ಸಭೆ-ಸಮಾರಂಭಗಳನ್ನು ಯಶಸ್ವಿಗೊಳಿಸೋದು ಹೇಗೆ ?
ಅಭಿಮತ
ಡಾ.ಕೆ.ಪಿ.ಪುತ್ತುರಾಯ
ನಾವು ನಮ್ಮ ನಿತ್ಯ ಜೀವನದಲ್ಲಿ ತರತರದ ಸಭೆ ಸಮಾರಂಭಗಳಿಗೆ ಹೋಗುತ್ತಿರುತ್ತೇವೆ. ಅಂತೆಯೇ ನಾವು ಕೂಡಾ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತೇವೆ. ಆದರೆ, ಎಲ್ಲವೂ ಯಶಸ್ವಿ ಸಮಾರಂಭ ಗಳಾಗೋದಿಲ್ಲ. ಒಂದಿದ್ದರೆ, ಇನ್ನೊಂದರ ಕೊರತೆ!
ಏನಾದರೊಂದು ಲೋಪದೋಷಗಳು, ಪ್ರಮಾದಗಳು ಆಗಿ ಹೋಗಿರುತ್ತವೆ. ಒಂದಂತೂ ಸತ್ಯ; ಬರೇ ಹಣ ಬಲ, ಜನ ಬಲದಿಂದ ಸಮಾರಂಭಗಳನ್ನು ಯಶಸ್ವಿಗೊಳಿಸಬಹುದೆಂಬ ಭಾವನೆ ತಪ್ಪು. ಕೆಲವೊಮ್ಮೆ ಅದ್ದೂರಿ ಆಡಂಬರಗಳಿಲ್ಲದ ಸರಳಸಮಾರಂಭಗಳೂ ಅಭೂತಪೂರ್ವ ಯಶಸ್ಸನ್ನು ಕಾಣುತ್ತವೆ. ಹಣಬೇಕು; ಆದರೆ ಹಣದ ಜತೆ ಒಳ್ಳೆಯ ಪೂರ್ವ ತಯಾರಿ, ಸಮರ್ಪಕ ನಿರ್ವಹಣೆ, ಸಮಯ ಪರಿಪಾಲನೆ, ಮುಂಜಾಗರೂಕತೆ, ಮೇಲಾಗಿ ಭಗವಂತನ ಅನುಗ್ರಹ ಎಲ್ಲವೂ ಅವಶ್ಯ. ಇವುಗಳಪೈಕಿ ಒಂದಿಲ್ಲವಾದರೂ ಸಮಾರಂಭ ಸಂಪೂರ್ಣ ಯಶಸ್ಸನ್ನು ಕಾಣದು.
ಸಭೆ ಸಮಾರಂಭಗಳನ್ನು ಆಯೋಜಿಸುವಾಗ ಚಿಕ್ಕಪುಟ್ಟ ವಿಷಯಗಳಿಂದ ಹಿಡಿದು ದೊಡ್ಡ ದೊಡ್ಡ ಕೆಲಸದವರೆಗೆ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ಇದಕ್ಕೊಂದು ಕಾರ್ಯ ಸೂಚಿ ಹಾಗೂ ಕಾರ್ಯ ತಂತ್ರ ಅವಶ್ಯ. ಸಮಾರಂಭ ನಡೆಯುವ ದಿನ ಮತ್ತು ವೇಳೆ, ಆದಷ್ಟು ಮಟ್ಟಿಗೆ ಎಲ್ಲರಿಗೂ ಅನುಕೂಲ ವಾಗುವಂತಿರಬೇಕು.
ಒಳ್ಳೆಯ ಮುಹೂರ್ತದ ಜತೆ, ಆಮಂತ್ರಿತರು ಅಧಿಕ ಸಂಖ್ಯೆಯಲ್ಲಿ ಬರಲು ಅನುಕೂಲವಾಗುವಂತೆ ರಜಾದಿನಗಳನ್ನೂ ಸೂಕ್ತವೇಳೆಯನ್ನೂ ಆರಿಸಿಕೊಳ್ಳೋದು ಅವಶ್ಯ. ಭಾರೀ ಮಳೆಗಾಲದ, ಚಳಿಗಾಲದ, ಉರಿ ಬೇಸಿಗೆ ಕಾಲದ ಇಲ್ಲವೇ ಹಬ್ಬದ ದಿನಗಳನ್ನು ಹಾಗೂ ಮಕ್ಕಳ ಪರೀಕ್ಷಾ ದಿನಗಳನ್ನು ಹೊರತುಪಡಿಸಿದರೆ, ಆಮಂತ್ರಿತರಿಗೆ ಬರಲು ಅನುಕೂಲ.
ಸಮಾರಂಭ ನಡೆಯುವ ಸ್ಥಳ () ಸಾಕಷ್ಟು ಗಾಳಿ ಬೆಳಕು, ಸುಸಜ್ಜಿತವಾದ ಅಡುಗೆ ಮನೆ, ಊಟದ ಮನೆ, ಆಸನ ವ್ಯವಸ್ಥೆ, ಶ್ರವಣ ವ್ಯವಸ್ಥೆ, ಶೌಚಾಲಯ, ಜನರೇಟರ್, ಪಾರ್ಕಿಂಗ್ ವ್ಯವಸ್ಥೆಗಳುಳ್ಳ ವಿಶಾಲ ಸಭಾಂಗಣ ಹಾಗೂ ಸುಂದರ ಪರಿಸರವನ್ನು ಹೊಂದಿದ ಹಾಗೂ ಆಮಂತ್ರಿತರಿಗೆ ಹೋಗಿ ಬರಲು ಸುಲಭ ಸಾಧ್ಯವಾಗುವಂಥ ಸ್ಥಳಗಳಾದರೆ ಚೆನ್ನ. ಇವೆಲ್ಲವೂ ಒಂದೇ ಕಡೆ ಹಾಗೂ ಕಡಿಮೆ ದರದಲ್ಲಿ ಲಭ್ಯವಾಗೋದು ಕಷ್ಟವಾದರೆ ನಮ್ಮ ಬಜೆಟ್‌ಗೆ ತಕ್ಕಂತೆ ಒಂದಿಷ್ಟು ಹೊಂದಾಣಿಕೆಯನ್ನು ಮಾಡಿ ಕೊಳ್ಳಲೇ ಬೇಕಾಗುತ್ತದೆ.
ಆಮಂತ್ರಣ ಪತ್ರಿಕೆಗಳು ಕೇವಲ ಮಾಹಿತಿಯನ್ನಷ್ಟೇ ನೀಡುವ ಪತ್ರಿಕೆಗಳಾದ ಕಾರಣ, ಬಲು ವೆಚ್ಚದ ಬೃಹದಾಕಾರದ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸೋದು ಅನಾವಶ್ಯಕ ದುಂದು ವೆಚ್ಚ ಹಾಗೂ ನಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸುವ ಒಣ ಪ್ರತಿಷ್ಠೆಯ ಮಾತಾದೀತು. ಇತರ ಭಾಷೆಯವರನ್ನೂ ಆಮಂತ್ರಿಸಬೇಕಾದಲ್ಲಿ ಪತ್ರಿಕೆಗಳು ಆಂಗ್ಲ ಭಾಷೆಯಲ್ಲಿ ಮುದ್ರಿತವಾಗಿದ್ದರೆ ಒಳಿತು. ಆಮಂತ್ರಣ ಪತ್ರಿಕೆಗಳಲ್ಲಿ ಮುದ್ರಣ ದೋಷಗಳಾಗದಂತೆ ನೋಡಿಕೊಳ್ಳಬೇಕು ಹಾಗೂ ಆಮಂತ್ರಿಸುವವರ ವಿಳಾಸ ದೂರವಾಣಿ ಸಂಖ್ಯೆ ಮತ್ತು ಸಮಾರಂಭ ನಡೆಯುವ ಸ್ಥಳವನ್ನು ಸುಲಭದಲ್ಲಿ ತಲುಪಲು ನೆರವಾಗುವ ರೇಖಾಚಿತ್ರ ()ಗಳಿರಲಿ.
ಕಾರ್ಯಕ್ರಮದ ವಿವರಗಳನ್ನು ನೀಡೋದು ಅಪೇಕ್ಷಣೀಯ.  ಎಷ್ಟೇ ಮುಂಜಾಗ್ರತೆ ವಹಿಸಿದರೂ ಕೆಲವೊಮ್ಮೆ ಅತೀ ಹತ್ತಿರದವ ರನ್ನು ಆಮಂತ್ರಿಸಲು ಮರೆತು ಬಿಟ್ಟಿರುತ್ತೇವೆ. ಹೀಗಾಗದಂತೆ, ಆಮಂತ್ರಿತರ ಪಟ್ಟಿ ಮೊದಲೇ ಸಿದ್ದವಾಗಲಿ ಹಾಗೂ ಆಗಾಗ ಪರಿಶೀಲಿಸಲ್ಪಡಲಿ. ಆಮಂತ್ರಣ ಪತ್ರಿಕೆಗಳನ್ನು ಅತಿ ಮುಂಚಿತವಾಗಿಯೂ, ಅತಿ ತಡವಾಗಿಯೂ ವಿತರಿಸಬಾರದು. ಅಂದಾಜು 8-10 ದಿನಗಳ ಒಳಗಾಗಿ ಕಳುಹಿಸೋದು ಒಳಿತು. ಮುಖ್ಯ ಅತಿಥಿಗಳ ಹಾಗೂ ತೀರ ಹತ್ತಿರದ ಬಂಧು ಬಾಂಧವರ ಹೊರತಾಗಿ,ಇತರರೆಲ್ಲರಿಗೂ ಅಂಚೆಯ ಮೂಲಕ ಇಲ್ಲವೇ ಇಮೇಲ್, ವಾಟ್ಸಾಪ್‌ಗಳ ಮೂಲಕ ಕಳುಹಿಸುವ ಏಕರೂಪ ನೀತಿಯು ಕ್ಷೇಮ.
ಮನೆಮನೆಗೆ ಹೋಗಿ ಆಮಂತ್ರಿಸುವ ಪದ್ಧತಿ ಮಾಯ ವಾಗಿದೆ. ಯಾರೂ ಇದನ್ನು ಅಪೇಕ್ಷಿಸುವುದೂ ಇಲ್ಲ. ವೇದಿಕೆಯು ಸರಳವಾಗಿರಲಿ, ಸುಂದರವಾಗಿರಲಿ, ಮುಖ್ಯ ಅತಿಥಿಗಳು ಕೂರುವ ಜಾಗ ಮುಂಚಿತವಾಗಿಯೇ ಸ್ವಾಮೀಜಿ, ರಾಷ್ಟ್ರಪತಿ, ರಾಜ್ಯಪಾಲ, ಮುಖ್ಯಮಂತ್ರಿಗಳ ಹೊರತಾಗಿ ಎಲ್ಲ ಅತಿಥಿಗಳ ಆಸನಗಳೂ ಸಮಾನವಾಗಿ ನಿಗದಿಯಾಗಿರಲಿ. ಆಸನಗಳ ಎದುರು ಅವರವರ ಹೆಸರು, ಕಾರ್ಯಕ್ರಮದ ಪಟ್ಟಿ, ಬರೆಯಲು ಹಾಳೆ – ಪೆನ್ನು, ಕುಡಿಯಲು ನೀರು ಇತ್ಯಾದಿಗಳನ್ನಿಡೋದು ಸೂಕ್ತ. ವೇದಿಕೆ  ತುಂಬಾ ಅಪೇಕ್ಷಿತರಲ್ಲದ ಜನ ಓಡಾಡೋದು ಅಪೇಕ್ಷಣೀಯವಲ್ಲ.
ಅತಿಥಿಗಳಿಗೆ ನೀಡಬೇಕಾದ ವಸ್ತುಗಳು, ಬಹುಮಾನಗಳು, ಹೂಗುಚ್ಛಗಳು ಎಲ್ಲವೂ ಮುಂಚಿತವಾಗಿಯೇ ಸಿದ್ಧವಾಗಿರಲಿ. ಬಹಳ ಸಲ ಸಮಾರಂಭಗಳು ಸಕಾಲದಲ್ಲಿ ಆರಂಭಗೊಳ್ಳೋದಿಲ್ಲ ಹಾಗೂ ಕೊನೆಗೊಳ್ಳೋದಿಲ್ಲ. ಭಾರತೀಯ ಕಾಲಮಾನದಂತೆ ((  ) ತಡವಾಗಿ ಬರೋದು ಮಾನಸಿಕವಾಗಿ ಎಲ್ಲರೂ ಒಪ್ಪಿಕೊಂಡಿರುವ ವಾಡಿಕೆಯಾಗಿ ಬಿಟ್ಟಿದೆ. ಹಾಗೆಂದು ಸಮಯಕ್ಕೆ ಸರಿಯಾಗಿ ಹೋದರೆ, ಕೆಲವೊಮ್ಮೆ ಬರಮಾಡಿಕೊಳ್ಳುವವರೇ ಇರೋದಿಲ್ಲ.
ಆದುದರಿಂದ ಅತಿಥಿಗಳು ಮುಖ್ಯವಾಗಿ ರಾಜಕಾರಣಿಗಳು ತಡವಾಗಿ ಬರುತ್ತಾರೆ ಮತ್ತು ಬೇಗನೇ ಹೊರಟು ಹೋಗುತ್ತಾರೆ. ಕಾರ್ಯಕ್ರಮ ತಡವಾಗಿ ಆರಂಭವಾದರೆ ಉಳಿದೆಲ್ಲ ಕಾರ್ಯಕ್ರಮಗಳು  ಆಗಿ ಅಸ್ತವ್ಯಸ್ಥಗೊಳ್ಳುತ್ತವೆ. ಆದುದರಿಂದ, ಅತಿಥಿಗಳ ಅನುಮತಿಯನ್ನು ಮೊದಲೇ ಪಡೆದುಕೊಂಡು ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಪ್ರಾರಂಭಿಸೋದು ಎಲ್ಲಾ ದೃಷ್ಟಿಯಲ್ಲೂ ಕ್ಷೇಮ.
ಮದುವೆಯ ಆರತಕ್ಷತೆ ಸಂಜೆ 6 ಗಂಟೆ ಎಂದು ಸೂಚಿಸಿದ್ದರೂ, ಗಂಟೆ ಎಂಟಾದರೂ ವಧು- ವರರು ಹಸೆಮಣೆಗೆ ಬಂದಿರೋ ದಿಲ್ಲ. ಕೇಳಿದರೆ, ಬ್ಯೂಟಿ ಪಾರ್ಲರ್‌ನಲ್ಲಿದ್ದಾರೆ; ಟ್ರಾಫಿಕ್ ಜಾಮ್ ಎಂಬ ಉತ್ತರ. ಹೀಗಾದಾಗ ಬಂದ ಅತಿಥಿಗಳ ಆಶೀರ್ವಾದಶುಭ ಕಾಮನೆಗಳ ಬದಲಾಗಿ, ಅವರ ಅಸಮಾಧಾನ ಬೇಸರಗಳೇ ಸಿಗುತ್ತವೆ. ಹೀಗಾಗದಂತೆ ನೋಡಿಕೊಳ್ಳಬೇಕು.
ಎಷ್ಟೋಬಾರಿ ನಿರೂಪಣಕಾರರ (  ) ಮಾತುಗಳು ಅತಿಥಿಗಳ ಭಾಷಣಗಳಿಗಿಂತ ಉದ್ದವಾಗಿರುತ್ತದೆ. ಸೀರೆಗಿಂತ ಉದ್ದದ ಲಂಗದಂತಾಗುತ್ತದೆ. ಹೀಗಾಗಬಾರದಲ್ಲವೇ, ಇವರ ಮಾತುಗಳು ಚಿಕ್ಕದಾಗಿರಲಿ, ಚೊಕ್ಕವಾಗಿರಲಿ. ಅನಾವಶ್ಯಕ, ಅಪ್ರಸ್ತುತ ಹಾಗೂ ಅಸಂಬದ್ಧ ಮಾತುಗಳಾಗಿರಬಾರದು ಹಾಗೂ ವೈಯಕ್ತಿಕವಾದ ಹೊಗಳಿಕೆಗಳಾಗಿರಬಾರದು. ಹಸನ್ಮುಖಿ ಯಾಗಿ, ಸಾಂದರ್ಭಿಕವಾದ ತಿಳಿಹಾಸ್ಯದೊಂದಿಗೆ ಸುಂದರ ಸರಳ ಶಬ್ದಗಳನ್ನು ಬಳಸುತ್ತಾ, ನಿಗದಿತ ಸಮಯದೊಳಗೆಕಾರ್ಯಕ್ರಮವನ್ನು ತೇಲಿಸಿಕೊಂಡು ಹೋಗುವ ಚಾಕಚಕ್ಯತೆ ಇವರಿಗಿರಬೇಕು.
ಪ್ರಾರ್ಥನಾ ಗೀತೆಯನ್ನು ಸುಶ್ರಾವ್ಯ ಕಂಠವುಳ್ಳವ ರಿಂದ ಮಾತ್ರ ಹಾಡಿಸಬೇಕು. ಗೀತೆಯ ಆಯ್ಕೆ ಮತ್ತು ಭಾಷೆ ಸಂದಂಭೋಚಿತ ವಾಗಿರಬೇಕು. ಅವಧಿ 3-5ನಿಮಿಷಗಾಗಿರಬೇಕು. ಎರಡೆರಡು ಪ್ರಾರ್ಥನಾ ಗೀತೆಗಳು ಅನವಶ್ಯಕ. ಜ್ಯೋತಿ ಬೆಳಗಲು, ಬೇಕಾದಕರ್ಪೂರ ಮಿಶ್ರಿತ ಬತ್ತಿ ಸಾಕಷ್ಟು ಎಣ್ಣೆ, ಆರತಿ / ಬೆಂಕಿ ಪೆಟ್ಟಿಗೆ ಮೊದಲೇ ಸಿದ್ಧವಾಗಿರಬೇಕು. ಸ್ವಾಗತನುಡಿಗಳು ಉತ್ಪ್ರೇಕ್ಷೆಯ ನುಡಿಗಳಿಂದ ಕೂಡಿರಬಾರದು. ಅದು ಆತ್ಮೀಯವಾಗಿರಬೇಕು ಹಾಗೂ 5-6 ನಿಮಿಷಗಳಿಗೆ ಮಾತ್ರ ಸೀಮಿತವಾಗಿರಬೇಕು.
ಅತಿಥಿಗಳನ್ನು ಸ್ವಾಗತಿಸುವಾಗಲೇ ಅವರಿಗೆ ಹೂಗುಚ್ಛವನ್ನು ನೀಡಿದರೆ ಸಮಯದ ಉಳಿತಾಯವಾಗುತ್ತದೆ. ಪರಿಚಯ ಭಾಷಣದಲ್ಲಿ ಅತಿಥಿಗಳ ಜನನ ವಿದ್ಯಾಭ್ಯಾಸ ಕೌಟುಂಬಿಕ ವಿಚಾರಗಳೆಲ್ಲ ಸೂಕ್ಷ್ಮ ವಾಗಿರಲಿ; ಅದರ ಗಣನೀಯವಾದ ಸಾಧನೆ ಹಾಗೂ ಗುಣ ವಿಶೇಷಗಳ ಬಗ್ಗೆ ಮಾತ್ರ ಒತ್ತು ಇರಲಿ. ಬಹುಮಾನ ವಿತರಣೆ / ಸನ್ಮಾನಗಳನ್ನು ಮಾಡುವಾಗಲೂ ಸಮಯದ ಉಳಿತಾಯವಾಗ ಬೇಕು. ಬಹುಮಾನಿತರ ಪಟ್ಟಿ ಉದ್ದವಾಗಿದ್ದಾಗ ವಿಶೇಷ ಬಹುಮಾನಗಳನ್ನಷ್ಟೆ ವಿತರಿಸುವಂತಿರಬೇಕು.
ಬಹುಮಾನಿತರು ವೇದಿಕೆಯ ಬಳಿ ಮುಂಚಿತವಾಗಿ ಸೇರುವಂತೆ ಮಾಡೋದರಿಂದಲೂ ಒಂದೇ ವ್ಯಕ್ತಿಗೆ ಅನೇಕ ಬಹುಮಾನ ಗಳಿದ್ದಲ್ಲಿ ಅವನ್ನೆಲ್ಲಾ ಒಮ್ಮೆಲೇ ಕೊಡೋದರಿಂದಲೂ ಸನ್ಮಾನಿತರನ್ನೆಲ್ಲಾ ಒಟ್ಟಿಗೇ ಸನ್ಮಾನಿಸುವುದರಿಂದಲೂ ಸಮಯದ ಉಳಿತಾಯ ವಾಗುತ್ತದೆ. ಭಾಷಣಗಳು ಹಿತವಾಗಿರಬೇಕು, ಮಿತವಾಗಿರ ಬೇಕು ಹಾಗೂ ಸಮಯೋಚಿತವಾಗಿರಬೇಕು. ವೇದಿಕೆಯ ಮೇಲಿರುವ ಎಲ್ಲಾ ಅತಿಥಿಗಳ ಹೆಸರು ಗಳನ್ನು ಪ್ರತಿ ಭಾಷಣಕಾರನೂ ಹೇಳುವ ಅವಶ್ಯಕತೆ ಇಲ್ಲ.
‘ವೇದಿಕೆಯ ಮೇಲಿರುವ ಎಲ್ಲ ಗಣ್ಯರೇ’ ಎಂದರಷ್ಟೇ ಸಾಕು. ಆಗ ಸಮಯದ ಉಳಿತಾಯವಾಗುತ್ತದೆ. ಉದ್ದುದ್ದ ಭಾಷಣಗಳು ಸಭಿಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ ಮಾತ್ರವಲ್ಲ, ಉಳಿದ ಕಾರ್ಯಕ್ರಮಗಳಿಗೂ ಅಡ್ಡಿಯಾಗುತ್ತದೆ. ವೈಯಕ್ತಿಕ ಸಾಧನೆಗಳ ಬಣ್ಣನೆ, ತಪ್ಪು ಮಾಹಿತಿ / ಅಂಕಿ ಸಂಖ್ಯೆಗಳ ನೀಡಿಕೆ, ಅಪ್ರಸ್ತುತ ವಿಷಯಗಳ ಬಗ್ಗೆ ವಿಶ್ಲೇಷಣೆ ಇಲ್ಲವೇ ಅಶ್ಲೀಲಪದಗಳ ಬಳಕೆ,ಪ್ರಚೋದನಕಾರಿ ಹೇಳಿಕೆ ಎಲ್ಲವೂ ಉತ್ತಮ ಭಾಷಣಗಾರನ ಲಕ್ಷಣವಲ್ಲ.
ವಂದನಾರ್ಪಣೆಯು ಕೂಡಾ ಚುಟುಕಾಗಿರಬೇಕು. ಅದುವೇ ಒಂದು ಭಾಷಣವಾಗಿರಬಾರದು. ಯಾರನ್ನೂ ಮರೆಯದೆ ಸಮಾರಂಭಕ್ಕೆ ಬಂದ ಹಾಗೂ ಸಹಕರಿಸಿದ ಎಲ್ಲರನ್ನೂ ಸ್ಮರಿಸಿಕೊಳ್ಳಬೇಕು. ಊಟೋಪಚಾರಗಳ ವಿಷಯದಲ್ಲಿ ಕೆಲವು ಕಡೆಊಟಕ್ಕೆ ನೂಕುನುಗ್ಗಲು; ಕೆಲವೊಮ್ಮೆ ಕೊನೆಗೆ ಹೋದವರಿಗೆ ಏನೂ ಉಳಿದಿರೋದಿಲ್ಲ. ಹೀಗಾಗದಂತೆ, ಆಮಂತ್ರಿಸಿದ ಜನರಿಗೆ ಅನುಸಾರವಾಗಿ, ತಕ್ಕುದಾದ ವ್ಯವಸ್ಥೆಯನ್ನು ಮಾಡಿರಬೇಕು. ಆಹಾರದ ಪೋಲು ಆಗದಂತೆ ಎಚ್ಚರವಹಿಸಬೇಕು.
ರಾತ್ರಿ ಹೊತ್ತಿನ ಸಮಾರಂಭವಾದರೆ, ತಯಾರಿ ತುಸು ಕಮ್ಮಿಯೇ ಇರಲಿ. ಕಾರಣ ರಾತ್ರಿ ವೇಳೆ ಜನ ಹೆಚ್ಚು ಊಟ ಮಾಡೋದಿಲ್ಲ ಹಾಗೂ ತಯಾರಿಸಿದ ಅಡುಗೆ ಜಾಸ್ತಿ ಆದರೆ ತರಿಸೋದು ಸಾಧ್ಯವಾಗದೆ ಆಹಾರ ಕೆಟ್ಟುಹೋಗುತ್ತದೆ. ಅಂತೆಯೇ, ಈ ನಡುವೆ ಜನಹೆಚ್ಚಾಗಿ ಸಿಹಿ ತಿಂಡಿಗಳನ್ನು ತಿನ್ನದ ಕಾರಣ ನಾಲ್ಕಾರು ಸಿಹಿ ಭಕ್ಷ್ಯಗಳು ಅನಾವಶ್ಯಕ. ಅಂತೆಯೇ ಕೈತೊಳೆಯುವ ವ್ಯವಸ್ಥೆ ಹಾಗೂ ಅತಿಥಿಗಳು ತಿಂದುಂಡ ಎಂಜಲೆಲೆಗಳ ಸೂಕ್ತ ವಿಲೇವಾರಿಯೂ ಅಷ್ಟೇ ಮುಖ್ಯ.
ಸಮಾರಂಭದ ನಂತರದ ದಿನಗಳಲ್ಲಿ ಸಮಾರಂಭವನ್ನು ಚಂದಗಾಣಿಸಿ ಕೊಟ್ಟ ಎಲ್ಲಾ ಅತಿಥಿಗಳಿಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತಾ ಪತ್ರವನ್ನಾಗಲೀ, ಸಂದೇಶವನ್ನಾಗಲೀ ರವಾನಿಸೋದು ಒಂದು ಸತ್‌ಸಂಪ್ರದಾಯ. ಸಮಾರಂಭ ಮುಗಿದ ಕೆಲವು ದಿನಗಳಲ್ಲಿ ಮನೆಯವರು ಆಪ್ತರೆಲ್ಲಾ ಸೇರಿ ಸಮಾರಂಭದಲ್ಲಿ ನಡೆದು ಹೋದ ತಪ್ಪುಗಳ ಕುಂದು ಕೊರತೆಗಳ ಟೀಕೆಗಳ ಬಗ್ಗೆ ಒಂದು ಆತ್ಮಾವಲೋಕನವನ್ನು  ಮಾಡಿಕೊಂಡರೆ ಈ ಅನುಭವ ಮುಂದಿನ ಕಾರ್ಯಕ್ರಮಗಳಿಗೆ ರಚನಾತ್ಮಕವಾಗಿ ನೆರವಾದೀತು.