ್ಪಾಡಾಗುತ್ತಾನೆ. ಇದರಿಂದ ಆತನಿಗೆ ಡಯಾಬಿಟಿಸ್ ಬರುವ ಸಾಧ್ಯತೆ ಜಾಸ್ತಿ. ಈ ಕಾಯಿಲೆಯಲ್ಲಿ ರಕ್ತದಲ್ಲಿ ಸಕ್ಕರೆಯ ಅಂಶ ಜಾಸ್ತಿಯಾದಾಗ ಡಯಾಬಿಟಿಸ್ ಎನ್ನುವುದರಿಂದ ಸಕ್ಕರೆಯೇ ಕಾಯಿಲೆಗೆ ಕಾರಣ ಎಂದು ಜನಸಾಮಾನ್ಯರು ತಿಳಿದಿದ್ದಾರೆ. ಕಾಯಿಲೆಯ ಒಳಸುಳಿ ಸಂಕೀರ್ಣ ವಾಗಿದೆ. ನಿಯಮಿತವಾಗಿ ಸೋಡಾ ಕುಡಿಯುವುದರಿಂದ ಈ ಕಾಯಿಲೆ ಬರುತ್ತದೆ ಎನ್ನಲಾಗಿದೆ.
2013ರಲ್ಲಿ ಈ ಬಗೆಗೆ ಒಂದು ದೊಡ್ಡ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ದೇಹಕ್ಕೆ ಅನಗತ್ಯ ಶಕ್ತಿಯ ಆಹಾರ ಕಡಿಮೆ ಮಾಡಿದಾಗಲೂ ಹೆಚ್ಚಿನ ಸೋಡಾ ಕುಡಿಯುವವರಲ್ಲಿ ಈ ಕಾಯಿಲೆ ಕಂಡುಬಂದಿತು. ಹಾಗೆಯೇ ಕೃತಕವಾದ ಸಿಹಿ ಒಳಗೊಂಡಪಾನೀಯ ಮತ್ತು ಹಣ್ಣಿನ ರಸ ಹೆಚ್ಚು ಸೇವಿಸುವವರಲ್ಲಿ ಈ ಕಾಯಿಲೆ ಕಂಡು ಬರಲಿಲ್ಲ.
ಗಂಭೀರ ಕಾಯಿಲೆಯಲ್ಲ:ಇದು ತುಂಬಾ ಸಾಮಾನ್ಯ ಕಾಯಿಲೆಯಾದ್ದರಿಂದ ಇದು ಗಂಭೀರ ಕಾಯಿಲೆಯಲ್ಲ ಎಂದು ಹೆಚ್ಚಿನವರು ತಿಳಿದಿದ್ದಾರೆ. ಇದು ಶುದ್ಧ ತಪ್ಪು. ಈ ಕಾಯಿಲೆಗೆ ಈಗಲೂ ಸ್ಪಷ್ಟವಾದ ಚಿಕಿತ್ಸೆ ಇಲ್ಲ. ಕಾಯಿಲೆಗೆ ಈಗ ಲಭ್ಯವಿರುವ ಚಿಕಿತ್ಸೆ ವ್ಯಕ್ತಿ ತೆಗೆದುಕೊಳ್ಳದಿದ್ದರೆ ತುಂಬಾ ಗಂಭೀರವಾದ ತೊಡಕು ಗಳಿಗೆ ಸಿಲುಕಿಕೊಳ್ಳುತ್ತಾನೆ. ಮುಖ್ಯವಾದ ತೊಡಕು ಗಳೆಂದರೆಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳು, ನರಗಳಿಗೆ ಉಂಟಾಗುವ ತೊಂದರೆಗಳು, ಅಂಧತ್ವ, ಕಿಡ್ನಿಗೆ ತೊಂದರೆಯಾಗಿ ತೀವ್ರ ಕಿಡ್ನಿಯ ಕಾಯಿಲೆ ಬರಬಹುದು, ಚರ್ಮದ ಹಲವಾರು ಸಮಸ್ಯೆಗಳು ಬರಬಹುದು, ಕಿವಿಯಲ್ಲಿ ತೊಂದರೆಕಾಣಿಸಿಕೊಳ್ಳಬಹುದು ಹಾಗೂ ತೀವ್ರತರವಾದ ಸೋಂಕಿಗೆ ಒಳಗಾದರೆ ಕಾಲು ಅಥವಾ ಕೈ ಗ್ಯಾಂಗ್ರೀನ್ ನಂಥ ತೊಂದರೆಗೆ ತಿರುಗಬಹುದು. ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ 2016ರಲ್ಲಿ ಜಗತ್ತಿನಾದ್ಯಂತ 16 ಲಕ್ಷ ಹಾಗೂ 2017ರಲ್ಲಿ 17 ಲಕ್ಷ ಜನರ ಮರಣಕ್ಕೆ ಈ ಕಾಯಿಲೆ ಕಾರಣವಾಗಿತ್ತು.
ಸ್ಥೂಲಕಾಯದವರಲ್ಲಿ ಮಾತ್ರ ಕಂಡುಬರುತ್ತದೆ:ತೂಕ ಜಾಸ್ತಿಯಿರುವ ಸ್ಥೂಲಕಾಯದವರಲ್ಲಿ ಡಯಾಬಿಟಿಸ್ಉಳಿದವರಿಗಿಂತ ಹೆಚ್ಚು ಜನರಲ್ಲಿ ಕಂಡು ಬರುವುದಾದರೂ ಅದು ಸಾಮಾನ್ಯ ತೂಕ ಇರುವವರಲ್ಲಿಯೂ ಕಾಣಿಸಿಕೊಳ್ಳಬಹುದು. ಒಂದು ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ ಶೇ.11 – 12ರಷ್ಟು ಜನರಲ್ಲಿ ಸ್ಥೂಲಕಾಯರಲ್ಲದ ವ್ಯಕ್ತಿಗಳಲ್ಲಿ ಡಯಾಬಿಟಿಸ್ ಇದೆ.
ಸ್ಥೂಲಕಾಯದಿಂದಲೇ ಬರುತ್ತದೆ:ಮೇಲೆ ತಿಳಿಸಿದಂತೆ ಸ್ಥೂಲಕಾಯದ ವ್ಯಕ್ತಿಗಳಲ್ಲಿ ಡಯಾಬಿಟಿಸ್ ಬರುವ ಸಾಧ್ಯತೆ ಜಾಸ್ತಿಯಾದರೂ ಸ್ಥೂಲಕಾಯವೇ ಡಯಾಬಿಟಿಸ್ ಕಾಯಿಲೆಗೆ ಕಾರಣವಲ್ಲ. ಅಮೆರಿಕದ ಸಿಡಿಸಿ ವರದಿ ಪ್ರಕಾರ ಅಲ್ಲಿನ ಜನಸಂಖ್ಯೆೆಯ ಶೇ.40 ಜನರಲ್ಲಿ ಸ್ಥೂಲಕಾಯವಿದ್ದರೆ ಶೇ.13 ಜನರಲ್ಲಿ ಡಯಾಬಿಟಿಸ್ ಇದೆ.
ಸಕ್ಕರೆ ಸೇವಿಸಬಾರದು:ಡಯಾಬಿಟಿಸ್ ಇರುವ ವ್ಯಕ್ತಿಗಳು ತಾವು ಸೇವಿಸುವ ಆಹಾರದ ಬಗ್ಗೆ ತುಂಬಾ ಜಾಗೃತರಾಗಿರಬೇಕು. ಕಾರ್ಬೋಹೈಡ್ರೇಟ್ ಇರುವ ಪದಾರ್ಥಗಳನ್ನು ಸೇವಿಸುವಾಗ ತುಂಬಾ ಹುಷಾರಾಗಿರಬೇಕು. ಸಿಹಿ ಪದಾರ್ಥಗಳನ್ನು ಆದಷ್ಟು ಕಡಿಮೆ ಸೇವಿಸಬೇಕು ಮತ್ತು ತುಂಬಾ ವಿಶೇಷ ಸಂದರ್ಭಗಳಿಗೆ ಮೀಸಲಿಡಬೇಕು. ಡಯಾಬಿಟಿಸ್ ಇರುವ ವ್ಯಕ್ತಿಗಳು ತಮ್ಮ ದೇಹದ ಸಕ್ಕರೆಯ ಅಂಶವನ್ನು ಒಂದು ಮಟ್ಟಕ್ಕೆ ಸೀಮಿತಗೊಳಿಸುವಲ್ಲಿ ಆಹಾರವನ್ನು ತುಂಬಾ ಲೆಕ್ಕಾಚಾರದಲ್ಲಿ ಸೇವಿಸಬೇಕು. ಈ ಬಗೆಗೆ ಮತ್ತೊಂದು ತಪ್ಪು ಕಲ್ಪನೆ ಎಂದರೆ ಡಯಾಬಿಟಿಸ್ ಇರುವ ವ್ಯಕ್ತಿಗಳು ವಿಶೇಷ ಡಯಾಬಿಟಿಸ್‌ಗೆ ಮೀಸಲಿರುವ ಆಹಾರವನ್ನು ಸೇವಿಸಬೇಕು ಎಂದು ತಿಳಿದಿದ್ದಾರೆ. ಆದರೆ ಈ ತರಹ ಆಹಾರಗಳು ತುಂಬಾ ದುಬಾರಿಯಾಗಬಹುದು ಹಾಗೂಕೆಲವರಲ್ಲಿ ಅವು ಸಹಿತ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸಬಹುದು.
ಡಯಾಬಿಟಿಸ್‌ನಿಂದ ಅಂಧತ್ವ:ಡಯಾಬಿಟಿಸ್ ಇರುವ ವ್ಯಕ್ತಿಗಳು ಅಂಧತ್ವ ಹೊಂದುತ್ತಾರೆ ಹಾಗೂ ಕಾಲು ಅಥವಾ ಕೈಗಳನ್ನು ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇದು ಸಂಪೂರ್ಣ ತಪ್ಪುು ಗ್ರಹಿಕೆ, ವಸ್ತುಸ್ಥಿತಿಗೆ ತುಂಬಾ ದೂರವಾದುದು. ಹೌದು, ಡಯಾಬಿಟಿಸ್ ಇರುವ ಕೆಲವು ವ್ಯಕ್ತಿಗಳು ಅಂಧರಾಗಬಹುದು ಮತ್ತೆ ಕೆಲವರು ಗ್ಯಾಂಗ್ರೀನ್‌ಗೆ ಒಳಗಾಗಿ ಕೈ ಅಥವಾ ಕಾಲುಕಳೆದುಕೊಳ್ಳಬೇಕಾಗಬಹುದು. ಆದರೆ ಎಚ್ಚರಿಕೆಯಿಂದ ಕಾಯಿಲೆಯನ್ನು ನಿಯಂತ್ರಣ ದಲ್ಲಿರಿಸಿಕೊಂಡವರಲ್ಲಿ ಈ ರೀತಿಯ ತೊಡಕುಗಳು ಕಾಣಿಸಿಕೊಳ್ಳುವುದಿಲ್ಲ.
ಅಮೆರಿಕದ ಸಿಡಿಸಿ ಸಂಸ್ಥೆೆಯ ಅಂದಾಜಿನ ಪ್ರಕಾರ ಡಯಾಬಿಟಿಸ್ ವ್ಯಕ್ತಿಗಳ ಶೇ.12 ಜನರಲ್ಲಿ ದೃಷ್ಟಿ ಸಂಬಂಧಿ ತೊಂದರೆಗಳಿವೆ. ಶೇ.0.56 ಜನರು ಈ ಕಾಯಿಲೆಯಿಂದ ತಮ್ಮ ಕಾಲು ತೆಗೆಸಿಕೊಳ್ಳುವ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ತಜ್ಞ ವೈದ್ಯರು ಡಯಾಬಿಟಿಸ್ ವ್ಯಕ್ತಿಗಳಲ್ಲಿ ತೊಡಕು ಗಳು ಕಾಣಿಸಿಕೊಳ್ಳುವ ರಿಸ್ಕ್ ಅಂಶಗಳನ್ನು ಗುರುತಿಸಿದ್ದಾರೆ. ಅವುಗಳೆಂದರೆ – ಹೆಚ್ಚಿನತೂಕವಿರುವ ವ್ಯಕ್ತಿಗಳು, ಧೂಮಪಾನ, ಹೆಚ್ಚಿನ ಕೆಲಸ ಮಾಡದಿರುವುದು, ಹೆಚ್ಚಿನ ಏರುರಕ್ತದೊತ್ತಡ ಹಾಗೂ ಹೆಚ್ಚಿನ ಕೊಲೆಸ್ಟರಾಲ್ ಮಟ್ಟ.
ವಾಹನ ಚಲಾಯಿಸಬಾರದು:ಡಯಾಬಿಟಿಸ್ ಇದ್ದ ಮಾತ್ರಕ್ಕೆ ವಾಹನ ಡ್ರೈವ್ ಮಾಡಬಾರದು ಎಂಬುದು ತಪ್ಪು ಕಲ್ಪನೆ. ಅಮೆರಿಕದ ಡಯಾಬಿಟಿಸ್ ಸಂಸ್ಥೆ ಈ ಬಗ್ಗೆ ಒಂದು ಹೇಳಿಕೆ ನೀಡಿದೆ. ಡಯಾಬಿಟಿಸ್ ಇರುವ ಹೆಚ್ಚಿನ ವ್ಯಕ್ತಿಗಳು ವಾಹನಗಳನ್ನು ಸುರಕ್ಷಿತವಾಗಿ ತಮಗೆ ಮತ್ತು ಬೇರೆಯವರಿಗೆ ಅಪಘಾತವಾಗದ ರೀತಿಯಲ್ಲಿ ಚಲಾಯಿಸುತ್ತಾರೆ. ಆ ಬಗ್ಗೆೆ ಅವರಿಗೇ ಏನಾದರೂಅನುಮಾನ ಬಂದರೆ ಅವರು ಸೂಕ್ತವಾದ ಪರಿಶೀಲನೆಗೆ ಒಳಗಾಗಬೇಕು ಎಂದು ತಜ್ಞರ ಅಭಿಮತ. ಅಮೆರಿಕದ ಸಾರಿಗೆ ವಿಭಾಗದವರ ಅನಿಸಿಕೆ – ಡಯಾಬಿಟಿಸ್ ಇರುವ ವ್ಯಕ್ತಿಗಳು ಸಾಮಾನ್ಯವಾಗಿ ವಾಹನ ಚಲಾಯಿಸಬಹುದು. ಆದರೆ ಅವರಿಗೆ ಆ ಕಾಯಿಲೆಯಿಂದ ದೃಷ್ಟಿಯ ತೊಂದರೆ ಅಥವಾ ರಕ್ತದಲ್ಲಿನ ಸಕ್ಕರೆಯ ಅಂಶ ಕಡಿಮೆಯಾಗಿದ್ದಾಗ ಅವರುಗಳು ಡ್ರೈವ್ ಮಾಡಬಾರದು. ಹಾಗಾಗಿ ಆಗಾಗ ತಜ್ಞ ವೈದ್ಯರ ಸಲಹೆ ಅವಶ್ಯಕ.
ಪೂರ್ವದ ಹಂತದಿಂದ ಡಯಾಬಿಟಿಸ್:ಇದು ಸಂಪೂರ್ಣ ಸತ್ಯವಲ್ಲ. ಒಂದು ಅಂದಾಜಿನ ಪ್ರಕಾರ ಅಮೆರಿಕದಲ್ಲಿ 88 ಮಿಲಿಯನ್ ಎಂದರೆ ಮೂವರಲ್ಲಿ ಒಬ್ಬರು ಡಯಾಬಿಟಿಸ್ ಪೂರ್ವ ಹಂತದ ವ್ಯಕ್ತಿಗಳಿದ್ದಾರೆ. ಡಯಾಬಿಟಿಸ್ ಪೂರ್ವದ ಹಂತ ಎಂದರೆ – ಇಂತಹವರಲ್ಲಿ ರಕ್ತದಲ್ಲಿಯ ಸಕ್ಕರೆಯ ಪ್ರಮಾಣ ಸಾಮಾನ್ಯಕ್ಕಿಂತ ಸ್ವಲ್ಪ ಜಾಸ್ತಿ ಇರುತ್ತದೆ. ಆದರೆ ಅವರನ್ನು ಡಯಾ ಬಿಟಿಸ್ ಕಾಯಿಲೆಯ ವ್ಯಕ್ತಿಗಳು ಎಂದು ಹೇಳುವಷ್ಟು ಜಾಸ್ತಿ ಇರುವುದಿಲ್ಲ. ಈ ಹಂತದಲ್ಲಿ ಸರಿಯಾದ ಎಚ್ಚರಿಕೆ ತೆಗೆದುಕೊಳ್ಳ ದಿದ್ದರೆ ಇವರುಗಳು ಡಯಾಬಿಟಿಸ್ ವ್ಯಕ್ತಿಗಳಾಗಿ ಮಾರ್ಪಡುತ್ತಾರೆ. ಇಂತಹವರು ಜೀವನ ಕ್ರಮವನ್ನು ಸುಧಾರಿಸಿಕೊಂಡರೆ ಡಯಾಬಿಟಿಸ್ ಕಾಯಿಲೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಬಹುದು. ಮುಖ್ಯವಾಗಿ ನಿಯಮಿತ ವಾದ ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಇವುಗಳ ಬಗ್ಗೆ ಹೆಚ್ಚು ಗಮನ ಕೊಡಬೇಕು.
ಚಟುವಟಿಕೆಯಿಂದ ಇರಲು ಸಾಧ್ಯವಿಲ್ಲ:ಇದು ಸಂಪೂರ್ಣ ಸುಳ್ಳು. ಮೇಲೆ ತಿಳಿಸಿದಂತೆ ಡಯಾಬಿಟಿಸ್ ವ್ಯಕ್ತಿಗಳಿಗೆ ಸೂಕ್ತವಾದ ನಿಯಮಿತವಾದ ದೈಹಿಕ ವ್ಯಾಯಾಮ ಬಹಳ ಮುಖ್ಯ. ಈ ರೀತಿಯ ನಿಯಮಿತವಾದ ವ್ಯಾಯಾಮದಿಂದ ತೂಕ ಜಾಸ್ತಿಯಾಗುವುದನ್ನು ತಪ್ಪಿಸಬಹುದು. ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಅಲ್ಲದೆ ಹಾಗಿದ್ದಾಗ ದೇಹದಲ್ಲಿ ಇನ್ಸುಲಿನ್ ಹಾರ್ಮೋನ್ ಸರಿಯಾಗಿ ಉಪಯೋಗವಾಗುತ್ತದೆ. ಈ ದೈಹಿಕ ವ್ಯಾಯಾಮ ಕೆಲವು ಸಮಯ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಸಕ್ಕರೆ ಜಾಸ್ತಿ ಮಾಡುತ್ತದೆ.
ಇಂಗ್ಲೆಂಡಿನ ಡಯಾಬಿಟಿಸ್ ಸಂಸ್ಥೆಯ ಪ್ರಕಾರ – ಒಂದೇ ರೀತಿಯ ಆಹಾರ ಸೇವಿಸಿ ಅದೇ ರೀತಿಯ ದೈಹಿಕ ವ್ಯಾಯಾಮ ಮಾಡಿದರೂ ಕೆಲವು ಬಾರಿ ಈ ರಕ್ತದ ಸಕ್ಕರೆಯ ಅಂಶವು ನಾರ್ಮಲ್‌ನಲ್ಲಿ ಇರಬಹುದು, ಕೆಲವೊಮ್ಮೆ ಜಾಸ್ತಿಯಾಗಬಹುದು. ಹಾಗಾಗಿ ದೈಹಿಕ ವ್ಯಾಯಾಮ ಮಾಡುವಾಗ ನಿಯಮಿತವಾದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ದಾಖಲಿಸಬೇಕು. ಹಾಗೆಮಾಡಿದಾಗ ಡಯಾಬಿಟಿಸ್‌ಗೆ ಕೊಡುವ ಔಷಧ ಅಥವಾ ಇನ್ಸುಲಿನ್‌ನ ಡೋಸ್ ಅಥವಾ ಪ್ರಮಾಣವನ್ನು ಅಗತ್ಯಕ್ಕೆತಕ್ಕಂತೆ ಬದಲಿಸ ಬೇಕಾಗಬಹುದು. ಆಗಾಗ ರಕ್ತದಲ್ಲಿನ ಸಕ್ಕರೆಯ ಅಂಶ ಕೆಲವರಲ್ಲಿ ಒಮ್ಮೆಲೇ ಕಡಿಮೆಯಾಗಿ ಬಿಡುತ್ತದೆ. ಅಂತಹವರು ಸಕ್ಕರೆಯ ಅಂಶವನ್ನು ಹೆಚ್ಚಿಸುವಂಥ ವಸ್ತುವನ್ನು ಯಾವಾಗಲೂ ಜೊತೆಯಲ್ಲಿಟ್ಟುಕೊಳ್ಳಬೇಕು. ಡಯಾಬಿಟಿಸ್ ಇರುವವರು ತಮಗೆ ಕಾಯಿಲೆ ಇರುವ ಬಗ್ಗೆ ಮತ್ತು ತಮ್ಮ ಔಷಧಗಳ ವಿವರಗಳನ್ನು ಒಂದು ಕಾಗದದಲ್ಲಿ ಬರೆದು ಜತೆಗೆಇರಿಸಿಕೊಳ್ಳುವುದು ತುಂಬಾ ಒಳ್ಳೆಯದು. ಅಂತಹವರು ರಕ್ತದಲ್ಲಿ ಸಕ್ಕರೆಯ ಅಂಶ ದಿಢೀರ್ ಕಡಿಮೆಯಾಗಿ ಎಚ್ಚರ ತಪ್ಪಿಬಿಟ್ಟರೆ ಬೇರೆಯವರು ಆದಷ್ಟು ಬೇಗ ಸಹಾಯಮಾಡಲು ಅನುಕೂಲವಾಗುತ್ತದೆ.
ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಬರುತ್ತದೆ:ಇದು ಸಂಪೂರ್ಣ ಸುಳ್ಳು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ರೀತಿಯ ಕಾಯಿಲೆಯಲ್ಲ. ಅಲ್ಲದೆ ಯಾವುದೇ ಬ್ಯಾಕ್ಟೀರಿಯಾ, ವೈರಸ್ ಅಥವಾ ಕ್ರಿಮಿಗಳಿಂದ ಬರುವ ಕಾಯಿಲೆಯೂ ಅಲ್ಲ.
ನೈಸರ್ಗಿಕ ಔಷಧಗಳಿಂದ ಸಂಪೂರ್ಣ ಗುಣ:ಪ್ರಸ್ತುತ ಡಯಾಬಿಟಿಸ್ ಅನ್ನು ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆ ಇಲ್ಲ. ಹಾಗೆಂದು ಯಾರಾದರೂ ಹೇಳಿಕೊಂಡರೆ, ಜಾಹೀರಾತು ಕೊಟ್ಟರೆ ಅದು ಸಂಪೂರ್ಣ ಸುಳ್ಳು. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು. ಕೆಲವು ಸಸ್ಯಜನ್ಯ ಔಷಧ ಅಥವಾ ನೈಸರ್ಗಿಕ ಔಷಧ ಈ ಕಾಯಿಲೆಯನ್ನು ಗುಣಪಡಿಸಲಾರವು. ಅಲ್ಲದೆ ಕೆಲವು ಸಂದರ್ಭಗಳಲ್ಲಿ ವ್ಯಕ್ತಿಗೆ ಹಾನಿಯನ್ನೂ ಉಂಟು ಮಾಡಬಲ್ಲವು. ಈ ಬಗ್ಗೆ ಇಂಗ್ಲೆಂಡಿನ ಡಯಾಬಿಟಿಸ್ ಸಂಸ್ಥೆಯವರು ಒಂದುಅಧ್ಯಯನ ಮಾಡಿದ್ದಾರೆ. ಕೆಲವು ಸಸ್ಯಜನ್ಯ ಔಷಧಗಳು ಈಗಾಗಲೇ ರೋಗಿ ಸೇವಿಸುತ್ತಿರುವ ಇನ್ಸುಲಿನ್ ಅಥವಾ ಡಯಾಬಿಟಿಸ್ ಔಷಧದ ರಕ್ತದಲ್ಲಿ ಸಕ್ಕರೆ ಕಡಿಮೆ ಮಾಡುವ ಗುಣವನ್ನು ಜಾಸ್ತಿ ಮಾಡಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಹಾಗೆಯೇ ಡಯಾಬಿಟಿಸ್ ಕಾಯಿಲೆಯಿಂದ ಬರಬಹುದಾದ ಇನ್ನಿತರ ತೊಡಕುಗಳನ್ನು ಜಾಸ್ತಿ ಮಾಡಬಹುದು. ಹಾಗಾಗಿ ಇಂತಹ ಔಷಧಗಳ ಪ್ರಭಾವಕ್ಕೆ ಒಳಗಾಗದೆ ಸರಿಯಾದ ಫಿಜಿಷಿಯನ್ ವೈದ್ಯರ ಸಲಹೆಯಂತೆ ಔಷಧ ತೆಗೆದುಕೊಳ್ಳುವುದು ಒಳ್ಳೆಯದು ಎಂಬುದು ತಜ್ಞರ ಅಭಿಮತ.
ಆಟೋಟಗಳಲ್ಲಿ ಪಾಲ್ಗೊಳ್ಳಬಾರದು:ಡಯಾಬಿಟಿಸ್ ಹೊಂದಿ ಹಲವು ಆಟ ಮತ್ತು ಓಟಗಳಲ್ಲಿ ಭಾಗಿಯಾಗಿ ಹಲವಾರು ಜಾಗತಿಕ ಮಟ್ಟದ ಸ್ಪರ್ಧೆಗಳಲ್ಲಿ ಗೆದ್ದ ಆಟಗಾರರು ಈ ಅಂಶವನ್ನು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ. ಅವರಲ್ಲಿ ಮುಖ್ಯ ಕೆಲವು ಹೆಸರುಗಳೆಂದರೆ ಸ್ಕಾಟ್ ಅಲನ್, ಐಡೆನ್ ಬೈಲ್, ಸ್ಟೀಫನ್ ಕ್ಲಾನ್ಸಿ, ಬೆನ್ ರೋಕರ್, ಜೋ ಕಟ್ಲರ್ ಮತ್ತು ಬಿಲ್ಲೀ ಜೀನ್ ಕಿಂಗ್ – ಹೀಗೆ ಹಲವರು.