ರಾಜಕೀಯ ಪಕ್ಷಗಳ ಸ್ವಾರ್ಥಕ್ಕಾಗಿ ಬಲಿ’ಪಶು’ವಾಗದಿರಲಿ ಗೋಮಾತೆ..!
ಅಭಿವ್ಯಕ್ತಿ
ಉಷಾ ಜೆ.ಎಂ
ಗೋಹತ್ಯೆಯನ್ನು ಸಮರ್ಥಿಸಿಕೊಳ್ಳುವ ವರ್ಗದ ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳೆಲ್ಲಗೋಹತ್ಯೆೆ ನಿಷೇಧವನ್ನು ಆಯುಧವನ್ನಾಗಿ ಉಪಯೋಗಿಸುತ್ತಿವೆ. ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳು ವವರು ತಳ ಬುಡ ವಿಲ್ಲದ ವಾದಗಳನ್ನು ಮಂಡಿಸುತ್ತಾ, ಗೋವಧೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇನ್ನು ಬದಲಾದ ಜೀವನ ಶೈಲಿ ಯಿಂದ ಗೋಹತ್ಯೆಯ ಬಗ್ಗೆ ಕೆಲ ಹಿಂದೂಗಳ ಧೋರಣೆಯೂ ಬದಲಾಗುತ್ತಿದೆ.
ಪ್ರಾಚೀನ ಕಾಲದಿಂದಲೂ ಗೋವುಗಳಿಗೆ ಹಿಂದೂ ಧರ್ಮದಲ್ಲಿ ಪವಿತ್ರಸ್ಥಾನ ನೀಡಲಾಗಿದೆ. ಹಸುವಿನಲ್ಲಿ 33 ಕೋಟಿ ದೇವರು ಗಳು ನೆಲೆಸಿರುವ ನಂಬಿಕೆಯಿಂದ ತಾಯಿ ಸ್ಥಾನ ನೀಡಲಾಗಿದೆ.
ಮನುಷ್ಯರ ಜತೆ ತುಂಬಾ ಹೊಂದಿಕೊಂಡು ಹೋಗುವ ಹಸುಗಳನ್ನು ತಮ್ಮ ಸ್ವಂತ ಮಕ್ಕಳಂತೆ ಸಾಕುತ್ತಾರೆ. ಹಸುವಿನ ಉತ್ಪನ್ನ ಗಳನ್ನು ದೈಹಿಕ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ. ಮಹಾಭಾರತ ಮತ್ತು ರಾಮಾಯಣಗಳಲ್ಲಿ ಗೋವಿನ ದೈಹಿಕ ಗುಣಗಳ ಬಗ್ಗೆ ಉಲ್ಲೇಖವಿದೆ. ವೇದ ಪುರಾಣಗಳಲ್ಲೂ ಹಸುವಿನ ಪಾವಿತ್ರ್ಯತೆ ಬಗ್ಗೆ ವಿವರಿಸಲಾಗಿದೆ.
ಗೋಮಾತೆ ಕೇವಲ ಹಿಂದೂ ಧರ್ಮದವರಿಗಲ್ಲದೆ ಜೈನ, ಬುದ್ಧ, ಮತ್ತು ಸಿಖ್ ಧರ್ಮದವರಿಗೂ ಪೂಜ್ಯನೀಯವಾಗಿದ್ದಾಳೆ. ಆಕಳು ಎದುರಾದಾಗ ಮುಟ್ಟಿ ನಮಸ್ಕರಿಸುವುದು ನಮ್ಮ ಸಂಪ್ರದಾಯ. ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ಸುಟ್ಟರೆನೊಸಲಿಗೆ ವಿಭೂತಿಯಾದೆ, ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ ಎಂಬ ಕವಿವಾಣಿಯಂತೆ ಹಸು ಬದುಕಿದ್ದಾಗಿನಿಂದ ಹಿಡಿದು ಸತ್ತ ಮೇಲೂ ಮನುಷ್ಯನ ಜೀವನದಲ್ಲಿ ಮಹತ್ವವಾಗಿದೆ.
ಮೂರ್ತಿಪೂಜೆ, ವೃಕ್ಷ ಮತ್ತು ಪ್ರಾಣಿಗಳಲ್ಲಿ ದೇವರನ್ನು ಕಾಣುವುದು ನಮ್ಮ ನಂಬಿಕೆ. ಆ ನಂಬಿಕೆಯೇ ನಮ್ಮ ಶಕ್ತಿ. ಇದನ್ನೇ ದುರ್ಬಲತೆ ಎಂದು ತಿಳಿದು, ಮಧ್ಯಯುಗದಲ್ಲಿ ಮುಸ್ಲಿಂ ಆಕ್ರಮಣಕಾರರು ದೇವಸ್ಥಾನಗಳನ್ನು ಧ್ವಂಸ ಮಾಡಿ, ಮೂರ್ತಿಗಳನ್ನು ಭಗ್ನಗೊಳಿಸುವುದರ ಜತೆಗೆ ಗೋವುಗಳನ್ನು ಹತ್ಯೆಮಾಡಲು ಪ್ರಾರಂಭಿಸಿದರು. ಹಿಂದೂ ರಾಜರುಗಳ ವಿರುದ್ಧ ಯುದ್ಧಗಳನ್ನು ಗೆಲ್ಲಲು ಹಸುಗಳನ್ನು ಮುಂದಿಟ್ಟುಕೊಂಡು ಒತ್ತಡದಿಂದ ಶರಣಾಗುವಂತೆ ಮಾಡುತ್ತಿದ್ದರು.
ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಮತ್ತು ತಮ್ಮ ಅಧೀನ ಮಾಡಿಕೊಳ್ಳಲು ಹಸುಗಳನ್ನು ಅವ್ಯಾಹತವಾಗಿ ಹತ್ಯೆಮಾಡಲು ಪ್ರಾರಂಭಿಸಿದರು. ಇದರಿಂದ ಹಿಂದೂಗಳಿಗೆ ಗೋವಿನ ಮೇಲೆ ಪ್ರೀತಿ ಇನ್ನೂ ಹೆಚ್ಚಾಯಿತು. ಮೌರ್ಯ ಸಾಮ್ರಾಜ್ಯ, ವಿಜಯನಗರ, ರಜಪೂತ, ಶಾತವಾಹನ, ಮತ್ತು ಶಿವಾಜಿ ಸಾಮ್ರಾಜ್ಯಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಲಾಗಿತ್ತು. ಹಿಂದೂಗಳಮನಸ್ಸಿನಲ್ಲಿ ಗೋವಿಗಿದ್ದ ಸ್ಥಾನವನ್ನು ಅರಿತಿದ್ದ ಕೆಲಮುಸ್ಲಿಂ ದೊರೆಗಳಾದ ಅಕ್ಬರ್ ಮತ್ತು ಬಾಬರ್ ಗೋಹತ್ಯೆಗೆ ಕಠಿಣವಾದ ಶಿಕ್ಷೆಯನ್ನು ಕೊಡುತ್ತಿದ್ದರು.
ಭಾರತ ಬ್ರಿಟೀಷರ ಆಳ್ವಿಕೆಗೆ ಒಳಪಟ್ಟಾಗ, ಬ್ರಿಟೀಷರು ಗೋಹತ್ಯೆಯನ್ನು ಒಡೆದು ಆಳುವುದಕ್ಕೆ ಉಪಯೋಗಿಸಿದರು. ಇವರ ಗೋಹತ್ಯೆ ನಿಷೇಧ ಕಾನೂನುಗಳು ಇಬ್ಬಗೆಯ ನೀತಿಯಿಂದ ಕೂಡಿದ್ದವು. ತಮ್ಮ ಸೈನಿಕರಿಗೆ ಗೋಮಾಂಸವನ್ನು ಒದಗಿಸಲುಕಸಾಯಿಖಾನೆಗಳನ್ನು ತೆಗೆದರು. ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ಪ್ರಾರಂಭವಾಗಿದ್ದೇ ಹಸುವಿನ ಮಾಂಸ ಸವರಿದ ತೋಪುಗಳನ್ನು ಹಿಂದೂ ಸೈನಿಕರಿಗೆ ಉಪಯೋಗಿಸಲು ಹೇಳಿದಾಗ.
ಇದೇ ಸಮಯದಲ್ಲಿ ಪಂಜಾಬ್‌ನಲ್ಲಿ ಸಿಖ್ಖರು ಗೋಹತ್ಯೆಯ ವಿರುದ್ಧ ಕುಕ ದಂಗೆಯನ್ನು ಪ್ರಾರಂಭಿಸಿದರು. ಆರ್ಯ ಸಮಾಜವು ಜನರಿಂದ ಸಹಿ ಸಂಗ್ರಹಿಸಿ, ಬ್ರಿಟೀಷ್ ಸರಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಗೋಹತ್ಯೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿ,ಗೋಶಾಲೆಗಳನ್ನು ಪ್ರಾರಂಭಿಸಿ, ಗೋವಿನ ಮಹತ್ವವನ್ನು ಸಾರುವ ಕರಪತ್ರಗಳನ್ನು ಹಂಚುವುದರ ಮೂಲಕ ಹೋರಾಟಕ್ಕೆ ಧುಮುಕಿದರು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಗೋಹತ್ಯೆ ನಿಷೇಧ ಪ್ರಮುಖ ಅಂಶವಾಗಿತ್ತು. ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ರಾದ ಮಹಾತ್ಮ ಗಾಂಧೀಜಿ, ಬಾಲ ಗಂಗಾಧರ್‌ತಿಲಕ್, ಲಾಲ ಲಜಪತರಾಯ್, ಮದನ್ ಮೋಹನ್ ಮಾಳವಿಯಾ ಮತ್ತು ರಾಜೇಂದ್ರ ಪ್ರಸಾದ್ ಗೋಹತ್ಯೆಯನ್ನು ವಿರೋಧಿಸಿದ್ದರು. ಕೆಲ ಮುಸಲ್ಮಾನ್ ಸ್ವತಂತ್ರ್ಯ ಹೋರಾಟಗಾರರೂ ಸಹ ಗೋವಧೆ ಖಂಡಿಸಿ, ಗೋಮಾಂಸವನ್ನು ತ್ಯಜಿಸಿದ್ದರು. ಮಹಾತ್ಮ ಗಾಂಧೀಜಿ ಗೋಸಂರಕ್ಷಣೆ ಬಗ್ಗೆ ಮಾತಾಡುತ್ತಾ ಗೋ ಸಂರಕ್ಷಣೆ ಎಂಬುದು ಜಗತ್ತಿಗೆ ಭಾರತ ನೀಡುತ್ತಿರುವ ಕೊಡುಗೆ.
ಹಿಂದೂಗಳು ಗೋವನ್ನು ಸಂರಕ್ಷಿಸುವಷ್ಟು ಕಾಲ ಹಿಂದೂ ಧರ್ಮವೂ ಬದುಕಿರುತ್ತದೆ ಎಂದು ಹೇಳಿದ್ದನ್ನು ಸ್ಮರಿಸಬಹುದು.ಸ್ವಾತಂತ್ರ್ಯ ನಂತರ ಗೋಹತ್ಯೆ ನಿಷೇಧದ ಕಾನೂನನ್ನು ಇಡೀ ದೇಶಕ್ಕೆ ಅನ್ವಹಿಸುವಂತೆ ರೂಪಿಸಿ ಗೋಹತ್ಯೆಗೆ ಒಂದು ತಾರ್ಕಿಕ ಅಂತ್ಯ ದೊರಕಿಸಲಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಬಹುಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡದಿರುವುದೇ ಜ್ಯಾತ್ಯಾತೀತತೆ ಎಂದು ನಂಬಿದ್ದ ಜವಾಹರಲಾಲ್ ನೆಹರುರವರು ಇಡೀ ದೇಶಕ್ಕೆ ಅನ್ವಯಿಸುವಂತೆ ಕಾನೂನು ಜಾರಿ ಮಾಡದೇ, ಈ ಬಗ್ಗೆ ಕಾನೂನು ರೂಪಿಸುವುದು ಆಯಾ ರಾಜ್ಯಗಳಿಗೆ ಸಂಬಂಧಿಸಿದ ವಿಷಯ ಎಂದು ಹೇಳಿ ಕೈತೊಳೆದು ಕೊಂಡುಬಿಟ್ಟರು.
1966ರಲ್ಲಿ ಒಂದೇ ರೂಪದ ಕಾನೂನು ರೂಪಿಸಲು ಒತ್ತಾಯಿಸಿ, ಲಕ್ಷಾಂತರ ಗೋರಕ್ಷಕರು ಪಾರ್ಲಿಮೆಂಟಿನ ಮುಂದೆ ಪ್ರತಿಭಟನೆಗಿಳಿದರು. ಶಾಂತವಾಗಿದ್ದ ಪ್ರತಿಭಟನಕಾರರ ಮೇಲೆ ಪೊಲೀಸ್ ಲಾಠಿಚಾರ್ಜ್ ಮಾಡಿ, ಅನೇಕ ಪ್ರತಿಭಟನಕಾರರ ಸಾವಿಗೆ ಕಾರಣ ರಾದರು. ಇಂದು ಗುಜರಾತ್, ಉತ್ತರಪ್ರದೇಶಗಳನ್ನು ಹೊರತುಪಡಿಸಿದರೆ ನಮ್ಮ ರಾಜ್ಯವನ್ನೂ ಒಳಗೊಂಡಂತೆ ಬಹುತೇಕ ರಾಜ್ಯಗಳಲ್ಲಿ ಗೋಹತ್ಯೆ ಸಂರಕ್ಷಣೆ ಕಾನೂನು ಅಷ್ಟು ಬಿಗಿಯಾಗಿಲ್ಲ. ಪ್ರತಿ ರಾಜ್ಯಗಳಲ್ಲಿ ದಂಡನೆಯ ಪ್ರಮಾಣ ಬೇರೆಬೇರೆ ಯಾಗಿದ್ದು ಕಾನೂನುಗಳು ಗೊಂದಲಮಯವಾಗಿವೆ. ಇದರಿಂದ ಕಾನೂನಿನ ಭಯವಿಲ್ಲದೇ ಹಸುವಿನ ಕಳ್ಳಸಾಗಾಣಿಕೆ, ಹತ್ಯೆೆಗಳು ನಡೆಯುತ್ತಲೇ ಇವೆ.
ಕೇರಳ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈ ಕಾನೂನನ್ನು ಕಡೆಗಣಿಸಲಾಗಿದೆ. ಇನ್ನು ಗೋಹತ್ಯೆಯನ್ನು  ಸಮರ್ಥಿಸಿಕೊಳ್ಳುವ ವರ್ಗದ ಮತಗಳ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳೆಲ್ಲ ಗೋಹತ್ಯೆೆ ನಿಷೇಧವನ್ನು ಆಯುಧವನ್ನಾಗಿ ಉಪಯೋಗಿಸುತ್ತಿವೆ. ಬುದ್ಧಿಜೀವಿಗಳು ಎಂದು ಕರೆಸಿಕೊಳ್ಳುವವರು ತಳ ಬುಡವಿಲ್ಲದ ವಾದಗಳನ್ನು ಮಂಡಿಸುತ್ತಾ, ಗೋವಧೆ ಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಇನ್ನು ಬದಲಾದ ಜೀವನ ಶೈಲಿಯಿಂದ ಗೋಹತ್ಯೆಯ ಬಗ್ಗೆ ಕೆಲ ಹಿಂದೂಗಳ ಧೋರಣೆಯೂ ಬದಲಾಗುತ್ತಿದೆ. ಹಸುಗಳ ಮೇಲಿನ ದೌರ್ಜನ್ಯವನ್ನು ನೋಡಿಯೂ ನೋಡದಂತೆ ಇರುತ್ತಾರೆ. ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಾಗ ಹಿಂಸೆ, ಪ್ರತಿಭಟನೆ ಗಿಳಿಯುವ ಜನರನ್ನು ಸಮರ್ಥಿಸಿಕೊಳ್ಳುವ ಜಾತ್ಯಾತೀತ ರಾಜಕಾರಣಿಗಳು, ಗೋಹತ್ಯೆಯಿಂದ ಮತ್ತೊಂದು ಧರ್ಮದವರ  ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಯೋಚಿಸದೇ ಈ ಕಾನೂನನ್ನು ವಿರೋಧಿಸುವುದು ಮಾತ್ರ ನಾಚಿಕೆಗೇಡು.
ಹಿಂದುತ್ವದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಇಂದಿನ ಸರಕಾರ ಇನ್ನಾದರು ಗೋವಿನ ಕಳ್ಳ ಸಾಗಾಣಿಕೆ ಮತ್ತು ಹತ್ಯೆಯನ್ನು ತಡೆಯಲು ಕಠಿಣವಾದ ಕಾನೂನನ್ನು ರೂಪಿಸಬೇಕು. ಸಾಧ್ಯವಾದರೆ ಇಡೀ ದೇಶಕ್ಕೆ ಅನ್ವಯವಾಗುವಂಥಕಾನೂನನ್ನು ಜಾರಿಗೊಳಿಸಬೇಕು. ಆದರೆ ಇದುವರೆಗೂ ಕಠಿಣ ಕಾನೂನನ್ನು ಜಾರಿಗೊಳಿಸದಿರು ವುದನ್ನು ಮತ್ತು ಇದರ ಬಗ್ಗೆೆ ಸ್ಪಷ್ಟ ನಿಲುವು ವ್ಯಕ್ತಪಡಿಸದೇ ಇರುವುದನ್ನು ನೋಡಿದರೆ ಇವರ ನಡೆಯೂ ಅನುಮಾನಕ್ಕೆ ಎಡೆಮಾಡಿಕೊಡುವಂತಿದೆ.
ಭಾರತದಲ್ಲಿ ಬಹುತೇಕರಿಗೆ ಪೂಜ್ಯನೀಯವಾದ ಗೋವಿನೊಂದಿಗೆ ಭಾವನಾತ್ಮಕವಾದ ನಂಟಿದೆ. ಈ ಭಾವನೆಯನ್ನು ಗೌರವಿಸಿ ಗೋವುಗಳನ್ನು ರಕ್ಷಿಸುವುದರ ಮೂಲಕ ನಮ್ಮ ಸಾವಿರಾರು ವರ್ಷಗಳ ಪರಂಪರೆಯನ್ನು ಎತ್ತಿ ಹಿಡಿಯಬೇಕಾಗಿದೆ.